ಹಾಗೆ ಸುಮ್ಮನೆ ಹಳೆಯ ನೆನಪು

ಹಾಗೆ ಸುಮ್ಮನೆ ಹಳೆಯ ನೆನಪು

 ತುಂಬಾ ದಿನದಿಂದ ಬರೆಯಬೇಕು ಎಂಬ ಮನಸ್ಸಿತ್ತು .ಆದರೆ ಬರೆಯಲು ಕುಳಿತರೆ ಪದಗಳೇ ಸಿಗುತ್ತಿಲ್ಲ .ಮನಸ್ಸಿನಲ್ಲಿ ಸಾಕಷ್ಟು ವಿಷಯಗಳಿವೆ ಹೇಳಿಕೊಳ್ಳಲು ಆದರೆ ಹೊರಬರುತ್ತಿಲ್ಲ ಯಾಕೆ ಎಂಬುದು ಇಂದಿಗೂ ಪ್ರಶ್ನೆ ಆಗಿಯೇ ಉಳಿದಿದೆ.

ಹಳೆಯ ನೆನಪುಗಳು ಒಮ್ಮೆಮ್ಮೆ ಹೀಗೆ ಕಾಡುತ್ತದೆ ಎಂದರೆ ಹೊರಬರುವುದೇ ಕಷ್ಟ .ದಿನಗಳು ಕ್ಷಣಗಳಂತೆ ಕಳೆಯುತ್ತಲೇ ಇದೆ.ಆದರೆ ಆ ನೆನಪುಗಳು ಕಣ್ಣೆದುರು ಸದಾ ಹಸಿರು.ನನಗಾಗ ಬಹುಷಃ ೫-೬ ವರ್ಷ ಇರಬಹುದು.ನನ್ನ ಅಪ್ಪ ನನ್ನನ್ನು ಮೊದಲ ಬಾರಿಗೆ ಶಾಲೆಗೆ ಕರೆದುಕೊಂಡು ಹೋಗಿದ್ದರು.ಶಾಲೆ ತಲುಪುವವರೆಗೂ ಅಪ್ಪನ ಉಪದೇಶ, ಅವರು ಅಕ್ಷರ ಹೇಳಿಕೊಡುತ್ತಾರೆ ಚೆನ್ನಾಗಿ ಕಲಿಯಬೇಕು ಎಂದು. ನಾನದಕ್ಕೆ ತಲೆಯಾಡಿಸಿ ಜೊತೆ ನಡೆದಿದ್ದೆ. ಮೊದಲ ದಿನ ಅಪ್ಪನ ಜೊತೆ ಹೋಗಿ ಅವರ ಜೊತೆಯೇ ಅಳುತ್ತ ಬಂದದ್ದಾಯಿತು.ನಾಳೆ ಖಂಡಿತ ಅಳುವುದಿಲ್ಲ ಎಂದಿದ್ದೆ.ಮತ್ತೆ ಮರುದಿನವೂ ಅದೇ ರಾಗ..ಹೀಗೆ ವಾರಗಳವರೆಗೆ ನೋಡಿದ ಅಪ್ಪ ಹೀಗೆ ಮಾಡಿದರೆ ಇವಳು ಶಾಲೆಗೇ ಹೋಗುವುದಿಲ್ಲ ಎಂದು ಜೊತೆಗೆ ಬರುವುದೇ ಬಿಟ್ಟುಬಿಟ್ಟರು . ಜೊತೆಗಾರರೊಂದಿಗೆ ಶಾಲೆಗೆ ಹೊರಟು ಶಾಲೆ ತಲುಪುವವರೆಗೆ ಸುಮ್ಮನೆ ಕುಳಿತಿದ್ದ ನಾನು ಮೇಷ್ಟ್ರು ಬಂದು ಮಾತನಾಡಿಸಿದ್ದೆ ಗೊಳೋ ಎಂದು ಅಳಲು ಪ್ರಾರಂಭಿಸಿದೆ.ಪಾಪ ಆ ಗುರುಗಳಿಗೆ ನನ್ನ ಅಳು ನೋಡಲಾಗಲಿಲ್ಲವೂ (ತಾಳಲಾಗಲಿಲ್ಲವೂ)
ಹೆದರಿಸಿ ನೋಡೋಣ ಎಂದು ಬೈದರೆ ನಾನು ತಿರುಗಿ "ನೀನ್ಯಾರು ನಂಗೆ ಬೈಯಲಿಕ್ಕೆ ನಮ್ಮಪ್ಪ ಬರ್ತಾರೆ ಇವಾಗ ಇರು ಹೇಳಿಕೊಡ್ತೀನಿ" ಎಂದು ಏಕವಚನದಲ್ಲೇ ಉತ್ತರಿಸಿದ್ದೆ.ಆಗ ನನಗೆ ಬೇರೆಯವರಿಗೆ ಬಹುವಚನ ಕೊಟ್ಟು ಮಾತನಾಡಿಸಬೇಕೆಂದು ತಿಳಿಯುತ್ತಿರಲಿಲ್ಲ.ಅದನ್ನು ರೂಡಿಸಿಕೊಳ್ಳಲು ತುಂಬಾ ದಿನಗಳೇ ತೆಗೆದುಕೊಂಡಿದ್ದೆ. ಈಗ ನೆನಪಿಸಿಕೊಂಡರೆ ನಗು ತರಿಸುತ್ತದೆ .

 

Comments