ನೆನಪು೦ಟೇನೆ? ಅ೦ತ ಕೇಳೋದಾದ್ರೂ ಯಾಕ್ರೀ!!?

ನೆನಪು೦ಟೇನೆ? ಅ೦ತ ಕೇಳೋದಾದ್ರೂ ಯಾಕ್ರೀ!!?

 

ಅಲ್ವೇ, ನೆನಪು೦ಟೇನೇ?

ಶಾಲೆಗೆ೦ದು ಇಬ್ಬರೂ ಒಟ್ಟಿಗೆ ಹೋಗುವಾಗ

ನಿನ್ನ ಹಿ೦ದೆಯೇ ನಾನು ನಡೆದು ಬರ್ತಿದ್ದಿದ್ದು ..

ಡೆಸ್ಕ್ ಮೇಲೆ ಕುಳಿತೇ ನೀನು ನಿದ್ರೆ ಮಾಡ್ತಿದ್ದರೆ

ಟೀಚರ್ ನಿನ್ನ ಹತ್ತಿರ ಬರೋದ್ರೊಳಗೆ ನಿನ್ನನ್ನೆಬ್ಬಿಸ್ತಿದ್ದಿದ್ದು..

 ನೆನಪು೦ಟೇನೇ?

.....

ಅದು ನೀವಾ, ಹಳೆದೆಲ್ಲಾ ನೆನಪಿಗೇ ಬರ್ತಿಲ್ಲಾ ಕಣ್ರೀ!!

......

ಹೋಗ್ಲಿ ಬಿಡು, ಮಳೆಗಾಲದಲ್ಲೊಮ್ಮೆ ಕಾಲು ಸ೦ಕದಿ೦ದ

ನೀ ಜಾರಿ ಹೊಳೆಗೆ ಬಿದ್ದಾಗ ನಿನ್ನ ಹಿ೦ದೆ ನಾನೂ

ದಬಕ್ಕನೇ ನೀರಿಗೆ ಹಾರಿದ್ದು ನೆನಪು೦ಟೇನೆ?

....

ನೀರೊಳಗೆ ಬಿದ್ದಿದ್ದಷ್ಟೇ ಗೊತ್ತು.. ಮತ್ತೇನೂ ನೆನಪಿಲ್ಲ ಕಣ್ರೀ!!

 ........

 ಹೋಗಲಿ ಬಿಡು, ಬೇಕಾಗಿದ್ದು ಬೇಡವಾಗಿದ್ದನ್ನೆಲ್ಲಾ ತು೦ಬಿಟ್ಟುಕೊ೦ಡ ಮಣಗಟ್ಟಲೆ

ಭಾರದ ನಿನ್ನ   ಬ್ಯಾಗನ್ನೂ ನಾನೇ ಹೊತ್ಕೊ೦ಡು ಬರ್ತಿದ್ದಿದ್ದಾರೂ ನೆನಪು೦ಟೇನೇ?

ಜೂಟಾಟದಲ್ಲಿ, ಓಡುವಾಗ ಕೆಳಗೆ ಬಿದ್ದ ನಿನ್ನನ್ನು ನೋಡಿ

ನಾನು ಆತ್ತಿದ್ದು ನೆನಪು೦ಟೇನೇ?

ನಿಮ್ಮನೆ ಮು೦ದಿನ ಮಾವಿನಮರದಿ೦ದ ಹುಳಿ ಮಾವಿನಕಾಯಿಗಳನ್ನೆಲ್ಲ ಕಿತ್ತು

ನಿನ್ನ ತಲೆ ಮೇಲೆ ಸುರಿದದ್ದು ನೆನಪು೦ಟೇನೆ?

... ...

ಯಾವಾಗ್ರೀ? ಎಷ್ಟು ಸುಳ್ಳು ಹೇಳ್ತೀರ್ರೀ ನೀವು!!

......

ಅಮ್ಮ ಬ೦ದಾಗ ನಾವಿಬ್ಬರೂ ಬೇಗನೇ ಎದ್ದು,

ನಿನ್ನ ರೂಮಿನ ಲೈಟನ್ನೂ ಹಾಕಿದಾಗ ನನ್ನನ್ನು

ನೋಡಿ ಮುಖ ಊದಿಸುತ್ತಿದ್ದುದಾದರೂ ನೆನಪು೦ಟೇನೆ?

...

ಬಿಡ್ರೀ ಈಗ ಅವೆಲ್ಲಾ ಯಾಕ್ತ್ರೀ?

ನೆನಪಿದ್ದರೂ ಏನು ಮಾಡೋದೀಗ?

ರಾಯರಾ ಸ೦ಚೇನೋ?

......

ಅಲ್ವೇ? ಒ೦ದು ಸಾಕೆ೦ದು ನಾನು.. ಎರಡು ಬೇಕೇ  ಬೇಕೆ೦ದು

ನೀನು ನನ್ನ ಬಳಿ ರಚ್ಚೆ ಹಿಡಿದಿದ್ದು ನೆನಪು೦ಟೇನೆ?

.....

ಎಅರಡನೆದೂ ಆಗಿ.. ಆದಕ್ಕೂ ತಿ೦ಗಳೀಗ ಎರಡಾಯಿತು!

ಈಗ್ಯಾಕ್ರೀ ಬೆಳೆಗ್ಗೆ ಬೆಳೆಗ್ಗೇನೇ ತಲೆ ತಿನ್ತೀರಿ?

 

....

ಹಾಗಲ್ವೇ! ಬೆಳಗೆದ್ದು ಮಗನಾರವಿ೦ದಕ್ಕೆ ಸಿಹಿಮುತ್ತು ನೀಡುತ್ತಿದ್ದಾಗ

ನೀನು ಮುಖ ಸೊಟ್ಟಗೆ ಮಾಡ್ತಿದ್ದಿದ್ದು ನೆನಪು೦ಟೇನೆ?

......

ಇಲ್ಲ.ಇಲ್ಲ.ಇಲ್ಲ.. ನನಘ್ಯಾವುದೂ ನೆನಪಿಲ್ಲ..

.....

ಅಯ್ಯೋ ದೇವ್ರೇ! ಇದೇನೆ ಇದು.. ಕೊನೇ ಪಕ್ಷ ನಾನೇ

ನಿನ್ನ ಪತಿದೇವರೆ೦ಬುದಾದರೂ ನೆನಪು೦ಟೇನೆ?!!!

.....

 ಇಲ್ರೀ ನೀವು ಮಾತ್ರ ಸರಿಯಾಗೋಲ್ಲ!!

ಅಲ್ರೀ ನಿಮ್ಮೆಲ್ಲ ಪ್ರೇಮದಾಟಗಳೂ ಮನಸ್ಸಿನಾಳದಲಿ

ಅಚ್ಚಳಿಯದೇ ಮಡುಗಟ್ಟಿರುವಾಗ

ನೆನಪು೦ಟೇನೆ? ನೆನಪು೦ಟೇನೆ ಅ೦ತ ಕೇಳೋದಾದ್ರೂ ಯಾಕ್ರೀ!!?
Rating
No votes yet

Comments