ಡಿಸ್ಚ್ರಿಶನ್ - ವಿವೇಚನೆ ಕುರಿತ ಒಂದು ಚಂದಮಾಮಾ ಕತೆ

ಡಿಸ್ಚ್ರಿಶನ್ - ವಿವೇಚನೆ ಕುರಿತ ಒಂದು ಚಂದಮಾಮಾ ಕತೆ

ಒಬ್ಬ ರಾಜಾ ಇದ್ದ , ಅವಂಗ ಒಂದ್ ವಿಚಾರಾ ಬಂತು , ನಮ್ಮ ಮಂದಿ ಎಲ್ಲಾನೂ ಮೈತುಂಬ ಅರಿವಿ ಹಾಕ್ಕೊಂಡು ಡೀಸೆಂಟಾಗಿ ಇರ್ಲಿ ಅಂತ . ಅದಕ್ಕೊಂದು ಕಾಯ್ದೆ ಮಾಡಿದ .
ಅವನ ಸೈನಿಕರು ಕಾಯ್ದೇ ನಡಸ್ ಬೇಕಲ್ಲ? ಮೈ ತುಂಬ ಅರಿವಿ ಹಾಕ್ಕೊಳ್ದೇ ಕಾಯ್ದೆ ಮೀರಿದೋರನ್ನ ಎಳಕೊಂಬಂದ್ರು .

ಅವರೊಳಗ ಒಬ್ಬಾಂವಾ ಸಾಧೂ ಇದ್ದ . ಅವಂಗ ಶಿಕ್ಷಾ ಕೊಡಲಿಕ್ಕೆ ಆಗ್ತದS? ಎಲ್ಲಾ ಬಿಟ್ಟಾಂವ ಅಂವ , ರಾಜಾನ ಶಿಕ್ಷಾದಿಂದ ಏನು ಅವಂಗ ? ಮತ್ತ ಮಂದಿ ಏನ ಅಂದಾರು ? ಸೆನ್ಸಿಟಿವ್ ಮತ್ತ ಪಾಲಿಟಿಕಲ್ ವಿಷ್ಯ ನೋಡ್ರಿ . ಮತ್ತS ಕಾಯ್ದೇನೂ ಪಾಲಿಸ್ಬೇಕಲ್ಲ ? ಕಾಯ್ದೇ ಹಿಂದಿನ ಘನ ಉದ್ದೇಶಾನೂ ಈಡೇರಬೇಕಲ್ಲ ? ತಲಿ ಓಡಿಸಿ ರಾಜಾ ಶಾಲು ತರಿಸಿ ಸಾಧೂಗೆ ಕಾಲು ಬಿದ್ದು ಆಶೀರ್ವಾದಾ ತಗೋತಾನ . ಕೂಡಿದ ಮಂದಿ ಭಲೇ ಭಲೇ ಅಂತಾರ. ದೇವ್ರು , ದಿಂಡ್ರು ಅಂದ್ರ ರಾಜಾಗ ಎಷ್ಟು ಭಕ್ತಿ ನೋಡ್ರಿ? ಅಂತ .

ಆಮ್ಯಾಲೇ ಇನ್ನೊಬ್ಬಾಂವ , ಪಾಪ , ಅಂವಾ ಅಡವ್ಯಾಗ ಬದಕೋ ಮನಿಷ್ಯಾ , ಕಲತಾಂವನೂ ಅಲ್ಲ ; ನಾಗರೀಕ ಸಮಾಜದಾಗ ಇರಾವನೂ ಅಲ್ಲ ; ಅವಂಗ ಹೊಸ ಕಾಯ್ದೆ ಬಗ್ಗೆ ಗೊತ್ತನೂ ಇದ್ದಿಲ್ಲ . ರಾಜಾ ಒಂದ್ ಕ್ಷಣಾ ವಿಚಾರಾ ಮಾಡಿ , ಅವನ್ನ ಒಂದು ಸಾಲಿಗೇ , ಅಂದ್ರ ಟ್ರೇನಿಂಗ್ ಪ್ರೋಗ್ರಾಂ ಅಂತ ತಿಳಕೊಳ್ರಿ ... ಅಲ್ಲಿಗೆ ಕಳಸ್ತಾನ .

ಆಮ್ಯಾಲೇ ಮೂರ್ನೇದಾಂವಾ , ಅಂವಾ ಪ್ಯಾಟೀ ಮನುಷ್ಯಾನS. ಮತ್ತ ಕಲ್ತಾಂವ ಬ್ಯಾರೇ ? ಮೈತುಂಬ ಅರಿವಿ ಹಾಕ್ಕೊಳ್ಲಿಕ್ಕೆ ಏನು ಧಾಡಿ ಅಂವಗ? ಓ , ಫ್ಯಾಶನ್ ಮಾಡ್ತಾನ ಮಗಾ ಅಂತ ಅಂದ್ಕೊಂಡು , ಇಂವಗ ಒಂದ್ ಐವತ್ತು ಛಡೀ ಏಟು ಹಾಕ್ರಿ ಅಂತ ತನ್ನ ಆಳಿಗೆ ಆಜ್ಞಾ ಮಾಡ್ತಾನ .

ಹೆಂಗ ಅದ ಕಥೀ ? ಇದು ದೊಡ್ಡಾವ್ರಿಗೋ , ಸಣ್ಣಾವ್ರಿಗೋ ?

Rating
No votes yet

Comments