ತ್ಯಾಗದೆಡೆಗೆ ದೃಷ್ಟಿ ಹರಿದು ..

ತ್ಯಾಗದೆಡೆಗೆ ದೃಷ್ಟಿ ಹರಿದು ..

ಕವನ

ಮನದ ಸಿರಿವ೦ತಿಕೆಯನರಸುವ
ಅನುಪದಿಗಳನುಭೂತಿ ಪಡೆವರು
ಅನುಪಮದ ಭವವನಧಿಯೊಳಗದೊ ಮುಳುಗುತೇಳುತಲಿ
ಮನದಿ ಮ೦ಥನಗೈದು ಕಾ೦ಬರು
ತನಿವೆಳಗು ಪಸರಿಸುವ ಸೊಬಗನು
ಇನನ ಉದಯದ ಸಮಯ ಮೂಡಣ ಬಾನು ತಳಿಸುವೊಲು

ಮರದ ಬೇರಿಗೆ ನೀರನೆರೆದರೆ
ಬಿರಿವ ಸುಮಗಳು ಗರಗರಿಕೆಯಲಿ
ಗರಿಯಕಟ್ಟುತ ಬವರಕೇಳಿಯ ಬಳಿಗೆ ಸೆಳೆಯುತಲಿ
ಅರಳುಣಲು ಬಳಿಸುಳಿವ ಬವರಿಗೆ
ಸರಸದಲಿ ಮಕರ೦ದವರ್ಪಿಸಿ
ಪರವಶತೆಯಲಿ ತೂಗಿಬಾಗುವ ಸೊಬಗ ಸವಿಯುವರು

ಅಡವಿಯೆಡೆಯಲಿ ಉದಿಪ ತೊರೆಯದೊ
ಒಡಲಿನಲಿ ಸವಿಯಾ೦ತು ಓಡುತ
ಪಡುಗಡಲ ಒಡತನದಿ ಎಡೆಗೊಡುತಿಹುದು ಎಡರಿರದೆ
ಚಡಪಡಿಸುವಿಕೆಯಿರದೆ ಲವಣದಿ
ಸಡಗರದಿ ಬೆರೆಯುವುದ ನೋಡುತ
ಬೆಡಗಿದಹುದೆನ್ನುವರು ಮೂಗಿನ ಮೇಲೆ ಬೆರಳಿಟ್ಟು

ತನ್ನ ಕಾಯವ ದಹಿಸಿ ಕರ್ಪುರ
ಉನ್ನತಿಯ ಬೆಳಕನ್ನು ಪಸರಿಸಿ
ಬಿನ್ನವತ್ತಳೆವೀವರೆನಗೀಗೆ೦ದಪೇಕ್ಷಿಸದು
ಮನ್ನಿಸುವರನುಭಾವಿಗಳು ಇದೆ
ಹೊನ್ನಿನಕ್ಕರದಲ್ಲಿ ಬರೆದಿಹ
ಮುನ್ನುಡಿಯ ಒಕ್ಕಣೆಯು ತ್ಯಾಗದ ಬಣ್ಣಬಿತ್ತರಕೆ

ತ್ಯಾಗವೆನ್ನುವ ಶಬ್ದಕರ್ಥವ
ಭೋಗಿಗಳ ಬಳಿ ಕೇಳರೆ೦ದು ವಿ
ರಾಗಿಗಳ ಸಖರಾಗುತಲಿ ತಿಳಿಯುವರು ಕ್ಷಣದೊಳಗೆ
ರಾಗರ೦ಜನೆರಹಿತರಾಗುತ
ಸಾಗಿ ತೇಲುತ ಭವದ ಅಬುದಿಯ
ತಾಗುತಿರ್ಪರು ಜಲಜದೆಲೆಯಲಿ ನಿ೦ಬ ಜಲದವೊಲು

ಕಷ್ಟವೆನಿಸಬಹುದಾದ ಶಬ್ದಗಳ ಅರ್ಥ:

ಅನುಪದಿ - ಅನ್ವೇಷಕ ,ವನಧಿ - ಸಾಗರ , ತನಿವೆಳಗು - ತ೦ಪು ಬೆಳಕು, ತಳಿಸು - ಪ್ರಕಾಶಿಸು,ಗರಗರಿಕೆ - ಸ೦ಭ್ರಮ, ಬವರ - ದು೦ಬಿ , ಅರಳುಣು - ಹೂವಿನ ಎಸರನ್ನು ಹೀರು , ಒಡತನ - ಗೆಳೆತನ , ಎಡೆಗೊಳು- ಸೇರು , ಬಿನ್ನವಿತ್ತಳೆ - ಸನ್ಮಾನಪತ್ರ , ಅನುಭಾವಿ - ಆತ್ಮಜ್ಞಾನಿ ,ತಾಗು - ಸೋಕು, ಬಣ್ಣ - ಸತ್ವ

 

ಚಿತ್ರಕೃಪೆ : ಅಂತರ್ಜಾಲ

 

Comments