ಗಣೇಶ ವಿಸರ್ಜನ ಸಂಪ್ರದಾಯ

ಗಣೇಶ ವಿಸರ್ಜನ ಸಂಪ್ರದಾಯ

ಸಂಪದಿಗರೆ ಕಳೆದ ಗಣಪತಿ ಹಬ್ಬದ ಸಮಯದಲ್ಲಿ ಈ ಲೇಖನ ಬರೆದಿದ್ದೆ. ಮತ್ತು ಅದಕ್ಕೆ ಎರಡು ಪ್ರತಿಕ್ರಿಯೆಗಳು ಸಹ ಬಂದಿದ್ದವು. ಈಗ ಪುನಃ ನಾಲ್ಕೈದು ದಿನದಲ್ಲೆ ಗೌರಿ ಗಣಪತಿ ಬರಲಿದೆ. ಈ ಲೇಖನ ಈಗಲು ಪ್ರಸ್ತುತ ಎನ್ನಿಸಿತು ಹಾಗಾಗಿ ಮತ್ತೆ ಅದೇ ಲೇಖನ ಹಾಕುತ್ತಿದ್ದೇನೆ. ಮತ್ತು ಗಮನಿಸಿ ಆಗೆಲ್ಲ ಒಂದು ಚಿಕ್ಕ ಲೇಖನ ಸಹ ೨೫೦- ೩೦೦ ಹಿಟ್ಸ್ ಗಳಿಸಿ ಮುಂದುವರೆಯುತ್ತಿದ್ದವು, ಈಗ ಎಷ್ಟೆ ಶ್ರಮವಹಿಸಿ ಬರೆದರು ೧೫೦ ಹಿಟ್ಸ್ ದಾಟುವುದು ಕಷ್ಟ ಅಂದರೆ ಸಂಪದ ಓದುಗರು ಏಕೊ ಕಡಿಮೆಯಾಗುತ್ತಿದ್ದಾರ....
ಎಲ್ಲಿ ಏನಾಯ್ತೊ ಕಾಣೆ......

O==============================================================================================

ಗಣೇಶ ವಿಸರ್ಜನ ಸಂಪ್ರದಾಯ

ಈಚೆಗಷ್ಟೆ ಈ ಸಾರಿಯ ಗಣಪತಿ ಹಬ್ಬ ಮುಗಿಯಿತು, ನಮ್ಮ ಮನೆಯಲ್ಲಿ ಇಟ್ಟ ಗಣಪತಿ ಗೌರಿಯನ್ನು ಎಲ್ಲರು ತುಂಬಾ ಚೆನ್ನಾಗಿದೆ ಅಂತ ಹೊಗಳುವವರೆ , ಹಿಂದೆಯೆ ಅವರ ಪ್ರಶ್ನೆ " ಏಕೆ ನೀವು ಈ ಸಾರಿ ಮಣ್ಣಿನ ಗಣಪ ತಂದಿಲ್ಲ ಅಂತ" ನಿಜ ನಾವು ಕಳೆದ ವರ್ಷದಿಂದ ಮಣ್ಣಿನ ಗಣಪ ಗೌರಿಯನ್ನು ತಂದು ಪೂಜೆ ಮಾಡುತ್ತಿಲ್ಲ. ಅದರ ಬದಲು ದೇವರ ಮುಂದಿನ ಚಿಕ್ಕ ಬೆಳ್ಳಿಗಣಪನನ್ನೆ ಇಟ್ಟು ಪೂಜಿಸುತ್ತೇವೆ, ಅದು ಹೂವಿನಲ್ಲೆ ಮುಚ್ಚಿ ಹೋದರೆ ಕಾಣಿಸುವದಿಲ್ಲ ಅದಕ್ಕೆ ಅಲಂಕಾರಕ್ಕೆ ಅಂತ ವೈಟ್ ಮೆಟಲೆ ನ ದೊಡ್ಡ ಗಣಪತಿ ಇಡುತ್ತಿದ್ದೇವೆ. ಹಾಗಾಗಿ ನೋಡಲು ಸುಂದರವಾಗಿಯೆ ಕಾಣುತ್ತದೆ. ರಾತ್ರಿ ಗಣಪನನ್ನು ನೀರಿನಲ್ಲಿ ಬಿಡುವಂತಿಲ್ಲ . ವಿಸರ್ಜನೆ ನಂತರ ಗಣಪ ತನ್ನ ಮೊದಲಿನ ದೇವರ ಮನೆ ಸೇರುತ್ತಾನೆ


 
ನಾಲಕ್ಕು ವರ್ಷಗಳ ಹಿಂದಿನ ಮಾತು , ಮಣ್ಣಿನ ಗಣಪತಿ ಇಡುತ್ತಿದ್ದೆವು ಆ ವರ್ಷ ಗಣಪತಿ ಬಿಡುವುದೆ ಒಂದು ಸಮಸ್ಯೆ , ಬೆಂಗಳೂರಿನಲ್ಲಿ ಕೆರೆ ಕುಂಟೆ ಗಳನ್ನು ಹುಡುಕುತ್ತ ಹೋಗುವ ಹಾಗಿಲ್ಲ ಅಲ್ಲಿ ಇಲ್ಲಿ ಕೊಳವೆ ಭಾವಿ ಇದ್ದೀತು ಅದರಲ್ಲಿ ಅವನನ್ನು ತೂರಿಸುವಂತಿಲ್ಲ. ಮತ್ತೀನೇನು ಎಲ್ಲ ಮನೆಗಳಂತೆಯೆ ನಾನು ಗಣಪನನ್ನು ಬಕೆಟ್ ನೀರಿನಲ್ಲಿ ಬಿಡಲು ನಿರ್ದರಿಸಿ ಮನೆಯ ಹಿಂಬಾಗದಲ್ಲಿ ನೀರು ಇಟ್ಟು ಗಣಪನನ್ನು ಮುಳುಗಿಸಲು ಪ್ರಯತ್ನಿಸಿದೆ ಆದರೆ ಆ ಗಣೇಶ ಏಕೋ ಏನು ಮಾಡಿದರು ಮುಳುಗುತ್ತಿಲ್ಲ, ಮೇಲೆ ಮೇಲೆ ಬರುತ್ತಿದ್ದಾನೆ , ನೀರಿನಲ್ಲಿ ಅದುಮಿ , ಮೇಲೆ ಒಂದು ಹಲಗೆ ಇಟ್ಟು ಅದರ ಮೇಲೆ ಕಲ್ಲಿನ ಬಾರ ಹಾಕಿ ಬಿಟ್ಟೆ. ೩-೪ ದಿನದಲ್ಲಿ ಗಣಪ ನೀರಿನಲ್ಲಿ ಕರಗುತ್ತಿರುವಂತೆಯೆ ಒಂದು ವಿದವಾದ ಕೆಟ್ಟ ವಾಸನೆ ಮನೆಯಲ್ಲೆಲ್ಲ ತುಂಬಿ ಕೊಂಡಿತು. ನಂತರ ತೆಗೆದು ನೋಡಿದೆ ಕೆಸರಿನಂತಹ ಯಾವುದೋ ಬಣ್ಣದ ದ್ರವ , ಹತ್ತಿರ ನಿಲ್ಲಲು ಆಗುತ್ತಿಲ್ಲ. ಮುಂದಿನ ಸಮಸ್ಯೆ ಅದನ್ನು ಏನು ಮಾಡುವುದು ಗಿಡಗಳಿಗೆ ಖಂಡೀತ ಹಾಕುವಂತಿಲ್ಲ , ರಸ್ತೆಗೆ ಸುರಿಯುವಂತಿಲ್ಲ, ಚರಂಡಿಗೆ ?? ಛೇ..ಛೇ.. ಪೂಜಿಸಿದ ಗಣಪನ ಅವಸ್ಥೆ ಇದೆ?? ನಾವು ಭಕ್ತಿಯಿಂದ , ಸ್ನಾನ ಮಾಡಿ , ಶುಭ್ರವಾಗಿ ಸಿದ್ದವಾಗಿ ಪೂಜಿಸುವ ಗಣಪತಿ ಇಷ್ಟು ಕೊಳಕೆ?? ಅದಕ್ಕೆ ಆ ಕ್ಷಣಕ್ಕೆ ನಿರ್ದರಿಸಿದೆ ಇನ್ನೆಂದು ಮಣ್ಣಿನ ಗಣಪತಿ ತರುವದಿಲ್ಲ ಅಂತ.


ಸಂಪ್ರದಾಯ ಪದ್ದತಿಗಳು ನಿಂತ ನೀರಾಗಬಾರದಲ್ಲವೆ? ಹರಿವ ನೀರಾಗಬೇಕು ಸಂಪದ ಗೆಳಯರೆಲ್ಲ ಎನನ್ನುವರೋ? ನೋಡಬೇಕು


==========================================================================================================================
ಪ್ರತಿಕ್ರಿಯೆಗಳು

ಶ್ರೀ ನಾವಡರು
27-sep-2010

ಗಣಪತಿ ವಿಗ್ರಹವನ್ನಿಡಲು ನೀವು ಅನುಸರಿಸುತ್ತಿರುವ ಈಗಿನ ಕ್ರಮ ಅಭಿನ೦ದನೀಯ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
************************************************

ಶ್ರೀ ಆರ್ ಕೆ ದಿವಾಕರ
27-sep-2010

ಬಹುತೇಕ ವ್ರತ-ಕಲ್ಪಗಳ ಅಚರಣೆಯದು ಜಾನಪದ ಸೊಗಸು; ಸಾಮಾಜಿಕ ಪ್ರಯೋಜನ. ಗಣೇಶ-ಗೌರಿ ಕರ್ನಾಟಕದ ಮಟ್ಟಿಗೆ Universal. ಮನೆಮಂದಿ ಎಲ್ಲೆಲ್ಲಿದ್ದರೂ ಹಬ್ಬಕ್ಕಾಗಿ ಮನೆಗೆ ಒಡೋಡಿ ಬರುವುದು ಕಡ್ಡಾಯ. ಮನೆಯವರೆಲ್ಲರೂ ಕಲೆತು ತಮ್ಮದೇ ಹಿತ್ತಲಿನ ಹಸಿ ಮಣ್ಣಿನಿಂದ ಮೂರ್ತಿಗಳನ್ನು ಮಾಡಿ, ಪ್ರತಿಯೊಬ್ಬರೂ ಅದರಲ್ಲಿ ತಮ್ಮ ತಮ್ಮ ಜೀವ-ಪ್ರಾಣಗಳನ್ನು ಸಂಕಲ್ಪಿಸಿ, ವರ್ಷಾವಧಿಯ ಕಡಬು-ಕಜ್ಜಾಯಗಳನ್ನು ನಿವೇದಿಸುವುದು, ಒಂದೊಂದು ಕುಟುಂಬವೂ ಊರೊಟ್ಟಿಗೆ ಕಲೆತರೂ ಪ್ರತ್ಯೇಕ ಪ್ರತ್ಯೆಕವಾಗಿಯೇ ಸಮಷ್ಟಿಯ ಕೊಳ-ಕಟ್ಟೆ-ಕೆರೆಗಳಿಗೆ ಅವರವರ ಇಷ್ಟಮೂರ್ತಿಗಳನ್ನು ಅಲ್ಲಿ ಕರಗಿಸಿ ತಮ್ಮ ತಮ್ಮ ಜೀವ-ಪ್ರಾಣಗಳನ್ನು ವಾಪಸ್ ಪಡೆದಂತೆ ಸಂಭ್ರಮಿಸುವುದು, ಒಬ್ಬೊಬರ ಮನೆಯ ಕಡಲೆ ಗುಗ್ಗರಿಯನ್ನು ಪ್ರತಿಯೊಬ್ಬರೂ ಹಂಚಿಕೊಂಡುಣ್ಣುವುದು ಗೌರಿ-ಗಣಪತಿ ವಿಸರ್ಜನೆಯ ಊರೊಟ್ಟಿನ ಸ್ವಾರಸ್ಯವಾಗಿತ್ತು.
ಪುಸ್ತಕ ಓದಿಕೊಂಡೋ, ಸಿಡಿ-ಕ್ಯಾಸೆಟ್ ಹಾಕಿಕೊಂಡೊ ಹುಲ್ಲು-ಹೂವು ಹಾಕಿ, ಅರ್ಡರ್ ಕೊಟ್ಟು ತರೆಸಿಕೊಂಡ ಒಬ್ಬಟ್ಟು ಮೊದಕಗಳನ್ನು ತಿಂದು ಅಜೀರ್ಣ ಮಾಡಿಕೊಂಡು, ಅಂತೂ "ಶಾಸ್ತ್ರ‍್ರ" ಬಿಡಲಿಲ್ಲ ಎಂದು ನಿಟ್ಟುಸಿರು ಬಿಟ್ಟುಕೊಳ್ಳುವುದು ಇಂದಿನ ಸಂಭ್ರಮ. ’ಕಾಲಾಯ ತಸ್ಮೈ ನಮಃ’!
ಸಂಪ್ರದಾಯದ ಬಗ್ಗೆ ತಮ್ಮೀ ಸ್ಪಂದನೆ, ಹೌದಲ್ಲವಾ? ಎಂದು ನಾವೂ ಕೇಲಿಕೊಳ್ಲುವಂತೆ ಮಾಡಿದೆ!
******************************************************

 

ಕಳೆದ ವರ್ಷದ ಲೇಖನ (೨೭-೯-೨೦೧೦)  .....

http://sampada.net/blog/partha1059/27/09/2010/28132

 

Rating
No votes yet

Comments