ಸುಬ್ಬ ಸಿಕ್ಕಿದ್ದ !!

ಸುಬ್ಬ ಸಿಕ್ಕಿದ್ದ !!

ಸುಬ್ಬ ಸಿಕ್ಕಿದ್ದ ... ಇದೇ ದೊಡ್ಡ ವಿಷಯ ... ಅವನನ್ನು ನೋಡಲು ಹೋಗಬೇಕು ....

ಮೊದಲಿಗೆ ’ಸಿಕ್ಕಿದ್ದ’ ಎಂಬ ಪದದ ವಿಶ್ಲೇಷಣೆ ಮಾಡೋಣ ... ನನ್ನ ಈ ವಿಶ್ಲೇಷಣೆಗಳು ತಲೆಹರಟೆ ಯೋಗ್ಯವೇ ಹೊರತು ಪ್ರಶಸ್ತಿಗೆ ಅರ್ಹವಾದುದಲ್ಲ ಅಂತ ನನಗೆ ಗೊತ್ತು ...

ಒಬ್ಬ ಆತ್ಮೀಯನನ್ನು ಭೇಟಿಯಾದರೆ ’ಸಿಕ್ಕಿದ್ದ’ ಅನ್ನಬಹುದು ... ಮನಸ್ಸಿಗೆ ಹತ್ತಿರವಾದವನು ಎದುರು ಬಂದಲ್ಲಿ ’ಸಿಕ್ಕಿದ್ದ’ ಎನ್ನಬಹುದು ... ಹೃದಯಕ್ಕೆ ಹತ್ತಿರವಾದವನು, (ಬನಿಯನ್ ರೀತಿ) ಕಣ್ಣಿಗೆ ಬಿದ್ದಾಗ ’ಸಿಕ್ಕಿದ್ದ’ ಎನ್ನಬಹುದು ...

ಆದರೆ ಇದಾವುದೂ ಸುಬ್ಬನಿಗೆ ಅನ್ವಯಿಸುವುದಿಲ್ಲ ... ಹಾಗಾದರೆ ’ಸಿಕ್ಕಿದ್ದ’ ಅಂತ ಯಾಕಯ್ಯ ಅಂದಿ ಅಂತೀರಾ? ನಾನು ಹೇಳಿದ್ದು "ಸುಬ್ಬ ಸಿಕ್ಕಿದ್ದ. ಅವನನ್ನು ನೋಡಲು ಹೋಗಬೇಕು" ಅಂದರೇ ... ಸುಬ್ಬ 'sick' ಇದ್ದ. ಅವನನ್ನು ನೋಡಲು ಹೋಗಬೇಕು ಅಂತ.

'sick' + ಇದ್ದ = ಸಿಕ್ಕಿದ್ದ. ಯಾವ ಸಂಧಿ - ಮೂಲೆ ಅಂತ ತಲೆ ಕೆಡಿಸಿಕೊಳ್ಳುವುದು ಬೇಕಿಲ್ಲ ...

ಈಗ ಪುನ: ಎಲ್ಲಿಂದ ಆರಂಭಿಸಿದ್ದೆನೋ ಅಲ್ಲಿಗೇ ಬರುತ್ತೇನೆ ...

ಸುಬ್ಬ 'sick' ಇದ್ದ. ಸುಬ್ಬ ಯಾಕೆ ಸಿಕ್ ಆದ ಎಂಬೋದು ಭಯಂಕರ ವಿಚಾರ. ಯಾಕೆ ಅಂದಿರಾ? ಕೇಳಿ ... ಸುಬ್ಬನನ್ನು ನೋಡಿದರೆ ಬೇರೆಯವರಿಗೆ ಹುಷಾರು ತಪ್ಪೋವಾಗ ಇವನಿಗೆ ಹುಷಾರು ಹೇಗೆ ತಪ್ಪಿತು ಅಂತ. ದೆವ್ವಕ್ಕೇ ಭೂತದ ಭಯವೇ? ಸದ್ಯಕ್ಕೆ, ಸುಬ್ಬನ ಹೆಂಡತಿ ಸುಬ್ಬಿ ಮತ್ತು ಮನೆ ಕೆಲಸದ ಚೆಲುವಿ, ಇಬ್ಬರು ಮಾತ್ರ ಹೆದರೋಲ್ಲ ಅಷ್ಟೇ!!!

ಸುಬ್ಬಿ ಏನೋ ಸರಿ .. ಮದುವೆಗೆ ಮುನ್ನ, ಸುಬ್ಬನನ್ನು ನೋಡುವ  ಶಾಸ್ತ್ರದ ಸಮಯದಲ್ಲಿ ಕರೆಂಟ್ ಹೋಗಿತ್ತು, ಸೈಜು ನೋಡಿ ಮಾತ್ರ ಮದುವೆಗೆ ಒಪ್ಪಿದ್ದಳು, ನಂತರ ಮದುವೆ ಮನೆಯಲ್ಲಿ ಅಂದರೆ ಕರೆಂಟ್ ಇದ್ದಾಗ, ನೋಡಿದಾಗ, ಕರೆಂಟ್ ಹೊಡೆದ ಕಾಗೆಯಂತೆ ಆಗಿದ್ದಳು ನಿಜ. ವಧು ದಕ್ಷಿಣೆ ಪಡೆದ ಮೇಲೆ ಎಲ್ಲ ಸರಿ ಹೋಯ್ತು .... 

ಆದರೆ ಈ ಮನೆ ಕೆಲಸದ ಚೆಲುವಿ ಹೇಗೆ ಹೊಂದಿಕೊಂಡಿದ್ದಳು?

ಅದೇನೋ ನನಗೂ ಗೊತ್ತಿಲ್ಲ .. ಆದರೆ, ಒಂದು ವಿಷಯ ನನಗೆ ಗೊತ್ತು. ಮನೆ ಕೆಲಸ ಮುಗಿಸಿ ಹೋಗೋ ಮುನ್ನ ಸುಬ್ಬ ಎಲ್ಲೇ ಇದ್ದರೂ (ಎಲ್ಲ ಅಂದರೆ ಎಲ್ಲವೂ ಅಲ್ಲ) ಹುಡುಕಿಕೊಂಡು ಹೋಗಿ, ’ನಾ ಹೋಗಿ ಬರ್ತೀನಿ ಸುಬ್ಬಣ್ಣ’ ಅಂತ ತಿಳಿಸಿಯೇ ಹೋಗುತ್ತಾಳೆ. ಆ ಸಮಯದಿ ಅವನು ಸಿಗಲಿಲ್ಲ ಅಂದರೆ, ತೊಳೆದ ಪಾತ್ರೆಯನ್ನೇ ಮತ್ತೊಮ್ಮೆ ತೊಳೆದು, ಕಾದು, ಹೇಳಿ ಹೋಗುತ್ತಾಳೆ !!!! ಊರಲ್ಲಿ ಇಲ್ಲದೇ ಹೋದಾಗ? ಅಂತ ರಾಗ ಎಳೀಬೇಡಿ ... ಅಂಥಾ ಘನಂಧಾರಿ ಕೆಲ್ಸ ಸುಬ್ಬನಿಗೆ ಎಂಥದ್ದೂ ಇಲ್ಲ ...

ಇರಲಿ, ಸುಬ್ಬಿ’ಗೆ ಈ ವಿಷಯ ಮುಸಿ ಮುಸಿ .. ಸುಬ್ಬನಿಗೆ ಕಸಿ ವಿಸಿ !! ಅವಳು ರಾಗವಾಗಿ ಹೇಳುವಾಗ ಎಲ್ಲವೂ ಚೆನ್ನಾಗಿತ್ತು ಅನ್ನುವಾಗಲೇ ’ಪಾಯಸದಲ್ಲಿ ಕಡ್ಡಿ ಸಿಗುವಂತೆ’ ಕೊನೆ ಪದ ಬರುತ್ತೆ ಚೆಲುವಿಯ ಬಾಯಲ್ಲಿ ... ಅದೇ ’ಸುಬ್ಬಣ್ಣ’ ಅಂತ ... ಅಲ್ಲೀವರೆಗೂ ಏನೇನೋ ಅಂದುಕೊಂಡ ಮನ ’ಅಣ್ಣ’ ಎಂದ ಕೂಡಲೆ ತನಗೆ ’ಸುಬ್ಬಣ್ಣ’ ಅಂತ ಹೆಸರು ಕೊಟ್ಟವರೆಲ್ಲರನ್ನೂ ಯಥಾಶಕ್ತಿ ಬೈದುಕೊಳ್ತಾನೆ ...

ಮತ್ತೆ, ವಿಷಯ ಎಲ್ಲೆಲ್ಲೋ ಹೋಗ್ತಿದೆ ... ಸುಬ್ಬ ಸಿಕ್ ಯಾಕಾದ ? ’ಭಯದಿಂದ ಕಣ್ರೀ ಭಯದಿಂದ’ ಅಂತ ನನ್ನ ಹೆಂಡತಿ ಮುಂದೆ ಪಕ್ಕದ ಮನೆ ರುಕ್ಮಿಣೀಬಾಯಿ ಕಾಂಪೌಂಡ್ ಹತ್ತಿರ ಕೇವಲ ತಲೆಯನ್ನು ಮಾತ್ರ ತಂದು ಹೇಳಿದ್ದು....

ಭಯ??? ಅಂಥದ್ದೇನಾಯ್ತು? ನನಗೆ ಅನ್ನಿಸಿದ್ದು ಹೇಳಿಬಿಡ್ತೀನಿ ಮೊದಲು ...

ನಿಮ್ಮ ಯೋಚನೆಯನ್ನು ಸ್ವಲ್ಪ ಹಿಂದೆ ತೆಗೆದುಕೊಂಡು ಹೋಗ್ತೀನಿ .... ನಾನು ಅತಿ ಮುತುವರ್ಜಿಯಿಂದ ಕಳಿಸುತ್ತಿದ್ದ ಈಮೈಲ್’ಗಳನ್ನು ಕೈಯ್ಯಾರೆ ’ಡಿಲೀಟ್’ ಕುಟ್ಟಿ ಟ್ರ್ಯಾಷ್’ಗೆ ತಳ್ಳುತ್ತಿದ್ದವನು, ಇದ್ದಕ್ಕಿದ್ದಂತೆ ಸಂಪದದ ಲೇಖನಗಳನ್ನು ಓದಿದ ಅಂತ ಹೇಳಿದ್ದೆ ... ನೆನಪಿದೆಯೇ?

ಅಂದ್ರೇ, ಲೇಖನಗಳನ್ನು ಓದಿ ಸಿಕ್ ಆದನೇ?

ಬೈಟ್ ಉಣಿಸೋ ಸರ್ವರ್’ಗೇ ವೈರಸ್ ಬಿಡೋ ಮಾತಿದು ...  ಉಪ್ಪು ತಿಂದ ಮನೆಗೆ ಎರಡು ಬಗೆಯೋ ವಿಷಯ ಗೊತ್ತೇ ಇದೆ. ಅದೇ ರೀತಿ ಇದು. ನನ್ನ ಬರಹಗಳನ್ನು ಸಂಪದದಲ್ಲಿ ಹಾಕಿ, ಅದಕ್ಕೆ ಕಮೆಂಟುಗಳನ್ನು ಪಡೆದು, ಅದೆಲ್ಲವನ್ನೂ ಸಂಪದ ಸರ್ವರ್’ನಲ್ಲಿ ಇರಿಸಿ, ಅದರ ಬಗ್ಗೇನೇ ಕೇವಲವಾಗಿ ಮಾತನಾಡಿದರೆ, ಮೆಚ್ಚನಾ ಪರಮಾತ್ನನು ... ಮೇಲ್ ಹೋದಾಗ ಕೊಚ್ಚುವನು !!!

ಲೇಖನ ಓದಿ ಭಯಗೊಂಡು ಸಿಕ್ ಆಗೋದು ಹೇಗೆ ? ಪಿತೃ ಪಕ್ಷದಲ್ಲಿ ಸಾಲು ಸಾಲಾಗಿ ದೆವ್ವ, ಭೂತ, ಮಾಟ, ಮಂತ್ರ, ಸ್ಮಶಾನ, ಬುರುಡೆ ನಾಟಿ, ಅಣ್ಣಿಗೇರಿ ಇತ್ಯಾದಿ ಅಂಶಗಳುಳ್ಳ ಲೇಖನಗಳನ್ನು ಓದಿ, ನಮ್ ತಾತನಾಣೆಗೂ ಅವನು ಸಿಕ್ ಆಗಿಲ್ಲ ಅಂತ ನನಗೆ ಖಂಡಿತ ಗೊತ್ತು ...

ಸದ್ಯ ಅವುಗಳನ್ನು ಬರೆದವರೆಲ್ಲ ಬದುಕಿದರು ಅಂದ್ರಾ? ಹೋಗ್ಲಿ ಬಿಡಿ. ಅಷ್ಟು ಖಡಾ ಖಂಡಿತವಾಗಿ ಹೇಗೆ ಹೇಳ್ತಿದ್ದೀನಿ ಅಂತೀರ?

ಹಿಂದೊಮ್ಮೆ ನಾನು ’ಅಮಾವಾಸ್ಯೆ’ ಅಂತ ಒಂದು ಕಥೆ ಬರೆದಿದ್ದೆ. ತ್ರಯೋದಶಿ ರಿಲೀಸ್ ಮಾಡಿದ ಆ ಲೇಖನದ ಟೈಟಲ್ ನೋಡಿಯೇ ಚತುರ್ದಶಿ ರಾತ್ರಿ ನಮ್ಮ ಮನೆಯಲ್ಲಿ ಉಳಿದುಕೊಂಡವನು ದ್ವಾದಶಿ ಪಾರಣೆ ಮಾಡಿಕೊಂಡು ತೊಲಗಿದ್ದ !!!!

ಇಂತಹ ಸುಬ್ಬ, ದೆವ್ವ ಭೂತಗಳ ಕಥೆ ಓದುತ್ತಾನೆಯೇ? ಇಲ್ಲ, ನನ್ನ ಯೋಚನೆ ತಪ್ಪು ... ಸದ್ಯದ ಪರಿಸ್ಥಿತಿಯಾದರೂ ಏನು? ಚೆಲುವಿ ಹೇಳೋ ಪ್ರಕಾರ, ಅವಳು ಎರಡು ದಿನದಿಂದ ಟಾಯ್ಲೆಟ್ ಬಾಗಿಲಲ್ಲೇ ನಿಂತುಕೊಂಡು ’ಹೋಗಿ ಬರ್ತೀನಿ’ ಅಂತ ಹೇಳ್ತಿದ್ದಾಳಂತೆ !!! ಇದು ಮಹಾ ಶೋಚನೀಯ !!!

ಅಂದ ಹಾಗೆ, ಸುಬ್ಬಿ is not available for any commentsಉ !!! ಸಂಪು, ಟ್ಯಾಂಕು, ಬಕೀಟು, ತಂಬಿಗೆ ಇತ್ಯಾದಿಗಳ ಉಸ್ತುವಾರಿಯಲ್ಲೇ ಅವಳ ಸಮಯ ವ್ಯಯ ಆಗುತ್ತಿದೆಯಂತೆ ... ಸಂಡಾಸ್ ಬಿಡುವಿಲ್ಲ ಅಂತ ಅವಳೇ ಪಕ್ಕದ ಮನೆಗೆ ಹೋಗುತ್ತಾಳಂತೆ ಪಾಪ !!! ಛೇ! ಇದಂತೂ ಅತ್ಯಂತ ಶೋಚನೀಯ !!!

ಹಾಗಿದ್ರೆ, ಸುಬ್ಬ ಸಿಕ್ ಯಾಕಾದ ಅನ್ನೋದೇ ಬಗೆ ಹರಿಯದ ಸಮಸ್ಯೆ ಆಗಿದೆ. ಒಳ್ಳೇ ವಿಚಾರ ಅಂದರೆ ಸಂಪದಕ್ಕೂ, ಲೇಖನಗಳಿಗೂ ಯಾವ ಸಂಬಂಧ ಇಲ್ಲ ಅಂತ ಆಯ್ತು ... ಒಂದೆರಡು ದಿನ ಕಳೀತು ... ಬರೀ ಸುಬ್ಬನ ಸಂಡಾಸ್ ಬಗ್ಗೇನೇ ಯೋಚನೆ ... ಅಯ್ಯೋ ಶಿವನೇ! ಇದೊಳ್ಳೇ ಗ್ರಹಚಾರ ... ಅವನ ಸಂಡಾಸ್ ಬಗ್ಗೆ ಅಲ್ಲ, ಅವನ ಆರೋಗ್ಯದ ಬಗ್ಗೆ ....

ನೆನ್ನೆ, ಕೊನೆಗೂ  ವಿಷಯ ತಿಳೀತು ಮಾರಾಯ್ರೇ !!!

ಸುಬ್ಬ ಮಡಿವಂತ ... ಭಯಂಕರ ಆಚಾರ ವಿಚಾರ ಮಾಡ್ತಾನೆ ನಮ್ ಸುಬ್ಬ ಅಂತ ಹೇಳಿ, ಏಕಾದಶಿ ಬಿಟ್ಟು, ಹೆಚ್ಚು ಕಮ್ಮಿ ಪಿತೃಪಕ್ಷದ ಎಲ್ಲ ದಿನ, ಜನರಿಂದ ಅವನಿಗೆ ಊಟ ಬುಕ್ ಆಗಿತ್ತಂತೆ !!

ಭಾದಪ್ರದ ಕೃಷ್ಣ ಪಕ್ಷದ ಹದಿನಾಲ್ಕು ದಿನಗಳಲ್ಲಿ ರೆಕಾರ್ಡ್ ಮಾಡಿದ್ದ !!

ಏನು ರೆಕಾರ್ಡು ಅಂತೀರಾ? ಕೇವಲ ಹದಿನಾಲ್ಕು ದಿನಗಳಲ್ಲಿ ಇನ್ನೂರು ಐವತ್ತ ನಾಲ್ಕು ವಡೆಗಳನ್ನು ತಿಂದು, ತನ್ನ ಜೀವಮಾನದಲ್ಲಿ ತಿಂದ ಒಟ್ಟು ವಡೆಗಳ ಸಂಖ್ಯೆಯನ್ನು ಇಪ್ಪತ್ತೈದು ಸಾವಿರ ದಾಟಿಸಿದ್ದ !!!!!!

ಮೊದಲೇ ಉದ್ದಿನಬೇಳೆ ... ಹೊಟ್ಟೆ ಕೈಕೊಡ್ತು ... ಮೊದಲೇ ಕೆಟ್ಟಿದ್ದ ಪರಿಸ್ಥಿತಿ, ಹದಗೆಟ್ಟಿದ್ದು ಅವನ ಬಾಮೈದನಿಂದ ... ಸುಬ್ಬನ ಬಾಮೈದ ಯಾವುದೋ ಔಷದಿ ಕೊಟ್ಟು ಸುಬ್ಬನನ್ನು ಎರಡು ದಿನ ಬಾಗಿಲ ಹಿಂದೆಯೇ ಇರುವಂತೆ ಮಾಡಿ ಪುಣ್ಯ ಕಟ್ಟಿಕೊಂಡಿದ್ದ !!!

ಇದು ನಮ್ಮ ಸುಬ್ಬ sick ಆದ ಎನ್ನೋ ವಿಷಯದ ಮೇಲೆ ನನ್ನ ತಲೆಗೆ ಸಿಕ್ಕ ಸಿಕ್ಕ ವಿಷಯವೆಲ್ಲ ನಿಮ್ಮ ಮುಂದೆ ಇಟ್ಟ ಸಿಕ್ಕು-ಸಿಕ್ಕಾದ ಕಥೆ ...

ಇದನ್ನು ಓದಿದ ನೀವು ಸಿಕ್ ಆಗದೆ ಇದ್ರೆ ಸಾಕ್ !!!

 

Comments