ಮನೆ ಮದ್ದು (೨) - ಅಮೃತ ಬಳ್ಳಿ

ಮನೆ ಮದ್ದು (೨) - ಅಮೃತ ಬಳ್ಳಿ

       ಚಿಕುನ್ ಗುನ್ಯ,  ಎಚ್೧ಎನ್೧  ಜ್ವರ ಕಳೆದ ಎರಡು ವರ್ಷಗಳಲ್ಲಿ ಕಾಣಿಸಿಕೊಂಡಾಗ  ಜ್ವರ ನಿವಾರಿಸಲು ಜನರು ದುಬಾರಿ ಬೆಲೆಕೊಟ್ಟು ಅಮೃತಬಳ್ಳಿಯನ್ನು ಖರೀದಿಸಿದ್ದರು. ಅಮೃತಬಳ್ಳಿಯನ್ನು ಮನೆಯಲ್ಲೇ ನೆಟ್ಟು ಬೆಳೆಸಿದ್ದರೆ ಹೀಗೆ ಹಣ ತೆತ್ತು ಖರೀದಿಸುವ ಪ್ರಮೇಯ ಬರುತ್ತಿರಲಿಲ್ಲ. ಅಂತೂ ಇದೀಗ ಅಮೃತ ಬಳ್ಳಿಯ ಮಹತ್ವ ಹಲವರಿಗೆ ತಿಳಿದಿದೆ.

ಅಮೃತಬಳ್ಳಿಯ ಹೆಸರುಗಳು 
ಸಸ್ಯ ವೈಜ್ಞಾನಿಕ ಹೆಸರು           : Tinospora cordifolia
ಸಂಸ್ಕೃತ                           :ಗುಡುಚಿ
ಕನ್ನಡ                              :ಅಮೃತಬಳ್ಳಿ  
ಹಿಂದಿ                              :ಗುಲ್ ವೇಲ್  


    ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸ ಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿದೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ; ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ  ’ಅ- ಮೃತ’ ಎಂಬ ಹೆಸರು. 
         ಇದರ ಎಲೆ ಹೃದಯದ ಆಕಾರದಲ್ಲಿರುತ್ತದೆ.ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದರ ತೊಗಟೆಯ ಬಣ್ಣ ಬೂದಿಮಿಶ್ರಿತ ಕಂದು ಬಣ್ಣ. ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದ ದುಂಡಗಿನ ಹಣ್ಣಾಗುತ್ತದೆ.


      ಇದು ತ್ರಿದೋಷ ಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ.

      ಅಮೃತ  ಬಳ್ಳಿಯ ಉಪಯೋಗಗಳು ಹಲವು. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ.
ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವನೆಗೆ ಮುಂಚೆ) ಸೇವಿಸಬೇಕು.
         ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು.(ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗ ತುಳಸಿ, ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ). ಈ ಕಷಾಯವನ್ನು ವಾರದಲ್ಲಿ ಒಂದು ಬಾರಿ ೧/೨ ಲೋಟದಂತೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ.
       ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ.ಎಲೆ ಮತ್ತು ಕಾಂಡದಿಂದ ತಂಬುಳಿ ತಯಾರಿಸಬಹುದು.ಎಲೆ ಮತ್ತು ಕಾಂಡವನ್ನು ಜೀರಿಗೆಯೊಂದಿಗೆ ನುಣ್ಣಗೆ ಅರಿಯಬೇಕು. ಅದಕ್ಕೆ ಮಜ್ಜಿಗೆ ಸೇರಿಸಿ ಸಾಸಿವೆ ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು.


      ಆಲಂಕಾರಿಕ ಬಳ್ಳೀಗಳನ್ನು ಬೆಳೆಸುವುದರ ಬದಲು ಮನೆಯ ಎದುರು ಔಷಧೀಯ ಗುಣ ಹೊಂದಿರುವ ಅಮೃತ ಬಳ್ಳಿಯನ್ನು ಹಬ್ಬಿಸಿದರೆ ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ ಮತ್ತು ಮನೆಗೆ ತಂಪು
 - ರಾಜಲಕ್ಷ್ಮಿ        

Comments