ಪಾಮರರ ಅಭಿಪ್ರಾಯವೇನು?
ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಡಾ. ಟಿ ಆರ್ ಚಂದ್ರಶೇಖರ್ ರವರ ಕನ್ನಡ ಮಾತು -ಬರಹಗಳ ನಡುವೆ ಹೆಚ್ಚುತ್ತಿರುವ ಕಂದರ ಎಂಬ ಲೇಖನಕ್ಕೆ ಪ್ರತಿಕ್ರಿಯುಸುತ್ತಿದ್ದೇನೆ.
ಕನ್ನಡ ಭಾಷೆಯ ಉದ್ಧಾರಕ್ಕೆ ಹೊರಡುವರೆಲ್ಲರೂ ಈ -ಋ -ದಮೇಲೆ ಕ್ರೂರವಾಗಿ ಯಾಕೆ ದಾಳಿಯನ್ನು ಮಾಡುತ್ತಾರೆ? ಕನ್ನಡ ೫೨ ವರ್ಣಗಳಲ್ಲಿ -ಋ - ಅನಿಷ್ಟವೇ? ಭಾರವೇ?
ಮತ್ತೊಂದು ಪಂಥವಿದೆ, ಅದು ಎಲ್ಲದಕ್ಕೂ ಸಂಸ್ಕೃತವನ್ನು ದೂಷಿಸುತ್ತದೆ. ಅದು ಸಂಸ್ಕೃತವನ್ನು ದೂಷಿಸುತ್ತೆದೆಯೋ ಅಥವಾ ಮತ್ಯಾರನ್ನೋ ಲಕ್ಷದಲ್ಲಿಟ್ಟುಕೊಂಡು ಜರಿಯುತ್ತದೆಯೋ ಹೇಳುವುದು ಕಷ್ಟ.
ಎಲ್ಲರೂ ಪೂರ್ವಾಗ್ರಹ ಪೀಡಿತರಾಗಿಯೇ ಮಾತನಾಡುತ್ತಾರೆ. ಅನಂತ ಮೂರ್ತಿಯವರಾಗಿರಬಹುದು ಅವರ ಎದುರಾಳಿ ಶತಾವಧಾನಿ ಗಣೇಶರಾಗಿರಬಹುದು ಅದರ ಜೊತೆಗೆ ಭಾಷಾ ಸೈಧಾಂತಿಕರಾದ ಡಾ. ಟಿ ಆರ್ ಚಂದ್ರಶೀಖರ ರವರಾಗಿರಬಹುದು ಅಥವಾ ಡಾ. ಡಿ ಎನ ಶಂಕರಭಟ್ಟರಾಗಿರಬಹುದು, ಯಾರೂ ತಮ್ಮ ಲಹರಿಯಿಂದ ಹೊರಗೆಬಂದು ಯೋಚಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ.
ಅಕ್ಷರಗಳು ಎಷ್ಟಿರಬೇಕು.?- ಈಗ ಚಾಲತಿಯಲ್ಲಿರುವ QWERTY ಕಂಪ್ಯೂಟರ್ ಕೀ ಮಣೆಯಲ್ಲಿ ಕನ್ನಡದಲ್ಲಿ ರೂಢಿಯಲ್ಲಿರುವ ಎಲ್ಲಾ ಅಕ್ಷರಗಳನ್ನೂ ಮೂಡಿಸಬಹುದು. ಮನುಷ್ಯನು ಜಗತ್ತಿನ ಭಾಷೆಗಳಲ್ಲಿ ಒಟ್ಟೂ ೩೭೦ ದ್ವನಿಗಳನ್ನು ಉಪಯೋಗಿಸುತ್ತಾನೆ ಎಂದು ಎಲ್ಲೋ ಕೇಳಿದ ನೆನಪು. ಹೀಗಾಗಿ ಕಂಪ್ಯೂಟರ್ ಯುಗದಲ್ಲಿ ಈ ಅಕ್ಷರ ಸಂಖ್ಯೆಯನ್ನು ಇನ್ನೂ ಹೆಚ್ಚುಮಾಡಿ ಹೆಚ್ಚಿನ ಸೌಲತ್ತು ಪಡೆಯಬೇಕೇ ವಿನಃ ಕಡಿಮೆ ಮಾಡಿಕೊಳ್ಳುವುದು ಹಿಮ್ಮುಖ ಚಲನೆಯಾಗುತ್ತದೆ. ವಿಷಯವನ್ನು ಕನ್ನಡಿಗರ ಬದುಕು- ಭವಿಷ್ಯದ ನೆಲೆಯಲ್ಲೇ ನಿರ್ಧರಿಸ ಬೇಕೇ ವಿನಃ ಸಂಸ್ಕೃತ ಪ್ರೀತಿ ಅಥವಾ ಕನ್ನಡದ ವ್ಯಾಮೋಹದ ಮೇಲಲ್ಲ. ಒಂದೆರಡು ಹೆಚ್ಚಿನ ವರ್ಣವನ್ನು ತಲೆಯಲ್ಲಿ ಗೃಹಿಸಲಾರದಷ್ಟು ದಡ್ಡರೇ ಕನ್ನಡಿಗರು? ಅಕ್ಷರಗಳನ್ನು ಕಡಿಮೆ ಮಾಡುವುದೆಂದರೆ ಕನ್ನಡಿಗರಿಗೆ ಮಾಡುವ ಅವಮಾನವೇ ಸರಿ.
ಕನ್ನಡದ ಮೇಲೆ ಸವಾರಿ ಯಾರಿಂದ? - ಮನೆಯ ಪಕ್ಕದಲ್ಲಿರುವ ಶುಲ್ಕವೇ ಇಲ್ಲದ ಕನ್ನಡ ಶಾಲೆಗಳನ್ನು ಬಿಟ್ಟು ದೂರದಲ್ಲಿರುವ ಶಾಲೆಗೆ ಸಹಸ್ರಾರು ರೂಪಾಯಿ ಡೊನೇಶನ್ ನೀಡಿ ಇಂಗ್ಲೀಶ್ ಕಲಿಯುವ ಮಕ್ಕಳಿಗೆ ಕನ್ನಡ ಎನ್ನುವುದು ಒಂದು ಹೊರೆ, ಮಕ್ಕಳ ಭವಿಶ್ಯಕ್ಕೆ ಇಂಗ್ಲೀಷೇ ಹೊರತು ಕನ್ನಡ ಅಲ್ಲ ಎಂದು ಪ್ರಾಮಾಣಿಕವಾಗಿ ನಂಬುವ ಪಾಲಕನಿಗೂ ಕನ್ನಡ ಬೇಡ. ೮೦ ಪ್ರತಿಶತ ಇಂಗ್ಲೀಶು ೨೦ ಪ್ರತಿಶತ ಕನ್ನಡದಲ್ಲಿ ಮಾತನಾಡುವ ಎಫ಼್ ಎಂ/ ಟಿ ವಿ ಲಲನೆಯರ ಜನಪ್ರಿಯ ಕಾರ್ಯಕೃಮಗಳನ್ನು ನೋಡಿದಮೇಲೂ ಕನ್ನಡದ ಮೇಲೆ ಸಂಸ್ಕೃತದ ದಬ್ಬಾಳಿಕೆ ಎಂದು ಹಲುಬುವುದು ಅರ್ಥವಿಲ್ಲದ ಮಾತು.
ಸ್ಪೆಲಿಂಗ ಸಮಸ್ಯೆ;- ಇದನ್ನು ಪರಿಹರಿಸಲು ಉಚ್ಚಾರಣೆ ಹೇಗಿರುತ್ತೋ ಬರಹವನ್ನು ಅದೇರೀತಿ ಬದಲಾಯಿಸಿಕೊಳ್ಳುವುದು ಪರಿಹಾರವೆಂಬ ಡಾ. ಡಿ ಎನ್ ಶಂಕರಭಟ್ ರವರ ಹೇಳಿಕೆಯನ್ನು ಯಾವರೀತಿಯಲ್ಲಿ ಅರ್ಥೈಸಿ ಕೊಳ್ಳಬೇಕೋ ಅರ್ಥವಾಗುತ್ತಿಲ್ಲ.
ಪ್ರಾದೇಶಿಕ ಕನ್ನಡದ ಉಚ್ಚಾರಣೆಯ ಬಗೆಗೆ ಯಾರದೂ ವಿರೋಧವಿಲ್ಲ. ಆದರೆ ಅದನ್ನು ಬರೆವಣಿಗೆಗೆ ತಂದಾಗ ಅಭಾಸವಾಗದ ಎಲ್ಲರಿಗೂ ಅರ್ಥವಾಗುವ ಒಂದು ವ್ಯವಸ್ಥೆ ಅಡಿ ಅದು ಇರಲೇ ಬೇಕು. ಹಾಗಿಲ್ಲದಿದ್ದಲ್ಲಿ ಏನಾಗುತ್ತದೆ ಎಂಬುದಕ್ಕೆ ಉದಾಹರಣೆಗೆಯಾಗಿ ಪ್ರಜಾವಾಣಿಯಲ್ಲಿ ಪ್ರಕಟವಾದ ತಪ್ಪು ಮಾಹಿತಿ ದಾರಿತಪ್ಪಿಸುವ ಯತ (ಪ್ರ.ವಾ.೧೪-೦೧-೦೮) ಎಂಬುದನ್ನು ನೋಡಬಹುದು . ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ಇರುವ ಮಾಹಿತಿ ಯಂತ್ರದಲ್ಲಿ ತಪ್ಪುಗಳ ಆಗರವೇ ಇದೆ ಎಂದು ಆರೋಪಿಸುತ್ತಾ ಕಬ್ಬಿನ ಬೆಳೆ ಎನ್ನುವಲ್ಲಿ ಕಬ್ಬಿಣ ಬೆಳೆ ಎಂದೂ ಸ್ಮಾರಕಗಳು ಎಂದು ಬರೆಯಬೇಕಾದ ಕಡೆಗೆ ಸಮಾರಕಗಳು ಎಂತಲೂ ಇದೆ ಅವು ತಪ್ಪುಕನ್ನಡವಾಗಿದ್ದು ದಾರಿತಪ್ಪಿಸುವ ಮಾಹಿತಿ ಎಂದು ವಿಶ್ಲೇಶಿಸಿದ್ದಾರೆ. ಎಂದಾದರೂ ಬೆಳಗಾವಿ ಪಟ್ಟಣವನ್ನು ಒಮ್ಮೆ ಸುತ್ತಿ ನೋಡಿ. ಅಂಗಡಿಯ ನಾಮ ಫಲಕ ಓದುತ್ತ ಹೋಗಿ. ನಿಮಗೆ ಅಲ್ಲಿ ಹಣಮಂತರಾಯ (ಹನುಮಂತರಾಯ), ಪರಭಾಕರ (ಪ್ರಭಾಕರ), ಪರತಾಪ(ಪ್ರತಾಪ) ಹೆಸರಿನ ಬೋರ್ಡುಗಳೂ ಸಿಗುತ್ತವೆ. ಸ್ಮಶಾನದಲ್ಲಿ ಪುಣ್ಯವಂತರ ಸಮಾರಕ(ಸ್ಮಾರಕ) ಗಳೂ ಸಿಗಬಹುದು. ಸುತ್ತಿ ಸುತ್ತಿ ಸುಸ್ತಾದಾಗ ಯಾರನ್ನಾದರೂ ವಿಚಾರಿಸಿ -‘ಇಲ್ಲಿ ಕಬ್ಭಿಣ ಹಾಲು ಎಲ್ಲಿ ಸಿಗುತ್ತದೆ?’ ಆತ ನಿಮಗೆ ಖಂಡಿತ ಕುಲುಮೆಗೆ ದಾರಿತೋರಿಸದೇ ಒಂದು ರಸವಂತಿಗೆ ದಾರಿತೋರಿಸುತ್ತಾನೆ. ಅದು ಬೆಳಗಾವಿಯ ಸ್ಥಾನಿಕ ಕನ್ನಡ.
ಮೇಲಾಧಿಕಾರಿ ಬರೆದ ಕರಡು ಪತ್ರದಲ್ಲಿರುವ ಕಾಗುಣಿತದ ತಪ್ಪುಗಳನ್ನು ಸರಿಪಡಿಸಿ ಸರಿಯಾಗಿ ಟೈಪ್ ಮಾಡುವುದು ಲಿಪಿಕರ ಕರ್ತವ್ಯ. ನನ್ನ ಬೆಳಗಾವಿ ಕಛೇರಿಯಲ್ಲಿ ನಮ್ಮ ಟೈಪಿಸ್ಟರೂ ಇದನ್ನೇ ಪ್ರಾಮಾಣಿಕವಾಗಿ ಮಾಡುತ್ತಾರೆ. ನನ್ನ ಕರಡು ಪ್ರತಿ ಶುದ್ಧಪ್ರತಿಯಾಗಿ ನನ್ನ ಬಳಿ ಬಂದಾಗ ಅದರಲಿರುವ ಎಲ್ಲಾ ‘ನ’ ಕಾರಗಳಿಗೆ ಬದಲಾಗಿ ‘ಣ’ ಕಾರವೇ ಇರುತ್ತದೆ. ವಿಧ್ವಾಂಸರು ಇಷ್ಟಪಡುವ ಕನ್ನಡ ಲಿಪಿ ಇದೇ ಏನು? ಉಚ್ಚಾರಣೆಯಲ್ಲಿ ಅಲ್ಲವಾದರೂ ಬರವಣಿಗೆಯಲ್ಲಾದರೂ ಇಡೀ ಕರ್ನಾಟಕಕ್ಕೆ ಒಂದು ಸಾಮಾನ್ಯ ಲಿಪಿ ಬೇಡವೆ?
ವರ್ಣಗಳು ಯಾಕೆ ಬೇಡವೇ ಭೇಡ? ;- ಋ ಙ ಞ ವರ್ಣಗಳು ಬೇಡ ಎಂಬುದನ್ನು ಅರೆಮನಸ್ಸಿನಿಂದ ಒಪ್ಪಬಹುದು. ಇಂದು ಕನ್ನಡದ ಅನುನಾಸಿಕಗಳಿಗೆ ‘೦’ ಒಂದನ್ನೇ ಬಳಸಲಾಗುತ್ತದೆ. ನಾವು ಅದನ್ನು ಅನಿವಾರ್ಯವಾಗಿ ಬಳಸುತ್ತಿದ್ದೇವೆ. ಏಕೆಂದರೆ ಮೌಖಿಖವಾಗಿ ಸಾಗಿಬರಬೇಕಾದ ಅನುನಾಸಿಕಗಳ ಮೂಲ ಧ್ವನಿಯನ್ನು ನಮ್ಮ ಹಿರಿಯರು ನಮ್ಮ ತನಕ ದಾಟಿಸಲೇಇಲ್ಲ. ನಮ್ಮ ಹಿಂದಿನ ಸುಧಾರಣಾ ವಾದಿಗಳು ಅದನ್ನು ಬಿಟ್ಟಿದ್ದು ನಮ್ಮ ದುರ್ದೈವ. ಬಿಡುವಂತಃ ಅನಿವಾರ್ಯತೆ ಏನಿತ್ತು? (ಹವ್ಯಕ ಭಾಷೆಯಲ್ಲಿ ಙ ಹಗೂ ಞ ಗಳದೇ ಕಾರುಬಾರು) ಈಗ ಖ ಛ ಠ ಥ ಫ ಹಾಗೂ ಘ ಝ ಢ ಧ ಭ ಗಳಿಗೆ ಕೊಕ್ ಕೋಡಲು ಪಂಡಿತರ ಹುನ್ನಾರ ನಡೆದಿದೆ. ಕೈ ಬಿಡುವುದರಿಂದ ಕನ್ನಡಿಗರಿಗೆ ಏನು ಲಾಭವಾಗುತ್ತದೆ- ಪಂಡಿತರಿಗೇ ಗೊತ್ತು. ಹಳೆಯ ಪುಸ್ಥಕಗಳನ್ನೆಲ್ಲ ಒಲೆಗೆ ಹಾಕೋಣವೇ?
ಕಬ್ಬಿಣದ ಕಡಲೆ ಕನ್ನಡಕ್ಕೆ ಮಾರಕವೇ? ಶತಾವಧಾನಿ ಗಣೇಶರ ಸಂಸ್ಕೃತ ಭೂಯಿಷ್ಠ ಅಂಕಣಗಳನ್ನು ಚಾಚೂ ತಪ್ಪದೆ ಓದಿ ಒಂದಕ್ಷರವೂ ಅರ್ಥವಾಗದೆ ತಲೆ ಅಲ್ಲಾಡಿಸಿದವರಲ್ಲಿ ನಾನೂ ಒಬ್ಬ. ಕಳೆದ ತಿಂಗಳು ಒಂದು ಸಂಸ್ಕೃತ ಸಮ್ಮೇಳನಕ್ಕೆ ಹೋಗೆದ್ದೆ. ಭಾಶಾಂತರಿಸದೆ ಶುದ್ಧ ಸಂಸ್ಕೃತದಲ್ಲಿ ಭಾಷಣ ಮಾಡಿದರು. ಮೂರುತಾಸು ನಡೆದ ಸಭೆಯಲ್ಲಿ ನನಗೆ ಹಾಗೂ ನನ್ನ ಹೆಂಡತಿಗೆ ಅರ್ಥವಾಗದ ಒಂದೇ ಒಂದು ಪದ ಎಂದರೆ ಕಂಪಿಲ್ಲಕ ಎಂಬ ಶಬ್ಧ ಮಾತ್ರ. ಭಾಷಣಕಾರರು ಅದರ ಅರ್ಥವನ್ನು ಮಾತ್ರ ಹೇಳಿದರು. ಹೀಗಾಗಿ ಅಲ್ಲಿ ಕೇಳಿದ ನೂರಕ್ಕೆ ನೂರು ಸಂಸ್ಕೃತ ಪದಗಳಲ್ಲಿ ಒಂದೂ ನನಗೆ ಕಠಿಣ ಪದ ಎನ್ನಿಸಲಿಲ್ಲ. ಇದರರ್ಥ ಸಂಸ್ಕೃತವು ಸರಳವೂ ಅಲ್ಲ ಕಠಿಣವು ಆಲ್ಲ. ಪಂಡಿತರ ಕೈಗೆ ಸಿಕ್ಕಿದರೆ ಕಠಿಣ ಭಾಷೆ. ಪಾಮರರ ಕೈಗೆ ಸಿಕ್ಕಿದರೆ ಸರಳ ಭಾಷೆ.
ಸಂಸ್ಕೃತವು ಸಾಮಜಿಕ ಅಸಮಾನತೆ ತರುತ್ತದೆಯೆ? ಸಂಸ್ಕೃತದಲ್ಲಿರುವ ಸಾಹಿತ್ಯಗಳು ಸಾಮಾಜಿಕ ಅಸಮಾನತೆಗಳನ್ನು ಬೋಧಿಸುತ್ತವೆ ಎಂಬುದರಬಗ್ಗೆ ನನಗೂ ಸಹಮತವಿದೆ. ಆದರೆ ಆ ಸಾಹಿತ್ಯದಲ್ಲಿ ಸಾಮಾಜಿಕ ಸಮಾನತೆಯನ್ನು ಸಾರಿ ಸಾರಿ ಹೇಳುವ ಸಾಹಿತ್ಯಗಳೂ ಇವೆ. ಸಂಸ್ಕೃತದ ಪರ ವಿರೋದಿಗಳಿಗೂ ಇದು ಗೊತ್ತಿಲ್ಲದ ವಿಷಯವೇನಲ್ಲ. ಸಂಸ್ಕೃತ ಸಾಹಿತ್ಯವು ಸಾಮಾಜಿಕ ಅಸಮಾನತೆಯನ್ನು ಬೋಧಿಸಿದ ಮಾತ್ರಕ್ಕೆ ಸಂಸ್ಕೃತ ಭಾಷೆಯನ್ನು ಅಪರಾಧಿ ಸ್ಥಾನದಲ್ಲಿ ಏಕೆ ನಿಲ್ಲಿಸಬೇಕು?
ಕನ್ನಡಿಗನ ಗೃಹಣ ಶಕ್ತಿಗೆ ಕುಂದುಂಟೇ? ಕನ್ನಡದ ಒಂದು ಮಗು ಕನ್ನಡದ ೫೨, ಹಿಂದಿಯ ೫೨, ಹಾಗೂ ಇಂಗ್ಲೀಶಿನ ೨೬ ಅಕ್ಷರಗಳನ್ನು ಜೊತೆಗ ಮೂರು ಭಾಷೆಗಳ ತಲಾ ಹತ್ತು ಸಂಖ್ಯೆಯನ್ನು, ಅಂಕಗಣಿತ ಜೊಮೆಟ್ರಿಗಳ ಸಂಕೇತಗಳನ್ನು, ರೋಮನ ಅಂಕೆಗಳನ್ನು, ಟ್ರಾಪಿಕ್ ಸೈನ್ ಗಳನ್ನು ತೊಂದರೆ ಇಲ್ಲದೇ ಕಲಿಯುತ್ತಿರುವಾಗ ಈ ಮೂರು ಆಕ್ಷರಗಳು ಅವರಿಗೆ ಹೊರೆ ಆಗುತ್ತದೆಯೇ? ಇದರೊಂದಿಗೆ ಕರ್ನಾಟಕದಲ್ಲಿ ಉರ್ದು ಮಾಧ್ಯಮದಲ್ಲಿ ಓದುವ ವಿದ್ದ್ಯಾರ್ಥಿ ಸುಮಾರು ೪೭ ಉರ್ದು ಅಕ್ಷರವನ್ನೂ ೧೦ ಅಂಕೆಗಳನ್ನೂ ಕಲಿಯುವುದರಲ್ಲಿ ಹಿಂದೆ ಬೀಳುವುದಿಲ್ಲ. ಕೆಲವು ದಶಕಗಳ ಹಿಂದಾಗಿದ್ದರೆ ಹೆಚ್ಚಿನ ಅಕ್ಷರಗಳು ಹೊರೆ ಇಳಿಸುವುದರಲ್ಲಿ ಅರ್ಥವಿತ್ತೋ ಏನೋ. ಏಕೆಂದರೆ ದಲಿತ, ಹಿಂದುಳಿದ ವರ್ಗದವರಿಂದ ಕೆಲವು ಧ್ವನಿಗಳನ್ನು ಹೊರಡಿಸುವುದು ಕಷ್ಟ ಸಾಧ್ಯವಾಗಿತ್ತು. ಈಗ ಹಾಗಿಲ್ಲ, ಅವರೆಲ್ಲಾ ವಿದ್ಯಾವಂತರಾಗಿದ್ದಾರೆ. ಈಗ ಯಾರ ಬಾಯಿಯಲ್ಲಿ ಬೇಕಾದರೂ ಕಾಕುತ್ಸ್ಥ ಎಂದು ಹೇಳಿಸಬಹುದಾಗಿದೆ.
ಇದು ತರ್ಕಬದ್ಧವೇ?;- ಋ ಙ ಞ ಅಕ್ಷರ ತೆಗೆಯಲು ನೀಡುತ್ತಿರುವ ಕಾರಣಗಳಲ್ಲಿ ಋ ವನ್ನು ರು ಅಕ್ಷರದಿಂದ ಸಾಧಿಸಬಹು,ಅನುನಾಸಿಕಗಳನ್ನು ಸೊನ್ನೆಯಿಂದ ಸಾಧಿಸಬಹುದು. ಆದರಿಂದ ಎರಡು ಅಕ್ಷರಗಳ ಹೊರೆ ಬೇಡ. ಹಾಗಿದ್ದಲ್ಲಿ ಇಂಗ್ಲೀಶಿನಲ್ಲಿ c ಅಥವಾ k ಹಾಗೂ I ಅಥವಾY ಅಕ್ಷರಗಳಲ್ಲಿ ಒಂದನ್ನು ಉಳಿಸಿಕೊಂಡು ಹಗುರಮಾಡಿಕೊಳ್ಳಲಿಲ್ಲ ಏಕೆ? C ಹಾಗೂ Sಳಲ್ಲಿ ಒಂದನ್ನೇ ಇಟ್ಟುಕೊಳ್ಳಬಹುದಲ್ಲವೇ? ಉರ್ದುವಿನಲ್ಲಿ ೩ ತರಹದ ಕ ಕಾರಗಳಿವೆ.
ಕೇಳಲು ಒಂದೇ ರೀತಿಯಲ್ಲಿದೆ ಇದೆ. ಅದ್ದರಿಂದ ಎರಡು ಅಕ್ಷರ ಕನ್ನಡದಲ್ಲಿ ಬೇಡ ಎಂದಾದರೆ- ಮೈಸೂರಿಗ ಎಷ್ಟೇ ಸಾರಿ ಕಷ್ಟಪಟ್ಟು ‘ ನಾನು ಕೃತಜ್ಞ ನಾಗಿದ್ದೇನೆ’ ಎಂದು ನನಗೆ ಅರ್ಥಮಾಡಿಸಲು ತಿಣಿಕಿದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ನನಗೆ ಅದು ‘ನಾನು ಕೃತಘ್ನ ನಾಗಿದ್ದೇನೆ’ ಎಂದೇ ಕೇಳಿಸುತ್ತದೆ . ನಾನು ಶೊರ್ಟ್ ಹಾಂಡನಲ್ಲಿ ಬರೆದುಕೊಳ್ಳುತ್ತಿದ್ದಲ್ಲಿ ಕೃತಘ್ನ ಎಂದೇ ಬರೆದುಕೊಳ್ಳುತ್ತಿದ್ದೆನೆನೋ. ಗಮನಿಸಿ ಕೃತಜ್ಞ ಪದವು ಋ ಮತ್ತು ಞ ವನ್ನು ಒಳಗೊಂಡಿದೆ.
ಮತ್ತೂ ಒಂದು- ಕನ್ನಡಿಗರೆಲ್ಲಾ ಕಞಾರ ಕಿಞಣ್ಣ ರೈ ರವರನ್ನು ಮರೆತೇಬಿಟ್ಟು ಕೃತಘ್ನರಾಗಬೇಕೇ? ನಾನು ನೋಡಿದಂತೆ ಮೈಸೂರು ಭಾಗದ ಜನತೆ ಅ ಹಾಗೂ ಆ ಎರಡರ ಉಚ್ಚಾರಣೆಯನ್ನು ಒಂದೇ ರೀತಿ ಮಾಡುತ್ತದೆ. ಅ ಕ್ಕೆ ಸಣ್ಣ ಆ ಎಂತಲೂ ಆ ಕ್ಕೆ ದೊಡ್ಡ ಆ ಎಂತಲೂ ಬಿಡಿಸಿ ಹೇಳುತ್ತಾರೆ. ಉದಾ- ಅಕಬರ ಅಲಿ ಎಂದು ಬರೆದು ಆಕಬರ ಆಲಿ ಎಂದು ಓದುವುದನ್ನು ಗಮನಿಸಿ. ನಂತರದಲ್ಲಿ ಯಾರಾದರೂ ಪಂಡಿತರು ಆ ಒಂದೇ ಸಾಕು ಎಂದು ವಾದ ಮುಂದಿಡಬಹುದು. ಎಲ್ಲಕ್ಕಿಂತ ಅಭಾಸ ಎಂದರೆ ಒಬ್ಬರು ತಮ್ಮ ಮನೆಮುಂದು ತಮ್ಮ ಹೆಸರನ್ನು ಪುಷ್ಪವತಿ ಎಂದು ಬರೆದುಕೊಂಡಿರುತ್ತಾರೆ . ಪುಷ್ಬವತಿ ಎಂದರೆ ಋತುಮತಿಯಾದ ಹೆಣ್ನು ಎಂದರ್ಥ!! ನಿಜವಾಗಿ ಅವರು ಪುಷ್ಪಾವತಿ ಎಂದು ಬರೆದುಕೊಳ್ಳಬೇಕಾಗಿತ್ತು. ಅರಸೀಕೆರೆ ಹಾಸನಗಳ ಅ ಕಾರ ಹ ಕಾರಗಳ ಬಗ್ಗೆ ಇರುವ ನಗೆಹನಿಯನ್ನು ನೆನಪಿಸಿಕೊಂಡು ನಕ್ಕುಬಿಡಿ. ಅದೇರೀತಿ ಮೈಸೂರು ಭಾಗದ ಜನತೆಯ ಙ ಹಾಗೂ ಞ ಗಳ ಉಚ್ಚಾರ ನನಗೆ ತೃಪ್ತಿನೀಡುತ್ತಿಲ್ಲ.
ಅರ್ಧ್ಮಮಾತ್ರ ಒಪ್ಪಬಹುದಾದ ಮಾತುಗಳು;- ‘ಕನ್ನಡ ಬರೆಹಗಳಲ್ಲಿ ಸಂಸ್ಕೃತ ಪದಗಳ ಬಳಕೆಯನ್ನು ನಿಲ್ಲಿಸಬೇಕು. ಕನ್ನಡದವೇ ಆದ ಪದಗಳನ್ನು ಬಳಸುವುದನ್ನು ಪ್ರೋತ್ಸಾಹಿಸಬೇಕು’ಎಂದು ಡಾ. ಚಂದ್ರಶೇಖರ ರವರು ಅಭಿಪ್ರಾಯಪಡುತ್ತಾರೆ. ಪದಬಳಕೆಯನ್ನು ಸಂಪೂರ್ಣ ನಿಲ್ಲಿಸುವುದು ಸಾಧ್ಯವೂ ಅಲ್ಲ. ಸಾಧುವೂ ಅಲ್ಲ. ನಮ್ಮ ಮಕ್ಕಳು/ಮೊಮ್ಮಕ್ಕಳು ಪುನಃ ಆಂಡಯ್ಯನ ಕಾಲಕ್ಕೆ ಹೋಗಲಾರರು.
ವೈಫಲ್ಯ ಎಲ್ಲಿ;- ನಮ್ಮ ಮಕ್ಕಳಿಗೆ ಕಟ್ ಬಟ್ ಪುಟ್ ಗಳನ್ನು cut but put ಎಂದು ಬರೆಯಲು ಕಲಿಹಿಸುತ್ತೇವೆ. Conduct ಪದವನ್ನು ಸಮಯ ಸಂಧರ್ಭಗಳನ್ನು ನೋಡಿಕೊಂಡು ಕೊಂಡಕ್ಟ್ ಅಥವಾ ಕಂಡಕ್ಟ್ ಎಂದು ಓದಲು ಕಲಿಸುತ್ತೇವೆ. ಓದಿಗೂ ಬರಹಕ್ಕೂ ಅಜ ಗಜಾಂತರದಲ್ಲಿರುವ ಸಾವಿರಾರು ಇಂಗ್ಲೀಷ್ ಪದವನ್ನು ಸರಿಯಾಗಿ ಓದಲು ಬರೆಯಲು ಕಲಿಸುತ್ತೇವೆ. ಹೀಗಿದ್ದೂ ಕೇವಲ ೧೦ ಮಹಾ ಪ್ರಾಣಗಳನ್ನು ಕಲಿಸಲು ಶಿಕ್ಷಕನಿಂದ ಸಾಧ್ಯವಿಲ್ಲವಾದಲ್ಲಿ ಅದು ಆ ಶಿಕ್ಷಕನನ್ನು ತಯಾರುಮಾಡಿದ ವ್ಯವಶ್ಥೆಯಲ್ಲಿ ಇರಬಹುದಾದ ದೋಷ. ಅದಕ್ಕೆ ಭಾಷೆಯನ್ನು ಏಕೆ ಹೊಣೆಯನ್ನಾಗಿ ಮಾಡಬೇಕು?
ಪಂಡಿತರು ಮಾಡಬೇಕಾದ ಕೆಲಸ;- ಈಗ ಇರುವ ಕನ್ನಡ ಅಕ್ಷರಗಳು ಸಂಪೂರ್ಣವಾಗಿ ಕನ್ನಡವನ್ನು ಧ್ವನಿಸುತ್ತಿಲ್ಲ. ವರ್ಣಗಳು ಕೇವಲ ಶಿಷ್ಟ ಕನ್ನಡವನ್ನು ಮಾತ್ರ ದಾಖಲಿಸುತ್ತವೆ. ಗ್ರಾಮಾತರ ಪ್ರದೇಶದ ನಿರಕ್ಷರ ಕುಕ್ಷಿಯ ಬಾಯಿಂದ ಹೋರಡುವ ದ್ವನಿಯನ್ನು ಕನ್ನಡದ ಲಿಪಿಯು ಬರೆಯಲಾರದು. ಅದರಲ್ಲೂ ಮುಖ್ಯವಾಗಿ ಉತ್ತರಕರ್ನಾಟಕದ ಆಡುಭಾಷೆಯನ್ನು ಅದರ ಧ್ವನಿಯಂತೆ ಬರೆಯಲು ಸಾಧ್ಯವಾಗುತ್ತಿಲ್ಲ. ಉದಾ;- ಬೇಂದ್ರೆ ಯವರ ‘ಇನ್ನೂ ಯಾಕ ಬರಲಿಲ್ಲ ಹುಬ್ಬಳ್ಳಿಯವಾಂ, ವಾರದಾಗೆ ಮೂರುಸಾರೆ ಬಂದ ಹೋಗವಾಂ’. ಬೇದ್ರೆಯವರು ಇಲ್ಲಿssss ಗಳನ್ನು ಬಳಸಿದ್ದಾರೆ, ಆದರೂ ಅದು ಪರಿಪೂರ್ಣ ಮಟ್ಟವನ್ನು ಮುಟ್ಟುತ್ತಿಲ್ಲ. ಓದಿದ ನಂತರ, ಗೊತ್ತಿರುವವರಿಂದ ಹಾಡಿಸಿ ನೋಡಿ ಇಲ್ಲಿ ಯಾಕ/ಹುಬ್ಬಳ್ಳಿಯವಾಂ/ಬಂದ ಹೋಗವಾಂ ಗಳು ಓದಿಗೂ ಹಾಡಿಗೂ ಮೇಳೈಸುವುದಿಲ್ಲ.ಆದ್ದರಿಂದ ವರ್ಣಗಳನ್ನು ಇನ್ನೂ ಹೆಚ್ಚಿಗೆ ಮಾಡುವುದು ಸಾಧ್ಯವೇ ಯೋಚಿಸಿ ನೋಡಿ.
ನನ್ನ ಕನ್ನಡ ಪದ ಸಂಪತ್ತಿನಲ್ಲಿ ಸಂಸ್ಕೃತ ಸಾಹಿತ್ಯದ ಪಾಲು ಅತ್ಯಲ್ಪ, ಹೆಚ್ಚಿನವು ಪ್ರಜಾವಾಣಿ ಮುಂತಾದ ಪತ್ರಿಕೆಗಳ ಮೂಲಕ ಸಂಪಾದಿಸಿದ್ದೇ ಆಗಿದೆ,
ಪಂಡಿತರ ಮಾತನ್ನು ಮೂಲೆಗೆ ಇಟ್ಟು, ಕನ್ನಡಿಗರ ಉಳಿವಿಗಾಗಿ, ಕನ್ನಡದಲ್ಲಿ ಬದುಕುವ ಪಾಮರರ ಅಭಿಪ್ರಾಯ ಸಂಗೃಹವನ್ನು ಪಾಮರರು ಕೈಕೊಳ್ಳಬಹುದಾಗಿದೆ.
ಪಾಮರರ ಅಭಿಪ್ರಾಯವೇನು?
.
Comments
ಉ: ಪಾಮರರ ಅಭಿಪ್ರಾಯವೇನು?
ಉ: ಪಾಮರರ ಅಭಿಪ್ರಾಯವೇನು?
ಉ: ಪಾಮರರ ಅಭಿಪ್ರಾಯವೇನು?
ಉ: ಪಾಮರರ ಅಭಿಪ್ರಾಯವೇನು?
ಉ: ಪಾಮರರ ಅಭಿಪ್ರಾಯವೇನು?
In reply to ಉ: ಪಾಮರರ ಅಭಿಪ್ರಾಯವೇನು? by ishwar.shastri
ಉ: ಪಾಮರರ ಅಭಿಪ್ರಾಯವೇನು?
In reply to ಉ: ಪಾಮರರ ಅಭಿಪ್ರಾಯವೇನು? by ವೈಭವ
ಉ: ಪಾಮರರ ಅಭಿಪ್ರಾಯವೇನು?