ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ರಾಮಯಣದಲ್ಲೊಂದು ಮೌನರಾಗ
--ಊರ್ಮಿಳ
ಯಾರಾದರು ಸ್ನಾನಕ್ಕೆ ಇಳಿದು ಹೊರಬರಲು ತಡವಾದರೆ ಅಮ್ಮನದು ಒಂದೆ ಕೂಗು 'ಇವಳದ್ದೊಳ್ಳೆ ಉರ್ಮಿಳ ಸ್ನಾನವಾಯಿತು ಬೇಗ ಮುಗಿಸಲ್ಲ' , ನಾನೆಂದಾದರು ಕೇಳಿದರೆ "ಈ ಉರ್ಮಿಳ ಎಂದರೆ ಯಾರು" ಎಂದು, ಅವರು ಒಂದು ಕಥೆಯನ್ನೆ ಹೇಳುತ್ತಿದ್ದರು, "ಊರ್ಮಿಳಾದೇವಿ ಎಂದರೆ ಲಕ್ಷ್ಮಣನ ಹೆಂಡತಿ ಎಲ್ಲದರಲ್ಲು ಬಲು ನಿದಾನ, ಸ್ನಾನಕ್ಕೆ ಇಳಿದರಂತು ಸರಿಯೆ, ಹೀಗೊಮ್ಮೆ ರಾಮನ ಪಟ್ಟಾಭಿಷೇಕಕ್ಕೆ ಸಿದ್ದವಾಗಲು ಸ್ನಾನಗೃಹ ಸೇರಿದಳು,ಆದರೆ ಹೊರಗೆ ಏನೆನೊ ನಡೆಯಿತು, ರಾಮ ರಾಜ್ಯ ಒಲ್ಲದೆ ವನವಾಸಕ್ಕೆ ಸಿದ್ದನಾದ,ಜೊತೆಗೆ ಸೀತ. ಲಕ್ಷ್ಮಣ ಪಾಪ ನಾನು ಬರುತ್ತೇನೆ ಅಂತ ಅಣ್ಣನಲ್ಲಿ ಗೋಗರೆದು, ಹೆಂಡತಿಗೆ ಹೇಳಿಹೋಗಲು ಬಂದರೆ, ಅವಳು ಹೊರಗೆ ಬಂದರೆ ತಾನೆ. ಅವನು ಕಾದು ಬೇಸರದಿಂದ ಹೊರಟೆಹೋದ. ಅಣ್ಣನ ಜೊತೆ ಕಾಡು ಸೇರಿದ, ಇತ್ತ ಊರ್ಮಿಳ ದೀರ್ಘ ಸ್ನಾನದೀಕ್ಷೆಯಲ್ಲಿ ಮುಳುಗಿದ್ದಳು. ಅತ್ತ ಕಾಡಾಯಿತು, ಸೀತ ಅಪಹರಣವಾಗಿ ರಾವಣಸಂಹಾರವಾಯಿತು, ಹದಿನಾಲಕ್ಕು ವರ್ಷಗಳು ಕಳೆದು ಎಲ್ಲ ಮರಳಿದರು, ಮತ್ತೆ ಪಟ್ಟಾಭಿಷೇಕಕ್ಕೆ ಎಲ್ಲ ಸಿದ್ದರಾಗುವಾಗ, ಊರ್ಮಿಳ ಸ್ನಾನ ಮುಗಿಸಿ ಹೊರಬಂದು ಲಕ್ಷ್ಮಣನಿಗೆ ಹೇಳಿದಳು" ನೀವು ಬೇಗ ಸ್ನಾನ ಮುಗಿಸಿಬಿಡಿ, ಪಟ್ಟಾಭಿಷೇಕಕ್ಕೆ ಹೋಗಲು ತಡವಾಗುತ್ತದೆ". ಪಾಪ ಅವಳಿಗೆ ಲಕ್ಷ್ಮಣ ವನವಾಸಕ್ಕೆ ಹೋಗಿದ್ದು ಬಂದಿದ್ದು ತಿಳಿಯಲೆ ಇಲ್ಲ'.
ಹಿಂದಿನವರು ಎಷ್ಟುಬೇಗ ಕಥೆಗಳನ್ನು ಹೆಣೆದುಬಿಡುತ್ತಾರೆ, ಅನ್ನುವಾಗ ನನ್ನ ಮನ ನೆನೆಸಿತು, ರಾಮಾಯಣದಲ್ಲಿ ತನ್ನ ಮೌನರಾಗದಿಂದಲೆ ತನ್ನ ಇರುವನ್ನು ತೋರ್ಪಡಿಸುವ ಊರ್ಮಿಳ ಎಂತಹವಳಿರಬಹುದು. ಮದುವೆಯಾಗಿ ಗಂಡನ ಮನೆಗೆ ಬಂದ ಸ್ವಲ್ಪ ಕಾಲದಲ್ಲೆ, ತನ್ನನ್ನು ತೊರೆದು ಅಣ್ಣನ ಹಿಂದೆ ಕಾಡಿಗೆ ನಡೆದ ಗಂಡನ ವಿರಹದಿಂದ ದಗ್ದಳಾಗಿ, ಯಾರ ಕಣ್ಣಿಗೂ ಬೀಳದೆ, ಮೌನವಾಗಿಯೆ ಉಳಿಯುವ ಊರ್ಮಿಳಳ ಮನಸ್ಸು ಭಾವಗಳು ಹೇಗಿರಬಹುದು. ಈ ಎಲ್ಲ ಯೋಚನೆಗಳು ನನ್ನನ್ನು ಕಾಡುತ್ತಲೆ ಇತ್ತು. ಎಂದೊ ತ್ರೇತಾಯುಗದಲ್ಲಿ ನಡೆದಿರಬಹುದಾದ ಘಟನೆಗಳ ಸುತ್ತ ನನ್ನ ಮನದ ಕಲ್ಪನೆ ಸುತ್ತುತ್ತಿತ್ತು.
------------------------------------------ ೧
...
..
.
ಅಯೋದ್ಯನಗರದ ಲಕ್ಷ್ಮಣನ ಅರಮನೆ. ಹೆಸರು ಲಕ್ಷ್ಮಣನ ಅರಮನೆಯಾದರು, ಈಗಿನ ಚಿಕ್ಕಮಕ್ಕಳಿಗೆ ಲಕ್ಷ್ಮಣನೆಂದರೆ ಯಾರು ಅಂತ ಗೊತ್ತಿಲ್ಲ. "ಅವನು ರಾಮನ ತಮ್ಮ" ಎಂದು ಹೇಳಲು, ಮತ್ತೆ ಮುಂದಿನ ಪ್ರಶ್ನೆ ಬರುತ್ತದೆ "ರಾಮನೆಂದರೆ? ಅವನು ಯಾರು?" . ಅಲ್ಲಿ ಇರುವರಾದರು ಅಷ್ಟೆ ಲಕ್ಷ್ಮಣನ ಪತ್ನಿ ಉರ್ಮಿಳ ಒಬ್ಬಳೆ ಜೊತೆಗೆ ಅವಳ ಸಖಿಯರು, ಮತ್ತೆ ದೊಡ್ಡ ಅರಮನೆಯ ಆಗುಹೋಗುಗಳನ್ನು ನೋಡಿಕೊಳ್ಳಲು ತಕ್ಕ ಕೆಲಸದವರು. ಅಯೋದ್ಯೆಯ ಅರಸರೆಂದರೆ ಸುಮ್ಮನೆಯೆ ?ಆಡಂಬರ, ಪ್ರತಿಯೊಬ್ಬ ರಾಜಕುವರರಿಗು ಪ್ರತ್ಯೇಕ ಅರಮನೆ, ಅದರ ಸುತ್ತಲು ಉದ್ಯಾನವನ, ನೀರಿನ ಕಾರಂಜಿಗಳು, ಲತಾಕುಂಜಗಳು ಮೊದಲುಗೊಂಡು ಕೊನೆಯಿಲ್ಲದ ವೈಭವ.
ಸೂರ್ಯಪಡುವಣದತ್ತ ವಾಲಿದಂತೆ ನಸುಗತ್ತಲು ಅರಮನೆಯನ್ನು ತುಂಬುತ್ತಿತ್ತು, ಅದನ್ನು ಓಡಿಸಲೊ ಎಂಬಂತೆ, ಮಾಧವಿ ಪ್ರತಿಕೋಣೆಯಲ್ಲು ಎಣ್ಣೆಯ ಹಣತೆಗಳನ್ನು ಇಡುತ್ತ ಸಾಗಿದಳು. ಕೊನೆಗೆ ಹೊರಗಿನ ದ್ವಾರದಲ್ಲಿ ದೀಪಗಳನ್ನಿಡುತ್ತ ತೃಪ್ತಿಯಿಂದ ನಿಂತು ನೋಡಿ, ನಂತರ ನೆನಸಿಕೊಂಡಳು, "ಮಹಾರಾಣಿ ಉರ್ಮಿಳಾದೇವಿಯವರೆಲ್ಲಿ ಎಲ್ಲಿಯೂ ಕಾಣಲಿಲ್ಲವೆ?"
ಅವಳು ತನ್ನೊಳಗೆ ನಕ್ಕಳು, ಊರ್ಮಿಳಾದೇವಿ ಸದಾ ಇರುವ ಸ್ಥಳ ಒಂದೆ ಎಂದು ಚಿಂತಿಸುತ್ತ, ಹೊರಬಂದು ಅರಮನೆಯ ಮುಂದಿನ ಹೂತೋಟದಲ್ಲಿ ನಡೆದಳು. ಶುಕ್ಲಪಕ್ಷದ ನವಮಿಯ ಚಂದ್ರನ ಬೆಳಕು, ಗಿಡಮರಗಳ ಮೇಲಿನಿಂದ ಬೀಸುವ ತಂಪಾದ ಗಾಳಿಯನ್ನು ಅಸ್ವಾದಿಸುತ್ತ ನೀರಿನ ಕೊಳದ ಪಕ್ಕ ಇರುವ ಲತಾಕುಂಜದ ಕೆಳಗಿನ ಕಲ್ಲುಹಾಸಿನ ಸೋಫಾನಗಳತ್ತ ನಡೆದಳು. ಅವಳ ಊಹೆ ನಿಜವಾಗಿತ್ತು ಊರ್ಮಿಳಾದೇವಿ ಅಲ್ಲಿಯೆ ಕುಳಿತಿದ್ದಾಳೆ.
ಮಾಧವಿ ಬಂದದ್ದನ್ನು ಅವಳ ಹೆಜ್ಜೆಯ ಸದ್ದಿನಿಂದಲೆ ಅರಿತಳು ಉರ್ಮಿಳ, ಆದರೆ ಆ ಕಡೆತಿರುಗದೆ ಕೊಳದತ್ತಲೆ ನೆಟ್ಟ ನೋಟವಿಟ್ಟಿದ್ದಳು.ಕೊಳದಲ್ಲಿರುವ ಕಮಲಗಳ ಸೊಭಗನ್ನುನೋಡುತ್ತ ಮೈಮರೆತ್ತಿದ್ದಳು.ಹತ್ತಿರ ಬಂದ ಮಾಧವಿ ಮಹಾರಾಣಿಯ ಮುಖವನ್ನು ದಿಟ್ಟಿಸಿದಳು. ನಸುಚಂದ್ರನ ಬೆಳಕಲ್ಲಿ ಕಾಣುತ್ತಿದ್ದ ಆಕೆಯ ಮುಖದ ಹೊಳಪು, ಪ್ರಶಾಂತವಾಗಿ ಸದಾ ಗಂಭೀರವಾಗಿರುವ ಆಕೆಯ ಮುಖಭಾವ, ಕಡೆದು ಕೂಡಿಸಿದಂತೆ ಕಾಣುತ್ತಿರುವ ಆಕೆಯ ಅಂಗ ಸೌಷ್ಟ್ಣವ ಎಲ್ಲವನ್ನು ನೋಡುತ್ತ, ತನ್ನಮಹಾರಾಣಿ ಅಪರೂಪ ಲಾವಣ್ಯವತಿ ಅಂದುಕೊಂಡಳು ಮನದಲ್ಲಿ. ಸೀತೆಯೊಡನೆ ಹೋಲಿಸಿದರು ಊರ್ಮಿಳಾದೇವಿ ಸೊಭಗುಳ್ಳವಳೆ ಆದರೇನು ಅವಳಷ್ಟು ಅದೃಷ್ಟವಂತಳಲ್ಲ ಇವಳು ಅನ್ನಿಸಿತು. ಹತ್ತಿರ ನಿಂತು ಮೃದುದ್ವನಿಯಲ್ಲಿ
"ಮಹಾರಾಣಿ ಕತ್ತಲಾಗುತ್ತಿದೆ" ಎಂದಳು ಮಾಧವಿ.
"ಊ...ಮ್" ಎಂದಳು ಊರ್ಮಿಳ, ಇವಳ ಕರೆಯ ಕಡೆಗೆ ಗಮನಕೊಡದೆ.
"ದೇವಿ, ಗಿಡಮರಗಳ ನಡುವೆ ಹುಳುಹುಪ್ಪಡಿಗಳು ಸರಿದಾಡಬಹುದು ಕತ್ತಲಲ್ಲಿ ಏಕೆ ಒಳಗೆ ಬರಬಹುದಲ್ಲವೆ" ಎಂದಳು ಮಾದವಿ.
"ಮಾಧವಿ ಇನ್ನು ಸ್ವಲ್ಪಹೊತ್ತು ಕಾಲ ಇರೋಣ ಕುಳಿತಿಕೊ" ಎನ್ನುತ್ತ ಕೈತೋರಿಸಿದಳು.
ಮಾಧವಿ ಎಲ್ಲರೆದುರು ಎಂದಿಗು ಮಹಾರಾಣಿಯ ಸರಿಸಮನಾಗಿ ಕುಳಿತುಕೊಳ್ಳುವದಿಲ್ಲ, ಆದರೆ ಇಬ್ಬರೆ ಇದ್ದಾಗ ಅವರ ನಡುವೆ ಅಂತಸ್ಥಿನ ಬೇಧಭಾವವಿರುವದಿಲ್ಲ. ಪಕ್ಕ ಕುಳಿತ ಆಕೆಯ ಹೆಗಲಮೇಲೆ ಕೈಯಿಟ್ಟು ನುಡಿದಳು ಊರ್ಮಿಳ.
"ಲಕ್ಷ್ಮಣನು ಕಾಡಿಗೆ ಹೋಗಿ ಹದಿನಾಲಕ್ಕು ವರುಷಗಳು ಕಳೆದುಹೋದವಲ್ಲವೆ ಮಾಧವಿ"
ಸ್ವಲ್ಪ್ಲ ಕಾಲ ಮೌನ
"ಹೌದು ಮಹಾರಾಣಿ, ನಾಳೆ ನವಮಿ ಬಂದರೆ ಹದಿನಾಲಕ್ಕು ವರ್ಷ ಸಮನಾಯಿತು ನಂತರ ಯಾವಾಗಬೇಕಾದರು ಬರಬಹುದು"
'ಲಕ್ಷ್ಮಣನಿಗೆ ನನ್ನ ನೆನಪು ಉಳಿದಿದ್ದೀತೆ ಮಾಧವಿ" ಊರ್ಮಿಳ ದ್ವನಿ ಭಾರವಾಗಿತ್ತು, ಅವಳ ಪ್ರಶ್ನೆಯಿಂದ ಮಾಧವಿ ವ್ಯಥೆಗೊಂಡಳು, ಏನು ಉತ್ತರ ಕೊಡದೆ "ಮಹಾರಾಣಿ" ಎನ್ನುತ್ತ ಆಕೆಯ ಕೈಅದುಮಿದಳು. ಚಿಕ್ಕ ಮಕ್ಕಳಿಂದಲು ಒಟ್ಟಿಗೆ ಬೆಳೆದವರು ಅವರಿಬ್ಬರು, ಊರ್ಮಿಳೆಯ ಮನಸ್ಸು ವ್ಯಥೆ, ಮನೋಭಾವ ದ್ವನಿ ಎಲ್ಲವು ಮಾಧವಿಗೆ ಚಿರಪರಿಚಿತ. ಅವಳ ಮನಸಿನ ಸೂಕ್ಷ್ಮತೆ ಅವಳು ಬಲ್ಲಳು.
ಮಾಧವಿಯ ಮನ ಹಿಂದಿನದನ್ನೆಲ್ಲ ನೆನೆಯಿತು...
-------------------------------------------- ೨
ತೀರ ಚಿಕ್ಕ ವಯಸ್ಸಿನಿಂದಲು ಅಷ್ಟೆ ಊರ್ಮಿಳದೇವಿಯದು ಸೂಕ್ಷ್ಮ ಸ್ವಭಾವ ಗಂಭೀರ ಪ್ರವೃತ್ತಿ. ಸೀತ ಹಾಗು ಊರ್ಮಿಳ ಜನಕಮಹಾರಾಜನ ಮಕ್ಕಳಾದರು, ಸೀತೆಯಷ್ಟು ಪ್ರಸಿದ್ದಿ ಪಡೆದವಳಲ್ಲ ಊರ್ಮಿಳ. ಅದಕ್ಕೆ ಅವಳ ಒಳಗೆ ಮುದುಡಿಕೊಳ್ಳೂವ ಪ್ರವೃತ್ತಿಯು ಕಾರಣವಾಗಿತ್ತು. ಸೀತೆಯಾದರೊ ಇವಳಿಗೆ ತದ್ವಿರುದ್ದ,ತನಗೆ ಸರಿ ಅನ್ನಿಸಿದ್ದನ್ನು ನೇರವಾಗಿ ನುಡಿಯುವಳು. ತಂದೆಯೆ ಆಗಲಿ ಗಂಡನೆ ಆಗಲಿ ಎದುರಿಗೆ ನಿಂತು ವಾದಿಸಿ , ಒಪ್ಪಿಸಿ ತನಗೆ ಬೇಕಾದುದ್ದನ್ನು ಪಡೆಯುವಳೆ. ಹದಿನಾಲಕ್ಕು ವರುಷಗಳ ಹಿಂದೆ ರಾಮನು ತನ್ನ ತಂದೆಯ ಮಾತನ್ನು ಉಳಿಸಲು ವನವಾಸಕ್ಕೆ ಹೊರಟು ನಿಂತನು, ತಾನು ಜೊತೆಗೆ ಬರುವನೆಂದಳು ಸೀತ. ರಾಮನು "ಬೇಡ ನೀನು ಅಯೋದ್ಯಯಲ್ಲಿಯೆ ಇದ್ದು ಅತ್ತೆ ಮಾವರನ್ನು ನೋಡಿಕೊ" ಎಂದರೆ ಅದನ್ನು ಒಪ್ಪದೆ, "ಕೈಹಿಡಿದ ನಂತರ ನೀನಿರುವಲ್ಲಿ ನಾನಿರುವುದೆ ಧರ್ಮ, ಸಪ್ತಪದಿಯಲ್ಲಿ ಕೊಟ್ಟ ಮಾತಿನಂತೆ ನನ್ನನ್ನು ಜೊತೆಗೆ ಕರೆದೊಯ್ಯುವುದು ನಿನ್ನ ಕರ್ತವ್ಯ, ನನ್ನ ಮಾತನ್ನು ತಿರಸ್ಕರಸಿ ಒಬ್ಬನೆ ಹೋಗುವಂತಿಲ್ಲ" ಎಂದು ಕಠಿಣ ಮಾತುಗಳಲ್ಲಿ ರಾಮನನ್ನು ಒಪ್ಪಿಸಿ ತಾನು ಅವನ ಜೊತೆಗೆ ಹೊರಟುಬಿಟ್ಟಳು
ರಾಮನನ್ನು ಸದಾ ನೆರಳಿನಂತೆ ಅನುಸರಿಸುವ ಲಕ್ಷ್ಮಣನಿಗೆ ರಾಮನು ಅನುಸರಿಸಿದ ಪತಿಧರ್ಮ ಮಾತ್ರ ಕಾಣದಾಯಿತು, ತಾನು ಜೊತೆಗೆ ಬರುವನೆಂದ ಊರ್ಮಿಳೆಯ ಮಾತನ್ನು ಕೇಳಲು ಅವನು ಸಿದ್ದನಿರಲಿಲ್ಲ."ನೀನು ಜೊತೆಗೆ ಬಂದರೆ ರಾಮನ ಸೇವೆ ಮಾಡಲು ನನಗೆ ಅಡಚಣೆಯಾಗುತ್ತೆ ಹಾಗಾಗಿ ಬೇಡ" ಅಂದು ಬಿಟ್ಟ.
ಅವನಿಗೆ ತನ್ನ ಕೈಹಿಡಿದ ಪತ್ನಿಯನ್ನು ಸಲಹುದಕ್ಕಿಂತಲು ರಾಮನನ್ನು ಅನುಸರಿಸುವ ಕರ್ತವ್ಯವೆ ಮುಖ್ಯ ಎನಿಸಿಬಿಟ್ಟಿತು. ರಾಮನು ಅಷ್ಟೆ ಏಕೊ ತನ್ನ ತಮ್ಮ ಲಕ್ಷ್ಮಣನಿಗೆ ನಿನ್ನ ಸತಿಯನ್ನು ಜೊತೆಯಲ್ಲಿ ಕರೆದು ತಾ ಅನ್ನಲಿಲ್ಲ. ಸೀತ ಆದರು ಅಷ್ಟೆ ಹದಿನಾಲಕ್ಕು ವರುಷ ತನಗೆ ತಂಗಿಯ ಜೊತೆಯಾಗುತ್ತದೆ ವನವಾಸದಲ್ಲಿ ಎಂದು ಎಣಿಸಲಿಲ್ಲ. ಯಾವ ಭಾವನೆಯು ಇಲ್ಲದೆ ಲಕ್ಷ್ಮಣ ಪತ್ನಿಯನ್ನು ತೊರೆದು ಹೊರಟ, ಅದು ಹದಿನಾಲಕ್ಕು ವರುಷಗಳ ದೀರ್ಘ ಕಾಲ. ಊರ್ಮಿಳ ತನ್ನ ಪತಿಯ ಎದಿರುನಿಂತು ಗಟ್ಟಿಯಾಗಿ ವಾದಿಸಿ ಗೆಲ್ಲುವಷ್ಟು ದಿಟ್ಟಳಲ್ಲ. ಮನದಲ್ಲಿಯೆ ಕೊರಗಿದಳು.
"ಮಾಧವಿ ನನಗೆ ಊರ್ಮಿಳ ಎಂದು ಹೆಸರನ್ನಿಟ್ಟಿದ್ದಾರೆ, ಹಾಗೆಂದರು ಹೃದಯಕ್ಕೆ ಸಮೀಪವಾದವಳು ಎಂದು ಅರ್ಥವಂತೆ, ಆದರೆ ನಾನೊ ನೋಡು ಅನಾಥೆಯಂತೆ ಯಾರ ಹೃದಯಕ್ಕು ಪ್ರವೇಶವಿಲ್ಲದವಳು, ಕಡೆಗೆ ನನ್ನ ಗಂಡನಿಗೆ ಬೇಡವಾದವಳು" ಎನ್ನುತ್ತ ಕಣ್ಣೀರ ಸುರಿಸುವಳು. ಊರ್ಮಿಳಾದೇವಿಯ ಸೂಕ್ಷ್ಮಮನಸಿನ ನೋವಿನ ಕಣ್ಣೀರು ಮೊದಲಸಲವೇನಲ್ಲ ಅವಳು ನೋಡಿರುವುದು, ಚಿಕ್ಕವಯಸಿನಿಂದಲು ಬಲ್ಲಳು ಆಕೆ ಊರ್ಮಿಳದೇವಿಯನ್ನು.
ಸೀತ ಹಾಗು ಊರ್ಮಿಳ ಇಬ್ಬರು ಜನಕಮಹಾರಾಜನ ಮಕ್ಕಳಾದರು ಅದೇನೊ ಮಹಾರಾಜನಿಗೆ ಮೊದಲಿನಿಂದಲು ಸೀತೆಯೆಂದರೆ ಎಂತದೊ ವ್ಯಾಮೋಹ ಅಕ್ಕರೆ. ಕೈಕೈ ಹಿಡಿದು ಅರಮನೆಯಲ್ಲಿ ಓಡಾಡುವ ಇಬ್ಬರು ಹೆಣ್ಣುಮಕ್ಕಳನ್ನು ಕಂಡರೆ ಎಲ್ಲರ ಮುಖದಲ್ಲು ಮಂದಹಾಸ. ಅರಮನೆಗೆ ಬರುವ ಹೋಗುವ ಅತಿಥಿಗಳು ನೂರಾರು. ಜನಕಮಹಾರಾಜ ಧರ್ಮನಿಷ್ಟ, ವೇದಾಂತಿ ಅವನೊಡನೆ ಚರ್ಚಿಸಲು ಬರುವವರು ಅಪಾರ. ಪರಿಚಿತ ಋಷಿಮುನಿಗಳು ಬಂದಾಗ ಜನಕನು "ಸೀತ ಇಲ್ಲಿಬಾರಮ್ಮ" ಎಂದು ಕರೆದು, ಹೆಮ್ಮೆಯ ದ್ವನಿಯಲ್ಲಿ "ಪಂಡಿತರೆ ಇವಳೆ ನನ್ನ ಮಗಳು ಸೀತ ಅವಳನ್ನು ಆಶೀರ್ವದಿಸಿ" ಎನ್ನುವನು. ಬಂದಿರುವವರು ಸೀತೆಯನ್ನು ಮುದ್ದಿನಿಂದ ಮಾತನಾಡಿಸಿ ನಂತರ " ಯಾವುದು ಈ ಇನ್ನೊಂದು ಮಗು ಮುದ್ದಾಗಿದೆ" ಎಂದು ಕೇಳುವಾಗ ಹೇಳುವನು ಜನಕ ಆಗ ನೆನೆಸಿಕೊಂಡಂತೆ "ಈಕೆ ನನ್ನ ದ್ವಿತೀಯ ಪುತ್ರಿ ಊರ್ಮಿಳ". ಏಕೊ ಮೊದಲಿನ ಹೆಮ್ಮೆಯ ದ್ವನಿ ತನ್ನ ತಂದೆಯದು ಎಂದು ಊರ್ಮಿಳೆಗೆ ಅನ್ನಿಸುತ್ತಿರಲಿಲ್ಲ.
ಸ್ವಲ್ಪ ಬುದ್ದಿ ಬಂದನಂತರ ಅವಳಿಗೆ ಅನ್ನಿಸಿದ್ದು ಇದೆ, ನಮ್ಮ ಅಪ್ಪ ಹೀಗೆ ಏಕೆ? ಹೊರಗಿನವರು ಬರುವಾಗ "ಇವರಿಬ್ಬರು ನನ್ನ ಮಕ್ಕಳು ಸೀತ ಹಾಗು ಊರ್ಮಿಳ ಆಶೀರ್ವದಿಸಿ" ಎಂದು ಹೇಳಬಹುದಲ್ಲ ಎಂದು. ಸೂಕ್ಷ್ಮಮನಸಿನ ಹುಡುಗಿ ಆಕೆ, ಸಮಯ ಸಂದರ್ಭದ ಅರಿವಿನೊಡನೆ ನಿದಾನವಾಗಿ ಅಕ್ಕನಿಂದ ದೂರ ಸರಿಯುತ್ತಿದ್ದಳು. ತನ್ನರಮನೆಯ ದಾಸಿಯ ಮಗಳು ಮಾಧವಿಯೊಡನೆ ಅವಳ ಸಖ್ಯ ಬೆಳೆಯಿತು. ತನ್ನ ಸರಿಸಮಾನದ ವಯೋಮಾನದ ಅವಳೊಡನೆ ಆಗಾಗ್ಯೆ ಮನಬಿಚ್ಚಿ ಮಾತನಾಡುವಳು. ಉಳಿದಂತೆ ಅಪ್ಪ ಅಮ್ಮನೊಡನೆ ಅದೇ ಗಂಭೀರ.ಮೌನ.
ರೂಪಿನಲ್ಲಿ ತನ್ನ ಅಕ್ಕನನ್ನು ಮೀರುತ್ತಿದ್ದ ಅವಳು ಏಕೊ ಅರಮನೆ ಹಾಗು ರಾಜ್ಯದ ಜನಮನದ ಹೃದಯದಲ್ಲಿ ಮನೆಮಾಡಲಿಲ್ಲ. ಊರ್ಮಿಳ ಸದಾ ಸೀತೆಯ ನೆರಳಿನಲ್ಲೆ ಉಳಿದುಬಿಟ್ಟಳು, ಆ ನೆರಳಿನಿಂದ ಎಂದು ಹೊರಬರುವ ಪ್ರಯತ್ನ ಮಾಡದೆ, ಎಲೆಮರೆಯಲ್ಲಿ ಅರಳಿನಿಂತ ಮಲ್ಲಿಗೆಯಂತೆ ಉಳಿದುಬಿಟ್ಟಳು.
ಯಾವುದೊ ಶಿವಧನುವಂತೆ ಅದನ್ನು ಹೆದೆಯೇರಿಸಿ ಬಾಣಹೂಡಿದರೆ ಸೀತೆಯನ್ನು ಕೊಟ್ಟು ವಿವಾಹ ಮಾಡುವೆನೆಂದು ಜನಕಮಹಾರಾಜ ಹೇಳಿಕೆ ಹೊರಡಿಸಿದಾಗ ಎಲ್ಲಡೆ ಸಂಭ್ರಮ. ಊರ್ಮಿಳಾಗು ಕುತೂಹಲ ಎಲ್ಲರೊಡನೆ ತಾನು ಹೋಗಿ ನೋಡಿ ಬಂದಳು ಆ ಶಿವಧನುವನ್ನು. ಅವಳ ಮನದ ಮೂಲೆಯಲ್ಲಿ ಎಲ್ಲಿಯೊ ಒಂದು ಆಸೆಯ ಚಿಗುರು ಸೀತೆಯ ಮದುವೆ ನಂತರ ನಮ್ಮ ಅಪ್ಪ ನನ್ನ ಮದುವೆಯಾಗುವನಿಗು ಅದೇ ರೀತಿ ಸ್ಪರ್ದೆಯಿಟ್ಟು , ಅದಕ್ಕಿಂತ ದೊಡ್ಡ ಬಿಲ್ಲನ್ನು ಪಣಕ್ಕಿಟ್ಟು ಗೆಲ್ಲುವನಿಗೆ ತನ್ನನ್ನು ಕೊಡುವನೊ ಎನ್ನುವಾಗ ಸುಖದ ಕಲ್ಪನೆಯಲ್ಲಿ ಮುಳುಗುವಳು. ಕಿಲಕಿಲ ನಗುತ್ತ ತನ್ನ ಸಖಿಮಾಧವಿಯೊಡನೆ ತನ್ನ ಮನದಾಸೆ ಹಂಚಿಕೊಂಡಿದ್ದಳು.
ಸುದ್ದಿ ಬಂದಿತ್ತು, ಯಾರೊ ವಿಶ್ವಮಿತ್ರ ಮುನಿಗಳಂತೆ ಅಯೋದ್ಯೆಯ ರಾಜಕುವರರೊಡನೆ ಬಂದಿರುವರಂತೆ, ಹೆಸರು ಶ್ರೀರಾಮನಂತೆ, ತಂದೆ ಪಣಕ್ಕಿಟ್ಟಿರುವ ಬಿಲ್ಲನ್ನು ಬಂಗಿಸುವನಂತೆ. ಎಲ್ಲ ಸಂಭ್ರಮದಿಂದ ನೆರೆದಿದ್ದರು. ಅರಮನೆಯ ಸ್ಪರ್ಧೆ ನಡೆಯುವ ಸ್ಥಳದ ಉಪ್ಪರಿಗೆಯ ಮೇಲೆ ಊರ್ಮಿಳ ಸಹ ಬಂದು ಕುಳಿತ್ತಿದ್ದಳು. ರಾಮನು ಧೀರಭಾವದಿಂದ ನಡೆದುಬರುವಾಗ ಬಿಲ್ಲನ್ನು ಎಡಕೈಯಲ್ಲಿ ಹಿಡಿದು ಎತ್ತುವಾಗಲೆ ಅಂದುಕೊಂಡಳು, "ಈತ ಸ್ಪರ್ದೆಯಲ್ಲಿ ಗೆದ್ದಲ್ಲಿ ಇವನನ್ನು ವರಿಸಿದಲ್ಲಿ ಅಕ್ಕ ಸೀತ ನಿಜಕ್ಕು ಭಾಗ್ಯವಂತೆ". ರಾಮ ಅಲ್ಲಿ ನೆರೆದಿರುವವರ ನಿರೀಕ್ಷೆ ಸುಳ್ಳುಮಾಡಲಿಲ್ಲ. ಅವನು ಬಿಲ್ಲನ್ನು ಹೂಡಲು ಬಗ್ಗಿಸಿದರೆ ಬಿಲ್ಲೆ ಶಬ್ದ ಮಾಡುತ್ತ ಮುರಿದುಹೋಯಿತು. ಎಲ್ಲಡೆ ಹರ್ಷೋದ್ಗಾರ. ಜನಕ ಮಹಾರಾಜ ನಗುತ್ತ ವಿಶ್ವಮಿತ್ರರೊಡನೆ ಮಾತನಾಡುತ್ತು ನಿಂತಿರುವಂತೆ, ಸೀತೆ ಹಾರವನ್ನು ಹಿಡಿದು ನಗುತ್ತ ಹೋಗಿ ರಾಮಚಂದ್ರನ ಬಾಗಿದ ಕೊರಳಿಗೆ ವಿಜಯಮಾಲೆ ಹಾಕಿದಳು.
ಸ್ವಲ್ಪ ಹೊತ್ತಿನಲ್ಲೆ ಮೇಲುಪ್ಪರಿಗೆಗೆ ಸುದ್ದಿ ಬಂದಿತು. ಸೀತೆಯ ಜೊತೆಜೊತೆಗೆ ಊರ್ಮಿಳದೇವಿಗೆ ರಾಮನ ಜೊತೆ ಬಂದಿರುವ ಅವನ ಸಹೋದರ ಲಕ್ಷ್ಮಣನ ಜೊತೆ ವಿವಾಹವಂತೆ. ಹಾಗೆಂದು ಜನಕಮಹಾರಾಜ ಸುದ್ದಿ ಕಳಿಸಿದ್ದಾನೆ ರಾಮನ ತಂದೆ ದಶರಥಮಹಾರಾಜನಿರುವ ಅಯೋದ್ಯೆಯ ಅರಮನೆಗೆ. ಊರ್ಮಿಳಾಗೆ ಆಶ್ಚರ್ಯ ಇದೇನಿದು, ಸ್ಪರ್ಧೆ ಇದ್ದದ್ದು, ಸೀತಳನ್ನು ವರಿಸಲು. ತನಗೆ ಯಾವ ಸೂಚನೆಯನ್ನು ಕೊಡದೆ ತನ್ನ ಮದುವೆ ಸಹ ನಿರ್ದಾರವಾಗಿ ಹೋಯಿತೆ.ಕಡೆಗು ತಾನು ಸೀತೆಯ ನೆರಳಾಗಿಯೆ ಉಳಿದೆನೆ.ತನ್ನನ್ನು ವರಿಸಲೊ ಯಾವುದೊ ರಾಜ್ಯದ ರಾಜಕುಮಾರೊಬ್ಬ ಬಂದು ಪಣಕ್ಕಿಟ್ತ ಬಿಲ್ಲನ್ನು ಹೂಡಿ ತನ್ನನ್ನು ಮದುವೆಯಾವುವನೆಂದು ತಾನು ಕಟ್ಟಿದ್ದ ಕನಸು ಗಾಳಿಯ ಗುಳ್ಳೆಯಂತೆ ಒಡೆದುಹೋಯಿತೆ. ವ್ಯಥೆಗೊಂಡಳು ಊರ್ಮಿಳ. ಯಾವ ಸದ್ದು ಇಲ್ಲದಂತೆ ನಿದಾನವಾಗಿ ತನ್ನರಮನೆಗೆ ಸರಿದು ಹೋದಳು ಊರ್ಮಿಳ ತನ್ನನ್ನು ಮದುವೆಯಾಗುವ ವರ ಆ ಶ್ರೀರಾಮನ ತಮ್ಮ ಯಾರು ಎಂದು ನೋಡುವ ಕುತೂಹಲವು ಇಲ್ಲದೆ. ನಂತರ ಮಾಧವಿ ಒಮ್ಮೆ ಹೇಳಿದಳು "ನಿಮ್ಮ ಅಭಿಲಾಷೆಯನ್ನು ಕಡೆಯಪಕ್ಷ ಒಮ್ಮೆ ತಾಯಿಯವರಲ್ಲಿಯಾದರು ಹೇಳಿ". ಆದರೆ ಊರ್ಮಿಳ ಒಪ್ಪಲಿಲ್ಲ ಅವಳು ಹೇಳಿದಳು "ಅದಾಗದು ಮಾಧವಿ, ಒಮ್ಮೆ ನಾನು ಹಾಗೆ ಹೇಳಿದೆನಾದರೆ, ನನಗೆ ಸೀತೆಯ ಸೌಭಾಗ್ಯ ಕಂಡು ಈರ್ಷ್ಯೆ ಎಂದು ಭಾವಿಸುವರು, ನನಗೆ ಅಕ್ಕನ ಭಾಗ್ಯದ ಬಗ್ಗೆ ಯಾವುದೆ ಅಸೂಯೆ ಇಲ್ಲ, ನನ್ನ ಅದೃಷ್ಟ ಇದ್ದಂತೆ ನಡೆಯಲಿ ಬಿಡು"
ಸಂಭ್ರಮದಿಂದ ಸೀತರಾಮ ಕಲ್ಯಾಣ ನೆರವೇರಿತು. ಜೊತೆ ಜೊತೆಗೆ ಲಕ್ಷ್ಮಣ ಊರ್ಮಿಳ, ಹಾಗು ಇವರ ಚಿಕ್ಕಪ್ಪ , ಜನಕಮಹಾರಜನ ತಮ್ಮ ಕುಷದ್ವಜನ ಮಕ್ಕಳಾದ ಮಾಂಡವಿಯೊಡನೆ ಭರತ , ಹಾಗು ಶ್ರುತಕೀರ್ಥಿಯ ಜೊತೆ ಶತೃಘ್ನನ ವಿವಾಹ ನಡೆಸಲಾಯಿತು. ಅಯೋದ್ಯೆಗೆ ಬರುವಾಗ ಊರ್ಮಿಳ ತನ್ನ ಜೊತೆ ತನ್ನ ಪ್ರಿಯ ಸಖಿ ಮಾಧವಿಯನ್ನು ಜೊತೆಜೊತೆಗೆ ಕರೆತಂದಳು.
ಅಯೋದ್ಯೆಗೆ ಬಂದ ಕೆಲವೆ ದಿನಗಳಲ್ಲಿ ಊರ್ಮಿಳೆಗೆ ಅರ್ಥವಾಗಿಹೋಗಿತ್ತು ಇಲ್ಲಿನ ಪರಿಸ್ಥಿಥಿ. ತನ್ನ ಪತಿ ಲಕ್ಷ್ಮಣನಿಗೆ ಅನುಜ ರಾಮನೆಂದರೆ ಅಪಾರ ಭಕ್ತಿ, ಪ್ರೀತಿ ಶ್ರದ್ದೆ. ಅದು ಎಷ್ಟೆಂದರೆ ರಾಮನನ್ನು ಹೊರತುಪಡಿಸಿದರೆ ಅವನಿಗೆ ಸ್ವತಂತ್ರ ವ್ಯಕ್ತಿತ್ವವೆ ಇಲ್ಲವೇನೊ ಅನ್ನುವಂತೆ ರಾಮನ ನೆರಳಾಗಿ ಇರುತ್ತಿದ್ದನು ಲಕ್ಷ್ಮಣ.
ಊರ್ಮೀಳಾದೇವಿಗೆ ಮನದಲ್ಲಿಯೆ ಚೋದ್ಯ, ಇದೆಂತದು ತಾನು ಚಿಕ್ಕಂದಿನಿಂದ ಸೀತೆಯ ನೆರಳಿಂದ ಹೊರಬರಲಾರದೆ ಚಡಪಡಿಸಿದರೆ , ತನ್ನ ಪತಿ ಲಕ್ಷ್ಮಣನಾದರೊ ಆಕೆಯ ಪತಿ ಶ್ರೀರಾಮನ ನೆರಳೆ. ಅವಳಿಗೆ ನೋವಿನ ಜೊತೆಗೆ ನಗು. ಲಕ್ಷ್ಮಣನ ಅವಳಿಸೋದರನಂತೆ ಶತೃಘ್ನ, ಅವನಾದರೊ ಏಕೊ ರಾಮನ ಜೊತೆ ಅಷ್ಟಾಗಿ ಬೆರೆಯನು ದೂರದಿಂದಲೆ ಗೌರವದಿಂದ ನಮಸ್ಕರಿಸುವ, ಉಳಿದಂತೆ ಅವನದು ಭರತನ ಜೊತೆಗೆ ಹೆಚ್ಚು ಒಡನಾಟ.
ಲಕ್ಷ್ಮಣನು ಸೀತರಾಮಚಂದ್ರರನ್ನು ಅನುಸರಿಸಿ ಕಾಡಿಗೆ ಹೊರಟಂತೆ ಊರ್ಮೀಳಾದೇವಿ ಒಂಟಿಯಾಗೆ ಉಳಿದುಹೋದಳು. ಆಗೊಮ್ಮೆ ಈಗೊಮ್ಮೆ ವಿಶೇಷ ಸಂದರ್ಭಗಳಲ್ಲಿ ಅತ್ತೆ ಹಾಗು ಹಿರಿಯರನ್ನು ಬೇಟಿಯಾಗುವಳು,ತೌರು ಮಿಥಿಲಾನಗರವು ಏಕೊ ದೂರವಾಗಿಯೆ ಉಳಿದು, ಸಖಿ ಮಾಧವಿಯೊಡನೆ ಮಾತ್ರ ಅವಳ ಸಖ್ಯ. ಅವಳು ತನ್ನರಮನೆಯಲ್ಲಿ ಹೆಚ್ಚು ಕಾಲ ಕಳೆಯುತ್ತ ಇರುತ್ತಿದ್ದಿದ್ದು ಅರಮನೆ ಉದ್ಯಾನದ ನೀರಿನ ಕಾರಂಜಿಯ ಸಮೀಪದ ಕಲ್ಲು ಸೋಫಾನಗಳ ಮೇಲೆ. ಇಂದು ಸಹ ಹಾಗೆಯೆ ಕುಳಿತಿರುವಳು ಅವಳು ಚಿರವಿರಹಿಣಿಯಂತೆ.
------------------------------------------------------------------ ೩
ಕತ್ತಲು ಆವರಿಸಿದಂತೆ ನಿದಾನಕ್ಕೆ ಎದ್ದು ಹೊರಟಳು ಊರ್ಮಿಳ ತನ್ನ ಪ್ರಿಯಸಖಿಯೊಡನೆ. "ಮಾಧವಿ ನನಗೆ ಇಷ್ಟಾದರು ಒಂದು ಚಿಕ್ಕ ಆಸೆ ಉಳಿದಿದೆ ಅದು ನಡೆದೀತೆ" ಎಂದಳು. "ಏನು ಮಹರಾಣಿ ತಮ್ಮ ಆಸೆ" ಕುತೂಹಲದಿಂದ ಪ್ರಶ್ನೆ ಮಾಡಿದಳು ಮಾಧವಿ. ಕ್ಷಣಕಾಲ ಮೌನ. ನಂತರ ಊರ್ಮಿಳ ಎಂದಳು "ಹದಿನಾಲಕ್ಕು ದೀರ್ಘ ವರುಷಗಳ ಕಾಲ ನಾನು ಸನ್ಯಾಸಿನಿಯಂತೆ ನನ್ನ ಗಂಡನಿಗೆ ಕಾಯುತ್ತಲೆ ಇದ್ದೀನಿ. ಅವನಿಂದ ಒಂದು ಚಿಕ್ಕ ಸುದ್ದಿಯು ಇಲ್ಲ, ಅವನ ಕರ್ತವ್ಯಕ್ಕೆ ನಾನು ಎಂದು ಅಡ್ಡಿ ಬರುವದಿಲ್ಲ, ಹಿಂದಿರುಗಿದ ನಂತರ ಕಡೆಯ ಪಕ್ಷ ಒಮ್ಮೆಯಾದರು ಸರಿ ನನ್ನೊಡನೆ "ಊರ್ಮಿಳ ನೀನು ಇಷ್ಟು ವರ್ಷ ಹೇಗೆ ಕಳೆದೆ, ನಾನಿಲ್ಲದೆ ಕಷ್ಟವಾಗಲಿಲ್ಲವೆ" ಎಂದು ಕೇಳಿದರು ಸಾಕು, ನನಗದು ಸಾಕು, ನಾನು ಇಷ್ಟು ವರ್ಷ ಪಟ್ಟ ಕಷ್ಟವನ್ನೆಲ್ಲ ಮರೆತುಬಿಡುತ್ತೇನೆ" ಎಂದಳು
ಮಾಧವಿ ನಗುನಗುತ್ತ " ಕೇಳದೆ ಏನು ಮಹರಾಣಿ, ಮಹಾರಾಜ ಲಕ್ಷ್ಮಣಕುಮಾರರು ನಿಮ್ಮನ್ನು ಅಗಲಿ ನೊಂದಿರುತ್ತಾರೆ, ನಿಜಕ್ಕು ನಿಮ್ಮನ್ನು ಅವರು ಸಂತೈಸುವರು" ಎಂದಳು
"ಅಯೋದ್ಯ ಅರಸರ ದೈವ ಸೂರ್ಯಭಗವಾನನಲ್ಲಿ ನಾನು ಈಗ ದಿನ ಅದೆ ಅರಕೆ ಮಾಡಿಕೊಳ್ಳುತ್ತಿದ್ದೀನಿ, ನನ್ನ ಚಿಕ್ಕ ಕೋರಿಕೆ ನೆರವೇರಿಸು ದೇವ, ಸಾಕು ನನ್ನ ಈ ದೀರ್ಘವಿರಹದ ನೋವನ್ನು ಮರೆತುಬಿಡುವೆ ಎಂದು" ಊರ್ಮಿಳ ಮೆಲುನುಡಿಯಲ್ಲಿ ನುಡಿದಳು.
ಅವರಿಬ್ಬರು ಅರಮನೆಯ ದ್ವಾರದ ಹತ್ತಿರಬರುವಾಗಲೆ , ಮಹಾದ್ವಾರದ ಹತ್ತಿರದಿಂದ ಸೇವಕಿಯೊಬ್ಬಳು ಓಡಿಬಂದಳು. "ಅಯೋದ್ಯೆಗೆ ಸುದ್ದಿ ಬಂದೆದೆಯಂತೆ. ನಾಳೆ ಸೂರ್ಯೋದಯದ ನಂತರ ವನವಾಸಕ್ಕೆ ಹೋಗಿರುವ ಸೀತ ರಾಮರು ಹಿಂದಿರುಗಿ ಬರುವರಂತೆ, ಎಲ್ಲಡೆ ಸ್ವಾಗತ ಸಂಭ್ರಮಕ್ಕೆ ಸಿದ್ದತೆ ಪ್ರಾರಂಬವಾಗಿದೆ" ಎಂದಳು.
"ಮತ್ತೆ ಲಕ್ಷ್ಮಣ ಮಹಾರಾಜರು" ಎನ್ನಲು ಹೋಗಿದ್ದ ಮಾಧವಿ ಊರ್ಮಿಳೆಯ ಮುಖನೋಡುತ್ತ ಸುಮ್ಮನಾದಳು. ನಂತರ ಆ ಸಖಿ ಊರ್ಮಿಳೆಯ ಎದುರಿಗೆ ನಿಂತು ಎಲ್ಲ ವಿಷಯಗಳನ್ನು ವಿವರವಾಗಿ ತಿಳಿಸಿದಳು. ಸೀತ ರಾಮರು ವನವಾಸಕ್ಕೆ ಹೋಗಿ ಚಿತ್ರಕೂಟ ಪರ್ವತದಲ್ಲಿ ವಾಸವಾಗಿದುದ್ದು, ಅಲ್ಲಿಗೆ ಬಂದ ಶೂರ್ಪನಖಿ ಎಂಬ ರಕ್ಕಸಿಯ ದಸೆಯಿಂದ ರಾವಣನ ಆಗಮನ. ರಾವಣನು ಹೆಣ್ಣಿನ ವ್ಯಾಮೋಹದಿಂದ ಸೀತೆಯನ್ನು ಅಪಹರಣ ಮಾಡಿದ್ದು. ನಂತರ ರಾಮ ಲಕ್ಷ್ಮಣರು ಸುಗ್ರೀವ ಹನುಮಂತ ಮುಂತಾದ ವಾನರವೀರರ ಸಹಾಯದಿಂದ ಸಮುದ್ರ ದಾಟಿ ರಾವಣನನ್ನು ಸಂಹರಿಸಿ, ಈಗ ಎಲ್ಲರೊಡನೆ ಹಿಂದೆ ಬರುತ್ತಿರುವ ವಿಷಯಗಳನ್ನು ಸುದೀರ್ಘವಾಗಿ ತಿಳಿಸಿದಳು. ಯುದ್ದದಲ್ಲಿ ಲಕ್ಷ್ಮಣನು ಜ್ಞಾನತಪ್ಪಿ ಬಿದ್ದು ಸಾವಿನ ಅಂಚಿನಲ್ಲಿದ್ದುದ್ದನ್ನು ಕೇಳುವಾಗ ಊರ್ಮಿಳೆಗೆ ಕಣ್ಣಲ್ಲಿ ನೀರು ತುಂಬಿ ದುಖಃ ಉಕ್ಕಿ ಬಂತು. "ದೇವ ಅವರಿಗೇನು ಆಗದಂತೆ ಕಾಪಾಡು" ಎಂದು ಬೇಡಿದಳು. ಕಡೆಗೆ ತನ್ನ ಪತಿಯನ್ನುಳಿಸಲು ಸಂಜೀವಿನಿ ಪರ್ವತವನ್ನೆ ತಂದ, ತಾನೆಂದು ಕಾಣದ ಹನುಮಂತನನ್ನು ಮನದಲ್ಲಿಯೆ ಸ್ಮರಿಸಿದಳು.
ಮರುದಿನ ಅಯೋದ್ಯ ನಗರಿಗೆ ಸಂಭ್ರಮ, ಪ್ರತಿ ಮನೆ ಬೀದಿ ದೇಗುಲಗಳಲ್ಲಿ ಹಸಿರು ತೋರಣ ಹೂಗಳಿಂದ ಅಲಂಕರಿಸಲಾಗಿತ್ತು. ಊರ್ಮಿಳ ಇದ್ದ ಅರಮನೆಯು ಅದಕ್ಕೆ ಹೊರತಲ್ಲ. ಎಲ್ಲಡೆಯು ಸಂಭ್ರಮಗಳ ಉತ್ತುಂಗ, ಕೇಕೆ ಹರ್ಷೊದ್ಗಾರಗಳು.
ಊರ್ಮಿಳ ಶುಭ್ರಳಾಗಿ ಸಿದ್ದಳಾಗಿ ಸೂರ್ಯನ ಆರಾದನೆ ಮುಗಿಸಿ ಕಾದಿದ್ದಾಳೆ. ಮನದಲ್ಲಿ ಒಂದೇ ಕೋರಿಕೆ "ಪ್ರಭು ನನ್ನ ಪತಿ ಒಮ್ಮೆಯಾದರು ನನ್ನ ನೋಡಿ ಮುಗುಳ್ನಕ್ಕು ಊರ್ಮಿಳಾ ನೀನು ಹೇಗಿದ್ದಿ, ನಾನು ನಿನಗಾಗಿ ಕಾತರಿಸಿ ಬಂದಿದ್ದೇನೆ ಎಂದು ನುಡಿಯಲಿ". ಅವಳ ಮನ ಪಿಸುಗುಟ್ಟುತ್ತಲಿದೆ, "ಲಕ್ಷ್ಮಣ ನೀನು ಇಷ್ಟುಕಾಲದ ನಂತರ ನೋಡಲು ಹೇಗಿದ್ದಿ?. ನನ್ನೆದುರು ಬರುವ ಆ ಶುಭ ಗಳಿಗೆ ಸಮೀಪಿಸಿತು" ಎಂದು.
ಮಹಾದ್ವಾರದ ಹತ್ತಿರ ಕೂಗಾಟ, "ರಾಜಕುಮಾರ ಲಕ್ಷ್ಮಣನಿಗೆ ಜಯವಾಗಲಿ" ಎನ್ನುವ ಜಯಕಾರದ ದ್ವನಿ ಮುಗಿಲುಮುಟ್ಟಿದೆ. ಆರತಿ ಹಿಡಿದು ಸಿದ್ದಳಾದಳು ಊರ್ಮಿಳ ಅವನನ್ನು ಸ್ವಾಗತಿಸಲು. ಲಕ್ಷ್ಮಣನು ಒಳಬರುತ್ತಿದ್ದಾನೆ ! ಕಾಡಿಗೆ ಹೊರಟಾಗ ಇದ್ದ ಅದೆ ನಾರುಮಡಿಯ ಏಕವಸ್ತ್ರದಲ್ಲಿ.ಕೈಯಲ್ಲಿ ಬಿಲ್ಲು. ದೀರ್ಘಕಾಲದ ವನವಾಸ , ಯುದ್ದದ ಶ್ರಮದಿಂದ ಬಳಲಿದ ಮುಖಭಾವ. ಎದುರಿಗೆ ಹೋಗಿ ನಗುತ್ತ ಆರತಿ ಎತ್ತಿದಳು ಊರ್ಮಿಳ.
ಲಕ್ಷ್ಮಣನಿಗೆ ಬಾಗಿಲಲ್ಲಿ ನಿಲ್ಲಲ್ಲು ಏನೊ ಚಡಪಡಿಕೆ, ಒಳಹೊರಟ. ಆರತಿ ತಟ್ಟೆಯನ್ನು ದಾಸಿಯ ಕೈಲಿಟ್ಟು ತಾನು ಅವನ ಹೆಜ್ಜೆಯ ವೇಗಕ್ಕೆ ಹೆಜ್ಜೆ ಹೊಂದಿಸುತ್ತ ನಡೆದಳು ಊರ್ಮಿಳ.
"ಹೇಗಿದ್ದೀರಿ" ಇದಕ್ಕಿಂತ ಹೆಚ್ಚಿಗೆ ಅವಳಿಗೆ ನುಡಿಯಲಾಗಲಿಲ್ಲ, ಗಂಟಲು ಕಟ್ಟಿದಂತಾಯ್ತು.
ಲಕ್ಷ್ಮಣನು ಹೇಳುತ್ತಿದ್ದಾನೆ "ಆಯಿತು ವನವಾಸವೆಲ್ಲ ಮುಗಿಯಿತು. ರಾಮನು ಯುದ್ದವು ಗೆದ್ದಾಯಿತು. ಇನ್ನೇನು ಆಪತ್ತು ಅಡಚಣೆಗಳೆಲ್ಲ ಮುಗಿದವು. ಶೀಘ್ರದಲ್ಲಿ ರಾಮನಿಗೆ ಪಟ್ಟಾಭಿಷೇಕ. ಈಗ ಅದನ್ನು ಯಾರು ತಡೆಯಲಾರರು"
ಊರ್ಮಿಳ ಮನದಲ್ಲಿಯೆ ಪ್ರಾರ್ಥಿಸುತ್ತಿದ್ದಾಳೆ"ಭಗವಾನ್ ಸೂರ್ಯದೇವ, ನನ್ನ ಪತಿ ಒಮ್ಮೆಯಾದರು ನನ್ನತ್ತ ಕೃಪೆ ತೋರಲಿ, ಒಂದೇ ಒಂದು ಸಾರಿ ಊರ್ಮಿಳ ನೀನು ಇಷ್ಟುವರ್ಷ ಹೇಗಿದ್ದೆ ಎಂದು ಕೇಳಲಿ, ನನ್ನ ಚಿಕ್ಕ ಕೋರಿಕೆ ನೆರವೇರಿಸಲಾರೆಯ?"
ಏಕೊ ಊರ್ಮಿಳ ಕಣ್ಣ ಕೊನೆಯಲ್ಲಿ ಕಾಣಿಸಿಕೊಂಡ ನೀರ ಬಿಂದುವೊಂದರಿಂದ ಅವಳ ದೃಷ್ಟಿ ಮಂಜಾಗಿ ಲಕ್ಷ್ಮಣ ಅಸ್ವಷ್ಟನಾಗಿ ಕಾಣುತ್ತಿದ್ದಾನೆ.
ಲಕ್ಷ್ಮಣ ಮುಂದುವರೆಸಿದ ತನ್ನ ಮಾತನ್ನು "ಇಂದಿನಿಂದಲೆ ರಾಮನ ಪಟ್ಟಾಭಿಷೇಕಕ್ಕೆ ತಯಾರಿ ಪ್ರಾರಂಬಿಸಬೇಕು, ಈ ನಾರುಮಡಿ ಕಳೆದು ಸ್ನಾನ ಮುಗಿಸಿ, ಶುಭ್ರವಸ್ತ್ರ ಧರಿಸಿ, ಹೊರಟರೆ ಆಯಿತು, ರಾಮನ ಪಟ್ಟಾಭಿಷೇಕ ಮುಗಿಯುವವರೆಗು ನಾನು ವಿಶ್ರಮಿಸುವಂತಿಲ್ಲ ಎಲ್ಲ ನನ್ನದೆ ಜವಾಬ್ದಾರಿ ಅಂದಿದ್ದನೆ ಅವನು"
ಏಕೊ ಏಕೊ ಪಾಪ ಊರ್ಮಿಳೆಯ ಕಣ್ಣಲ್ಲಿದ್ದ ಜಲಬಿಂದು ಕೆಳಗೆ ಜಾರಿ ಅವಳ ನುಣುಪಾದ ಕೆನ್ನೆಯ ಮೇಲೆ ಹರಿದಿದೆ, ಮತ್ತೆ ಮತ್ತೆ ಕಣ್ಣು ತುಂಬಿಕೊಳ್ಳುತ್ತಿದೆ. ಭಗವಾನ್ ಸೂರ್ಯನಲ್ಲಿ ಅವಳ ಪ್ರಾರ್ಥನೆ ಮುಂದುವರೆದಿದೆ
"ಒಂದೇ ಒಂದು ಸಾರಿ ನನ್ನ ಪತಿ ಲಕ್ಷ್ಮಣನು ನನ್ನನ್ನು ಹೇಗಿದ್ದಿ ಎಂದು ವಿಚಾರಿಸಲಿ......"
.....
....
...
** ಮುಗಿಯಿತು.**
ವರ್ಣಚಿತ್ರ: ಇಂಟರೆನೆಟ್ನಿಂದ ಎರಡು ಚಿತ್ರಗಳನ್ನು ತೆಗೆದು ಸಂಯೋಜನೆಗೊಳಿಸಿದೆ
Comments
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by ಗಣೇಶ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by ಗಣೇಶ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by kavinagaraj
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by Chikku123
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by bhalle
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by makara
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by sathishnasa
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by umargraju
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by venkatb83
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by partha1059
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by partha1059
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by venkatb83
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by swara kamath
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by makara
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by kahale basavaraju
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
In reply to ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ by RAMAMOHANA
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ
ಉ: ರಾಮಯಣದಲ್ಲೊಂದು ಮೌನರಾಗ - ಊರ್ಮಿಳ