ಕಾರಂತಜ್ಜನ ನೆನಪುಗಳು
ಡಾ. ಕೋಟ ಶಿವರಾಮ ಕಾರಂತರು ನಮ್ಮ ನಡುವೆ ಬಾಳಿ ಬದುಕಿದ ಒಂದು ದೈತ್ಯ ಪ್ರತಿಭೆ. ನಡೆದಾಡುವ ವಿಷ್ವವಿದ್ಯಾಲಯ ಎನ್ನುವ ಅನ್ವರ್ಥ ನಾಮಕ್ಕೆ
ದಿಟವಾಗಿಯು ಅರ್ಹರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಸಾಹಿತ್ಯದಲ್ಲಿ ಕೈಯಾಡಿಸದ ವಿಭಾಗವೇ ಇಲ್ಲವೆನ್ನಬಹುದು ಕತೆ , ಕಾದಂಬರಿ, ನಾಟಕ, ಗೀತರೂಪಕ, ಯಕ್ಷಗಾನ, ಪ್ರವಾಸ ಕಥನ,ಚಿಂತನೆ, ಆತ್ಮಚರಿತ್ರೆ,ಮಕ್ಕಳ ಸಾಹಿತ್ಯ, ಚಿತ್ರಕಲೆ ಇತ್ಯಾದಿ ಪ್ರಕಾರಗಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ.
ಕಡಲ ತಡಿಯ ಭಾರ್ಗವರೆಂದು ಪ್ರಸಿದ್ಧರಾದ ಕಾರಂತರು ಜನಿಸಿದ್ದು ೧೯೦೨ರ ಅಕ್ಟೋಬರ್ ೧೦ರಂದು. ೯೬ ವರ್ಷ ಸಾರ್ಥಕ ಜೀವನ ನಡೆಸಿದ್ದ ಕಾರಂತರು ಮರಣ ಹೊಂದಿದ್ದು ೧೯೯೭ರ ದಶಂಬರ್ ೯ರಂದು. ನುಡಿದಂತೆ ನಡೆದ ಕಾರಂತರು ತಮ್ಮ ಕೃತಿಗಳ ಮೂಲಕ ಇನ್ನೂ ನಮ್ಮ ನಡುವೆ ಜೀವಂತವಾಗಿದ್ದಾರೆ.
ಅವರ ಕೃತಿಗಳಲ್ಲಿರುವ ಕೆಲವು ಸಾಲುಗಳು ಸದಾ ನನ್ನ ನೆನಪಿನಲ್ಲಿದ್ದು ಮನಕ್ಕೆ ಮುದನೀಡುತ್ತಿರುತ್ತವೆ. ಅಂತಹ ಕೆಲವು ತುಣುಕುಗಳನ್ನು ಅವರ ಜನ್ಮ ದಿನದ ಪ್ರಯುಕ್ತ ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಬರೆದಿದ್ದೇನೆ.
ಬಾಳ್ವೆಯೇ ಬೆಳಕು:- ೧)ಯಾವುದೋ ಕಾಲದಲ್ಲಿ, ಯವುದೋ ಸಂಸ್ಕೃತಿಯಲ್ಲಿ ಬೆಳೆದ, ಯಾವುದೋ ವ್ಯಕ್ತಿಗಳು ತಮ್ಮ ಅನುಭವ, ತಿಳುವುಗಳಿಂದ ಮಾಡಿದ ತೀರ್ಮಾನಗಳು ಎಲ್ಲಾ ಕಾಲದ ಜನರಿಗೂ, ಎಲ್ಲಾ ಬಗೆಯ ಜನರಿಗೂ ಒಪ್ಪಿತವಾದವೇ? ನಾವು ಅಂಧಾನುಕರಣೆಯಿಂದ ಒಪ್ಪಿದರೂ ಆ ಒಪ್ಪಿಗೆಯಿಂದ ತಮ್ಮ ಅನುಭವ ಹಿಗ್ಗೀತೇ? ಯಾವೊಬ್ಬನ ಜೀವನದ ತೀರ್ಮಾನ ಇನ್ನೊಬ್ಬನ ಬದುಕಿನ ತೀರ್ಮಾನವಾಗಲಾರದು. ಎಲ್ಲ ಬಗೆಯ ಜನಗಳಿಗೂ, ಬಾಳ್ವೆಗಳಿಗೂ ಒಂದೇ ಉತ್ತರ ನ್ಯಾಯವಾಗಲಾರದು.
೨) ಯಾವಾತನು ತಾನು ಚೆನ್ನಾಗಿ ಬದುಕಿದ್ದೇನೆ ಎಂದು ಧೈರ್ಯಪಡಬಲ್ಲನೋ, ಅವನು ಸಾವಿಗೆ ಅಂಜುವುದಿಲ್ಲ. ಚೆನ್ನಾಗಿ ಬದುಕಿದವನು ಸಾವನ್ನೂ ಸಹ ಸಹಜವಾಗಿ ತಿಳಿಯುತ್ತಾನೆ.
೩) ಜೀವನವೆಂಬುದು ಅನುಭವಗಳ ಹಿರಿಯ ಸಂತೆ. ಆ ಅನುಭವಗಳನ್ನು ಹೊಂದಿಕೊಂಡು ನಮ್ಮ ಬಾಳ್ವೆ ಸಾಗಬೇಕು. ಕಂಡ ಸ್ವಲ್ಪ ಬಾಳ್ವೆ(ಇಹ) ನೀರಸವೂ,ಅಲ್ಪವೆಂದೂ, ಕಾಣದ್ದು(ಪರ) ಸರಳವೂ, ಹಿರಿದೂ ಎಂದು ತಿಳಿಯಬಾರದು ಅಂದರೆ ತಿಳಿದುದು ತಿಳಿಯದುದಕ್ಕಿಂತ ಮೇಲು ಎಂದು ತಿಳಿಯಬೇಕು.
ಮೂಕಜ್ಜಿಯ ಕನಸುಗಳು:- ೧) ಅಯ್ಯೋ ದೇವರೇ ಕಾಪಾಡು, ಅದನ್ನು ಕೊಡು ಇದನ್ನು ಕೊಡು ಎಂದು ನನಗೆ ಅನಿಸಿದ್ದೇ ಇಲ್ಲ. ಎಂದೆಂದೂ ಯಾವುದನ್ನೂ ಬೇಡಬೇಕು ಎಂದು ನನಗೆ ಅನಿಸುವುದಿಲ್ಲ. ಬೇಡುವುದೇ? ಛೀ.. ಹೈಲು ಕೆಲಸ. ನೀರು,ನೆಲ, ಬೆಂಕಿ,ಬಾನುಗಳನ್ನು ಕೊಟ್ಟವನ ಹತ್ತಿರ, ಜೀವನವನ್ನೇ ಕೊಟ್ಟವನ ಹತ್ತಿರ ಯಾವತ್ತೂ ಅದನ್ನು ಕೊಡು ಇದನ್ನು ಕೊಡು ಎಂದು ಬೇಡಿದರೆ ನಮಗೆ ಬುದ್ಧಿ ಉಂಟು ಎಂದ ಹಾಗಾಯಿತೇ?
೨) ದುಷ್ಟರ ನಾಶಕ್ಕೆ ದೇವರು ಅವತಾರವನ್ನು ಎತ್ತಬೇಕೆ? ಒಂದು ಎಲೆ ಉದುರಿಸಿಕೊಳ್ಳಲಿಕ್ಕೆ ಮರಕ್ಕೆ ಮರವೇ ಕುಣಿಯುವುದನ್ನು ಕಂಡಿದ್ದೇಯಾ? ಅವನೇ ಹುಟ್ಟಿಸಿದಂಥ ಒಂದು ಹುಳುವನ್ನು ಕೊಲ್ಲಲಿಕ್ಕೆ ಒಂದು ಅವತಾರ ಬೇಕೇ? ರಾವಣನನ್ನು ಕೊಲ್ಲುವುದಕ್ಕೆ ರಾಮನ ಅವತಾರ ಎಂದಿಟ್ಟಿಕೋ. ಅವನ ಬಗ್ಗೆ ದೂರು ಬಂದದ್ದು ಯಾವಾಗ? ದೂರು ಕೊಟ್ಟೊಡನೆ ಅವನನ್ನು ಕೊಲ್ಲದೆ ಬಿಡುವುದು ಏಕೆ? ಇದು ನನ್ನ ಬುದ್ದಿಗೆ ಯದ್ವಾ ತದ್ವಾ ಆಗಿ ಕಾಣಿಸುತ್ತದೆ. ಯಾರನ್ನು ನಾಶಮಾಡಲಿಕ್ಕಾದರೂ ಈ ಮನುಷ್ಯ ರೂಪವನ್ನೋ,ಮತ್ತೊಂದನ್ನೋ ತಾಳಬೇಕು ಏಕೆ? ಒಂದು ಸಿಡಿಲನ್ನೆಗಿಸಿದರೆ ಬೇಕಾದ್ದನ್ನು ಸುಡಬಹುದು. ಅದಕ್ಕೆ ಅವತಾರದ ನಾಟಕ ಬೇಕೇ? ಇದೆಲ್ಲಾ ಆದದ್ದು ಅವನನ್ನು ಕಾಣುವ ನಾವು ಸಾವಿರ ಮಂದಿ ಸಾವಿರ ಬುದ್ಧಿಯವರಾದ್ದರಿಂದ. ಅವನು ಒಬ್ಬನೇ ಸಾವಿರ ಆದದ್ದು ನಮ್ಮಿಂದ. ಸಾವಿರ ಜನಗಳ ಕಣ್ಣು ಕಂಡ ಮಾತ್ರಕ್ಕೇನೆ ಒಂದು ಆಕಾಶ ಸಾವಿರ ಆಗುತ್ತದೆಯೇ? ಅಷ್ಟೇ ಹುಚ್ಹು ಇದು.
ಇಂತಹ ಅನೇಕ ವಾಕ್ಯಗಳು ಕಾರಂತರ ಎಲ್ಲ ಕೃತಿಗಳಲ್ಲೂ ನಾವು ಕಾಣಬಹುದು. ಅವರ ಜೀವನ ಪ್ರೀತಿ ಅಂತಹುದು.ಇಳಿವಯಸ್ಸಿನಲ್ಲೂ ಕಾಲಿಗೆ ಗೆಜ್ಜೆಕಟ್ಟಿ ಕುಣಿದ ಕಾರಂತರ ಅದಮ್ಯ ಉತ್ಸಾಹ ನನಗೆ ಸದಾ ಮಾರ್ಗದರ್ಶನವಾಗಿದೆ.
Comments
ಉ: ಕಾರಂತಜ್ಜನ ನೆನಪುಗಳು
ಉ: ಕಾರಂತಜ್ಜನ ನೆನಪುಗಳು
ಉ: ಕಾರಂತಜ್ಜನ ನೆನಪುಗಳು
In reply to ಉ: ಕಾರಂತಜ್ಜನ ನೆನಪುಗಳು by H A Patil
ಉ: ಕಾರಂತಜ್ಜನ ನೆನಪುಗಳು
ಉ: ಕಾರಂತಜ್ಜನ ನೆನಪುಗಳು
ಉ: ಕಾರಂತಜ್ಜನ ನೆನಪುಗಳು
ಉ: ಕಾರಂತಜ್ಜನ ನೆನಪುಗಳು
ಉ: ಕಾರಂತಜ್ಜನ ನೆನಪುಗಳು
ಉ: ಕಾರಂತಜ್ಜನ ನೆನಪುಗಳು
ಉ: ಕಾರಂತಜ್ಜನ ನೆನಪುಗಳು