ಪುಣ್ಯ- ಪಾಪ - ಪರಿಹಾರ

ಪುಣ್ಯ- ಪಾಪ - ಪರಿಹಾರ

ಶಿವ ಶಿವ ಎಂದರೆ ಭಯವಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
ಶಿವ ಭಕ್ತರಿಗೆ ನರಕವಿಲ್ಲ ........
ಏನೋ ತಿಮ್ಮಾ ಶಿವನ ಧ್ಯಾನ ಮಾಡುತ್ತಿದ್ದೀಯಲ್ಲಾ? ಏನು ವಿಶೇಷ?
ಈಗ ಶಿವನ ಧ್ಯಾನ ಮಾಡುವುದು ಒಂದೇ ದಾರಿ ಅಂತ ನಮ್ಮ ಗಣಿ ಧಣಿಗಳಿಗೆ ಹೇಳಿದ್ದಾರಂತೆ. ಹಿಂದೆ ಭೀಕರ ಕಷ್ಟಗಳನ್ನು ಎದುರಿಸಲಾಗದ ಅನೇಕ ಮಹಾನುಭಾವರು ಶಿವನ ಧ್ಯಾನ ಮಾಡಿದ್ದರಂತೆ.
ಹೌದೋ ಹಿಂದೆ ಅನೇಕ ರಾಕ್ಷಸರು ಶಿವನಿಂದ ವರಪಡೆದರೂ ಆಮೇಲೆ ಅವರೆಲ್ಲಾ ದೇವತೆಗಳಿಂದ ಹತರಾದರಲ್ಲಾ!?
ಏ ಶೀನ, ಶಿವ ರಾಕ್ಷಸರಿಗೆ ಮಾತ್ರ ವರ ಕೊಟ್ಟಿಲ್ಲ. ಶ್ರೀ ರಾಮ ದೇವರು ಮರಳಿನಲ್ಲಿ ಶಿವ ಲಿಂಗ ಮಾಡಿ ಅದನ್ನು ಪೂಜಿಸಿದ್ದರಿಂದಲೇ ರಾವಣನನ್ನು ಕೊಂದು ಸೀತೆಯನ್ನು ಹಿಂದೆ ಪಡೆಯಲು ಸಾಧ್ಯವಾಗಿದ್ದು ಗೊತ್ತಾ?
ತಿಮ್ಮಾ.. ಅದೆಲ್ಲಾ ಪುರಾಣವಾಯಿತು. ಗಣಿಧಣಿಗಳು ಶಿವನ ಪೂಜೆ ಮಾಡಿದರೆ ಅವರ ಪಾಪವೆಲ್ಲಾ ಪರಿಹಾರವಾಗಿ ಶಿಕ್ಷೆಯಿಂದ ಪಾರಾಗಬಹುದೇನೋ?
ಮತ್ತಿನ್ನೇನು... ಪರಿಹಾರವಾಗುತ್ತೆ ಎಂದು ಜ್ಯೋತಿಷಿಗಳು, ಬ್ರಾಹ್ಮಣರು ಹೇಳಿದ್ದಾರಲ್ಲಾ!?
ಚಿನ್ನದ, ವಜ್ರದ ಕಿರೀಟಗಳನ್ನು ದೇವಮಂದಿರಗಳಿಗೆ ಕೊಟ್ಟು, ಹೋಮ ಹವನ ಮಾಡಿದರೂ ಜೈಲಿನಲ್ಲಿ ಚಾಪೆಯ ಮೇಲೆ ಮಲಗುವುದು ತಪ್ಪಲಿಲ್ಲ. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂಬ ಮಾತು ಕೇಳಿಲ್ಲವೇನೋ?
ಹಾಗಾದರೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು, ದೇವರ ಪೂಜೆ ಮಾಡುವುದು ಉಪಯೋಗವಿಲ್ಲವೇನೊ?
ನಾನು ಹೇಳಿದ್ದು ಹಾಗಲ್ಲ. ಬರೀ ದೇವರ ಪೋಜೆ ಮಾಡುತ್ತಾ, ಮಠಮಂದಿರಗಳಿಗೆ ಅಲೆಯುತ್ತಾ, ಮಠಾಧಿಪತಿಗಳ ಕಾಲು ಹಿಡಿಯುತ್ತಾ, ಹೋಮ ಹವನ ಮಾಡುತ್ತಾ ಕಾಲ ಕಳೆಯುವ ಬದಲು ಇನ್ನಾದರೂ ವೈಭವದ ಜೀವನ ಬಿಟ್ಟು ಸರಳ ಜೀವನ ಮಾಡುತ್ತಾ ಜನರ ಸೇವೆ ಮಾಡಿದರೆ ಸ್ವಲ್ಪ ಪಾಪವಾದರೂ ಸವೆಯಬಹುದು ಅಂತ.
ಇದನ್ನೆಲ್ಲಾ ನೀನು ಹೇಳಿದರೆ ಏನು ಪ್ರಯೋಜನ? ನಿನ್ನ ಮಾತು ಗಣಿಧಣಿಗಳಿಗೆ ಕೇಳುತ್ತದೆಯೇನೋ?
ಅದು ನನಗೂ ಗೊತ್ತು. ಆದರೆ ತಿಳಿದವರು ಇಂತಹ ತಿಳುವಳಿಕೆ ನೀಡದೆ ಮತ್ತಷ್ಟು ಹೋಮ ಹವನ, ಪೂಜೆ ಎಂದು ಹಣ ಕೀಳುವುದನ್ನು ನೋಡಿದಾಗ ಬೇಸರವಾಗಿ ನನಗನ್ನಿಸಿದ್ದನ್ನು ಹೇಳಿದೆನಷ್ಟೆ...
ಹಾಗಾದರೆ ನಾವೀಗ ಹೀಗೆ ಹಾಡೋಣ
ಕಾಯಕವೇ ಕೈಲಾಸ ಕೇಳಿರಣ್ಣಾ......
ದುಡ್ದೇ ದೊಡ್ಡಪ್ಪನಲ್ಲ ತಿಳಿಯಿರಣ್ಣಾ....
ದೀನ ಬಡವರ ಸೇವೆ ಮಾಡಿರಣ್ಣಾ.....
ಅವರಲ್ಲೇ ದೇವರನ್ನು ಕಾಣಿರಣ್ಣಾ.....
ಅವರ ಸೇವೆಯಲ್ಲಿ ಸುಖವ ಕಾಣಿರಣ್ಣಾ.....

Comments