ಗಣೇಶರ ನರ್ವೋಳು ಸೊಪ್ಪಿನ ಸಾಂಬಾರ್ ಹಾಗು ನನ್ನ ಅಡುಗೆ ಪ್ರಯೋಗ [ಹಾಸ್ಯ ಪ್ರಬ0ಧ]

ಗಣೇಶರ ನರ್ವೋಳು ಸೊಪ್ಪಿನ ಸಾಂಬಾರ್ ಹಾಗು ನನ್ನ ಅಡುಗೆ ಪ್ರಯೋಗ [ಹಾಸ್ಯ ಪ್ರಬ0ಧ]

ಹಿನ್ನಲೆ:-
=====
ಗಣೇಶರ ನರ್ವೋಳು ಸೊಪ್ಪು ಲೇಖನ ಓದಿ ನಾನು ಪ್ರತಿಕ್ರಿಯಿಸಿದ್ದೆ
ಗಣೇಶರೆ
ನಿಮ್ಮ ಮನೆಯವರು ಪುಣ್ಯವಂತರು ಬಿಡಿ :))))
 
 ಅದಕ್ಕೆ ಗಣೇಶರು ,
ಈಗ ಮೇಲೆ ಹೇಳಿದಂತೆ ಅಡುಗೆ ಮಾಡಿ ಬಡಿಸಿ,
ನಿಮ್ಮ ಮನೆಯವರನ್ನೂ ಪುಣ್ಯವಂತರನ್ನಾಗಿ ಮಾಡಿ. :)
ಒಮ್ಮೆ ಅಡುಗೆ ಮಾಡುವುದರಲ್ಲಿ ಆಸಕ್ತಿ ಬಂದರೆ ಮತ್ತೆ ಅಡುಗೆಕೋಣೆ ಬಿಡಲು ಮನಸ್ಸೇ ಬಾರದು.
-ಗಣೇಶ.
   ಸರಿ ಮತ್ತೆ ಅವರು ಹೇಳಿದಂತೆ ಒಮ್ಮೆ ಪ್ರಯತ್ನಪಟ್ಟು ಅಡುಗೆಮನೆಗೆ ಹೋಗಿ ಪ್ರಯೋಗಮಾಡುವದರಲ್ಲಿ ಏನು ಕಷ್ಟ . ನೋಡೋಣ ಅಂದು ಕೊಂಡೆ

ಘಟನೆ
====
 ಬಾನುವಾರ ಬೆಳಗಿನ  ಸಮಯ
ನಾನು : "ಈದಿನ ಅಡುಗೆ ನಾನೆ ಮಾಡ್ತೀನಿ "  ಮನೆಯಲ್ಲಿ ಒಂದು ದೀರ್ಘ ಮೌನ , ರೂಮಿನಲ್ಲಿ ಯಾರೊ ಕಿಸಕ್ ಎಂದು ನಕ್ಕ ಶಬ್ದ.
ಮನೆಯವರು: "ಏಕೆ ಇದ್ದಕ್ಕಿದ್ದಂತೆ ಏನಾಯ್ತು, ನಿಮಗೆ ಆಗಲ್ಲ ಸುಮ್ಮನಿರಿ"
ನಾನು ಗಣೇಶರ ಉಪದೇಶವನ್ನು ತಿಳಿಸಿ, "ಏಕೆ ಆಗಲ್ಲ ಒಮ್ಮೆ ಪ್ರಯತ್ನ ಪಟ್ಟರೆ ಎಲ್ಲ ಸರಿಹೋಗುತ್ತೆ " ಎಂದೆ
ಮನೆಯವರು: "ಸರಿ ಈಗ ಏನು?  ಸೆಲ್ಫ್ ಸರ್ವಿಸೋ  ಅಥವ ಹೆಲ್ಪ್ ಬೇಕೊ " ಅಂದರು ಸೀರಿಯಸ್ಸಾಗಿ,
ನನಗೆ ಕಿಂದರಜೋಗಿ ಕತೆ ನೆನಪಿಗೆ ಬಂದಿತು, ಎಲ್ಲ ನಾನೆ ಮಾಡಿ ಕಡೆಗೆ ಮನೆಯವರು
"ನೀವೇನು ಮಾಡಿದಿರಿ , ಎಲ್ಲ ನಾನು ಹೇಳಿದ್ದು , ನೀವು ಸುಮ್ಮನೆ ನಿಂತಿದ್ದೀರಿ" ಅನ್ನುವುದು ನಿಶ್ಚಿತ , ಪೂರ್ತಿ ಕ್ರೆಡಿಟ್ ನನಗೆ ಸಲ್ಲ ಬೇಡವೆ ? ಅನ್ನಿಸಿ
"ನಿನ್ನ ಹೆಲ್ಪ್ ಏನು ಬೇಡ ಆರಾಮವಾಗಿ ಕುಳಿತು ಪೇಪರ್ ಓದುವುದು ಏನೊ ಮಾಡು,  ನಾನಾಗೆ ಬಾ ಎಂದು ಕರೆಯುವವರೆಗು ನೀನು ಅಡುಗೆಮನೆಗೆ ಕಾಲಿಡಬೇಡ , ನಿನಗೆ ಈದಿನ ಬಿಸಿಬಿಸಿ ಊಟ ಹಾಕುವುದು ನನ್ನ ಜವಾಬ್ದಾರಿ" ಎಂದೆ, ಹೆಮ್ಮೆಯ ದ್ವನಿಯಲ್ಲಿ. ಸರಿ ಅಂತ ಗಂಭೀರ್ವಾಗಿ ಪೇಪರ್ ಹಿಡಿದು , ಟೀವಿ ಆನ್ ಮಾಡಿ ಕುಳಿತರು ಮನೆಯವರು , ವಾರದ ಭವಿಷ್ಯ ಕೇಳುತ್ತ.
  ನಾನು ಯೋಚಿಸಿದೆ ಮೊದಲು ಒಂದು ಕಾಫಿ ಮಾಡುವುದು , ಅದನ್ನು ಕುಡಿದು ನಂತರ, ಅಡುಗೆ ಮುಗಿಸಿದರಾಯ್ತು, ಬಾನುವಾರ ಒಳ್ಳೆ ಟೈಮ್ ಪಾಸ್, ಮತ್ತೆ ಮನೆಯವರಿಗು ಸ್ವಲ್ಪ ರೆಷ್ಟ್ ಆದಾಂತಾಯ್ತೆ.
 ಕಾಫಿ ಮಾಡಲು ಏನು ಬೇಕು ಮಹಾ, ಹಾಲಿನ ಪ್ಯಾಕೇಟ್ ಒಡೆದು ಪಾತ್ರೆಗೆ ಹಾಕಿ ಗ್ಯಾಸ್ ಸ್ಟವ್ ಮೇಲೆ ಇಟ್ಟೆ, ಗ್ಯಾಸ್ ಆನ್ ಮಾಡಿ ಸ್ವಲ್ಪ ದೂರ ನಿಂತು ಕೈ ನೀಡಿ ಲೈಟರ್ ನಿಂದ ಪಟ್ ಅನ್ನಿಸಿದೆ, (ಲೈಟರ್ ಅದುಮಿದಾಗ ಗ್ಯಾಸ್ ದಗ್ಗನೆ ಶಬ್ದ ಮಾಡುತ್ತ ಹತ್ತುವುದು ಅಂದರೆ ನನಗೆ ಸ್ವಲ್ಪ ಭಯ!).
ಸರಿ ಈಗ ಡಿಕಾಕ್ಷನ್ ಬೇಕೆ ಫಿಲ್ಟರ್ ಚೆಕ್ ಮಾಡಿದೆ, ಖಾಲಿ, ಛೇ!!! ಮತ್ತೆ ಡಿಕಾಕ್ಷನ್ ಹಾಕಬೇಕಲ್ಲ !
ಕಾಪಿಪುಡಿಯ ಜಾರ್ ಹುಡುಕಿದೆ ! ಖಾಲಿ !!!
ಹೊರಗೆ ಬಂದು "ಕಾಫಿ ಪುಡಿ ಇಲ್ಲವ?" ಅಂದೆ,
ಮನೆಯವರು " ನಿನ್ನೆ ಮುಗಿಯಿತು, ಈಗ ತರಬೇಕು ಹೋಗಿ ತರ್ಲ" ಎಂದರು

ಇಲ್ಲ ಎಲ್ಲ ನಾನೆ ಮಾಡಿ ಜಯಿಸಬೇಕು, ಅನ್ನಿಸಿ "ಬೇಡ ಬಿಡು ನಾನೆ ಹೋಗಿ ತರ್ತೀನಿ"  ಅನ್ನುತ್ತ ಶರ್ಟ್ ಧರಿಸಿ ರಸ್ತೆ ತುದಿಯ ಅಂಗಡಿಯತ್ತ ಹೊರಟೆ , ಅಂಗಡಿಯಾತ ನನ್ನನ್ನೆ ಆಶ್ಚರ್ಯದಿಂದ ದಿಟ್ಟಿಸಿ
"ಏನು ಸಾರ್ ನೀವೆ ಬಂದ್ರಿ ಏನು ಕೊಡಲಿ" ಎಂದ
"ಕಾಪಿ ಪುಡಿ ಬೇಕಿತ್ತು, ಅರ್ಧ ಕಿಲೋ" ಎಂದ,
"ಯಾವುದು ಕೊಡಲಿ ಸಾರ್" ಎಂದ, ಎಲಾ ಇವನ ಕಾಫಿಪುಡಿ ಎಂದರೆ ಯಾವುದು ಅನ್ನುತ್ತಾನಲ್ಲ !
"ಯಾವುದು ಅಂದ್ರೆ ಏನ್ರಿ ಅದಕ್ಕು ಬ್ರಾಂಡ್ ಇದೆಯ, ನಿಮ್ಮ ಅಂಗಡಿದು ಕೊಡಿ" ಎಂದೆ
"ಹಾಗಲ್ಲ ಸಾರ್, ಚಿಕೋರಿ ಎಷ್ಟು ಕೊಡಲಿ, ಹತ್ತ , ಇಪ್ಪತ್ತ " , ನಾನು ಕಾಪಿಪುಡಿ ಅಂದರೆ ಇವನು ಚಿಕೋರಿ ಅಂತಾನಲ್ಲ
"ನಮ್ಮವರು ಯಾವಾಗ್ಲು ತಗೋಂಡು ಹೋಗೊ ಮಾಮೂಲಿದು ಕೊಟ್ಬಿಡಿ"   ಅಂತ ಬುದ್ದಿವಂತಿಕೆ ತೋರಿಸಿ ನಕ್ಕೆ,
"ಸರಿ" ಕಾಫಿಪುಡಿ ಅವನು ಕಾಫಿಪುಡಿ ಸಿದ್ದಮಾಡುತ್ತಿರಲು , ರಸ್ತೆಯಲ್ಲಿ ದೊಡ್ಡ ಗುಂಪು ಸಾಗುತ್ತಿತ್ತು
"ಟ್ವಿಂಕಲ್ ಟ್ವಿಂಕ್ಲ್ ಲಿಟ್ಲ್ ಸ್ಟಾರ್, ಯಡಿಯೂರಪ್ಪ ಸೂಪರ್ ಸ್ಟಾರ್’  ಅಂತ ಸ್ಲೋಗನ್ ಬೇರೆ.
ಇವರ ಮೆರವಣಿಗೆಯಿಂದ ಆಶ್ಚರ್ಯವಾಯಿತು, ಅಂಗಡಿಯವನಲ್ಲಿ ಕೇಳಿದೆ
"ಏಕೆ ಯಡಿಯೂರಪ್ಪ ಏನು ಮಾಡಿದರು" 

ಅಂಗಡಿಯವನು 'ಸಾರ್ ಯಡಿಯೂರಪ್ಪನರಿಗೆ ಜಾಮೀನು ಸಿಗ್ತಲ್ಲ ಅದೇ ಸಂಭ್ರಮ' ಅಂದ ನಗುತ್ತ,
ನನಗೆ ಅರ್ಥವಾಗಲಿಲ್ಲ  'ಅದೆಂತದು ಜಮೀನಿನ ಗಲಾಟೆಲೆ ಅಲ್ವೆ ಅವರು ಜೈಲು ಸೇರಿದ್ದು,  ಅದೇ ಜಮೀನು ಸಿಗ್ತು ಅಂತ ಏಕೆ ಜೈಕಾರ ಹಾಕ್ತಿದ್ದಾರೆ" ಅಂದೆ.
ಅವನು ಮರುಕದಿಂದ "ಸಾರ್ ಜಮೀನಲ್ಲ , ಜಾಮೀನು ಅಂದರೆ ಬೈಲ್ ಗೊತ್ತಾಯ್ತ ' ಅಂದ.
ನಾನು  'ಓಹೋ ಹಾಗೊ ಬೈಲ್ ಸಿಗ್ತೋ!  ಆ ರೀತಿ ಬಾಯಿತುಂಬ ಕನ್ನಡದಲ್ಲಿ ಹೇಳಲು ಏನು ಕಷ್ಟ' ಅಂತ ಮನಸಿನಲ್ಲೆ ಬೈದುಕೊಂಡು ಮನೆಗೆ ಹೊರಟೆ, ಕಾಫಿಪುಡಿ ಜೊತೆ.

ಮನೆಯ ಒಳಗೆ ಬರುವಾಗಲೆ , ಎಂತದೊ ವಾಸನೆ, ಸುವಾಸನೆಯೊ ದುರ್ವಾಸನೆಯೊ ನಿರ್ಧರಿಸಲಾಗದ ಸಂದಿಗ್ದದಲ್ಲಿ ಕೇಳಿದೆ
'ಏನೆ ಮನೆಯೆಲ್ಲ ವಾಸನೆ, ಏನಾದರು ಶ್ರೀನಾಥರ ಗೆಳೆಯ ಅ ಸುಬ್ಬ ಬಂದಿದ್ದಾನ?'
ಮನೆಯವರು ' ಅದೆಲ್ಲ ಏನು ಇಲ್ಲ, ಒಳಗೆ ಹಾಲು ಉಕ್ಕಿ ಹರಿದಿದೆ ಅನ್ನಿಸುತ್ತೆ'  ಅಂದಳು. ನಾನು ಗಾಭರಿಯಿಂದ ಅಡುಗೆಮನೆಗೆ ಓಡಿದೆ.
 
ಅಲ್ಲಿ ನೋಡಲು, ನಾನು ಒಲೆಯ ಮೇಲೆ ಇಟ್ಟು ಹೋಗಿದ್ದ ಹಾಲು ಉಕ್ಕಿ ಹರಿದು, ಕಟ್ಟೆಯ ಮೇಲೆಲ್ಲ ಚೆಲ್ಲಿದೆ, ಪಾತ್ರೆಯೆಲ್ಲ ಸೀದು, ಎಂತದೊ ವಾಸನೆ ತುಂಬಿದೆ, ಹಾಲು ಗ್ಯಾಸ್ ಸ್ಟೌವಿನ ಮೇಲೆ ಹರಿದು ಅದರ ಉರಿ ನಂದಿ ಹೋಗಿದೆ, ನೋಡಲು ಭಯ ಹುಟ್ಟಿಸುವ ವಾತವರಣ
'ಅಲ್ಲವೆ ಒಳಗೆ ಬಂದು ಸ್ಟೌ ಆರಿಸುವದಲ್ಲವೆ" ಅಂದೆ ತುಸು ಕೋಪದಲ್ಲಿ,
'ಒಳಗೆ ಬರದಂತೆ ಲಕ್ಷ್ಮಣ ರೇಖೆ ಎಳೆದು ಹೋದವರು ನೀವೆ ಅಲ್ಲವೆ ನಿಮ್ಮ ಮಾತು ಹೇಗೆ ಮೀರಲಿ' ಎಂದಳು ಹೊರಗಿನಿಂದ ಸೌಮ್ಯವಾಗಿ. ನನಗಂತು ಉರಿದುಹೋಗುತ್ತಿತ್ತು,
ಮಗಳು ಹೇಳುತ್ತಿದ್ದಳು  ಕಾಲೇಜಿನಲ್ಲಿ ಲೆಕ್ಚರರ ಯಾವಾಗ "ಗೆಟೌಟ್" ಅಂತ  ಕಿರುಚುತ್ತಾನೊ ಆಗ ವಿಧ್ಯಾರ್ಥಿಯ ಜೊತೆ ವಾದದಲ್ಲಿ ಅವನು ಸೋತ ಎಂದು ಅರ್ಥವೆಂದು. ಹಾಗಾಗಿ ನಾನು ಈದಿನ ಸಹನೆ ಕಳೆದುಕೊಂಡು ಸೋಲಬಾರದು ಅಂತ ನಿರ್ದರಿಸಿದೆ. ಸರಿ ಹೇಗೊ ಸ್ವಲ್ಪ ನೀರು ಬಟ್ಟೆ ಹಿಡಿದು ಸ್ಟೌವನ್ನು ಹಾಗು ಕೆಳಗಿನ ಅಡುಗೆ ಪ್ಲಾಟ್ಫಾರ್ಮ್ ಶುದ್ದ ಮಾಡಲು ಪ್ರಯತ್ನಿಸಿ ಅರ್ಧ ಸಫಲನಾದೆ.
ಸರಿ ಕಾಫಿ ಮಾಡಿ ನನ್ನವಳಿಗೆ ಕೊಟ್ಟು ಶಹಭಾಸ್ ಪಡೆಯುವ ಯೋಚನೆಯನ್ನು ’ಸೈಲೆಂಟ್’  ಆಗಿ ಕೈಬಿಟ್ಟೆ.
ಈಗೇನು ಅಡುಗೆ ಮಾಡಿ ಸಮಯಕ್ಕೆ ಬಡಿಸಿದರೆ ಆಯಿತು, ಅದಕ್ಕೇನು ಕಷ್ಟ ಎಂದು, ಎಲ್ಲ ಸಿದ್ದತೆ ನಡೆಸಿದೆ, ಕುಕ್ಕರ್ ತೆಗೆದು ಸ್ಟೌಮೇಲಿಟ್ಟು, ಒಂದು ಪಾತ್ರೆಯಲ್ಲಿ ಒಂದು ಅಳತೆ ಅಕ್ಕಿಯನ್ನು   ಹಾಕಿ,  ತೊಳೆದು ನೀರು ತುಂಬಿ ಇಟ್ಟೆ, ಇನ್ನೊಂದರಲ್ಲಿ ಸ್ವಲ್ಪ ತೊಗರಿಬೇಳೆ ಹಾಕಿ, ಈಚೆ ಬಂದು ಪ್ರೀಜ್ ತೆಗೆದು ನೋಡಿದೆ, ಕೈಗೆ ಸಿಕ್ಕಿದ ತರಕಾರಿಯನ್ನು ವಿವಿದ ಆಕಾರಕ್ಕೆ ಕತ್ತರಿಸಿ, ನೀರಿನಲ್ಲಿ ತೊಳೆದು ಅದೆ ಪಾತ್ರೆಗೆ ತುಂಬಿ, ಕುಕ್ಕರ್ ಅನ್ನು ಮುಚ್ಚಿ ಸ್ಟೌ ಹಚ್ಚಿದೆ.
ಸರಿ ಸ್ವಲ್ಪ ಕಾದರೆ ಕುಕ್ಕರ್ ಕೂಗುತ್ತದೆ ನಂತರ ಬಂದು ಎಲ್ಲವನ್ನು ಸರಿಮಾಡಿದರೆ ಮುಗಿಯಿತು, ಅಡುಗೆ ಆದಹಾಗೆ ಅಲ್ಲವೆ , ಪದೆ ಪದೆ  ನನ್ನವಳು ಹೇಳ್ತ ಇರ್ತಾಳೆ  'ಈಗ ಅಡುಗೆ ಸುಲುಭ ಕುಕ್ಕರ್ ಕೂಗ್ತು ಅಂದರೆ ಅಡುಗೆ ಆದ ಹಾಗೆ' ಅಂತ. ಹೊರಗೆ ಬಂದು ನಿಂತುಕೊಂಡೆ, ಸೋಪ ಮೇಲೆ ಕೂಡಲು ಎಂತದೊ ಟೆನ್ಷನ್, ನನ್ನಾಕೆ ನನ್ನನ್ನೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ ಅನ್ನಿಸಿತು. ಮುಖದಲ್ಲಿ ನಗುವನ್ನು ತಂದುಕೊಂಡು ಮನದಲ್ಲಿ ನಳಮಹರಾಜರಂತಿರುವ 'ಗಣೇಶ'ರನ್ನು ನೆನೆದುಕೊಂಡೆ.
 ಒಂದೈದು ನಿಮಿಷವಾಯಿತೇನೊ, ಕುಕ್ಕರ್ ನನ್ನನ್ನು ಕರೆಯಲೆ ಇಲ್ಲವಲ್ಲ ಅಂತ ಅನುಮಾನವಾಯಿತು
" ಸಾಮಾನ್ಯವಾಗಿ ಕುಕ್ಕರ್ ಕೂಗಲು ಎಷ್ಟು ಸಮಯ ಬೇಕೆ?"  ಅಂತ ಕೇಳಿದೆ. ಆದರೆ ಅವಳು ನನ್ನ ಪ್ರಶ್ನೆಗೆ ಉತ್ತರ ಕೊಡದೆ,
"ಕುಕ್ಕರ್ ಗೆ ನೀರು ಹಾಕಿ ಇಟ್ಟಿದ್ದೀರ?"  ಎಂದು ಮತ್ತೊಂದು ಪ್ರಶ್ನೆ ಕೇಳಿದಳು.
"ಹಾಕಿದ್ದೇನಲ್ಲ, ಅಕ್ಕಿ ಪಾತ್ರೆಗೆ ಪೂರ್ತಿ ಹಾಕಿದ್ದೇನೆ, ಬೇಳೆ ತರಕಾರಿಗೆ ಮುಕ್ಕಾಲಿನವರೆಗೂ ಹಾಕಿದ್ದೇನೆ" ಅಂದೆ, ಅವಳು ನಿದಾನವಾಗಿ
"ಅದಲ್ಲ, ಕುಕ್ಕರ್ ಒಳ್ಗೆ, ಸ್ಟೀಮ್ ಗೆ ನೀರು ಹಾಕಿದ್ದೀರ" ಎಂದಳು , ನನಗೆ ಜ್ಞಾನೋಧಯವಾಗಿತ್ತು, ಒಂದೆ ಉಸುರಿಗೆ ಒಳಗೆ ಓಡಿದೆ.
ನೋಡಿದರೆ ಕುಕ್ಕರ್ ತನ್ನ ಬಣ್ಣ ಬದಲಾಯಿಸಿ ಕೆಂಪಾಗುತ್ತಿತ್ತು, ತಕ್ಷಣ ಕೆಳಗೆ ಇಳಿಸಲು ಹೋದೆ, ಅದೇನಾಯ್ತೊ ಎಡಕೈಗೆ ಕುಕ್ಕರ್ ತಗುಲಿ, ಸುಟ್ಟು,
'ಜೋರಾಗಿ ಕಿಟಾರ್ ಎಂದು ಕಿರುಚಲು' ಹೋದೆ ,  "ಛೇ,,,ಛೇ' ಗಂಡಸರು ಕಿರುಚಿದರೆ ಚೆನ್ನಾಗಿರಲ್ಲ, ಹಾಗೆ ದ್ವನಿಯನ್ನು ಬಾಯಲ್ಲಿ ಅದುಮಿದೆ,
ತಕ್ಷಣ ಕುಕ್ಕರ್ ಅನ್ನು ವಾಷ್ ಬೇಸಿನ್ನಿನಲ್ಲಿರಿಸಿ ನಲ್ಲಿ ತಿರುವಿ ತಣ್ಣೀರು ಬಿಟ್ಟೆ, ನಂತರ ಹೊರತೆಗೆದು, ಹೇಗೊ ಅದನ್ನು ಮುಚ್ಚಲ ತೆಗೆದು, ಪಾತ್ರೆಗಳನ್ನು ಹೊರತೆಗೆದು, ಕುಕ್ಕರನಲ್ಲಿ ಸ್ವಲ್ಪ ನೀರು ಹಾಕಿದೆ, ನಂತರ ಪಾತ್ರೆಗಳನ್ನು ಪುನಃ ಜೋಡಿಸಿ, ಮುಚ್ಚಲತುಂಬಿ ನೆನಪಿಸಿಕೊಂಡು, ವೈಟನ್ನು ಹಾಕಿ ಎದುರಿಗೆ ನಿಂತೆ ಯಾವುದೆ ಅನಾಹುತಕ್ಕು ಎಡೆಮಾಡಬಾರದು ಎಂದು.
ಹೇಗೊ ಹತ್ತು ಹನ್ನೆರಡು ನಿಮಿಷದಲ್ಲಿ ಕುಕ್ಕರ್ , ಕೂಊಊಊಊಊ' ಎಂದು ಕರ್ಣಾನಂದಕರವಾಗಿ ಕೂಗಿತು.

ಮೂರು ಸಾರಿ ಕೂಗಿಸಿ, ಸ್ಟೌವನ್ನು ಆರಿಸಿದೆ, ನೆನಪಿಗೆ ಬಂದಿತು, ಸಾಂಬಾರ್ ಗೆ ಹಾಕಬೇಕಾದ, ಉಪ್ಪು, ಕಾರ, ತೆಗೆದಿಟ್ಟು, ಸ್ವಲ್ಪ ಹುಣಸೆಹಣ್ಣನ್ನು ಹುಡುಕಿ ನೀರಿನಲ್ಲಿ ನೆನೆಸಿಟ್ಟೆ, ಆಷ್ಟರಲ್ಲಿ ಹತ್ತು ನಿಮಿಷವಾಯಿತು. ಪುನಃ ಕುಕ್ಕರನ್ನು ನಲ್ಲಿಯ ಕೆಳಗಿಟ್ಟು ತಣಿಸಿದೆ, ನಂತರ ಮುಚ್ಚಲ ತೆಗೆದು, ಬೇಳೆ ತರಕಾರಿ ಪಾತ್ರೆಯನ್ನು ಹೊರತೆಗೆದು, ಸ್ಟೌವಿನ್ನಮೇಲಿಟ್ಟು, ಅದಕ್ಕೆ ಉಪ್ಪು, ಕಾರ, ಹುಣಸೆನೀರು ಬೆರೆಸಿ ಕುದಿಯಲು ಬಿಟ್ಟೆ,
 ಹೊರಗೆ ಬಂದು, ಹಿಂದೆ ಹೋಗಿ, ಕರಿಬೇವಿನ ಸೊಪ್ಪಿನ ಗಿಡದಿಂದ, ಸ್ವಲ್ಪ ಸೊಪ್ಪು ತಂದು,ನೀರಿನಲ್ಲಿ ತೊಳೆದು, ಅದನ್ನು ಪಾತ್ರೆಯಲ್ಲಿ ಹಾಕಿದೆ, ನನ್ನಲ್ಲಿ ಆನಂದ ತುಂಬಿ ಹರಿಯುತ್ತಿತ್ತು, ಇನ್ನೇನು ಸಾಂಬಾರ್ ಸಿದ್ದ,
ನೆನಪಿಗೆ ಬಂತು, ತುಪ್ಪಕ್ಕೆ ಸ್ವಲ್ಪ ಇಂಗಿನ್ನು ಹಾಕಿ ಬಿಸಿಮಾಡಿ ಹಾಕಿದರೆ, ಒಳ್ಳೆ ರುಚಿಯಾಗಿರುತ್ತದೆಯಲ್ಲವೆ ಅನ್ನಿಸಿ,
ಒಂದು ಪಾತ್ರೆಗೆ ಸ್ವಲ್ಪ ತುಪ್ಪಹಾಕಿ, ಒಲೆಮೇಲಿಟ್ಟು, ಬಿಸಿಮಾಡಿ ಇಂಗನ್ನು ಹಾಕಿದೆ, ಗಮ ಗಮ ಅಂತ ವಾಸನೆ ಅಡುಗೆಮನೆಯೆಲ್ಲ ತುಂಬಿತು, ಅದನ್ನು ತೆಗೆದು ಕುದಿಯುತ್ತಿದ್ದ ಸಾಂಬಾರಿನೊಳಗೆ ಹಾಕಿದೆ.
ಸರಿ ಇನ್ನೇನು ಎಲ್ಲ ಆಯಿತಲ್ಲ ಅಂತ ಖುಶಿ ಆಯಿತು. ಸಂಭ್ರಮ ತುಂಬಿತು, 'ಗಣೇಶರೆ ಥ್ಯಾಂಕ್ಸ್, ನೀವು ಹೇಳಿದ್ದು ನಿಜ, ಅಡುಗೆ ಮಾಡಿದರೆ ಎಂತ ಸಂತಸ ಸಿಗುತ್ತದೆ' ಅನ್ನಿಸಿತು,

ಸರಿ ಸಾಂಬಾರ್ ಕುದಿಯಲು ಮೊದಲಿಟ್ಟಿತ್ತು, ಕೆಳಗೆ ಇಳಿಸಿದರೆ ಆಯಿತು ಅಂತ ಸುತ್ತಲು ಹುಡುಕಿದೆ, ಇಕ್ಕಳ ಕಾಣಿಸಿತು, ಈ ಇಕ್ಕಳದ ಸ್ವರೂಪವೆ ವಿಚಿತ್ರ ಅದರ ಹಿಂಬಾಗ ಸರಿ ಇರುತ್ತದೆ, ನೇರವಾಗಿ, ಆದರೆ ಮುಂಬಾಗ ಅದೇನೊ ಒಂದು ಕೈ ನೇರವಾದರೆ, ಇನ್ನೊಂದು ಅದೇನೊ ಸುರುಳಿಯಂತೆ, ಅಂಗ್ಲದ 'ಯೂ' ಆಕಾರದಲ್ಲಿರುತ್ತದೆ, ಈ ಸುರುಳಿ ಆಕಾರ ಪಾತ್ರೆಯ ಹೊರಗೆ ಬರಬೇಕೊ ಇಲ್ಲ ಒಳಗೊ, ಎಂಬ ದ್ವಂದ್ವ ಕಾಡಿತು, ಸರಿ ಸುರುಳಿ ಒಳಗೆ ಹೋದರೆ ಸರಿ ಅನ್ನಿಸಿತು, ಇಕ್ಕಳದಿಂದ ಸಾಂಬಾರ್ ಪಾತ್ರೆಯನ್ನು ಹಿಡಿದು ನಿದಾನವಾಗಿ ಇಳಿಸುವಾಗ, ಇಂಗಿನ ಒಗ್ಗರಣೆ ನನ್ನ ಘ್ರಾಣೇಂದ್ರಿಯಗಳನ್ನು ತುಂಬಿತು. ನಾನು ಸಂತಸದಿಂದ,
"ಸಾಂಬಾರ್ ವಾಸನೆ ಹೊರಗೆ ಬರ್ತಿದೆ ಅಲ್ಲವೇನೆ" ಎಂದು ಎತ್ತರದ ದ್ವನಿಯಲ್ಲಿ ಕೂಗಿದೆ,

   ಮನೆಯವರ ಉತ್ತರ ನನಗೆ ಕೇಳಿಸುವ ಮುಂಚೆ, ಇಂಗಿನ ಒಗ್ಗರಣೆಯದೊ ಮತ್ತೇನು ಕಾರಣವೊ ಎಲ್ಲೊ ಅಡಗಿದ್ದ, 'ಆಕ್ಷಿ'ರಾಯ ವಕ್ಕರಿಸಿದ, ಅರಿವನ್ನು ಮರೆತು, ಜೋರಾಗಿ ಆಕ್ಷಿ ಎಂದೆ, ಆ ಗದ್ದಲದಲ್ಲಿ ಇಕ್ಕಳದಲ್ಲಿ ಹಿಡಿದಿದ್ದ ಸಾಂಬರಿನ ಪಾತ್ರೆಯ ವಿಷಯ ಮೈಮರೆಸಿತು, ಹಿಡಿತ ಜಾರಿದ ಪಾತ್ರೆ, ಕೆಳಗೆ ಅಡುಗೆಯ ಪ್ಲಾಟ್ಫಾರ್ಮ್ಗೆ ಅಪ್ಪಳಿಸಿ ನಂತರ ನೆಲದತ್ತ ಉರುಳಿ ಕೆಳಗೆ ಬೀಳುವ ಮುಂಚೆಯೆ, ಅದು ಹೇಗೊ, ಕಲ್ಲು ಎಸೆದರೆ ತಪ್ಪಿಸಿಕೊಳ್ಳುವ ನಾಯಿಯ ಚಾಕಚಕ್ಯತೆಯಿಂದ, ನಾನು ದೂರ ಎಗರಿದ್ದೆ. ನನ್ನ ಕೈಕಾಲುಗಳೆಲ್ಲ ಸುರಕ್ಷಿತವಾಗಿದ್ದವು, ಆದರೆ ಅಡುಗೆ ಮನೆ ರಣರಂಗದಂತೆ ಕಾಣುತ್ತಿತ್ತು, ನೆಲದ ಮೇಲೆ, ಎಲ್ಲಡೆ ಹರಡಿದ್ದ ಸಾಂಬಾರು ನನ್ನನ್ನು ಅಣಕಿಸುತ್ತಿತ್ತು. ಇದೇನು ಹೀಗೆ ಆಯಿತು ಅಂತ ದಿಗ್ಬ್ರಮೆಯಿಂದ ನಿಂತೆ. ಈಗ ಊಟದ ಗತಿಯೇನು, ಹೋಗಲಿ ಸಾಂಬರಿನ ಕತೆಯಂತು ಆಯಿತು, ಅನ್ನ ಮೊಸರೆ ಗತಿ ಅನ್ನಿಸಿ, ಅನ್ನದ ಪಾತ್ರೆ ಎಲ್ಲಿ ನೆನಪಿಗೆ ಬಂದಿತು, ಅದಿನ್ನು ಕುಕ್ಕರಿನಲ್ಲೆ ಇದೆ. ದೂರನಿಂತು ಕುಕ್ಕರನ್ನು ಎಳೆದುಕೊಂಡು, ಎಚ್ಚರಿಕೆಯಿಂದ ಅನ್ನದ ಪಾತ್ರೆ ತೆಗೆದು ಹೊರಗೆ ಇಟ್ಟು, ಮೇಲಿದ್ದ ಪ್ಲೇಟ್ ತೆಗೆದು ನೋಡಿದೆ, ಇದೇನು ಅನ್ನ ಹೀಗೆ ಇದೆಯಲ್ಲ, ರಸ್ತೆಯಲ್ಲಿ ಸಿನಿಮಾ ಗೋಡೆಪತ್ರಿಕೆ ಗಳನ್ನು ಗೋಡೆಗೆ ಮೆತ್ತಲು ಬಕ್ಕೆಟ್ ನಲ್ಲಿ ತಂದಿರುತ್ತಾರಲ್ಲ, ಎಂತದೊ ಮೈದಾದ ಪೇಸ್ಟ್, ಅನ್ನದ ಪಾತ್ರೆಯಲ್ಲಿ ಅನ್ನ ಆರೀತಿ ಕಾಣುತ್ತಿತ್ತು, ಎಷ್ಟು ಅಕ್ಕಿಗೆ ಎಷ್ಟು ನೀರು ಹಾಕಿದೆ, ಎಲ್ಲ ಕಲಸುಮೇಲೋಗರವಾಗಿತ್ತು.
ಎಲ್ಲಿಯೊ ಅಗೋಚರನಾಗಿ ಇರುವ ಆ 'ತಂಬುಳಿ ಗಣೇಶರ' ಬಗ್ಗೆ ಒಳಗಿನಿಂದ ಸಿಟ್ಟು ಹತ್ತಿ ಹತ್ತಿ ಬರುತ್ತಿತ್ತು, ಸುಮ್ಮನೆ ನನ್ನ ಪಾಡಿದೆ ಇದ್ದವನನ್ನು ಎಂತ ಇಕ್ಕಟ್ಟಿನಲ್ಲಿ  ಸಿಕ್ಕಿಸಿಬಿಟ್ಟರಲ್ಲ.

 ಮನೆಯವರಿಗೆ ಈಗ ಏನು ಹೇಳೋದು, ಅಂದುಕೊಳ್ಳುವಾಗಲೆ ಅನ್ನಿಸಿತು, ಇದೇನು ಇಷ್ಟು ಗಲಾಟೆಯಾದರು, ಹೊರಗಿನಿಂದ ಯಾವುದೆ ರಿಯಾಕ್ಷನ್ ಇಲ್ಲವಲ್ಲ, ಅಂತ ಕುತೂಹಲ, ನಿದಾನಕ್ಕೆ ಹೊರಬಂದೆ. ಯಥಾಪ್ರಕಾರ ನನ್ನವರು ಟೀವಿ ನೋಡುತ್ತ, ಕೈಯಲ್ಲಿ ಯಾವುದೊ ಪುಸ್ತಕ ಹಿಡಿದು ಕುಳಿತ್ತಿದ್ದಾರೆ, ಇದೆಂತ ಅಧಮ್ಯ ಸಹನೆ ನನಗೆ ಆಶ್ಚರ್ಯವಾಗಿಹೋಯ್ತು.
'ಏನು ಮಾಡೋದೆ, ಎಲ್ಲ ಎಡವಟ್ಟಾಗಿಹೋಯ್ತು, ಸಾಂಬಾರೆಲ್ಲ ಚೆಲ್ಲಿ ಹೋಯ್ತು, ಈಗ ಊಟಕ್ಕೆ ಏನು ಮಾಡೋದೆ" ಎಂದೆ,
'ಯಾಕೆ ಏನಾಯ್ತು?" ಅಂದಳು, ಏನು ಗೊತ್ತಿಲ್ಲದವಳಂತೆ,
'ನೀನೆ ಒಳಗೆ ಹೋಗಿ ನೋಡು, ಇನ್ನು ನಿನ್ನ ಅಡುಗೆ ಮನೆಯ ಜವಾಬ್ದಾರಿ ನನಗೆ ಬೇಡ" ಎಂದೆ , ಹತಾಷೆ, ಬೇಸರದಿಂದ.
ಅಷ್ಟರಲ್ಲಿ ಹೊರಗೆ ಯಾರೊ ಬಾಗಿಲು ತಟ್ಟಿದರು, ಹೋಗಿ ಬಾಗಿಲು ತೆರೆದೆ,
ನನ್ನ ತಮ್ಮನ ಹೆಂಡತಿ, ನಮ್ಮ ಮನೆಯ ಎದುರಿನ ಮನೆಯೆ ಅವರದು, ಅವಳ ಕೈಯಲ್ಲಿ, ಎರಡು ಪಾತ್ರೆ. ನಾನು ಕೊಂಚ ಆಶ್ಚರ್ಯದಿಂದಲೆ
"ಇದೇನು, ತಂದಿರೋದು" ಎಂದೆ. ಅವಳು ನಗುತ್ತ
"ಏನಿಲ್ಲ ನಮ್ಮ ಮನೆಯಲ್ಲಿ ಮಾಡಿದ, ಅನ್ನ ಸಾಂಬಾರ್, ಸ್ವಲ್ಪ ಪಲ್ಯ" ಎಂದಳು,
"ಇದೇಲ್ಲ ಏಕೆ ತಂದಿದ್ದು " ಎಂದೆ, ಅದಕ್ಕೆ ನನ್ನ ತಮ್ಮನ ಪತ್ನಿ ಎಂದಳು
"ಏನಿಲ್ಲ ಬೆಳಗ್ಗೇನೆ, ಅಕ್ಕ ಹೇಳಿದ್ದರು, ಇವತ್ತು  ಅಡುಗೆ ಮಾಡುವಾಗ ಸ್ವಲ್ಪ ಜಾಸ್ತಿನೆ ಮಾಡಿ ನಮಗೆ ತಂದು ಕೊಟ್ಟು ಬಿಡು, ಇಲ್ಲದಿದ್ದರೆ ಇವತ್ತು ಉಪವಾಸ ಆಗುತ್ತೆ ಅಂತ" ಎನ್ನುತ್ತ ಅಡುಗೆ ಮನೆಗೆ ಅದನ್ನು ಇಡಲು ಹೊರಟಳು ನಾನು ಗಾಭರಿಯಿಂದ, "ಅಲ್ಲಿ ಹೋಗಬೇಡ, ಇಲ್ಲಿಯೆ ಇಟ್ಟುಬಿಡು" ಎಂದೆ. ಅವಳು ನಗುತ್ತ ಅಲ್ಲಿಯೆ ಇದ್ದ ಟೀಪಾಯ್ ಮೇಲೆ ಅಡುಗೆಯನ್ನೆಲ್ಲ ಇಟ್ಟು ಹೊರಟುಹೋದಳು.

 ಈಗ ನನ್ನವಳು ಎದ್ದು, ಅಡುಗೆ ಮನೆಗೆ ಹೊರಟಳು, ಒಳಗೆಲ್ಲ ನೋಡಿ ಹೊರಬಂದು,
"ಏನಿಲ್ಲ ಬಿಡಿ ಸ್ವಲ್ಪ ಕ್ಲೀನ್ ಮಾಡ್ಬೇಕು ಅಷ್ಟೆ, ನೀವು ಕುಳಿತಿರಿ ಕಾಫಿ ತರುತ್ತೇನೆ, ಅರ್ದಗಂಟೆಯಲ್ಲಿ ಊಟ ಮಾಡೋಣ" ಎನ್ನುತ್ತ ಒಳಗೆ ಹೋಗಿ, ಐದು ನಿಮಿಶದಲ್ಲಿ ಕಾಫಿ ಹಿಡಿದು ತಂದು ಕೊಟ್ಟಳು,
"ನೀವು ಕುಡಿಯುತ್ತ ಇರಿ ,ಕಷ್ಟ ಬಿದ್ದಿದ್ದೀರಿ, ಸ್ವಲ್ಪ ಹೊತ್ತು ಊಟ ಮಾಡಿಬಿಡೋಣ, ಟ್ಯೂಷನ್ಗೆ ಹೋಗಿರೋ ಮಗಳು ಬರುತ್ತಾಳೆ" , ನಾನು ಸ್ವಲ್ಪ ಆಶ್ಚರ್ಯದಿಂದಲೆ
"ಏನೆ ಇವತ್ತು ಇಷ್ಟೊಂದು ನೆಮ್ಮದಿಯಾಗಿದ್ದಿ, ನಾನೇನು ಮಾಡಿದರು ನಿನಗೆ ಟೆನ್ಷನ್ ಆಗ್ತಾಲೆ ಇಲ್ವಲ್ಲ " ಅಂದೆ. ಅದಕ್ಕವಳು ನಿನ್ನೆ ಗಾಂದಿಭಜಾರಿನಿಂದ ತಂದು ನಾನೆ ಗೋಡೆಗೆ ಅಂಟಿಸಿದ್ದ ಸ್ಟಿಕರ್ ನತ್ತ ಕೈತೋರಿ ಒಳಗೆ ಹೋದಳು, ತಲೆ ಎತ್ತಿ ನೋಡಿದೆ
"ಮೌನೇನ ಕಲಹಂ ನಾಸ್ತಿ !!"
 
ಉಪಸಂಹಾರ:
================
ಕಾಫಿ ಕುಡಿಯುತ್ತಿರುವಂತೆ ನನಗೆ ನಾಗರಾಜರ ಮೂಡ ವಚನದ ತಾತ್ಪರ್ಯಗಳೆಲ್ಲ ಅರ್ಥವಾಯಿತು ಅನ್ನಿಸಿತು, ಹಾಗೆ ಅವರು ಹೇಳಿದ್ದ 'ಸಹವಾಸ ದೋಷದ' ಬುದ್ದಿವಾದವು ಅರ್ಥವಾದವು, ನಾವು ಬೇರೆಯವರಂತೆ ಆಗಲಾರೆವು, ನಾವು ಎಂದಿದ್ದರು ನಾವೆ ಅಲ್ಲವೆ ಅನ್ನಿಸಿ, ಕಾಫಿಯ ಸ್ವಾದದಲ್ಲಿ ರಸಿಕ ನಂತೆ ಮೈಮರೆಯುತ್ತ ಕುಳಿತೆ.
 

Rating
No votes yet

Comments