ಕಿಚನ್ ಮೆ ಚಮ್ಮಕ್ ಚಲ್ಲೋ ಓ..

ಕಿಚನ್ ಮೆ ಚಮ್ಮಕ್ ಚಲ್ಲೋ ಓ..

"ರಾ ಒನ್" ಸಿನೆಮಾದ "ಚಮ್ಮಕ್ ಚಲೋ" ಹಾಡು ಕೇಳುತ್ತಾ ಸೋಫಾದಲ್ಲಿ ಕುಳಿತಿದ್ದೆ. ನಿಜ ಹೇಳಬೇಕೆಂದರೆ ಮಲಗಿದ್ದೆ. ಆದರೆ "ಮಲಗಿದ್ದೆ" ಅಂದ ಕೂಡಲೇ "ಸೋಮಾರಿ" ಪದ ಅಂಟಿಕೊಳ್ಳುತ್ತದೆ. ನನಗೆ ಸೋಮಾರಿ ಅಂದರೂ ಪರವಾಗಿಲ್ಲ. ಆದರೆ ನನ್ನ ದೇವರಿಗೆ ಹೇಳಿ ನೋಡೋಣ..


"ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..." ಎಂದು ಪರಿಪರಿಯಲ್ಲಿ ಬೇಡಿಕೊಂಡರೂ, ಆ ಸಪ್ತಗಿರಿವಾಸಿ ಪವಡಿಸದೇ ನಿಂತೇ ಇದ್ದಾನಲ್ಲ ಅವನ ಭಕ್ತರೇ ಎಲ್ಲ. ಯಾವಾಗ ನೋಡಿದರೂ ಹಣ-ಹಣ-ಹಣ...


ಅದೇ ನನ್ನ ದೇವರು ನೋಡಿ "ಅನಂತ ಶಯನ"- ಏಳು ಹೆಡೆಯ ಹಾವಿನ ಮೇಲೆ ಎಂಥಾ ನಿದ್ರೆ...


ನಿದ್ರೆ ಮಾಡಿಯೇ ತಿಮ್ಮಪ್ಪನನ್ನ ಹಣದ ವಿಷಯದಲ್ಲಿ ಹಿಂದೆ ಹಾಕಿರುವ ದೇವರ ಮಹಾನ್ ಭಕ್ತ ನಾನು ಹಾಯಾಗಿ ಮಲಗಿರುವಾಗ, ಅದೂ ಸಂಡೇ!, "ಗಣ್ಪಥ್, ಶಾರ್ಪ್ ೧೦ಕ್ಕೆ ಬಾ" ಅಂದರೆ ಹೇಗೆ ಬರಲಿ ರಾಮಮೋಹನರೆ?


ಹಾಡು ಕಣ್ಣುಮುಚ್ಚಿ ಕೇಳಿದರೆ ಪೂರ್ತಿ ಆಸ್ವಾದಿಸಬಹುದು. ಹಾಗೇ ಭಾಷಣ ಕೂಡಾ. ನಮ್ಮ ಮಾಜೀ ಪ್ರಧಾನಿ ಕುಳಿತಿರುವ ಕಡೆ ಎಲ್ಲಾ ಫೋಟೋಗ್ರಾಫರ್‌ಗಳು ಕ್ಯಾಮರಾ ಫೋಕಸ್ ಮಾಡಿ ಇಟ್ಟಿರುವರು. ಗೌಡರು ಕಣ್ಣರೆಪ್ಪೆ ಮುಚ್ಚಿದ ಕೂಡಲೇ ಫೋಟೋ ತೆಗೆದು ಮಾರನೇದಿನ ಪೇಪರ್‌ನ ಮುಖಪುಟದಲ್ಲಿ ಹಾಕುವರು. ದಿನದ ೨೪ ಗಂಟೆನೂ ದೇಶ/ರಾಜ್ಯ/ಮಕ್ಕಳ ಒಳಿತನ್ನೇ ಆಲೋಚಿಸುತ್ತಾ ಇರುವವರಲ್ಲವಾ ಅವರು? ನಾನೂ ಕಣ್ಣುಮುಚ್ಚಿ ಭಾಷಣ ಆಸ್ವಾದಿಸುತ್ತಿದ್ದರೆ, ಮಾರನೇ ದಿನ..ಅಲ್ಲ..ಅದೇ ದಿನ ರಾತ್ರಿ ವಾಕ್ಪಥದಲ್ಲಿ ನಿದ್ರಿಸುತ್ತಿರುವ ಗಣ್ಪಥ್ ಎಂದು ವಿವಿಧ ಭಂಗಿಯ ಫೋಟೋಗಳು ಸಂಪದದಲ್ಲಿ ಮಂಜಣ್ಣ ಹಾಕುವರು.


ಈಗ ಚಮ್ಮಕ್ ಚಲ್ಲೋ ಹಾಡಿನ ವಿಷಯಕ್ಕೆ ಬರುವೆ. ನಾನು ಮಲಗಿಕೊಂಡು ಹಾಡು ಕೇಳುತ್ತಿದ್ದರೂ, ಈ ದೇಶದ ಬಗ್ಗೆ ದೀರ್ಘಾಲೋಚನೆಯಲ್ಲಿದ್ದೆ. ದೇಶದ ಜನರ ಬಗ್ಗೆ ಯೋಚಿಸುತ್ತಿದ್ದೆ. ಅದರಲ್ಲೂ ದೇಶದ "ಬಡ ಹೆಣ್ಣುಮಕ್ಕಳ" ಬಗ್ಗೆ ಚಿಂತಿಸುತ್ತಲಿದ್ದೆ! ಕರೀನಾ ಕಪೂರ್ ತೋರುಬೆರಳನ್ನು ಏಳು ಆಕಾರದಲ್ಲಿ ಬೆಂಡು ಮಾಡಿ, ಸೊಂಟ ಬಳುಕಿಸಿ ಚಮ್ಮಕ್ ಚಲ್ಲೋ ಡ್ಯಾನ್ಸ್ ಚೆನ್ನಾಗಿ ಏನು ಸೂಪರ್ ಆಗಿ ಮಾಡಿದ್ದಾಳೆ. ಕೋಟಿಗಟ್ಟಲೆ ಸಂಪಾದಿಸಿದರೇನು ಕರೀನಾಕಪೂರ್ ಅವಳ ಹೆಸರಿನಷ್ಟೂ ದಪ್ಪವಿಲ್ಲ. ಅವಳಂತೆ ಆಗಲು, ಅವಳನ್ನು ಅನುಕರಿಸಿ ಸಣ್ಣಗಾಗಲು ಈಗಿನ ಹೆಣ್ಣುಮಕ್ಕಳು ಊಟತಿಂಡಿ ಬಿಟ್ಟು ೭-೮ ವಯಸ್ಸಲ್ಲೇ ಡಯಟ್ ಶುರುಮಾಡುತ್ತಾರೆ. ಗಂಡುಮಕ್ಕಳು ಸಿಕ್ಸ್‌ಪ್ಯಾಕ್-ಎಯ್ಟ್‌ಪ್ಯಾಕ್ ಎಂದು ಹಂದಿಗಳಂತೆ ಬೆಳೆದರೆ-ಹೆಣ್ಣು ಮಕ್ಕಳು ಕರೀನಾ ಐಶ್ವರ್ಯ ಅಂತ ಹಪ್ಪಳದ ಹಾಗೇ ಒಣಗುತ್ತಿದ್ದಾರೆ. ಹೀಗೇ ಯೋಚಿಸುತ್ತಿರುವಾಗಲೇ..........."ರುಂಯ್‌ಯ್‌ಯ್" ಎಂದು ಹೊರಬಾಗಿಲಿಂದ ಅಡುಗೆಕೋಣೆಗೆ, ಅಡುಗೆ ಕೋಣೆಯಿಂದ ..........."ರುಂಯ್‌ಯ್‌ಯ್" ಎಂದು ಹೊರಬಾಗಿಲಿಗೆ ಏನೋ ಹೋದಂತಾಯಿತು. "ರಾ ಒನ್ನೋ ಜಿ ಒನ್ನೋ ಅಥವಾ ರೊಬೋಟ್ ಏನಾದರೂ ಮನೆಯೊಳಗೆ ಹೊರಗೆ ಓಡಾಡುತ್ತಿದೆಯೆ ಎಂದು ಭಯವಾಯಿತು. ಇನ್ನೊಂದು ಬಾರಿ "ರುಂಯ್‌ಯ್‌ಯ್" ಅಂದಾಗ ಸೋಫಾದಿಂದ ಎದ್ದು ಬಂದು ಅಡ್ಡನಿಂತೆ! ದಢಾರ್ ಅಂತ ಬಿದ್ದದ್ದು "ಜಿ ಒನ್" ಅಲ್ಲಾ..........ನನ್ನ ಜೀವನ್ ಸಾಥಿ! ಮುದ್ದುಮಾಡಿ ಎಬ್ಬಿಸಿದ ಮೇಲೆ ವಿಚಾರಿಸಿದೆ-"ಅಂತದ್ದೇನೇ ಅರ್ಜೆಂಟ್ ಕೆಲಸ?" "ರೀ........ಹೇಳೋದು ಮರೆತಿದ್ದೆ. ಜ್ಯೂಸಿ ನ್ಯೂಸ್ ಚಾನಲ್‌ನಲ್ಲಿ ಮನೆ ಮನೆಗೆ ಹೋಗಿ ಅಡುಗೆ ಕಾರ್ಯಕ್ರಮ ನಡೆಸುತ್ತಾರಲ್ಲಾ, "ಹುಳಿಕಹಿಇದ್ರು" ಅವರ ಮುಂದಿನವಾರದ ಕಾರ್ಯಕ್ರಮ ನಮ್ಮ ಮನೆಯಲ್ಲಿ. ಅದಕ್ಕೇ ತಯಾರಿ ನಡೆಸುತ್ತಿದ್ದೆ" ಅಂದಳು.


"ಆಹಾ..ಸಂತೋಷದ ಸುದ್ದಿ. ನನ್ನ ಫ್ರೆಂಡ್ಸ್‌ಗಳಿಗೆಲ್ಲಾ ಹೇಳುವೆ. ಏನು ಅಡುಗೆ ಮಾಡಬೇಕೆಂದಿದ್ದಿ-ಲಿಸ್ಟ್ ಮಾಡಿ ಒಂದೊಂದೇ ಮಾಡಿ ಕೊಡು. ತಿಂದು ನೋಡಿ ಚೆನ್ನಾಗಿರುವುದನ್ನು ಸಿಲೆಕ್ಟ್ ಮಾಡಿ ಹೇಳುವೆ. ಅದನ್ನೇ ಮಾಡಿದರಾಯಿತು.ದಿನಾ.."


"ತಡೀರಿ, ತಡೀರಿ..ಅದಕ್ಕಿಂತ ಮೊದಲು ತುಂಬಾ ಕೆಲಸವಾಗಬೇಕು.." ಅಂದಳು


"ಓ..ಯಾವುದೆಲ್ಲಾ ಬೇಕು ಲಿಸ್ಟ್ ಮಾಡಿಕೊಡು.ಹಾಗೇ ಚೀಲನೂ ಕೊಡು. ಈಗಲೇ ಶೆಟ್ಟರ ಅಂಗಡಿಗೆ ಹೋಗಿ ತರುವೆ."


"ಅದಲ್ರೀ..ಟಿ.ವಿಯವರು ಬರುವುದಲ್ಲವಾ? ನಮ್ಮ ಕಿಚನ್ ಹೇಗಿದೆ ನೋಡಿದಿರಾ? ಪಾತ್ರೆಗಳ ಕಲರ್ ನೋಡಿದ್ರಾ.. ಅದಕ್ಕೆ ಸ್ವಲ್ಪ ಮಾಡರ್ನ್ ಮಾಡೋಣ ಅಂತ "ಮಾಡ್ಯುಲರ್ ಕಿಚನ್", "ಹೊಸ ಸಿಂಕ್,ಚಿಮ್‌ಣಿ, ವಾಟರ್ ಪ್ಯೂರಿಫಯರ್, ಕ್ರಿಸ್ಟಲ್ ಶಾಂಡಿಲಿಯರ್ ಲೈಟ್ಸ್, ಎಲ್.ಇ.ಡಿ ಟಿ.ವಿ.,ಗೆ ಹೇಳಿ ಬಂದಿದ್ದೇನೆ. ನಾಳೆ ಸಿಲ್ಕ್ ಸೀರೆ ಒಂದೆರಡು ತರೋಣ-ನಿಮ್ಮ ಪತ್ನಿ ಟಿ.ವಿ.ಯಲ್ಲಿ ಚೆನ್ನಾಗಿ ಕಾಣಿಸಬೇಕಲ್ವಾ. ಚಿನ್ನದ ಅಂಗಡಿಯವನೂ ಹೊಸ ಪ್ಯಾಟರ್ನ್ ಚಿನ್ನ, ಕಳೆದ ವಾರದ ಹಳೇ ರೇಟಿಗೆ ಕೊಡುತ್ತೇನೆ ಅಂದಿದ್ದಾನೆ. ....." ಹೇಳುತ್ತಾ ಇದ್ದಳು........."ರುಂಯ್‌ಯ್‌ಯ್" ಅಂತ ನನ್ನ ತಲೆತಿರುಗಲು........ಕಣ್ಣುಕತ್ತಲಿಟ್ಟಿತು........

Rating
No votes yet

Comments