ಲೋಕಾಯುಕ್ತ ದಾಳಿ - ನನ್ನ ಅನುಭವಗಳು

Submitted by kavinagaraj on Mon, 11/14/2011 - 14:56

 ಘಟನೆ ೧:

     ಇದು ಮೈಸೂರು ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ೧೯೮೧ರಲ್ಲಿ ನಡೆದ ಒಂದು ಘಟನೆ. ನಾನು ಕುಳಿತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕಸಬಾ ರೆವಿನ್ಯೂ ಇನ್ಸ್‌ಪೆಕ್ಟರ್ ಕೇಶವ (ಹೆಸರು ಬದಲಿಸಿದೆ) ಕಛೇರಿಗೆ ಬಂದಾಗ ಕುಳಿತು ಕೆಲಸ ಮಾಡುತ್ತಿದ್ದ ಸ್ಥಳವಿತ್ತು. ಒಮ್ಮೆ ಒಬ್ಬರು ಯಾವುದೋ ಧೃಢೀಕರಣ ಪತ್ರದ ಸಲುವಾಗಿ ಕೇಶವನನ್ನು ಕಾಣಲು ಬಂದಿದ್ದರು. ಕೆಲಸ ಮಾಡಿಕೊಡಲು ಕೋರಿದ ವ್ಯಕ್ತಿ ಕೇಶವನಿಗೆ ೫೦ ರೂಪಾಯಿ ಕೊಟ್ಟರು. ಕೇಶವ ತಿರಸ್ಕಾರದಿಂದ ಆ ನೋಟನ್ನು ಅವರ ಮುಖಕ್ಕೇ ವಾಪಸು ಎಸೆದ. ನೋಟು ಕೆಳಗೆ ಬಿತ್ತು. ಆ ವ್ಯಕ್ತಿ ನೋಟನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು ಕೇಶವನನ್ನು ಉದ್ದೇಶಿಸಿ "ಹಣವನ್ನು ಹೀಗೆಲ್ಲಾ ಎಸೆಯಬೇಡಿ. ಅದು ಲಕ್ಷ್ಮಿ. ನಿಮಗೆ ಅನ್ನ ಕೊಡುವ ದೇವರು. ನಿಮಗೆ ಹೆಚ್ಚು ಹಣ ಬೇಕಾದರೆ ಕೇಳಿ. ಕೊಡುತ್ತೇನೆ. ಐವತ್ತಲ್ಲದಿದ್ದರೆ ಐನೂರು ಕೊಡುತ್ತೇನೆ. ಈಗ ನನ್ನಲ್ಲಿ ನೂರು ರೂ. ಇದೆ. ಉಳಿದ ನಾಲ್ಕು ನೂರು ನಾಳೆ ಬೆಳಿಗ್ಗೆ ಕೊಡುತ್ತೇನೆ. ಅದರೆ ಒಂದು ಷರತ್ತು. ನಾಳೆ ಬೆಳಿಗ್ಗೆ ಬರುವಾಗ ಯಾವುದೇ ನೆಪ ಹೇಳದೆಂತೆ ನನ್ನ ಕೆಲಸ ಆಗಿರಬೇಕು" ಎಂದು ಹೇಳಿ ನೂರು ರೂ. ಕೊಟ್ಟರು. ಕೇಶವ ಹಣ ಇಟ್ಟುಕೊಂಡ. ವ್ಯಕ್ತಿ ಮರುದಿನ ಬರುವುದಾಗಿ ಹೊರಟುಹೋದರು. ಮರುದಿನ ಬೆಳಿಗ್ಗೆ -ಸುಮಾರು ೧೦-೪೫ ಗಂಟೆ ಇರಬಹುದು_ ಆ ವ್ಯಕ್ತಿ ಬಂದರು. "ಹೇಳಿದ ಕೆಲಸ ಆಗಿದೆಯಾ?" ಎಂದು ಕೇಳಿದರು. ಕೇಶವ ಆಗಿದೆಯೆಂದಾಗ ನಾಲ್ಕು ನೂರು ರೂ. ಕೊಟ್ಟರು. ಕೇಶವ ಆ ಹಣ ಪಡೆಯುತ್ತಿದ್ದಂತೆ, ಹಣ ಅವನ ಕೈಯಲ್ಲಿದ್ದಂತೆ ಧಿಢೀರನೆ ಇಬ್ಬರು ಹಾರಿಬಂದು ಕೇಶವನ ಎರಡೂ ಕೈಗಳನ್ನು ಹಿಡಿದುಕೊಂಡರು. ಅವರು ಲೋಕಾಯುಕ್ತ ಪೋಲೀಸರಾಗಿದ್ದರು. ಕೇಶವ ಬಿಳಿಚಿಹೋಗಿದ್ದ, ಮರಗಟ್ಟಿಹೋಗಿದ್ದ. ಅನುಕಂಪದ ಆಧಾರದಲ್ಲಿ ನೇಮಕ ಹೊಂದಿದ್ದ ಆತ ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿತ್ತಷ್ಟೇ. ಆತನ ದುರಾಸೆ, ಅಹಂಕಾರ ಅವನಿಗೇ ಮುಳುವಾಗಿತ್ತು.

ಘಟನೆ ೨: 

     ೧೯೮೪ರಲ್ಲಿ ಹೊಳೆನರಸಿಪುರದ ಹಳ್ಳಿಮೈಸೂರು ನಾಡಕಛೇರಿಯಲ್ಲಿ ನಡೆದ ಪ್ರಸಂಗವಿದು. ಆಗ ಪಹಣಿ ಪ್ರತಿಯನ್ನು ಕೈಯಲ್ಲಿ ಬರೆದು ಕೊಡುವ ಪದ್ಧತಿಯಿತ್ತು. ನಕಲು ಶುಲ್ಕವನ್ನು ಪಡೆದು ಅದನ್ನು ನಂತರ ಜಮಾ ಮಾಡುವ ಕ್ರಮವಿತ್ತು. ಒಂದು ಪಹಣಿಗೆ ಒಂದು ರೂ. ಶುಲ್ಕ. ಆದರೆ ಜನರು ಸಾಮಾನ್ಯವಾಗಿ ೫ ರಿಂದ ೧೦ ರೂ. ಕೊಟ್ಟು ನಕಲು ಪಡೆಯುತ್ತಿದ್ದರು. ಕೊಡದಿದ್ದವರಿಂದ ಗುಮಾಸ್ತ ಕೇಳಿ ಹೆಚ್ಚು ಪಡೆಯುವುದು ಎಲ್ಲರಿಗೂ ತಿಳಿದದ್ದೇ. ನಿರೀಕ್ಷಿಸಿದ ಮೊಬಲಗು ಸಿಗದಿದ್ದಾಗ ನಕಲು ಕೊಡಲು ಸತಾಯಿಸುವುದು, ತಡ ಮಾಡುವುದು ಆಗುತ್ತಿತ್ತು. ಒಂದು ದಿನ ಒಬ್ಬರು ಪಹಣಿ ನಕಲು ಕೇಳಲು ಬಂದವರು ೧೦ ರೂ. ಅನ್ನು ಗುಮಾಸ್ತ ಚಿಕ್ಕಯ್ಯರ ಬಳಿಯಿದ್ದ ದಪ್ಪ ಪಹಣಿ ಪುಸ್ತಕದ ಕೆಳಗೆ ಇಟ್ಟು ನಸುನಕ್ಕು ಹೊರಗೆ ಹೋದರು. ಕೆಲವೇ ನಿಮಿಷಕ್ಕೆ ಒಳನುಗ್ಗಿದ ಲೋಕಾಯುಕ್ತ ಪೋಲಿಸರನ್ನು ಕಂಡು ಗುಮಾಸ್ತ ಬೆಚ್ಚಿಬಿದ್ದ. ಅವನು ಹಣವನ್ನು ಮುಟ್ಟಿರಲಿಲ್ಲ. ಗುಮಾಸ್ತರ ಎರಡೂ ಕೈಗಳನ್ನು ಪೋಲಿಸರು ಹಿಡಿದುಕೊಂಡಾಗ ಅವನು ತನ್ನ ಕೈಗಳನ್ನು ಬೆನ್ನ ಹಿಂದಿರಿಸಿ ಬಿಗಿಯಾಗಿ ಮುಷ್ಟಿ ಕಟ್ಟಿದ್ದ. ತಾನು ಹಣ ಪಡೆದಿಲ್ಲವೆಂದು ಒತ್ತಿ ಒತ್ತಿ ಹೇಳುತ್ತಿದ್ದ. ಆಗ ಒಳಬಂದ ಲೋಕಾಯುಕ್ತ ಇನ್ಸ್ ಪೆಕ್ಟರರು ಅವರು ಹಣ ಮುಟ್ಟಿಲ್ಲವೆಂದು ಹೇಳುತ್ತಿದ್ದಾರೆ. ಕೈಬಿಡಿ ಎಂದು ಸಹಾಯಕ ಪೋಲಿಸರ ಕೈಬಿಡಿಸಿ ತಮ್ಮನ್ನು ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡು ಗುಮಾಸ್ತರ ಕೈ ಕುಲುಕಿದರು. "ಹಣ ಪಡೆಯದಿದ್ದ ಮೇಲೆ ಹೆದರಿಕೆಯೇಕೆ? ಪರೀಕ್ಷೆ ಮಾಡೋಣ. ಈ ದ್ರವದಲ್ಲಿ ಕೈ ಅದ್ದಿ. ದ್ರವ ಬಣ್ಣಕ್ಕೆ ತಿರುಗದಿದ್ದರೆ ಬಿಟ್ಟುಬಿಡುತ್ತೇವೆ" ಎಂದು ಆತನ ಕೈಯನ್ನು ಆಗ ಸಿದ್ಧಪಡಿಸಿದ ದ್ರವದಲ್ಲಿ ಅದ್ದಿಸಿದಾಗ ಅದು ಪಿಂಕ್ ಬಣ್ಣಕ್ಕೆ ತಿರುಗಿತು. ಆತ ಹಣ ಮುಟ್ಟಿರದಿದ್ದರೂ ದ್ರವ ರಾಸಾಯನಿಕ ಲೇಪಿಸಿದ ನೋಟು ಮುಟ್ಟಿದವರಂತೆ ಬಣ್ಣಕ್ಕೆ ತಿರುಗಿದ್ದು ಆಶ್ಚರ್ಯಕರವಾಗಿತ್ತು. ವಾಸ್ತವವಾಗಿ ಇನ್ಸ್ ಪೆಕ್ಟರರು ಗುಮಾಸ್ತರ ಕೈಕುಲುಕಿ ಗಟ್ಟಿಯಾಗಿ ಹಿಡಿದುಕೊಂಡಾಗ ಗುಮಾಸ್ತರ ಕೈಗೆ ಇನ್ಸ್ ಪೆಕ್ಟರರ ಕೈಯಿಂದ ರಾಸಾಯನಿಕ ಲೇಪನ ವರ್ಗಾವಣೆಯಾಗಿತ್ತು. ಹಣ ಮುಟ್ಟದಿದ್ದರೂ ಬಳಿಯಿದ್ದ ಮೇಜು, ಬೀರು, ಇತ್ಯಾದಿಗಳಲ್ಲಿ ಹಣ ಪತ್ತೆಯಾದರೂ ಪ್ರಕರಣ ದಾಖಲಿಸಲು ಸಾಕಿತ್ತು. ಆದರೆ ಕೇಸನ್ನು ಗಟ್ಟಿ ಮಾಡಲು ಈ ತಂತ್ರ ಬಳಕೆಯಾಗಿತ್ತು. ಹಲವಾರು ವರ್ಷಗಳ ಕಾಲ ಪ್ರಕರಣ ನಡೆದು ಗುಮಾಸ್ತ ನಿರ್ದೋಷಿಯೆಂಬ ಆದೇಶ ನ್ಯಾಯಾಲಯದಿಂದ ಹೊರಬಂದಿತ್ತು. 

ಘಟನೆ ೩:

     ಬೇಲೂರು ತಾಲ್ಲೂಕು ಕಛೇರಿಯಲ್ಲಿ (೧೯೮೭-೮೮ರಲ್ಲಿರಬಹುದು) ಸಹೋದ್ಯೋಗಿ ಶಿರಸ್ತೇದಾರರು, ಗುಮಾಸ್ತರು ಮತ್ತು ಇಬ್ಬರು ಗ್ರಾಮಸ್ಥರು ಕಛೇರಿಯ ಹಿಂಬಾಗಿಲ ಸಮೀಪದಲ್ಲಿ ನಿಂತು ಮಾತನಾಡುತ್ತಿದ್ದುದು ನನಗೆ ನಾನು ಕುಳಿತ ಸ್ಥಳದಿಂದ ಕಾಣಿಸುತ್ತಿತ್ತು. ನಂತರ ಅವರುಗಳು ಸಮೀಪದ ಹೋಟೆಲಿಗೆ ಹೋಗಿ ಕಾಫಿ ಕುಡಿದು ಬಂದರು. ಆ ಶಿರಸ್ತೇದಾರರು ವಾಪಸು ಬಂದು ಕುರ್ಚಿಯಲ್ಲಿ ಕುಳಿತದ್ದೇ ತಡ ಧಡಕ್ಕೆಂದು ಬಂದ ಲೋಕಾಯುಕ್ತ ಪೋಲಿಸರು ಅವರ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದುಬಿಟ್ಟರು. ಶಿರಸ್ತೇದಾರರು, ಅಕ್ಕಪಕ್ಕದ ಗುಮಾಸ್ತರುಗಳು ಬೆಚ್ಚಿಬಿದ್ದರು. ಕೆಲವೇ ನಿಮಿಷದಲ್ಲಿ ಲೋಕಾಯುಕ್ತ ದಾಳಿಯಾಗಿದೆಯೆಂದು ಅರಿವಿಗೆ ಬಂತು. ಶಿರಸ್ತೇದಾರರು ಮಾತನಾಡುವ ಸ್ಥಿತಿಯಲ್ಲೇ ಇರಲಿಲ್ಲ. ವಾಸ್ತವವಾಗಿ ಹಿಂದೆ ಇದ್ದ ಶಿರಸ್ತೇದಾರರು ಈ ಪ್ರಕರಣದಲ್ಲಿ ಲಂಚ ಕೊಟ್ಟವರನ್ನು ಸತಾಯಿಸಿದ್ದರು. ಕೆಲವೇ ದಿನಗಳ ಹಿಂದೆ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಈಗ ಸಿಕ್ಕಿಬಿದ್ದ ಶಿರಸ್ತೇದಾರರು ಕೆಲಸ ಮಾಡಲು ಬಂದಿದ್ದರು. ದೂರುದಾರರು ಗುಮಾಸ್ತರಿಗೆ ಲಂಚ ಕೊಟ್ಟಾಗ ಅವರು ಶಿರಸ್ತೇದಾರರಿಗೇ ಕೊಡಿ ಎಂದು ಹೇಳಿ ಶಿರಸ್ತೇದಾರರಿಗೆ ಕೊಡಿಸಿದ್ದರಂತೆ. ಶಿರಸ್ತೇದಾರರ ಪ್ಯಾಂಟಿನಲ್ಲಿ ಹಣ ಸಿಕ್ಕಿತು. ಗುಮಾಸ್ತರೊಬ್ಬರ ಮನೆಯಿಂದ ಲುಂಗಿ ತರಿಸಿಕೊಟ್ಟು ಶಿರಸ್ತೇದಾರರ ಪ್ಯಾಂಟನ್ನೂ ಸಹ ಅಮಾನತ್ತು ಪಡಿಸಿಕೊಂಡರು. ಈ ಹಂತದಲ್ಲಿ ಪೋಲಿಸರ ವರ್ತನೆಯೇ ಬದಲಾಗಿತ್ತು. ಅವರನ್ನು ಏಕವಚನದಲ್ಲಿ ಗದರಿಸುತ್ತಿದ್ದಲ್ಲದೇ ಕಪಾಳಕ್ಕೂ ಹೊಡೆದಿದ್ದರು. ಈ ಶಿರಸ್ತೇದಾರರಿಗೆ ರಾಜಕೀಯದವರ ಬೆಂಬಲವೂ ಇದ್ದಿದ್ದರಿಂದ ಕಛೇರಿಯಲ್ಲಿ ಬಹಳ ಜನ ಕೂಡಿ ಗಲಾಟೆ ಮಾಡಲು ಪ್ರಾರಂಭಿಸಿದರು. ದೂರು ನೀಡಿದ ವ್ಯಕ್ತಿಯನ್ನೂ ಜನರು ಹಿಗ್ಗಾಮುಗ್ಗಾ ಥಳಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಲೋಕಾಯುಕ್ತ ಪೋಲಿಸರು ಸ್ಥಳೀಯ ಪೋಲಿಸರ ಸಹಾಯ ಪಡೆದು ಜನರನ್ನು ಚದುರಿಸಿ ಪ್ರಕರಣ ದಾಖಲಿಸಿದರು. ಹಲವಾರು ವರ್ಷಗಳ ಕಾಲ ಪ್ರಕರಣ ನಡೆದು ಸಾಬೀತು ಪಡಿಸಲು ಪ್ರಾಸಿಕ್ಯೂಷನ್ ವಿಫಲರಾದರೆಂದು ನ್ಯಾಯಾಲಯದ ಆದೇಶ ಹೊರಬಂದಿತು. 


     ಇಂತಹ ಹಲವಾರು ಪ್ರಕರಣಗಳನ್ನು ನನ್ನ ಸೇವಾವಧಿಯಲ್ಲಿ ಗಮನಿಸಿದ್ದೇನೆ. ಕೆಲವು ಪ್ರಕರಣಗಳಲ್ಲಿ ಲಂಚ ಪಡೆದವರು ಸೇವೆಯಿಂದ ವಜಾಗೊಂಡಿದ್ದಾರೆ. ಮೇಲಿನ ಮೂರನೆಯ ಘಟನೆ ನಡೆದ ನಂತರದಲ್ಲಿ ನಾನು ಗಮನಿಸಿದ ಬೆಳವಣಿಗೆಗಳನ್ನು ಹಂಚಿಕೊಳ್ಳಲೇಬೇಕು. ತಿಂಗಳಿಗೊಮ್ಮೆ ಲೋಕಾಯುಕ್ತ ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಬಂದು ತಾಲ್ಲೂಕಿಗೆ ಸಂಬಂಧಿಸಿದ ದೂರುಗಳ ಬಗ್ಗೆ ಪರಿಶೀಲಿಸಲು, ವಿಚಾರಿಸಲು ಬರುತ್ತಿದ್ದರು. ಅಧಿಕಾರಿಗಳನ್ನು, ದೂರುದಾರರನ್ನು ಕರೆಸಿ ವಿಚಾರಿಸುತ್ತಿದ್ದರು. ಸಾಯಂಕಾಲ ಕಛೇರಿ ಅವಧಿಯ ನಂತರದಲ್ಲಿ ತಾಲ್ಲೂಕಿನ ಹಲವು ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಹೋಗಿ ಕಪ್ಪಕಾಣಿಕೆ ಸಲ್ಲಿಸಿಬರುತ್ತಿದ್ದರು. ಈ ಕೆಲಸ ನಿಯಮಿತವಾಗಿ ಪ್ರತಿತಿಂಗಳೂ ನಡೆಯುತ್ತಿತ್ತು. ನಾನು ಗಮನಿಸುವ ಮೊದಲಿನಿಂದಲೂ ಈ ಪದ್ಧತಿ ಇದ್ದಿರಬಹುದು. ಈ ಪ್ರಕರಣದ ನಂತರ ಮಾಮೂಲು ಒಪ್ಪಿಸುವ ಅಧಿಕಾರಿಗಳ ಸಂಖ್ಯೆ ಹೆಚ್ಚಿತ್ತು. ಕಪ್ಪ ಒಪ್ಪಿಸಿದ ಅಧಿಕಾರಿಗಳು ನಿಶ್ಚಿಂತರಾಗಿ 'ಅಭಯ' ಪಡೆದು ಹಿಂತಿರುಗುತ್ತಿದ್ದರು.