ತಿರುಪತಿ ತಿಮ್ಮಪ್ಪನೂ ಹಾಗು ಅನಂತ ಪದ್ಮನಾಭನೂ ಮತ್ತು ನಮ್ಮ ಕನ್ನಡದ ದೇವರುಗಳೂ...........!!

ತಿರುಪತಿ ತಿಮ್ಮಪ್ಪನೂ ಹಾಗು ಅನಂತ ಪದ್ಮನಾಭನೂ ಮತ್ತು ನಮ್ಮ ಕನ್ನಡದ ದೇವರುಗಳೂ...........!!

ಗೌಡರು ಒಮ್ಮೆ ಹಲವಾರು ದೊಡ್ಡ-ದೊಡ್ಡ ವ್ಯಕ್ತಿಗಳೊಂದಿಗೆ ನಾಷ್ಟಾ ಮಾಡಲು ಹೋಟೆಲ್ಲಿಗೆ ಹೋದರು. ಬಿಲ್ಲು ಕೊಡುವ ಸರದಿ ಬಂದಾಗ ಮುಂದೆ ನುಗ್ಗಿ ತಾವೇ ಬಿಲ್ಲನ್ನು ತೆತ್ತರು. ಆಗ ಅವರ ಗೆಳೆಯನೊಬ್ಬ ಅಲ್ಲಾ ಗೌಡ್ರೇ ಅಷ್ಟೊಂದು ಜನ ದುಡ್ಡಿದ್ದೋರಿದ್ರು ಅವರ ಜೊತೆ ಪೈಪೋಟಿ ಮಾಡಿ ನೀವು ಬಿಲ್ಲು ಕಟ್ಟುವ ದರ್ದೇನಿತ್ತು ಅಂದ. ಆಗ ಗೌಡರೆಂದರು, ನಮ್ಮಲ್ಲಿ ಅಷ್ಟೊಂದೆಲ್ಲಾ ದೇವರುಗಳಿವೆ ಆದರೂ ನಾವು ಇಲ್ಲಿ ಕಾಣಿಕೆ ಹಾಕದೇ ತಿರುಪತಿ ತಿಮ್ಮಪ್ಪನಿಗೆ ಹೋಗಿ ಪೈಪೋಟಿಯ ಮೇಲೆ ಹುಂಡಿಯಲ್ಲಿ ಕಾಸು ಹಾಕಿಬರುವುದಿಲ್ಲವೇ ಇದೂ ಒಂದು ರೀತಿ ಹಾಗೆಯೇ ಎಂದು ತಮ್ಮ ಸ್ನೇಹಿತನ ಬಾಯಿ ಮುಚ್ಚಿಸಿದರು. ಈ ಘಟನೆಯನ್ನ ಗೌಡರ ಸ್ನೇಹಿತ ತನ್ನ ಇನ್ನೊಬ್ಬ ಮಿತ್ರನ ಬಳಿ ಹೇಳಿಕೊಳ್ಳುತ್ತಾ,  ಇದಕ್ಕೇ ಏನೋ ನಮ್ಮಲ್ಲಿ ತಿಮ್ಮಪ್ಪನಿಗಿರುವಷ್ಟು ಕಾಸಾಗಲಿ ಅನಂತ ಪದ್ಮನಾಭನಿಗಿರುವಷ್ಟು ಸಂಪತ್ತಾಗಲಿ ಇರದೇ ಇರುವುದು ಎಂದ. ಆಗ ಆ ಮಿತ್ರ ಅದಕ್ಕೊಪ್ಪದೆ ಅದಕ್ಕೆ ಬೇರೆಯೇ ಕಾರಣಗಳಿವೆ ಎಂದ. ಆಗ ಗೌಡರ ಸ್ನೇಹಿತ ಆ ಕಾರಣವನ್ನು ವಿವರಿಸುವಂತೆ ತನ್ನ ಮಿತ್ರನಿಗೆ ಗಂಟು ಬಿದ್ದ. ಆಗ ಆ ಮಿತ್ರ ತನ್ನ ಮಾತಿನ ಸಮಜಾಯಿಷಿಗಾಗಿ ಈ ಕೆಳಗಿನ ಕಥೆಯನ್ನು ಹೇಳಿದ:

    ಒಬ್ಬ ಹಾಲು ಮಾರುವ ಗೌಳಿ ಇದ್ದ. ಅವನಿಗೆ ಒಮ್ಮೆ ಒಂದು ತಾಪತ್ರಯ ಬಂತು. ತನ್ನ ಕಷ್ಟವೇನಾದರೂ ತೀರಿಸಿದರೆ ಅದರ ಪರಿಹಾರರ್ಥವಾಗಿ  ತನ್ನ ಬಳಿಯಿರುವ ಹಾಲು ಕರೆಯುವ ಎಮ್ಮೆಯನ್ನು ಮಾರಿ ಬಂದ ಹಣದಲ್ಲಿ ಅರ್ಧವನ್ನು ತಮ್ಮ ಊರ ದೇವತೆಯ ಹುಂಡಿಯಲ್ಲಿ ಹಾಕುವುದಾಗಿ ಹರಕೆ ಹೊತ್ತುಕೊಂಡ. ದೇವರು ಇವನು ಕೊಡುವ ರಿಷಿವತ್ತಿಗೊ ಎಂಬಂತೆ ಅವನ ಕಷ್ಟವನ್ನು ಬಗೆಹರಿಸಿದ. ಈಗ ಹರಕೆ ತೀರಿಸಬೇಕಾದ್ದು ಭಕ್ತನ ಪಾಳಿ. ಆಯ್ಯೋ, ಅಷ್ಟೊಂದು ದುಡ್ಡನ್ನು ದೇವರಿಗೆ ಕೊಡಬೇಕಲ್ಲ! ಅದು ಅವನ ಮನಸ್ಸಿಗೆ  ರುಚಿಸಲಿಲ್ಲ; ಆದರೆ ದೇವರ ಹರಕೆ ತೀರಿಸಲೇಬೇಕಲ್ಲ; ಕೊನೆಗಂದು ಉಪಾಯವನ್ನು ಹೂಡಿ ತನ್ನ ಹಾಲು ಕರೆಯುವ ಎಮ್ಮೆಯನ್ನು ಹಾಗು ಅದರ ಜೊತೆ ಒಂದು ಮುದಿ ಗೊಡ್ಡು ಹಸುವನ್ನೂ ಸಂತೆಗೆ ಹೊಡೆದುಕೊಂಡು ಹೋದ. ನಾಲ್ಕು ಮಂದಿ ಸೇರುವಲ್ಲಿ ಎಮ್ಮೆ ಮಾರಾಟಕ್ಕೆ ನಿಂತ. "ಬನ್ನಿ ಸ್ವಾಮಿ, ಬನ್ನಿ ಕೇವಲ ಒಂದೇ ಒಂದು ರೂಪಾಯಿಗೆ ಎಮ್ಮೆ" ಎಂದು ಕೂಗಿ ಕರೆಯಲಾರಂಭಿಸಿದ. ಕುತೂಹಲದಿಂದ ಜನ ಸೇರಲಾರಂಭಿಸಿದರು, ಏನಿದು ಒಂದೇ ಒಂದು ರೂಪಾಯಿಗೆ ಎಮ್ಮೆಯೇ? ಆಗ ಆ ಗೌಳಿ ಹೇಳಲಾರಂಭಿಸಿದ, ಈ ಎಮ್ಮೆಯನ್ನು ಒಂದೇ ಒಂದು ರೂಪಾಯಿಗೆ ಮಾರುತ್ತೇನೆ, ಆದರೆ ನನ್ನದು ಒಂದು ಷರತ್ತು, "ಈ ಎಮ್ಮೆಯನ್ನು ಕೊಂಡುಕೊಂಡವರು ಇದರ ಜೊತೆ ಇರುವ ಹಸುವನ್ನು ಸಾವಿರ ರೂಪಾಯಿಗಳಿಗೆ ಕೊಳ್ಳಬೇಕು". ಈ ಕರಾರನ್ನು ಕೇಳಿ ಬಹಳ ಮಂದಿ ಹಿಂತಿರುಗಿದರು. ಕಡೆಯಲ್ಲಿ ಒಬ್ಬ ಬಂದು ಹೇಳಿದ ಕ್ರಯಕ್ಕೆ ಹಸುವನ್ನು ಹಾಗು ಎಮ್ಮೆಯನ್ನು ಕೊಂಡುಕೊಂಡು ಹೋದ. ಆಗ ಈ ಮಹಾನ್ ಭಕ್ತ ಎಮ್ಮೆ ಮಾರಿ ಬಂದ ರೂಪಾಯಿಯಲ್ಲಿ ಪ್ರಾಮಾಣಿಕವಾಗಿ ಅರ್ಧ ರೂಪಾಯಿಯನ್ನು ದೇವರ ಹುಂಡಿಯಲ್ಲಿ ಹಾಕಿ ತನ್ನ ಹರಕೆಯನ್ನು ತೀರಿಸಿದ. ದೇವರು ತನ್ನ ಭಕ್ತನ ಬುದ್ಧಿವಂತಿಕೆಯನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಂಡ!

    ಹೀಗಿರುವಾಗ ನಮ್ಮ ಕನ್ನಡದ ದೇವರುಗಳಿಗೆ ಇನ್ನೆಲ್ಲಿಯ ಸಂಪತ್ತು ಆ ಗೌಡರ ಸ್ನೇಹಿತನ ಮಿತ್ರನ ಮಾತಿಗೆ ನಾವೆಲ್ಲಾ ಒಪ್ಪಲೇ ಬೇಕಲ್ಲವೇ?!!!!
 

Comments