ಸಾಧಕರಿವರು: ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್

ಸಾಧಕರಿವರು: ಸಂಶೋಧನಾ ರತ್ನ ಕೆಳದಿ ಗುಂಡಾಜೋಯಿಸ್

 

     ಕೆಳದಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ ಉಳಿಸುವ ಕಾರ್ಯದಲ್ಲಿ ಕೆಳದಿ ಕವಿಮನೆತನ ಮತ್ತು ಕೆಳದಿ ಜೋಯಿಸ್ ಕುಟುಂಬಗಳು ಮಹತ್ವದ ಪಾತ್ರ ವಹಿಸಿವೆ. ಕೆಳದಿ ಕವಿಮನೆತನದವರಿಗೆ ಈ ಹೆಸರು ಬರಲು ಕಾರಣೀಭೂತನಾದ ೧೭ನೆಯ ಶತಮಾನದ ಕವಿ ಲಿಂಗಣ್ಣ ರಚಿಸಿದ ಕೆಳದಿನೃಪ ವಿಜಯ ಒಂದು ಅದ್ಭುತ ರಚನೆಯಾಗಿದ್ದು ಸುಮಾರು ೨೫೦ ವರ್ಷಗಳ ಕಾಲ ಕರ್ನಾಟಕದ ಮುಖಕಮಲದಂತೆ ರಾರಾಜಿಸಿದ, ಹಿಂದೂ ಸಂಸ್ಕೃತಿ ಮತ್ತು ಪರಂಪರೆಯ ರಕ್ಷಕರಾದ ಕೆಳದಿ ಅರಸರ ಜೀವನ ಚರಿತ್ರೆಯನ್ನು ಕಾವ್ಯರೂಪದಲ್ಲಿ ಐತಿಹಾಸಿಕ ಸಂಗತಿಗಳಿಗೆ ಲೋಪವಾಗದಂತೆ ಬಿಂಬಿಸಿದೆ. ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಕಾವ್ಯದ ಶೈಲಿಯಲ್ಲಿರುವ ಈ ಕೃತಿಯನ್ನು ಕೆಳದಿಯ ಗುಂಡಾಜೋಯಿಸರು ಎಲ್ಲರಿಗೂ ಅರ್ಥವಾಗುವಂತೆ ಗದ್ಯರೂಪದಲ್ಲಿ ಸಿದ್ಧಪಡಿಸಿದ್ದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರಕಟಗೊಂಡು ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ. ಕೆಲವು ವರ್ಷಗಳ ಹಿಂದೆ ಡಾ. ಉಮಾಹೆಗ್ಗಡೆಯವರು ಇದರ ಹಿಂದಿ ಗದ್ಯಾನುವಾದ ಮಾಡಿದ್ದು ಕೆಳದಿ ಇತಿಹಾಸದ ವಿವರ ಕನ್ನಡೇತರರಿಗೂ ತಲುಪಿದಂತಾಗಿದೆ. ಇದೀಗ ಇದರ ಇಂಗ್ಲಿಷ್ ಗದ್ಯಾನುವಾದವನ್ನು ಕವಿ ಸುರೇಶರು ಮಾಡಿದ್ದು, ಹೆಚ್ಚು ಹೆಚ್ಚು  ಓದುಗರಿಗೆ ಮತ್ತು ಇತಿಹಾಸಾಸಕ್ತರಿಗೆ ಉಪಯೋಗವಾಗಿದೆ. 

     ಕೆಳದಿ ಕವಿಮನೆತನದ ೫ನೆಯ ತಲೆಮಾರಿನ ಕವಿ ಕೃಷ್ಣಪ್ಪ-ಸುಬ್ಬಮ್ಮ ದಂಪತಿಗಳ ಮಗಳು ಗಂಗಮ್ಮನನ್ನು ಜೋಯಿಸ್ ಕುಟುಂಬದ ಕೃಷ್ಣಜೋಯಿಸರಿಗೆ ಕೊಟ್ಟು ವಿವಾಹವಾದಾಗ ಕವಿ ಮನೆತನ ಮತ್ತು ಜೋಯಿಸ್ ಕುಟುಂಬಗಳ ನೆಂಟಸ್ತಿಕೆ ಆರಂಭವಾಯಿತೆನ್ನಬಹುದು. ಕವಿಕೃಷ್ಣಪ್ಪನವರ ಕಿರಿಯ ಮಗ ಎಸ್,ಕೆ. ಲಿಂಗಣ್ಣಯ್ಯನವರು ಒಂದು ಅದ್ಭುತ ಪ್ರತಿಭೆಯಾಗಿದ್ದು ಕವಿಮನೆತನದ ಹೆಸರನ್ನು ಎತ್ತಿ ಹಿಡಿದವರು. ಇವರ ಪರಿಚಯವನ್ನು ಮುಂದೊಮ್ಮೆ ಮಾಡಿಕೊಡುವೆ. ಕೃಷ್ಣಜೋಯಿಸರ ಮಗ ನಂಜುಂಡಜೋಯಿಸರಿಗೆ ಕವಿ ಎಸ್.ಕೆ. ಲಿಂಗಣ್ಣಯ್ಯನವರ ಮಗಳು ಮೂಕಾಂಬಿಕಮ್ಮ (ಮೂಕಮ್ಮನೆಂದೇ ಕರೆಯಲ್ಪಡುತ್ತಿದ್ದವರು)ನನ್ನು ಕೊಟ್ಟು ವಿವಾಹವಾದಾಗ ಎರಡು ಕುಟುಂಬಗಳ ಬಾಂಧವ್ಯ ಮತ್ತಷ್ಟು ಗಟ್ಟಿಗೊಂಡಿತು. ನಂಜುಂಡ ಜೋಯಿಸ್-ಮೂಕಮ್ಮನವರ ಸುಪುತ್ರರೇ ಪ್ರಸ್ತುತ ಈಗ ಪರಿಚಯಿಸುತ್ತಿರುವ ಕೆಳದಿ ಗುಂಡಾಜೋಯಿಸರು. 

ಇತರರು ಓದಲು ಕಷ್ಟಪಡುವ ಲಿಪಿಗಳನ್ನು ಓದಬಲ್ಲ ಮೋಡಿಗಾರ

     ೨೭-೦೯-೧೯೩೧ರಲ್ಲಿ ಕೆಳದಿಯಲ್ಲಿ ಜನಿಸಿದ ಗುಂಡಾಜೋಯಿಸರು ಈಗ ೮೦ ವರ್ಷದ ತರುಣರು. ಅವರು ಉತ್ಸಾಹದ ಚಿಲುಮೆಯಾಗಿದ್ದು ಈಗಲೂ ತಮ್ಮ ಸಂಶೋಧನಾ ಕಾರ್ಯ ಮುಂದುವರೆಸಿದ್ದಾರೆ. ಕನ್ನಡ ಪಂಡಿತ, ಆಗಮ ವೇದ ವಿದ್ವಾನ್, ಕನ್ನಡ ರತ್ನ, ಹಿಂದಿ ಪ್ರಬೋಧ ಪರೀಕ್ಷೆಗಳಲ್ಲಿಯೂ ತೇರ್ಗಡೆಯಾಗಿರುವ ಇವರು ಮೈಸೂರು ವಿಶ್ವವಿದ್ಯಾನಿಲಯದ ಎಮ್.ಎ. ಪದವೀಧರರು. ಹಳೆಯ ಮತ್ತು ಐತಿಹಾಸಿಕ ವಸ್ತುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿದ ಇವರು ಹಳೆಯ ಕೈಬರಹ, ಮೋಡಿಲಿಪಿ ಮತ್ತು ತಿಗಳಾರಿ ಲಿಪಿಗಳನ್ನು ಓದುವಲ್ಲಿ ಶ್ರೇಷ್ಠ ಪರಿಣಿತರು. ವಿರಳವಾದ ಮತ್ತು ಮಹತ್ವದ ಅನೇಕ ಸಂಗತಿಗಳನ್ನು ಈ ಮೂಲಕ ಬೆಳಕಿಗೆ ತಂದ ಕೀರ್ತಿ ಇವರದು. ಸರ್ಕಾರದ ಹಿರಿಯ ಅಧಿಕಾರಿಗಳಿಗೆ, ಅನೇಕ ವಿದ್ವಾಂಸರು, ಆಸಕ್ತರಿಗೆ ಮೋಡಿ ಮತ್ತು ತಿಗಳಾರಿ ಲಿಪಿಗಳನ್ನು ಓದುವ ಕುರಿತು ತರಬೇತಿ ನೀಡಿದ್ದಾರೆ. 

ಕೆಳದಿಯ ಹೆಮ್ಮೆಯಾದ ಅಪೂರ್ವ ಸಂಗ್ರಹಾಲಯದ ಜನಕ

     ಸುಮಾರು ನಾಲ್ಕು ಶತಮಾನಗಳ ಹಳೆಯ ಶಿಲಾಶಾಸನಗಳು, ಸಾಹಿತ್ಯಗಳು, ಪಳೆಯುಳಿಕೆಗಳು, ಕಾಗದಪತ್ರಗಳು, ಓಲೆಗರಿಗಳು, ಇತ್ಯಾದಿಗಳು ಇತಿಹಾಸ ಸಂಶೋಧನೆಗೆ ಅಮೂಲ್ಯ ಕಾಣಿಕೆ ಕೊಡುತ್ತವೆ. ತಾಯಿ ಮೂಕಮ್ಮನವರ ಪ್ರೇರಣೆಯಿಂದ ಇದರಲ್ಲಿ ಆಸಕ್ತಿ ಹೊಂದಿದ ಗುಂಡಾಜೋಯಿಸರು ಅಮೂಲ್ಯ ಸಂಗ್ರಹದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸುಮಾರು ೫೦-೫೫ ವರ್ಷಗಳ ಹಿಂದೆ ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯದ ನಿರ್ದೇಶಕರಾಗಿದ್ದ ಡಾ. ಶೇಷಾದ್ರಿಯವರು ಸರ್ವೇಕ್ಷಣೆಗಾಗಿ ಕೆಳದಿಗೆ ಬಂದವರು ಗುಂಡಾಜೋಯಿಸರ ಮನೆಯಲ್ಲಿದ್ದ ಪ್ರಾಚೀನವಾದ ಮತ್ತು ಅಮೂಲ್ಯವಾದ ವಸ್ತುಗಳ ಸಂಗ್ರಹ ಕಂಡು ಬೆರಗಾಗಿದ್ದರು. ಸರ್ಕಾರ ಅವುಗಳ ರಕ್ಷಣೆ ಮಾಡುವುದು ಅಗತ್ಯವೆಂದು ಮನಗಂಡು ಸರಕಾರದೊಂದಿಗೆ ವ್ಯವಹರಿಸಿ ರೂ.೬೦೦೦೦/- ಪರಿಹಾರ ಕೊಟ್ಟು ಆ ವಸ್ತುಗಳನ್ನು ಮೈಸೂರು ಮತ್ತು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿರಿಸಲು ಗುಂಡಾಜೋಯಿಸ್ ಕುಟುಂಬದವರ ಒಪ್ಪಿಗೆ ಪಡೆದರು. ಅಂದುಕೊಂಡಂತೆಯೇ ಆಗಿದ್ದರೆ ಈಗ ನಾವು ಕಾಣುತ್ತಿರುವ ವಸ್ತುಸಂಗ್ರಹಾಲಯ ಕೆಳದಿಯಲ್ಲಿ ಇರುತ್ತಿರಲಿಲ್ಲ. ಪ್ರಾಚೀನ ವಸ್ತುಗಳನ್ನು ಹಸ್ತಾಂತರ ಮಾಡುವ ವಿಚಾರದಲ್ಲಿ ಪರಿಶೀಲನೆಗೆ ಬಂದ ಆಗಿನ ಜಿಲ್ಲಾಧಿಕಾರಿ ಶ್ರೀ ಸತೀಶ್ ಚಂದ್ರನ್ ರವರು ಗುಂಡಾಜೋಯಿಸರ ಬಳಿಯಿದ್ದ ತಾಳೆಗರಿಗಳು, ಹಳೆಯ ಜಾನಪದ ವಸ್ತುಗಳು, ಕಡತಗಳು, ತಾಳೆಗರಿಗಳು, ಮುಂತಾದುವನ್ನು ಕಂಡು ಬೆರಗಾದ ಅವರು ಅವುಗಳನ್ನು ಕೆಳದಿಯಲ್ಲಿಯೇ ಸುರಕ್ಷಣೆಯಲ್ಲಿ ಇಡುವುದು ಒಳ್ಳೆಯದೆಂದು ಭಾವಿಸಿ ಸರ್ಕಾರದ ಒಪ್ಪಿಗೆ ಮತ್ತು ಅನುದಾನ ಪಡೆದು ಗುಂಡಾಜೋಯಿಸರ ಮನೆಯ ಪಕ್ಕದ ಆವರಣದಲ್ಲಿ ಕೆಳದಿ ವಸ್ತು ಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ ಎಂಬ ಹೆಸರಿನಲ್ಲಿ ಕಾರ್ಯಾರಂಭಕ್ಕೆ ಕಾರಣಕರ್ತರಾದರು. ಕೆಲವರ ಚಿತಾವಣೆಯಿಂದ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಈ ವಸ್ತುಸಂಗ್ರಹಾಲಯವನ್ನು ಸೂಪರ್ ಸೀಡ್ ಮಾಡಲು ಸರ್ಕಾರ ಮುಂದಾಗಿದ್ದು ಆಗ ನೆರವಿಗೆ ಬಂದವರು ಆಗ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಇದೇ ಶ್ರೀ ಸತೀಶ್ ಚಂದ್ರನ್ ರವರು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿನ ಅಪೂರ್ವವೆನಿಸಿರುವ ವಸ್ತು ಸಂಗ್ರಹಾಲಯ ಕೆಳದಿಯಲ್ಲೇ ಉಳಿಯಿತು.

     ಗುಂಡಾಜೋಯಿಸರ ಶ್ರಮದಿಂದ ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಈ ಸಂಸ್ಥೆ ಕ್ರಮೇಣ ಹಲವರ ಸಹಕಾರದಿಂದ ಇಂದು ದೊಡ್ಡದಾಗಿ ಬೆಳೆದಿದೆ. ೧೯೮೭-೮೯ರಲ್ಲಿ ಹೊಸ ಕಟ್ಟಡ ನಿರ್ಮಾಣವಾಗಿದ್ದು ಇದಕ್ಕೆ ಜೋಯಿಸರು ಭೂಮಿದಾನ ನೀಡಿದ್ದಾರೆ. ಈಗ ಕುವೆಂಪು ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಗೊಂಡಿರುವ ವಸ್ತು ಸಂಗ್ರಹಾಲಯದ ಉಪಯೋಗಕ್ಕಾಗಿ ಕೆಲವು ವರ್ಷಗಳ ಹಿಂದೆ ಹೊಸ ಕಟ್ಟಡವನ್ನೂ ಸಹ ನಿರ್ಮಿಸಲಾಗಿದೆ. ಗುಂಡಾಜೋಯಿಸರು ತಮ್ಮ ಶ್ರಮದಿಂದ ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೆ ನೀಡಿರುವುದು ವಿಶೇಷವೇ ಸರಿ. ಹಳೆಯ ಕಾಲದ ವಿಗ್ರಹಗಳು, ಕಾಷ್ಠಶಿಲ್ಪಗಳು, ವರ್ಣಚಿತ್ರಗಳು, ತುಕ್ಕು ಹಿಡಿದಿದ್ದರೂ ಅಂದಿನ ಕಥೆ ಹೇಳುವ ಆಯುಧಗಳು, ನಾಣ್ಯಗಳು, ಬೀಗಗಳು, ರಾಜ-ರಾಣಿಯರ ಉಡುಪುಗಳು, ಶಾಸನಗಳು, ವೀರಗಲ್ಲುಗಳು, ತಾಡೆಯೋಲೆಗಳು, ಹಸ್ತಪ್ರತಿಗಳು, ಮುಂತಾದುವನ್ನು ಕಣ್ಣಾರೆ ಕಂಡೇ ಅವುಗಳ ಮಹತ್ವ ಅರಿಯಬೇಕು. ಕವಿ ಶ್ರೀ ಎಸ್.ಕೆ. ಲಿಂಗಣ್ಣಯ್ಯನವರ ರಚನೆಯ ಅದ್ಭುತವೆನಿಸುವ ಕಲಾಕೃತಿಗಳು ಎಲ್ಲರ ಮನಸೆಳೆಯುತ್ತವೆ. ಅವರ ಗಾರ್ಡಿಯನ್ ಏಂಜಲ್ ಆಫ್ ಬ್ರಿಟಿಷ್ ಎಂಪೈರ್ ಚಿತ್ರದಲ್ಲಿ ಆಂಗ್ಲರ ಆಡಳಿತಕಾಲದಲ್ಲಿದ್ದ ದೇಶಗಳನ್ನು ವಿಕ್ಟೋರಿಯಾ ರಾಣಿಯ ಚಿತ್ರದಲ್ಲಿ ರೂಪಿಸಿದ್ದು ಅದರಲ್ಲಿ ಭಾರತ ಹೃದಯಭಾಗದಲ್ಲಿರುವಂತೆ ಚಿತ್ರಿಸಿರುವುದು ವಿಶೇಷ. ಕಲಾತಜ್ಞರ ಪ್ರಕಾರ ಈ ಚಿತ್ರ ಲಕ್ಷಾಂತರ ರೂ. ಮೌಲ್ಯವುಳ್ಳದ್ದಾಗಿದೆ. ಸುಮಾರು ೧೮೦೦ ಚಿತ್ರಗಳಿರುವ ಚಿತ್ರರಾಮಾಯಣ, ಚಿತ್ರಭಾಗವತಗಳೂ ಇಲ್ಲಿ ಕಾಣಸಿಗುತ್ತವೆ. ಕವಿಮನೆತನದ ವಂಶವೃಕ್ಷವನ್ನು ಸಹ ಇಲ್ಲಿ ನೋಡಬಹುದು. ಅಸಂಖ್ಯ ಕನ್ನಡ, ತೆಲುಗು, ತಮಿಳು, ತಿಗಳಾರಿ, ದೇವನಾಗರಿ ಲಿಪಿಗಳಲ್ಲಿರುವ ಓಲೆಗರಿ ಕಟ್ಟುಗಳಿದ್ದು ಅಧ್ಯಯನಯೋಗ್ಯವಾಗಿವೆ. ಧರ್ಮಶಾಸ್ತ್ರ, ಸಂಗೀತ, ಆಯುರ್ವೇದ, ಇತಿಹಾಸ, ಇತ್ಯಾದಗಳಿಗೆ ಸಂಬಂಧಿಸಿದ ಓಲೆಗರಿಗಳಿವೆಯೆಂದು ತಿಳಿದುಬರುತ್ತದೆ. ಕೃಷ್ಣದೇವರಾಯನ ದಿನಚರಿ, ನವಾಬ್ ಹೈದರಾಲಿಯ ಸಹಿಯುಳ್ಳ ದಾಖಲೆ, ಸರ್ವಜ್ಞನ ಪೂರ್ವಾಪರ ತಿಳಿಸುವ ತಾಡಪತ್ರ, ಶ್ರೀ ಶಂಕರಾಚಾರ್ಯರ ಅಪ್ರಕಟಿತ ಸ್ತೋತ್ರಗಳು, ಗದಗದ ತೋಂಟದಾರ್ಯ ಮಠದ ಚಿನ್ನದ ಪಾದುಕೆಗಳಲ್ಲಿರುವ ಕೆಳದಿಯ ಶಾಸನ ಹಾಗೂ ರೇಖಾಚಿತ್ರವಿದ್ದ ಸಂಶೋಧನಾತ್ಮಕ ಕೃತಿಗಳು, ವಿಜಯನಗರದ ದೇವರಾಯನ ಅಂಕಿತದ ತಾಮ್ರಶಾಸನ, ಹೀಗೆ ನೂರಾರು ಅಮೂಲ್ಯ ಪ್ರಾಚೀನ ಸಂಪತ್ತು ಇಲ್ಲಿ ರಕ್ಷಿಸಲ್ಪಟ್ಟಿದ್ದು ಇವುಗಳ ಮಹತ್ವವನ್ನು ಬಿತ್ತರಿಸುವ ನೈಜ ಇತಿಹಾಸ ಹೊರತರುವ ಕೆಲಸ ಆಗಬೇಕಿದೆ. ಕುವೆಂಪು ವಿಶ್ವವಿದ್ಯಾನಿಲಯ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ವಿಪುಲ ಆಕರಗಳು, ಅವಕಾಶಗಳು ಇವೆ. ಇಲ್ಲಿಯ ತಾಡೆಯೋಲೆ ಸಂಗ್ರಹ ಮತ್ತು ವೈಜ್ಞಾನಿಕ ರೀತಿಯ ರಕ್ಷಣೆಗಾಗಿ ಕೇಂದ್ರ ಸರಕಾರ ಇದನ್ನು ಹಸ್ತಪ್ರತಿ ಸಂಪನ್ಮೂಲ ಕೇಂದ್ರವಾಗಿ ಗುರುತಿಸಿದೆ. ಈಗ ಸರಕಾರ ಇದನ್ನು ಕುವೆಂಪು ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸಿದೆ. ಇತ್ತೀಚೆಗೆ ಇಕ್ಕೇರಿಯ ಹಳೆರಥವನ್ನು ವಸ್ತುಸಂಗ್ರಹಾಲಯದ ಸಂಗ್ರಹಕ್ಕೆ ಸೇರಿಸಿಕೊಳ್ಳಲಾಗಿದೆ. ಗುಂಡಾಜೋಯಿಸರ ಈ ಎಲ್ಲಾ ಅದ್ಭುತ ಕೆಲಸದಿಂದ ಇಂದು ಈ ವಸ್ತುಸಂಗ್ರಹಾಲಯ ಈಗಿನ ಸ್ಥಿತಿಗೆ ತಲುಪಿದ್ದು ಮುಂದೊಮ್ಮೆ ಕರ್ನಾಟಕದ ಹೆಮ್ಮೆಯೆನಿಸುವುದರಲ್ಲಿ ಸಂಶಯವಿಲ್ಲ. ಅವರಿಗೆ ನಮೋ ನಮೋ! 

ಕೆಳದಿ ಇತಿಹಾಸ ತಿರುಚಿದ್ದಕ್ಕೆ  ಕೆರಳಿದರು!

     ಇತಿಹಾಸಕ್ಕೆ ಜಾತಿ, ದೇಶ, ದರ್ಮ, ಇತ್ಯಾದಿ ಹಲವು ಕಾರಣಗಳಿಂದ ಅಪಚಾರವಾಗಿದೆ, ಆಗುತ್ತಿದೆ. ಭಾರತದ ನೈಜ ಇತಿಹಾಸವನ್ನೂ ಸಹ ಜಾತ್ಯಾತೀತತೆ ನೆಪದಲ್ಲಿ ಮುಚ್ಚಿಹಾಕಲಾಗುತ್ತಿದೆ. ಇತಿಹಾಸವೆಂದರೆ (ಅರ್ಥ: ಅದು ಹಾಗೆ ಇತ್ತು) ಅದು ಹೇಗೆ ಇತ್ತೋ ಹಾಗೆ ಹೇಳಬೇಕು. ಆದರೆ ತಮಗೆ ಬೇಕಾದಂತೆ ತಿರುಚಿದ ಇತಿಹಾಸವನ್ನು ನಮ್ಮ ಮಕ್ಕಳು ಅಭ್ಯಸಿಸುತ್ತಿರುವುದು ದುರ್ದೈವ. ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಚೆನ್ನಬಸವನಾಯಕ ಕಾದಂಬರಿಯಲ್ಲಿ ಕೆಳದಿಯ ರಾಣಿ ವೀರಮ್ಮಾಜಿಯ ಚಾರಿತ್ರ್ಯ ವಧೆ ಮಾಡುವಂತಹ ವರ್ಣನೆಗಳನ್ನು ಮಾಡಿದ್ದುದನ್ನು ಪ್ರಬಲವಾಗಿ ಖಂಡಿಸಿದ್ದ ಗುಂಡಾಜೋಯಿಸರು ಹಲವಾರು ಲೇಖನಗಳನ್ನು ಪ್ರಕಟಿಸಿದರು. ಅಷ್ಟೇ ಸಲ್ಲ, ಸಂಶೋಧನಾತ್ಮಕವಾದ, ಸತ್ಯಶೋಧನೆ ಆಧರಿಸಿ ನಿಷ್ಕಳಂಕಿಣಿ ಕೆಳದಿ ವೀರಮ್ಮಾಜಿ ಎಂಬ ಗ್ರಂಥವನ್ನೇ ಪ್ರಕಟಿಸಿದರು. ಮಾಸ್ತಿಯಂತಹವರೂ ತಮ್ಮದೇ ಆದ ಕಾರಣಕ್ಕಾಗಿ ನೈಜ ಇತಿಹಾಸಕ್ಕೆ ಕಳಂಕ ತಂದದ್ದು ನೋವು ತರುವಂತಹುದು. ಮಾಸ್ತಿಯವರಿಗೆ ಈ ಕೃತಿಗಾಗಿ ಕೊಡಬೇಕೆಂದಿದ್ದ ಜ್ಞಾನಪೀಠ ಪ್ರಶಸ್ತಿಯನ್ನು ಪ್ರತಿಭಟನೆಯ ಕಾರಣಕ್ಕಾಗಿ ಸಮಗ್ರ ಸಾಹಿತ್ಯಕ್ಕಾಗಿ ಎಂದು ಬದಲಾಯಿಸಿ ಕೊಡಲಾಯಿತು. 

ಮೌಲಿಕ ಬರಹಗಾರರು

     ಸುಂದರ ಕೈಬರಹಗಾರರಾದ ಗುಂಡಾಜೋಯಿಸರು ೩೦ಕ್ಕೂ ಹೆಚ್ಚು ಇತಿಹಾಸ ಸಂಶೋಧನೆಯ ಕೃತಿಗಳು, ೨೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಎಲ್ಲಾ ಕೃತಿಗಳು ದಾಖಲೆಗಳನ್ನು ಆಧರಿಸಿದ್ದು ಸತ್ಯಶೋಧನೆಯ ಫಲಗಳಾಗಿವೆ. ಹೆಚ್ಚಿನ ಕೃತಿಗಳು ಕೆಳದಿ ಅರಸರು, ಅವರ ಕಾಲದ ಇತಿಹಾಸ, ಸಾಹಿತ್ಯಗಳಿಗೆ ಸಂಬಂಧಿಸಿವೆ. ಸಂಶೋಧನಾತ್ಮಕ ಕಾರ್ಯಗಳಿಗೆ ಭಾರತ ಮತ್ತು ರಾಜ್ಯ ಸರ್ಕಾರದ ನೆರವೂ ಸಿಕ್ಕಿದ್ದು ಅವರ ಸಂಶೋಧನೆಗೆ ಸಹಕಾರಿಯಾಗಿದೆ. ಅನೇಕ ರಾಷ್ಟ್ರೀಯ ಮತ್ತು ಆರು ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಭಾಗವಹಿಸಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ ಹೆಗ್ಗಳಿಕೆ ಇವರದು. ಇವರ ಸಾಹಿತ್ಯ ಕೃಷಿಯ ಕುರಿತು ಬರೆಯಹೊರಟರೆ ಅದೇ ಪ್ರತ್ಯೇಕ ದೀರ್ಘ ಲೇಖನವಾಗುತ್ತದೆ. 

ಅರಸಿ ಬಂದ ಪ್ರಶಸ್ತಿಗಳು

     ಹಲವಾರು ಪ್ರಶಸ್ತಿ, ಸನ್ಮಾನಗಳು ಇವರನ್ನು ಅರಸಿ ಬಂದಿವೆ. ೧೯೯೪ರಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಆಜೀವ ಸದಸ್ಯರಾಗಿರುವ ಇವರು ೨೦೦೪ರಲ್ಲಿ ಹೊನ್ನಾಳಿಯಲ್ಲಿ ನಡೆದ ಅಕಾಡೆಮಿಯ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಸಾಧನೆಯನ್ನು ಕೆಳದಿ ರಾಜಗುರು ಹಿರೇಮಠ ಗುರುತಿಸಿ ಕೆಳದಿ ಇತಿಹಾಸ ಸಂಶೋಧನಾ ರತ್ನ ಎಂಬ ಪ್ರಶಸ್ತಿ ನೀಡಿದ್ದು, ಈ ಬಿರುದು ನಿಜಕ್ಕೂ ಅರ್ಥಪೂರ್ಣವಾಗಿದೆ. ವಿಶ್ವ ಹಿರಿಯರ ನಾಗರಿಕರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಸರ್ಕಾರದಿಂದ ಸನ್ಮಾನಿತರಾದ ಐವರ ಪೈಕಿ ಇವರೂ ಒಬ್ಬರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ಜೂನ್ ತಿಂಗಳಿನಲ್ಲಿ ನಡೆದ ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 

ಬತ್ತದ ಚಿಲುಮೆ

     ೮೦ರ ಹರಯದಲ್ಲಿ ಈಗಲೂ ಬತ್ತದ ಚಿಲುಮೆಯಂತಿರುವ ಗುಂಡಾಜೋಯಿಸರ ತಲೆಯಲ್ಲಿ ಸುಮಾರು ೬೦-೭೦ ಲಕ್ಷ ರೂ.ಗಳ ವೆಚ್ಚದ ಅಂದಾಜಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿ ಮುಂದಿನ ೬ ವರ್ಷಗಳಲ್ಲಿ ಮಾಡಲು ಉದ್ದೇಶಿಸಿರುವ ಹಲವಾರು ಯೋಜನೆಗಳಿವೆ. ತಿಗಳಾರಿ ಹಸ್ತಪ್ರತಿಗಳು, ಮೋಡಿ ಲಿಪಿಗಳ ಕುರಿತು ಸಂಶೋಧನಾ ಲೇಖನಗಳು, ಅಪ್ರಕಟಿತ ತಾಳೆಗರಿ ಸಾಹಿತ್ಯಗಳನ್ನು ಹೊರತರುವುದು, ಕೆಳದಿಯ ಸಮಗ್ರ ಇತಿಹಾಸ (ಇಂಗ್ಲಿಷ್ ಮತ್ತು ಕನ್ನಡದಲ್ಲಿ), ಇತ್ಯಾದಿ ಅವರ ಯೋಜನೆ/ಯೋಚನೆಗಳು ಕಾರ್ಯಗತಗೊಳ್ಳಲಿ ಎಂದು ಹಾರೈಸೋಣ. ಸಾಗರದಿಂದ ೮ ಕಿ,ಮೀ, ದೂರದ ಕೆಳದಿಗೆ ಭೇಟಿ ನೀಡಿ ರಾಮೇಶ್ವರ ದೇವಾಲಯ ಮತ್ತು ಕೆಳದಿಯ ವಸ್ತು ಸಂಗ್ರಹಾಲಯ ಹಾಗೂ ೩ ಕಿ,ಮೀ. ದೂರದ ಇಕ್ಕೇರಿಯ ಅಘೋರೇಶ್ವರ ದೇವಾಲಯ ಸಂದರ್ಶಿಸಿರದಿದ್ದಲ್ಲಿ ಸಂದರ್ಶಿಸಿರಿ. ಆ ಸಂದರ್ಭದಲ್ಲಿ ಹಿರಿಯ ಸಾಧಕ ಗುಂಡಾಜೋಯಿಸರನ್ನು ಕಂಡು ಮಾತನಾಡಿಸಿ ಬರಬಹುದು. ಏನಂತೀರಿ?   

ಕೆಳದಿ ವಸ್ತು ಸಂಗ್ರಹಾಲಯ 

ಓಲೆಗರಿಗಳಲ್ಲಿನ ಸಾಹಿತ್ಯ ಭಂಡಾರ

ಪ್ರಾಚೀನ ವಸ್ತುಗಳ ಒಂದು ನೋಟ

ರಾಜರ ಆಯುಧಗಳ ಒಂದು ನೋಟ

ದೊಡ್ಡ ಗಾತ್ರದ ತಾಡಪತ್ರದಲ್ಲಿ ಮಹಾಭಾರತ

 

 

 

Comments