ತರಕಾರಿಯೇ ಅಲ್ಲದ ತರಕಾರಿಗಳು!(ಪ್ರಬಂಧ)

ತರಕಾರಿಯೇ ಅಲ್ಲದ ತರಕಾರಿಗಳು!(ಪ್ರಬಂಧ)

 

 

 

"ಇವತ್ ಊಟಕ್ಕೆ ಮ್ಯಾಲಾಗ್ರ ಬೇರೆಂತ ಇಲ್ಲೆ, ಬರೀ ಕಿಸ್ಕಾರ್ ಹೂವಿನ ತಂಬಳಿ" ಎಂದು ಅಮ್ಮಮ್ಮ ಉದ್ಗಾರ ತೆಗೆದರೆಂದರೆ, ಒಂದೋ ಆ ದಿನ ವಿಪರೀತ ಕೆಲಸದಿಂದಾಗಿ ಅಡುಗೆಗೆ ಸಮಯವಿರಲಿಲ್ಲ ಅಥವಾ ಮಾಮೂಲಿ ಉಪಯೋಗದ ತರಕಾರಿಗಳಾದ ಹಕ್ಲ್ ಸೌತೆ ಕಾಯಿ, ಬೆಂಡೆ ಕಾಯಿ, ಹೀರೆ ಕಾಯಿ ಇತ್ಯಾದಿಗಳು ಮನೆಯಲ್ಲಿಲ್ಲ ಎಂದೇ ಅರ್ಥ. ಸುತ್ತ ಮುತ್ತ ಹತ್ತೆಂಟು ಮೈಲಿಗಳ ಫಾಸಲೆಯಲ್ಲಿ ತರಕಾರಿ ಮಾರುವ ಅಂಗಡಿಗಳೇ ಇಲ್ಲದ ಆ ಕಾಲದಲ್ಲಿ, ದಿನ ನಿತ್ಯದ ಅಡುಗೆಗೆ ತರಕಾರಿಯನ್ನು ಅಂಗಡಿಯಿಂದ ತರುವ ವಿಚಾರವೇ ಯಾರ ಅರಿವಿನಲ್ಲೂ ಇರಲಿಲ್ಲ ಬಿಡಿ. ಅದರಲ್ಲೂ ಅಮ್ಮಮ್ಮನ ತರಕಾರಿ - ಅಡುಗೆಗಳ ಚಿಂತನೆಯು, ಅವರ ಬಾಲ್ಯದ ದಿನಗಳ, ಅಂದರೆ, ಕಳೆದ ಶತಮಾನದ ಮೊದಲ ಅರ್ಧದ ಪ್ರಭಾವಕ್ಕೆ ಒಳಗಾಗಿತ್ತು. ಪ್ರತಿದಿನದ ಅಡುಗೆಗೆ ತರಕಾರಿ ಇಲ್ಲ ಎಂದು ಅವರೆಂದೂ ಚಿಂತೆ ಮಾಡಿದವರೇ ಅಲ್ಲ, ಮನೆಯ ಸುತ್ತಲಿನ ಯಾವುದಾದರೂ "ವಸ್ತು" ವನ್ನು ಬಳಸಿ ಅಡುಗೆ ಮಾಡುವ ಪಾಕ ಪ್ರವೀಣರು ಅವರು ಮತ್ತು ಅವರ ತಲೆಮಾರಿನ ಎಲ್ಲರೂ.

 

ಕಿಸ್ಕಾರ್ ಗಿಡ ಎಂಬುದು ನಮ್ಮ ಮನೆಯ ಹಿಂದಿನ ಗುಡ್ಡಗಳಲ್ಲಿ ತನ್ನಷ್ಟಕ್ಕೇ ಬೆಳೆಯುತ್ತಲಿದ್ದ ಕುರುಚಲು ಗಿಡ (ಕೇಪ್ಳ, ಇಕ್ಸೋರಾ). ನಾಲ್ಕು ದಳದ ಪುಟ್ಟ ಪುಟ್ಟ ಕೆಂಪು ಹೂವುಗಳ ಗೊಂಚಲು - ಹೂವಿನ ಆಕಾರವೂ ಚಂದ - ಚಂದದ ನಾಲ್ಕು ಪುಟಾಣಿ ದಳಗಳಿಗೆ, ಅರ್ಧ ಇಂಚು ಉದ್ದದ ಪೈಪಿನಾಕಾರದ ಆಧಾರ; ಗೊಂಚಲು ಗೊಂಚಲಾಗಿ ಗಿಡದ ತುದಿಯಲ್ಲಿ ಹೂಬಿಡುತ್ತದೆ. ಬೆಳಗಿನ ಅಥವಾ ಸಂಜೆಯ ಬಿಸಿಲಿನಲ್ಲಿ ತುಂಬಾ ಚಂದದ ಗೊಂಚಲು ಅದು. ಒಂದಿಪ್ಪತ್ತು ಮೂವತ್ತು ಹೂವಿನ ಗೊಂಚಲುಗಳನ್ನು ಕಿತ್ತು ತಂದು, ಹದ ಮಾಡಿ, ತೆಂಗಿನ ಕಾಯಿ ತುರಿ ಮತ್ತು ಮೆಣಸಿನಕಾಯಿಜೊತೆ ಹುರಿದು, ತಿರುವಿದರೆ ತಂಬಳಿ ತಯಾರ್!

"ಕಿಸ್ಕಾರು ಹೂವು ಒಡಲಿಗೆ ಭಾರೀ ಒಳ್ಳೆಯದು. ವರ್ಷಕ್ಕೆ ಒಂದೆರಡು ಸರ್ತಿಯಾದರೂ ತಿನ್ಕ್" ಎನ್ನುತ್ತಾ, ಆ ಹೂವುಗಳ ತಂಬಳಿ ಮತ್ತು ಚಟ್ನಿಗಳನ್ನು ಆಗಾಗ ಮಾಡುತ್ತಿದ್ದರು. ಈ ರೀತಿ ವರ್ಷಕ್ಕೆ ಒಂದು ಬಾರಿಯಾದರೂ ತಿನ್ನಬೇಕು ಎಂಬ ನಂಬಿಕೆ ಹೊತ್ತಿದ್ದ ಹಲವಾರು ಸಸ್ಯೋತ್ಪನ್ನಗಳು ನಮ್ಮ ಹಳ್ಳಿಯಲ್ಲಿದ್ದವು! ಕಿಸ್ಕಾರ್ ಹೂವಿನ ಔಷಧೀಯ ಗುಣಗಳು ಯಾವುವೆಂಬುದು ನಮಗೆ ಸ್ಪಷ್ಟವಾಗಿ ಗೊತ್ತಿರಲಿಲ್ಲ; ಬಿಳಿ ಹೂವು ಬಿಡುವ ಪ್ರಬೇಧದ ಕಿಸ್ಕಾರು ಗಿಡಗಳು ಸ್ವಲ್ಪ ಕಡಿಮೆ ಸಂಖ್ಯೆಯಲ್ಲಿ ನಮ್ಮ ಹಳ್ಳಿಯಲ್ಲಿದ್ದವು - ಅದರ ಬೇರನ್ನು ನಾಟಿ ಔಷಧಿ ಪ್ರವೀಣರು ಸಂಗ್ರಹಿಸುತ್ತಿದ್ದದನ್ನು ನೋಡಿದ್ದೆವು. ಆ ರೀತಿ ಬಿಳಿ ಕಿಸ್ಕಾರು ಗಿಡಗಳ ಬೇರುಗಳನ್ನು ಔಷಧಿಗಾಗಿ ಕಿತ್ತು, ಕಿತ್ತು, ಬಿಳಿ ಹೂವು ಬಿಡುವ ಕಿಸ್ಕಾರು ಗಿಡಗಳು ನಮ್ಮ ಮನೆಯ ಸುತ್ತಲಿನ ಕಾಡುಗಳಿಂದ ಕಣ್ಮರೆಯಾಗಿ ಹೋಗಿದ್ದಂತೂ ದಿಟ.

"ಮಕ್ಕಳೇ, ಇವತ್ತು ನಿಮಗೆ ಒಂದ್ ಹೊಸಾ ತಿಂಡಿ ಮಾಡಿ ಕೊಡ್ತೆ, ಅಕ್ಕಾ?" ಎನ್ನುತ್ತಾ, ಅಮ್ಮಮ್ಮ ತಮ್ಮ ಕೆಂಪುಸೀರೆಯ ಸೆರಗಿನ ಮಡಿಲಲ್ಲಿ ಸಂಗ್ರಹಿಸಿ ತಂದಿದ್ದ ದೊಡ್ಡ ದೊಡ್ಡ ಹೂವುಗಳನ್ನು ಜಗಲಿಯ ನೆಲದ ಮೇಲೆ ಸುರಿದರು. ಕೆಳಗೆ ಬಿದ್ದದ್ದು ಹಳದಿ ಬಣ್ಣದ ಹತ್ತಾರು ಹೂವುಗಳೂ! "ಇದು ಎಂತ ಹೂವು?" "ಅಷ್ಟೂ ಗೊತ್ತಾತಿಲ್ಯಾ, ಇದು ಸೀಂ ಗುಂಬಳ ಹೂ, ಅದೇ ಎರಡುಮುಡಿ ಗದ್ದೆ ಅಂಚಿನಲ್ಲಿ ಬೆಳ್ಕಂಡಿತ್ತಲೆ, ಅದೇ" ಎನ್ನುತ್ತಾ, ಆ ಗುಂಬಳ ಹೂವುಗಳನ್ನು ಚೊಕ್ಕಟಮಾಡಿ, ಕತ್ತರಿಸತೊಡಗಿದರು. ಸಿಹಿ ಗುಂಬಳ ಬಳ್ಳಿಯಲ್ಲಿ ಗಂಡು ಹೂ, ಹೆಣ್ಣು ಹೂ ಎಂಬ ಎರಡು ತೆರನಾದ ಹೂ ಬಿಟ್ಟಿದ್ದನ್ನು ಗದ್ದೆ ಅಂಚಿನಲ್ಲಿ ದಿನಾ ನೋಡುತ್ತಿದ್ದೆವು. ಅವುಗಳಲ್ಲಿ ಗಂಡು ಹೂವುಗಳನ್ನು ಮಾತ್ರ ಆಯ್ದು ತಂದಿದ್ದರು. ಹೆಣ್ಣು ಹೂವುಗಳು ಕಾಯಿ ಬಿಡುವುದರಿಂದಾಗಿ, ಅವುಗಳನ್ನು ಕೊಯ್ದಿರಲಿಲ್ಲ.

ಅಕ್ಕಿಯನ್ನು ಮೆಣಸಿನ ಕಾಯಿ ಜೊತೆ ರುಬ್ಬಿ, ಗುಂಬಳ ಹೂವುಗಳನ್ನು ಸಣ್ಣದಾಗಿ ಹೆಚ್ಚಿ ಎರಡನ್ನೂ ಮಿಶ್ರಣ ಮಾಡಿ, ದೋಸೆಕಲ್ಲಿನಲ್ಲಿಟ್ಟು ಬೇಯಿಸಿದರು. ಅಮ್ಮಮ್ಮ ಅಂದು ತಯಾರಿಸಿದ "ಹೊಸ" ತಿಂಡಿ ಎಂದರೆ, "ಸೀಂ ಗುಂಬಳಹೂವಿನ ದೋಸೆ" ಅಥವಾ "ಸೀಂ ಗುಂಬಳ ಹೂವಿನ ಚಟ್ಟಿ". ನಾವು ಚಪ್ಪರಿಸಿ ತಿಂದೆವು - ಮಕ್ಕಳ ಬಾಯಿಗೆ ಎಲ್ಲಾ ತಿಂಡಿಗಳೂ ರುಚಿರುಚಿಯಾಗಿ ಕಾಣುತ್ತದೆಯೊ? ಇದೇ ರೀತಿ ಕೆಸುವಿನ ಎಲೆಯ ಚಟ್ಟಿ, ಹೀರೆ ಕಾಯಿ ಚಟ್ಟಿ, ಬದನೆಕಾಯಿ ಚಟ್ಟಿ ಮೊದಲಾದವುಗಳನ್ನು ತಯಾರಿಸುತ್ತಿದ್ದರು.

ಮಳೆಗಾಲದ ಒಂದು ದಿನ; ಆಗ ಮಳೆಗಾಲದಲ್ಲಿ ತರಕಾರಿಗಳಿಗೆ ತೀವ್ರ ಅಭಾವವಿತ್ತು. ಅಂದು ಊಟಕ್ಕೆ ಬಡಿಸಿದ್ದ ಪಲ್ಯ ಸ್ವಲ್ಪ ಗಟ್ಟಿ, ಸ್ವಲ್ಪ ಮೆದು, ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ ಸಪ್ಪೆಯಾಗಿತ್ತು! "ಇದೆಂತ ಪಲ್ಯ?" ಎಂದು, ಮುಖವನ್ನು ಒಂದು ರೀತಿ ಮಾಡಿಕೊಂಡು ಕೇಳಿದರೆ, "ನಿಮಗೆ ಮಕ್ಕಳಿಗೆ ಬಾಯಿರುಚಿ ಜಾಸ್ತಿ ಆಯ್ತು! ಆ ಪಲ್ಯ ತಿಂಬುಕೆ ಮುಖ ಎಂತಕೆ ವಾರೆ ಮಾಡ್ತೆ? ಈ ಮಳೆಗಾಲದಲ್ಲಿ ಬೇರೆಂತ ತರಕಾರಿ ಇತ್? ಅದು ಹಲಸಿನ ಮಗಡದ ಪಲ್ಯ, ಗೊತ್ತಾಯಿಲ್ಯಾ?" ಎಂದು ಸ್ವಲ್ಪ ಕಟುವಾಗಿ ನುಡಿದರು ಅಮ್ಮಮ್ಮ. ಹಲಸಿನ ಹಣ್ಣಿನ ತೊಳೆಯನ್ನು ಬಿಡಿಸಿದ ನಂತರ, ಅದರ ಮುಳ್ಳು ಮತ್ತು ತೊಳೆಯ ಮಧ್ಯದಲ್ಲಿರುವ ದಪ್ಪನೆಯ ಮೆದು ಭಾಗವೇ ಹಲಸಿನ ಮಗಡ. ಮುಳ್ಳನ್ನು ಬೇರ್ಪಡಿಸಿ, ಆ ಮೆದು ಭಾಗವನ್ನೇ ತರಕಾರಿಯ ರೀತಿ ಸಣ್ಣದಾಗಿ ಕತ್ತರಿಸಿ, ಪಲ್ಯ ಮಾಡುವ ಪರಿಪಾಠ. ಮುಖ್ಯವಾಗಿ, ಮಳೆಗಾಲದ ಜಿರಾಪತಿ ಮಳೆಗೆ ಬೆದರಿ, ಯಾವುದೇ ತರಕಾರಿಗಳೂ ಮನೆಸುತ್ತ ಬೆಳೆಯದೇ ಇದ್ದಾಗ, ಹಲಸಿನ ಮಗಡದಂತಹ ವಿಚಿತ್ರ ತರಕಾರಿಗಳು, ಅಡುಗೆ ಮನೆಯಲ್ಲಿ ಅಟ್ಟಿಸಿಕೊಂಡು, ಊಟದಲ್ಲಿ ವ್ಯಂಜನಗಳ ರೂಪದಲ್ಲಿ ಎಲೆಯ ಮೇಲೆ ಪ್ರತ್ಯಕ್ಷವಾಗುತ್ತವೆ!

ನಮ್ಮೂರಲ್ಲಿ ತಂಬಳಿ, ಚಟ್ನಿ ಮಾಡಲು ಚಿತ್ರವಿಚಿತ್ರ ಸಸ್ಯೋತ್ಪನ್ನಗಳ ಬಳಕೆಯಾಗುತ್ತಿತ್ತು. ನೇರಲೆ ಗಿಡದ ಎಳೆ ಎಲೆ(ನೇರಲೆ ಕುಡಿ), ಚಳ್ಳೆ(ಸಳ್ಳೆ) ಕುಡಿ, ಚಾರ್ ಕುಡಿ, ಕಾಕಿ ಎಲೆ ಕುಡಿ, ಇವೆಲ್ಲವುದರಿಂದ ತಂಬಳಿ ಮಾಡುತ್ತಿದ್ದರು. ಒಂದೆಲಗ, ಉರುಗ, ಚಕ್ರಮುನಿ ಎಲೆಗಳಿಂದ ತಂಬಳಿ ತಯಾರಿಸುವಂತೆಯೇ, ಯಾವ್ಯಾವುದೋ ಕಾಡುಗಿಡಗಳ ಎಲೆಗಳಿಂದ ತಂಬಳಿ ತಯಾರಿಸುತ್ತಿದ್ದರು. ಹೀರೇಕಾಯಿ ಸಿಪ್ಪೆಯು ಅಧಿಕೃತ ತರಕಾರಿ ರೂಪದಲ್ಲಿ, ಚಣ್ನಿ ತಯಾರಿಸಲು ಬಳಕೆಯಾಗುತ್ತಿತ್ತು. ಗುಂಬಳ ಸಿಪ್ಪೆ, ಗುಂಬಳ ಬೀಜದಿಂದಲೂ ಅಡುಗೆ ಪದಾರ್ಥ ತಯಾರಿಸುತ್ತಿದ್ದರೆಂದು ಕೇಳಿದ್ದೆನಾದರೂ, ನಮ್ಮ ಮನೆಯಲ್ಲಿ ಅದರ ಬಳಕೆ ಇರಲಿಲ್ಲ. ಬಾಳೆ ಮರದ ದಿಂಡಿನ ಒಳಭಾಗದ ಮೆದುವಾದ ಲಾಠಿಯಂತಹ ತಿರುಳಿನಿಂದ ಪಲ್ಯ ತಯಾರಿಸುತ್ತಿದ್ದರು. ಅದನ್ನು ಕತ್ತರಿಸಿದಾಗ, ಬಿಳೀಕೂದಲಿನಂತೆ ನಾರುಗಳ ರಾಶಿ ಕಾಣಿಸುತ್ತಿತ್ತು. "ಬಾಳೆ ದಿಂಡಿನ ಪಲ್ಯವನ್ನು ವರ್ಷಕ್ಕೆ ಒಂದು ಸಲವಾದರೂ ತಿನ್ಕ್, ಹೊಟ್ಟೆಯಲ್ಲಿ ಅಕಸ್ಮಾತ್ ಸೇರಿಹೋದ ಕೂದಲು ಅದರಿಂದ ಕರಗಿ ಹೋತ್" ಎನ್ನುತ್ತಿದ್ದರು ಅಮ್ಮಮ್ಮ. ಅದರ ಪಲ್ಯದ ರುಚಿ ಮಾತ್ರ ಅಷ್ಟಕ್ಕಷ್ಟೆ. ಬಾಳೆ ಹೂವಿನ ಚಟ್ನಿ ಮಾತ್ರ ಸಾಕಷ್ಟು ರುಚಿಕರವಾಗಿದ್ದು, ಔಷಧಿಯಾಗಿಯೂ ಉಪಯೋಗಿಸಲ್ಪಡುತ್ತಿತ್ತು.

ಬೇಲಿ ಸಾಲಿನಲ್ಲಿ ಬೆಳೆಯುವ ಒಂದು ಕಾಡುಬಳ್ಳಿಯಲ್ಲಿ ಬಿಡುತ್ತಿದ್ದ ಒಂದು ಅಡಿ ಉದ್ದದ ಕಾಯಿ ಅಥವ ಕೋಡನ್ನು ಸಹಾ ತರಕಾರಿಯಾಗಿ ಬಳಸುತ್ತಿದ್ದರು. ಅವರೆಕಾಯಿಯ ಮೆಗಾರೂಪ, ಮೆಗಾಗಾತ್ರ, ಒಂದಡಿ ಉದ್ದ, ಎರಡಿಂಚು ಅಗಲದ ಆ ಹಸಿರು ಕಾಯಿಯನ್ನು ಅವರೆಕಾಯಿ ಅಥವಾ ಶಂಬೆ ಕಾಯಿ ಎಂದು ಕರೆಯುತ್ತಿದ್ದರು. ಅದರ ಬೀಜಗಳೋ ಒಂದಿಂಚು ಉದ್ದನೆಯವು! ಅದನ್ನು ಕತ್ತರಿಸಿ ಪಲ್ಯ ಅಥವಾ ಹುಳಿ ಮಾಡುತ್ತಿದ್ದರೆಂದು ನೆನಪು - ಬೇಯಿಸಿದ ಆ ಕಾಯಿಯ ಮೇಲೋಗರವನ್ನು ತಿಂದರೆ, ನನಗಂತೂ ಮರದ ಚೂರುಗಳನ್ನು ತಿಂದ ಹಾಗಾಗುತ್ತಿತ್ತು! ಊಟಕ್ಕೆ ಅದು ಸೇರುವುದೇ ಇಲ್ಲವೆಂದು ನಾನು ಹಠ ಹಿಡಿದದ್ದರಿಂದ, ನಮ್ಮ ಮನೆಯಲ್ಲಿ ಅಡುಗೆಗಾಗಿ ಅದರ ಬಳಕೆ ಇರಲಿಲ್ಲ.

ಕ್ರಮೇಣ ನಮ್ಮ ಹಳ್ಳಿಯ ಅಂಗಡಿಗಳಲ್ಲಿ ತರಕಾರಿ ಮಾರುವ ಪದ್ದತಿ ಬಂತು ; ಮೊದಮೊದಲಿಗೆ, ಜೀನಸಿ ಅಂಗಡಿಗಳಲ್ಲಿ ಆಲೂಗಡ್ಡೆ, ನಂತರ ಟೊಮಾಟೊ, ಅಲಸಂದೆ, ಗುಳ್ಳ, ಬಣ್ಣದ ಸೌತೆ, ಸಾಂಬ್ರಾಣಿ ಗಡ್ಡೆ, ಗೆಣಸು - ಕ್ರಮೇಣ ಅಧಿಕೃತವಾಗಿ ತರಕಾರಿ ಅಂಗಡಿಯೇ ಆರಂಭವಾಯಿತು. ಆ ನಂತರ, ಈ ಚಿತ್ರವಿಚಿತ್ರ ತರಕಾರಿಗಳ ಬಳಕೆ ನಿಂತು ಹೋಯ್ತು. (ಚಿತ್ರಕೃಪೆ: ಎಂಜಿಆನ್ ಲೈನ್ ಸ್ಟೋರ್. ಕಾಮ್

 

 

 

ಮತ್ತು ಫ್ಲಿಕರ್.ಕಾಮ್)

Comments