ಚಲೋ ಮಲ್ಲೇಶ್ವರ-೪

ಚಲೋ ಮಲ್ಲೇಶ್ವರ-೪

ರಜಾದಿನವಾದುದರಿಂದ ಸಿಟಿ ಬಸ್ ಸ್ಟಾಪ್‌ನಲ್ಲಿ ಜಾಸ್ತಿ ಜನವಿರಲಿಲ್ಲ. ಮಲ್ಲೇಶ್ವರ ಕಡೆಗೆ ಹೋಗುವ ೨-೩ ಬಸ್ ಬಂದು ಹೋಯಿತು. ಈಗ ಸ್ಟಾಪ್‌ನಲ್ಲಿ ನಾನು ಒಬ್ಬನೇ! ೯ ಗಂಟೆ ಆದರೂ ಜಯಂತ್ ಬರದಿದ್ದುದರಿಂದ ರಿಂಗ್ ಮಾಡಿದೆ-"ನಾನು ಮಲ್ಲೇಶ್ವರದ ಮಂತ್ರಿ ಮಾಲ್ ಬಳಿಯೇ ನಿಮಗಾಗಿ ಕಾಯುತ್ತಾ ಇದ್ದೇನೆ!" ಅಂದ. ಆತನೇ ೧೦ ನಿಮಿಷದಲ್ಲಿ ನಾನಿದ್ದಲ್ಲಿಗೆ ಬರುವೆ ಎಂದಾಗ, "ಬೇಡವೋ, ಪುನಃ ನಮಗೆ ಅಲ್ಲಿಗೇ ಹೋಗಲಿಕ್ಕಿರುವುದಲ್ವಾ..ನಾನೇ ಬರುತ್ತೇನೆ" ಎಂದೆ. ಆತ ಒಪ್ಪಲೇ ಇಲ್ಲ! ಆದರೆ ೧೦ ನಿಮಿಷ ಕಳೆದರೂ ಆತ ಬರಲಿಲ್ಲ.


ಯಾವುದೋ ದೇವಸ್ಥಾನದ ಮರಿ ಮಡಿ ಭಟ್ಟರು ಮುಹೂರ್ತ ತಪ್ಪಬಾರದೆಂದು ಗಡಿಬಿಡಿಯಲ್ಲಿ ಓಡುತ್ತಾ ಬರುತ್ತಿದ್ದರು. ಅವರ ಮಡಿಗೆ ತೊಂದರೆ ಆಗಬಾರದೆಂದು ದಾರಿ ಬಿಟ್ಟುಕೊಟ್ಟೆ. ಪುನಃ ಜಯಂತ್‌ಗೆ ರಿಂಗ್ ಮಾಡಿದೆ." ಆಗಲೇ ಬಂದಿದ್ಯಾ!? ಕೈಯೆತ್ತು" ಅಂದಾಗ ಪಕ್ಕದಲ್ಲಿದ್ದ ಮರಿಭಟ್ಟರೇ ಕೈಯೆತ್ತಬೇಕಾ!! " ನೀನಾ.....ಜಯಂತಾ!!" " ಹೌದ್ರಿ..ಹೇಗೂ ಮಲ್ಲೇಶ್ವರದಲ್ಲಿ ಅನೇಕ ದೇವಸ್ಥಾನವಿದೆ ಅಂದರಲ್ಲಾ. ಅದಕ್ಕೇ .." ಎಂದ. "ಸರಿ ಸರಿ. ಇನ್ನು ಯಾರೂ ಬರುವವರಿಲ್ಲ ಕಾಣುತ್ತದೆ. ನಾವಿಬ್ಬರೂ ಈ ಬಸ್ಸಲ್ಲಿ ಹೋಗೋಣ್ವಾ" ಎಂದು ಮಲ್ಲೇಶ್ವರಕ್ಕೆ ಹೋಗುವ ಬಸ್ ತೋರಿಸಿದೆ. "ನಿಮಗೆ ಕಷ್ಟವಾಗುವುದಿಲ್ಲ ಅಂದರೆ ನಡಕೊಂಡು ಹೋಗೋಣ್ವಾ!?" ಅಂದ.


ನಾವಿಬ್ಬರೂ ಮಾತನಾಡುತ್ತಾ, ನಡೆಯುತ್ತಾ ಬಸ್‌ಸ್ಟ್ಯಾಂಡ್ ದಾಟಿ ಅಮರ್ ಹೋಟಲ್ ಸಮೀಪ ಬಂದೆವು.


"ಇಲ್ಲೇ ಹಯಗ್ರೀವ ಟೆಂಪ್‌ಲ್ ಇದೆ. ಹೋಗಿ ಬರೋಣ" ಅಂದ.


"ಜಯಂತ್, ನನ್ನದು -ಕವೆಂ ಜಾತಿ-, ಅಂದರೆ ಕಷ್ಟ ಬಂದಾಗ ವೆಂಕಟರಮಣ ಪಂಗಡದವನು. ಉಳಿದಂತೆ ದೇವರನ್ನು ಅವರ ಪಾಡಿಗೆ ಬಿಟ್ಟುಬಿಡುವೆವು. ನೀನು ಬೇಗ ಹೋಗಿ ಬಾ" ಅಂದೆ. ಒಳ್ಳೆಯ ಹುಡುಗ. ಮಹಾನ್ ದೈವಭಕ್ತ. ನಾನು ಹೊರಗೆ ಕಾಯುತ್ತಾ ಇದ್ದವ, ಈತ ದೇವರಿಗೆ ಸುತ್ತು ಹಾಕಿ ಬಂದ ಅಂತ ಎದ್ದು ಹೊರಡಲು ಅನುವಾದರೆ, ಪುನಃ ಇನ್ನೊಂದು ಸುತ್ತು ಹಾಕಿದ..೫ ದಾಟಿತು..೨೧ ದಾಟಿತು..ಅಲ್ಲೇ ಕಟ್ಟೆಯಲ್ಲಿ ನಿದ್ರೆ ಮಾಡಿದೆ. ೧೦೮ ಸುತ್ತು ಮುಗಿಸಿ ಬಂದು ನನ್ನನ್ನು ಎಬ್ಬಿಸಿದ. ಎದುರಿಗೇ ಎರಡು ರಸ್ತೆಗಳ ಮಧ್ಯೆ ಇನ್ನೊಂದು ದೇವಸ್ಥಾನವಿತ್ತು. :( ಮೊದಲಿಗೇ ಹೇಳಿದೆ- ಇದು ಸಣ್ಣ ದೇವಾಲಯ. ಇಲ್ಲಿ ೫ ಸುತ್ತು ಸಾಕು. "ಎಲ್ಲಾದರೂ ಉಂಟಾ ಗಣೇಶರೆ, ದೇವರಲ್ಲಿ ಭೇದಭಾವ ಮಾಡಬಹುದೇ?" ಎಂದು ಇಲ್ಲೂ ೧೦೮ ಸುತ್ತು ಹಾಕಿದ! ಇದೇ ವೇಗ ಲೆಕ್ಕ ಹಾಕಿದರೆ ಮಲ್ಲೇಶ್ವರದ ೧೮ನೇ ಕ್ರಾಸ್‌ನ ಮಾರಮ್ಮನ ಗುಡಿ ತಲುಪುವಾಗ ನಾಳೆ ಬೆಳಗ್ಗಿನ ಜಾವ ೪ ಕಳೆಯಬಹುದು.. ಏನು ಮಾಡಲಿ......


ಮುಂದೆ ಬ್ರಿಡ್ಜ್ ಸಮೀಪದ ಅಯ್ಯಪ್ಪ ಟೆಂಪ್‌ಲ್ ಕಾಣಿಸದಂತೆ, ನನ್ನ ಢಾಯಿ ಕಿಲೋ ಹಾಥ್‌ನ್ನು ಜಯಂತ್ ಹೆಗಲ ಮೇಲೆ ಹಾಕಿ, ಆ ಕಡೆ ತಿರುಗದಂತೆ ಲಾಕ್ ಮಾಡಿ, ಮಾತನಾಡಿಸುತ್ತಾ ಹೋದೆ. ಟೆಂಪ್‌ಲ್ ಸಮೀಪ ಬಂದಾಗ ಗಂಟೆ ಶಬ್ದ ಕೇಳಬೇಕೇ!! ಪುನಃ ೧..೨..೧೦೮! ಅಯ್ಯಪ್ಪಾ.........


ಇನ್ನು ಬೇರೆ ದಾರಿನೇ ಇಲ್ಲ. ರಿಕ್ಷಾ ನಿಲ್ಲಿಸಿ, ಜಯಂತ್‌ನ್ನು ಎಳೆದು ಕುಳ್ಳಿರಿಸಿದೆ.


ರಿಕ್ಷಾ ಮಂತ್ರಿ ಮಾಲ್ ಬಳಿ ಬರುವಾಗ ರಸ್ತೆ ಇಡೀ ಬ್ಲಾಕ್! ಅದರಲ್ಲೇನು ವಿಶೇಷ..ಅಲ್ಲಿ ಬ್ಲಾಕ್ ಇದ್ದದ್ದೇ ಅಂದ್ರಾ..


ವಾಹನಗಳಿಂದ ಅಲ್ಲ, ಜನರಿಂದ ತುಂಬಿದೆ! ಬ್ಯಾಂಡ್ ಸೆಟ್ ಇಲ್ಲ..ಜಯಘೋಷ ಇಲ್ಲಾ..ಮತ್ಯಾಕೆ ಈ ಪರಿ ಜನ? ರಿಕ್ಷಾದಿಂದ ಇಳಿದೆವು.


ಎಲ್ಲರೂ ತಲೆ ಎತ್ತಿ ಮರದ ಕಡೆ ನೋಡುತ್ತಿದ್ದಾರೆ. ವಿಚಾರಿಸಿದರೆ ಹಾವು, ಹೀರೋ, ಕಳ್ಳ,..ಒಬ್ಬೊಬ್ಬರು ಒಂದೊಂದು ಮಾತು ಹೇಳುತ್ತಿದ್ದಾರೆ. ಆಗ ಜಯಂತ್ ಹೇಳಿದ-"ಅದಾ, ನಾನೂ ಚಿಕ್ಕು ಆವಾಗಲೇ ಇಲ್ಲಿ ಬಂದಿದ್ದೆವಲ್ಲಾ. ಚಿಕ್ಕು ಅದ್ಯಾವುದೋ ಹಕ್ಕಿ ಹಾರುವ ಫೋಟೋ ತೆಗೆಯಬೇಕೆಂದು ಕಾದಿದ್ದ. ನನಗೂ ಕಾದು ಕಾದು ಸಾಕಾಗಿದ್ದಕ್ಕೆ ಮೆಜೆಸ್ಟಿಕ್‌ಗೆ ಬರುತ್ತೇನೆ ಅಂದಿದ್ದು!!!"


-ಗಣೇಶ.


ಇನ್ನೂ ಬೇಕಾ..?

Rating
No votes yet

Comments