ಚಲೋ ಮಲ್ಲೇಶ್ವರ - ೧೧

ಚಲೋ ಮಲ್ಲೇಶ್ವರ - ೧೧

ಅತ್ತ, ಪಾರ್ಥವ್ರು ಸಿ.ಇ.ಟಿ ಸೆಲ್ ಹತ್ರ ಹೋದಾಗ ಅವರ ಮನೆಯವರು ಮಗಳ ಸಮೇತ ಗೇಟಿನ ಬಳಿ ನಿಂತಿದ್ದರು. ಅವರ ಲುಕ್ ನೋಡಿ ಪಾರ್ಥವ್ರು ಬಾರಿಮುತ್ತೇ ಪರ್ವಾಗಿಲ್ಲ ಅಂದ್ಕೊಂಡ್ರು. ಏನೂ ಮಾತಾಡದೇ ನಡೀರಿ ನಡೀರಿ ಒಳಗೆ ಹೋಗೋಣ ಇಲ್ಯಾಕೆ ಗೇಟ್ ಹತ್ರ ನಿಂತಿದೀರಿ ಅಂದ್ಕೊಂಡು ಮಗಳ ಕೈ ಹಿಡ್ಕೊಂಡು ಮನೆಯವರ ಮುಖ ನೋಡದೆ ಒಳಗೆ ಹೆಜ್ಜೆ ಹಾಕಿದ್ರು. ಇತ್ತ ರಾಮಮೋಹನ್ 'ನಾನು ಆರ್ ಟಿ ನಗರದ ಹತ್ರ ಹೋಗ್ಬೇಕು ಆಮೇಲೆ ಸಿಗ್ತೀನಿ' ಅಂದಾಗ ಗೋಪಾಲವ್ರು 'ನನಗೂ ಆ ಕಡೆ ಸ್ವಲ್ಪ ಕೆಲಸ ಇದೆ ಬರ್ತೀನಿ ನಾನೂ' ಅಂದು ಹೊರಟ್ರು. ರಾಮಮೋಹನವ್ರು ಕಾರು ಸ್ಟಾರ್ಟ್ ಮಾಡೋಕೆ ಶುರು ಮಾಡಿದ್ರು, ಆ ಶಬ್ಧಕ್ಕೆ ಅಲ್ಲಿದ್ದ ೫-೬ ಬೀದಿನಾಯಿಗಳು ನಮ್ಮನ್ನ, ಕಾರನ್ನ ನೋಡಿ ಬೊಗಳೋಕೆ ಶುರು ಮಾಡಿದ್ವು ಗಣೇಶಣ್ಣ ಯಾಕೋ ಎಡವಟ್ಟು ಆಗ್ತಿದೆಯಲ್ಲ ಅಂದು 'ಎಲ್ರೂ ಓಡೋಣ ಬನ್ನಿ' ಅಂದ್ರು. ಜಯಂತ್ ಅಲ್ಲಿವರೆಗೆ ಪ್ರದಕ್ಷಿಣೆ ಹಾಕಿದ ಮಲ್ಲೇಶ್ವರಂ ದೇವ್ರನ್ನೆಲ್ಲಾ ನೆನೆಸ್ಕೊಂಡು ಕಣ್ಮುಚ್ಕೊಂಡಿದ್ರು. ನಾನು 'ಗಣೇಶಣ್ಣ, ಹಂಗೇನಾದ್ರೂ ಓಡಿದ್ರೆ, ಡೈರಕ್ಟ್ ಹರೀಶ್ಚಂದ್ರ ಘಾಟ್ಗೆ ಕಳಿಸ್ತಾವೆ ಆ ನಾಯಿಗಳು, ನೀವೇನು ನಿಮ್ಮನ್ನ ಮೈಕೆಲ್ ಜಾಕ್ಸನ್ ಅಂದ್ಕೊಂಡ್ರಾ' ಅಂದೆ. ಸತೀಶ್ 'ಅದು ಮೈಕೆಲ್ ಜಾನ್ಸನ್' ಅಂದ್ರು. ನಾಯಿಗಳು ಯಾಕೋ ಬೊಗಳ್ತಾ ಹತ್ರಾ ಬರ್ತಿದ್ವು. ಮಂಜಣ್ಣ ಇದ್ದವ್ರು 'ಯಾವನೋ ಒಬ್ಬ ಬರ್ರಿ ಮೊದ್ಲು ಹೆಂಗೆ ತಪ್ಪಿಸಿಕೊಳ್ಳೋದು ಅಂತ ಆಗಿದೆ, ಒಂದ್ಕೆಲ್ಸ ಮಾಡಣ, ಎಲ್ರೂ ಕಾರಿಗೆ ಹತ್ತಿ'. 'ಏನು ಮಂಜಣ್ಣ ಈ ಲೆವೆಲ್ಗೆ ಕಿಡ್ನಿ ಇಟ್ಟಿದೀರಾ' ಅಂದೆ. 'ಕಿಂಡಲ್ ಸಾಕು ಮೊದ್ಲು ಕಿಡ್ನಿ ಸೇಫ್ ಮಾಡ್ಕೋ' ಅಂದು ಮಂಜಣ್ಣ ಕಾರಿಗೆ ನುಗ್ಗಿದ್ರು. ಎಲ್ರೂ ನುಗ್ಗಿದ್ವಿ ಒಬ್ರನ್ನ ಬಿಟ್ಟು! ಜಯಂತ್ ಇನ್ನೂ ಹೊರ್ಗಿದ್ರು. ಗಣೇಶಣ್ಣ 'ಜಯಂತವ್ರೆ, ಕಾರೊಳಗೆ ಬಂದ್ರೆ ಬೆಂಗಳೂರಲ್ಲಿರೋ ಎಲ್ಲ ದೇವಸ್ಥಾನ ೧೦೮ ಸುತ್ತು ಹೊಡೀಬಹುದು, ಇಲ್ಲಾಂದ್ರೆ ಮಲ್ಲೇಶ್ವರಂಗೆ ತೃಪ್ತಿಪಡ್ಬೇಕು, ಆಮೇಲೆ ಮೇಲೆ ಹೋಗಿ ರೌಂಡ್ ಹೊಡೀಬಹುದು ಆದ್ರೆ ಇಲ್ಲಾಗಲ್ಲ'. ಕೇಳಿದ ಜಯಂತ್ ಎಲ್ಲಾ ದೇವ್ರನ್ನ ಮರ್ತು ಕಾರೊಳಗೆ ನುಗ್ಗಿದ್ರು. 'ಅಯ್ಯೋ ಅಯ್ಯೋ ಇದೇನು ಹಿಂಗೆ ನುಗ್ತಿದೀರಾ, ನನ್ನ ಕಾರನ್ನ ಏನು ಲಾರಿ ಅಂದ್ಕೊಂಡಿದೀರಾ, ಹಿಂಗೆ ಆದ್ರೆ ಗುಜ್ರಿಗೆ ಹಾಕ್ಬೇಕಾಗತ್ತೆ' ರಾಮಮೋಹನ್ ಬಡ್ಕೋತಿದ್ರು. ನಾನು 'ಈ ಕೆಲಸ ಮೊದ್ಲೇ ಮಾಡಿದ್ರೆ ನಮ್ಗಿವತ್ತು ಈ ಸ್ತಿತಿ ಬರ್ತಿರ್ಲಿಲ್ಲ'. ಎಲ್ರೂ ಹೌದ್ಹೌದು ಅಂದ್ರು ಒಬ್ರನ್ನ ಬಿಟ್ಟು! ರಾಮಮೋಹನ್ ನನ್ನನ್ನ ಗುರಾಯ್ಸ್ತಿದ್ರು. ಸತೀಶವ್ರು 'ರಾಮಮೋಹನವ್ರೆ ಆ ಲುಕ್ ಬಿಟ್ಟು ಮೊದ್ಲು ಗಾಡಿ ಸ್ಟಾರ್ಟ್ ಮಾಡೋದು ನಿಲ್ಲಿಸ್ರಿ ಇಲ್ಲಾಂದ್ರೆ ಆ ನಾಯಿಗಳು ನಿಮ್ಮ ಕಾರ್ನ ಮತ್ತೆ ನಮ್ಮನ್ನ ಗುಜ್ರಿಗೆ ತಲ್ಪ್ಸ್ತಾವೆ' ಅಂದಾಗ ಅವ್ರಿಗೆ ಜ್ಞಾನೋದಯವಾಗಿ ಕೀ ವಾಪಸ್ ತೆಗೆದ್ರು. ಹತ್ತಿರ ಬಂದು ಅಷ್ಟೋತನಕ ಬೊಗಳುತ್ತಿದ್ದ ನಾಯಿಗಳು ನಿಧಾನಕ್ಕೆ ಬೊಗಳುತ್ತ ಆಮೇಲೆ ಸುಮ್ಮನಾಗಿ ವಾಪಸ್ ಹೋದವು. 'ಹಲ್ಲಿ ಹಲ್ಲಿ' ಅಂತ ಸತೀಶ್ ಒಮ್ಮೆಲೆ ಕಿರುಚಿದ್ರು, ಎಲ್ರೂ ಗಾಬರಿಯಾಗಿ ಇದೇನಪ್ಪ ಹೊರಗಿನ ಗಲಾಟೆಯಿಂದ ತಪ್ಪಿಸ್ಕೊಂಡ್ರೆ ಒಳಗೇನಪ್ಪ ಎಂದು ಅವರನ್ನೇ ನೋಡಿದ್ವಿ. ಗೋಪಾಲವ್ರು 'ಈ ವಯ್ಯಂಗೆ ಕನಸಲ್ಲೂ ಹಲ್ಲಿ ಬರತ್ತೆ ಇನ್ನ ಎದ್ರುಗಡೆ ಕಂಡ್ರೆ ಹೆಂಗಾಗ್ಬೇಡ, ರೀ ಸತೀಶ್ ಅಲ್ಲಿ ನೇತ್ಹಾಕಿರೋದು ಪ್ಲಾಸ್ಟಿಕ್ ಕಣ್ರೀ, ಸುಮ್ಸುಮ್ನೆ ಎಲ್ರಿಗೂ ಟೆನ್ಶನ್ ಕೊಡ್ತೀರಲ್ಲ' ಅಂದಾಗ ಸತೀಶ್ಗೆ ಸಮಾಧಾನಯಾಯ್ತು. ಸ್ವಲ್ಪ ಹೊತ್ತಾದ್ಮೇಲೆ ಒಬ್ಬೊಬ್ಬರಾಗಿ ಕಾರಿಂದ ಹೊರಗೆ ಬಂದೆವು. ರಾಮಮೋಹನ್ ಮತ್ತೆ ಗೋಪಾಲವ್ರು ಸ್ವಲ್ಪ ಹೊತ್ತು ಬಿಟ್ಟು ಹೋಗೋಣ ಅಂತ ಕಾರಲ್ಲೇ ಕೂತಿದ್ರು. ನಾವೆಲ್ಲರೂ ನಾಯಿಗಳು ಹೋದ ದಾರಿ ಬಿಟ್ಟು ಬೇರೆ ದಾರಿಯಲ್ಲಿ ಹೊರಟೆವು. ಗಣೇಶಣ್ಣ 'ಏನ್ರೀ ಜಯಂತ್, ಮುಂದಿನ ೧೦೮ ಎಲ್ಲಿ?' ಅಂದಾಗ ಜಯಂತ್ 'ಆ ೧೦೮ ಬಿಡಿ ಗಣೇಶಣ್ಣ ಹೆಚ್ಚು ಕಡಿಮೆ ಆಗಿದ್ರೆ ೧೦೮ಕ್ಕೆ ಕಾಲ್ ಮಾಡ್ಬೇಕಾಗಿತ್ತು!' ಅಂದಾಗ ಎಲ್ರೂ ನಗಾಡ್ತಾ ಹೆಜ್ಜೆ ಹಾಕಿದ್ವಿ. ಹಾಗೆ ಮುಂದೆ ಹೋಗ್ತಿದ್ದಾಗ ಎದುರುಗಡೆಯಿಂದ ಹೆಗ್ಡೆಯವರು ಬರ್ತಿದ್ರು. ಸತೀಶ್ ಇದ್ದವ್ರು 'ಯಾವ್ದೋ ಸೈಲೆಂಟ್ ಜಾಗ ಹುಡುಕ್ತಿರ್ಬೇಕು ಅನ್ಸತ್ತೆ, ಒಳಗಿರುವ ಕವನನ ಹೊರಗೆ ಬರ್ಸೋಕೆ' ಅಂದು ನಡೀರಿ ಅವರನ್ನೇ ಮಾತಾಡ್ಸಣ ಅಂದು ಬರುತ್ತಿದ್ದ ಅವರನ್ನ ಸಮೀಪಿಸಿದೆವು.
Rating
No votes yet

Comments