ಸ್ಟೀವ್ ಜಾಬ್ ನಿಧನ, apple ನ ಸೇಬು ಕಳಾಹೀನ

ಸ್ಟೀವ್ ಜಾಬ್ ನಿಧನ, apple ನ ಸೇಬು ಕಳಾಹೀನ


ಆಪಲ್ ಖ್ಯಾತಿಯ ಸ್ಟೀವ್ ಜಾಬ್ಸ್ ಇನ್ನಿಲ್ಲ. ಆಪಲ್ ಮ್ಯಾಕಿಂತೋಷ್ ಕಂಪೆನಿಯ ಮೂವರು ಮಾಲಿಕರಲ್ಲಿ ಸ್ಟೀವ್ ಒಬ್ಬ. ಆದರೆ ಮೂವರಲ್ಲಿ ಈತನ ಹೆಸರು ಮಾತ್ರ ಹೆಚ್ಚು ಜನಜನಿತ. ಕಪ್ಪು ಬಣ್ಣದ ‘ಟರ್ಟಲ್ ನೆಕ್’ ಟೀ ಶರ್ಟ್, ತಿಳಿ ನೀಲಿ ಜೀನ್ಸ್ ಪ್ಯಾಂಟು ಧರಿಸಿ ಮಂದಹಾಸದೊಂದಿಗೆ ಆಗಾಗ ಹೊಸ ಹೊಸ ಯಂತ್ರಗಳನ್ನು ಖುದ್ದಾಗಿ ವಿಶ್ವಕ್ಕೆ ಪರಿಚಯಿಸುತ್ತಿದ್ದ ಈ ಕನ್ನಡಕಧಾರಿ ಮಾಂತ್ರಿಕ ಗಣಕಯಂತ್ರವನ್ನು “ಸ್ಟುಪಿಡ್ ಬಾಕ್ಸ್” ಎನ್ನುವ ಹಣೆಪಟ್ಟಿಯಿಂದ ಹೊರತಂದು ಹೊಸ ರೂಪ, ಕಾರ್ಯಕ್ಷಮತೆ ಕೊಡುವ ಮೂಲಕ ಜನ ಆತುರ ಕಾತುರದಿಂದ ಕೊಳ್ಳಲು ಪ್ರೇರೇಪಿಸುವಂತೆ ಮಾಡಿದ. ತಾನು ಉದ್ಯಮಿ, ಸಂಶೋಧಕ ಮಾತವಲ್ಲ, ಕಲಾಕಾರ ಕೂಡಾ ಎಂದು ಜನರಿಗೆ ತೋರಿಸಿದ ವೈಶಿಷ್ಟ್ಯ ತುಂಬಿದ ಮೆಶೀನುಗಳ ನ್ನು ತಯಾರಿಸುವುದರ ಮೂಲಕ.

ಅಮೆರಿಕೆಯ “ಎನ್ರಾನ್” ತೈಲ ಕಂಪೆನಿ ಬಿಟ್ಟರೆ ಜಾಬ್ಸ್ ಶುರು ಮಾಡಿದ mac ಅಮೆರಿಕೆಯಲ್ಲಿ most valued company ಯಾಗಿ ಮೂಡಿ ಬಂತು. ತನ್ನ ಮಲ ಪೋಷಕರ ಮನೆಯ garage ನಿಂದ ಆರಂಭ ಗೊಂಡ mac ಉದ್ದಿಮೆ ಶೇರು ಹೂಡಿಕೆದಾರರ ಕಣ್ಮಣಿಯಾಗಿ ಹೊಮ್ಮಿತು. ಸೇಬಿನ ಹಣ್ಣಿನ trade mark ಹೊಂದಿದ್ದ ಈ mac ಕಂಪೆನಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತು. ಸಾವಿರ ಹಾಡುಗಳನ್ನು ಜೇಬಿನಲ್ಲಿರಿಸ ಬಹುದಾದ i pod ಅನ್ನು ಜಗತ್ತಿಗೆ ಪರಿಚಯಿಸಿದ ಈ ಸಂಸ್ಥೆ ಸಂಗೀತ ಉದ್ದಿಮೆ ನೆಲಕಚ್ಚಲು ಕಾರಣವಾಯಿತು ಎನ್ನುವ ದೂರು ಕೂಡಾ ಇದೆ. ಮ್ಯಾಕ್ ಪ್ರೊ, ಮ್ಯಾಕ್ ಏರ್ ಗಳಂಥ ಕಂಪ್ಯೂಟರ್ಗಳ ಉತ್ಪಾದನೆ ಮೂಲಕ ಅಮೇರಿಕಾ ಮತ್ತು ಅಇರೋಪ್ಯ ದೇಶಗಳಲ್ಲಿ ಪ್ರಸಿದ್ದಿ ಗಳಿಸಿದ್ದ ಆಪಲ್ ಕಂಪೆನಿ ಏಷ್ಯಾದಲ್ಲಿ ಹೆಚ್ಚು ಗಮನಕ್ಕೆ ಬಂದಿದ್ದು i phone, i phone ಗಳ ಜನಪ್ರಿಯತೆಯಿಂದ.

ಅಮೆರಿಕೆಯವರಿಗೆ ಬಹು ಪ್ರಿಯವಾದ ಕಾರು ಉದ್ಯಮಿ ‘ಫೋರ್ಡ್’ ಮತ್ತು ‘ಕ್ರೈಸ್ಲರ್’ ನಂಥ ಬಹು ಕೋಟಿ ಡಾಲರ್ ನಿಗಮಗಳ ಸಾಲಿನಲ್ಲಿ mac ನಿಲ್ಲಲು ಹೆಚ್ಚು ಸಮಯ ತೆಗೆದು ಕೊಳಲಿಲ್ಲ. ಗಣಕ ಯಂತ್ರದ ಉದ್ಯಮದಲ್ಲಿ ಮೈಕ್ರೋಸಾಫ್ಟ್ ಕಂಪೆನಿಯ ಮುಂದೆ ಆಪಲ್ ನ ಪಾಲು ಕಡಿಮೆಯದಾದರೂ ಜನಪ್ರಿಯತೆ ಮತ್ತು ಪ್ರತಿಷ್ಠೆ ಯಲ್ಲಿ ಮಾತ್ರ ಬಹು ಮುಂದು. ಮ್ಯಾಕಿಂತೋಷ್ ಗಣಕಯಂತ್ರವನ್ನು ಕೊಳ್ಳುವುದೂ, ಉಪಯೋಗಿಸುವುದೂ ಒಂದು fashion statement. ಬೇರೆ ಕಂಪ್ಯೂಟರ್ ಗಳಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಬೆಲೆಯಿದ್ದರೂ ಜನ ಕೊಳ್ಳುವುದನ್ನು ಬಿಡಲಿಲ್ಲ, ಆಕರ್ಷಣೆಯೂ ತಗ್ಗಲಿಲ್ಲ. mac ಅನ್ನು ಕೊಂಡವರು ಅದರ ಖಾಯಂ ಗಿರಾಕಿಯಾಗುವುದು ಮಾತ್ರವಲ್ಲದೆ brand ambassador ಸಹ ಆಗುತ್ತಾರಂತೆ. mac ಮೇಲಿನ ಸೆಳೆತ ಮೋಹ ಅಂಥದ್ದು. ಜನರ ಈ ಸೆಳೆತ ಮತ್ತು ಮೋಹಕ್ಕೆ ಸರಿಯಾದ ನ್ಯಾಯವನ್ನೇ ಒದಗಿಸುತ್ತಿತ್ತು ಈ ಯಂತ್ರ ತನ್ನ ಕಾರ್ಯಕ್ಷಮತೆಯಲ್ಲಿ. ಅಮೆರಿಕೆಯ ಹೆಮ್ಮೆಯ ಅಚ್ಚುಮೆಚ್ಚಿನ ನಿಗಮವಾಗಿ mac ರಾರಾಜಿಸಿತು.    

ಸ್ಟೀವ್ ಜಾಬ್ಸ್ ಎಂದರೆ ಆಪಲ್, ಆಪಲ್ ಎಂದರೆ ಸ್ಟೀವ್ ಜಾಬ್ಸ್. ಮನುಷ್ಯ ಮತ್ತು ಯಂತ್ರದ ನಡುವಿನ ಎಂಥ ಮಧುರ, ಮುರಿಯಲಾಗದ ಸಂಬಂಧ. ಬಹುಶಃ ಪ್ರಪಂಚದ ಯಾವುದೇ ಉತ್ಪನ್ನವೂ ತನ್ನ ಒಡೆಯನೊಂದಿಗೆ ಇಷ್ಟು ಸೊಗಸಾಗಿ ಗುರುತಿಸಿ ಕೊಂಡಿರಲಿಕ್ಕಿಲ್ಲ. ನಾನು ನೀವು ಎಷ್ಟೊಂದು ಉಪಕರಣ ಗಳನ್ನು ಬಳಸುತ್ತೇವೆ, ಆದರೆ ಅವುಗಳ ಒಡೆಯರ ಹೆಸರನ್ನು ಗಮನಿಸಿದ್ದೇವೆಯೇ, ನೆನಪಿಟ್ಟುಕೊಂಡಿದ್ದೇವೆಯೇ? ತನ್ನನ್ನು ಎದುರು ಗೊಳ್ಳುವ ಸಾವಿನ ಬಗ್ಗೆ ಐದು ವರ್ಷಗಳ ಹಿಂದೆಯೇ ತಿಳಿದಿದ್ದ ಸ್ಟೀವ್ ವೇದಾಂತಿಯಂತೆ ಹೇಳಿದ್ದು “Remembering that you are going to die is the best way I know to avoid the trap of thinking you have something to lose”. ಬದುಕಿನ ಸವಾಲನ್ನು ಸಾಹಸದಿಂದ ಎದುರಿಸಿದ ಸ್ಟೀವ್ ಸಾವಿನೊಂದಿಗೂ ಅದೇ ನಿಲುವನ್ನು ಪ್ರದರ್ಶಿಸಿದ.ತನ್ನ ಜೀವಿತದ ಕೊನೇ ವರ್ಷವನ್ನು ಕೊರಿಯಾದ ಎಲೆಕ್ಟ್ರಾನಿಕ್ ದೈತ್ಯ ಸ್ಯಾಮ್ಸಂಗ್ ಯೊಂದಿಗೆ ರಚನಾ patent ವಿಷಯದಲ್ಲಿ ತಗಾದೆಯಲ್ಲಿ ಕಳೆದ ಸ್ಟೀವ್ ಜಾಬ್ಸ್ ಜನರ ನೆನಪಿನಿಂದ ಮಾಸಲಾರದ ಹೆಸರು ಎಂದರೂ ತಪ್ಪಾಗಲಾರದು. ಯಕೃತ್ತಿನ ಕ್ಯಾನ್ಸರ್ ರೋಗಕ್ಕೆ ತುತ್ತಾದ ಸ್ಟೀವ್ ತಾನು ಕೊನೆಯುಸಿರೆಳೆಯುವಾಗ ವಯಸ್ಸು ಕೇವಲ ಐವತ್ತಾರು.   

ಸ್ಟೀವ್ ಜಾಬ್ಸ್ ನಿಧನದ ಸುದ್ದಿ ಕೇಳುತ್ತಲೇ ಕಂಪ್ಯೂಟರ್ ಬಳಕೆದಾರರು ದುಃಖಭರಿತರಾಗಿ ಶೋಕ ವ್ಯಕ್ತ ಪಡಿಸಲು ಸಾಮಾಜಿಕ ತಾಣಗಳನ್ನು ಬಳಸಿಕೊಂಡರು. ಟ್ವಿಟ್ಟರ್ ನಲ್ಲಿ ಸಂದೇಶಗಳ ಮಹಾಪೂರ. ಅಂಥ ಒಂದು ಸಂದೇಶದಲ್ಲಿ ಈ ಅನಿಸಿಕೆ ಕಾಣಲು ಸಿಕ್ಕಿತು.
ಪ್ರಪಂಚದಲ್ಲಿ ಮೂರು ಸೇಬಿನ ಹಣ್ಣುಗಳು ಚರಿತ್ರೆ ಬದಲಿಸಿದುವಂತೆ. ಈಡನ್ ಉದ್ಯಾವನದಲ್ಲಿ ಈ ಸೇಬಿನ ಹಣ್ಣನ್ನು ತಿನ್ನಬಾರದು ಎಂದು ತಾಕೀತು ಮಾಡಿದ ದೇವರ ಆಜ್ಞೆಯನ್ನು ಉಲ್ಲಂಘಿಸಿ ಪ್ರಥಮ ವನಿತೆ “ಈವ್” ತಾನು ತಿಂದಿದ್ದು ಮಾತ್ರವಲ್ಲದೆ ಪ್ರಥಮ ಮಾನವ “ಆಡಂ” ಸಹ ತಿನ್ನುವಂತೆ ಮಾಡಿ ಸ್ವರ್ಗ ಲೋಕದಿಂದ ಹೊರಗಟ್ಟಲ್ಪಟ್ಟರು...

ಮಧ್ಯಾಹ್ನದ ಊಟದ ನಂತರ ಹಾಯಾಗಿ ಸೇಬಿನ ಮರದ ಕೆಳಗೆ ಬಿದ್ದು ಕೊಂಡಿದ್ದ ವಿಜ್ಞಾನಿ ಸರ್ ಐಸಾಕ್ ನ್ಯೂಟನ್ ತಲೆಯ ಮೇಲೆ ಸೇಬಿನ ಹಣ್ಣೊಂದು  ಬಿದ್ದು ಗುರುತ್ವಾಕರ್ಷಣೆಯ ನಿಯಮವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಸಹಕಾರಿಯಾಯಿತು...   

ಅಂತಿಮವಾಗಿ, ಆರೋಗ್ಯವರ್ಧಕ ಹಣ್ಣಾಗಿ ಮತ್ತು ಸುಂದರ ಹೆಣ್ಣಿನ ಗಲ್ಲದೊಂದಿಗೆ ಮಾತ್ರ ಗುರುತಿಸಿಕೊಂಡಿದ್ದ ಈ humble “ಸೇಬು” ಕ್ಯಾಲಿಫೋರ್ನಿಯಾದ “ಕ್ಯುಪರ್ಟೀನೋ” ನಗರದ ತಂತ್ರಜ್ಞಾನ ಕಂಪೆನಿಯೊಂದರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿತು...

ಸ್ಟೀವ್ ಜಾಬ್ ನಿಧನದೊಂದಿಗೆ apple ನ ಸೇಬು ಕಳಾಹೀನವಾಯಿತು.                   

ಸ್ಟೀವ್ ಜಾಬ್ಸ್, ‘ಆಪಲ್’ ನಿಗಮದ ಒಡೆಯ. ಜನನ: ೧೨.೨.೧೯೫೫, ನಿಧನ: ೦೬.೯.೨೦೧೧  

ಚಿತ್ರ ಕೃಪೆ: “ಸ್ಟೆಫನೀ” ಯವರ ಟ್ವಿಟರ್ ಖಾತೆಯಿಂದ.     

Comments