ಬಿಚ್ಚಾಲಿ - ರಾಯರು ವಾಸಿಸುತ್ತಿದ್ದ ಸ್ಥಳ.

ಬಿಚ್ಚಾಲಿ - ರಾಯರು ವಾಸಿಸುತ್ತಿದ್ದ ಸ್ಥಳ.

ಮದುವೆಯ ಮುಂಚೆ ನಾನು ಮಂತ್ರಾಲಯಕ್ಕೆ ಹೋಗಿ ಸುಮಾರು ಹನ್ನೆರಡು ವರ್ಷಗಳು ಆಗಿದ್ದವು. ಆದರೆ ಮದುವೆಯಾದ ಮೇಲೆ ೮ ತಿಂಗಳಲ್ಲಿ ನಾಲ್ಕು ಬಾರಿ ಹೋಗಿ ಬಂದೆ. ಕಾರಣ ನನ್ನ ಹೆಂಡತಿಯ ತವರು ಮನೆ ಮಂತ್ರಾಲಯ. ಆದರೆ ಪ್ರತಿ ಬಾರಿ ಹೋದಾಗಲು ಬಿಚ್ಚಾಲಿ ಗೆ ಹೋಗಬೇಕೆಂದುಕೊಳ್ಳುತ್ತಿದ್ದರು ಆಗಿರಲಿಲ್ಲ. ಕಾರಣ ಎರಡು ವರ್ಷಗಳ ಹಿಂದೆ ಬಂದ ಪ್ರವಾಹದಲ್ಲಿ ಮುರಿದು ಬಿದ್ದ ಸೇತುವೆ.ಅಂದಿನಿಂದ ಮಂತ್ರಾಲಯ - ರಾಯಚೂರು ನಡುವಿನ ಸಂಪರ್ಕ ಕಷ್ಟಕರ ಆಗಿದೆ. ಇಂದಿಗೂ ಆ ಸೇತುವೆ ನಿರ್ಮಾಣ ಕಾರ್ಯ ಮುಗಿದಿಲ್ಲ. ಸಧ್ಯಕ್ಕೆ ತಾತ್ಕಾಲಿಕವಾಗಿ ಒಂದಷ್ಟು ಸಿಮೆಂಟ್ ಪೈಪ್ಗಳನ್ನು ಇಟ್ಟು ಅದರ ಮೇಲೆ ಮಣ್ಣನ್ನು ಹಾಕಿ ರಸ್ತೆಯ ಮಾದರಿಯಲ್ಲಿ ನಿರ್ಮಿಸಿದ್ದಾರೆ. ಯಾವಾಗ ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬರುತ್ತದೋ ಆಗ ಮತ್ತೆ ಈ ತಾತ್ಕಾಲಿಕ ಸೇತುವೆ ಸಂಪರ್ಕಕ್ಕೆ ಇರುವುದಿಲ್ಲ ಹಾಗಾಗಿ ಪ್ರತಿ ಬಾರಿ ಹೋದಾಗ ಬಿಚ್ಚಾಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ದೀಪಾವಳಿಗೆಂದು ಹೋಗಿದ್ದಾಗ ಆಗಿದ್ದು ಆಗಲಿ ಬಿಚ್ಚಾಲಿಗೆ ಹೋಗಲೇಬೇಕೆಂದು ನಿರ್ಧರಿಸಿ ಕುಟುಂಬ ಸಮೇತರಾಗಿ ಹೋಗಿದ್ದೆವು.

ಅಸಲಿಗೆ ಬಿಚ್ಚಾಲಿ ಎಂದರೇನು? ಬಿಚ್ಚಾಲಿ ಇದು ಮಂತ್ರಾಲಯ ಹಾಗೂ ರಾಯಚೂರು ನಡುವೆ ಇರುವ ಒಂದು ಪುಟ್ಟ ಕುಗ್ರಾಮ. ರಾಘವೇಂದ್ರ ಸ್ವಾಮಿಗಳು ಬ್ರುಂದಾವನಸ್ತರಾಗುವ ಮೊದಲು ಹದಿಮೂರು ವರ್ಷಗಳ ಕಾಲ ಈ ಬಿಚ್ಚಾಲಿ ಗ್ರಾಮದಲ್ಲಿ ತಪಸ್ಸನ್ನು ಮಾಡಿದ್ದರು. ಆದ್ದರಿಂದ ಈ ಗ್ರಾಮ ವಿಶೇಷ ಎನಿಸಿಕೊಳ್ಳುತ್ತದೆ. ಎರಡು ವರ್ಷದ ಕೆಳಗೆ ನನಗೆ ಈ ಗ್ರಾಮದ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದಾಗ ಅದರಲ್ಲಿ ಸಿಕ್ಕ ಚಿತ್ರಗಳಿಂದ ಬಹಳ ಸಂತೋಷವಾಗಿತ್ತು. ಏಕೆಂದರೆ ರಾಯರ ಕಾಲದಿಂದ ಇಂದಿಗೂ ಅಲ್ಲಿ ರಾಯರು ಉಪಯೋಗಿಸುತ್ತಿದ್ದ ವಸ್ತುಗಳು, ಅಂದರೆ ಅವರು ಸಂಧ್ಯಾವಂದನೆಗೆ ಬಳಸುತ್ತಿದ್ದ ಮುದ್ರೆಗಳು, ಅವರು ಊಟ ತಯಾರಿಸಲು ಬಳಸುತ್ತಿದ್ದ ರುಬ್ಬು ಗುಂಡು, ಹಾರೆ, ಅವರು ಮಲಗುತ್ತಿದ್ದ ಮನೆ, ಅವರು ಪೂಜಿಸುತ್ತಿದ್ದ ಹನುಮಂತನ ವಿಗ್ರಹಗಳು ಇನ್ನು ಸಾಕಷ್ಟು ಚಿತ್ರಗಳನ್ನು ನೋಡಿ ಬಹಳಷ್ಟು ಆಕರ್ಷಿತನಾಗಿದ್ದೆ. ಈ ಬಾರಿ ಅಲ್ಲಿಗೆ ಹೋಗುವ ಅವಕಾಶ ಸಿಕ್ಕಿದ್ದು ತುಂಬಾ ಸಂತೋಷವಾಗಿತ್ತು. ಮಂತ್ರಾಲಯದಿಂದ ಆಟೋ ಏರಿ ಹೋರಾಟ ನಮಗೆ ಅಲ್ಲಿನ ರಸ್ತೆ ನಮ್ಮ ದೇಹದಲ್ಲಿ ಎಲ್ಲ ಅವಯವಗಳು ಸರಿಯಾಗಿ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದನ್ನು ನೆನಪಿಸಿತ್ತು. ಅಷ್ಟು ಕೆಟ್ಟು ಹೋಗಿತ್ತು ಆ ಸಂಪರ್ಕ ರಸ್ತೆ. ದಾರಿಯಲ್ಲಿ ಪ್ರವಾಹದಲ್ಲಿ ಕೊಚ್ಚಿ ಹೋದ ಸೇತುವೆಯ ಪಳೆಯುಳಿಕೆಗಳನ್ನು ಕಾಣಬಹುದು. ಹಾಗೆಯೇ ಹೊಸದಾಗಿ ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿಯನ್ನು ನೋಡಬಹುದು.

ಅಂತೂ ಇಂತೂ ಕಷ್ಟಪಟ್ಟು ಆ ದುರ್ಗಮ ಹಾದಿಯಲ್ಲಿ ಇಪ್ಪತ್ತು ಕಿಲೋಮೀಟೆರ್ ಗಳಷ್ಟು ದೂರ ಬಂದ ಮೇಲೆ ನಿಮಗೆ ಸಿಗುವುದು ಬಿಚ್ಚಾಲಿ. ಎತ್ತ ನೋಡಿದರೂ ಪ್ರವಾಹದಲ್ಲಿ ಕೊಚ್ಚಿ ಹೋದ ಮನೆಗಳ ಅವಶೇಷಗಳು ಕಾಣಸಿಗುವುದು. ಹಾಗೆಯೇ ಮುಂದೆ ಬಂದರೆ ರಾಯರ ವಿಗ್ರಹವೊಂದನ್ನು ಅಲ್ಲಿ ಪ್ರತಿಷ್ಠಾಪಿಸಿದ್ದಾರೆ. ಅಲ್ಲಿಂದ ಕೆಳಗೆ ಇಳಿದು ಹೋದರೆ ತುಂಗಭದ್ರ ನದಿ ಆಹಾ ಆ ನೀರು ನೋಡಿ ಮನ ಪುಳಕಗೊಂಡು ಮನೆಯಲ್ಲಿ ಸ್ನಾನ ಮಾಡಿದ್ದರೂ ಪುನಃ ನೀರಿಗಿಳಿದೆ ಬಿಟ್ಟೆ. ಇಲ್ಲಿರುವ ನೀರಿನ ಶೇಕಡಾ ೨೦ ಪ್ರಮಾಣದಷ್ಟು ನೀರು ಸಹ ಮಂತ್ರಾಲಯದಲ್ಲಿಲ್ಲ ಹಾಗೆಯೇ ಇಲ್ಲಿ ಹೆಚ್ಚು ಜನ ಬರದೆ ಇರುವುದರಿಂದ ಅಷ್ಟೇ ಸ್ವಚ್ಚವಾಗಿಯೂ ಇದೆ. ಸ್ನಾನ ಮುಗಿಸಿ ಅಲ್ಲೇ ಪಕ್ಕದ ದಂಡೆಯ ಮೇಲೆ ರಾಯರ ಬೃಂದಾವನ ಇದೆ. ಅದಕ್ಕೆ ನಮಸ್ಕರಿಸಿ ಅಲ್ಲೇ ಇದ್ದ ಹನುಮಪ್ಪ, ನರಸಿಂಹ ದೇವರು ಎಲ್ಲರಿಗೂ ವಂದಿಸಿ ಬರುತ್ತಿದ್ದರೂ ನನ್ನ ಮನದಲ್ಲಿ ಮೊದಲಿಗೆ ರಾಯರು ಉಪಯೋಗಿಸುತ್ತಿದ್ದ ವಸ್ತುಗಳು ಹಾಗೂ ರಾಯರು ಮಲಗುತ್ತಿದ್ದ ಜಾಗಗಳನ್ನು ಮೊದಲು ನೋಡಬೇಕೆಂಬ ತವಕ ಕಾಡುತ್ತಿತ್ತು. ಅಲ್ಲಿಂದ ಮೇಲೇರಿ ಬಂದರೆ ಅಲ್ಲೇ ಪಕ್ಕದಲ್ಲಿ ರಾಯರು ಉಪಯೋಗಿಸುತ್ತಿದ್ದ ರುಬ್ಬು ಗುಂಡು, ಒರಳುಕಲ್ಲು ಹಾಗೆ ಹಾರೆ ಕಂಡಿತು. ಅದನ್ನು ಮುಟ್ಟಿ ನಮಸ್ಕರಿಸಿ ರಾಯರು ಮಲಗುತ್ತಿದ್ದ ಕೋಣೆಯನ್ನು ನೋಡಲು ಆ ಜಾಗದಿಂದ ಸ್ವಲ್ಪ ಮುಂದಕ್ಕೆ ಬರಬೇಕು. ಆ ಜಾಗಕ್ಕೆ ಬಂದು ಆಟೋ ನಿಲ್ಲಿಸಿದಾಗ ನನಗಾದ ನಿರಾಸೆ ಅಷ್ಟಿಷ್ಟಲ್ಲ. ಏಕೆಂದರೆ ನಾನು ಅಂತರ್ಜಾಲದಲ್ಲಿ ಕಂಡಿದ್ದ ಚಿತ್ರಕ್ಕೂ ಅಲ್ಲಿದ್ದ ಜಾಗಕ್ಕೂ ಯಾವುದೇ ಸಾಮ್ಯವಿರಲಿಲ್ಲ. ಏಕೆಂದರೆ ಪ್ರವಾಹದಲ್ಲಿ ಆ ಹಳೆ ಮನೆ ರಾಯರು ಸಂಧ್ಯಾವಂದನೆಗೆಂದು ಬಳಸುತ್ತಿದ್ದ ವಸ್ತುಗಳೆಲ್ಲವೂ ಕೊಚ್ಚಿ ಹೋಗಿದ್ದವು. ಈಗ ಅದೇ ಜಾಗದಲ್ಲಿ ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆ ಮನೆಯೊಳಗೇ ಅಡಿ ಇಟ್ಟಾಗ ಅಲ್ಲಿ ಪಕ್ಕದಲ್ಲಿ ಎರಡು ಚಿತ್ರಗಳನ್ನು ಹಾಕಿದ್ದರು. ಅದರಲ್ಲಿ ಯಾವ್ಯಾವ ಜಾಗದಲ್ಲಿ ರಾಯರು ಪೂಜೆ ಮಾಡುತ್ತಿದ್ದರು, ಹಾಗೆ ಮಲಗುತ್ತಿದ್ದರು ಎಂದು ಹಾಕಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಅರ್ಚಕರೊಬ್ಬರು ಅಲ್ಲಿನ ವಿಶೇಷವನ್ನು ತಿಳಿಸಿಕೊಟ್ಟರು. ರಾಯರು ಅಲ್ಲಿದ್ದ ಹದಿಮೂರು ವರ್ಷಗಳಲ್ಲಿ ಪ್ರತಿ ದಿನ ತುಂಗೆಯ ದಡದಲ್ಲಿ ಧ್ಯಾನ ಮಾಡಿ ನಂತರ ಈ ಮನೆಗೆ ಬಂದು ಪೂಜೆ ಸಲ್ಲಿಸಿ ಮಲಗುತ್ತಿದ್ದರು. ರಾಯರು ಪೂಜೆ ಮಾಡಿದ ನಂತರ ಒಂದು ಬಟ್ಟಲಲ್ಲಿ ಹಾಲನ್ನು ಹಾಕಿ ಇಡುತ್ತಿದ್ದರು. ಆ ಹಾಲನ್ನು ಇದೆ ಮನೆಯಲ್ಲಿ ಇದ್ದ ಹುತ್ತವೊಂದರಿಂದ ಕೃಷ್ಣ ಸರ್ಪವೊಂದು ಬಂದು ಕುಡಿದು ಹೋಗುತ್ತಿತ್ತು. ತಿರ್ಕಾಲ ಜ್ಞಾನಿಗಳು ಆಗಿದ್ದ ರಾಯರು ಮುಂದಿನ ದಿನಗಳಲ್ಲಿ ಭಕ್ತಾದಿಗಳು ಇಲ್ಲಿಗೆ ಬಂದಾಗ ಆ ಹುತ್ತವನ್ನು ನೋಡಿ ಹೆದರುತ್ತಾರೆಂದು ಆ ಸರ್ಪವನ್ನು ಕಲ್ಲಾಗಿಸಿ ಅದೇ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ. ಇಂದಿಗೂ ಅಲ್ಲಿ ಪ್ರತೀತಿ ಇದೆಯಂತೆ, ಪ್ರತಿದಿನ ರಾಯರ ಬೃಂದಾವನಕ್ಕೆ ಪೂಜೆ ಮಾಡಿ ಆ ಮನೆಯಲ್ಲಿ ಬಂದು ಒಂದು ಬಟ್ಟಲಲ್ಲಿ ಹಾಲು ಇಟ್ಟು ಹೋದರೆ ಸರ್ಪ ಬಂದು ಕುಡಿಯುತ್ತದೆ ಎನ್ನುತ್ತಾರೆ. ಹಾಗೆ ಆ ಮನೆಯಲ್ಲಿ ರಾಯರ ಪ್ರಿಯ ಶಿಷ್ಯರಾದ ಅಪ್ಪಣ್ಣಾಚಾರ್ಯರು ಹನುಮಂತನ ವಿಗ್ರಹವೊಂದನ್ನು ಪ್ರತಿಷ್ಠಾಪಿಸಿದ್ದಾರೆ. ಪ್ರವಾಹ ಬಂದಾಗ ಇಡೀ ಮನೆಯೇ ಕುಸಿದು ಹೋದರು ಆ ಸರ್ಪ ಹಾಗೆ ಹನುಮಂತನನು ಪ್ರತಿಷ್ಠಾಪಿಸಿದ್ದ ಆ ಗೋಡೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಈಗ ಆ ಗೋಡೆಯನ್ನೇ ಸೇರಿಸಿಕೊಂಡು ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಎಲ್ಲವನ್ನೂ ಸಂದರ್ಶಿಸಿಕೊಂಡು ಆಚೆ ಬಂದಾಗ ಒಂದು ರೀತಿ ಧನ್ಯತಾ ಭಾವ ಮನದಲ್ಲಿ ಮೂಡಿತ್ತು. ಹಾಗೆಯೇ ನನ್ನ ಬಹು ದಿನದ ಕನಸು ಪೂರ್ಣಗೊಂಡಿತ್ತು. ಆದರೆ ಒಂದು ಕಷ್ಟದ ವಿಷಯ ಎಂದರೆ ಮಂತ್ರಾಲಯದಿಂದ ಅಲ್ಲಿಗೆ ಹೋಗುವ ಸಂಪರ್ಕ ರಸ್ತೆ ಮಾತ್ರ ತೀರ ದಾರುಣವಾಗಿದೆ. ಕಬ್ಬೊಂದನ್ನು ಯಂತ್ರದಲ್ಲಿ ಹಾಕಿ ರಸವೆಲ್ಲವನ್ನೂ ಹೀರಿದ ಮೇಲೆ ಸಿಪ್ಪೆ ಹೇಗಾಗಿರುತ್ತದೋ ಹಾಗೆ ಆಗಿರುತ್ತದೆ ನಿಮ್ಮ ಮೈ..

Rating
No votes yet

Comments