ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ !!!!ಈಗ ಇವನ್ಯಾರೆಂದು ನಮಗೆ ಗೊತ್ತೇ ಇಲ್ಲಾ !!!!
ಕನ್ನಡನಾಡಿಗೆ ತಮ್ಮ ವಿಶೇಷ ಕೊಡುಗೆ ನೀಡಿದ ಹಲವಾರು ಮಹನೀಯರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿ ಮರೆಯಾಗಿದ್ದಾರೆ.ಹಾಲಿ ಇವರು ಯಾರು ಎಂಬುದೇ ಬಹಳಷ್ಟು ಕನ್ನಡಿಗರಿಗೆ ಗೊತ್ತಿಲ್ಲ , ಯಾಕೆಂದ್ರೆ ಇವರ ಹೆಸರಿನಲ್ಲಿ ನಮ್ಮ ನಾಡಿನಲ್ಲಿ ಯಾವುದೇ ರಸ್ತೆ, ಪುತ್ತಳಿ,,ವೃತ್ತ, ಬಡಾವಣೆ, ಇರುವುದಿಲ್ಲ ಹಾಗು ಇವರ ಬಗ್ಗೆ ಕನಿಷ್ಠ ನೆನಪೂ ಸಹ ಮೂಡಿಸುವ ಮಾಹಿತಿಗಳೂ ಸಹ ಮರೆಯಾಗುತ್ತಿವೆ.ಯಾವುದೇ ಪ್ರದೇಶದ ಭಾಷೆ , ಸಾಹಿತ್ಯ,ಸಂಸ್ಕೃತಿ,ಇತಿಹಾಸಗಳ ಅಧ್ಯಯನಕ್ಕೆ ಶಾಸನಗಳು ಅಮೂಲ್ಯ ಆಕರಗಳು,ಇವು ಒಂದು ಜನಾಂಗದ ಆಸ್ತಿ , ಕನ್ನಡ ನಾಡಿನ ಶಾಸನ ಸಂಪತ್ತು ಹೇರಳವಾಗಿದ್ದರೂ ಅವುಗಳು ಮರೆಯಾಗಿದ್ದಾಗ , ಅವುಗಳನ್ನು ಹುಡುಕಿ ಸಂಶೋದಿಸಿ ಕನ್ನಡ ನಾಡಿನ ಹಿರಿಮೆ ಸಾರಿದ ಈ ಸಾಹಸಿ ಗೆ ನಮ್ಮ ನಾಡಿನಲ್ಲಿ ಕನ್ನಡಿಗರ ಹೃದಯದಲ್ಲಿ ಸ್ಥಾನ ಇಗಬೇಕಾದದ್ದು ನ್ಯಾಯ.. ಕನ್ನಡಿಗರು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೊದಲು ಕನ್ನಡ ಇತಿಹಾಸಕ್ಕೆ ಕೊಡುಗೆ ನೀಡಿ ,ಕನ್ನಡ ನಾಡಿನಲ್ಲಿ ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮರೆಯಾಗಿಹೋದ ಒಬ್ಬ ಧೀಮಂತ ವ್ಯಕ್ತಿ "ಬೆಂಜಮಿನ್ ಲೆವಿಸ್ ರೈಸ್" ಬಗ್ಗೆ ತಿಳಿಯೋಣ ಬನ್ನಿ.
.ಬೆಂಜಮಿನ್ ಲೆವಿಸ್ ರೈಸ್ [1837 -1927 ]ರವರು ಹುಟ್ಟಿದ್ದು 17 ನೆ ಜುಲೈ 1837 ರಲ್ಲಿ ಇಂಗ್ಲೆಂಡಿನಲ್ಲಿ ವಿಧ್ಯಾಭ್ಯಾಸ ಮುಗಿಸಿ 1860 ರಲ್ಲಿ ಭಾರತಕ್ಕೆ ಕಾಲಿಡುತ್ತಾರೆ.ಅವರಿಗೆ ಮೊದಲು ಸಿಕ್ಕ ಕೆಲಸವೇ ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯ ಹುದ್ದೆ.ನಂತರ 1865 ರಿಂದ 1868 ವರೆಗೆ ಮೈಸೂರು ಹಾಗು ಕೊಡಗು ಪ್ರಾಂತಗಳಲ್ಲಿ ಶಾಲಾ ತನಿಖಾಧಿಕಾರಿ ಹುದ್ದೆ ನಿರ್ವಹಣೆ ಮಾಡಿರುತ್ತಾರೆ..ನಂತರ 1868 ರಲ್ಲಿ ವಿಧ್ಯಾ ಇಲಾಖೆಯ ಮುಖ್ಯಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿ ಎಲ್ಲರ ಗಮನ ಸೆಳೆಯುತ್ತಾರೆ.[ನಿಮಗೆ ತಿಳಿದಿರಲಿ ಮೈಸೂರು ಪ್ರಾಂತದಲ್ಲಿ ಇವರು ಜನಗಣತಿ ಆರಂಭಿಸಿ ಮಾಹಿತಿ ಅಂಕಿ ಅಂಶ ಕಲೆ ಹಾಕಿ ಯೋಜನೆ ತಯಾರಿಕೆಗೆ ಅನುವು ಮಾಡಿಕೊಟ್ಟಿದ್ದಾರೆ ಹಾಗು ಈ ಜನಗಣತಿ ಭಾರತದ ಮೊದಲ ಜನಗಣತಿ ಎಂದು ಇಂದಿಗೂ ಹೇಳಲಾಗುತ್ತದೆ.ಭಾರತದ ಮೊದಲ ಜನಗಣತಿ ಪ್ರಾರಂಭವಾಗಿದ್ದು ಕನ್ನಡ ನಾಡಿನಲ್ಲಿ ಎಂದರೆ ಪ್ರತಿ ಕನ್ನಡಿಗನೂ ಹೆಮ್ಮೆಪಡಬೇಕು.ಇದೆ ಆಧಾರದ ಮೇಲೆ ಇಂದಿಗೂ ಸಹ ಭಾರತ ಜನಗಣತಿಯನ್ನು ಪ್ರತಿ ಹತ್ತು ವರ್ಷಕೊಮ್ಮೆ ದೇಶಾಧ್ಯಂತ ನಡೆಸಲಾಗುತ್ತಿದೆ] ನಂತರ 1882 ರಲ್ಲಿ .ಹಂಟರ್ ವಿಧ್ಯಾ ಸಮಿತಿಯ ಕಾರ್ಯದರ್ಶಿಯಾಗಿ ಇಲಾಖೆಯ ಜವಾಬ್ಶಾರಿ ನಿರ್ವಹಿಸಿ ಅಂದಿನ ಸರ್ಕಾರದ ಮೆಚ್ಚುಗೆಗೆ ಪಾತ್ರರಾಗುತ್ತಾರೆ.ಇವರ ಕಾರ್ಯಶೀಲತೆ ಗಮನಿಸಿದ ಸರ್ಕಾರ ಇವರನ್ನು 1884 ರಲ್ಲಿ ಹೊಸದಾಗಿ ರಚಿಸಿದ ಪುರಾತತ್ವ ಇಲಾಖೆಯ ನಿರ್ದೇಶಕರನ್ನಾಗಿ ನಿಯೋಜಿಸುತ್ತದೆ.ಹಾಗು 1890 ರಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ನಿಯೋಜನೆ ಮಾಡುತ್ತದೆ. ಈ ಅವಧಿಯಲ್ಲಿ ಬಿ.ಎಲ್.ರೈಸ್ ರವರು ಮಹಾತ್ಸಾಧನೆ ಮಾಡುತ್ತಾರೆ. ಮೊದಲೇ ಉತ್ಸಾಹಿಯಾಗಿದ್ದ ರೈಸ್ ತಾವು ಕರ್ತವ್ಯ ನಿರ್ವಹಿಸುವ ಅವಧಿಯಲ್ಲೇ ಹಲವು ಭಾಷೆಯಲ್ಲಿ ಪಾಂಡಿತ್ಯ ಪಡೆದು,ಕನ್ನಡ ನಾಡನ್ನು, ಜನರನ್ನು ಚೆನ್ನಾಗಿ ಅರಿತಿದ್ದರು.ಪ್ರವಾಸ ಮಾಡುವ ಸಮಯದಲ್ಲಿ ತಮಗೆ ದೊರೆತ ಓಲೆಗರಿಗಳು,ಹಸ್ತ ಪ್ರತಿಗಳು,ಸ್ಥಳ ಪುರಾಣ, ಚರಿತ್ರೆ ಇವುಗಳನ್ನು ಕಲೆ ಹಾಕಿದ್ದರು.ಇವರ ಅವಧಿಯಲ್ಲಿ ಹಲವಾರು ದೇವಾಲಯಗಳಲ್ಲಿದ್ದ , ಪಾಳು ಬಿದ್ದ ದೇವಾಲಯ/ಮಂಟಪ ಗಳ ಬಳಿ ದೊರೆತ , ಹೊಲ ಗದ್ದೆಗಳಲ್ಲಿ ಅನಾಥವಾಗಿಬಿದ್ದಿದ್ದ , ಶಾಸನಗಳು,ಊರ ಒಳಗಡೆ ಕಂಡುಬಂದ , ಬಹಳಷ್ಟು ಶಾಸನಗಳನ್ನು ಪತ್ತೆ ಹಚ್ಚಿ ಅಭ್ಯಾಸ ಮಾಡಿ ಅವುಗಳಿಂದ ತಿಳಿದುಬರುವ ಮಾಹಿತಿಯನ್ನು ಕ್ರೂಧೀಕರಿಸಿ ರಾಶಿ ಹಾಕಿದರು.
ಮದ್ದೂರ್ ತಾಲೂಕಿನ ಅಪರೂಪದ ಆತಕೂರ್ ಶಾಸನ.
|
ಈ ರೀತಿ ಶಾಸನ , ಮಾಹಿತಿ ಸಂಗ್ರಹಿಸಿದ ಬಿ.ಎಲ್.ರೈಸ್ ತಾವೇ ಆಸಕ್ತಿ ಯಿಂದ ಹಲವಾರು ಶಾಸನಗಳನ್ನು ಓದಿ, ಹಿರಿಯರಿಂದ ಮಾಹಿತಿ ಪಡೆದು,ಯಾವುದೇ ಪೂರ್ವಾಗ್ರಹವಿಲ್ಲದೆ ಟಿಪ್ಪಣಿ ಮಾಡಿಕೊಂಡು ಆಸಕ್ತಿ ಪೂರ್ಣ ಕಾರ್ಯ ಮುಂದುವರೆಸಿದರು .1876 ರಲ್ಲಿ ಬರ್ಗೆಸ್ ಎಂಬುವರು ಆರಂಭಿಸಿದ" indian antiquary " ಪತ್ರಿಕೆಯ ಮೊದಲ ಸಂಚಿಕೆಯಲ್ಲೇ ಮಡಿಕೇರಿ ತಾಮ್ರ ಶಾಸನದ ಬಗ್ಗೆ ಲೇಖನ ಪ್ರಕಟಿಸಿದರು.1879 ರಲ್ಲಿ ಮೈಸೂರು ಹಾಗು ಕೊಡಗಿನ ಸೀಮೆಯಲ್ಲಿ ದೊರೆತ ಶಾಸನಗಳ ಇಂಗ್ಲೀಷ್ ಅನುವಾದದ "ಮೈಸೂರ್ ಇನ್ಸ್ಕ್ರಿಪ್ಶನ್ಸ್" ಗ್ರಂಥ ಪ್ರಕಟ ಮಾಡಿದರು.ನಂತರ ಎಪಿಗ್ರಾಫಿಯ ಕರ್ನಾಟಕ ಗ್ರಂಥ ಮಾಲೆ ಆರಂಭಿಸಿ ಕೊಡಗಿನ ಸೀಮೆಯಲ್ಲಿ ಕಂಡುಬಂದ ಶಾಸನಗಳ ಅಪೂರ್ವ ಕ್ರೂಧೀಕರಣ ಮಾಡಿ ಕನ್ನಡ ಹಾಗು ಇಂಗ್ಲೀಷ್ ಭಾಷೆಯಲ್ಲಿ ಅರ್ಥ ನೀಡಿ 1896 ರಲ್ಲಿ "ಕೊಡಗಿನ ಗೆಜೆಟೀರ್" ಅನ್ನು ಎಪಿಗ್ರಾಫಿಯ ಕರ್ನಾಟಕ ಮಾಲೆಯಲ್ಲಿ ಮೊದಲು ಹೊರತಂದು ಇತಿಹಾಸ ನಿರ್ಮಿಸಿದರು.ಇದು ಇಡೀ ದೇಶದಲ್ಲೇ ಪ್ರಥಮವಾಗಿ ಪ್ರಕಟವಾದ ಶಾಸನಗಳ ಒಂದು ಅಪೂರ್ವ ಗ್ರಂಥವಾಯಿತು.ನಂತರ ಇದನ್ನು ಈಗ ದೇಶಾದ್ಯಂತ ಮಾಡಲಾಗುತ್ತಿದೆ.1889 ರಲ್ಲಿ ಹಾಸನ ಜಿಲ್ಲೆ ಶ್ರವಣ ಬೆಳಗೊಳದಲ್ಲಿ ದೊರೆತ ಶಾಸನಗಳ ಆಧಾರದ ಮೇಲೆ "ಶ್ರವಣ ಬೆಳಗೊಳದ ಶಾಸನಗಳು '' ಎಂಬ ಎರಡನೇ ಸಂಪುಟ ಹೊರಬಂದಿತು.ಅಧಿಕಾರದಲ್ಲಿದ್ದ ಹದಿನಾರು ವರ್ಷದಲ್ಲಿ ಎಪಿಗ್ರಾಫಿಯಾ ಕರ್ನಾಟಕದ ಉಳಿದ ಹತ್ತು ಬೃಹದ್ ಸಂಪುಟಗಳನ್ನು ಪ್ರಕಟ ಮಾಡಿ ಜಿಲ್ಲಾ ವಾರು ಶಾಸನಗಳ ಮಾಹಿತಿ ಪ್ರಕಟಿಸಿದ್ದಾರೆ.
ಶ್ರೀ ರಂಗ ಪಟ್ಟಣದ ಸಮೀಪ ಕಬ್ಬಿನ ಗದ್ದೆಯಲ್ಲಿ ಸಿಕ್ಕಿರುವ ಶಾಸನ. |
ಬಿ.ಎಲ್. ರೈಸ್ ರವರು ಹನ್ನೆರಡು ಸಂಪುಟಗಳ ಕರ್ನಾಟಕ ಎಪಿಗ್ರಾಫಿಯ ಪ್ರಕಟಿಸಿದ ಬೆನ್ನಹಿಂದೆ ಅದರಲ್ಲಿ 8869 ಶಾಸನಗಳು ಬೆಳಕಿಗೆ ಬಂದಿದ್ದವು.ಅವರ ಕಾರ್ಯಕ್ಕೆ ಹಲವಾರು ಘನ ವಿಧ್ವಾಂಸರು, ಮೇಧಾವಿಗಳು, ಹಿರಿಯರು, ಜೊತೆಗೆ ಹಲವು ಗ್ರಾಮಗಳ ಜನತೆ ಪ್ರೋತ್ಸಾಹ ನೀಡಿ ಮಾಹಿತಿ ಕಲೆಹಾಕಲು ನೆರವಾಗಿದ್ದರು .ಇದರಿಂದಾಗಿ ಕರ್ನಾಟಕದ ಚರಿತ್ರೆಯನ್ನು ಅರಿಯಲು ಒಂದು ಒಳ್ಳೆಯ ಆಧಾರ ಸಿಕ್ಕಿತು.ಬಿ.ಎಲ್.ರೈಸ್ ಕಂಡು ಹಿಡಿದ ಶಾಸನಗಳು ಕರ್ನಾಟಕದ ಚರಿತ್ರೆಯನ್ನು ಕ್ರಿ.ಪೂ.3 ನೆ ಶತಮಾನಕ್ಕೆ ಕರೆದೊಯ್ದವು. ಈ ಎಲ್ಲಾ ಶಾಸನಗಳಿಂದ ತಿಳಿದು ಬಂದ ರಾಜಕೀಯ ತಿರುಳನ್ನು ಬಿ.ಎಲ್.ರೈಸ್ " ಮೈಸೂರ್ ಅಂಡ್ ಕೂರ್ಗ್ ಫ್ರಂ ಇನ್ಸ್ಕ್ರಿಪ್ಶನ್ಸ್"ಎಂಬ ಗ್ರಂಥದಲ್ಲಿ ಬರೆದಿದ್ದಾರೆ. ಇವರು ಪ್ರಕಟಿಸಿರುವ ಎಪಿಗ್ರಾಫಿಯಾ ಶೇಣಿಯ ಗ್ರಂಥಗಳಲ್ಲಿ ಹಲವು ದೇವಾಲಯಗಳ ನಕ್ಷೆ ಪ್ರಕಟಗೊಂಡಿದ್ದು ಇವರು ಎಷ್ಟು ವೈಜ್ಞಾನಿಕವಾಗಿ ಅವುಗಳ ಅಧ್ಯಯನ ಮಾಡಿದ್ದಾರೆ ಎಂಬುದನ್ನು ತೋರಿಸುತ್ತವೆ.
ಸೋಮನಾಥಪುರದ ದೇವಾಲಯದ ನಕ್ಷೆ |
ಇವರು ಸಂಗ್ರಹಿಸಿದ ಓಲೆಗರಿ,ಹಸ್ತಪ್ರತಿ,ಹಾಗು, ಇದೆ ಅವಧಿಯಲ್ಲಿ ಪ್ರಾಚೀನ ಗ್ರಂಥಗಳನ್ನು ಸಂಗ್ರಹಿಸಿ ಅಭ್ಯಾಸಮಾಡಲು ಮೈಸೂರಿನ ಅರಸರ ಕೊಡುಗೆಯಾಗಿ "ಓರಿಯಂಟಲ್ ರೀಸರ್ಚ್ ಸೆಂಟರ್ " ಅಸ್ತಿತ್ವಕ್ಕೆ ಬಂದಿದ್ದು . ಅದರಲ್ಲಿ ಇವರ ಎಷ್ಟೋ ಅಮೂಲ್ಯ ಸಂಗ್ರವನ್ನು ಇಂದಿಗೂ ಕಾಣಬಹುದು.೧೮೮೪ ರಲ್ಲಿ ಬಿ.ಎಲ್.ರೈಸ್ "ಬಿಬ್ಲಿಯೋತಿಕಾ ಕರ್ನಾಟಕ "ಗ್ರಂಥಮಾಲೆ ಆರಂಭಿಸಿ ಈ ಮಾಲೆಯಲ್ಲಿ "ಕರ್ನಾಟಕ ಭಾಷಾಭೂಷಣ" ,"ಕರ್ನಾಟಕ ಶಬ್ದಾನುಶಾಸನ" "ಪಂಪ ರಾಮಾಯಣ" , "ಪಂಪ ಭಾರತ", "ಕವಿರಾಜ ಮಾರ್ಗ" ಹಾಗು "ಕಾವ್ಯಾವಲೋಕನ " ಮುಂತಾದ ಪ್ರಾಚೀನ ಗ್ರಂಥಗಳನ್ನು ಪ್ರಕಟಣೆ ಮಾಡುತ್ತಾರೆ. ಕನ್ನಡ ನೆಲದ ಬಗ್ಗೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ ಇವರು ನಿವೃತ್ತರಾದ ಮೇಲೆ ಬ್ರಿಟನ್ ದೇಶದ ಹ್ಯಾರೋ ನಗರದಲ್ಲಿ ನೆಲೆಸುತ್ತಾರೆ. ಅಲ್ಲಿದ್ದಾಗಲೂ ಸಹ ಕರ್ನಾಟಕದ ಬಗ್ಗೆ ಇಲ್ಲಿನ ಶಾಸನ ಸಂಪತ್ತಿನ ಬಗ್ಗೆ ಹಲವಾರು ಲೇಖನ ಬರೆಯುತ್ತಾರೆ.1914 ರಲ್ಲಿ ಭಾರತ ಸರ್ಕಾರದ ಕೋರಿಕೆಯಂತೆ ಎಪಿಗ್ರಾಫಿಯ ಕರ್ನಾಟಕದ ಮೊದಲ ಸಂಪುಟದ ಪರಿಷ್ಕೃತ ಆವೃತ್ತಿಯನ್ನು ಸಿದ್ದ ಪಡಿಸಿ ಕೊಡುತ್ತಾರೆ .ಅವಿಶ್ರಾಂತ ದುಡಿಮೆಯಿಂದ ಕನ್ನಡ ನೆಲದ ಶಾಸನ ಸಂಪತ್ತನ್ನು ಹೊರತೆಗೆದು ಕನ್ನಡ ನಾಡಿನ ಹಾಗು ದಕ್ಷಿಣ ಭಾರತದ ಇತಿಹಾಸದ ಮೇಲೆ ಬೆಳಕು ಚೆಲ್ಲಿ ಇತಿಹಾಸ ಹಾಗು ಸಾಹಿತ್ಯ ಅಭ್ಯಾಸಕ್ಕೆ ಅನುವುಮಾಡಿಕೊಟ್ಟು 1927 ರ ಜುಲೈ 10 ರಂದು ತೊಂಬತ್ತರ ವಯಸ್ಸಿನಲ್ಲಿ ಅಸ್ತಂಗತರಾಗಿದ್ದಾರೆ. ಕರ್ನಾಟಕದ ಹೆಮ್ಮೆಯ ದತ್ತು ಪುತ್ರ ಕನ್ನಡ ತಾಯಿಗೆ ಇತಿಹಾಸದ , ಕಿರೀಟವನ್ನು ತೊಡಿಸಿ ಕನ್ನಡ ನಾಡಿನ ಆಗಸದಲ್ಲಿ "ಧ್ರುವ ನಕ್ಷತ್ರ" ಆಗಿ ಹೋಗಿದ್ದಾರೆ. ಆದರೆ ಈ ನಕ್ಷತ್ರಕ್ಕೆ ಮೋಡ ಕವಿದಿದ್ದು ಕನ್ನಡಿಗರು ಮೋಡ ಸರಿಸಿ ನಕ್ಷತ್ರವನ್ನು ನೋಡಿ ಅಭಿನಂದಿಸಬೇಕಾಗಿದೆ. ಕನಿಷ್ಠ ರಾಜ್ಯೋತ್ಸವ ಸಮಯದಲ್ಲಾದರೂ ಇವರನ್ನು ನೆನೆದು ನಮ್ಮ ಕೃತಜ್ಞತೆ ಸಮರ್ಪಿಸೋಣ .ಬನ್ನಿ!!. ತಮಗೆಲ್ಲಾ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
Comments
ಉ: ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ...
In reply to ಉ: ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ... by makara
ಉ: ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ...
In reply to ಉ: ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ... by nimmolagobba balu
ಉ: ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ...
In reply to ಉ: ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ... by ಗಣೇಶ
ಉ: ಕನ್ನಡ ತಾಯಿಗೆ ಇತಿಹಾಸದ ಕಿರೀಟ ತೊಡಿಸಿದ ಬೆಂಜಮಿನ್ ಲೆವಿಸ್ ರೈಸ್ ...