ಇವರು ಮನುಜರು ಕಣ್ಲಾ ಸಿದ್ದಾ !

ಇವರು ಮನುಜರು ಕಣ್ಲಾ ಸಿದ್ದಾ !

ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಹಾಲು ಕುಡಿಯೋ ಕಂದನ್ನ ದೂರ ನೂಕಿ
ರಕ್ತ ಹೀರಿ ಹಾಲ ಎಳೆದು ಮಾರಿಕೊಳ್ಳೋ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಹುಳುವಿನ ದೇಹದಿಂದ ಎಳೆಯುತ್ತ ನೂಲು
ಸೊಂಟಕ್ಕೆ ಬಿಗಿದು ಮಡಿ ಎಂದು ಹಾರಾಡೋ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಪ್ರಾಣಿ ಹತ್ಯೆ ಪಾಪವೆಂದು, ಪ್ರಾಣಿ ಚರ್ಮದ
ಮೇಲೆ ಕೂತು, ಭೋಧನೆ ಮಾಡುವುದ ಆಲಿಸುವ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಕಾವಿ ಖಾದಿ ತೊಟ್ಟೋರ್ ಕೈಯಲ್ಲಿ
ಕಣ್ಣಿಗೆ ಮಂಕುಬೂದಿ ಎರಚಿಸಿಕೊಳ್ಳೋ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಇಂದಿರುವ ಬದುಕಿನ ಸುಖವ ನಲಿಯದೆ
ನಾಳಿನ ಸುಖವ ಕನಸಲ್ಲೇ ಕಾಣುವ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ತಮ್ಮ ಎಲೆ ಮ್ಯಾಲಿದ್ರೂ ನೆಗೆದ್ ಬಿದ್ದಿರೋ ಹೆಣ
ಕಣ್ತಾರೆ ಇನ್ನೊಬ್ಬರ ಎಲೆಯ ಸತ್ ಬಿದ್ ನೊಣ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ವಾಮಾಚಾರ, ಅತ್ಯಾಚರ, ಭ್ರಷ್ಟಾಚಾರವೆಂಬೋ
ಆಚಾರ ವಿಚಾರಗಳಲ್ಲೇ ಮುಳುಗಿರೋ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಡೊಳ್ಳ, ಕರಿಯ, ಎಂದಾಗ ಬ್ಯಾಸರ ಮಾಡಿಕೊಂಡು
ಗಣಪ, ಕೃಷ್ಣನ ವ್ಯಂಗದಿ ಸ್ತುತಿಸಿ ಅಡ್ಡ ಬೀಳೋ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಕಂದನ ನಗುವಿನಲ್ಲಿ ಕಾಣದೆ ಸುಖವ
ಕಂದಾಯ ಕಟ್ಟುವ ಚಿಂತೆಯಿಂದ ದುಖಿಸುವ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಪರನಿಂದೆ ಮಾಡುವ, ಪರರ ಹಣ ತನ್ನದೆನ್ನುವ
ಪರರ ಗೋರಿಯ ಮೇಲೆ ಮೆರೆಯುತ್ತ ಸೌಧ ಕಟ್ಟುವ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು

ಕಡೆಯದಾಗಿ ಇನ್ನೊಂದು ಮಾತು ಹೇಳ್ತೀನಿ
ಕಣ್ಲಾ ಸಿದ್ದ

ಹೊಸತನ್ನು ಹುಡುಕುವ, ಹಳೆಯದಕ್ಕೆ ಹೊಸ ಅರ್ಥ ನೀಡುವ
ಹೊಸ ಸಂಬಂಧ ಬಂದಾ ಮೇಲೆ ಹಳೆಯದನ್ನು ಮರೆಯುವ
ಇವರು ಮನುಜರು ಕಣ್ಲಾ ಸಿದ್ದಾ
ಇವರು ಮನುಜರು
 

Comments