ಆಗಸರಾಜನ ಗುಟ್ಟು
ಕವನ
ಆಗಸರಾಜನ ಗುಟ್ಟು
ಆಗಸದರಸನು ಗುಟ್ಟನು ಹೇಳಿದ ಮೋಡದ ಕಿವಿಯೊಳಗೆ
ಗುಟ್ಟನು ಕೇಳಿ ಕಣ್ಣ ಮುಚ್ಚುತ, ನಕ್ಕಿತು ಮೋಡವು ಮನದೊಳಗೆ
ಗುಟ್ಟಿನ ಹೊಳೆಯ ಹರಿಸಿತು ಮೋಡವು ಕಾಮನಬಿಲ್ಲಿನ ಕಿವಿಗೊಳಗೆ
ಕೇಳಿದ ಗುಟ್ಟಿನ ಮರ್ಮವನರಿತು, ನಕ್ಕಿದೆ ಬಿಲ್ಲು ತನ್ನೊಳಗೆ
ಕಾಮನಬಿಲ್ಲು ಕರ್ಣದೊಳುಸುರಿತು ಗುಟ್ಟನು ಮಳೆಯ ಹನಿಗಳಿಗೆ
ಮಳೆಯ ಹನಿಗಳು ಗುಟ್ಟನು ಕೇಳಿ, ಮೊಗದಲಿ ತಂದವು ಮುಗುಳ್ನಗೆ
ಸುರಿಯುವ ಹನಿಯು ಧರೆಯೆಡೆ ಧಾವಿಸಿ, ಬೀಳಲು ಮರಗಳ ಎಲೆಗಳಲಿ
ಹೇಳಿತು ಗುಟ್ಟನು ಹನಿಗಳು ಎಲೆಯಲಿ, ತುಂಬಲು ಮನವದು ಹರುಷದಲಿ
ಎಲೆಗಳು ಬಿಚ್ಚಿತು ಗುಟ್ಟಿನ ರಟ್ಟನು ಖಗಗಳ ಕಿವಿಯ ಅಂಚಿನಲಿ
ಖಗಗಳು ಹಾರಿತು ದೂರದೂರಕೆ ಹೇಳಲು ಗುಟ್ಟನು ಮಿಗಗಳಲಿ
ಮಿಗಗಳು ಬರೆದವು ಗುಟ್ಟಿನ ಕಾವ್ಯ, ತಮ್ಮಯ ಮನಗಳ ಪುಟಗಳಲಿ
ಗುಟ್ಟುಗಳಡಗಿವೆ ಎಲ್ಲರ ಮನದಲಿ, ನಗುವದು ಅರಳಿದೆ ಮೊಗಗಳಲಿ
ಖಗಗಳು,ಮಿಗಗಳು,ಮರಗಳು, ಲತೆಗಳು ಗುಟ್ಟನು ಅರಿತು ನಗುತಿರಲು
ನಗುವಿನ ಕಾರಣ ತಿಳಿಯದೆ ವಸುಧೆ, ಪ್ರಶ್ನೆಯ ಮೋರೆ ಚಲ್ಲಿದಳು?
ಆಗಸದರಸನ ಮನವನು ಕದ್ದಾರೋಪವ ನೀನು ಹೊತ್ತಿರುವೆ
ಇನಿಯನ ಮನದಲಿ ನಿನ್ನಯ ಮನದ, ಬೆಸುಗೆಯ ಹಾಕೆ ರತಿಚೆಲುವೆ
ಎನ್ನಲು ಹೀಗೆ ಎಲ್ಲರು ವಸುಧೆಗೆ, ಕೆಂಪನೇರಿತು ವಸುಧೆಯ ಗಲ್ಲ
ಚುಂಬಕ ನೋಟವಳವಳು ಬೀರಲು, ನಾಚಿದ ಮೇಲೆ ವಸುಧೆಯ ನಲ್ಲ
- ಚಂದ್ರಹಾಸ
Comments
ಉ: ಆಗಸರಾಜನ ಗುಟ್ಟು
In reply to ಉ: ಆಗಸರಾಜನ ಗುಟ್ಟು by hemalatha
ಉ: ಆಗಸರಾಜನ ಗುಟ್ಟು