"ಗಣ"ಪ್ಪನ "ಗಳಾ"ಟೆ.

"ಗಣ"ಪ್ಪನ "ಗಳಾ"ಟೆ.

ಹಿನ್ನಲೆ:

  ಕೆಲ ದಿನಗಳ ಹಿಂದೆ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದೆ. "ಗಣೇಶ" ಅನ್ನುವಲ್ಲಿ "ಗಣ" ಅನ್ನೋ ಪದವು ಕನ್ನಡದ ಬಹುವಚನ ಪ್ರತ್ಯಯವಾದ "ಗಳು" / "ಗಳ" ಅನ್ನೋ ಪದದಿಂದಲೇ  ಆಗಿದೆ. ಕನ್ನಡದಲ್ಲಿನ "ಗಳ" / ಗಣ ಪದವೇ ಸಂಸ್ಕೃತಕ್ಕೆ ಹೋಗಿ ನನ್ತರ "ಗಣೇಶ" ಅನ್ನೋ ಅನ್ನೋ ಪದ ಹುಟ್ಟಲು ಕಾರಣವಾಗಿದೆ ಅನ್ನುವಲ್ಲಿಂದ ಚರ್ಚೆ ಆರಂಭವಾಗಿತ್ತು.
 

ನಂತರ ಕೆಲವರು "ಗಳ" ಅನ್ನುವುದು ಒಂದು ಪ್ರತ್ಯಯ ಅಷ್ಟೆ ಮತ್ತು ಪ್ರತ್ಯಯಗಳಿಗೆ ಸ್ವತ ಅರ್ಥ ಇರೋಲ್ಲ.. ಹಾಗಾಗಿ "ಗಳ" ಅನ್ನೋ ಪದಕ್ಕೆ ಕನ್ನಡದಲ್ಲಿ ಅರ್ಥ ಇರಲು ಸಾಧ್ಯವೇ ಇಲ್ಲ, ಹಾಗಾಗಿ ಗಳ/ಗಣ ಅನ್ನುವುದು ಸಂಸ್ಕೃತವೇ ಅನ್ನುವ ವಾದ ಮುಂದಿಟ್ಟರು.
 

ನಾನೂ ಈ ಚರ್ಚೆಯಲ್ಲಿ ಭಾಗವಹಿಸಿದ ಕಾರಣ , ಕೆಲ ಪ್ರಶ್ನೆಗಳಿಗೆ ಉತ್ತರಿಸುವ ಜವಬ್ಧಾರಿ ನನ್ನ ಹೆಗಲ ಮೇಲೇರಿತ್ತು. ಅಲ್ಲದೆ ಒಂದು ಬ್ಲಾಗ್ ಬರೀದೆ ತುಂಬಾ  ದಿನಗಳಾದ ಕಾರಣ ನಾನೂ ಬರೀತೀನಿ ಅಂತ ಒಪ್ಪಿಕೊಂಡಿದ್ದೆ. ಅದಕ್ಕಾಗಿ ಈ ಬರಹ.
 ............................................................
 

ಅಲ್ಲಿನ ಕೆಲವು ಮುಖ್ಯ ಪ್ರಶ್ನೆಗಳು.

೧. ಗಳ ಅನ್ನುವುದು ಒಂದು "ಅರೆಪದ". 
೨. ಕನ್ನಡಲ್ಲಿಯೂ ಸಂಸ್ಕೃತದಂತೆ, ಪ್ರತ್ಯಯಗಳಿಗೆ ಸ್ವತಹ ಅರ್ಥ ಇರುವುದಿಲ್ಲ. ಬೇರೆ ಪದಗಳ  ಜೊತೆ ಸೇರಿ ಅವು ಅರ್ಥ ಕೊಡುತ್ತವೆ.

..................
 
 
ಮೊದಲಿಗೆ ಮೂಲ ದ್ರಾವಿಡದ ಎಲ್ಲ ಪದಗಳೂ ಒಂದಕ್ಷರ ಅತ್ವ ಎರಡಕ್ಷರದವು ಅನ್ನೋದನ್ನು ಗಮನಿಸಬೇಕು.  ಎಲ್ಲೋ ಕೆಲವೊಮ್ಮೆ ಮೂರಕ್ಷರದವು ಸಿಗುತ್ತವೆ. ಇದಕ್ಕಿಂತ ಹೆಚ್ಚಿನ ಅಕ್ಷರದ ಪದಗಳು ತುಂಬಾ ಕಡಿಮೆ. ಹುಡುಕಬೇಕು!!!
 
ಒನ್ದಕ್ಷರದ "ಪೂರ್ಣ ಅರ್ಥ" ಇರುವ ಪದಗಳೆ ಕನ್ನಡದಲ್ಲಿ ಸಿಕ್ಕಾಬಟ್ಟೆ ಇರುವಾಗ ಎರಡಕ್ಷರದ "ಗಳ" ಮತ್ತು "ಗಣ" ಪದಗಳನ್ನು  "ಅರೆ ಪದ" ಅಂತ ಒಪ್ಪಲು ಸಾಧ್ಯವೇ ಇಲ್ಲ.
 

 ಎರಡನೆಯದು ಕನ್ನಡದಲ್ಲಿಯೂ ವಿಭಕ್ತಿ ಪ್ರತ್ಯಯಗಳಿಗೆ ಅರ್ಥ ಇಲ್ಲ ಅನ್ನುವುದು. ಸಂಸ್ಕೃತದಲ್ಲಿ ಅರ್ಥ ಇಲ್ಲ ಅನ್ನಿ ಒಪ್ಪೋಣ. ಆದರೆ ಕನ್ನಡದಲ್ಲಿ ಅರ್ಥ ಇಲ್ಲ ಅಂದ್ರೆ ಹೇಗೆ ? ಒಪ್ಪಲು ಸಾಧ್ಯವೇ ಇಲ್ಲ.
 
ಕಾರಣ ಕನ್ನಡದಲ್ಲಿ "ಪ್ರತ್ಯೇಕವಾಗಿ"  ವಿಭಕ್ತಿ ಪ್ರತ್ಯಯಗಳ ಕೆಲಸಮಾಡಲೆಂದೇ" ಹುಟ್ಟಿರುವ "ವಿಭಕ್ತಿಪ್ರತ್ಯಯಗಳಿಲ್ಲ". ಇದರ ಅರ್ಥ ಪ್ರತ್ಯಯ ಗಳ ಅವಶ್ಯಕತೆಯೇ ಕನ್ನಡಕ್ಕಿಲ್ಲ ಅನ್ತ ಅಲ್ಲ. ಬದಲಿಗೆ ಕನ್ನಡಲ್ಲಿನ ಇತರ "ಪದಗಳು ಮತ್ತು ಅವುಗಳ ಸವೆದ ರೂಪಗಳು" ವಿಭಕ್ತಿ ಪ್ರತ್ಯಗಳ ಕೆಲಸ ಮಾಡುತ್ತವೆ. ( ದಯವಿಟ್ಟು ಈ ಸಾಲನ್ನು ಮತ್ತೆ ಮತ್ತೆ ಓದಿ ..ನಂತರ ನಿಮ್ಮ ಪ್ರತಿಕ್ರಿಯೆ ಹಾಕಿ)
 
ಈ ವಿಶಯವನ್ನು ಸ್ವಲ್ಪ ವಿವರವಾಗಿ ನೋಡೋಣ.
.............................................................
 
ಸಂಸ್ಕೃತದಲ್ಲಿ ಏಳು ವಿಭಕ್ತಿ ಪ್ರತ್ಯಯಗಳು ಇವೆ ಅನ್ನುತ್ತಾರೆ. ಅದರಂತೆ, "ಕನ್ನಡ ಸಂಸ್ಕೃತಕ್ಕುಟ್ಟಿದೆ" ಅನ್ತಾನೆ ತಿಳಿದು,  ಕೇಶಿರಾಜನ ಕಾಲದಿಂದಲೂ, ಕನ್ನಡದಲ್ಲೂ ಆ ಎಲ್ಲ ಏಳು   ವಿಭಕ್ತಿ ಪ್ರತ್ಯಯಗಳನ್ನು ಮಾಡಿಕೊಂಡು..ನಮ್ ಸ್ಕೂಲ್ಗಳಲ್ಲೂ ಓದಿಕೊಂಡು ಬಂದಿದ್ದೇವೆ.

ಈಗ ಪ್ರಶ್ನೆ ಏನು ಅಂದ್ರೆ ನಮ್ಮಲ್ಲಿ ನಿಜಕ್ಕೂ "ಏಳೇ" ಪದಗಳು "ವಿಭಕ್ತಿ ಪ್ರತ್ಯಯ" ದ ತರ ಕೆಲಸ ಮಾಡ್ತವಾ ಅತ್ವ ಅದಕ್ಕೂ ಹೆಚ್ಚಿವೆಯಾ? ಮತ್ತು ಇವು ನಿಜಕ್ಕೂ "ಡೆಡಿಕೇಟೆಡ್" ಪದಗಳಾ? ಅತ್ವ ಇತರ ಸಾಮಾನ್ಯ ಪದಗಳೇ "ಆ" ಕೆಲ್ಸ ಮಾಡ್ತಾವ? ಅನ್ನೋದು.

ವಿಭಕ್ತಿ ಪ್ರತ್ಯಯಗಳ ವಿಶಯಕ್ಕೆ ಬಂದಾಗ, ಕೇಶಿರಾಜ "ಹಳಗನ್ನಡದಲ್ಲಿ", "ಮಮಿಂಕೆಅದದೊಳ್" ಅನ್ನೋ ಸೂತ್ರ ಕೊಡುತ್ತಾನೆ. ಅವು  ಮ್, ಅಮ್, ಇಮ್, ಗೆ (ಕೆ), ಅತಣಿಂ (ಅತ್) ,ಅ, ಒಳ್ ಕ್ರಮವಾಗಿ ಒಂದರಿಂದ ಏಳರ ವರೆಗಿನ ವಿಭಕ್ತಿ ಪ್ರತ್ಯಯಗಳು. ಇವೇ ಈಗಿನ ಕನ್ನಡದಲ್ಲಿ ಉ, ಅನ್ನು, ಇಂದ, ಗೆ (ಕೆ), ದೆಸೆಯಿಂದ, ಅ, ಅಲ್ಲಿ, ಆಗಿವೆ.

ಈಗ ಪ್ರತಿಯೊಂದು ವಿಭಕ್ತಿ ಪ್ರತ್ಯಯಗಳನ್ನು ವಿವರವಾಗಿ ನೋಡೋಣ.

...................
 
೧. ಒಂದನೇ ವಿಭಕ್ತಿ ಪ್ರತ್ಯಯ.

ಹಳೆಗನ್ನಡಲ್ಲಿ "ಮ್"
ಹೊಸಗನ್ನಡದಲ್ಲಿ "ಉ"

ಒನ್ದು ಉದಾಹರಣೆ ತೆಗೆದುಕೊಳ್ಳಿ.

೧. ರಾಮನು ಕಾಡಿಗೆ ಹೋದನು.
೨. ರಾಮ ಕಾಡಿಗೆ ಹೋದ.

ಎರಡೂ ವಾಕ್ಯಗಳಿಗೆ ಯಾವ ಅರ್ಥ ವ್ಯತ್ಯಾಸವೂ ಇಲ್ಲ. ಇಲ್ಲಿ ಯಾವ ವಾಕ್ಯ ಆಡು ಮಾತಿನಲ್ಲಿ ಸಹಜವಾಗಿ ಕಾಣುತ್ತೆ?. ನಿಸ್ಸನ್ದೇಹವಾಗಿ ಎರಡನೆಯದೇ!.  ಆಗನ್ತ ಮೊದಲನೆಯದು ತಪ್ಪು ಅನ್ತಲ್ಲ. ಎರಡನೆಯದು ಸಹಜ ಅನ್ತ. ಹಾಗಾಗಿ ಕನ್ನಡದಲ್ಲಿ ಪ್ರಥಮ ವಿಭಕ್ತಿ ಪ್ರತ್ಯಯ  ಇಲ್ಲದೆ ಇದ್ದರೂ ಯಾವುದೇ ಅರ್ಥ ವ್ಯತ್ಯಾಸ ಇರೋಲ್ಲ.

ರಾಮ + ಉ = ರಾಮನು ..ಇದು ತಪ್ಪು
ರಾಮ ಅನ್ನೋದೇ ಸರಿ.

ಕನ್ನಡದಲ್ಲಿ ಪ್ರಕೃತಿಯೇ ( ಮೇಲಿನ ಸಂದರ್ಭದಲ್ಲಿ "ರಾಮ") ಒಂದನೇ ವಿಭಕ್ತಿ ಪ್ರತ್ಯಯ  ರೂಪದಲ್ಲಿ ಬಳಕೆಯಾಗುತ್ತದೆ. ಅಂದರೆ ಶಬ್ದದ ಮೂಲರೂಪವೇ ಮೊದಲ ವಿಭಕ್ತಿ ರೂಪದಲ್ಲಿದೆ. ಪ್ರತ್ಯೇಕ ಪ್ರಥಮ  ವಿಭಕ್ತಿ ಪ್ರತ್ಯಯ  ಇಲ್ಲ.
ಇನ್ನು ನಾವು "ರಾಮನು" ಅಂತನೇ ಬಳಸುತ್ತೇವೆ ಅಂದರೆ ಇಲ್ಲಿಯೂ "ರಾಮನ್" ಅನ್ನೋ ಮೂಲ ದ್ರಾವಿಡ ಪದವನ್ನೆ "ರಾಮನು" ಅನ್ತ ಉಕಾರಾಂತ್ಯಗೊಳಿಸಿ ಕನ್ನಡಿಕರಿಸಿಕೊಂಡಿದ್ದೇವೆ. ಹಾಗೆ  "ರಾಮನು" ಅನ್ನೋ ಪದವೂ "ಪ್ರಕೃತಿ"ಯೇ ಹೊರತು ಪ್ರತ್ಯಯದಿಂದ ಒಡಗೂಡಿದ ಕೂಟ ಪದವಲ್ಲ.
 
೨. ಎರಡನೆ ವಿಭಕ್ತಿ ಪ್ರತ್ಯಯ.

ಹಳೆಗನ್ನಡದಲ್ಲಿ : ಅಮ್,
ಹೊಸಗನ್ನಡದಲ್ಲಿ :  ಅನ್ನು.

 ಒಂದು ಉದಾಹರಣೆ.

ರಾಮ "ರಾವಣನನ್ನು" ಕೊಂದ.
ರಾಮ ರಾವಣ ಕೊಂದ.

ಮೇಲಿನ ಎರಡೂ ವಾಕ್ಯಗಳಲ್ಲಿ ಸ್ಪಷ್ಟವಾಗಿ ಅರ್ಥ ವ್ಯತ್ಯಾಸ ವಿದೆ. ಮೊದಲನೇದು ಸರಿ.  ಹಾಗಾಗಿ ಬೇಕಾಗಿರುವ ಅರ್ಥ ಕೊಡಲು ಇಲ್ಲಿ "ಅನ್ನು"ಬೇಕೆ ಬೇಕು.

ಸರಿ.... ಆದರೆ ಈ "ಅನ್ನು" ಅನ್ನೋ ಪದವನ್ನು ಒಮ್ಮೆ ಗಮನಿಸೋನ!!

ಬಹುಶ ಬೇಂದ್ರೆಯವರ "ನಾಕು ತಂತಿ" ಬಗ್ಗೆ ನೀವು ಕೇಳಿಯೇ ಇರುತ್ತೀರಿ. "ನಾನು, ನೀನು, ಆನು , ತಾನು" ಅನ್ನೋವೆ ಆ ತಂತಿಗಳು. ಇವೆಲ್ಲವೂ "ಸರ್ವನಾಮಗಳೆ"

ಎರಡನೆ ವಿಭಕ್ತಿ "ಅನ್ನು" ... "ಆನು" ಅನ್ನೋ ಸರ್ವ ನಾಮದ ಸವೆದ ರೂಪ.
ಆನ್> ಆನು > ಅನು > ಅನ್ನು ಹೀಗೆ ಎರಡನೆ ವಿಭಕ್ತಿ ಯಾಗಿದೆ.

ಈ ಪ್ರತ್ಯಯ ಪೂರ್ವದ ಹಳಗನ್ನಡದಲ್ಲಿ "ಆನ್" ಆಗಿತ್ತು ಅನ್ನೋದನ್ನು ಗಮನಿಸಬೇಕು.

ಇದರ ಅರ್ಥ ಎರಡನೆ ವಿಭಕ್ತಿ ಪ್ರತ್ಯಯ ಸ್ವತಹ ಒನ್ದು ಪ್ರತ್ಯಯ ಆಗಿರದೆ ಒನ್ದು ಸರ್ವನಾಮ ಪದದ ಸವೆದ ರೂಪ.
extra ..
ಕೆಲವೊಮ್ಮೆ ಎರಡನೆ ವಿಭಕ್ತಿ ಅವಶ್ಯಕತೆಯೂ ಕನ್ನಡದಲ್ಲಿ ಬರಲ್ಲ.

ಉದಾ . ತಿಂಡಿ ಯನ್ನು ತಿಂದು ನೀರನ್ನು ಕುಡಿ ಅನ್ನೋದಕ್ಕಿನ್ತ "ತಿಂಡಿ ತಿಂದು ನೀರು ಕುಡಿ" ಅನ್ನೋ ಸಾಲೆ ಹೆಚ್ಚು ಸಹಜವಾಗಿ ಕಾಣುತ್ತೆ.
 

೩. ಮೂರನೆ ವಿಭಕ್ತಿ ಪ್ರತ್ಯಯ .

ಹಳೆಗನ್ನಡ : ಇಮ್, ಇಂದಮ್, ಇಂದೆ,
ಹೊಸಗನ್ನಡ : ಇಂದ.
ಇಮ್, ಇಂದಮ್, ಇಂದೆ, ಇಂದ  ಇವೆಲ್ಲ ಕಾಲ ಸೂಚಕ ಕ್ರಿಯಾ ವಿಶೇಷಣಗಳು. ಉದಾ.. "ಇನ್ದೆ ಬರುತ್ತೇನೆ" ಅನ್ನೋ ವಾಕ್ಯ ಗಮನಿಸಿ.
ಇಂದ ದಿಕ್ಸೂಚಿ ಪದವೂ ಹೌದು.
ಇಮ್, ಇಂದಮ್, ಇಂದೆ, ಇವು ಅನುಸರ್ಗಗಳು. ಹಾಗಾಗಿ ಇವು ಪ್ರತ್ಯೇಕ ಪದಗಳೆ ಹೊರತು ವಿ ಪ್ರ ಗಳಲ್ಲ.

ಹಾಗಾಗಿ  "ಶುದ್ದ" ಮೂರನೇ  ವಿ ಪ್ರ ವೂ ಕನ್ನಡದಲ್ಲಿಲ್ಲ.
 

೪.ನಾಲ್ಕನೇ ವಿಭಕ್ತಿ ಪ್ರತ್ಯಯ.

ಹಳೆಗನ್ನಡ : ಕೆ ,ರ್ಕೆ
ಹೊಸಗನ್ನಡ: ಗೆ, ಇಗೆ, ಕೆ, ಅಕ್ಕೆ ಇತ್ಯಾದಿ.
ಇವು ಗುಂ, ಕುಂ ಅನ್ನೋ ಆಖ್ಯಾತ ಪ್ರತ್ಯಯಗಳ ಬೇರೆ ರೂಪಗಳಾದ ಗೆ, ಕೆ ಕಾಲಾನಂತರದಲ್ಲಿ ಚತುರ್ಥಿಯ ಅರ್ಥ ಪಡೆದುಕೊಂಡವು ಅನ್ನೋದು ಕಾಲ್ಡ್ ವೆಲ್ ಅಭಿಪ್ರಾಯ. ಹಾಗಾಗಿ  ನಾಲಕ್ನೆ ವಿ ಪ್ರ ವೂ ಪದವೊಂದರ ಸವೆದ ರೂಪ.
 
೫. ಐದನೆ ವಿಭಕ್ತಿ ಪ್ರತ್ಯಯ. 
ಹಳೆಗನ್ನಡ : ಅತ್ತಣಿಂ
ಹೊಸಗನ್ನಡ : ದೆಸೆಯಿಂದ

ದೆಸೆಯಿಂದ ಮತ್ತು ಅತ್ತಣಿಂ  ಅನ್ನುವಲ್ಲಿ ದೆಸೆ ಮತ್ತು  ಅತ್ತ ಅನ್ನುವುದು ದಿಕ್ಕು ಅನ್ನುವ ಅರ್ಥ ಸೂಚಿಸುವ ಪದ. ಮತ್ತು ಇದು ಸ್ಪಶ್ಟವಾಗಿ ಪ್ರತೇಕ ಪದವೇ ಹೊರತು ವಿಭಕ್ತಿ ಪ್ರತ್ಯಯ ಅಲ್ಲ.
ಅಲ್ಲದೆ ದೆಸೆಯಿಂದ ಅನ್ನೋ ಪದವನ್ನು ಪ್ರತ್ಯಯವಾಗಿ ಬಳಸೋರನ್ನು ನಾನನ್ತೂ ಕಾಣೆ. ಸ್ಪಶ್ಟವಾಗಿ ಇವು ಪದಗಳೇ ಹೊರತು  ಪ್ರತ್ಯಯಗಳಲ್ಲ.
 
೬. ಆರನೆ ವಿಭಕ್ತಿ ಪ್ರತ್ಯಯ
ಹಳೆಗನ್ನಡ : ಅ, ಆ
ಹೊಸಗನ್ನಡ : ಅ

ಅದು , ಇದು, ಉದು ಇವು ವಸ್ತು ನಿರ್ದೇಶಕ ಪದ ಗಳು.
ಈ ಉದಾಹರಣೆ ಗಮನಿಸಿ.
ಅದು ಮರ = ಆ ಮರ
ಇದು ಕಲ್ಲು =  ಈ  ಕಲ್ಲು
ಅದೇ ರೀತಿ "ಉದು" ಅನ್ನೋ ಪದವೇ ಸವೆದು ಉ ಅನ್ನೋ ಆರನೆ ವಿಭಕ್ತಿ ಪ್ರತ್ಯಯ ಆಗಿದೆ.

ಹಾಗಾಗಿ ಉ ಅನ್ನೋ ಪದಕ್ಕೆ ಅರ್ಥ ಇದೆ ಮತ್ತು ಅದು ಪದದ ಸವೆದ ರೂಪವೇ ಆಗಿದೆ.

 
೭. ಏಳನೆ ವಿಭಕ್ತಿ ಪ್ರತ್ಯಯ
ಹಳೆಗನ್ನಡ : ಒಳ್
ಹೊಸಗನ್ನಡ : ಅಲ್ಲಿ

ಒಳಗೆ, ಹೊರಗೆ ಅನ್ನೋ ಪದಗಳನ್ನು ಗಮನಿಸಿ. ಒಳ್, ಅಲ್ಲಿ ಅನ್ನೋ ಪದಗಳು ಸ್ಪಷ್ಟವಾಗಿ ಸ್ಥಾನ ನಿರ್ದೇಶಕ ಪದಗಳು.

ಹಾಗಾಗಿ ಏಳನೆಯದೂ ಕನ್ನಡದಲ್ಲಿ "ಶುದ್ದ ಪ್ರತ್ಯಯ" ಅಲ್ಲ. ಬದಲಿಗೆ ಬೇರೆಯದೇ ಆದ ಸ್ವತಂತ್ರ ಪದ.

 
ಸರಾಂಶ!
ಮೇಲಿನ ಬರಹ ಓದಿದಾದಗ ನಮಗೆ ಕನ್ನಡದಲ್ಲಿ ಸ್ಪಶ್ತವಾಗಿ "exclusive " ಆದಂತಹ್ಹ "dedicated " ಆದಂತಹ "ಶುದ್ದ ವಿಭಕ್ತಿ ಪ್ರತ್ಯಯಗಳು" ಇಲ್ಲ್ಲ, ಬದಲಿಗೆ ಸ್ವತಂತ್ರ ಪದಗಳು ( ಮತ್ತು ಅವುಗಳ ಸವೆದ ರೂಪಗಳು) ವಿಭಕ್ತಿ ಪ್ರತ್ಯಯಗಳ ಕೆಲ್ಸ ಮಾಡ್ತವೆ ಅನ್ನೋದನ್ನು ಸ್ಪಷ್ಟಪಡಿಸೊಕೊಳ್ಳಬಹುದು.

 

...............................................................

ಕೊನೆಯದಾಗಿ ಸ್ವಲ್ಪ exctra . ಕನ್ನಡದಲ್ಲಿ ಏಳಕ್ಕೂ ಹೆಚ್ಚು ವಿಭಕ್ತಿ ಪ್ರತ್ಯಯಗಳನ್ನು ಗುರ್ತಿಸಲಾಗಿದೆ.

(ಸಮ್ಬೋಧನಾ, ಸಹತ್ವ, ಗಂತವ್ಯ, ತರತಮ,ನಿರ್ದಿಶ್ಟ,ಇತ್ಯಾದಿ.   ಇವುಗಳೂ ಸ್ಪಶ್ಟವಾಗಿ ಪ್ರತ್ಯಯಗಳಲ್ಲ ಬದಲಿಗೆ ಪದಗಳೇ ಹೌದು ಅನ್ತ ಬರೆಯಬಹುದಾದರೂ ಇಲ್ಲಿ ಬರೆಯಲು ಸೋಮಾರಿತನದ ಕಾರಣ ಬಿಟ್ಟಿದ್ದೇನೆ.ಮುಂದೆ ಚರ್ಚೆ ಸರಿ ದಾರಿಯಲ್ಲಿ ನಡೆದರೆ ಅವುಗಳ ಬಗ್ಗೆಯೂ  ಬರಿತೀನಿ.).

Rating
No votes yet

Comments