ಆಧಾರ್:ಆಧಾರ ರಹಿತ ಆರೋಪ?

ಆಧಾರ್:ಆಧಾರ ರಹಿತ ಆರೋಪ?

ಆಧಾರ್:ಆಧಾರ ರಹಿತ ಆರೋಪ?
ಆಧಾರ್ ಯೋಜನೆಯೀಗ ವೇಗ ಪಡೆದು ಕೊಂಡಿದೆ.ರಾಜ್ಯದ ಮೂಲೆ ಮೂಲೆಯ ಸ್ಥಳಗಳಲ್ಲಿ ಆಧಾರ್ ಗುರುತುಚೀಟಿ ನೀಡಿಕೆ ನಡೆಸಲಾಗುತ್ತಿದೆ.ಜತೆಗೆ ಆಯ್ದ ಅಂಚೆ ಕಚೇರಿಗಳಲ್ಲಿಯೂ ಆಧಾರ್ ಚೀಟಿ ನೀಡಿಕೆಯನ್ನು ಆರಂಭಿಸಲಾಗಿದೆ.ಬೆಂಗಳೂರಿನಲ್ಲಿ,ಜನರು ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗುವಂತೆ ರಾತ್ರಿ ವೇಳೆಯೂ ಚೀಟಿ ನೀಡಿಕೆ ನಡೆದಿದೆ.ಇದರ ನಡುವೆಯೇ,ಯೋಜನೆಯ ಬಗ್ಗೆ ಅಪಸ್ವರಗಳೂ ಕೇಳಿ ಬರುತ್ತಿವೆ.ಯೋಜನೆ ಬಹು ದುಬಾರಿ ಯೋಜನೆ.ಇದರಲ್ಲಿ ಜನರ ಬಗೆಗಿನ ಬಗ್ಗೆ ಸಂಗ್ರಹಿಸುವ ಮಾಹಿತಿಯ ದುರುಪಯೋಗ ಆಗಬಹುದು.ಅಮೇರಿಕಾದ ಸಂಸ್ಥೆಗಳು,ಯೋಜನೆಯ ಅನುಷ್ಠಾನದಲ್ಲಿ ಕೈಜೋಡಿಸಿರುವ ಕಾರಣ,ನಮ್ಮ ಜನರ ಬ್ಯಾಂಕ್ ಖಾತೆಗಳಂತಹ ಮಾಹಿತಿಯು ಅಮೆರಿಕಾ ಸರಕಾರಕ್ಕೆ ಸಿಗಬಹುದು.ನೂರ ಇಪ್ಪತ್ತು ಕೋಟಿ ಜನರ ಖಾಸಗಿ ಮಾಹಿತಿ,ಆಧಾರ್ ಯೋಜನೆಯ ಅಡಿ ಸಂಗ್ರಹವಾದಾಗ,ಅದು ದಾಳೀಕೋರರ ದಾಳಿಯಲ್ಲಿ ಸೋರಿಹೋಗುವ ಸಾಧ್ಯ ಇದೆ ಎಂದು ಮುಂತಾಗಿ ಟೀಕೆಗಳು ಬರುತ್ತಿವೆ.
ಭಾರತದ ನೂರ ಇಪ್ಪತ್ತು ಕೋಟಿ ಜನರು ಸರಕಾರದ ಜತೆ ವ್ಯವಹರಿಸುವುದು ಸುಲಭವಾಗಬೇಕು,ಪ್ರತಿ ವ್ಯಕ್ತಿಗೂ ತಾನು ಭಾರತೀಯ ಎಂದು ನಿರೂಪಿಸಲು ಸಾಧ್ಯವಾಗಬೇಕು ಎನ್ನುವುದು ಆಧಾರ್ ಯೋಜನೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ.ಜನರ ಬೆರಳಚ್ಚು ಮತ್ತು ಐರಿಸ್ ಇವುಗಳ ಮುದ್ರೆಯನ್ನು ಸೆರೆ ಹಿಡಿದು ಪ್ರತಿಯೊಬ್ಬನಿಗೂ ಪ್ರತ್ಯೇಕ ಸಂಖ್ಯೆಯನ್ನು ನೀಡುವ ಕಾರಣ ಈ ಯೋಜನೆ,ವಿಶ್ವದ ಅತಿ ದೊಡ್ಡ ಜೈವಿಕ ಗುರುತಿನ ಭಂಡಾರ ಇದಾಗಲಿದೆ.ಇದರಲ್ಲಿ ಸುಮಾರು ಇನ್ನೂರ ನಲುವತ್ತು ಕೋಟಿ ಐರಿಸ್ ಗುರುತು ಮತ್ತು ಒಂದು ಸಾವಿರದಿನ್ನೂರು ಕೋಟಿ ಕೈಬೆರಳಚ್ಚು ಸಂಗ್ರಹವಾಗಲಿದ್ದು,ಇಂತಹ ಮಾಹಿತಿಯ ಭಂಡಾರದ ನಿರ್ವಹಣೆ ನಿಜಕ್ಕೂ ತಾಂತ್ರಿಕ ಸವಾಲು.ಮಾಹಿತಿಯ ಭಂಡಾರದ ಭದ್ರತೆ-ಬೇಕಾದಾಗ ಇದರ ಬಳಕೆ ಮಾಡುವುದು ಬಹಳ ಕಠಿನ ಕೆಲಸ.ಇದಕ್ಕೆ ಅತಿ ಸಮೀಪ ಬರುವ ಮಾಹಿತಿ ಭಂಡಾರದಲ್ಲಿ ಬರೇ ದಶಲಕ್ಷ ಜನರ ಮಾಹಿತಿಯಿದೆ ಎಂದರೆ ಯೋಜನೆಯ ಹರವು ಅರಿವಾದೀತು.
ಆಧಾರ್ ಯೋಜನೆಗೆ ಬಡಜನ ಹೆಚ್ಚು ಸ್ಪಂದಿಸುತ್ತಿದ್ದಾರೆ.ಅಲೆಮಾರಿ ಜೀವನ ನಡೆಸ ಬೇಕಾದ ಅನಿವಾರ್ಯತೆಯುಳ್ಳ ಇವರುಗಳನೇಕರಿಗೆ ಬ್ಯಾಂಕ್ ಖಾತೆ ತೆರೆಯುವುದು ಸಮಸ್ಯೆಯಾಗುತ್ತದೆ.ಬ್ಯಾಂಕ್ ಖಾತೆಯಿಲ್ಲದೆ ಸಾಲಸೌಲಭ್ಯ ಪಡೆಯಲು ಸಾಧ್ಯವಾಗದೆ ದುಬಾರಿ ಬಡ್ಡಿದರದ ಸಾಲಗಳಿಗೆ ಶರಣು ಹೋಗಬೇಕಾಗುತ್ತದೆ.ಅಂತವರಿಗೆ ಆಧಾರ್ ಬ್ಯಾಂಕ್ ಖಾತೆ ತೆರೆಯುವಿಕೆ,ಪಡಿತರ ಪಡೆಯಲು,ಮತದಾನ ಮಾಡಲು ನೆರವಾಗುತ್ತದೆ ಎನ್ನುವ ವಿಚಾರವೇ ಆಪ್ಯಾಯಮಾನವೆನಿಸುತ್ತದೆ.ಸಬ್ಸಿಡಿ ನೀಡಿಕೆಯಂತಹ ಪ್ರಕ್ರಿಯೆಗೂ ಆಧಾರ್ ಗುರುತನ್ನು ಬಳಸುವ ಕ್ರಿಯಾಯೋಜನೆಯನ್ನು ನಂದನ್ ನೀಲಕೇಣಿ ಸಿದ್ಧ ಪಡಿಸಿದ್ದಾರೆ.ವ್ಯಕ್ತಿಗೆ ತನ್ನ ಗುರುತನ್ನು ಸಿದ್ಧಪಡಿಸಲು ಆಧಾರ್ ತುಂಬಾ ಸುಲಭವಾಗಿಸುವ,ಈ ಯೋಜನೆಯು ಕಾರ್ಯಗತವಾಗತವಾಗಲು ಎಲ್ಲರೂ ಬೆಂಬಲ ನೀಡುವುದು ಮುಖ್ಯ.ಪ್ರತಿ ವ್ಯಕ್ತಿಗೆ ಇದರ ಸರಾಸರಿ ಖರ್ಚಾದ ನೂರೈವತ್ತು ರೂಪಾಯಿ ವೆಚ್ಚವನ್ನು ಸರಕಾರ ಭರಿಸಬೇಕಾಗುತ್ತದೆ.ವಾರ್ಷಿಕ ನಿರ್ವಹಣಾ ವೆಚ್ಚ ಇನ್ನೂರು ಕೋಟಿ ವೆಚ್ಚ ಬೇರೆ ಬರುತ್ತದೆ.ಐದು ವರ್ಷಗಳಿಗೊಮ್ಮೆ ಗುರುತುಗಳನ್ನು ನವೀಕರಿಸಲು ವೆಚ್ಚ ಬೇರೆ ಬರುತ್ತದೆ.
--------------------------------------------------------------------
ಮೊಬೈಲ್ ಮೂಲಕ ಅಂತರ್ಜಾಲ;ಹೆಚ್ಚಳ
ಭಾರತದಲ್ಲಿ ಶೇಕಡಾ ನಾಲ್ಕರಷ್ಟು ಜನರು ಅಂತರ್ಜಾಲ ಬಳಸುತ್ತಾರೆ.ಅವರ ಪೈಕಿ ಶೇಕಡಾ ಮೂರು ಜನ ಪಿಸಿಯ ಮೂಲಕ ಅಂತರ್ಜಾಲ ಬಳಸುತ್ತಾರೆ.ಇನ್ನುಳಿದವರು ಮೊಬೈಲ್ ಮೂಲಕ ಅಂತರ್ಜಾಲ ಪಡೆಯುತ್ತಿದ್ದಾರೆ.ಎಂಭೈತ್ತದು ಕೋಟಿ ಜನರಲ್ಲಿ ಮೊಬೈಲ್ ಇರುವ ಕಾರಣ ಮತ್ತು ತ್ರೀಜಿ ಜಾಲ ಹೆಚ್ಚಳದ ಕಾರಣ ಇಂತವರ ಸಂಖ್ಯೆಯಲ್ಲಿ ಏರಿಕೆಯಾಗುವುದು ನಿಶ್ಚಿತ.ಬಿ ಎಸ್ ಎನ್ ಎಲ್ ಈ ವಾರ ಐಐಟಿಯ ಜತೆ ಸೇರೀ ರಚಿಸಿದ ಮೊಬೈಲ್ ಮಂಡಿ ತಂತ್ರಾಂಶಗಳ ಲಾಭ ಪಡೆಯಲು ಸ್ಮಾರ್ಟ್ ಫೋನು ಇದ್ದವರಿಗೆ ಸುಲಭ.ಅಗ್ಗದ ಸ್ಮಾರ್ಟ್ ಫೋನುಗಳೂ ಈ ವಾರ ಬಿಡುಗಡೆಯಾಗಿವೆ.ಎಂಟಿಎಸ್ ಕಂಪೆನಿಯ ಆಂಡ್ರಾಯಿಡ್ ಫೋನುಗಳ ಬೆಲೆ ಐದು ಸಾವಿರದ ಆಸುಪಾಸಿನಲ್ಲಿವೆ.
----------------------------------------------------------------------
ಬದಲಾಗದೇ ಉಳಿದ ಸಾಧನ
ಹ್ಯೂಲೆಟ್ ಪ್ಯಾಕರ್ಡ್ ಕಂಪೆನಿಯ ಕ್ಯಾಲ್ಕ್ಯುಲೇಟರಿನ ಒಂದು ಮಾದರಿ 12c. ಇದು ಮೂರೂ ದಶಕಗಳಿಗೂ ಹೆಚ್ಚು ಕಾಲ ಬಳಕೆಯಲ್ಲಿದ್ದು,ಮೊದಲಿನ ಮತ್ತು ಹೊಸ ಮಾದರಿಗಳಲ್ಲಿನ ವ್ಯತ್ಯಾಸ ಅತಿ ಕನಿಷ್ಠವಾಗಿ ಉಳಿದು ವಿಕ್ರಮ ಸಾಧಿಸಿದೆ.ಕಂಪ್ಯೂಟರ್ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಹೊಸ ಮಾದರಿ ಬಿಡುಗಡೆಯಾಗುವುದು,ಸಾಮಾನ್ಯವಾಗಿರುವಾಗ,ಈ ನಮೂನೆಯ ವಿಕ್ರಮ ಬಹು ಅಪೂರ್ವ.ಕೆಲವು ಪರೀಕ್ಷೆಗಳಲ್ಲಿ ಈ ಮಾದರಿ ಕ್ಯಾಲ್ಕ್ಯುಲೇಟರ್ ಮಾತ್ರಾ,ಒಯ್ಯಲು ಅನುಮತಿಯಿರುವುದು,ಮತ್ತು ಇದರ ಅನುಕೂಲತೆ,ಸರಳತೆಗಳು ಮತ್ತು ಸಾಮಾನ್ಯ ಬಳಕೆಗೆ ಇದು ಸಾಕಷ್ಟು ಎನಿಸುವಂತಿರುವುದು,ಇದು ಬದಲಾಗದೇ ಉಳಿಯಲು ಪ್ರಮುಖ ಕಾರಣವಂತೆ.
-----------------------------------------------------------------------------------------
ಸಾಮಾಜಿಕ ಜಾಲತಾಣ:ಚಳುವಳಿಗಳಿಗಳಿಗೆ ನೆರವಾಗುವವೇ?
ಈಜಿಪ್ಟ್,ಲಿಬಿಯಾದಂತಹ ದೇಶಗಳಲ್ಲಿ ಇತ್ತೀಚೆಗೆ ನಡೆದ ಚಳುವಳಿಗಳಲ್ಲಿ ಫೇಸ್ ಬುಕ್,ಟ್ವಿಟರ್‍ ಆಂತಹ ಸಾಮಾಜಿಕ ಜಾಲತಾಣಗಳು ಜನರನ್ನು ಒಗ್ಗೂಡಿಸಲು ನೆರವಾಗಿವೆ ಎನ್ನುವ ಅಂಶ ಎದ್ದು ಕಾಣುತ್ತದೆ.ಅಣ್ಣಾಹಜಾರೆಯವರ ಭ್ರಷ್ಟಾಚಾರ ವಿರುದ್ಧದ ಚಳುವಳಿಯಲ್ಲಂತೂ,ಈ ತಾಣಗಳ ಕೊಡುಗೆಯನ್ನು ತಮ್ಮ ಸಂದರ್ಶನವೊಂದರಲ್ಲಿ ಅರವಿಂದ ಕೇಜ್ರಿವಾಲ್ ಅವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.ಅವರ ಸಹವರ್ತಿಯೋರ್ವ ಮೊದಲಿಗೆ,ಚಳುವಳಿಯ ಬಗ್ಗೆ ಫೇಸ್ ಬುಕ್ ಪುಟವನ್ನು ರಚಿಸುತ್ತೇನೆಂದು ಮುಂದೆ ಬಂದಾಗ,ಕೇಜ್ರಿವಾಲ್ ಅವರು ಈ ಬಗ್ಗೆ ಉತ್ಸಾಹವನ್ನು ತೋರಿಸಲಿಲ್ಲವಂತೆ.ಇವೇನಿದ್ದರೂ,ನಗರಕೇಂದ್ರಿತ-ಯುವಕರಿಗೆ ಸೀಮಿತ ಎನ್ನುವುದು ಅವರ ಅಭಿಪ್ರಾಯವಾಗಿತ್ತು.ಆದರೆ ಸಾವಿರಗಟ್ಟಲೆ ಜನರ ಗಮನ ಸೆಳೆಯಲು ಈ ಪುಟ ನೆರವಾದಾಗ,ಚಳುವಳಿಯ ಕಾವು ಹಬ್ಬಲು ಮತ್ತು ಸಮಾಂತರ ಸಭೆಗಳನ್ನು ಆನ್ ಲೈನಿನಲ್ಲಿ ನಡೆಸಲು ಇದು ನೆರವಾಯಿತು ಎನ್ನುವುದನ್ನು ಕೇಜ್ರಿವಾಲ್ ಅವರು ವಿವರಿಸಿದ್ದಾರೆ.ಅಲ್ಲದೆ ನಿಗದಿತ ಸಂಖ್ಯೆಯ ಸೆಲ್ ಸಂಖ್ಯೆಗೆ ಮಿಸ್ಸ್ಡ್ ಕಾಲ್ ನೀಡಿ ಬೆಂಬಲ ವ್ಯಕ್ತ ಪಡಿಸುವ ಹೊಸ ನಮೂನೆಯ ಖರ್ಚಿಲ್ಲದ ಯೋಜನೆಗೂ ಅಣ್ಣಾ ಚಳುವಳಿ ಹೇತುವಾಯಿತು.
------------------------------------------------
ತುಷಾರ ವಾರ್ಷಿಕ ಚಂದಾ ಗೆಲ್ಲಿ
ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ. ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಬ್ರಾಂಡ್ಬ್ಯಾಂಡ್ ಎನಿಸಿಕೊಳ್ಳಲು ದತ್ತಾಂಶ ವರ್ಗಾವಣೆ ವೇಗ ಕನಿಷ್ಠ ಎಂದರೆ ಎಷ್ಟಿರಬೇಕು?
ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ,ವಿಷಯ ns46 ನಮೂದಿಸಿ.
ಕಳೆದ ವಾರದ ಬಹುಮಾನಿತ ಉತ್ತರ:
ಲೀನಕ್ಸ್ ಬಗ್ಗೆ ಇರುವ ಕನ್ನಡ ತಾಣವನ್ನು ಹೆಸರಿಸಿ-ಲೀನಕ್ಸಾಯಣ(http://linuxaayana.net).ಬಹುಮಾನ ಗೆದ್ದವರು ಶ್ರೀನಿವಾಸ ಬಂಗೋಡಿ,ಬೆಂಗಳೂರು.ಅಭಿನಂದನೆಗಳು.
 
 


Udayavani
ಅಶೋಕ್ ಕುಮಾರ್ ಎ.

Comments