ನಾನೇನೇನೋ ಆಗಬೇಕಿತ್ತು ...

ನಾನೇನೇನೋ ಆಗಬೇಕಿತ್ತು ...

ನಾನೇನೇನೋ ಆಗಬೇಕಿತ್ತು ...  ಏನೂ ಅಗ್ಲಿಲ್ಲ !

ಜೀವನದಲ್ಲಿ ಏನೇನೋ ಆಗಬೇಕಿತ್ತು  ... ಆಗಬಹುದಿತ್ತು ... ಆದ್ರೆ ಆಗಲಿಲ್ಲ ... ಯಾಕೆ ಅನ್ನೋದನ್ನು ಈ ಕವನ ಹೇಳುತ್ತೆ ... ಆದರೆ ಇಂದೇನು ಆಗಿಹೆನೋ ಅದಕ್ಕೆ ನನಗೆ ಬೇಸರವಿಲ್ಲ ಬಿಡಿ ....

ಮೆಕ್ಯಾನಿಕಲ್ ಇಂಜಿನಿಯರ್ ಆಗಬೇಕೆಂದಿದ್ದೆ
ತೋರಿದರಾರೋ ಒಂದು lathe ಮೆಷೀನು
lathe’ಯಾಕೋ ಲತೆಯಂತೆ ಬಳುಕಲಿಲ್ಲ
ಮೆಕ್ಯಾನಿಕಲ್ ಇಂಜಿನಿಯರ್ ನಾನಾಗಲಿಲ್ರೀ!

ಸಿವಿಲ್ ಇಂಜಿನಿಯರ್ ಆಗಬೇಕೆಂದಿದ್ದೆ
ತೋರಿದರಾರೋ ಒಂದು ಟಿ-ಸ್ಕೇಲ್’ಅನ್ನು
ಟಿ-ಸ್ಕೇಲ್’ ಯಾಕೋ ಏಸುವಿನ ಶಿಲುಬೆ ಕಂಡಿತ್ತು
ಸಿವಿಲ್ ಇಂಜಿನಿಯರ್ ನಾನಾಗಲಿಲ್ರೀ!

ಹೃದಯದ ವೈದ್ಯ ಆಗಬೇಕೆಂದಿದ್ದೆ
ತೋರಿದರಾರೋ ಒಂದು ಸ್ಥೆಥೆಸ್ಕೋಪ್’ಅನ್ನು
ಅದ್ಯಾಕೋ ಗಣೇಶನ ಸೊಂಡಿಲ ಹಾಗೆ ಕಂಡಿತ್ತು
ಹೃದಯದ ವೈದ್ಯ ನಾನಾಗಲಿಲ್ರೀ!

ದಂತ ವೈದ್ಯ ಆಗಬೇಕೆಂದಿದ್ದೆ
ತೋರಲು ಹಲ್ಲುಗಳನು ತೆರೆದರಾರೋ ಬಾಯನ್ನು
ಯಶೋದೆಗೆ ಕಂಡ ಭೂಮಿ ನನಗೆ ಕಾಣಲಿಲ್ಲ
ದಂತ ವೈದ್ಯ ನಾನಾಗಲಿಲ್ರೀ!

ಲೆಕ್ಕಿಗನಾಗಿ ಸಂಖ್ಯೆಯೊಡನೆ ಆಡಬೇಕೆಂದಿದ್ದೆ
ತೋರಿದರಾರೋ ಸಂಖ್ಯೆ ಹಿಡಿವ ಲೆಡ್ಜರ್’ಅನ್ನು
ಲೆಡ್ಜರ್’ ಯಾಕೋ ಚಿತ್ರಗುಪ್ತನ ಕಡತದಂತೆ ಕಂಡಿತು
ಪುಸ್ತಕದೋಳ್ ಮಸ್ತಕವಿಡೋ ಲೆಕ್ಕಿಗ ನಾನಾಗಲಿಲ್ರೀ!

ಶಾಲಾ ಮಾಸ್ತರನು ಆಗಬೇಕೆಂದಿದ್ದೆ
ತೋರಿದರಾರೋ ಮಾಸ್ತರಿಲ್ಲದ ಶಾಲೆಯೊಂದ
ಮಕ್ಕಳೇನೋ ಪಾಂಡವರೇ ದ್ರೋಣ ನಾನಲ್ಲವಲ್ಲ
ಮಕ್ಕಳಿಗೆ ಗುರುವು ನಾನಾಗಲಿಲ್ರೀ!

ದೇವನ ಪೂಜಿಸೋ ಅರ್ಚಕ ಆಗಬೇಕೆಂದಿದ್ದೆ
ತೋರಿದರಾರೋ ವೈಭವೋಪೇತ ದೇವಾಲಯವ
ವೈಭವವಿತ್ತು ಭಕ್ತಿ ಶ್ರದ್ದೆ ಇರಲಿಲ್ಲ
ದೇವನಿಲ್ಲದ ಗುಡಿಗೆ ಅರ್ಚಕ ನಾನಾಗಲಿಲ್ರೀ!

ಲೋಕಸೇವ ಮಾಡಲು ರಾಜಕಾರಣಿ ಆಗಬೇಕೆಂದಿದ್ದೆ
ತೋರಿದರಾರೋ ದೇವನ ಕೆಲಸದ ಭವನವ
ಅದು ವಂಚನೆಗೆ ಪೂಜ್ಯತೆ ಇರೋ ಬೀಡಾಗಿತ್ತು
ಮನುಷ್ಯತ್ವ ಇರೋದ್ರಿಂದ ರಾಜಕಾರಣಿ ನಾನಾಗಲಿಲ್ರೀ!

ನೋಡುವುದ ಕಾಣದೆ, ಒಂದರಲ್ಲಿ ಬೇರೊಂದನ್ನೇ ಕಾಣೋ
ಇರುವುದರಲ್ಲಿ ಬಾಳದೆ ಬೇರೇನೋ ಹುಡುಕುವ
ಎಲ್ಲರೊಂದಿಗಿದ್ದೂ ತಾವರೆ ಎಲೆಯ ಮೇಲಿನ ಬಿಂದುವಿನಂತೆ
ನನ್ನದೇ ಲೋಕದಿ ನನ್ನೊಂದಿಗೆ ಇರುವೆನು ನಾನು
ರವಿ ಕಾಣದ್ದನ್ನು ಕಾಣುವನಾಗಿಹೆನು ಇಂದು
 

Comments