ಚಲೋ ಮಲ್ಲೇಶ್ವರ ೧೦

ಚಲೋ ಮಲ್ಲೇಶ್ವರ ೧೦

ಸುತ್ತಮುತ್ತ ಎಲ್ಲೂ ಬಾರಿಮುತ್ತು ಮತ್ತು ಅವರ ಬಳಗ ಇಲ್ಲ ಎಂದು ಗ್ಯಾರಂಟಿ ಆದ ಮೇಲೆ, ಗಾಬರಿಯಿಂದ ಬಳಿ ಕುಳಿತಿದ್ದ ಜಯ್ ಮತ್ತು ಚಿಕ್ಕುರನ್ನು ಸಮಾಧಾನಪಡಿಸುತ್ತಾ-"ಹೆ..ಟೆನ್ಷನ್ ಮಾಡಬೇಡಿ. ನನಗೇನೂ ಆಗಿಲ್ಲ. ದಬಾಂಗ್ ೧೩ ಬಾರಿ, ಸಿಂಗಂ ೫ ಬಾರಿ ನೋಡಿರುವ, ಕನ್ನಡದ ಎಲ್ಲಾ ಮಚ್ಚು, ಲಾಂಗ್ ಸಿನೆಮಾ ನೋಡಿರುವ ನಾನು, ಈ ಒಂದು ಎಳನೀರು ಕೊಯ್ಯೋ ಮಚ್ಚಿಗೆ ಭಯ ಬೀಳೋನಲ್ಲ. ಆದರೆ ತಪ್ಪು ನನ್ನದೇ ಇರುವುದರಿಂದ ಸುಮ್ಮನಾದೆ. ಅಷ್ಟೇ" ಅಂದೆ.


ಇಂತಹ ಅವಕಾಶಗಳನ್ನು ಯಾವಾಗಲೂ ವ್ಯರ್ಥಮಾಡದ ಮಂಜಣ್ಣ ಬಂದು "ಏನು ಗಣೇಸಣ್ಣ, ಢಾಯಿ ಕಿಲೋ ಹಾಥ್ ಕತೆ ಏನಾಯಿತು? ಹ್ಹ..ಹ್ಹ."ಅಂದರು.


"ಮಂಜಣ್ಣ, ೮ನೇ ಕ್ರಾಸ್‌ನಲ್ಲಿ ನಾನೊಬ್ಬನೇ ಬರೀ ಉರುಳಾಡಿ, ಗಣಪತಿ ಮೂರ್ತಿಗಳು,ರಸ್ತೆ ಬದಿ ವ್ಯಾಪಾರಿಗಳ ವಸ್ತುಗಳೆಲ್ಲಾ ಪುಡಿಪುಡಿ... ಏನೇನೆಲ್ಲಾ ಆಯಿತು ನೆನಪಿದೆಯಲ್ಲಾ? ಇನ್ನು ಆಕೆ ಜತೆ ಹೋರಾಡಿದರೆ ೫ನೇ ಕ್ರಾಸ್ ಬ್ರಿಡ್ಜೇ ಮುರಿಯಬಹುದು! ಈ ಸಲ ಪೋಲೀಸರು ನಿಮ್ಮ ಯಾವ ವಕಾಲತ್ತೂ ಕೇಳದೇ ಇಬ್ಬರನ್ನೂ ಜೈಲಿಗೆ ಹಾಕಬಹುದು. ಈ ಮಂತ್ರಿಗಳೊಂದಿಗೆ ಜೈಲಲ್ಲಿರುವ ಕಷ್ಟ ಯೋಚಿಸಿಯೇ ಸುಮ್ಮನಾದೆ..ಅಂದಹಾಗೆ ಮಂಜಣ್ಣ, ಒಂದು ಉಪಕಾರವಾಗಬೇಕಿತ್ತು. ಅಲ್ಲಿ ನೋಡಿ, ಚಿಂತೆ ಮಾಡುತ್ತಾ( ನನ್ನ ಬಗ್ಗೆ ಅಲ್ಲ) ನಿಂತಿದ್ದಾರಲ್ಲಾ-ರಾಮಮೋಹನರು, ಅವರ ಕಾರು ಟ್ರಾಫಿಕ್‌ನವರು ಹಿಡಿದು ಹಾಕಿದ್ದಾರೆ. ಪ್ಲೀಸ್.."


"ಚಿಂತಿಸಬೇಡಿ. ಮೋಹನ್‌ರೆ. ಸ್ಟೇಶನ್‌ಗೆ ಹೋಗೋಣ. ಗಣೇಸಣ್ಣ ೫ ನಿಮಿಷದಲ್ಲಿ ಬರುತ್ತೇವೆ. ಇಲ್ಲೇ ಇರಿ" ಅಂದ್ರು ಮಂಜಣ್ಣ.


"ಗೋಪಾಲರೆ, ೫ನಿಮಿಷ ಹೇಳಿದರು. ಅರ್ಧಘಂಟೆಯಾದರೂ ಕಾಣಿಸುತ್ತಿಲ್ಲಾ.. ಚಿಕ್ಕುಗೆ ಹಕ್ಕಿ ಕಣ್ಣಿಗೆ ಬಿದ್ದಿದೆ-ಆತನಿಗೆ ಸಮಯದ ಚಿಂತೆಇಲ್ಲ. ಜಯ್ ಸ್ಕೋರ್ ನನ್ನ ಪ್ರಕಾರ ೩೭ ಆಯ್ತು..ಅಲ್ವಾ? ೩೯ಆ..ನಿಮ್ಮ ಲೆಕ್ಕ ತಪ್ಪಿದೆ."


ಗೋ : ಗಣೇಶರೆ, ತೂಕಕ್ಕೆ ಕೆ.ಜಿ., ದೂರಕ್ಕೆ ಮೀ., ಇದ್ದ ಹಾಗೇ ಭಕ್ತನಿಗೆ ಯಾವುದು ಹೇಳಿ ನೋಡೋಣ?


ಗ: ಒಂದು ಆಪ್ಶನ್ ಕೊಡಿ. ಫೋನ್ ಎ ಫ್ರೆಂಡ್ ಮಾಡಿ ನಾವಡರನ್ನು ಕೇಳಲಾ?


ಗೋ : ಬೇಡ.ಅವರಿಗೆ ತೊಂದ್ರೆ ಕೊಡಬೇಡಿ. ನಾನೇ ಹೇಳುವೆ. ಜೆ.ಎಸ್!! ೨ಜೆ.ಎಸ್ ಅಂದರೆ ೧೦೮+೧೦೮ ಸುತ್ತು ಹಾಕುವ ಭಕ್ತ! ಕೇವಲ ೩ ಸುತ್ತು ಹಾಕುವ ಭಕ್ತನ ಮಾನ ಎಷ್ಟು ಹೇಳಿ ನೋಡುವ?


ಗ :(ಇದೊಳ್ಳೆ ತಾಪತ್ರಯವಾಯಿತಲ್ಲಾ..) ಚಿಕ್ಕು, ಏ ಚಿಕ್ಕು.. ಬರೀ ಹಕ್ಕಿ ನೋಡುವುದಲ್ಲಾ, ಈ ಲೆಕ್ಕಕ್ಕೆ ಉತ್ತರ ಹೇಳು ನೋಡೋಣ.."


ಅದೇ ಸಮಯಕ್ಕೆ ಪುಣ್ಯಕ್ಕೆ ದೂರದಲ್ಲಿ ರಾಮಮೋಹನರು, ಮಂಜಣ್ಣ ಇಬ್ಬರೇ ಬರುವುದು ಕಾಣಿಸಿತು. ಅರೇ..ಕಾರೆಲ್ಲಿ!?


ರಾಮಮೋಹನರು ಬಂದವರೆ ಒಂದೇ ಉಸಿರಲ್ಲಿ ಅಲ್ಲಿ ನಡೆದದ್ದನ್ನೆಲ್ಲಾ ಹೇಳಿದರು-" ಮಂಜಣ್ಣ ಹೇಳಿದ ಕೂಡಲೇ ಟ್ರಾಫಿಕ್‌ನವರು ಫೈನ್ ಹಾಕದೇ ಕಾರು ಕೊಟ್ಟರು. ನಾನು ಹೋಗಿ ಕಾರಲ್ಲಿ ಕುಳಿತು ಸ್ಟಾರ್ಟ್ ಮಾಡಲು ಹೊರಟೆ. ಆಗಲಿಲ್ಲ. ಪಾಪ ಮಂಜಣ್ಣನವರು ಕಾರನ್ನು ಸ್ಟೇಶನ್‌ನಿಂದ, ಬಿಗ್ ಬಜಾರ್‌ವರೆಗೆ ನೂಕಿದರು. ಸ್ಟಾರ್ಟೇ ಆಗಲಿಲ್ಲ. ಕಾರನ್ನು ಅಲ್ಲೇ ಬಿಟ್ಟು ಬಂದಿದ್ದೇವೆ. ೧೦ ನಿಮಿಷದಲ್ಲಿ ತೆಗೆಯದಿದ್ದರೆ ಪುನಃ ಸ್ಟೇಶನ್‌ಗೆ ಹಾಕುವರಂತೆ.."


"ಹೆದರಬೇಡಿ.ರಾಮಮೋಹನರೆ, ಚಿಟಿಕೆ ಹೊಡೆಯುವುದರೊಳಗೆ ಕಾರು ಸರಿ ಮಾಡಿ ತರುವೆ" ಎಂದು ಚಿಟಿಕೆ ಹೊಡೆದೆ.. ಕಾರು! ರಾಮಮೋಹನರದ್ದು!! ಬರುತ್ತಾ ಇದೆ!!!


ಎಲ್ಲರೂ ಪವಾಡಪುರುಷ ಎಂಬಂತೆ ನನ್ನನ್ನು ನೋಡುತ್ತಿರುವಾಗ, ಕಾರಿನೊಳಗಿಂದ ಸತೀಶ್ ಹೊರಬಂದು," ಏನು, ರಾಮಮೋಹನರೆ, ಕಾರನ್ನು ಕೀ ಸಮೇತ ಅಲ್ಲಿ ಬಿಟ್ಟು ಬಂದಿದ್ದೀರಲ್ಲಾ?" ಅಂದರು."ಅದು ಸರಿ ಅದು ಹೇಗೆ ಸ್ಟಾರ್ಟ್ ಆಯಿತು?" ಎಲ್ಲರೂ ಒಟ್ಟಿಗೆ ಪ್ರಶ್ನಿಸಿದರು!


"ಅದಾ... ಕಾರು ಶೇಪ್ ನೋಡುವಾಗ, ರಾಮಮೋಹನರದ್ದೇ ಕಾರು ಎಂದು ಗೊತ್ತಾಯಿತು. ಕೀಯಲ್ಲೇ ಸ್ಟಾರ್ಟ್ ಮಾಡುವಾಗ -ಕಿಚಕಿಚ್ ಕಿಚ್ಚ್‌ಚ್.ಚಚ್..ಚಚ್.ಅಂತು.., ಎದುರಿಗೆ  ಬಂದು ಚಚ್ಚಿದೆ-ಸ್ಟಾರ್ಟ್ ಆಯಿತು.. ಚಚ್ ಸ್ಟಾರ್ಟ್ ಕಾರಲ್ವಾ.. ಅಷ್ಟೇ.. !" ಅಂದರು ಸತೀಶ್.


-ಗಣೇಶ. 


 


 

Rating
No votes yet

Comments