ಮಾಹಿತಿ ಹಕ್ಕು ದುರ್ಬಲಗೊಳಿಸುವ ಯತ್ನ

ಮಾಹಿತಿ ಹಕ್ಕು ದುರ್ಬಲಗೊಳಿಸುವ ಯತ್ನ

ಮಾಹಿತಿ ಹಕ್ಕಿನ ಬಳಕೆಯಿಂದಾಗಿ ಗುಟ್ಟುಗುಟ್ಟಾಗಿ ನಡೆಯುತ್ತಿದ್ದ ಸರಕಾರದ ವ್ಯವಹಾರಗಳು ಬಹಿರಂಗವಾಗುತ್ತಿವೆ. ಹಗರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಕಂಗೆಟ್ಟಿರುವ ಕೇಂದ್ರ ಸರಕಾರದ ಸಚಿವರು ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ಮಾತನ್ನಾಡಿದ್ದಾರೆ.

ಉದ್ದೇಶಿತ ತಿದ್ದುಪಡಿಗಳನ್ನು ಗಮನಿಸೋಣ: ಒಂದು ಅರ್ಜಿಯಲ್ಲಿ ಒಂದೇ ವಿಷಯದ ಬಗ್ಗೆ ಮಾಹಿತಿ ಕೇಳಬೇಕೆಂಬ ತಿದ್ದುಪಡಿ. (ಜೊತೆಗೆ, ಅರ್ಜಿಯಲ್ಲಿರುವ ಪದಗಳು ೨೫೦ ಮೀರಬಾರದೆಂಬ ತಿದ್ದುಪಡಿ) ಒಂದು ಅರ್ಜಿಯನ್ನು ಒಂದೇ ವಿಷಯಕ್ಕೆ ಸೀಮಿತಗೊಳಿಸಬೇಕೆಂಬ ನಿಲುವನ್ನು ಕೇಂದ್ರ ಮಾಹಿತಿ ಆಯೋಗವು ಈಗಾಗಲೇ ತಿರಸ್ಕರಿಸಿದೆ. ಯಾಕೆಂದರೆ, ಹೀಗೆ ಸೀಮಿತಗೊಳಿಸುವುದು ಕಾಯಿದೆಯ ಉದ್ದೇಶಕ್ಕೆ ವಿರುದ್ಧ.


ಮಾಹಿತಿಯ ಅರ್ಜಿಗೆ ಈಗಿನ ತಲಾ ರೂ.೧೦ಕ್ಕಿಂತ ಜಾಸ್ತಿ ಶುಲ್ಕ ವಿಧಿಸಬೇಕೆಂಬ ತಿದ್ದುಪಡಿ. ಇದೂ ಕಾಯಿದೆಯ ಉದ್ದೇಶಕ್ಕೆ ವಿರುದ್ಧ. ಇದರ ಬದಲಾಗಿ, ಶುಲ್ಕ ಪಾವತಿಯನ್ನೇ ರದ್ದು ಪಡಿಸುವುದು ಉತ್ತಮ. ಯಾಕೆಂದರೆ, ಈ ಶುಲ್ಕ ಪಾವತಿಯು ಸರಕಾರಿ ಕಚೇರಿಗಳ ಕೆಲಸದ ಹೊರೆ ಹೆಚ್ಚಿಸುತ್ತದೆ. ಅದಲ್ಲದೆ, ಅರ್ಜಿದಾರರು ಶುಲ್ಕ ಪಾವತಿಗಾಗಿ ಪೋಸ್ಟಲ್ ಆರ್ಡರ್ ಅಥವಾ ಬ್ಯಾಂಕ್ ಡ್ರಾಫ್ಟ್ ಖರೀದಿಸುವುದು ತೊಂದರೆಯ ಕೆಲಸ. ಬಹಳ ಜನ ಇದರಿಂದಾಗಿಯೇ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಶುಲ್ಕವನ್ನು ಸರಕಾರಿ ಕಚೇರಿಗಳಲ್ಲಿ ನಗದಾಗಿ ಪಾವತಿಸಬಹುದು. ಹಾಗಿದ್ದರೂ ಬಹುಪಾಲು ಸರಕಾರಿ ಕಚೇರಿಗಳಲ್ಲಿ ನಗದಾಗಿ ಶುಲ್ಕ ಸ್ವೀಕರಿಸುತ್ತಿಲ್ಲ.

ಸುಪ್ರೀಂ ಕೋರ್ಟಿನ ಪ್ರಧಾನ ನ್ಯಾಯಾಧೀಶರನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಬೇಕೆಂಬ ತಿದ್ದುಪಡಿ. ಇದೂ ಕಾನೂನಿನ ಉದ್ದೇಶಕ್ಕೆ ತಣ್ಣೀರೆರಚುವ ತಿದ್ದುಪಡಿ. ಸುಪ್ರೀಂ ಕೋರ್ಟ್ ಅತ್ಯಂತ ಪಾರದರ್ಶಕವಾಗಿರಬೇಕು; ಅದರಿಂದಾಗಿ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಆದರೆ, ಸುಪ್ರೀಂ ಕೋರ್ಟ್ ಈ ಕಾನೂನಿನಿಂದ ವಿನಾಯ್ತಿ ಪಡೆಯಲು ಹವಣಿಸುತ್ತಿರುವುದು ದುರದೃಷ್ಟ. ಸುಪ್ರೀಂ ಕೋರ್ಟಿನ ರಿಜಿಸ್ಟ್ರಿಗೆ ಸುಭಾಷ್ ಸಿ. ಅಗರ‍್ವಾಲ್ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಮಾಹಿತಿ ಕೇಳಿದ್ದರು: ಕಳೆದ ಮೂರು ವರುಷಗಳಲ್ಲಿ ಪ್ರತಿಯೊಬ್ಬ ನ್ಯಾಯಾಧೀಶರ ವೈದ್ಯಕೀಯ ಚಿಕಿತ್ಸೆಗಾಗಿ ಸರಕಾರವು ಎಷ್ಟು ಹಣ ಪಾವತಿಸಿದೆ? ಅವರಿಗೆ ಈ ಮಾಹಿತಿಯನ್ನು ನೀಡಲಿಲ್ಲ! ಬದಲಾಗಿ, ಸುಪ್ರೀಂ ಕೋರ್ಟಿನ ಎಲ್ಲ ಸಿಬ್ಬಂದಿ, ನಿವೃತ್ತ ಮತ್ತು ಹಾಲಿ ನ್ಯಾಯಾಧೀಶರು - ಇವರೆಲ್ಲರಿಗೆ ಒಟ್ಟಾಗಿ ಮಾಡಲಾದ ವಾರ್ಷಿಕ ವೈದ್ಯಕೀಯ ವೆಚ್ಚವನ್ನು ತಿಳಿಸಲಾಯಿತು.

ಕ್ಷುಲ್ಲಕ ಹಾಗೂ ಕಿರುಕುಳದ ಉದ್ದೇಶದ ಅರ್ಜಿಗಳನ್ನು ತಿರಸ್ಕರಿಸಬೇಕೆಂಬುದು ಮತ್ತೊಂದು ತಿದ್ದುಪಡಿ. ಇದಂತೂ ಕಾಯಿದೆಯ ಉದ್ದೇಶಕ್ಕೇ ಭಂಗ ತರುತ್ತದೆ. ಯಾಕೆಂದರೆ, ಯಾವುದೇ ಅರ್ಜಿಯನ್ನು ಈ ವರ್ಗಕ್ಕೆ ಸೇರಿಸಿ ತಿರಸ್ಕರಿಸುವುದು ಅಧಿಕಾರಿಗಳಿಗೆ ಸುಲಭದ ಕೆಲಸ.

ಕೇಂದ್ರ ಸಚಿವ ಸಂಪುಟದ ದಾಖಲೆಗಳನ್ನು ಕಾಯಿದೆಯ "ವಿನಾಯ್ತಿ ಪಟ್ಟಿ"ಯಲ್ಲಿ ಸೇರಿಸಬೇಕೆಂಬುದು ಮಗದೊಂದು ತಿದ್ದುಪಡಿ. ಇದೂ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ.

ಮಾಹಿತಿ ಹಕ್ಕು ಕಾಯಿದೆ ೨೦೦೫ರಲ್ಲಿ ಜ್ಯಾರಿ ಆದಾಗಿನಿಂದ ಸರಕಾರಕ್ಕೆ ಬಂದಿರುವ ಮಾಹಿತಿ ಅರ್ಜಿಗಳು ಸುಮಾರು ೬ ಲಕ್ಷ. ಇವುಗಳಲ್ಲಿ ಶೇಕಡಾ ೯೦ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇದರಿಂದಾಗಿ ಸರಕಾರದ ಪ್ರಕ್ರಿಯೆಗಳು ಚುರುಕಾಗಿವೆ ವಿನಃ ಆಡಳಿತ ಕುಸಿದು ಬಿದ್ದಿಲ್ಲ. ಕೇಂದ್ರ ಮಾಹಿತಿ ಆಯೋಗವು ಈ ಅವಧಿಯಲ್ಲಿ ಸುಮಾರು ೫೫,೦೦೦ ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಇದರಿಂದಾಗಿ ಹೆಚ್ಚೆಚ್ಚು ಪ್ರಜೆಗಳಿಗೆ ತಮ್ಮ ಹಕ್ಕಿನ ಅರಿವಾಗಿದೆ ಮತ್ತು ಅಧಿಕಾರಿಗಳಿಗೆ ತಮ್ಮ ಜವಾಬ್ದಾರಿಯ ಅರಿವಾಗಿದೆ.

ಇದುವೇ ಮಾಹಿತಿ ಹಕ್ಕು ಕಾಯಿದೆಯ ಪ್ರಧಾನ ಆಶಯ. ಅಂದರೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸುವುದು.

ಈ ಕಾಯಿದೆಯ ಅನುಸಾರ ಮಾಹಿತಿ ಬಹಿರಂಗವಾದ ಕಾರಣ ೨-ಜಿ ಹಗರಣ, ಕಾಮನ್‍ವೆಲ್ತ್ ಗೇಮ್ಸ್ ಹಗರಣಗಳಂತಹ ಬೃಹತ್ ಭ್ರಷ್ಟಾಚಾರ ಬೆಳಕಿಗೆ ಬಂದವು. ಇಲ್ಲವಾದರೆ ಅವೆಲ್ಲವೂ ಸರಕಾರದ ಕಡತಗಳಲ್ಲಿ ಮುಚ್ಚಿ ಹೋಗುತ್ತಿದ್ದವು ಹಾಗೂ ಅಂತಹ ಹಗರಣಗಳು ಅಡೆತಡೆಯಿಲ್ಲದೆ ನಡೆಯುತ್ತಿದ್ದವು.

ಕರ್ನಾಟಕದ ಮಾಹಿತಿ ಆಯೋಗವು ಅಕ್ಟೋಬರ್ ೨೦೧೦ರಲ್ಲಿ ೭೦ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಒಟ್ಟು ರೂಪಾಯಿ ೩.೪೧ ಲಕ್ಷ ದಂಡ ವಿಧಿಸಿದೆ - ಅರ್ಜಿದಾರರು ಕೇಳಿದ ಮಾಹಿತಿ ಒದಗಿಸದಿದ್ದ ತಪ್ಪಿಗಾಗಿ. ಆ ಅಧಿಕಾರಿಗಳ ಸಂಬಳದಿಂದ ದಂಡ ಮುರಿದುಕೊಂಡು ಕರ್ನಾಟಕ ಸರಕಾರದ "ದಂಡ ಖಾತೆ"ಗೆ ಜಮೆ ಮಾಡಬೇಕೆಂದು ಆಯೋಗವು ಆದೇಶ ನೀಡುವ ಕಾರಣ, ಇದೆಲ್ಲ ದಂಡ ವಸೂಲಾಗುತ್ತದೆ. ಮಾತ್ರವಲ್ಲ, ಆ ಅಧಿಕಾರಿಗಳ "ಸರ್ವಿಸ್ ದಾಖಲೆ"ಯಲ್ಲಿ ಈ ದಂಡ ವಸೂಲಾತಿ ದಾಖಲಾಗುತ್ತದೆ. ಇದರಿಂದಾಗಿ ಹೆಚ್ಚೆಚ್ಚು ಅಧಿಕಾರಿಗಳಿಗೆ ಕಾಯಿದೆಯ ಬಿಸಿ ತಗಲಿದೆ. (೩೦ ದಿನಗಳೊಳಗೆ ಅರ್ಜಿದಾರರಿಗೆ ಮಾಹಿತಿ ನೀಡತಕ್ಕದ್ದು. ಇಲ್ಲವಾದರೆ ದಿನಕ್ಕೆ ರೂ.೨೫೦ರಂತೆ ಗರಷ್ಠ ರೂ.೨೫,೦೦೦ ದಂಡ ವಿಧಿಸುವ ಅಧಿಕಾರವನ್ನು ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳಿಗೆ ಕಾಯಿದೆ ನೀಡಿದೆ.) ಮಾಹಿತಿ ಆಯೋಗ ದಂಡ ವಿಧಿಸಿದ ಆದೇಶ ರದ್ದು ಪಡಿಸಬೇಕೆಂದು ಕೆಲವು ಅಧಿಕಾರಿಗಳು ಹೈಕೋರ್ಟಿನಲ್ಲಿ ದಾವೆ ಹೂಡಿದಾಗ ಕರ್ನಾಟಕ ಹೈಕೋರ್ಟ್ ದಾವೆ ವಜಾ ಮಾಡಿ, ಆ ಅಧಿಕಾರಿಗಳಿಗೆ ಹೆಚ್ಚುವರಿ ದಂಡ ವಿಧಿಸಿದೆ.

ಮಾಹಿತಿ ಹಕ್ಕು ಕಾಯಿದೆಯು ಪ್ರಜಾಪ್ರಭುತ್ವವನ್ನು ಬಲಪಡಿಸುವತ್ತ ಪ್ರಮುಖ ಹೆಜ್ಜೆ. ಇದರ ಪ್ರಕಾರ ಸರಕಾರದ ಎಲ್ಲ ಕೆಲಸಕಾರ್ಯ ಹಾಗೂ ನಿರ್ಧಾರ ಪಾರದರ್ಶಕವಾಗಿರಬೇಕು. ಹಾಗೆಯೇ, ಪ್ರಜೆಗಳ ತೆರಿಗೆಯ ಹಣದಿಂದ ಸಂಬಳ ಪಡೆಯುವ ಎಲ್ಲ ಅಧಿಕಾರಿಗಳೂ ತಮ್ಮ ನಿರ್ಧಾರಗಳಿಗೆ ಜವಾಬ್ದಾರರಾಗಿರಬೇಕು (ಉತ್ತರದಾಯಿತ್ವ).

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ, ಇವೆರಡನ್ನು ಅಧಿಕಾರಶಾಹಿ ಅನುಸರಿಸಲಿಲ್ಲ. ಅದರಿಂದಾಗಿಯೇ "ನಮಗೆ ಹೇಳುವವರು ಕೇಳುವವರು ಯಾರೂ ಇಲ್ಲ" ಎಂಬ ಭಾವನೆ ಅವರಲ್ಲಿ ಬೆಳೆಯಿತು. ಈಗ, ಮಾಹಿತಿ ಹಕ್ಕನ್ನು ಜನಸಾಮಾನ್ಯರೂ ಚಲಾಯಿಸುತ್ತಿರುವ ಕಾರಣ ಅಧಿಕಾರಶಾಹಿಗೆ ತಾವು "ಪ್ರಭುಗಳಲ್ಲ, ಜನಸೇವಕರು" ಎಂಬುದು ಅರ್ಥವಾಗ ತೊಡಗಿ ಕಸಿವಿಸಿಯಾಗುತ್ತಿದೆ. ಅದಕ್ಕಾಗಿ ಕಾಯಿದೆಯನ್ನೇ ದುರ್ಬಲಗೊಳಿಸುವ ಯತ್ನ ಪುನಃ ಆರಂಭಿಸಿದ್ದಾರೆ.

ಮಾಹಿತಿ ಹಕ್ಕು ಕಾಯಿದೆ ಜ್ಯಾರಿ ಆಗಲಿಕ್ಕಾಗಿ ಭಾರೀ ಹೋರಾಟ ನಡೆಸಿದ್ದ ಅರುಣಾ ರಾಯ್ (ರಾಷ್ಟ್ರೀಯ ಸಲಹಾ ಮಂಡಲಿಯ ಸದಸ್ಯೆ) "ನಮ್ಮ ಆಡಳಿತ ವ್ಯವಸ್ಥೆಗೆ ಏಟು ಬಿದ್ದಿರುವುದು ಮಾಹಿತಿ ಹಕ್ಕು ಕಾಯಿದೆಯಿಂದಾಗಿ ಅಲ್ಲ, ಹಗರಣಗಳಿಂದಾಗಿ" ಎಂದಿದ್ದಾರೆ. ಪ್ರಧಾನಮಂತ್ರಿಗಳಿಗೆ ಅಧಿಕಾರವರ್ಗದ ಅನಾನುಕೂಲದ ಬಗ್ಗೆ ಇರುವುದಕ್ಕಿಂತ ಜಾಸ್ತಿ ಕಾಳಜಿ ಮಾಹಿತಿ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರ ಜೀವರಕ್ಷಣೆ ಬಗ್ಗೆ ಇರಬೇಕು ಎಂಬ ಅವರ ಮಾತು (ಗೋವಾದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ೧೫ ಅಕ್ಟೋಬರ್ ೨೦೧೧ರಂದು) ಈ ದೇಶದ ಜನಾಭಿಪ್ರಯವೇ ಆಗಿದೆ.

ಪ್ರಜಾಪ್ರಭುತ್ವ ಬಲಪಡಿಸಲಿಕ್ಕಾಗಿ ಮಾಹಿತಿ ಹಕ್ಕು ಉಳಿಸಿ, ಚಲಾಯಿಸೋಣ.

Comments