ಬೆಟ್ಟದ ಜೀವವೂ, ಗೋಪಾಲಯ್ಯನೂ
ಚಿತ್ರ ಕೃಪೆ: movies.sulekha.com
’ಬೆಟ್ಟದ ಜೀವ’ ಸಿನಿಮಾ ನೋಡಿದೆ! ಈ ಕಾದಂಬರಿ ಓದಲು ಶುರುಮಾಡಿದ ದಿನದಿಂದ ನನಗೆ, ಪಂಜ, ಕಾಟುಮೂಲೆ, ಮಲೆನಾಡಿನ ದಟ್ಟ ಕಾಡಿನ ನಡುವೆ ಚೆಂದದ ತೋಟ ಮಾಡಿ, ತಮ್ಮದೇ ಆದ ಪ್ರಪಂಚ ಕಟ್ಟಿಕೊಂಡು ತುಂಬು ಜೀವನ ನಡೆಸುತ್ತಿರುವ ಗೋಪಾಲಯ್ಯ - ಶಂಕರಿ ಎಂಬ ಆ ವೃದ್ದ ದಂಪತಿಗಳ ಕಡೆಗೂ, ಅವರ ಪುಟ್ಟ ಪ್ರಪಂಚದ ಕಡೆಗೂ ಇದ್ದ ಆಸಕ್ತಿ, ಕಾದಂಬರಿ ಓದಿ ಮುಗಿಸುವ ವೇಳೆಗೆ ಬಹಳ ಆತ್ಮೀಯವಾಗಿತ್ತು, ಆಪ್ತವೆನಿಸಿತ್ತು; ಬಹಳ ದಿನಗಳವರೆಗೆ ನನ್ನನ್ನು ಕಾಡುವಷ್ಟು.
ಈ ಕಾದಂಬರಿ ಓದುವ ವೇಳೆ, ನನಗೆ ಕಾದಂಬರಿ ಬಗೆಗಿನ ವಿಮರ್ಶೆಗಳು ಬೇಕಿರಲಿಲ್ಲ, ಕಾದಂಬರಿಯಲ್ಲಿನ ಒಳನೋಟಗಳನ್ನು ಅರ್ಥಮಾಡಿಕೊಳ್ಳಬೇಕು ಅಂತ ಕೂಡ ಅನಿಸಿರಲಿಲ್ಲ. ಮಲೆನಾಡ ಪರಿಸರದ ವಿವರಣೆ, ಸನ್ನಿವೇಶಗಳ ನಿರೂಪಣೆ, ಇವುಗಳಷ್ಟೇ ನನ್ನನ್ನು ಸೆಳೆದಿದ್ದವು. ಈ ಕಾದಂಬರಿಯನ್ನು ಓದಿದ್ದು, ತೀರಾ ಇತ್ತೀಚೆಗೆ. ಓದಿ ಮುಗಿಸಿದ ಎರಡು - ಮೂರು ತಿಂಗಳ ಅಂತರದಲ್ಲಿ, ಶೇಷಾದ್ರಿಯವರು ಈ ಕಾದಂಬರಿಯನ್ನು ಸಿನಿಮಾ ಮಾಡುತ್ತಿದ್ದಾರೆ ಎಂದು ತಿಳಿದು, ಬಹಳ ಖುಷಿಪಟ್ಟಿದ್ದೆ. ಅದೇ ಕಾರಣಕ್ಕೆ, ಕಾದಂಬರಿಯನ್ನು ಎರಡನೇ ಬಾರಿ ಓದಿದಾಗ, ಇಲ್ಲಿನ ಪಾತ್ರಗಳು ಹೇಳಬಯಸುತ್ತಿದ್ದುದು ಸ್ವಲ್ಪ ಮಟ್ಟಿಗೆ ದಕ್ಕಿತ್ತೋ, ಏನೋ, ಗೊತ್ತಿಲ್ಲ. ಒಟ್ಟಿನಲ್ಲಿ, ಈ ಕಾದಂಬರಿ, ಸಿನಿಮಾ ಮೂಲಕ ಹೇಗೆ ದಕ್ಕುತ್ತದೆ? , ಎಷ್ಟು ದಕ್ಕುತ್ತದೆ? ಎಂದು ತಿಳಿಯಲು ಬಹಳ ಉತ್ಸುಕನಾಗಿದ್ದೆ.
ಅಂತೂ, ಇಂದು ಈ ಸಿನಿಮಾ ನೋಡಿದೆ! ಶೇಷಾದ್ರಿ ಮತ್ತು ತಂಡದವರ ಕೆಲಸ ತೆರೆಮೇಲೆ ಎದ್ದು ಕಾಣುತ್ತದೆ; ಅದರ ಬಗ್ಗೆ, ಸಿನಿಮಾದ ಬಗ್ಗೆ ಎರಡನೇ ಮಾತೇ ಇಲ್ಲ. ಚಿತ್ರಕಥೆ ಮತ್ತು ನಿರ್ದೇಶನ, ಕಾದಂಬರಿಗೆ ಸಮಸ್ತ ರೀತಿಯಲ್ಲೂ ನ್ಯಾಯ ಸಲ್ಲಿಸಿರುವುದಷ್ಟೇ ಅಲ್ಲ, ಕಾದಂಬರಿಯನ್ನು ಈಗಿನ ಕಾಲಕ್ಕೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ, ಅದನ್ನು ಅರ್ಥಪೂರ್ಣವಾಗಿ ವಿಸ್ತರಿಸುವುದರಲ್ಲಿ ಕೂಡ ಯಶಸ್ವಿಯಾಗಿದೆ.
ಕಾದಂಬರಿಯ ಹಾಗೂ ಚಿತ್ರದ ಕಥಾವಸ್ತುವಿನ ಬಗ್ಗೆ, ಈಗಾಗಲೇ ಹಲವರಿಗೆ ಪರಿಚಯವಾಗಿದೆ. (ಅದರ ಪುನರಾವರ್ತನೆಯನ್ನು ಬದಿಗಿಟ್ಟು ಮುಂದುವರಿಸುತ್ತಾ...) ಕಥೆಯಲ್ಲಿ ಬರುವ ವೃದ್ದ ಗೋಪಾಲಯ್ಯ ಪಾತ್ರದ ಚುರುಕುತನ, ಜೀವನದೆಡೆಗಿನ ಅದಮ್ಯ ಉತ್ಸಾಹ ಎಲ್ಲರನ್ನೂ ಬೆರಗು ಗೊಳಿಸಿದೆ. ಈ ಪಾತ್ರವನ್ನು ಸೃಷ್ಟಿಸಿದ ಕಾರಂತರಿಗೂ, ನಿರೂಪಿಸಿದ ಶೇಷಾದ್ರಿಯವರಿಗೂ ಮತ್ತು ನಟಿಸಿದ ದತ್ತಣ್ಣ ಅವರಿಗೂ ಅನಂತ ಅಭಿನಂದನೆಗಳು.
ನನ್ನನ್ನು ಕಾಡಿದ್ದು, ೬೫ - ೭೦ ವರ್ಷ ವಯಸ್ಸಿನ ಗೋಪಾಲಯ್ಯ, ಮಗನ ಸುಳಿವಿಲ್ಲದೆ, ಕಾಡಿನ ಯಾವುದೋ ಮೂಲೆಯಲ್ಲಿ ಬೇಸಾಯ ಮಾಡಿಕೊಂಡು, ಏಕಾಂಗಿಯಾಗಿ ತನ್ನ ಪ್ರಪಂಚದಲ್ಲಿ ಬದುಕುತ್ತಿರುವ ಈ ಇಳಿವಯಸ್ಸಿನ ವೃದ್ದ ಗೋಪಾಲಯ್ಯ ಜೀವನದೆಡೆಗಿನ ಆ ಉತ್ಸಾಹವನ್ನು ಕಾದಿಟ್ಟುಕೊಂಡಿದ್ದಾದರೂ ಹೇಗೆ?! ಸದಾ ಉಕ್ಕುವ ಚಿಲುಮೆಯ ಹಿಂದಿನ ಶಕ್ತಿಯಾದರೂ ಯಾವುದು?! ಎಂದು.
ಕಥೆಯ ಸನ್ನಿವೇಶವೊಂದರಲ್ಲಿ, "ನಿಮ್ಮಂಥ ಅತ್ತೆ - ಮಾವ ಸಿಕ್ಕಿ, ಕಾಟುಮೂಲೆಯಂತ ತೋಟ ಸಿಗುವುದಾದರೆ ನಾನು ಇಲ್ಲೆ ತಳವೂರಲು ಸಿದ್ದ" ಎಂದು ಶಿವರಾಮಯ್ಯ ಹೇಳಿದಾಗ, ಗೋಪಾಲಯ್ಯ ಹೀಗೆ ಹೇಳುತ್ತಾನೆ, "ಕಾಟುಮೂಲೆ ತೋಟ ನಾರಾಯಣನಿಗಾಯಿತು. ನೀವು ನಿಜವಾಗಲೂ ಇಲ್ಲೇ ಇರುವಿರಾದರೆ, ಕುಮಾರ ಪರ್ವತದ ಮೇಲೆ ನಿಮಗೆ ನಾನೇ ತೋಟವೊಂದನ್ನು ಮಾಡಿಕೊಡುತ್ತೇನೆ.." ಇದನ್ನು ಕೇಳಿ, "ತಮಾಷೆ ಸಾಕು, ಈ ವಯಸ್ಸಿನಲ್ಲಿ ಕುಮಾರ ಪರ್ವತದ ಮೇಲೆ ತೋಟ ಮಾಡುತ್ತಾರಂತೆ, ಮೊದಲು ಈ ಕೆಲಸ ಮುಗಿಸಿ" ಎಂದು ಶಂಕರಿ ಕುಹುಕವಾಡಿ ಹೊರಟಾಗ, ಸ್ವಲ್ಪವೂ ಬೇಸರಿಸಿಕೊಳ್ಳದ ಗೋಪಾಲಯ್ಯ, ಧೃಡ ಮನಸ್ಸಿಗನಾಗಿ ಶಿವರಾಮಯ್ಯನಿಗೆ, "ನಾನು ತಮಾಷೆ ಮಾಡುತ್ತಿಲ್ಲ...ನನಗೇ ಈಗಲೂ ತೋಟ ಮಾಡುವ ಶಕ್ತಿಯಿದೆ" ಎಂದು ಹೇಳುತ್ತಾನೆ!!
ಗಮನಿಸಿ, ಆತನಿಗೆ ಅಷ್ಟು ವಯಸ್ಸಾಗಿದ್ದರೂ, ತಾನೆ ಹಂಡೆಗೆ ನೀರು ಹಾಕಿ, ಬಿಸಿ ಮಾಡಿ, ಪ್ರತಿ ರಾತ್ರಿ ತಪ್ಪದೇ ಎಣ್ಣೆ ಸ್ನಾನ ಮಾಡುತ್ತಾನೆ, ಹೊಟ್ಟೆ ತುಂಬಾ ಊಟ ಮಾಡುತ್ತಾನೆ, ಬೆಟ್ಟ ಹತ್ತಿ ಸುತ್ತಾಡುತ್ತಾನೆ, ಹರಿವ ಹೊಳೆ ನೋಡಿ ಮೀಯಲು ಇಳಿಯುತ್ತಾನೆ, ಅಡಕೆ ಬಿಡಿಸುತ್ತಾನೆ, ತೋಟದ ಕೆಲಸ ನೋಡಿಕೊಳ್ಳುತ್ತಾನೆ, ಅಷ್ಟೇ ಅಲ್ಲ, ತೋಟಕ್ಕೆ ನುಗ್ಗಿದ ಆನೆಗಳನ್ನು ಓಡಿಸಲು ಇಳಿಯುತ್ತಾನೆ, ಹುಲಿಯನ್ನೂ ಬೇಟೆಯಾಡುತ್ತಾನೆ.!! ಇಳಿವಯಸ್ಸಿನಲ್ಲೂ, ಎಳೆಯವನಾಗೇ ಇರುತ್ತಾನೆ.!! ಓದುಗರಿಗೆ, ಪ್ರೇಕ್ಷಕರಿಗೆ ಗೋಪಾಲಯ್ಯ ಇಷ್ಟವಾಗುವುದೇ ಇಲ್ಲಿ, ಈ ಕಾರಣಗಳಿಗೆ. ಹಾಗೆಯೇ, "ನಮ್ಮಂತೆ ಅಥವಾ ಇತರರಂತೆ ಗೋಪಾಲಯ್ಯನಿಗೇಕೆ ದಣಿವಾಗುವುದಿಲ್ಲ?!" ಎಂಬ ಪ್ರಶ್ನೆ ಹುಟ್ಟುವುದೂ ಈ ಸಂದರ್ಭಗಳಲ್ಲಿಯೇ.
ಗೋಪಾಲಯ್ಯನಷ್ಟು ವಯಸ್ಸು ಬಿಡಿ, ಅವನಿಗಿಂತ ೧೦ - ೨೦ ವರ್ಷ ಕಡಿಮೆಯಿರುವ ಬಹಳಷ್ಟು ಮಂದಿಯಲ್ಲಿ ಇಂದು ಜೀವನದಲ್ಲಿ ಬೇಗನೆ ದಣಿವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಇಂದಿನ ಯಾಂತ್ರಿಕ ಬದುಕು, ಹೀಗೆ ಇರುವ ಬದುಕನ್ನು ಗೊತ್ತು ಗುರಿಯಿಲ್ಲದ ಓಟ ಮಾಡಿಕೊಂಡಿರುವುದು, ಪರಿಸರದ ಒಡನಾಟವನ್ನು ಬಿಟ್ಟು, ನಗರೀಕರಣವನ್ನು ಅಗತ್ಯಕ್ಕೂ ಮೀರಿ ಅಪ್ಪಿಕೊಂಡಿರುವುದು. ಅಷ್ಟೇ ಅಲ್ಲ, ವ್ಯವಸಾಯ ಗೋಪಾಲಯ್ಯನ ಅಂತ: ಸತ್ವ, ಪ್ರಕೃತಿಯನ್ನು ಮಣಿಸಿ ಅಲ್ಲಿ ತನ್ನ ತೋಟಮಾಡುವುದೇ ಅವನ ಪ್ಯಾಶನ್. ಅದು ಅವನು ಆರಿಸಿಕೊಂಡ ಕ್ಷೇತ್ರ! ಹಾಗಾಗಿ, ಇಷ್ಟಪಟ್ಟ ಕ್ಷೇತ್ರದಲ್ಲಿ, ಎಷ್ಟೇ ವಯಸ್ಸಾದರೂ, ಎಷ್ಟೇ ಕೆಲಸಮಾಡಿದರೂ ಯಾವತ್ತಿಗೂ ದಣಿವಾಗುವುದಿಲ್ಲ. ಹಾಗಾಗಿ, ಗೋಪಾಲಯ್ಯನಿಗೆ ಮಾತ್ರ ೭೦ನೇ ವಯಸ್ಸಿನಲ್ಲೂ, "ಪರ್ವತದ ಮೇಲೆ ಒಂದು ತೋಟ ಮಾಡಿಕೊಡುತ್ತೇನೆ" ಎಂದು ಹೇಳಲು ಸಾಧ್ಯ. ಅದು ಅವನು ಕಂಡುಕೊಂಡ ಬದುಕು, ಹಾಗೆ ಕಂಡುಕೊಂಡ ಬದುಕನ್ನು ಅವನು ಕಟ್ಟಿಕೊಂಡ ಬಗೆ. ಆದರೆ, ಈಗ ಎಷ್ಟು ಮಂದಿಗೆ ಅಂತಹ ಶಕ್ತಿಯಿದೆ?! ಬಹಳ ವಿರಳ.
ಕಾರಣ, ಇಂದು ಬದುಕನ್ನ ತಮ್ಮ ತಮ್ಮ ಸ್ವಂತ ಕಣ್ಣುಗಳಿಂದ ನೋಡಿಕೊಳ್ಳುವುದಕ್ಕಿಂತ ಹೆಚ್ಚಾಗಿ, ನಾಗರೀಕ, ನಗರ ಜೀವನದ ಪ್ರತಿಷ್ಟೆ, ಅಂತಸ್ತುಗಳ ದೃಷ್ಟಿಯಿಂದ ನೋಡಿ, ಕೊನೆಗೆ ಭ್ರಮನಿರಸನಗೊಳ್ಳುವವರೇ ಹೆಚ್ಚು; ಫಲಿತಾಂಶ ಬೇಗನೆ ದಣಿವು, ಬೇಗನೆ ಮುಪ್ಪು. ಇದು ಮುಖವಾಡದ ಬದುಕಿನ ಸ್ಥಿತಿ. ಹಾಗಾಗಿ, ಅಷ್ಟು ವಯಸ್ಸಾದರೂ, ದಣಿವಾಗದ ಗೋಪಾಲಯ್ಯನನ್ನು ಕಂಡರೆ ಜನರಿಗೆ ಅಚ್ಚರಿ, ಅಚ್ಚುಮೆಚ್ಚು.
ತನ್ನ ಬದುಕಿನ ಅಂತ:ಸತ್ವ, ಬೇಸಾಯ ಎಂದು ತಿಳಿದು, ಅದು ನಿಜ ಎಂದು ನಿರೂಪಿಸಿದವನಂತೆ ಬದುಕಿದ ಗೋಪಾಲಯ್ಯ, ತನ್ನ ಮಗ ಶಂಭು, ’ಸ್ವಾತಂತ್ರ್ಯ ಚಳುವಳಿ’,’ಹೋರಾಟ’ ನನ್ನ ಬದುಕು ಎಂದು ಹೇಳಿದಾಗ ಆಕ್ಷೇಪಣೆ ಮಾಡುವುದೇಕೆ?! ಅಷ್ಟಕ್ಕೂ, ಶಂಭು ಮನೆ ಬಿಟ್ಟು ಹೋದದ್ದು, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳಲು ತಂದೆ-ತಾಯಿ ಆಕ್ಷೇಪಣೆ ಮಾಡಿದ್ದಕ್ಕೋ ಅಥವಾ ಲಕ್ಷ್ಮೀ ಹೇಳಿದ ಘಟನೆಯಿಂದಾಗಿಯೋ?!
ಕಾದಂಬರಿಯನ್ನು , ಕಾರಂತರನ್ನು ಮತ್ತೆ ಓದಬೇಕೆನಿಸುತ್ತಿದೆ!
Comments
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
In reply to ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ by ksraghavendranavada
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
In reply to ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ by Tejaswi_ac
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
In reply to ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ by ksraghavendranavada
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
In reply to ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ by ksraghavendranavada
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
In reply to ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ by ಹೇಮ ಪವಾರ್
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
In reply to ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ by rohithsh007
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ
In reply to ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ by makara
ಉ: ಬೆಟ್ಟದ ಜೀವವೂ, ಗೋಪಾಲಯ್ಯನೂ