ಮತ್ತೊಂದಿಷ್ಟು....

ಮತ್ತೊಂದಿಷ್ಟು....

 

 ೧. ಒಂದು ಹಿಡಿ 
ಪ್ರೀತಿ ಮತ್ತು ಅನ್ನಕ್ಕಾಗಿ 
ಈ ಬದುಕು- ನವರಸ. 
ಕೊನೆಗೆ ಕಾಣದ 
ಊರಿನ ಕನಸು.
ಸುಮ್ಮನೆ ಮುಗಿದು 
ಹೋಗುವ ಸಾಲು, ದಾರಿ, ಬಂಧ. 
 
೨. ಮಾತಿನ ಶವ 
ಬಿದ್ದ ಮನದಂಗಳದಲಿ 
ನೆನಪುಗಳೇ 
ಸಂಗಾತಿಗಳು.
 
೩. ಉಸಿರ ಲಾಲಿಯ 
ಹಾಡಲಾಗದ 
ಮೂಕಿ ನಾನು. 
ಬಾ ಮತ್ತೊಮ್ಮೆ 
ಎದೆಗೂಡಿಗೆ 
ನನ್ನೆದೆಯ ಪ್ರೀತಿಯ 
ಮಂದ್ರ ಸ್ವರ 
ಕೇಳಿಸುವೆ. 
 
೪. ಮುಖವಾಡಗಳ 
ಸಂತೆಯಲಿ 
ಆಂತರ್ಯದ ಕನ್ನಡಿಯ 
ಮುಂದೆ ನಿಂತ 
ಜೋಗಿ ನಾನು. 
 
೫. ಸುಮ್ಮನೇ ಬದುಕುವ 
ಹಾಗೇ ಪ್ರೀತಿಸುವ 
ಕಾರ್ಯ- ಕಾರಣದ 
ಹಂಗಿಲ್ಲದಿರುವ ಜಾಗದಲ್ಲಿ 
ಬಿದ್ದ ನವಿಲು ಗರಿಯಲಿರುವ 
ನಿನ್ನ ಜೇನು ಕಂಗಳ 
ಕನಸಾಗಿದೆ ಇಂದು. 
 
೬. ದಿನವೂ ಹುಟ್ಟು 
ಸಾವಿನ ಶಾಪಗ್ರಸ್ಥ 
ಸೂರ್ಯ. 
ಬೆಳೆಯುವ ಕುಗ್ಗುವ 
ಚಂದ್ರ. 
ಧುಮ್ಮಿಕ್ಕುವ 
ಮೌನ ತಾಳುವ 
ಸಮುದ್ರ. 
ಅಚ್ಚರಿಗಳ 
ಸಂತೆಯಲಿ ತಿರುಗುತ್ತಲೇ 
ಇರುವ ಭೂಮಿ 
ಮತ್ತು..... ಕವಿ. 
Rating
No votes yet

Comments