ಬೀchi ಜೋಕುಗಳು (೯): ಪಿತೃವಾಕ್ಯ ಪರಿಪಾಲಕ ತಿಮ್ಮ ಪರೀಕ್ಷೆ ಬರೆದದ್ದು

ಬೀchi ಜೋಕುಗಳು (೯): ಪಿತೃವಾಕ್ಯ ಪರಿಪಾಲಕ ತಿಮ್ಮ ಪರೀಕ್ಷೆ ಬರೆದದ್ದು

ತಿಮ್ಮನ ತಂದೆ ಅವನನ್ನು ಪರೀಕ್ಷೆಗೆ ಹೇಗೆ ತಯಾರಾಗಿದ್ದೀಯೆಂದು ಕೇಳಿದರು. ಆಗಲೇ ನಾಲ್ಕು ಸಾರಿ ನಪಾಸಾಗಿದ್ದ ತಿಮ್ಮ ಈ ಸಾರಿಯೂ ತನ್ನ ಸಿದ್ದತೆ ಅಷ್ಟಕಷ್ಟೆ ಎಂದು ಮುಖ ಜೋಲು ಹಾಕಿಕೊಂಡು ಅವರಪ್ಪನಿಗೆ ಹೇಳಿದ. ಆಗ ಅವರಪ್ಪ ಅವನಿಗೆ ಒಂದು ಬುದ್ಧಿಮಾತು ಹೇಳಿದ,"ಹೇಗೂ ನೀನು ಕಷ್ಟಪಟ್ಟು ಓದಿ ಪಾಸು ಮಾಡುವುದು ಅಷ್ಟರಲ್ಲೇ ಇದೆ, ನಿಮ್ಮ ಶಾಲೆಯ ಜಾಣ ಹುಡುಗನಾದ ಪಿಂಟುವಿನ ಹಿಂದೆ ಕುಳಿತು, ಅವನು ಹೇಗೆ ಬರೆಯುತ್ತಾನೋ ಹಾಗೇ ನಕಲು ಮಾಡಿ ಬರೆ, ಹಾಗೆ ಮಾಡಿಯಾದರೂ ಪಾಸಾಗು". ಸರಿ, ತಿಮ್ಮ ಅವರಪ್ಪ ಹೇಳಿದಂತೆಯೇ ಅವರ ಶಾಲೆಯ ಬುದ್ಧಿವಂತ ಹುಡುಗ ಪಿಂಟೂನ ಹಿಂದೆ ಕುಳಿತು ಪರೀಕ್ಷೆ ಬರೆದ; ಆದರೆ ಪಾಸಾದವರ ಪಟ್ಟಿಯಲ್ಲಿ ತಿಮ್ಮನ ಹೆಸರೇ ಇರಲಿಲ್ಲ. ಪಿಂಟು ಮಾತ್ರ ಪಾಸಾಗಿದ್ದ ಮತ್ತು ಅವನ ನಂಬರು ಎರಡು ಸಾರಿ ಪಟ್ಟಿಯಲ್ಲಿ ಬಂದಿತ್ತು. ಆಶ್ಚರ್ಯಗೊಂಡ ತಿಮ್ಮನ ಅಪ್ಪ ಅವನನ್ನು ಕೇಳಿದ, "ಪಿಂಟು ಪಾಸಾಗಿದ್ದಾನೆ! ಆದರೆ ಅವನ ಹಿಂದೆ ಕುಳಿತು ಪರೀಕ್ಷೆ ಬರೆದ ನೀನು ಫೇಲಾದದ್ದು ಹೇಗೆ?, ನಿಜವಾಗಿಯೂ ನೀನು ಅವನು ಬರೆದದ್ದನ್ನು ನಕಲು ಮಾಡಿದೆಯೋ ಇಲ್ಲವೋ?!" ತಿಮ್ಮ ಹೇಳಿದ, ಅಪ್ಪ ನೀನು ಹೇಳಿದ ಹಾಗೆ ಅವನು ಹೆಂಗೆ ಬರೆದನೋ ಹಂಗೆ ಒಂದಕ್ಷರನೂ ಚಾಚೂ ತಪ್ಪದಂಗೆ ಬರೆದೆ, ಮೊದಲು ಅವನ ರಿಜಿಸ್ಟರ್ ನಂಬರ್ ಬರೆದನಾ ನಾನು ಅದನ್ನೇ ಬರೆದೇ, ಆಮೇಲೆ ಅವನು ಮೊದಲನೇ ಉತ್ತರ ಷುರು ಮಾಡಿ ಕಡೇ ಉತ್ತರ ಬರೆಯೋವರೆಗೂ ಹಾಗೆ ಬರೆದೆ." ತಿಮ್ಮನ ವಿವರಣೆಯಿಂದ ಅವನು ಪಿಂಟುವಿನ ರೆಜಿಸ್ಟರ್ ನಂಬರನ್ನೂ ಕಾಪಿ ಮಾಡಿದ ವಿಷಯ ಅವರಪ್ಪನಿಗೆ ಅರ್ಥವಾಗಿ ಇಂಥಾ ಸುಪುತ್ರನನ್ನ ಹಡದದ್ದಕ್ಕೆ ಹಣೆ-ಹಣೆ ಬಡಿದುಕೊಂಡ.
                                                                               

                                                                              ***
                                                                     ಮಾದರಿ ಪ್ರಶ್ನೆ ಪತ್ರಿಕೆ

ಪ್ರಶ್ನೆ ಒಂದು : ಒಟ್ಟು ಎಷ್ಟು ವಲಯಗಳಿವೆ?
ಪ್ರಶ್ನೆ ಎರಡು: ಆ ಮೂರು ವಲಯಗಳ ಹೆಸರೇನು?
ಪ್ರಶ್ನೆ ಮೂರು: ಉಷ್ಣ ವಲಯ, ಶೀತ ವಲಯ ಮತ್ತು ಸಮ ಶೀತೋಷ್ಣ ವಲಯಗಳಿಗಿರುವ ವ್ಯತ್ಯಾಸವೇನು.
ಪ್ರಶ್ನೆ ನಾಲ್ಕು: ಉಷ್ಣ ವಲಯದಲ್ಲಿ ಬಿಸಿಲು ಹೆಚ್ಚಾಗಿದ್ದರೆ, ಶೀತ ವಲಯದಲ್ಲಿ ಚಳಿ ಹೆಚ್ಚಾಗಿರುತ್ತದೆ ಮತ್ತು ಸಮ ಶೀತೋಷ್ಣ ವಲಯದಲ್ಲಿ ಎರಡೂ ಸಮಪ್ರಮಾಣದಲ್ಲಿರುವುದರಿಂದ ಜನರು ಯಾವ ರೀತಿಯ ಉಡುಗೆ ತೊಡುಗೆಗಳನ್ನು ಧರಿಸುವುದು ಸೂಕ್ತ?
 

ಅಭ್ಯರ್ಥಿಗಳಿಗೆ ಸೂಚನೆ: ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಎಲ್ಲಾ ಪ್ರಶ್ನೆಗಳಿಗೆ ಸಮಾನ ಅಂಕಗಳು.

(ಇದರ ಮೂಲ ಪಾಠ ಸರಿಯಾಗಿ ಜ್ಞಾಪಕವಿಲ್ಲ, ಆದರೆ ಮೂಲ ಪಾಠದ ಸ್ವಾರಸ್ಯಕ್ಕೆ ಧಕ್ಕೆಯಾಗಿಲ್ಲವೆಂದು ಭಾವಿಸುತ್ತೇನೆ)
 

Comments