ಮೂಡುಬಿದರೆ ರಂಗ ಅಧ್ಯಯನ ಕೇಂದ್ರದ ಚಟುವಟಿಕೆ

ಮೂಡುಬಿದರೆ ರಂಗ ಅಧ್ಯಯನ ಕೇಂದ್ರದ ಚಟುವಟಿಕೆ


ಕರ್ನಾಟಕದ ರಾಜಧಾನಿ ಬೆಂಗಳೂರು ಅಥವಾ ಕೆಲವೇ ಜಿಲ್ಲಾ ಕೇಂದ್ರಗಳು  ಸದಾ ರಂಗ ಚಟುವಟಿಕೆಯಲ್ಲಿ ನಿರತವಾಗಿರುವ ಬಗ್ಗೆ ದಿನ ನಿತ್ಯದ ಪತ್ರಿಕೆಗಳಲ್ಲಿ ಚಿತ್ರ ಸಹಿತ ಸುದ್ದಿ ಪ್ರಕಟವಾಗುತ್ತಲೇ ಇರುತ್ತದೆ. ಹಾಗಾಗಿ ಅಲ್ಲಿ ನಡೆಯುವ ರಂಗ ಚಟುವಟಿಕೆಗಳ ಬಗ್ಗೆ ರಾಜ್ಯದ ಮೂಲೆ ಮೂಲೆಗೆ ಸುದ್ದಿ ಮುಟ್ಟಿರುತ್ತದೆ. ಇದರಿಂದಾಗಿ ಬೆಂಗಳೂರು ಅಥವಾ ಕೆಲವೇ ಜಿಲ್ಲಾ ಕೇಂದ್ರಗಳು ರಂಗ ಚಟುವಟಿಕೆಗಳ ಕೇಂದ್ರವೆಂದು ಬಿಂಬಿತವಾಗುತ್ತಿವೆ. ಇತರ ಪ್ರಚಾರ ಮಾಧ್ಯಮಗಳು ಹೆಚ್ಚು ಚುರುಕಾಗಿಲ್ಲದ ಜಿಲ್ಲೆಗಳು ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯಾವ ಚಟುವಟಿಕೆಗಳೂ ಸಹ ಸುದ್ದಿಯನ್ನೇ ಮಾಡುತ್ತಿಲ್ಲ. ಹಾಗಾಗಿ  ರಂಗ ಚಳುವಳಿ ಅಥವಾ ರಂಗಭೂಮಿ ಉಳಿದಿರುವುದು ತನ್ಮೂಲಕ ಕನ್ನಡ ಭಾಷೆ ಉಳಿದಿರುವುದು ಕೇವಲ ದೊಡ್ಡ ದೊಡ್ಡ ನಗರಗಳ ಮೂಲಕ ಎಂದು ಭಾಸವಾದರೆ ಆಶ್ಚರ್ಯ ಇಲ್ಲ.

ಕೆಲವೊಮ್ಮೆ ಪುಟ್ಟ ಪುಟ್ಟ ಊರುಗಳಲ್ಲಿ ನಡೆದ ಚಟುವಟಿಕೆಗಳು ನಡೆದುದು ಪತ್ರಿಕೆಗಳಲ್ಲಿ ಬಂದರೂ ಸಹ ಅವೆಲ್ಲವುಗಳೂ ಸ್ಥಳೀಯ ಅವತರಣಿಕೆಗಳಿಗೆ ಸೀಮಿತಗೊಂಡು ದೂರದಲ್ಲಿರುವವರಿಗೆ ಅಜ್ಞಾತವಾಗಿಯೇ ಉಳಿದಿರುತ್ತದೆ. ಇದರಿಂದಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುವ ಸಂಘ ಸಂಸ್ಥೆಗಳು ಸರ್ಕಾರದ ಅಥವಾ ಇಲಾಖೆಗಳ ವಾ ಅಕಾಡೆಮಿಗಳ ಗಮನಕ್ಕೆ ಬಾರದೇ ಹೋಗುತ್ತಿವೆ. ಸಂಬಂಧಿತ ಇಲಾಖೆ ಅಕಾಡೆಮಿಗಳೂ ಸಹ ಗುರುತಿಸುವಲ್ಲಿ ಹಿಂದೆ ಬಿದ್ದಂತಿವೆ.  ಹಾಗಾಗಿ ಇವುಗಳಿಂದ ಪಡೆಯಬಹುದಾದ ಸಹಾಯಧನ, ಸವಲತ್ತು, ಪ್ರೋತ್ಸಾಹಗಳಿಂದ ವಂಚಿತವಾಗುತ್ತಿವೆ. ಇದರಿಂದಾಗಿ ರಾಜಧಾನಿಯಿಂದ ದೂರವಿರುವ ಇಂತಹ ಅನೇಕ ಸಂಸ್ಥೆಗಳು ಆರ್ಥಿಕ ಸಂಕಷ್ಟದಿಂದಾಗಿ ಕೆಲವೇ ಸಮಯದಲ್ಲಿ ನಿಷ್ಕ್ರಿಯವಾಗಿಬಿಡುತ್ತಿವೆ.

ಇಂತಹ ಸಂದರ್ಭದಲ್ಲಿ ಮೊನ್ನೆ ಮೊನ್ನೆ ಅಂದರೆ ಅಕ್ಟೋಬರ್ 3ರಿಂದ 7 ವರೆಗೆ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗಾಗಿ ನಡೆದ ರಂಗ ಭೂಮಿ ಮುಖವರ್ಣಿಕೆ ಕಾರ್ಯಾಗಾರದ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸುವುದರ ಜೊತೆಗೆ ವಿವರಗಳನ್ನು ನೀಡುತ್ತಿದ್ದೇನೆ.

 

5ದಿನಗಳ ಕಾರ್ಯಾಗಾರವನ್ನು ಸಂಸ್ಥೆಯ ಮುಖ್ಯಸ್ಥ, ರುವಾರಿ, ಕಲಾವಿದ ಡಾ|| ಮೋಹನ ಆಳ್ವಾ ರವರು ಸಂಪನ್ಮೂಲ ವ್ಯಕ್ತಿ ಪುರುಷೋತ್ತಮ ತಲವಾಟ ರವರಿಂದ ಮುಖವರ್ಣಿಕೆ ಮಾಡಿಸಿಕೊಳ್ಳುವ ಮೂಲಕ ಉದ್ಘಾಟಿಸಿದ್ದಲ್ಲದೇ ಉದ್ಘಾಟನಾ ಸಮಾರಂಭದುದ್ದಕ್ಕೂ ಅದೇ ವೇಷದಲ್ಲಿಯೇ ವ್ಯವಹರಿಸಿದ್ದೊಂದು ವಿಶೇಷ. ಹೀಗೆ ತಮ್ಮ ಉದ್ಘಾಟನಾ ಭಾಷಣದಲ್ಲಿ ತಮ್ಮ ವಿದ್ಯಾರ್ಥಿಗಳಲ್ಲಿನ ಹಾಗೂ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿರುವವರೆಲ್ಲರಿಗೂ ಹೊಸ ಅನುಭವ ಮುಜುಗರ ಉಂಟುಮಾಡದೇ ಮುದವನ್ನುಂಟು ಮಾಡಲಿ ಎಂಬ ಉದ್ದೇಶದಿಂದ ತಾವು ರೀತಿಯಾಗಿ ಉದ್ಘಾಟಿಸುತ್ತಿರುವುದಾಗಿ ಹೇಳಿದರು. ಕಾರ್ಯಾಗಾರಕ್ಕೆ ಪುರುಷೋತ್ತಮ ತಲವಾಟ ಸಂಪನ್ಮೂಲ ವ್ಯಕ್ತಿಯಾಗಿ ದೊರಕಿರುವುದು ಸಹ ನಮ್ಮೆಲ್ಲರ ಸೌಭಾಗ್ಯ. ಸಂದರ್ಭವನ್ನು ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರೂ, ಶಿಕ್ಷಕ ವೃಂದದವರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

 

ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥ ಜೀವನ್ ರಾಂ ಸುಳ್ಯ (ನೀನಾಸಮ್ ಪದವೀಧರ) ನಾನು ಇಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ವಿದ್ಯಾರ್ಥಿಯಾಗಿಯೂ ಭಾಗವಹಿಸುತ್ತಿರುವುದು ಹೊಸ ಅನುಭವವನ್ನೇ ನೀಡುತ್ತಿದೆ ಎಂದು ಕಾರ್ಯಾಗಾರದ ಸ್ಥೂಲ ಪರಿಚಯ ಮಾಡಿಕೊಟ್ಟರು.

5ದಿನಗಳ ಶಿಬಿರದಲ್ಲಿ ಯಕ್ಷಗಾನ ನಾಟಕ ಮುಂತಾದ ಪ್ರದರ್ಶನಕಲೆಗಳಲ್ಲಿನ ಮುಖ ವರ್ಣಿಕೆಗಳ ಬಗ್ಗೆ ತರಬೇತಿ ನೀಡಲಾಯಿತು. ಹಾಗೆಯೇ ಅಂದಿನ ತರಗತಿಯಲ್ಲಿ ಕಲಿತುದನ್ನು ದಿನದಂತ್ಯದಲ್ಲಿ ಪುಟ್ಟ ಪ್ರಹಸನಗಳ ಮೂಲಕ ಪ್ರದರ್ಶಿಸಲಾಯಿತು. ಇದರಿಂದಾಗಿ ಶಿಬಿರದುದ್ದಕ್ಕೂ ಉತ್ಸಾಹ ಕುತೂಹಲಗಳನ್ನು ಕಾಯ್ದುಕೊಳ್ಳಲಾಯಿತು. ಹೀಗಾಗಿ ಶಿಬಿರಾರ್ಥಿಗಳು ಉತ್ಸಾಹದಿಂದಲೇ ಬಣ್ಣಗಳೊಂದಿಗೆ ಆಡುವಂತಾಯಿತು.

 

ಇದರಿಂದ ಉತ್ತೇಜಿತರಾದ ಸಂಸ್ಥೆಯ ಪ್ರಾಂಶುಪಾಲ ಪ್ರೊ ಕುರಿಯನ್ ರವರು ಇನ್ನು ಮುಂದೆ ಇಂತಹ ಕಾರ್ಯಾಗಾರವನ್ನು ರಾಜ್ಯ ಮಟ್ಟದಲ್ಲಿ ವ್ಯವಸ್ಥೆ ಮಾಡುವ ಗುರಿ ತಮ್ಮದಾಗಿದೆ ಎಂದು ಮುಕ್ತಾಯ ಸಮಾರಂಭದಲ್ಲಿ ನುಡಿದರು.

 

ವೃತ್ತಿಯಲ್ಲಿ ವೈದ್ಯರಾಗಿಯೂ ಶಿಕ್ಷಣ ಸಂಸ್ಥೆಗಳ ರುವಾರಿಯಾಗಿಯೂ ಇರುವ ಡಾ|| ಮೋಹನ್ ಆಳ್ವಾರವರು ಪ್ರತಿವರ್ಷವೂ ಆಳ್ವಾಸ್ ವಿರಾಸತ್, ಸಿರಿ ನುಡಿ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡು ತಮ್ಮ ಬಹುಮುಖ ವ್ಯಕ್ತಿತ್ವವನ್ನು ಸಾಬೀತು ಪಡಿಸುತ್ತಿರುವುದು ಅನುಕರಣೀಯವಲ್ಲವೇ?

Rating
No votes yet

Comments