ಕವಿ ಸಂಭಾಷಣೆ

ಕವಿ ಸಂಭಾಷಣೆ

ಬೇಂದ್ರೆಯವರಿಂದ ಪ್ರಶಂಸೆ ಪಡೆಯುವುದೆಂದರೆ ಸುಲಭದ ಮಾತಲ್ಲ. ಕವಿಯಾಗಿ ಬೇಂದ್ರೆಯವರ ಒಳನೋಟಗಳೇ ವಿಭಿನ್ನವಾಗಿದ್ದವು. ಅನೇಕ ಕವಿತೆ ಕಾವ್ಯಗಳು ಅವರ ವಿಮರ್ಶೆಯಿಂದ ಬೇರೆಯದೇ ಆಯಾಮವನ್ನು ಹೊಂದುತ್ತಿದ್ದವು. ಅವರೊಡನೆ ಇಂತಹ ಪ್ರಶಂಸೆ ಪಡೆದ ಒಬ್ಬ ಕವಯಿತ್ರಿ ಬೆಳಗೆರೆ ಜಾನಕಮ್ಮನವರು. ಸಂಚಿ ಹೊನ್ನಮ್ಮ. ಹೆಳವನಕಟ್ಟೆ ಗಿರಿಯಮ್ಮ, ಅಕ್ಕಮ್ಮನಂತಹವರ ಸಾಲಿನಲ್ಲಿ ನಿಲ್ಲುವವರು.

ಜಾನಕಮ್ಮ ಬರೆದದ್ದು ಬಹಳ ಕಡಿಮೆ. ಆದರೂ ಅವರ ಹೆಸರು ಆಗಿನ ಅನೇಕ ಸಾಹಿತಿಗಳ ಬಾಯಲ್ಲಿ ನಲಿದಾಡುತ್ತಿತ್ತು. ಡಿವಿಜಿ, ಬೇಂದ್ರೆ, ಮಾಸ್ತಿ,ರಾಜರತ್ನಂ ರಂತವರು ಜಾನಕಮ್ಮನವರ ಅಭಿಮಾನಿ ಬಳಗದಲ್ಲಿದ್ದರು. ಬಳ್ಳಾರಿಗೆ ಹೋದಾಗಲೆಲ್ಲಾ ಸಾಹಿತಿಗಳೆಲ್ಲಾ ಜಾನಕಮ್ಮನ ಮನೆಗೆ ಭೇಟಿ ಕೊಡುತ್ತಿದ್ದರು.

ಈ ಕವಿಗಳದೇ ವಿಚಿತ್ರ ಲೋಕ. ಅವರು ಹೃದಯಗಳನ್ನು ಹೇಗೆ ಬೆಸೆದುಕೊಳ್ಳುತ್ತಾರೋ ಅವರೇ ಬಲ್ಲರು. ಅಂತಹ ಯೋಚನೆಗಳು ಅವರಿಗೆ ಅಂತರಾಳದಿಂದ ಆವಾಹನೆಯಾಗುವ ಪರಿ ಅವರಿಗೇ ತಿಳಿದುದು. ಜಾನಕಮ್ಮ ಮತ್ತು ಬೇಂದ್ರೆ ಒಬ್ಬರನ್ನೊಬ್ಬರು ನೋಡಿರಲಿಲ್ಲ. ಆದರೆ ಜಾನಕಮ್ಮನ ಸಾವಿಗೆ ಬೇಂದ್ರೆ ಸ್ವಂತ ಮಗಳನ್ನು ಕಳೆದುಕೊಂಡಂತೆ ದುಃಖಿಸಿದ್ದರು. ಸಂಪರ್ಕವೇ ಅತ್ಯಂತ ಕಷ್ಟವಾಗಿದ್ದ ಕಾಲದಲ್ಲಿ ಕವಿತೆಯೊಂದು ಈ ಹೃದಯಗಳನ್ನು ಬೆಸೆಯಿತು.

ಕವಿತೆಯ ರಚನೆಗಳನ್ನು ಮುಂದುವರಿಸಬೇಕೆ ಬೇಡವೇ ಎಂಬ ಯೋಚನೆಯಲ್ಲಿದ್ದ ಜಾನಕಮ್ಮ ತಂದೆಯ ಸಲಹೆಯಂತೆ ಬೇಂದ್ರೆಯವರಿಗೆ ಒಂದು ಕವನವನ್ನು ಬರೆದು ಕಳುಹಿಸಿದರು. ಬೇಂದ್ರೆಯವರಿಂದ ಉತ್ತರ ಬಂದರೆ ಮುಂದುವರಿಸುವುದು, ಇಲ್ಲದಿದ್ದರೆ ನಿಲ್ಲಿಸುವುದು ಎಂಬುದು ಅವರ ಯೋಚನೆ. ಅವರು ವರಕವಿಗೆ ಬರೆದ ಕವನ ಹೀಗಿತ್ತು.ದೋಷರಾಹಿತ್ಯದ ಕಲ್ಪನಾ ರಾಜ್ಯದಲ್ಲಿ

ಸಗ್ಗದೂಟವನುಣುವ ಪಿರಿಯ ಕಬ್ಬಿಗನೇ

ನಿನ್ನ ಕಾಣಲು ಬಯಸಿ ಹಲವಾರು ದಿನಗಳಿಂದ

ಇಣುಕಿಣುಕಿ ನೋಡುತಿದೆ ಈ ಸಣ್ಣ ಮನವು

ಕವಿಯ ಬರಹವ ಕಂಡು ರಸ ಬಿಂದುಗಳ ಸವಿಗೆ

ಸುಳಿಯುತಿದೆ ಭೃಂಗದೊಡಲು ಭಾವಪರಿಯದೆಯೇ

ಜಡಾ ಮನಕೆ ಚೇತನವ ಕಲ್ಪಿಸುವ ಮಾನ್ಯ

ತೇಲಿ ಬಿಡು ಆ ನಿನ್ನ ಭಾವಗಳನ್ನೊಮ್ಮೆ.ನಾಲ್ಕನೆಯ ದಿನವೇ ಈ ಪತ್ರಕ್ಕೆ ಬೇಂದ್ರೆಯವರಿಂದ ಉತ್ತರ ಬಂದಿತು.ತಂಗಿ ಜಾನಕೀ ನಿನ್ನ ವೈದೇಹನೊಲವಿನಲಿ

ಓಲೆ ಬಂದಿತು ಇತ್ತ ತೇಲಿ

ಆರಿಗಾರೋ ಎನ್ನುವ ನಾಸ್ತಿಕತೆಯನು ನೂಕಿ

ದಾಟಿ ದಿಕ್ ಕಾಲಗಳ ಸುತ್ತು ಬೇಲಿ

ಕವಿಯು ಮಾನಸ ಪುತ್ರ ಅವನು ಆಗಸದೇಹಿ

ಮಾತಿನಲಿ ಮೂಡುವ ಭಾವ ಜೀವಿ

ಮೈಯಾಚೆ ಉಸಿರಾಚೆ ಬಗೆಯ ಬಣ್ಣಗಳಾಚೆ

ಅವನ ಹೂವು ಅರಳುವುದು ಭಾವದೇವಿಬೇಂದ್ರೆಯವರ ಕವನ ಕುಸುರಿ, ಚಾತುರ್ಯವನ್ನು ನಾವು ಗಮನಿಸಬೇಕು. ಅದೆಂತಹ ಅಮೋಘ ಒಳನೋಟ. ಬೇಂದ್ರೆಗೆ ಬೇಂದ್ರೆಯೇ ಸಮ!

’ವೈದೇಹನೊಲವಿನಲಿ’ ಎಂಬ ಪದ ಗಮನಿಸಿ. ವೈದೇಹಿ ಎಂದರೆ ಸೀತೆ. ಜಾನಕಿ ಎಂದರೂ ಸೀತೆ. ಮಗದೊಂದು ಅರ್ಥ ಬರುವಂತೆ ಇಲ್ಲಿ ಪದಗಳೊಡನೆ ಆಟವಾಡಿದ್ದಾರೆ ಬೇಂದ್ರೆ! ವೈದೇಹನೊಲವು ಅಂದರೆ ವೈ-ದೇಹ ’ದೇಹ ಸಂಬಂಧವಿಲ್ಲದ’ ಒಲವು! ಯಾಕೆಂದರೆ ಅವರಿಬ್ಬರೂ ಪರಸ್ಪರರನ್ನು ನೋಡಿಯೇ ಇಲ್ಲ! ಆದರೂ ಅವರಿಬ್ಬರ ನಡುವೆ ಬೆಸುಗೆ! ಮೂರನೆಯ ಮತ್ತು ನಾಲ್ಕನೆಯ ಸಾಲಿನಲ್ಲಿ ಇನ್ನೊಂದು ಸೂಕ್ಷ್ಮವನ್ನು ವ್ಯಕ್ತ ಪಡಿಸಿದ್ದಾರೆ. ಆಗಿನ ಕಾಲದಲ್ಲಿ ಅಂದರೆ ತೀರಾ ಮಡಿವಂತಿಕೆಯಿದ್ದ ಕಾಲದಲ್ಲಿ ಒಬ್ಬ ಹೆಣ್ಣುಮಗಳು ಬೇರೆ ಗಂಡಸಿನೊಡನೆ ಮಾತನಾಡಾಲೂ ಅಸಾಧ್ಯವೆಂಬಂತಿತ್ತು. ಅಂತಹದರಲ್ಲಿ ಪತ್ರ ಬರೆದಿದ್ದಾರೆ ಜಾನಕಮ್ಮ! ಹಾಗಾಗಿ ಸಮಾಜ ಹಾಕಿದ ಬೇಲಿಯನ್ನು ದಾಟಿದ್ದಾರೆ! ಆದರೇನಂತೆ? ಕವಿಗೆ ಬೇಲಿ ಎಂಬುದು ಎಲ್ಲಿದೆ? ಬಾನಿನಂತೆ ಅವನಿಗೆ ಎಲ್ಲೆ ಇಲ್ಲ, ಬಂಧನಗಳಿಲ್ಲ, ಏಕೆಂದರೆ ಅವನು ಭಾವಜೀವಿ!!!! ಇದು ಕಡೆಯ ನಾಲ್ಕು ಸಾಲುಗಳ ಭಾವ. ಈ ಕವನ ಹೀಗೆ ಮುಕ್ತಾಯವಾಗುತ್ತದೆ.ಅದನು ನೀ ಕಂಡವಳು ಬೇರೆ ಕಾಣಿಕೆ ಏಕೆ

ಕ್ಷೀರ ಸಾಗರದಲೆಯ ತಲೆಯ ಪೆರೆಯೆ

ಪೂರ್ಣಿಮಾ ದೃಷ್ಟಿಯಲಿ ತೆರೆದಂದು ಸೃಷ್ಟಿಯಲಿ

ನಿನ್ನ ನಂದನಕೇನು ಮುಚ್ಚು ಮರೆಯೇ?ಈ ಸಾಲುಗಳನ್ನು ಬಣ್ಣಿಸಿ ರಸಭಂಗ ಮಾಡಲಾರೆ. ಅವುಗಳನ್ನು ಹಾಗೆಯೇ ಅನುಭವಿಸಬೇಕು!

 


ಜಾನಕಮ್ಮನವರ ಕವನದ ಒಂದು ಸ್ಯಾಂಪಲ್ ನಿಮಗಾಗಿ!ಗುಬ್ಬಿ ಗುಬ್ಬಿ ತರವಲ್ಲ

ಮನೆಯಿದು ನನ್ನದು ನಿನದಲ್ಲ !

ಕಿಚಿ ಕಿಚಿ ಎಂದು ಕರೆಯದೆ ಇಲ್ಲಿ

ಬಯಲಿದೆ ಹೊರಗಡೆ ಸಾಯಲ್ಲಿ.!!ಮೇಲುನೋಟಕ್ಕೆ ಇದು ಗುಬ್ಬಿಯನ್ನು ಓಡಿಸಲು ಬರೆದ ಕವನ. ಗುಬ್ಬಿ ಎಂದರೆ ಅರಿಷಡ್ವರ್ಗ, ಅಹಂ, ಸ್ವಾರ್ಥ ಇತ್ಯಾದಿ ’ವಿಷಯ’ಗಳು, ಮನೆ ಅಂದರೆ ನಮ್ಮ ಮನಸ್ಸು ಆಗಬಹುದು. ಮನಕ್ಕೆ ತೊಂದರೆ ಕೊಟ್ಟು ಶಾಂತಿಯನ್ನೆ ಕದಡದೇ ಬಯಲಲಿ ಹೋಗಿ ಸಾಯಿ ಎಂದು ವಿಷಯಂಗಳಿಗೆ ಹೇಳುತ್ತಿದ್ದಾರೆ ಜಾನಕಮ್ಮ. ಬಯಲು ಎಂದರೆ ಅರಿವು, ಸಾಕ್ಷಾತ್ಕಾರ ಎಂಬ ಅರ್ಥದಲ್ಲೂ ಬಳಸಲಾಗುತ್ತದೆ. ಈ ಪ್ರಕಾರ "ಗುಬ್ಬಿ ಬಯಲಲ್ಲಿ ಹೋಗಿ ಸಾಯಿ!" ಎಂದರೆ ಏನಂತ ಅರ್ಥವಾಯಿತಲ್ಲ!!!!

Comments