ನವರಸದ ಮೇಲ್ ಮತ್ತೊಂದು !
ನವರಸಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ... ನಿಮಗೆ ಹತ್ತನೇ ರಸ ಗೊತ್ತ? ಅಯ್ಯೋ ಶಿವನೇ, ’ಸೋಮರಸ’ ಅಲ್ರಣ್ಣಾ ... ಇರಲಿ, ನನ್ನ ಕೇಳಿದ್ರೆ ... ಯೋ!, ನೀ ಯಾವೂರು ತೋಳಾಂಡಿರಾಯ ಕಣ್ಲಾ, ನಿನ್ ಕೇಳಾಕೆ? ಅನ್ನಬೇಡಿ .. ನನ್ನ ಪ್ರಕಾರ ಹತ್ತನೇ ರಸ ’ಪೆದ್ರಸ ಅಲಿಯಾಸ್ ಮೂರ್ಖರಸ’
ಸಂದರ್ಭಕ್ಕೆ ಸಿಲುಕಿಯೋ ಅಥವಾ ಸಹಜ ಗುಣದಿಂದಲೋ ಯಾವುದೇ ಪೂರ್ವ ತಯಾರಿ ಇಲ್ಲದೇ, ನಿಂತ ನಿಲುವಲ್ಲೇ ಪೆದ್ದು ಪೆದ್ದಾಗಿ, ಮಂಕು ಮಂಕಾಗಿ, ಮೂರ್ಖತನದಿ ಆಡುತ್ತ ತೋರುವ ರಸವನ್ನು ’ಪೆದ್ರಸ / ಮೂರ್ಖರಸ’ ಎನ್ನುತ್ತೇನೆ.
ಥಣ್ಣನೆ ತಂಗಾಳಿಯಲ್ಲಿ ಕೂತು ಯಾವುದಾದರೂ ಹಣ್ಣಿನ ರಸ ಕುಡಿಯುತ್ತ, (ದ್ರಾಕ್ಷಾ ರಸವಾದರೆ ಒಳ್ಳೆಯದು) ನನ್ನೀ ರಸಾನುಭವದ ಗಾಥೆಗಳನ್ನು ಓದಿ ... ಈ ಲೇಖನ ಹಿಡಿಸದಿದ್ದರೆ ಕೊನೇ ಪಕ್ಷ ಕುಡಿದ ರಸದಿಂದ್ಲಾದ್ರೂ ಖುಷೀ ಸಿಕ್ಕೀತು :-)
ಮೊದಲಿಗೆ ಪೆದೆರಸದ ಹುಟ್ಟಿನ ಬಗ್ಗೆ ಹೇಳುತ್ತೇನೆ ...
ಸಾಮಾನ್ಯವಾಗಿ ಅಮೇರಿಕದಲ್ಲಿ ಬೆಳೆದ ಮಕ್ಕಳಿಗೆ ಭಾರತಕ್ಕೆ ಬಂದಾಗ ಹಲವಾರು ವಿಷಯಗಳಿಗೆ ಕಸಿವಿಸಿ ಆಗುತ್ತದೆ. ಅದರಲ್ಲಿ ಪ್ರಮುಖವಾದದ್ದು ’ಬಚ್ಚಲುಮನೆ’. ನನ್ನ ಮಗನೂ ಅದಕ್ಕೆ ಹೊರತಲ್ಲ. ಹೀಗೊಂದು ಸಂದರ್ಭ. ಬಚ್ಚಲ ಮನೆಯತ್ತ ಹೊರಟವನಿಗೆ ಜಿರಳೆ ಕಂಡು ’ಭಯ’ವಾಗುತ್ತದೆ. ನೆಲದ ಮೇಲೆ ನೀರನ್ನು ಕಂಡು ’ಭೀಭತ್ಸ’ವಾಗುತ್ತದೆ. ಒಳಗೆ ಅಡಿಯಿಡಲೇ ಹಿಂಜರಿಯುತ್ತಾನೆ. ಆ ಸನ್ನಿವೇಶ ನಮ್ಮ ಮನೆ ಜನರಿಗೆ ’ಹಾಸ್ಯ’ವಾಗಿ ಕಾಣುತ್ತದೆ. ಹೆತ್ತವಳಿಗೆ ’ರೌದ್ರ’, ಏಕೆಂದರೆ ಚೆನ್ನಾಗಿ ’ಶೃಂಗಾರ’ ಮಾಡಿಕೊಂಡ ಬಟ್ಟೆಯಲ್ಲೇ ಎಲ್ಲ ಆಗಿಬಿಡುತ್ತೇನೋ ಎಂದು. ಇಬ್ಬರನ್ನೂ ’ಶಾಂತ’ಗೊಳಿಸಲು ನಾನು ಪೊರಕೆ ಹಿಡಿದು ’ವೀರ’ ಆವೇಶದಿಂದ ಜಿರಳೆ ಹೊಡೆಯುತ್ತೇನೆ. ಅಂಗಾತ ಮಲಗಿ ನಿಷ್ಕ್ರಿಯವಾದ ಜಿರಳೆಯನ್ನು ಕಂಡು ಅವನಿಗೆ ’ಕರುಣೆ’ ಉಕ್ಕುತ್ತದೆ. ಅಲ್ಲದೇ, ಜಿರಳೆ ಹೊಡೆದ ನಾನು ಅವನ ಕಣ್ಣಿಗೆ ಪ್ರಪಂಚದ ಎಂಟನೇ ’ಅದ್ಭುತ’ವಾಗಿ ಕಾಣುತ್ತೇನೆ. ಜಿರಳೆ ಸತ್ತಿರುವುದರಿಂದ ನನಗೆ ಈಗ ಎಕ್ಸ್ಟ್ರಾ ಧೈರ್ಯ. ಮಗನ ಮುಂದೆ ನನ್ನ ಪ್ರತಾಪ ತೋರಿಸಲು, ಅದರ ಮೀಸೆ ಹಿಡಿಯಲು ಹೋದಾಗ, ಸಮಯ ನೋಡಿ ಲೈಟಾಗಿ ಹೊರಳಿದ ಆ ಜಿರಳೆ, ’ನಾನಿನ್ನೂ ಸತ್ತಿಲ್ಲವೋ ಮಂಕೇ’ ಎಂದು ಸಡ್ಡು ಹೊಡೆದು ಓಡಿದಾಗ ಹುಟ್ಟಿದ್ದೇ ದಶಮರಸ ಅರ್ಥಾತ್ ’ಪೆದ್ರಸ’ !
ಮತ್ತೊಂದು ರಸಮಯ ಸನ್ನಿವೇಶ. ನನಗೆ ಚೌಕಾಸಿ ಮಾಡಿ ಅಭ್ಯಾಸವಿಲ್ಲ. ಅದೇನೋ ನನ್ನ ಮುಖವೇ ಹಾಗೆ ಇರಬೇಕು ಅಂತ ಕಾಣುತ್ತೆ, ’ಪೆದ್ರಸ ಪಿತಾಮಹ’, ವ್ಯಾಪಾರಸ್ಥರು ಇರೋ ಬೆಲೆಯನ್ನು ಸ್ವಲ್ಪ ಏರಿಸಿಯೇ ಹೇಳ್ತಾರೆ. ನಾನು ಚೌಕಾಸಿ ಮಾಡಿದಾಗ, ’ನೀವು’ ಅಂತ ಸ್ವಲ್ಪ ಇಳಿಸ್ತೀನಿ ನೋಡಿ ಅಂತ ಒರಿಜಿನಲ್ ಬೆಲೆಗೆ ಸ್ವಲ್ಪ ಹೆಚ್ಚು ತಂದು ನಿಲ್ತಾರೆ. ನಾನು ಅದನ್ನು ಪ್ರತಿ ಸಾರಿ ನಂಬ್ತೀನಿ. ಇರಲಿ, ವಿಷಯ ಅದಲ್ಲ. ಈ ಬಾರಿ ಬೆಂಗಳೂರಿಗೆ ಬಂದಿದ್ದಾಗ, ಒಮ್ಮೆ, ಸೀರೆ ಅಂಗಡಿಯಲ್ಲಿ ಬಿಲ್ ೪೯೦ ರುಪಾಯಿಗಳು ಆಯ್ತು. ಅಂಗಡಿಯಾತ ಅಚ್ಚ ಕನ್ನಡದಲ್ಲಿ "ಫೋರ್ ನೈಂಟಿ ಸರ್" ಅಂದ. ನನಗೋ ರೌಂಡ್ ಫಿಗರ್ ಅಭ್ಯಾಸ. ನಮ್ ಟೀಚರ್ ಹೇಳಿಕೊಟ್ಟಿದ್ದರು, ೪೯೦ಕ್ಕೆ ಹತ್ತಿರ ರೌಂಡೆಡ್ ಸಂಖ್ಯ ಅಂದ್ರೆ ಐದು ನೂರು ಅಂತ. ಅದೇ ನಿಟ್ಟಿನಲ್ಲಿ ನಾನು ಅಂಗಡಿಯಾತನಿಗೆ ಹೇಳಿದೆ ’ಏನ್ರೀ, ಮಾಮೂಲಿ ಗಿರಾಕಿ ನಾವು? (ಐದು ವರ್ಷಕ್ಕೆ ಒಮ್ಮೆ ಹೋಗ್ತೀವಿ !) ೫೦೦ ಮಾಡಿಕೊಳ್ಳಿ’ ಅಂದೆ. ಅಂಗಡಿಯಾತ "ಎಲ್ಲಿಂದ ಬಂದ ಈ ಬೆಪ್ಪು ತಕ್ಕಡಿ ಬೋಳೇ ಶಂಕರ" ಎಂದೆನ್ನ ನೋಡುತ್ತಿದ್ದ !
ಬೆಂಗಳೂರಿನವರಾದ ನಾವು, ಎಲ್ಲಿಗಾದರೂ ಹೋಗಬೇಕೆಂದಾಗ ಆಟೋ ಹಿಡಿದು ಹೋಗುವುದು ಮೂರು ವಾರದ ತಂಗುವಿಕೆಯಲ್ಲಿ ಮಾಮೂಲಾಗಿತ್ತು. ಒಂದೆರಡು ಬಾರಿ ನೋಡಿಕೊಂಡ ನನ್ನ ಪುತ್ರ, ನಂತರದಲ್ಲಿ ಬೇಕೆಂದಾಗ, ತಾನೇ ಓಡಿ ಹೋಗಿ ಆಟೋ ಹಿಡಿದು ತರುತ್ತಿದ್ದ. ಒಮ್ಮೆ ತಂಗಿಯ ಊರಿಗೆ ಹೋಗುವ ಕಾರ್ಯಕ್ರಮ ಹಾಕಿಕೊಂಡೆವು. ಮೊದಲು ಜಯನಗರಕ್ಕೆ ಹೋಗಿ ನಂತರ ರಾತ್ರಿ ಟ್ರೈನಿಗೆ ಊರಿಗೆ ಹೋಗುವುದು ಎಂದು ನಿರ್ಧರಿಸಿದೆವು. ಹೋಗಲಿಲ್ಲ ಎಂಬುದು ಬೇರೆ ವಿಷಯ. ಇರಲಿ, ಮನೆಯಿಂದ ಹೊರಡಲು ಅನುವಾದಾಗ ಮಾಮೂಲಿನಂತೆ ನನ್ನ ಮಗ ಹೋದ. ಐದು ನಿಮಿಷದ ನಂತರ ಯಾಕೋ ಪೆಚ್ಚು ಮೋರೆ ಹಾಕಿಕೊಂಡು ಬಂದು 'nobody wants to come ’ ಅಂದ .. ಅದರಲ್ಲೇನು ವಿಶೇಷ? ಆದರೂ, ನೀನೇನು ಕೇಳಿದೆ ಎಂದಾಗ ಅವನು ನುಡಿದ "ಹುಬಳ್ಳಿ ಬರ್ತೀರ ಅಂತ ಕೇಳ್ದೆ" ಅಂದ ... ಮುಗ್ದತೆಯನ್ನು ಕಂಡು ಕರುಣಾರಸ ಉಕ್ಕಿತೇ ವಿನಹ ಹತ್ತನೇ ರಸಕ್ಕೆ ಸೇರಿಸಲಾರೆ ...
ಪೆದ್ರಸದ ಪರಮ ಸ್ನೇಹಿತ ಮೋಸ ... ಒಂದೆರಡು ಉದಾಹರಣೆ ನೋಡೋಣ ... ಮೊದಲಿಗೆ ಒಂದು ಸತ್ಯ ಘಟನೆ ನಂತರ ಮಿಕ್ಕಿದ್ದು ...
ನಮ್ಮಲ್ಲಿ ರಾಮರಾಯರು ಅಂತ ಒಬ್ಬರಿದ್ದರು. ಒಂದು ಮಧ್ಯಾನ್ನ ಊಟ ಮುಗಿಸಿ ಬೀದಿ ನೋಡುತ್ತ ಕುಳಿತ್ತಿದ್ದರಂತೆ. ಯಾರೋ ಮಹಾನುಭಾವ ಬಂದು ’ನಿಮಗೆ ವಿಷಯ ಗೊತ್ತಿಲ್ವೆ? ರಾಮೇಶ್ವರನ ಗುಡಿ ಬಳಿ ಯಾರೋ ಸಾಹುಕಾರರು ಮೊಸರು, ತುಪ್ಪ ತುಂಬಿ ತುಂಬಿ ಕೊಡ್ತಿದ್ದಾರಂತೆ’ ಅಂತ. ಆತ ’ತುಂಬಿ ತುಂಬಿ’ ಅಂದಾಗಲೇ ಇವರಿಗೆ ಇದು ಮೋಸ ಅಂತ ಅರಿವಾಗಬಾರದೆ. ದಶಮರಸ’ದ ಪ್ರಭಾವದಿಂದ ಯಾವ ಯೋಚನೆಯೂ ಮಾಡದೆ ಹೊರಡಲು ಅನುವಾದರು. ಅದಕ್ಕೆ ಆತ "ನಿಮ್ಮ ಮನೆ ಪಾತ್ರೆ ತೊಗೊಂಡು ಬನ್ನಿ ರಾಯ್ರೇ" ಅಂದಿದ್ದಾನೆ. ಇವರು ಪಾಪ, ಇದ್ರೆ ಮುಂದಿನ ವರ್ಷಕ್ಕೂ ಆಗುತ್ತೆ ಅಂತ ಒಳ್ಳೇ ಸೈಜಿನ ಪಾತ್ರೆಗಳನ್ನೆ ಹೊತ್ತೊಯ್ದಿದ್ದಾರೆ. ಸ್ವಲ್ಪ ದೂರ ಹೋದ ಮೇಲೆ ಸುಸ್ತಾದ ಇವರ ಕೈಯಿಂದ, ಪಾತ್ರೆ ತೆಗೆದುಕೊಂಡು, ’ನಾನು ಕ್ಯೂನಲ್ಲಿ ಇರ್ತೀನಿ ಬೇಗ ಬನ್ನಿ’ ಎಂದು ನುಡಿದು, ಸರ ಸರ ಹೊರಟೇ ಹೋದ. ಇಂದಿಗೂ ಸಿಕ್ಕಿಲ್ಲ ಬಿಡಿ !
ಹೋಟೆಲ್ ಮಾಲೀಕ ’ಬಂಟಾ ಸಿಂಗ್’ನ ಪೆದ್ರಸದ ಕಥೆ ಗೊತ್ತೇ? ಹೀಗೇ ನಾಲ್ವರು ಸ್ನೇಹಿತರು ಇವನ ಖಾನಾವಳಿ ಹೊಕ್ಕು ಸಕತ್ತಾಗಿ ಜಡಿದರಂತೆ. ವೈಟರ್ ಬಿಲ್ ತಂದಿಟ್ಟ. ಟೇಬಲ್’ನಲ್ಲಿ ಕೋಲಾಹಲ ’ನಾನು ಬಿಲ್ ಕೊಡುತ್ತೇನೆ’ ’ತಾನು ಬಿಲ್ ಕೊಡುತ್ತೇನೆ’ ಅಂತ. ಸ್ನೇಹಿತರು ಬಂಟ’ನ ಕೌಂಟರ್ ಬಳಿ ಬಂದರು. ಬಂಟನಿಗೆ ಕುತೂಹಲ. ಇನ್ನೂ ಅವರುಗಳ ಗಲಭೆ ನಿಂತಿಲ್ಲ. ಕೊನೆಗೆ ಸ್ನೇಹಿತರಲ್ಲಿ ಒಬ್ಬ ಎಲ್ಲರನ್ನೂ ಸಮಾಧಾನಪಡಿಸಿ ಹೇಳಿದ "ನಾವು ನಾಲ್ವರೂ ಈ ಕೊನೆಯಿಂದ ಆ ಕೊನೆಯವರೆಗೆ ಓಡಿ ಹೋಗಿ ಬರೋಣ. ಯಾರು ಮೊದಲು ಬರುವರೋ ಅವರು ಬಿಲ್ ಪಾವತಿ ಮಾಡುತ್ತಾರೆ. ನಮ್ಮ ರೇಸ್’ಗೆ ಶ್ರೀಮಾನ್. ಬಂಟಾ ಅವರೇ ತೀರ್ಪುಗಾರರು. ಉಬ್ಬಿ ಹೋದ ಬಂಟ ಸಂತೋಷದಿಂದ ಒಪ್ಪಿ "ಒಂದು ... ಎರಡು ... ಮೂರು" ಎಂದ ... ಅಷ್ಟೇ ... ಮುಂದೇನು ಎಂದು ಹೇಳಬೇಕಿಲ್ಲವಷ್ಟೇ!!!
ನಮ್ಮ ಮನೆ ಮಹಡಿ ಮೇಲೆ ಹೊಸದಾಗಿ ಮನೆ ಕಟ್ಟಿದಾಗ ನೆಡೆದ ಪೆದ್ರಸದ ಪ್ರಸಂಗವಿದು. ಬೆಳಿಗ್ಗೆ ಹವನ, ಹೋಮ, ಇತ್ಯಾದಿ ಮತ್ತು ಸಂಜೆಗೆ ಸ್ನೇಹಿತರ ಆಗಮನ. ಒಬ್ಬರು, ಕೆಳಗಿನ ಮನೆಗೆ ಹೋಲಿಸುತ್ತ ರೂಮುಗಳು, ಹಾಲ್, ಅಡುಗೆ ಮನೆ, ಬಚ್ಚಲು ಎಂದೆಲ್ಲ ಸಾಗಿ ಕೊನೆಗೆ ಅವಕ್ಕಾಗಿ ನುಡಿದರು "ಅರ್ರೇ! ಇದೇನು ಗೋಡೆ ಬಂದುಬಿಟ್ಟಿದೆ ಇಲ್ಲಿ? ಹಿಂದಿನ ಬಾಗಿಲು ಇಲ್ಲವೇ?" ಅಂದರು .. "ಯಾಕೆ? ಬೀಳೊಕ್ಕಾ?" ಅಂತ ಕೇಳಬೇಕೂ ಅನ್ನಿಸಿದರೂ ಕೇಳಲಾಗಲಿಲ್ಲ ಬಿಡಿ !!
ಮತ್ತೊಂದು ಘಟನೆ. ಇಲ್ಲಿ ಹಲವು ಭಾಗ ಸತ್ಯವಾದರೆ ಮುಖ್ಯ ಭಾಗ ನನ್ನ ಒಗ್ಗರಣೆ. ಮೊದಲ ವಾರ್ಷಿಕ ತಿಥಿಯ ಒಂದು ಸಂದರ್ಭ. ಮನೆ ಯಜಮಾನರು ಪುಣ್ಯ ತಿಥಿಗೆ ಅಡುಗೆಯವರನ್ನು ಕರೆಸಿದ್ದರು. ಅಡುಗೆಯ ಮಧ್ಯೆ ಒಬ್ಬಾತ ಮನೆಯಾಕೆಯ ಬಳಿ ಬಂದು "ತಾಯಿ, ಲಟ್ಟಣಿಗೆ ಇದ್ದರೆ ಕೊಡ್ತೀರ? ನಾವು ತರುವುದು ಮರೆತೇ ಹೋಯಿತು" ಅಂದರು. ಅಷ್ಟೇ ಸೀರಿಯಸ್ಸಾಗಿ ಆಕೆ ನುಡಿದರು "ಎಲ್ಲಿಟ್ಟಿದ್ದೀನೋ ನೋಡಿ ಕೊಡ್ತೀನಿ. ಈ ಒಂದು ವರ್ಷದಲ್ಲಿ ಅದನ್ನ ನಾನು ಬಳಸೇ ಇಲ್ಲ" ಅಂದರು. ಅಡುಗೆಯಾತನ ಮುಂದಿನ ಪ್ರಶ್ನೆ "ಯಾಕೆ ತಾಯಿ, ಅವರಿಗೆ ಮಾತ್ರ ಬಳಸ್ತಾ ಇದ್ರ?" ಅಂತ. "ಹೌದಪ್ಪ" ಅಂದರು ಆಕೆ. ಇದಿಷ್ಟನ್ನೂ ಹೊರಗಿನಿಂದ ನೋಡಿದ ನಾನು, ನಿಂತ ನಿಲುವಲ್ಲೇ "ಲಟ್ಟಣಿಗೆಯನ್ನು ನಿಮ್ಮ ಯಜಮಾನರ ಮೇಲೆ ಹೇಗೆ ಉಪಯೋಗಿಸುತ್ತಿದ್ದಿರಿ" ಅಂತ ಕೇಳಲಿಲ್ಲ. ಅವರು, ತಮ್ಮೆಜಮಾನರಿಗೆ ದಿನವೂ ಚಪಾತಿ ಮಾಡಿ ಹಾಕುತ್ತಿದ್ದು, ಆಕೆಗೆ ಒಂದು ವರ್ಷದಿಂದ ಅದು ಉಪಯೋಗಕ್ಕೇ ಬಂದಿರಲಿಲ್ಲ. ಆ ಅರ್ಥದಲ್ಲಿ ಅವರು ಹೇಳಿದ್ದು ....
ಹಿರಿಯರೊಬ್ಬರು ಯಾವುದೋ ಪೂಜೆ ಮಾಡಿಸುತ್ತಿದ್ದರು. ಸರಿಯಾಗಿ ಕಿವಿ ಕೇಳಿಸದ ಅವರಿಗೆ ಮೊಮ್ಮಗ ಸಹಾಯಕ್ಕೆ ನಿಂತಿದ್ದ. ಪುರೋಹಿತರು ಏನಾದರೂ ಅವರನ್ನು ಕೇಳಿದರೆ, ತಾತನಿಗೆ ಕೇಳಿಸದೆ ಇದ್ದಾಗ, ಅವರಿಗೆ ಜೋರಾಗಿ ಹೇಳುತ್ತಿದ್ದ. ಪೂಜೆಯ ಸಾಂಪ್ರದಾಯಿಕ ಪ್ರಶ್ನೆಯೋ ಏನೋ ಅಂತೂ ಹಿಂದೂ ಮುಂದೂ ಯೋಚನೆ ಮಾಡದೆ ಪುರೋಹಿತರು ತಾತನಿಗೆ ಕೇಳಿದರು "ಮದುವೆ ಆಗಿದೆಯೇ?" ಅಂತ. ಅವರಿಗೆ ಕೇಳಿಸಲಿಲ್ಲ "ಏನು?" ಎಂದು ಮೊಮ್ಮಗನನ್ನು ಕೇಳಿದರು. ಆತನೂ ಹಿಂದೂ ಮುಂದೂ ಯೋಚನೆ ಮಾಡದೆ "ಮದುವೆ ಆಗಿದೆಯಾ ಅಂತ ಕೇಳ್ತಾ ಇದ್ದಾರೆ" ಅಂದ. ಕೆಲವೊಮ್ಮೆ ಪೆದ್ರಸ ಸಾಮೂಹಿಕವಾಗಿ ಆಕ್ರಮಿಸುತ್ತದೆ !!!
ತಾನು ’ಬಾಸ್’ ಎಂಬ ’ಇಸಂ’ನಿಂದ ಎಲ್ಲರ ಮುಂದೆ ಪೆದ್ದನಾಗಿ ನಿಂತ ಒಂದು ಪ್ರಸಂಗ. ಬಹಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಒಂದು ಕಂಪನಿಯಲ್ಲಿನ ಒಬ್ಬ ಮೇನೇಜರ್ ಮಹಾಶಯ ’ಗಂಡು’ ಮಗುವಿನ ತಂದೆಯಾದ. ಸಿಹಿಯನ್ನು ತಂದಾತ ತಾನು ಹಂಚದೆ ತನ್ನ ಕೈ ಕೆಳಗೆ ಕೆಲಸ ಮಾಡುವಾತನಿಗೆ ಕೆಲಸ ಹಚ್ಚಿದ. ಸಿಹಿಯನ್ನು ಪಡೆದವರು, ಬಾಸ್’ಗೆ ಮಗು ಆಗಿದ್ದರೂ ಇವನಿಗೆ ’ಕಂಗ್ರಾಟ್ಸ್’ ತಿಳಿಸಿದ್ದರು !!!
ಸದ್ಯಕ್ಕೆ ಪೆದ್ರಸ ಪುರಾಣವನ್ನು ಮುಗಿಸುತ್ತೇನೆ. ಇಂತಹ ಘಟನೆಗಳು ಹತ್ತು ಹಲವು ನಿಮ್ಮ ಜೀವನದಲ್ಲೂ ನೆಡೆದೇ ಇರುತ್ತದೆ. ಹಂಚಿಕೊಳ್ತೀರಲ್ಲ?
Comments
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by Jayanth Ramachar
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by partha1059
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by manju787
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by Chikku123
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by gopaljsr
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by sumangala badami
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by gopaljsr
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by sathishnasa
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by ಭಾಗ್ವತ
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by kavinagaraj
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by ಗಣೇಶ
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by partha1059
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by partha1059
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by ಗಣೇಶ
ಉ: ನವರಸದ ಮೇಲ್ ಮತ್ತೊಂದು !
ಉ: ನವರಸದ ಮೇಲ್ ಮತ್ತೊಂದು !
In reply to ಉ: ನವರಸದ ಮೇಲ್ ಮತ್ತೊಂದು ! by RAMAMOHANA
ಉ: ನವರಸದ ಮೇಲ್ ಮತ್ತೊಂದು !