ದೇವರು... ದೆವ್ವ... ಹಾಗು ನಾವೆಲ್ಲ...
ಶ್ರೀದರ ಹಾಗು ಮುರಳಿ ಚಿಕ್ಕಂದಿನಿಂದಲು ಸ್ನೇಹಿತರು. ಮುರಳಿ ಸ್ವಲ್ಪ ಮೆದುಸ್ವಭಾವವೆ ಚಿಕ್ಕಂದಿನಿಂದಲು ಯಾರು ಏನಂದರು ಬೇಗ ಮನಸಿಗೆ ತೆಗೆದುಕೊಳ್ಳುವ, ಚಿಕ್ಕ ಚಿಕ್ಕ ವಿಶಯಗಳನ್ನು ಚಿಂತಿಸುವನು. ಶ್ರೀದರನಾದರೊ ಸ್ವಲ್ಪ ವಿರುದ್ದವೆ ಏನನ್ನಾದರು ವಾದಮಾಡದೆ ಒಪ್ಪುವನಲ್ಲ , ಕೆಲವು ಸಾರಿ ತಾನು ತಪ್ಪು ವಾದಿಸುತ್ತಿರುವೆ ಎಂದು ಅರಿತ್ತಿದ್ದರು ಅದನ್ನೆ ಸಾದಿಸುವ, ಹಾಗಾಗಿ ’ಅರೊಗೆಂಟ್’ ಎಂದು ಬಿರುದು ಪಡೆದವ, ಜೊತೆಗೆ ಸ್ವಲ್ಪ ಕುಚೇಷ್ಟೆ ಜಾಸ್ತಿ. ಆದರೆ ಈ ವಿರುದ್ದ ಸ್ವಭಾವ ಇವರ ಸ್ನೇಹಕ್ಕೇನು ಬಾಧಕ ತಂದಿಲ್ಲ. ಈಗ ಇಬ್ಬರು ಎರಡನೆ ವರ್ಷ ಪಿಯುಸಿ. ಪರೀಕ್ಷೆಗೆ ಎರಡು ತಿಂಗಳು ಬಾಕಿಯಿದೆ, ಬೆಳಗಿನಿಂದ ಗಣಿತದ ಸಮಸ್ಯೆಗಳನ್ನು ಬಿಡಿಸುತ್ತಿದ್ದಾರೆ, ಒಂದು ಸಮಸ್ಯೆ ಇವರ ತಲೆ ತಿನ್ನುತ್ತಿದೆ. ಇವರಿಬ್ಬರ ಬುದ್ದಿಶಕ್ತಿಯೆಲ್ಲ ಬಳಸಿದರು , ಉತ್ತರ ದೊರಕಲಿಲ್ಲ, ಮುರಳಿ ಸ್ವಲ್ಪ ವ್ಯಾಕುಲನಾದ.
"ಎಷ್ಟೆ ಕಷ್ತ ಬಿದ್ದರು ಅಷ್ಟೆ ಬಿಡೊ , ನಮ್ಮ ಲೆವೆಲ್ ಇಷ್ಟೆ, ಅದೆ ಅ ಅನನ್ಯ ನೋಡು ಕ್ಲಾಸಿನಲ್ಲಿ ಹೇಗೆ ಮೆರೆಯುತ್ತಾನೆ, ಯಾವಾಗ ನೋಡಿದರು, ನೂರಕ್ಕೆ ನೂರು, ನಮ್ಮ ಹಣೆಬರಹ ಇಷ್ಟೆ ಆ ದೇವರು ಬರೆದಿರುವುದು"
"ಎಲ್ಲಕ್ಕು ಅ ದೇವರನ್ನು ತಂದರೆ ಹೇಗೆ,ನನಗಂತು ನಂಬಿಕೆಯಿಲ್ಲ, ಅವನು ಬುದ್ದಿಯಲ್ಲಿ ಸ್ವಲ್ಪ್ಲ ಚುರುಕಿರಬಹುದು, ಹಾಗಂತ ನಾವೇನು, ಡೆಸ್ಪರೇಟ್ ಆಗುವಂತಿಲ್ಲ, ದೇವರಿಗು ಇದಕ್ಕು ಏನು ಸಂಬಂದ, ಹೋಗಿ ಗಣಪತಿಗೆ ನೂರು ಕಾಯಿ ಹೊಡೆ ನೀನು ಚುರುಕಾಗಬಹುದು" ಅಂತ ಅಲಕ್ಷವಾಗಿ ನಕ್ಕ ಶ್ರೀದರ.
"ನಿನ್ನದು ಯಾವಾಗಲು ಇದೆ ವಾದ, ದೇವರನ್ನು ನಂಬಲ್ಲ ಅಂತ, ನಾನಂತು ದೇವರನ್ನು ನಂಬ್ತೀನಿ, ನಾನು ಎಷ್ಟೆ ಓದಿದರು, ಅವನ ಕರುಣೆಯಿಲ್ಲದೆ ನಾನು ಪಾಸಾಗಲ್ಲ"
"ನನಗೆ ಅದೆಲ್ಲ ಗೊತ್ತಿಲ್ಲ ನನ್ನ ಪ್ರಯತ್ನ ನಂಬುವನು ನಾನು, ದೇವರು ಅನ್ನುವುದು ಅವನ ಪವಾಡ ಅನ್ನುವುದು ಎಲ್ಲ ಸಾದ್ಯವಿಲ್ಲ, ನಂಬಿಕೆಯಿಂದ ಭ್ರಮೆ ಕವಿಯಬಹುದು, ಆದರೆ ಅನುಭವ ಅನ್ನುವದೆಲ್ಲ ನಂಬಕ್ಕಾಗಲ್ಲ" ಎಂದ ಶ್ರೀದರ.
"ಇರಬಹುದೇನೊ ಆದರೆ ಕೆಲವು ಘಟನೆಗಳನ್ನು ಕೇವಲ ಕಾಲ್ಪನಿಕ, ಆಕಸ್ಮಿಕ ಅಂತ ತಳ್ಳಿ ಹಾಕಲಾಗಲ್ಲ, ನಾನೆ ಒಂದು ಸಾರಿ ಅನುಭವಿಸಿದ್ದೇನೆ, ಖಂಡೀತ ಅದು ಕೋ-ಇನ್ಸಿಡೆನ್ಸ್ ಅಲ್ಲ " ಅಂದ ಮುರುಳಿ.
"ಅದೆಂತದಪ್ಪ ನಿನ್ನ ಅನುಭವ ಹೇಳು ನೋಡುವ?" ಅಂತ ಶ್ರೀದರ ಸವಾಲು ಹಾಕಿದ
"ಸರಿ ಹೇಳುತ್ತೇನೆ ನೀನು ನಂತರ ಗೇಲಿ ಮಾಡಬಾರದು" ಅಂತ ಹೇಳಿ ಪ್ರಾರಂಬಿಸಿದ.
-----------------------------------೧---------------------------------
ಅಪ್ಪ ಅಮ್ಮನ ಜೊತೆ ಶೃಂಗೇರಿ,ಹೊರನಾಡಿಗೆ ಹೋಗಿದೆ ಕೆಲವು ವರ್ಷದ ಹಿಂದೆ . ಅಲ್ಲಿಂದ ರಾತ್ರಿ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ಬೆಂಗಳೂರಿಗೆ ಹೊರಟೆವು. ಬಸ್ಸು ಅರಸಿಕೆರೆ, ತುಮಕೂರು ಮಾರ್ಗವಾಗಿ ಬರುತ್ತಿತ್ತು, ಸುಮಾರು ಬೆಳಗಿನ ಜಾವ ಮೂರು ಗಂಟೆ ಇರಬಹುದು, ಬಸ್ಸು ಗುಬ್ಬಿ ದಾಟಿತ್ತು, ಬಸ್ ಡ್ರೈವರ್ ಪೂರ್ಣವೇಗದಲ್ಲಿ ಓಡಿಸುತ್ತಿದ್ದ, ಸುಮಾರ ೮೦ ಕಿ.ಮಿ. ವೇಗದಲ್ಲಿ, ನನಗೆ ಎಕೊ ನಿದ್ದೆ ಬರದೆ ಎಚ್ಚರದಲ್ಲೆ ಇದ್ದೆ. ಬಸ್ಸು ಗುಬ್ಬಿ ತುಮಕೂರು ನಡುವೆ ಚಲಿಸುತ್ತಿತ್ತು, ಆ ಮುಖ್ಯ ರಸ್ತೆಯಿಂದ ಸುಮಾರು ೨ ಕಿ.ಮೀ ಒಳಗೆ ಮಣ್ಣಿನ ರಸ್ತೆಯಲ್ಲಿ ನಡೆದರೆ ನಮ್ಮ ಹಳ್ಳಿ ಸಿಗುತ್ತದೆ. ಅಲ್ಲಿ ನಮ್ಮ ಹಳ್ಳಿಯ ಗ್ರಾಮ ದೇವತೆ ದೇವಾಲಯವಿದೆ ಮಹಿಷಾಸುರಮರ್ದಿನಿಯದು, . ನಮ್ಮ ಅಜ್ಜಿ ಸದಾ ಹೇಳುತ್ತಿದ್ದರು, ಅವಳು ತುಂಬಾ ಶಕ್ತಿಶಾಲಿ ದೇವತೆ, ಕೇಳಿದ್ದು ನಡೆಸುವಳು ಅಂತ. ನನಗೆ ಏಕೆ ಅದು ಮನಸಿಗೆ ಬಂದಿತೊ ತಿಳಿಯದು, ಆ ದೇವರನ್ನು ಪರೀಕ್ಷಿಸುವ ಮನಸ್ಸು ರಾತ್ರಿ ಆ ಸಮಯದಲ್ಲಿ ನನಗೆ ಬಂದಿತು. ನನಗೆ ನಾನೆ ಹೇಳಿಕೊಂಡೆ " ಅಜ್ಜಿ ಹೇಳಿದಂತೆ ಆ ದೇವಿ , ನಿಜಕ್ಕು ಶಕ್ತಿವಂತಳಾದರೆ, ಹೇಳಿದ್ದನ್ನು ನಡೆಸುವಳಾದರೆ ವೇಗವಾಗಿ ಚಲಿಸುತ್ತಿರುವ ಈ ಬಸ್ಸನ್ನು ಡ್ರೈವರ್ ನಿಲ್ಲಿಸಲ್ಲಿ , ಯಾರು ಕೇಳದೆ" ಅಂತ ಅನ್ನುವ ಯೋಚನೆ ಮನಸಿಗೆ ಬಂದಿತು.
ಅದೇನು ಪವಾಡವೊ ನನ್ನ ಮನಸಿನಲ್ಲಿ ಬಸ್ಸು ನಿಲ್ಲಲ್ಲಿ ಅಂತ ಬರುತ್ತಿರುವಂತೆ, ಅದೇ ಕ್ಷಣದಲ್ಲಿ ವೇಗವಾಗಿ ಓಡುತ್ತಿದ್ದ ಬಸ್ಸಗೆ ಡ್ರೈವರ್ ಇದ್ದಕ್ಕಿದ್ದಂತೆ, ಬ್ರೇಕ್ ಹಾಕಿದ, ನಿದಾನವಾಗಿ ಎಡಕ್ಕೆ ತೆಗೆದುಕೊಂಡು, ಬಸ್ಸನ್ನು ನಿಲ್ಲಿಸಿದ. ನನಗೆ ಮೊದಲು ಮೂಡಿದ ಭಾವ ಭಯ. ನಾನೇಕೆ ಆ ಗ್ರಾಮದೇವತೆಯನ್ನು ಪರೀಕ್ಷೆ ಮಾಡಲು ಹೊರಟೆ ಅನ್ನಿಸಿತು. ಬಸ್ಸನ್ನು ನಿಲ್ಲಿಸಿದ ಡ್ರೈವರ್ , ಕೆಳಗಿಳಿದು, ಮರದ ಕೆಳಗೆ ಸಿಗರೇಟ್ ಸೇದುತ್ತ ನಿಂತ, ನನ್ನ ಮನಸ್ಸಿನಲ್ಲಿ ವಿವಿದ ಭಾವ ತಾಂಡವವಾಡುತ್ತಿತ್ತು. ಹತ್ತು ನಿಮಿಶ ಬಿಟ್ಟು ಬಸ್ಸು ಪುನಃ ಹೊರಟಿತು. ಅಂದು ನನಗೆ ನಿಜವಾಗಿ ದೇವರು ಮತ್ತು ಪವಾಡದ ಬಗ್ಗೆ ನಂಬಿಕೆ ಬಂದಿತು " ಅಂತ ಮುರಳಿ ತನ್ನ ಅನುಭವ ವಿವರಿಸಿ , ಶ್ರೀದರನ ಮುಖ ನೋಡಿದ. ಶ್ರೀದರ ಒಂದು ನಿಮಿಶ ಮೌನವಾಗಿದ್ದ.
"ನೀನು ಹೇಳಿದ ಘಟನೆಯನ್ನು ನಾನು ಇಲ್ಲ ಅನ್ನುವದಿಲ್ಲ, ಆದರೆ ಅದನ್ನು ನಿಜವಾಗಿ ದೇವರ ಪವಾಡ ಅಥವ ನಿಮ್ಮ ಗ್ರಾಮ ದೇವತೆಯಿಂದ ಪ್ರೇರಿತ ಘಟನೆ ಎಂದು ಒಪ್ಪಲಾಗುವದಿಲ್ಲ, ನಿಜಕ್ಕು ಅದು ನಿಜವಾದಲ್ಲಿ , ನೀನು ಕಡೆಯ ಪಕ್ಷ ಹತ್ತು ಸಾರಿ ಆ ರಸ್ತೆಯಲ್ಲಿ ಸಂಚರಿಸಬೇಕು , ಸಾದ್ಯವಾದಲ್ಲಿ ಅದೇ ಡ್ರೈವರ್ ಇರಬೇಕು, ಮತ್ತು ಹತ್ತು ಬಾರಿಯು ನೀನು ಕೇಳಿಕೊಂಡ ತಕ್ಷಣ ಬಸ್ಸು ಆ ರೀತಿ ನಿಲ್ಲ ಬೇಕು , ಆಗ ಮಾತ್ರ ನೀನು ಅಂದಂತೆ ಅದನ್ನು ಪವಾಡ ಅಂತ ಒಪ್ಪಲು ಸಾದ್ಯ ಇಲ್ಲದಿದ್ದಲ್ಲಿ ಅದು ಆಕಸ್ಮಿಕ ಘಟನೆಯಷ್ಟೆ" ಎಂದ ಶ್ರೀದರ. ಮುರಳಿಗೆ ರೇಗಿ ಹೋಗಿತ್ತು.
"ಹೋಗೊ ನೀನು ಎಲ್ಲವನ್ನು ಅಂಕೆ ಸಂಖ್ಯೆಗಳಿಂದ ನಿರ್ದರಿಸಲಾಗಲ್ಲ , ಇಲ್ಲಿ ನಮ್ಮ ನಂಬಿಕೆಯಷ್ಟೆ ಮುಖ್ಯ, ನೀನು ದೇವರನ್ನು ನಂಬಲ್ಲ ದೆವ್ವವನ್ನು ನಂಬಲ್ಲ ಅಂತವನು" ಅಂದ ಮುರಳಿ.
"ನೀನು ಹೇಳಿದ್ದು ನಿಜ ನೋಡು, ಅದು ನಿನ್ನ ನಂಬಿಕೆಯಷ್ಟೆ, ಅದರಿಂದಲೆ ಪವಾಡ ಘಟಿಸುವುದು ಸಾದ್ಯ, ನಾನು ದೇವರನ್ನು ನಂಬಲ್ಲ ಅಂತಿಯ ಆದ್ರೆ ದೆವ್ವ, ಮಾಟ ಮಂತ್ರಗಳನ್ನು ನಂಬ್ತೀನಿ" ಅಂದ ದೊಡ್ಡದಾಗಿ ನಗುತ್ತ ಶ್ರೀದರ.
"ಅಯ್ಯಯ್ಯೊ ಇದೇಗೆ ಸಾದ್ಯ ನೀನು ಮಾಟ ಮಂತ್ರವನ್ನೆಲ್ಲ ನಂಬೀಯ" ಅಂದ ಮುರಳಿ.
"ನಂಬೀನೊ ಬಿಡ್ತೀನೊ ಆದರೆ ನಿನಗೆ ಅದಕ್ಕೆ ಸಂಬಂದಪಟ್ಟ ಒಂದು ಘಟನೆ ಹೇಳಬೇಕು " ಅನ್ನುತ್ತ ಶ್ರೀದರ ಪ್ರಾರಂಬಿಸಿದ.
--------------------------------2--------------------------------------
"ನಾನಾಗ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿ , ಮನೆಯಲ್ಲಿದ್ದ ಸಮಯ. ದಿನ ತಡವಾಗಿ ಏಳುತ್ತಿದ್ದೆ. ಒಂದು ದಿನ ಇನ್ನು ಮಲಗಿರುವಾಗಲೆ ಪಕ್ಕದ ವೆಂಕಟಗಿರಿ ಗೌಡರ ಮನೆಯಲ್ಲಿ ಒಂದು ಪ್ರಹಸನ ನಡೆದಿತ್ತು. ನಮ್ಮ ಅಪ್ಪ ಅಮ್ಮ ಎಲ್ಲ ಎದ್ದವರೆ ಅಲ್ಲಿ ಓಡಿ ಹೋಗಿದ್ದರು, ಗೌಡರೆ ಬೆಳಗ್ಗೆ ಆರು ಘಂಟೆಗೆ ಬಂದು ಬಾಗಿಲು ತಟ್ಟಿ ಸ್ವಲ್ಲ ಬನ್ನಿ ಅಂತ ಗಾಭರಿಯಿಂದ ಕರೆದುಕೊಂಡು ಹೋಗಿದ್ದರು. ನಾನು ಕುತೂಹಲದಿಂದ ಎದ್ದು ಹೋದೆ. ಅಲ್ಲಿ ದೊಡ್ಡ ಭಯ ವ್ಯಾಪಿಸಿತ್ತು, ಕಳೆದ ರಾತ್ರಿ ಯಾರೊ ಅಪರಿಚಿತರು ಗೌಡರ ಮನೆಯ ಬಾಗಿಲಿನ ಮುಂದೆ ಸರಿಯಾಗಿ, ಕೆಂಪು ರಂಗವಲ್ಲಿಯ ಮಂಡಲ ಮಾಡಿ ಅದರ ಮೇಲೆ ಬಾಳೆಲೆ ಹರಡಿ ಅದರ ಮೇಲೆ ಅನ್ನ, ಇದ್ದಿಲ್ಲು, ರಕ್ತ, ತಾಮ್ರದ ತಾಯಿತ, ಕೆಂಪುಬಣ್ಣದಲ್ಲಿ ಬರೆದ ಬಿಳಿಯ ಹಾಳೆಯ ಪತ್ರ, ಎಲ್ಲ ಹಾಕಿದ್ದರು. ಗೌಡರಿಗೆ ಕಾಲುಗಳೆಲ್ಲ ನಡುಗುತ್ತಿದ್ದು ಕಾಣಿಸಿತು. ಕಡೆಗೆ ನಮ್ಮ ಅಪ್ಪನೆ ದೈರ್ಯವಾಗಿ ಹೋಗಿ ಪತ್ರವನ್ನು ತೆಗೆದು ಓದಿದರು. ಬಿಳಿಯ ಕಾಗದದ ಮೇಲೆ ರಕ್ತದಲ್ಲಿ ಸ್ವಷ್ಟವಾಗಿ ಬರೆದಿದ್ದು, " ವೆಂಕಟಗಿರಿ ಗೌಡ ನೀನು ಮೂರು ಪಕ್ಷ ಕಳೆಯುವದರಲ್ಲಿ ಸಾಯುತೀಯ" ಎಂದು. ನಮ್ಮ ತಂದೆಯವರ ಕಣ್ಣಿನಲ್ಲು ಗಾಬರಿ ಕಾಣಿಸಿತು. ಇದೆಲ್ಲ ನಂಬದ ನಾನು ಮಾತ್ರ ಹಗುರವಾಗಿಯೆ ಇದ್ದೆ, ಮನದಲ್ಲಿ ನಗು. ಕಡೆಗೆ ಎಲ್ಲರ ಸಲಹೆಯಂತ ಅದನೆಲ್ಲ ನೀರು ಹಾಕಿ ತೊಳೆಯಲಾಯಿತು.
ಗೌಡ ನಮ್ಮ ಮನೆಗೆ ಬಂದು ನಮ್ಮ ತಂದೆಯವರ ಹತ್ತಿರ ಕುಳಿತ ಮೊದಲಿನಿಂದ ಅವರಿಬ್ಬರಿ ಗಳಸ್ಯ, ಈಗ ಅವನಿಗೆ ನಮ್ಮ ತಂದೆ ಸಲಹೆ ಕೊಟ್ಟರು ಇದನ್ನು ಇಷ್ಟಕ್ಕೆ ಬಿಡಬೇಡ, ಮುಂದೆ ಹೇಗೊ ಏನೊ, ನನಗೆ ಗೊತ್ತಿರುವ ಒಬ್ಬರಿದ್ದಾರೆ, ಅವರ ಮೂಲಕ ಕೊಳ್ಳೆಗಾಲದ ಯಾರಾದರು ಮಾಂತ್ರಿಕರನ್ನು ಕರೆಸಿ ಕೇಳೋಣ, ಮಾಟ ಮಂತ್ರ ಅಂತ ಏನಾದರು ಇದ್ದರೆ ಪರಿಹಾರ ಸೂಚಿಸುತ್ತಾರೆ. ಹೆದರಿದ ಗೌಡನು ಒಪ್ಪಿಕೊಂಡ,
ಮುಂದಿನ ಬಾನುವಾರ ಅವರ ಮನೆಯಲ್ಲಿ ಕೊಳ್ಳೆಗಾಲದ ಆ ಮಂತ್ರವಾದಿಯಾರೊ ಬಂದಿಳಿದ, ಎಲ್ಲರು ಸೇರಿದರು, ಅವನು ಹೆಂಗಸರು ಮಕ್ಕಳು ಎಲ್ಲರು ಹೊರಗೋಗಿ ಅಂದ, ನಾನು ದೊಡ್ಡವನು ಅಲ್ಲ ಮಕ್ಕಳ ಕೂಟಕ್ಕು ಸೇರದವನು. ಮೊಂಡತನ ಮಾಡಿ ಅಲ್ಲಿಯೆ ನಿಂತೆ, ನಮ್ಮ ತಂದೆ ಮನೆಗೆ ಹೋಗೊ ಅಂದರು. ಆದರೆ ಮಂತ್ರವಾದಿಯೆ ನನ್ನ ಮುಖ ನೋಡಿದವನು ’ ಇದು ಗಂಡೆದೆ ಮಗ ಬಿಡಿ ಇಲ್ಲೆ ಇರಲಿ ’ ಅಂದು ಬಿಟ್ಟ ನಮ್ಮ ತಂದೆಯು ಸುಮ್ಮನಾದರು. ಅವನು ತನ್ನ ಪರಿಕರಗಳನ್ನೆಲ್ಲ ತೆಗೆದು ಕೂತ. ಅದೇನೊ ರಕ್ತಖೇಚರಿ ಯಂತೆ ಎನೇನೊ ಅದನ್ನು ಅವಾಹಿಸಿದ, ಕಡೆಗೆ ಹೇಳಿದ ಈ ಮನೆಯ ಮೇಲೆ ಮಾಟ ಪ್ರಯೋಗ ವಾಗಿದೆ, ನಾನೆ ತೋರಿಸುತ್ತೇನೆ, ಎಂದು ಕೈಯಲ್ಲಿ ಮಂತ್ರದಂಡ ಹಿಡಿದು ಹೊರಟ, ಮನೆಯ ಕಾಂಪೋಂಡಿನ ಮೂಲೆಯಲ್ಲಿದ ನಿಂಬೆ ಗಿಡದ ಹತ್ತಿರ ಹೋಗಿ ನಿಂತು ಅವನ ಶಿಷ್ಯನನ್ನು ಕರೆದು ಇಲ್ಲಿ ಅಗಿ ಅಂತ ಹೇಳಿದ.
ನಾನು ಕೈಯಲ್ಲಿ ಗುದ್ದಲಿ ಹಿಡಿದು ಸಹಾಯಕ್ಕೆ ನಿಂತೆ, ಒಂದು ಅಡಿ ಗುಂಡಿ ತೆಗೆದೆವು, ಮಣ್ಣನ್ನೆಲ್ಲ ಹೊರಗೆ ಹಾಕಿದೆ, ಆಗ ಮಂತ್ರವಾದಿ ಜೋರಾಗಿ " ಎಲ್ಲ ಇಲ್ಲಿ ನೋಡಿ ಯಾರು ಹೆದರಬಾರದು, ರಕ್ತ ಖೇಚರಿ ನಿಮ್ಮನ್ನು ಕಾಪಾಡುತ್ತದೆ, ಯಾರಿಗು ಏನು ಆಗದು ಎಂದ" ನಾನು ಅವನ ಮುಖ ನೋಡುತ್ತಿದ್ದೆ ಅಷ್ಟರಲ್ಲಿ ನನ್ನ ಪಕ್ಕ ಮಣ್ಣನ್ನು ಹೊರತೆಗೆಯುತ್ತಿದ್ದ ಅವನ ಶಿಷ್ಯ "ಬುದ್ದಿ ಇಲ್ಲಿ ಏನೊ ಅಯ್ತೆ " ಎಂದು ಮಣ್ಣಿನ ನಡುವೆ ಇದ್ದ, ಬಟ್ಟೆಯಲ್ಲಿ ಸುತ್ತಿದ್ದ, ಗಂಟನ್ನು ಹೊರತೆಗೆದ. ನನಗೆ ಆಶ್ಚರ್ಯ , ಇಲ್ಲಿವರೆಗು ಕಾಣದಿದ್ದ ಗಂಟು ಇದ್ದಕಿದ್ದಂತೆ ಪ್ರತ್ಯಕ್ಷವಾಗಿತ್ತು.
ಮಂತ್ರವಾದಿ ತಕ್ಷಣ " ಮಗಾ ನೀನು ಮುಟ್ಟಬಾಡ" ಎಂದು ನನಗೆ ಹೇಳಿ ನನ್ನನ್ನು ಎಬ್ಬಿಸಿ ಅವನೆ ಕುಳಿತ, ಅದನ್ನು ಬಿಚ್ಚಿ ನೋಡಿದರೆ ಬರಿ ಬೆಚ್ಚಿಬೀಳುವ ವಸ್ತುವೆ, ಮೂಳೆಯ ತುಂಡು, ಹಸಿ ರಕ್ತ, ಬಟ್ಟೆಯ ತುಂಡು, ಕೂದಲುಗಳು, ಬಟ್ಟೆಯಲ್ಲಿ ಮಾಡಿದ ಮುಳ್ಳು ಚುಚ್ಚಿದ ಬೊಂಗೆ ಇಂತವೆ. ಕಡೆಗೆ ಅವನ ಸಲಹೆಯಂತೆ ಎಲ್ಲವನ್ನು ಸುಟ್ಟುಹಾಕಿ ಒಳಗೆ ಬಂದರು.
ಪುನಃ ನಮ್ಮ ತಂದೆ, ಇದನ್ನು ಇಲ್ಲಿಗೆ ಬಿಡಬಾರದು, ಯಾರೊ ಮಾಟ ಮಾಡಿದ್ದಾರೊ ಅವರಿಗೆ ತಿರುಗಿಸಿಬಿಡಿ ಅಂದರು, ಮತ್ತು ಇದನ್ನು ಯಾರು ಮಾಡಿರಬಹುದು ಅಂತ ಆ ಮಂತ್ರವಾದಿಯನ್ನು ಕೇಳಿದರು. ನನಗೆ ಒಳಗೆ ಭಯ, ಅವನು ಇದನ್ನು ಗೌಡರ ಚಿಕ್ಕಪ್ಪನ ಕಡೆಯವರಾರೊ ಮಾಡಿಸಿದ್ದಾರೆ ಇದು ಭೂಮಿಗೆ ಸಂಬಂದಪಟ್ಟ ವಿಷಯ ಅಂತ ತಿಳಿಸಿದ. ಮೊದಲೆ ರಿಯಲ್ ಎಷ್ಟೇಟ್ ವ್ಯಾಪರ ಮಾಡುವ ಆ ಗೌಡ ಅದನ್ನು ನಂಬಿದ, ಅವನಿಗೆ ಅವನ ಚಿಕ್ಕಪ್ಪನ ಮಗ ರಾಮೆಗೌಡನ ಬಗ್ಗೆ ಅನುಮಾನ. ಕಡೆಗೆ ಮಾಟಮಾಡಿದವರಿಗೆ ಅದನ್ನು ತಿರುಗುಸುವುದು ಅಂತ ತೀರ್ಮಾನವಾಗಿ ಮಂತ್ರವಾದಿ ರಾತ್ರಿ ಕುಳಿತು , ಏನೇನೊ ಮಾಡಿದ, ಮನೆಗೆ ರಕ್ಷಣೆ ಮಾಡಿ, ನಂತರ ಕೆಲವು ವಸ್ತುಗಳನ್ನು ಗೌಡನಿಗೆ ಕೊಟ್ಟು, ಅದನ್ನು ಈ ರಾತ್ರಿಯೆ ಸ್ಮಶಾನಕ್ಕೆ ಹೋಗಿ ಅಲ್ಲಿ ನಾಲಕ್ಕು ದಿಕ್ಕಿಗು ನೆಲದಲ್ಲಿ ಮುಚ್ಚಿಟ್ಟುಬರಬೇಕೆಂದು ತಿಳಿಸಿದ. ಗೌಡನು ನಮ್ಮ ತಂದೆಯನ್ನು ಕರೆದುಕೊಂಡು, ಬೈಕಿನಲ್ಲಿ ಹೊರಟ , ನಾನು ಜೊತೆ ಬರುವನೆಂದರೆ ನಮ್ಮ ತಂದೆ ಬೇಡವೆಂದು ತಿಳಿಸಿ ಹೋದರು. ನಂತರ ಸಾಕಷ್ಟು ಹಣ ಪಡೆದ ಮಂತ್ರವಾದಿ, "ಮನೆಮುಂದೆ ಮಾಟ ಮಾಡಿಹಾಕಿದ್ದ ಆ ವ್ಯಕ್ತಿ ಮೂರು ಪಕ್ಷಕಳೆಯುವದರಲ್ಲಿ ಮಾಟದ ಪಲ ಅನುಭವಿಸುವನೆಂದು , ಕೈಕಾಲು ಕಳೆದುಕೊಂಡು, ನಿನ್ನ ಹತ್ತಿರವೆ ಬಂದು ಕ್ಷಮೆ ಕೇಳುವನೆಂದು ಗೌಡನಿಗೆ ತಿಳಿಸಿ ಹೊರಟುಹೋದ"
-------------------------------------3-------------------------------------
"ಇದಪ್ಪ ನಡೆದ ಘಟನೆ ನಂತರ ನಾನು ಮೂರು ಪಕ್ಷ ಒದ್ದಾಡಿ ಹೋದೆ, ನಂತರ ಆರು ತಿಂಗಳು ಕಳೆದರು ನನಗೆ ಏನಾಗಿ ಬಿಡುವುದೊ ಅಂತ ಭಯ ಆವರಿಸಿತ್ತು" ಅಂತ ನಿಲ್ಲಿಸಿದ ಶ್ರೀದರ.
ಮುರಳಿಗೆ ಆಶ್ಚರ್ಯ
"ಅಲ್ಲ ಅವನು ಯಾರಿಗೊ ಮಾಟ ಮಾಡಿದರೆ ನೀನೇಕೆ ಹೆದರಬೇಕು, ಮನೆ ಮುಂದೆ ಆ ವಸ್ತುಗಳನ್ನು ತಂದು ಹಾಕಿದವನಿಗೆ ತಾನೆ ಗೌಡ ಮಾಟ ಮಾಡಿದ್ದು" ಅಂದ.
"ಎಂತದೊ ಇಲ್ಲ ಅದನ್ನೆಲ್ಲ ಆ ಗೌಡನ ಮನೆಯ ಮುಂದೆ ಹಾಕಿದ್ದವನು ನಾನೆ, ಅವನು ಹೆದರಿ ಒದ್ದಾಡಲಿ ಅಂತ" ಎಂದ ಶ್ರೀದರ.
"ನೀನೆನ? ನಿನಗೇನು ಬಂತು, ನೀನು ಏಕೆ ಗೌಡನಿಗೆ ಮಾಟಮಾಡಿಸಿದೆ" ಎಂದು ಕೇಳಿದ ಮುರಳಿ
"ಮಾಟವು ಇಲ್ಲ ಎಂತದು ಇಲ್ಲ ನಾನೆ ಒಂದು ಎಲೆ ತಂದು ಮನೆಯಲ್ಲಿದ್ದ ಅನ್ನ, ಇದ್ದಿಲ್ಲು ತಾಮ್ರದ ಚೂರನ್ನು ಮಂಡಲ ಮಾಡಿ ಅವನ ಮನೆ ಬಾಗಿಲ ಹತ್ತಿರ ಇಟ್ಟುಬಂದಿದ್ದೆ" ಅಂದ ನಗುತ್ತ ಶ್ರೀದರ.
" ಆದರೆ ಏಕೆ ಪಾಪ ಅವನು ನಿನಗೇನು ಮಾಡಿದ" ಎಂದ ಮುರಳಿ
"ಮುರಳಿ ನಿನಗೆ ನೆನಪಿದೆಯ ನಾವಿಬ್ಬರು ಎಸ್ ಎಸ್ ಎಲ್ ಸಿ ಪರೀಕ್ಲ್ಶೆ ಇನ್ನು ಎಂಟುದಿನ ಇದೆ ಎನ್ನುವಾಗ , ಯಾರಿಗು ಹೇಳದೆ, ಹೃತಿಕ್ ರೋಶನ್ ನ್ ಹಿಂದಿ ಸಿನಿಮಾ ಬಂತು ಅಂತ ಹೋಗಿದ್ದೆವು. ಅದನ್ನು ಎಲ್ಲಿಯೋ ನೋಡಿದ್ದ ಈ ಗೌಡ ಮನೆಗೆ ಬಂದು ನಮ್ಮ ತಂದೆಯ ಹತ್ತಿರ ಬಂದು ಚಾಡಿ ಚುಚ್ಚಿದ್ದ, ನನಗೆ ಸಕ್ಕತ್ ಬೆಂಡ್ ಮನೆಯಲ್ಲಿ , ಸಿಕ್ಕಾಪಟ್ಟೆ ಕೋಪಬಂತು, ಪರೀಕ್ಷೆ ಮುಗಿದನಂತರ ವಿರಾಮವಾಗಿದ್ದೆ, ಆಗ ಆ ಗೌಡನನ್ನು ಸ್ವಲ್ಪ ಗೋಳಾಡಿಸೋಣ ಅಂತ ಹಾಗೆ ಮಾಡಿಬಿಟ್ಟೆ, ಆದರೆ ಯಾವಾಗ ನಮ್ಮ ತಂದೆಯೆ ನಿಂತು ಕೊಳ್ಳೆಗಾಲದ ಮಂತ್ರವಾದಿಯನ್ನು ಕರೆಸಿದರೊ ನಾನು ಹೆದರಿಹೋದೆ, ಇದೆಲ್ಲಿ ಗ್ರಾಚಾರ ಅಂತ, ಕಡೆಗೆ ವಿಷಯ ಗೊತ್ತಿಲ್ಲದ ನಮ್ಮ ಅಪ್ಪನೆ ಎದುರಿಗೆ ನಿಂತು ನನಗೆ ಮಾಟ ಮಾಡಿಸಿ ಅವರೆ ಸ್ಮಶಾನಕ್ಕೆ ಗೌಡನ ಜೊತೆ ಹೋಗಿ ಏನೊ ಹುಗಿದು ಬಂದರು. ಒಂದಾರು ತಿಂಗಳು ನನ್ನ ಮನಸಿನ ನೆಮ್ಮದಿಯೆ ತಪ್ಪಿ ಹೋಗಿತ್ತು, ಹಾಗಾಗಿಯೆ ಮೊದಲ ಪಿಯುಸಿಯಲ್ಲಿ ನಾನು ಬರಿ ನಲವತ್ತು ಪರ್ಸ್ನೆಂಟ್ . ಆಮೇಲೆ ದೈರ್ಯಬಂತು ಬಿಡು" ಅಂದ ಶ್ರೀದರ.
"ಅಯ್ಯೊ ಪಾಪಿ, ಕಡೆಗೆ ಅವರು ಮಾಟ ಮಾಡುವಾಗಲಾದರು ನಿಮ್ಮ ತಂದೆಯ ಹತ್ತಿರ ಹೇಳಬಹುದಿತ್ತಲ್ಲ ಹೀಗೆ ಅಂತ, ಎಂತ ಅಪಾಯಕ್ಕೆ ಸಿಕ್ಕಿದ್ದೆಯಲ್ಲೊ " ಅಂದ ಮುರಳಿ.
"ಅಷ್ಟೆ ನಾನಗ ಹೇಳಿದ್ದರೆ ನಮ್ಮ ಅಪ್ಪ ಬೆಲ್ಟ್ ಬಿಚ್ಚಿ ಬಾರಿಸಿಬಿಡುತ್ತಿದ್ದರು, ಆಮೇಲೆ ದೈರ್ಯ ಬಂತು ಬಿಡು, ಇದೆಲ್ಲ ನಾಟಕ ಅಂತ" ಎಂದ ಶ್ರೀದರ.
------------------------------ 4 -----------------------------------
ಹೀಗೆ ಅವರ ಮಾತೆಲ್ಲ ಮುಗಿದು ಪುನಃ ಅದೇ ಗಣಿತದ ಪ್ರಶ್ನೆಗೆ ಬಂದಿತು, ಮುರಳಿ
"ಅದೆಲ್ಲ ಆಯ್ತಲ್ಲ ಈಗ ಈ ಸಮಸ್ಯೆ ಹೇಳು ಯಾರು ಪರಿಹಾರ ಮಾಡುತ್ತಾರೆ " ಎಂದ. ಶ್ರೀದರ ಪಕ್ಕದಲ್ಲಿ ಮೊಬೈಲ್ ತೆಗೆದು ಡಯಾಲ್ ಮಾಡಿ ಕಿವಿಗೆ ಹಿಡಿದ , ಮುರಳಿ
"ಯಾರಿಗೊ ಪೋನ್" ಎಂದರೆ,
"ಅದೆ ಮ್ಯಾಥ್ಸ್ ಲೆಕ್ಚರರ ಕೆ.ಕೆ.ಎನ್ " ಗೆ ಎಂದ, ಮುರಳಿ ಗಾಭರಿಯಾಗಿ "ಅವರಿಗ್ಯಾಕೊ ಮಾಡ್ತಿ ಉಗುಸ್ಕಳ್ತಿಯ ಅಷ್ಟೆ"
"ಉಗಿಯಲಿ ಬಿಡು ನಮ್ಮ ಸಮಸ್ಯೆ ಪರಿಹಾರವಾಗಿಬಿಡಬೇಕು" ಎನ್ನುವದರಲ್ಲಿ ಆ ಕಡೆ ಅವರು ಬಂದರೇನೊ
"ಸಾರ್ ನಾನು ಶ್ರೀದರ, ಗಣಿತದ ಈ ಸಮಸ್ಯೆ ಬಿಡಿಸಲಾಗುತ್ತಿಲ್ಲ " ಎಂದು ಅವನು ಮಾತನಾಡುತ್ತಿರುವದನ್ನು ಕಣ್ಣಿಬಿಟ್ಟು ನೋಡುತ್ತ ಕುಳಿತ ಮುರಳಿ. ಶ್ರೀದರ ಮಾತು ಮುಗಿಸಿ , ಮೊಬೈಲ್ ಕೆಳಗಿಟ್ಟು
"ಅಯ್ತಲ್ಲ ಸಮಸ್ಯೆ ಪರಿಹಾರ " ಎಂದ, ಮುರಳಿ " ಅಂದರೆ ಹ್ಯಾಗೊ ಬಿಡಿಸೋದು ಅಂತ ತಿಳಿಸಿದರ, " ಎಂದ
"ಹಾಗಲ್ಲವೊ ಅದನ್ನು ಬಿಡಿಸೊ ಅವಶ್ಯಕತೆಯೆ ಇಲ್ಲ, ಅದು ಸಿಲಬಸ್ ಗೆ ಇಲ್ಲ, ಏನೇನೊ ಮಾಡುತ್ತ ಸಮಯ ವ್ಯರ್ಥ ಕಳೆಯಬೇಡಿ, ನಾನು ಕೊಟ್ಟಿರೊ ನೋಟ್ಸ್ ಮಾತ್ರ ನೋಡಿ ಸಾಕು ಎಂದರು" ಅಂತ ಶ್ರೀದರ ಸುಮ್ಮನಾದ.
----------------------------- 5 ---------------------------------
Comments
ಉ: ದೇವರು... ದೆವ್ವ... ಹಾಗು ನಾವೆಲ್ಲ...
ಉ: ದೇವರು... ದೆವ್ವ... ಹಾಗು ನಾವೆಲ್ಲ...
ಉ: ದೇವರು... ದೆವ್ವ... ಹಾಗು ನಾವೆಲ್ಲ...
ಉ: ದೇವರು... ದೆವ್ವ... ಹಾಗು ನಾವೆಲ್ಲ...
ಉ: ದೇವರು... ದೆವ್ವ... ಹಾಗು ನಾವೆಲ್ಲ...
In reply to ಉ: ದೇವರು... ದೆವ್ವ... ಹಾಗು ನಾವೆಲ್ಲ... by gururajkodkani
ಉ: ದೇವರು... ದೆವ್ವ... ಹಾಗು ನಾವೆಲ್ಲ...
In reply to ಉ: ದೇವರು... ದೆವ್ವ... ಹಾಗು ನಾವೆಲ್ಲ... by gururajkodkani
ಉ: ದೇವರು... ದೆವ್ವ... ಹಾಗು ನಾವೆಲ್ಲ...