ನಿಯತ್ತು ಮಾರಾಟಕ್ಕಿದೆ!

ನಿಯತ್ತು ಮಾರಾಟಕ್ಕಿದೆ!

ಕವನ


 

ಕವಿತೆ ಅರಿವಾಗಬಹುದು ಭಾವ ಸೆರೆ ಸಿಕ್ಕಬಹುದು
ಆದರೆ ಗೆಳೆಯ ಬಂದಿಲ್ಲಿ ನೋಡು 
ಈಗಷ್ಟೆ ಬರೆದ ಕವಿತೆ ಕಾಗದ 
ಪದಪದದ ಮೇಲೂ ಆರದೆ ಉಳಿದಿರುವ ಒದ್ದೆ
ಕೆಂಪಡಿಕೆಯ ಕಣ್ಣು ತೂಕಡಿಸುವ ನಿದ್ದೆ 
ಉಸಿರು ಉಸಿರಲ್ಲೂ ನಾರುವ ಹೆಂಡ
ಸೇದು-ಸೇದು ಕಪ್ಪು ಹೆಪ್ಪುಗಟ್ಟಿರುವ 
ಎರಡು ಮಸಿಕೆಂಡಗಳ ಸಮೇತ ನನ್ನನ್ನು ಇಡಿಯಾಗಿ!

ಬಂದ ಸಂಬಂಧವಾಗದೆ 
ಬದುಕು ಬಂದೀಖಾನೆಯಾಗಿರುವುದನ್ನು
ಬಂದಿಲ್ಲಿ ನೋಡು
ಕೋಳಗಳನ್ನು ಕಳಚುವ ಕೊಸರಾಟದಲ್ಲಿ ಆಗಿರುವ ಗಾಯಗಳನ್ನೂ
ಸುಮ್ಮನೆ ಭುಜದ ಮೇಲೆ ಬೆರಳೊತ್ತಿ ನಾನಿದ್ದೇನೆ ಅಂದುಬಿಡು 
ಒಂದೂ ಮಾತಾಡದೆ
ಕ್ಷಣವಾದರು ಕ್ಷಣಿಕವೆನಿಸಲಿ ಅಸಹಾಯಕತೆ!

ಹೇಳು ಗೆಳೆಯಾ ಯಾವನಿಗೆ ಬೇಕಿದೆ?
ಸತ್ತವರ ಮನೆಯ ಶೆಹನಾಯಿಯಲ್ಲೂ ಸಂಗೀತ ಹುಡುಕುವ ಜಗತ್ತು!
ಹೆಸರಿಗೆ ಬಸಿರಾಗುವ ತಾಯ್ತನದ ಗತ್ತು!
ಎಲ್ಲವನು ಮಾರಿ-ಕೊಳ್ಳುವವರ ಪೊಳ್ಳು ಸಂತೆಯಲಿ
ಶೂನ್ಯ ಬೆಲೆಗೆ ಮಾರಾಟಕ್ಕಿದೆ ನನ್ನ ನಿಯತ್ತು!

Comments