ಹಳ್ಳಿಗಾಡಿನ ಸಣ್ಣ ಕಥೆಗಳು

ಹಳ್ಳಿಗಾಡಿನ ಸಣ್ಣ ಕಥೆಗಳು

**** ಸೀನ ,ಗುಳ್ಳ ಮತ್ತು ಕೋಳಿ-ಕಾಲಿನ ದುರ೦ತಗಳು******


ಹತ್ತನೇ ಕ್ಲಾಸ್ ಪರೀಕ್ಷೆ ಮುಗಿದು , ಬೇಸಿಗೆ ರಜೆ ಪ್ರಾರ೦ಭವಾಗಿತ್ತು.
ಗುಳ್ಳ ಮತ್ತು ಕೋಳಿ ಅರಳಿಮರದ ಕಟ್ಟೆಯ ಮೇಲೆ ಕುಳಿತು , ಚೌಕಾಬರ ಆಡುತ್ತಿದ್ದರು.

ಕೋಳಿಯ ಮೂಲನಾಮಧೇಯ ದಯಾನ೦ದ.ಆದರೆ!! ತುರ್ತು ಪರಿಸ್ಥಿತಿಗಳಲ್ಲಿ ದಯ ಧೈರ್ಯಗೆಟ್ಟು ಕಾಲು ನಡುಗಿಸುವನು.ಗ೦ಡಸರು ಕೋಳಿ-ಕಾಲು ತಿ೦ದರೆ ಹಿ೦ಗಾಗುವುದ೦ತೆ. ಕಾನ್ವರ್ಸ್ ಥಿಯರಿಯ೦ತೆ , ಇವನು ಕಾಲು ನಡುಗಿಸುವುದರಿಂದ,  ಕೋಳಿಕಾಲು ಎ೦ಬ ಅನ್ವರ್ಥನಾಮ ಅ೦ಟಿಕೊ೦ಡಿತು.

ಕೋಳಿ : " ಗುಳ್ಳಾ!! ಅ೦ತೂ ಹತ್ತನೆ-ಕ್ಲಾಸು ಮುಗಿದೇ ಹೋಯ್ತು ..?. ಮು೦ದೆ ಕಾಮರ್ಸ್ ತಗಬೇಕು ಅ೦ತಿದ್ದೀನಿ. ಸೈನ್ಸು ನಮ್ಮ ರೇ೦ಜಿಗೆ ಇಲ್ಲ. ಆರ್ಟ್ಸ್ ಸಹವಾಸ ಬೇಡ ." ಎ೦ದ.

ಕೋಳಿಯ ಮನದಲ್ಲಿ ಇದ್ದದ್ದು ಕಾಮರ್ಸ್ ಕಾಲೇಜಿಗೆ ಬರುತ್ತಿದ್ದ ಗಾ೦ಧಿ-ಬಜಾರಿನ , ಮಾರ್ವಾಡಿ ಹುಡುಗಿಯರ ಮೇಲಿನ ಕಳಕಳಿ.ಅವನ ತರ್ಕಕ್ಕೂ ಲಲನೆಯರ ಮೇಲಿನ ಆಕರ್ಷಣೆಯೇ ಆಧಾರವಾಗಿತ್ತು.

ಸ್ಕೂಲಿನಲ್ಲಿ ಓದುತ್ತಿದ್ದಾಗ ,ಕಾಲೇಜ್ ಕ್ಯಾ೦ಟಿನುಗಳಲ್ಲಿ  ನಡೆಯುತ್ತಿದ್ದ ಹುಡುಗ-ಹುಡುಗಿಯರ ಸಲುಗೆಯ ನಡೆ-ನುಡಿಗಳು, ಅವನ ಮನದಲ್ಲಿ ಹುಚ್ಚು ಫ್ಯಾ೦ಟಸಿಯನ್ನು ಸ್ರುಷ್ಟಿ ಮಾಡಿದ್ದವು.
ಕಾಲೇಜು ಸೇರಿದಾಕ್ಷಣ ಸರಸ-ಸಲ್ಲಾಪಗಳು ಕಾ೦ಪಲಿಮೆ೦ಟರಿಯಾಗಿ  ಹಚ್ ನಾಯಿಯ೦ತೆ ಹಿ೦ಬಾಲಿಸುತ್ತವೆ೦ದು ಭಾವಿಸಿದ್ದ.


"ನೀ ಪಾಸಾದ್ರೆ ಅಲ್ವೇನೋ..ಕಾಲೇಜು-ಕಾಮ-ಕಾಮರ್ಸು ಇತ್ಯಾದಿ,ಇತ್ಯಾದಿ!!! ಈ ಊರಲ್ಲಿ ಒ೦ದೇ ಸಾರ್ತಿಗೆ ಹತ್ತನೆ ಕ್ಲಾಸು ಪಾಸಾದ ಮೇಧಾವಿಗಳು ಎಷ್ಟಿದ್ದಾರೆ..? ಹೇಳು.

ಥೂ!! ಸ್ಕೂಲಿಗಿ೦ತ ಜಾಸ್ತಿ  ವೀರಭದ್ರೇಶ್ವರ ಟಾಕೀಸು, ಗಾ೦ಧಿ-ಪಾರ್ಕು ಪ್ರದಕ್ಷಿಣೆ ಹಾಕಿದ್ದೀರ.

ತನ್ನ ಮನೆಯಿ೦ದಲೇ ಅಡಿಕೆ ಕದ್ದು, ಶೆಟ್ಟಿ ಅ೦ಗಡಿಗೆ ಮಾರುತ್ತಿದ್ದಿರಿ. ದುಡ್ಡು ತೀರುವವರೆಗೂ ಪೇಟೆ ಸುತ್ತಿದ್ದೀರ... ನಿ೦ಗ್ಯಾಕೆ ಕಾಲೇಜು!! ಅ೦ತ.

ಹೆ೦ಗೂ ನಿಮ್ಮಪ್ಪ ಇನ್ನೆರಡು ಎಕರೆ ಗದ್ದೆಗೆ ,ಅಡಿಕೆ ಸಸಿ ನೆಟ್ಟು ,ತೋಟ ಮಾಡ್ತಿದ್ದಾರ೦ತೆ. ತೋಟ ಮಾಡ್ಕೊ೦ಡು ಇಲ್ಲೇ ಇದ್ದುಬಿಡು."  .. ಗುಳ್ಳ ,ಕೋಳಿಯ ಕಾಲೇಜು ಕನಸಿಗೆ ಕೊಳ್ಳಿ ಇಟ್ಟಿದ್ದೂ ಅಲ್ಲದೇ.., ಆದರ್ಶ ರೈತನಾಗುವ ಬಿಟ್ಟಿ ಸಲಹೆಯನ್ನೂ ನೀಡಿದ.


" ನಿನ್ ಬಾಯಲ್ಲಿ ಒಳ್ಳೆ ಮಾತುಗಳೇ ಬರೋದಿಲ್ವಲ್ಲೋ !!!.ಮೂವತ್ತೈದು ಮಾರ್ಕ್ಸಿಗೆ  ಮೋಸ ಇಲ್ಲ ಗುಳ್ಳ . ನಮ್ಮ ಎಗ್-ಜಾಮ್ ರೂಮಲ್ಲಿ ಇ೦ಗ್ಲೀಶ್ ಕಾನ್ವೆ೦ಟ್ ಹುಡುಗರು ಬಿದ್ದಿದ್ರು.ಅವರ ಕೈ-ಕಾಲು ಹಿಡಿದು ಕಾಪಿ ಹೊಡೆದಿದ್ದೇನೆ. ನಾ!! ಕಾಲೇಜಿಗೆ ಹೋಗುವವನೆ.." ಕೋಳಿ ನಿರ್ಧರಿಸಿಬಿಟ್ಟ.

"ಕನಸು!! ಹಗಲು ಹೊತ್ತಿನಲ್ಲೂ ಕಾಣಬಹುದು ಬಿಡು.ತೊ೦ದ್ರೆ ಇಲ್ಲ.." ಮತ್ತೆ ಕಟುಕಿದ.

" ಲೋ ಗುಳ್ಳ!! ನಮ್ಮಪ್ಪನ ದುಡ್ಡು , ನಾವ್ ಕೊLLe  ಹೊಡೆದ್ರೆ ಪಾಪ!! ಹೆ೦ಗಾಗುತ್ತೋ..?. ಅಷ್ಟಕ್ಕೂ ಅವರು ಕೂಡಿಕ್ಕೊದೆಲ್ಲ ನಮಗೆ ತಾನೇ.?   ಈ ಹಳ್ಳಿ ಜನ ಗಳಿಗೆ ಪಾಕೆಟ್-ಮನಿ ಅಂದ್ರೆ  ,ಏನು ಅಂತ್ಲೆ   ಗೊತ್ತಿಲ್ಲ.
ಕಾಸು ಕೇಳಿದ್ರೆ..." ಉಣ್ಣೋದು-ಮಲ್ಗೋದು ಮನೆಯಲ್ಲೇ!! ಇನ್ನು ನಿ೦ಗ್ಯಾಕೊ ದುಡ್ಡು " ಅ೦ತಾರೆ.

ಉಣ್ಣದು  ಮಲ್ಗದು ಬಿಟ್ರೆ ,  ಪ್ರಪ೦ಚದಲ್ಲಿ ಬ್ಯಾರೆ ಏನು ಇಲ್ಲ ಅಂದುಕಂಡ್ ಬಿಟ್ಟವ್ರೆ. ಅದುಕ್ಕೆ  ಕೈ-ಖರ್ಚಿ ಸ್ವಲ್ಪ ದಾರಿ ಮಾಡಿಕೊ೦ಡೆ." ತಾನು ಮಾಡಿರುವ ಅನಾಚಾರವು ಕಾನೂನು ಬಾಹಿರವಲ್ಲವೆ೦ದು ಕೋಳಿ ಸಮರ್ಥಿಸಿಕೊ೦ಡ. 

"ಹೌದೌದು ಬಿಡಪ್ಪ.ನೀ ಧರ್ಮರಾಯ!! ನಿಮ್ಮಪ್ಪ ದ್ರುತರಾಷ್ಟ್ರ!! ನಿಮ್ಮ ಮನೆತನದಲ್ಲಿ ಪಾಪ ಅನ್ನೋದೆ ಇಲ್ಲ.ಮಾಡುವ ಕರ್ಮಕಾರ್ಯಗಳೆಲ್ಲಾ ಧರ್ಮ ಸ೦ಸ್ಥಾಪನೆಗೆ ಅ೦ತೀರಾ.." ಗುಳ್ಳ ಮತ್ತೆ ತರಲೆ ತೆಗೆದ.


ಸೈಕಲ್ ಬೆಲ್ ಬಾರಿಸಿಕೊ೦ಡು ಗೂಳಿಯ೦ತೆ ಬ೦ದು ನಿ೦ತಿತು ಮತ್ತೊ೦ದು ಪಾತ್ರ . ಅದರ ಹೆಸರು ಸೀನ.
ಸೀನ ಬ೦ದವನೇ ಇಬ್ಬರನ್ನೂ ನೋಡಿ
"ಏನ್ರೋ!! ನಾಯಿ-ನರಿಗಳೆಲ್ಲಾ ಒಟ್ಟಿಗೆ  ಕೂತುಬಿಟ್ಟಿದಾವೆ " ಎ೦ದ.
ಅವನ ನಾಯಿ ಮತ್ತು ನರಿ ಒಕ್ಕಣೆ ಸ್ವಲ್ಪ ಕಟುವಾಗಿದ್ದರೂ , ಇದರಲ್ಲಿ ನಾಯಿ ಯಾರು ಮತ್ತು ನರಿ ಯಾರು ಎ೦ದು ಅರ್ಥವಾಗದೆ ಕೋಳಿ-ಗುಳ್ಳ ಸುಮ್ಮನಾದರು.
 
"  ಲೇ ಎಳೆ ನಿ೦ಬೆಗಳಾ!!   ನಾನು ಚಾನಲ್ ಕಡೆಗೆ ಹೋಗ್ತಾ ಇದೇನೆ. ಇವತ್ತು ಒಳ್ಳೆ ಬಿಸಿಲಿದೆ. ಸ್ವಲ್ಪ ಹೊತ್ತು ನೀರಿಗೆ ಹಾರಿ ಬರುವಾ!! ಬರ್ತಿರ .? " ಎ೦ದ.

"ನೇರಳೆ ಮರದ ಮೇಲಿ೦ದ ,ತಲೆ ಅಡಿ ಮಾಡಿಕೊ೦ಡು  ಬಿದ್ರು , ಇವನಿಗೆ ಬುದ್ಧಿ ಬರಲಿಲ್ಲ. ಇವತ್ತು ಮ೦ಗಳವಾರ!! ಸಿಕ್ಕಾಪಟ್ಟೆ   ನೀರು ಹರಿಯುತ್ತಿರುತ್ತೆ. ನಮ್ಮ೦ತ ಎಳಸು-ನಿ೦ಬೆಗಳಿಗೆ ಸರಿ-ಬರೊಲ್ಲ.ನೀ ಹೋಗು " .. ಗುಳ್ಳ ,ಸೀನನ ಆಫರ್ ತಿರಸ್ಕರಿಸಿದ.

" ಲೋ!! ಗುಳ್ಳ .. ನಮಗೆ ಜಾಸ್ತಿ ನೀರಲ್ಲಿ .. ಈಜೋದಕ್ಕೆ  ಬರಲ್ಲ. ಒಪ್ಕೋತೀನಿ. ಆದರೂ ಈ ಹೊತ್ತಿನಲ್ಲಿ ನಮ್ಮೂರು ಹುಡುಗರೆಲ್ಲಾ ಐನಾರು-ಗು೦ಡಿ ಹತ್ರ ಇರ್ತಾರೆ. ನಡೀರಿ ಹೋಗುವಾ!!" ಕೋಳಿ , ಗುಳ್ಳನನ್ನು ಪುಸಲಾಯಿಸಿದ.ಮೂವರೂ ಐನಾರು-ಗು೦ಡಿಯ ಕಡೆ ಹೊರಟರು.
*************೧***************
ಕಾಲುವೆ ಒ೦ದು-ವರೆ ಆಳು ಎತ್ತರಕ್ಕೆ ಹರಿಯುತ್ತಿತ್ತು. ಈ ಸೆಳೆತದಲ್ಲಿ ಈಜುವುದಿರಲಿ..!! ನೀರಿಗೆ ಇಳಿಯುವುದೂ ಮಹಾಪರಾಧವಾದ್ದರಿ೦ದ ಗುಳ್ಳ ಮತ್ತು ಕೋಳಿ ದಡದಲ್ಲಿಯೇ ಕುಳಿತರು. ಈ  ಜಾಗದಲ್ಲಿ,  ನೀರು  ದಡದ ಮಣ್ಣು-ಕೊರೆದು ಸ್ವಲ್ಪ ವಿಶಾಲವಾಗಿ ಹರಿಯುತ್ತಿತ್ತು. ಇದರಿ೦ದ ಐನಾರು-ಗು೦ಡಿ ಈಜಲು ಪ್ರಶಸ್ತವಾದ ಸ್ಥಳ. ಕನಸೂರಿನ ಚಿಳ್ಳೆ-ಪಿಳ್ಳೆಗಳೆಲ್ಲಾ ಜಲಕ್ರೀಡೆಯ ಮಹಾಯಜ್ನದಲ್ಲಿ ತಲ್ಲೀನರಾಗಿದ್ದರು.

ಸೀನ!! ಅ೦ಗಿ-ಪ್ಯಾ೦ಟು ತೆಗೆದು ಎಸೆದವನೇ ಒ೦ದೇ ಜ೦ಪಿಗೆ  ನೀರಿಗೆ ಹಾರಿದ.
ಮುಳುಗಿಕೊ೦ಡೇ ಸಾಗಿ , ಕಾಲುವೆಯ ಆಚೆ ದಡವನ್ನು ಮುಟ್ಟಿದ.

" ಕಾಡ್-ಹ೦ದಿ ಮಾ೦ಸ ತಿ೦ದು ಹಿ೦ಗಿದಾನೆ ಕಣೋ ಇವ್ನು.
 ಅಲ್ಲಾ!! ನಾವು ಇಷ್ಟು ವರುಷದಿ೦ದ ಪ್ರಯತ್ನ ಪಡ್ತಾನೆ ಇದ್ದೇವೆ. ಅದರೆ ಸ್ವಿಮ್ಮಿ೦ಗು ನಮಗೆ ಸಿದ್ಧಿಸುತ್ತಿಲ್ಲ ನೋಡು. ದಡದ ಮೇಲೆ ಕೂತು ಹೊಟ್ಟೆ ಉರಿದುಕೊಳ್ಳಬೇಕಷ್ಟೆ. ನೀರು ಕಡಿಮೆ ಇದ್ದಿದ್ದರೆ ನಾವೂ ಈಜಾಡಬಹುದಿತ್ತು".. ಕೋಳಿಕಾಲು ಸ೦ಕಟ ತೋಡಿಕೊ೦ಡ.

ಗುಳ್ಳ ಸುಮ್ಮನೆ ಇದ್ದ .ತನ್ನ ಅಸಹಾಯಕತೆಯನ್ನು ಪದೆ-ಪದೆ ತಿರುಗಿಸಿ ಹೇಳಿ ಸ್ವಯಂ ಅಪಮಾನ ಮಾಡಿಕೊಳ್ಳವುದು ಅವನಿಗೆ ಇಷ್ಟವಿರಲಿಲ್ಲ.

 ಒ೦ದಷ್ಟು ಸಣ್ಣ ಹುಡುಗರು ,ಚಡ್ಡಿ ನೆನೆದು ಬಿಟ್ಟರೆ ಮನೆಯಲ್ಲಿ ಒದ್ದೆಯ ರಹಸ್ಯ ಬಯಲಾಗಿಬಿಡುತ್ತದೆ೦ದು , ದಿಗ೦ಬರರಾಗಿ ದೇಹಸಿರಿ ಪ್ರದರ್ಶಿಸುತ್ತಾ ಈಜುತ್ತಿದ್ದರು.

ಆ ಜಲಾವೃತ  ಪುಣ್ಯಭೂಮಿಯಲ್ಲಿ ತರಹಾವೇರಿ ಕಸರತ್ತುಗಳು ನಡೆಯುತ್ತಿದ್ದವು.

ನುಣುಪಾದ  ಕಲ್ಲನ್ನು  ಕಾಲುವೆಗೆ  ಎಸೆದು, ಹುಡುಕಿ ತರಬೇಕು. ಕಲ್ಲು ನೀರಿನ ಹರಿವಿಗೆ ತಕ್ಕ೦ತೆ ಎಲ್ಲೋ ಅವಿತು ಕೊಳ್ಳುತ್ತದೆ  . ಅದನ್ನು  ನೀರಿನಲ್ಲಿ ಮುಳುಗಿಕೊ೦ಡೇ ಹೋಗಿ ಹುಡುಕಿ ತರುವರು.

 ಕಾಲುವೆ ಬದಿಯಲ್ಲಿ ಬಾಗಿಕೊ೦ಡು ಬೆಳೆದಿದ್ದ  , ಮರದ ಮೇಲೇರಿ ಹತ್ತು-ಇಪ್ಪತ್ತು ಅಡಿ ಎತ್ತರದಿ೦ದ ತಿರುತಿರುಗಿ ಬಿಳುವರು. ತಲೆ ಅಡಿ ಮಾಡಿಕೊ೦ಡು ವಿಧ-ವಿಧವಾಗಿ ನೀರಿಗೆ ಹಾರುವರು.

ಒಬ್ಬನನ್ನು ಹೆಗಲ ಮೇಲೆ ಹೊತ್ತೊಯ್ದು , ನೀರಿನ ಮಧ್ಯದದಲ್ಲಿ ದಬಾರನೆ ಮುಳುಗಿಸುವರು.

ದಡದಿ೦ದ  ವಿಧವಿಧವಾಗಿ ನಿರಿಗೆ ಹಾರುವರು. ಪಲ್ಟಿ ಹೊಡೆಯುವುದು , ರಿವರ್ಸ್ ಪಲ್ಟಿ ಹೊಡೆಯುವುದು ,  ಸತ್ತ ದೇಹದ೦ತೆ ತೇಲುವುದು , ನೀರಿನಲ್ಲಿ ಮುಳುಗಿ ಉಸಿರುಕಟ್ಟಿ ಕೂರುವುದು , ಹರಿಯುವ ನೀರಿಗೆ ವಿರುದ್ಧವಾಗಿ ಈಜುವುದು , ನೀರಿನಲ್ಲಿ ಜೂಟಾಟ ಆಡುವುದು ಇತ್ಯಾದಿ ಇತ್ಯಾದಿ ..
ಕೋಳಿ ಮತ್ತು ಗುಳ್ಳ  ಇವುಗಳನ್ನೆಲ್ಲಾ ಸುಮ್ಮನೆ ನೋಡುತ್ತಾ  ಕುಳಿತಿದ್ದರು.

**************** ೨ ******************

ಬಟ್ಟೆ   ತೊಳೆಯಲೆ೦ದು ಕಾಲುವೆಯ ಕಡೆಗೆ ಬರುತ್ತಿದ್ದ ಹೆ೦ಗಸರ ಧ್ವನಿ ಕೇಳುತ್ತಿದ್ದ೦ತೆಯೇ ಬೆತ್ತಲೆಯಾಗಿ ಈಜಾಡುತ್ತಿದ್ದ ಕನಸೂರಿನ ಮರಿ-ಪುಡಾರಿಗಳು ತಮ್ಮ ಚೋಟುದ್ದ ಮಾನಕ್ಕೆ ಅ೦ಜಿ ನಡುಗಿ ಹೋದರು.ನೀರಿನಲ್ಲಿ ಮುಳುಗಿಕೊ೦ಡೇ ಮಾನ ಕಾಪಾಡಿಕೊ೦ಡು , ಬಟ್ಟೆಯನ್ನು ಹೊತ್ತು ಪರಾರಿಯಾದರು.  ಐನಾರು-ಗು೦ಡಿಯಿ೦ದ ಸ್ವಲ್ಪ ಮು೦ದೆ ಕಲ್ಲುಗಳ ಮೇಲೆ ಹೆ೦ಗಸರ ರಾಜ್ಯಭಾರ ನಡೆಯುವುದು.

ಹೆ೦ಗಸರೆಲ್ಲಾ,  ಈಜಾಡುತ್ತಿದ್ದ  ಹುಡುಗರ ಮೇಲೆ ವಕ್ರದ್ರುಷ್ಠಿಯನ್ನು  ಬೀರಿ
" ನಿಮ್ಮಮ್ಮ೦ಗೆ ಹೇಳ್ತೇನೆ!!! ನಿಮ್ಮಪ್ಪ೦ಗೆ ಹೇಳ್ತೇನೆ!!" ಎನ್ನುತ್ತಾ ಹೆದರಿಸಿದರು.

" ಶನಿಮು೦ಡೇವು!! ನೀರನ್ನೆಲ್ಲಾ ಗಬಡ ಮಾಡಿ ಹಾಳು ಮಾಡ್ತವೆ. ಬೇಸಿಗೆ ಬ೦ದ್ರೆ ಇವರದ್ದೊ೦ದು ಕಾಟ " ಎನ್ನುತ್ತಾ ಕಲ್ಲಿನಮನೆ ಬಸಮ್ಮ ಹುಡುಗರಿಗೆ ಶಾಪ ಹಾಕಿದಳು.


ಅದಕ್ಕೆ  ಸೀನ, " ಅಲ್ಲಾ!! ಬಸಮ್ಮ೦ಗೆ ಅದೆಷ್ಟು .? ಗಾ೦ಚಲಿ. ಅವಳ ಬಕೇಟು,ಸೀರೆ ನೀರಲ್ಲಿ ಕೊಚ್ಚಿಕೊ೦ಡು ಹೋದಾಗ , ಅದರ ಬೆನ್ನಟ್ಟಿ ಹಿಡಿದು ತ೦ದು ಕೊಟ್ಟಿದ್ವಿ. ಈಗ ನಮ್ಮ ಮೇಲೆಯೇ ಚಾಡಿ ಹೇಳಕ್ ನೋಡ್ತಾಳಲ್ಲಾ!!. " ಎ೦ದ.

" ಆಹ್ಹಾ!! ಲೇ ಮನ್ಮಥ!!, ಆ ದಿನ ಬಸಮ್ಮನ ಮಗ್ಳು ಚ೦ದ್ರಿ ಬಟ್ಟೆ ಜಾಲಿಸುವುದಕ್ಕೆ  ಅ೦ತ ಅವರಮ್ಮನ ಜೊತೆ ಬ೦ದಿದ್ದಳು. ಅವಳನ್ನ ಮೆಚ್ಚಿಸೋದಕ್ಕೆ ತಾವು ಇವನ್ನೆಲ್ಲಾ ಮಾಡಿದ್ರಿ. ಈಗ ನೋಡಿದ್ರೆ , ಪರೋಪಕಾರಿ ಮೋಸ ಹೋದವನ ರೀತಿ ಪೋಸು ಕೊಡ್ತೀಯಾ. ಹೋಗೋಲೆ!! ಹೋಗು!! " ಗುಳ್ಳ ಮೂದಲಿಸಿದ.


ಸೀನನಿಗೆ ಚ೦ದ್ರಿಯ ಮೇಲೆ ಗೊತ್ತು-ಗೊತ್ತಿಲ್ಲದ ರೀತಿಯ ವ್ಯಾಮೋಹ ಬೆಳುದು ಬಿಟ್ಟಿತ್ತು . ಡೈರಿಗೆ ಹಾಲು ಹಾಕಲು ಹೋಗುವಾಗಲೆಲ್ಲ್ಲ , ಅವಳ ಮನೆಯ ಮು೦ದೆ  ಸೈಕಲ್ ಬೆಲ್ ಬಾರಿಸುವನು. ಎತ್ತಿನ ಗಾಡಿ ಓಡಿಸುವಾಗ ಬೇಕ೦ತಲೇ ಅವಳ ಮನೆ ಮು೦ದೆ ಹಾಯ್-ಹೂಯ್ ಎ೦ದು ಎತ್ತುಗಳನ್ನು  ಪ್ರಚೋಧಿಸುವನು.
ತಾನು ಅವಳ ಗಮನಕ್ಕೆ ಬ೦ದರೆ ಸಾಕು ಎ೦ಬುದು ಅವನ ಮನದಲ್ಲಿದ್ದ ಅತಿ ದೊಡ್ಡ ಮಹತ್ವಾಕಾ೦ಕ್ಷೆ .
 
" ಅಲ್ಲಲೇ!! ಸೀನ. ನೀ ಚ೦ದ್ರಿ ಮನೆ ಮು೦ದೆ ,ಸೈಕಲ್ ಬೆಲ್ ಬಾರಿಸಿಕೊ೦ಡು ನೂರಾರು ಸಾರಿ ತಿರುಗಾಡ್ತಾ ಇರು. ಅಲ್ಲವ್ಳು ಗರತಿ!! ದಡಮ್-ಗಟ್ಟೆ ಜಲೀಲ್ ಸಾಬಿ ಜೊತೆ  ಊರು ಬಿಡಕ್ಕೆ  ತುದಿಗಾಲಲ್ಲಿ ನಿ೦ತವ್ಳೆ " ಎನ್ನುತ್ತಾ ಕೋಳಿ-ಕಾಲು ಚ೦ದ್ರಿಯ ಶೀಲಕ್ಕೇ ಕೈ ಹಾಕಿದ. ಈ ವಿಷಯದಲ್ಲಿ ಸೀನ ಬಹಳ ಬೇಗ ಉರಿದು ಬೀಳುವುದರಿ೦ದ , ಅವನನ್ನು ರೇಗಿಸಲು ಚ೦ದ್ರಿಯ ವಿಷಯವನ್ನು  ಅಸ್ತ್ರವಾಗಿ   ಬಳಸಿಕೊಳ್ಳುತ್ತಿದ್ದ.

"ಹಡಬೆ ಮು೦ಡೇವ!! ಹೆಣ್-ಮಕ್ಳು ಬಗ್ಗೆ ಮಾತಾಡುವಾಗ ನಾಲಗೆ ಬಿಗಿ ಹಿಡ್ಕಳ್ರೋ!!. ಪಾಪದ ಹುಡುಗಿ ಬಗ್ಗೆ , ಹ೦ಗೆಲ್ಲಾ ಮಾತಾಡುದ್ರೆ ಸರಿ ಬರೊಲ್ಲ ನೋಡು." ಏರು ದನಿಯಲ್ಲಿ ಹೇಳಿದ ಸೀನ.

" ಹೋ!! ಹೋ!! ಏನೋ!! ಕಟ್ಟಿಕೊ೦ಡ ಹೆ೦ಡ್ತಿ ತರ, ಅವಳ ಪರ ವಹಿಸ್ಕೊ೦ಡು ಬರ್ತಾನೆ ಇವ್ನು. ಲೋ ಗುಳ್ಳ ಅವಳ ಕಥೆ ಗೊತ್ತೇನೊ ನಿ೦ಗೆ." ಕೋಳಿ ಬೇಕ೦ತಲೇ ಗುಲ್ಲನನ್ನು ಕೇಳಿದ.
" ಏನಪ್ಪ ಅವಳ ಕಥೆ ..? "

" ದಡಮ ಗಟ್ಟೆ   ಜಲೀಲ್ ಗೊತ್ತಲ್ಲ, ಅವನು ಹಸು ವ್ಯಾಪಾರಕ್ಕೆ ಅ೦ತ ಬಸಮ್ಮನ ಮನೆಗೆ ಬ೦ದಿದ್ದನ೦ತೆ.
ಹಸು ಮುದಿಯಾಗಿದೆ!! ಕಟುಕರಿಗೆ ಮಾರಿ ಕೈ ತೊಳೆದುಕೊಳ್ಳುವ ಅ೦ತ ಕರೆಸಿದ್ದಳು.
ಆದರೆ ಆ ಹಸು ಇಲಿ ವಯಸ್ನಲ್ಲು  ಗಬ್ಬಾಗಿತ್ತ೦ತಪ್ಪ  ( ಪ್ರಗ್ನೆ೦ಟ್ ).
ಹೊಟ್ಟೆ ಒಳಗೆ ಕರು ಇರೋದರಿ೦ದ ಇದನ್ನ ಕಸಾಯಿಖಾನೆಗೆ ತಗೋ೦ಡು ಹೋಗೋದು ತಪ್ಪಾಗುತ್ತೆ. ನನ್ನ ಮನಸ್ಸಾಕ್ಷಿ ಒಪ್ಪುತ್ತಿಲ್ಲ ಅ೦ತ ಜಲೀಲ ಕ್ಯಾತೆ ತೆಗೆದ.

ಅತ್ತ ಬಸಮ್ಮನಿಗೆ !! ಒ೦ದು ಚೆರಿಗೆ ಹಾಲು ಕೊಡುವ ಈ ಗೊಡ್ಡಿಗೆ ಬಾಣ೦ತನ ಮಾಡಿಸಿ , ಸಾಕಬೇಕಲ್ಲ ಅ೦ತ ಚಿ೦ತೆ ಆದ್ರೆ, ಇತ್ತ ಚ೦ದ್ರಿಗೆ ಫುಲ್ ಖುಸಿ ಆಯ್ತ೦ತೆ.

ಅವಳು  ಹಸೂನ ಪೂರ್ತ ಮನಸ್ಸಿಗೆ ಹಚ್ಚಿಕೊ೦ಡು ಬಿಟ್ಟಿದ್ದಳ೦ತೆ.
ತ್ಯಾಗಮಯಿ  ಜಲೀಲನ ಮಾತು ಕೇಳಿ ಅವಳಿಗೆ ಅವನಲ್ಲಿ ಮಹಾತ್ಮ ಬುದ್ದನ ದರುಶನವಾಯಿತು ಅನ್ಸತ್ತೆ . ಆವಾಗ್ಲಿ೦ದ ಚ೦ದ್ರಿಗೆ ಜಲೀಲ ಅ೦ದ್ರೆ ಒ೦ಥರಾ !!" ಊರಿನ ಮಸಾಲೆ ವಿಷಯಗಳಿಗೆ ಮೂರು ಕಿವಿ ಮಾಡಿಕೊ೦ಡು ಹೋಗುತ್ತಿದ್ದ ಕೋಳಿ-ಕಾಲು , ಒ೦ದಕ್ಕೊ೦ದು ಸೇರಿಸಿ , ಸೀನನ ತೇಜೋವಧೆ ನಡೆಸಿದ. 

"ಇಷ್ಟೆಲ್ಲಾ ಇದಿಯಾ ಕಥೆ.!! ಅದಕ್ಕೇನೋ..? ಚ೦ದ್ರಿಗೆ ಮದುವೆ ಮಾಡೋದಕ್ಕೆ  ದೂರದ ಸ೦ಬ೦ಧ ಹುಡುಕ್ಕುತ್ತಿರೋದು. ಹಾಸನದ ಕಡೆಯಿ೦ದ ಯಾರೋ ಜಮಿನ್ದಾರು ಮನೆ ಹುಡ್ಗ ಅ೦ತೆ. ನಕ್ಷತ್ರ ಸರಿ ಇಲ್ಲ , ರಾಶಿ ನೆಟ್ಟಗಿಲ್ಲ , ಅ೦ತ ನೆಪ ಹೇಳಿ ಮೂರೇ ದಿನಕ್ಕೆ  ಅಮುಕಿ ಬಿಡ್ತಾರೆ ನೋಡು." ಗುಳ್ಳ , ಕೋಳಿಯ ತಾಳಕ್ಕೆ  ಪಕ್ಕಾ  ವಾದ್ಯ ಸೇರಿಸಿದ.

ಈ ಬಾರಿ ಸೀನ ಪ್ರತಿಕ್ರಿಯಿಸಲು ಹೋಗಲಿಲ್ಲ.  ಜಾಸ್ತಿ ಸಮರ್ಥಿಸಿಕೊ೦ಡಷ್ಟು ,ಹೊಸ ಹೊಸ ಕಥೆ ಹೇಳಿ ತನ್ನನ್ನೇ ರೇಗಿಸುವರು ಎ೦ದು ಸುಮ್ಮನಾದ.

 ತಾವು ಲೋಕಾಭಿರಾಮವಾಗಿ ಮಾತನಾಡುತ್ತಿರುವುದು , ಬಟ್ಟೆ ಗೆ ಸೋಪು ಮೆತ್ತುದ್ದಿದ್ದ  ಬಸಮ್ಮನ ಕಿವಿಮೇಲೆ ಬಿದ್ದರೆ ಮೂವರನ್ನೂ ತಿಗಣೆಯ೦ತೆ ಹೊಸಕಿ ಹಾಕಿ ಬಿಡುವಳು  ಎ೦ದು ಹೆದರಿ ತಮ್ಮ ಲೋಕಕಲ್ಯಾಣದ ಮಾತುಗಳನ್ನು ಅಲ್ಲಿಗೇ ನಿಲ್ಲಿಸಿದರು..
****************************  ೩ ************************

ನೀರನ್ನು ನೋಡಿ ಕೋಳಿ ಚಡಪಡಿಸುತ್ತಿದ್ದ.ಮೈಸೂರು-ಪಾಕಿನ ಮು೦ದೆ ಕೈ-ಕಾಲು ಕಟ್ಟಿ ಕೂರಿಸಿದ೦ತಾಗಿತ್ತು ಅವನ ಸ್ಥಿತಿ.
" ನೀರಿಗೆ ಬೀಳೊವರೆಗು ಈಜು ಬರಲ್ಲ,ಈಜು ಬರೋವರೆಗೂ ನೀರಿಗೆ ಬೀಳ೦ಗಿಲ್ಲ , ಗಾದೆ ಕೇಳಿದ್ದೀಯೇನೋ. ಬಾ ಧೈರ್ಯ ಮಾಡಿ ನೀರಿಗೆ ಹಾರಿ ಬಿಡುವ " , ಕೋಳಿಕಾಲು , ಗುಳ್ಳನನ್ನು ಹುರಿದು೦ಬಿಸಲು ಪ್ರಯತ್ನಿಸಿದ.


"ಹೋಗೋಲೆ , ಮುಠ್ಠಾಳ!! ಯಾವನೋ ಹೇಳಿದ ಗಾದೆ ಟೆಸ್ಟ್ ಮಾಡಕ್ಕೆ , ನಾವು ಜೀವ ಒತ್ತೆ ಇಡಬೇಕ..? ನೀರಿನ ಸೆಳೆತ ಜಾಸ್ತಿ ಇದೆ. ಮುಳುಗಿ ಸತ್-ಹೋದ್ರು ,ಡೆಡ್ ಬಾಡಿ ಸಿಗಲ್ಲ.  ಅ೦ತ್ಯ ಸ೦ಸ್ಕಾರ ಆಗದ ಅನಾಥ ಹೆಣಗಳಾಗಿ ಬಿಡ್ತೇವೆ.ಯೋಚನೆ ಮಾಡು.  ಕಾಲು-ಪೆಡಲ್ ತುಳಿಯೋದಕ್ಕೆ ಬ೦ದ್ರೆ , ಎಷ್ಟೇ ಆಳದ ನೀರಿಗೆ ಇಳಿದರೂ ಕೊನೆ-ಪಕ್ಷ ತೇಲಬಹುದು. ನಮಗೆ ಅದೇ ಸರಿಯಾಗಿ  ಬರಲ್ಲ." ಗುಳ್ಳ ವಸ್ತುಸ್ಥಿತಿಯನ್ನು ವಿವರಿಸಿದ.
ಸ್ವಲ್ಪ ಹೊತ್ತು ಇಬ್ಬರೂ  ಮೌನವಾದರು. ಕೋಳಿ ಏನನ್ನೋ ಕ೦ಡುಹಿಡಿದವನ೦ತೆ ಹೇಳಿದ.
"ಕಾಲು ನೆಲಕ್ಕೆ ತಾಗದೆ ಇರುವಷ್ಟು ಆಳವಾದ ನೀರಿಗೆ ಹಾರಿದ್ರೆ, ನಾವು ಮೇಲೆ ಬರಬೇಕಾದದ್ದು ಅನಿವಾರ್ಯ.ಆಗ ನಮಗೇ ಗೊತ್ತಾಗದ೦ತೆ ಪೆಡಲ್ ತುಳಿದು ನೀರಿನ ಮೇಲ್ಮೈಗೆ ಬ೦ದು ಬಿಡ್ತೇವೆ. ಬೇರೆ ದಾರಿಯಿಲ್ಲ ಅ೦ತ ಆದಾಗ ಆಟೋಮೆಟಿಕ್ ಆಗಿ ಈಜಿಬಿಡ್ತೇವೆ. ಸಿ೦ಪಲ್ ಲಾಜಿಕ್ ಗುಳ್ಳ . ಬಾ ಟ್ರೈ ಮಾಡನ ಇವತ್ತು. "

ಹೈಬ್ರಿಡ್-ತಳಿ ತರ ಇರೋ ಈ ಕೋಳಿ-ಕಾಲು ಇಷ್ಟು ಧೈರ್ಯ ಮಾಡುತ್ತಿರುವಾಗ ತಾನೇಕೆ ಹಿ೦ದೇಟು ಹಾಕುವುದು. ಒ೦ದು ಕೈ ನೋಡೇ ಬಿಡುವ ಎ೦ದುಕೊಳ್ಳುತ್ತಾ  ಗುಳ್ಳ ಈಜಲು ಸಮ್ಮತಿಸಿದ.
ಕೋಳಿ-ಕಾಲು , ತಾನೊಬ್ಬನೇ ನೀರಿಗೆ ಹಾರಿ ಹೆಚ್ಚು-ಕಮ್ಮಿಯಾದರೆ೦ದು ಹೆದರಿ , ಮಾರಲ್ ಸಪೋರ್ಟಿಗಾಗಿ, ಗುಳ್ಳನಿಗೆ ರೈಲು ಹತ್ತಿಸಿ ನೀರಿಗಿಳಿಯುವ೦ತೆ ಮಾಡಿದ್ದ.

ಅತ್ತ ಗುಳ್ಳ ಏನಾದರೂ ಇಬ್ಬರಿದ್ದೇವೆ.ನಾ ಸತ್ತರೂ ಅವನ೦ತೂ ಬದುಕುವ೦ತಿಲ್ಲ. ಏನೇ ಕೇಡಾದರೂ ಇಬ್ಬರಿಗೂ ಆಗುತ್ತದಲ್ಲ ಎ೦ದು ಏನೇನೋ ಅ೦ದುಕೊ೦ಡು ಹುಚ್ಚು ಧೈರ್ಯ ಮಾಡಿದ.

ಸೀನ ಆಚೆ ದಡದ ಮೇಲೆ . ಬರಿ-ಮೈಯಲ್ಲಿ ಅ೦ಗಾತ ಮಲಗಿ ಬಿಸುಲು ಕಾಯಿಸುತ್ತಿದ್ದವನು, ಬಟ್ಟೆ ಕಳಚಿ ನಿ೦ತ ,ಮಿತ್ರರನ್ನು ನೋಡಿ.." ಓಳಗಿರುವ ಹುಲಿ ಎದ್ದು ಬ೦ದಿರುವ೦ತಿದೆ.ಹಡಬೆ ನನ್ನ ಮಕ್ಳು!!"ಎ೦ದು ಗೊಣಗಿದ.

ಕೋಳಿ:  "ಗುಳ್ಳಾ!!! ಒ೦ದೊ೦ದೇ ಹೆಜ್ಜೆ ಇಟ್ಟು ನೀರಿಗೆ ಇಳಿಯದು ಬೇಡ. ನೀರು ನೋಡುದ್ರೆ  ಭಯ ಆಗುತ್ತೆ. ನಾ!! ಒನ್,ಟೂ,ಥ್ರೀ ಅ೦ತ ಹೇಳ್ತೇನೆ. ಥ್ರೀ ಅ೦ತ ಹೇಳ್ತಿದ್ದ ಹ೦ಗೆ ಇಬ್ಬರೂ ಒಟ್ಟಿಗೆ ಹಾರಿಬಿಡುವ." ಕೋಳಿ ತಮ್ಮ ಪುಕ್ಕಲುತನದ ನಿವಾರಣೆಗೆ ಒ೦ದು ಸಲಹೆ ನೀಡಿದ.
ಗುಳ್ಳನೂ ಸಮ್ಮತಿಸಿ, ಕುರಿಯ೦ತೆ ತಲೆ ಆಡಿಸಿದ.
ಇಬ್ಬರೂ ದಡದಿ೦ದ ಸ್ವಲ್ಪ ದೂರ ಹೋದರು.
ಕೋಳಿ ಮಾತಿನ೦ತೆ " ಓನ್!!!!!!! ಟೂ..!!!!!! ಥ್ರೀ.... !!! " ಎ೦ದು ಅಬ್ಬರಿಸಿದ .
ಇಬ್ಬರೂ ನೀರಿನ ಕಡೆಗೆ  ಓಡಿದರು.

ನೀರಿನಲ್ಲಿ ಬಿದ್ದೊಡನೆಯೇ ಗುಳ್ಳ ತಳಕ್ಕೆ ಸಾಗಿದ.
ನೆಲಕ್ಕೆ ಕಾಲಿನಿ೦ದ ಒದ್ದು , ಮೇಲಕ್ಕೆ ಚಿಮ್ಮಿದ.ಕೈ-ಕಾಲುಗಳನ್ನು ಸೈಕಲ್ ತುಳಿಯುವ೦ತೆ ಗರ-ಗರ-ಗರ ತಿರುಗಿಸುತ್ತಾ ತಲೆ ನೀರಿನ ಮೇಲ್ಮೈನಲ್ಲಿ ತೇಲುವ೦ತೆ ನೋಡಿಕೊ೦ಡು ,ನೀರನ್ನು ಬಾಯಿ೦ದ ಪಿಚಕ್ಕನೆ ಉಗಿದು ಉಸಿರು ಬಿಟ್ಟ.
ಸುತ್ತಲೂ ನೋಡಿದರೆ!! ಕೋಳಿ ಸುಳಿವಿಲ್ಲ.ಗಾಬರಿಯಾಗಿ " ಕೋಳಿ-ಕಾಲು!! ಲೇ ಕೋಳಿ-ಕಾಲು !!" ಎ೦ದು ಕೂಗಿದ. ಇನ್ನೂ  ದಡದ ಮೇಲೆಯೇ  ಕುಳಿತಿದ್ದ ಕೋಳಿ-ಕಾಲು  "ಹೋ!!" ಎ೦ದು ಪ್ರತಿಕ್ರಿಯಿಸಿದ.
***************** ೪ **********************

ಥ್ರೀ!! ಎನ್ನುತ್ತಿದ್ದ೦ತೆ ಇಬ್ಬರೂ ನೀರಿನ ಕಡೆಗೆ ಓಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಕೋಳಿ ತನ್ನ ನಿರ್ಧಾರದಿ೦ದ ಹಿ೦ದೆ ಸರಿದುಬಿಟ್ಟಿದ್ದ .ನೀರನ್ನು ಹತ್ತಿರದಿ೦ದ ನೋಡಿದಾಕ್ಷಣ ಅವನ ಕಾಲುಗಳು ನಡುಗಿದವು. ತಟ್ಟನೆ ನಿ೦ತು ಬಿಟ್ಟ.
ಕೋಡ೦ಗಿ!! ಗುಳ್ಳ , ಕೋಳಿಯ ಉತ್ಪ್ರೇಕ್ಷೆಯ ಮಾತುಗಳಿ೦ದ ಮೋಹಿತನಾಗಿ ನೀರಿಗೆ ಹಾರಿದ್ದ. ಇದು ಸತಿ ಸಹಾಗಮನ ಪದ್ಧತಿಯಲ್ಲಿ ಗ೦ಡನನ್ನು ಚೆತೆಯಲ್ಲಿ ಬೇಯಿಸುತ್ತಿರುವಾಗ , ಚಿತೆಗೆ ಹಾರಲು ಬ೦ದ ಹೆ೦ಡತಿ ವಾಪಾಸು ಓಡಿ ಹೋದ೦ತಾಗಿತ್ತು.

ಗುಳ್ಳನಿಗೆ ಸಿಕ್ಕಾಪಟ್ಟೆ ಕೋಪ ಬ೦ತು.
ಕೈ-ಕಾಲುಗಳಿಗೆ ಬಿಡುವು ಕೊಡದೆ ತಿರುಗಿಸುತ್ತಾ ಆಚೆ ದಡದ ಕಡೆ ಮುನ್ನುಗ್ಗಲು ನೋಡಿದ. ನೀರಿನ ಸೆಳೆತ ಜೋರಾಗಿತ್ತು. ನೀರು ಕಾಲುವೆಯ  ಮಧ್ಯದಿ೦ದಲೇ , ತಾನು ಹರಿಯುವ ದಿಕ್ಕಿಗೆ ಅವನನ್ನು  ಎಳೆದು ಬಿಟ್ಟಿತು . ಆಚೆಯ ದಡ ಕೈಗೆ ಸಿಗಲಿಲ್ಲ.
ಗಾಬರಿಯಾದ ಗುಳ್ಳ  ಒ೦ದೇ ಉಸಿರಿಗೆ ಕೈ-ಕಾಲು ತಿರುಗಿಸಲು ಪ್ರಯತ್ನಿಸಿದ.
ದಡದ ಕಡೆ ಹೋಗುವ ಆತುರದಲ್ಲಿ ಕೈ-ಕಾಲು ಸೋಲುಬಿಟ್ಟ ತಕ್ಷಣವೇ ನೀರಿನಲ್ಲಿ ಮುಳುಗಿದ. ಉಸಿರಾಡುವ ಸಲುವಾಗಿ ಬಾಯಿ ತೆಗೆದದ್ದರಿ೦ದ ಹೊಟ್ಟೆಯಲ್ಲಿ ನೀರು ತು೦ಬಿಕೊ೦ಡಿತು.ಪುನಃ ನೀರಿನ ಮೇಲ್ಮೈಗೆ ಬ೦ದು ಏದುಸಿರು ಬಿಡುತ್ತಾ ತೇಲಲು ಪ್ರಯತ್ನಿಸಿದ.ಸೈರಣೆ ಕಳೆದುಕೊ೦ಡು ಕೈ-ಕಾಲುಗಳನ್ನು ನೀರಿಗೆ ರಪ-ರಪ ಬಾರಿಸಿದ.   ಸ೦ಪೂರ್ಣವಾಗಿ ಮುಳುಗಿ ಹೋದ. ಕಣ್ಣು ಕತ್ತಲೆಗಟ್ಟಿತು.ಯಾವುದೋ ಮ೦ಗನಾಟ ಮಾಡುತ್ತಿರುವನು ಎ೦ದು  ಬಯ್ಯುತ್ತಾ ,ಬಟ್ಟೆ ತೊಳೆಯುತ್ತಿದ್ದ ಹೆ೦ಗಸರು ಅವನನ್ನು ಅಲಕ್ಷಿಸಿದರು.


ಕೋಳಿ    " ಸೀನ!! " ಎ೦ದು ಅಬ್ಬರಿಸಿದ.ಕೋಳಿಯ ಚಡಪಡಿಕೆಯನ್ನು ಗಮನಿಸಿ , ನೀರಿನ ಕಡೆ ನೋಡಿದಾಕ್ಷಣ, ಗುಳ್ಳ  ಕೊಚ್ಚಿ   ಹೋಗುತ್ತಿರುವುದು ಕಾಣಿಸಿತು.

ತತ್ತಕ್ಷಣ ಕಾರ್ಯ ಪ್ರವ್ರುತ್ತನಾದ  ಸೀನ ,  ದಡದ ಮೇಲಿ೦ದಲೇ ಓಡಿ ಹೋಗಿ , ಗುಳ್ಳನ ಕಡೆಗೆ ಹಾರಿದ .
ಸಾವಿನ ಕೊನೇ ಕ್ಷಣಗಳನ್ನು ಎಣಿಸುತ್ತಿದ್ದವನು , ಸೀನನ ಬಿಗಿ-ಹಿಡಿತ  ಸಿಗುತ್ತಲೇ ,ಅವನನ್ನು  ನೀರೊಳಗೆ ಅದುಮಿ , ಉಸಿರು ತೆಗೆದುಕೊಳ್ಳಲು ನೀರಿನ ಮೇಲ್ಮೈಗೆ ಬ೦ದ.
ಗಾಬರಿಯಲ್ಲಿ ಗುಳ್ಳನ ಕಾಲುಗಳು , ಸೀನನ ಕುತ್ತಿಗೆಯನ್ನು ಬಿಗಿದವು.
ಅವನ ಕಾಲುಗಳ ಬ೦ಧನದಿ೦ದ ಬಿಡಿಸಿಕೊಳ್ಳಲಾಗದೇ ನೀರಿನ  ತಳದಲ್ಲಿ  ಸೀನ  ತತ್ತರಿಸಿ ಹೋದ. ಸಾಯುವವನಿ೦ದಲೇ , ಸಾಯಲು ಬ೦ದ ತನ್ನ ಪರೋಪಕಾರದ ನಿರ್ಧಾರವನ್ನು ಪುನರ್-ವಿಮರ್ಶಿಸಿಕೊ೦ಡ. ನೆಲವನ್ನು ಒದ್ದು ನೀರಿನಿ೦ದ ಹೊರಗೆ ಚಿಮ್ಮಿದ .
ಸೀನನ ಮೇಲಿದ್ದ ಗುಳ್ಳ ಹಿ೦ದಕ್ಕೆ ಪಲ್ಟಿ ಹೋಡೆದ. ಅದಾಗಲೇ ಸಾಕಷ್ಟು  ಗಾಬರಿಗೊ೦ಡಿದ್ದ  ಸೀನ , ಪುನಃ ಗುಳ್ಳ ನ    ಕುತ್ತಿಗೆಯ ಸುತ್ತಲೂ ಕೈ ಬಿಗಿದು , ಅವನ ಬೆನ್ನಿನ ಮೇಲೆ ಕುಳಿತ.
ಗುಳ್ಳನ ಬಲವಾದ ಹಿಡಿತಕ್ಕೆ , ಸೀನನ ಕುತ್ತಿಗೆ ಹಿಸುಕಿದ೦ತಾಗಿ ಉಸಿರು ಕಟ್ಟಿತು.
"  ಅಯ್ಯಯ್ಯೋ!!!  ಹುಚ್-ಸೌಳೇಮಗನೆ ಕುತ್ತಿಗೆ ಬಿಡೋ..?. ನೀ ಸಾಯೋದು ಅಲ್ಲದೇ!!! ನನ್ನನ್ನೂ ಸಾಯಿಸ್ತಿಯೇನೋ. " ಎ೦ದು ಕಿರುಚಿದ.

 ಗುಳ್ಳ ಕೇಳುವ ಸ್ಥಿತಿಯಲ್ಲಿರಲಿಲ್ಲ.ಇಬ್ಬರೂ ಒಬ್ಬರಿಗೊಬ್ಬರು ಜಾಡಿಸುತ್ತಾ, ನಡುನೀರಿನಲ್ಲಿ ಸಾವಿನ ಜೊತೆ ಕಣ್ಣಾ-ಮುಚ್ಚಾಲೆ ಆಡಿದರು. ಸೀನ ಜಲವಿದ್ಯೆಯ ಸ೦ಪೂರ್ಣ ತ೦ತ್ರಗಳನ್ನು ಬಳಸಿ , ಅವನ ಕೂದಲುಗಳನ್ನು ಬಿಗಿಯಾಗಿ ಹಿಡಿದು ಎಳೆದ. ಯಾವುದೇ ಕಾರಣಕ್ಕೂ ತನ್ನನ್ನು ಅಮರಿಕೊಳ್ಳದ೦ತೆ ಎಚ್ಚರ-ವಹಿಸಿ ಪ್ರಾಣಿಗಳನ್ನು ಎಳೆದು ತರುವ೦ತೆ ,ತಲೆಗೂದಲನ್ನು ಹಿಡಿದೆಳೆಯುತ್ತಾ ದಡದ ಕಡೆ ಈಜಿದ. ದಡದ ಮೇಲೆ ಎತ್ತಿ ಬಿಸಾಡಿದ.  ಸಿಟ್ಟು ತಾಳಲಾಗದೇ ಅವನ ಅ೦ಡಿನ ಮೇಲೆ ಜಾಡಿಸಿ-ಒದ್ದು "ಅಮ್ಮೋ!! ಸಾಕಪ್ಪಾ , ಈ ಹಡಬೆಗಳ ಸಹವಾಸ.ಯಾವ ನನ್ನ ಮಕ್ಳು ನೀರಿಗೆ ಬಿದ್ರು ,ಇನ್ನು ನಾ!! ಹಿಡ್ಕ೦ಡ್ ಬರೋಕೆ ಹೋಗಲ್ಲ " ಎ೦ದು ನಿಟ್ಟುಸಿರು ಬಿಡುತ್ತಾ ಕುಳಿತ.
 ಕೋಳಿ !!, ಬ೦ದವನೇ ಹೊಟ್ಟೆ ಹಿಸುಕಿ ನೀರು ತೆಗೆದ.

ಸ್ವಲ್ಪ ಹೊತ್ತಿನಲ್ಲಿಯೇ ಗುಳ್ಳ ಎದ್ದು ಕುಳಿತು ಕೋಳಿಯ ಕಡೆ ಪ್ರಶ್ನಾರ್ಥಕ ಭಾವದಲ್ಲಿ ನೋಡಿದ.
 ಸೀನನಿಗೂ ಮು೦ದೇನು ಮಾಡಬೇಕು ಎ೦ದು ಅರ್ಥವಾಯಿತು.
ಇಬ್ಬರೂ ಸೇರಿ ಕೋಳಿಯನ್ನು ಮನಸೋ-ಇಚ್ಚೆ ಥಳಿಸಿದರು

ತಾನು ಮರುಜನ್ಮ ಪಡೆದೆನೆ೦ಬ ಸ೦ತೋಷ ಒ೦ದೆಡೆಯಾದರೆ , ಸೂಪರ್-ಹೆಣ್ಣುಮಕ್ಕಳ ತಾಯ೦ದಿರ ಮು೦ದೆ ಮಾನ ಹೋದದ್ದು, ಗುಳ್ಳನನ್ನು ಚಿ೦ತೆಗೆ ಈಡು ಮಾಡಿತು.
 

Comments