ಅರೇಬಿಯಾದ ಪ್ರವಾಸಿ ತಾಣ "ಅಬ್ಹಾ"

ಅರೇಬಿಯಾದ ಪ್ರವಾಸಿ ತಾಣ "ಅಬ್ಹಾ"

 

ಸೌದಿ ಅರೇಬಿಯಾ ಎಂದರೆ ಅಗಾಧ ಮರಳರಾಶಿ, ತೈಲ ಸಂಪತ್ತು ಮತ್ತು ಕುಖ್ಯಾತವಾಗಿ ಬಿನ್ ಲಾದೆನ್ ನನ್ನು ಪ್ರಪಂಚಕ್ಕೆ ನೀಡಿದ ದೇಶ ಎನ್ನುವುದು ಬಹುತೇಕ ಜನರ ಭಾವನೆ.  ಭಾರತದ ಸಮಾರು ಮುಕ್ಕಾಲು ಭಾಗವಿರುವ ಈ ದೇಶ ವಿಶಾಲ ಮರಳುಗಾಡಿನ ಜೊತೆ, ಸುಂದರ ಸಮುದ್ರ ತೀರಗಳನ್ನೂ, ಉಷ್ಣಾಂಶ ಕಡಿಮೆ ಇರುವ ಪ್ರವಾಸಿ ತಾಣಗಳನ್ನೂ ಒಳಗೊಂಡಿದೆ.
ಅಬ್ಹಾ (abha), ಈ ಪ್ರವಾಸಿ ತಾಣ ಅರೇಬಿಯಾ ಪ್ರಾಂತ್ಯದ ಜನರಿಗೆ ಅಚ್ಚು ಮೆಚ್ಚು. ಇಲ್ಲಿನ ಹವಾಮಾನ ಯಾವಾಗಲೂ ಚಳಿಯಿಂದ ಕೂಡಿದ್ದು ಆಗಾಗ ಮಳೆಯೂ ಆಗುತ್ತಿರುತ್ತದೆ. ಸಮುದ್ರ ಮಟ್ಟದಿಂದ ಸುಮಾರು ೬೦೦೦ ಅಡಿಗಳಷ್ಟು ಎತ್ತರ ವಿರುವ ಈ ಪ್ರದೇಶ ಬೆಟ್ಟಗಳಿಂದ ಆವೃತವಾಗಿದೆ. ವಾಣಿಜ್ಯ ನಗರ ಜೆಡ್ಡಾ ದಿಂದ ಸುಮಾರು ೮೦೦-೯೦೦ ಕಿಲೋ ಮೀಟರು ಇರುವ ಅಬ್ಹಾ ಸೌದಿ ಅರೇಬಿಯಾದ ಇತರೆ ನಗರಗಳಿಂದ ತುಂಬಾ ದೂರ ಇರುವುದರಿಂದ ಇಲ್ಲಿ ಕೆಲಸ ಮಾಡುವ ವಲಸಿಗ ಸಮುದಾಯಕ್ಕೆ ಇದರ ಪರಿಚಯ ಕಡಿಮೆ. ಮೊನ್ನೆ ಮುಕ್ತಾಯವಾದ ಹಜ್ ರಜೆ ಒಂದು ವಾರದಷ್ಟು ದೀರ್ಘವಾದ್ದರಿಂದ ಪರಿವಾರ ಸಮೇತ ಅಬ್ಹಾ ಹೋಗಲು ತಯಾರಾದೆವು. ವಿಮಾನದಲ್ಲಿ ಕೇವಲ ಒಂದು ಘಂಟೆ ಮತ್ತು ಕಾರಿನಲ್ಲಿ ಹೋದರೆ ಸುಮಾರು ೧೦ ಘಂಟೆಗಳ ಸಮಯ ತೆಗೆದು ಕೊಳ್ಳುತ್ತದೆ ಅಬ್ಹಾ. ವಿಮಾನದಲ್ಲಿ ಹೋದರೆ ಮರುಭೂಮಿಯ ನಿಸರ್ಗದ ನೋಟ ಸಿಗಲಿಕ್ಕಿಲ್ಲ ಎಂದು ಕಾರಿನಲ್ಲಿ ಹೊರಟೆವು. ಜೆಡ್ಡಾ ನಗರದ ಗಡಿ ಬಿಡುತ್ತಿದ್ದಂತೆ ಮರುಭೂಮಿ ವಲಯದ ಆರಂಭ. ಸ್ವಲ್ಪ ದೂರದಲ್ಲೇ ಎಚ್ಚರಿಕೆಯ ಫಲಕ, “ sandstorm zone’ ಎಂದು. ಈ ವಲಯದಲ್ಲಿ ರಸ್ತೆಯ ಮೇಲೆ ಮರಳು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಚಲಿಸುವ ದೃಶ್ಯ ಸುಂದರ. ಅಲ್ಲಲ್ಲಿ sand dunes ಸಹ ಕಾಣಲು ಸಿಕ್ಕಿತು. ಅದರ ಒಂದು ಚಿತ್ರ ಈ ಲೇಖನದೊಂದಿಗೆ ಹಾಕಿದ್ದೇನೆ. ಅರೇಬಿಯಾದ ಸಾಮಾನ್ಯ ದೃಶ್ಯಗಳಾದ ಒಂಟೆಗಳ, ಕುರಿಗಳ ಹಿಂಡು, ರಸ್ತೆ ಉದ್ದಕ್ಕೂ ಕಾಣಲು ಲಭ್ಯ. ಅಬ್ಹಾ ಪ್ರದೇಶದಲ್ಲಿ ಹಳೇ ಕಾಲದ ಮಣ್ಣಿನ ಮನೆಗಳು ಕಾಣಲು ಸಿಗುತ್ತವೆ. ಸುಮಾರು ಇನ್ನೂರು ಮುನ್ನೂರು ವರ್ಷಗಳಷ್ಟು ಹಳೆಯ ಮನೆಗಳಿವೆ ಇಲ್ಲಿ.
ಅಬ್ಹಾ ಇನ್ನೂ ಸುಮಾರು ೨೫ ಕಿಲೋ ಮೀಟರ್ ಇರುತ್ತಿರುವಂತೆಯೇ ಉಷ್ಣಾಂಶ ೧೫ ಡಿಗ್ರೀ ಮಟ್ಟಕೆ ಇಳಿಯಿತು. ಇಲ್ಲಿನ ಚಳಿ ಹವೆಗೆ ಎಲ್ಲಾ ರೀತಿಯ ಹಣ್ಣುಗಳೂ ಬೆಳೆಯುತ್ತವಂತೆ. ಹೋಟೆಲ್ ತಲುಪುವಾಗ ಸಂಜೆಯಾದ್ದರಿಂದಲೂ, ಚಳಿ ತುಂಬಾ ಇದ್ದಿದ್ದರಿಂದಲೂ ಎಲ್ಲೂ ಹೋಗದೆ ಹೋಟೆಲ್ ನಲ್ಲೆ ತಂಗಿದೆವು. ಮಾರನೆ ದಿನ ಅಲ್-ಸೂದಾ ಎನ್ನುವ ಅಬ್ಹಾ ಬೆಟ್ಟದ ಶ್ರೇಣಿಯ ಮತ್ತೊಂದು ಬೆಟ್ಟಕ್ಕೆ ಭೇಟಿ ಕೊಟ್ಟು ಅಲ್ಲೇ ಮಧ್ಯಾಹ್ನ barbecue ಊಟಕ್ಕೆ ತಯಾರಾದಾಗ ಸೆರೆ ಹಿಡಿದ ಚಿತ್ರಗಳು ಈ ಲೇಖನದೊಂದಿಗೆ ಇವೆ.  ಚಳಿಗೆ ಶರೀರವನ್ನು ಬೆಚ್ಚಗಿಡಲು ಪ್ಯಾಲೆಸ್ತೀನ್ ಮೂಲದ ಮಧ್ಯವಯಸ್ಕ ನೊಬ್ಬ ಚಹಾದಂಗಡಿ ಇಟ್ಟು ಕೊಂಡಿರುವ ಚಿತ್ರ ಸಹ ಇದೆ. ಈ ಚಿತ್ರಗಳು ‘ಅಲ್- ಸೂದಾ’ ಪ್ರದೇಶದವು. ಮಾರನೆ ದಿನ ಆಫ್ಘನ್ ದೇಶದ ತೋರಾಬೋರ ಪ್ರದೇಶದ ರೀತಿಯ ಮತ್ತು ಅಮೆರಿಕೆಯ grand canyon ರೀತಿಯ ಅಗಾಧವಾದ ಕಣಿವೆ ಪ್ರದೇಶ ಕ್ಕೂ ಭೇಟಿ ಕೊಟ್ಟ ಚಿತ್ರಗಳನ್ನು ಎರಡನೇ ಲೇಖನದಲ್ಲಿ ಹಾಕುತ್ತೇನೆ. 

 
  
 
 
 
 
 
 
 
ಎಡ ಬದಿಯ ತೆರನಾದ ಉದ್ಯಾನವನ ಗಳು ಅಬ್ಹಾ ದ ಎಲ್ಲೆಡೆಯೂ ಕಾಣಲು ಸಿಗುತ್ತವೆ. ಚಹಾ ಮಾರುವವನ ಜೊತೆ ನಿಂತಿರುವ ವ್ಯಕ್ತಿ ನಾನಲ್ಲ. 
 
ಚಿತ್ರಗಳು: 
ನನ್ನ canon ಕ್ಯಾಮರಾದಿಂದ ತೆಗೆದಿದ್ದು. ೧೬ ಮೆಗಾ ಪಿಕ್ಸಲ್ ಮತ್ತು ಐದು ಜೂಂ ಗಳನ್ನು ಒಳಗೊಂಡಿದೆ.  

  

 

 

Rating
No votes yet

Comments