ಬರಿಬೇಕು.. ಬರಿಬೇಕು ..

ಬರಿಬೇಕು.. ಬರಿಬೇಕು ..

ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, ಇವತ್ತು ಏನಾದರು? ಬರೆದೆ ತೀರಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿದ್ದೆ.

ಕೆಲವರಿಗೆ ಕೆಲವೊಂದು ಹುಚ್ಚು ಖಂಡಿತ ಇರುತ್ತವೆ. ನಮ್ಮ ಮಂಜನಿಗೆ ಯಾವುದೇ ದೊಡ್ಡ ಸಮೆಸ್ಯೆಯಲ್ಲೂ ಹಾಸ್ಯ ಕಾಣುವ ಪ್ರವರ್ತಿ. ಒಮ್ಮೆ ನಾನು ಮಂಜ ನನ್ನ ಬೈಕ್ ನಲ್ಲಿ ಹೋಗುತ್ತಿರುವಾಗ, ಬೈಕ್ ಮುಂದಿನ ಒಂದು ಹುಡುಗಿಯ ಬೈಕ್ ಗೆ ತಾಗಿತು. ಅವಳು ಬಂದು ಜಗಳ ಶುರು ಮಾಡಿದಳು. ಅಷ್ಟರಲ್ಲಿ, ಮಂಜ ಏನೋ.. ಸ್ವಲ್ಪ ಪ್ರೆಸ್ ಆಯಿತು ಅಷ್ಟೇ ಎಂದ. ಏನ್ರೀ? ಹಾಗೆ ಅಂದರೆ ಎಂದಳು. ನೀವೇ ಬರೆದಿದ್ದೀರಿ ತಾನೇ ಪ್ರೆಸ್ ಎಂದು ನಿಮ್ಮ ಗಾಡಿ ಹಿಂದುಗಡೆ ಎಂದು ಹೇಳಿದ. ಅದನ್ನು ಕೇಳಿ ಅವಳಿಗೂ ನಗು ತಡಿಯಲು ಆಗಲಿಲ್ಲ, ಸುಮ್ಮನೆ ಹೊರಟು ಹೋದಳು. ಹೀಗೆ ಮತ್ತೊಮ್ಮೆ ಮಂಜನ ಮನೆಗೆ ಹೋಗಿದ್ದೆ. ನಾವು ಕಾಫಿ ಕುಡಿಯುತ್ತ ಇರುವಾಗ ಒಂದು ಜೇನು ಹುಳು ಬಂದಿತು. ಅದಕ್ಕೆ ಮಂಜ ಅಕ್ಕ-ಪಕ್ಕದ ಮನೆ ಬಿಟ್ಟು, ಇಲ್ಲೇ ಏಕೆ? ಬಂತು ಗೊತ್ತ ಎಂದು ನನಗೆ ಕೇಳಿದ. ನಾನು ಗೊತ್ತಿಲ್ಲ ಎಂದು ಹೇಳಿದೆ. ನನ್ನ ಸಿಹಿ ಮಡದಿಯ ಸಲುವಾಗಿ ಎಂದ. ಮಂಜನ ಮಡದಿ ಅವನನ್ನು ಸಿಟ್ಟಿನಿಂದ ನೋಡಿದಳು. ಏಕೆ? ತಂಗ್ಯಮ್ಮ ಹೊಗಳಿದರು ಕೂಡ ಸಿಟ್ಟು ಎಂದು ಕೇಳಿದೆ. ನಿನ್ನೆ ನನಗೆ ಸ್ವಲ್ಪ ಶುಗರ್ ಇದೆ ಎಂದು ಡಾಕ್ಟರ ಹೇಳಿದರು ಅದಕ್ಕೆ ಈ ಮಾತು ಎಂದಳು. ನನಗೆ ತುಂಬಾ ನಗು ಬಂತು. ಒಮ್ಮೆ ಮಂಜನ ಜೊತೆ ಹೋಟೆಲಿಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗಿ ತುಂಬಾ ಕಷ್ಟ ಪಟ್ಟು ಫೋರ್ಕ್ ನಿಂದ ದೋಸೆ ತಿನ್ನುತ್ತಿದ್ದಳು. ಅದನ್ನು ನೋಡಿ ಮಂಜ ನಗುತ್ತ ಇವಳು ಫೋರ್ಕಿನಿಂದ ಕಾಫಿ ಕುಡಿದರೆ ಹೇಗಿರುತ್ತೆ ಎಂದು ನನಗೆ ಕೇಳಿದ. ಹೀಗೆ ನನ್ನ ಮಗನಿಗೆ ಕಾರ್ಟೂನ್ ಧ್ಯಾನ.... ನನಗೆ ಬರೆಯುವ ಹುಚ್ಚು.

ಹೀಗೆ ಒಮ್ಮೆ ಮಡದಿಗೆ ಬರೆದರೆ ಬೀಚಿ ಅವರ ಹಾಗೆ ಬರೀಬೇಕು ಕಣೇ ಎಂದು ಹೇಳಿದೆ. ಅದಕ್ಕೆ ಮಡದಿ ನೀವು ಏನಾದರು ಗೀಚಿ, ಆದರೆ ಓದು ಓದು ಎಂದು ನನ್ನ ತಲೆ ಮಾತ್ರ ತಿನ್ನಬೇಡಿ ಎಂದು ನನ್ನನ್ನು ತಲೆಯ ಹೇನಿಗೆ ಹೋಲಿಸುವ ಹಾಗೆ ಹೇಳಿದಳು.

ಅಷ್ಟರಲ್ಲಿ ಮಡದಿ ಕೂಗಿ "ಕಸಬರಿಗೆ ತಂದು ಕೊಡಿ" ಎಂದು ಕೂಗಿದಳು. ಕಸಬರಿಗೆ ತೆಗೆದುಕೊಂಡು ಹೋಗಿ ಅವಳ ಕೈಗೆ ಕೊಟ್ಟೆ. ಕೂಡಲೇ ಕಸಬರಿಗೆ ಕೆಳಗೆ ಒಗೆದು,ಕೋಪದಿಂದ ಕಸಬರಿಗೆ ಹೀಗೆ ಕೈಗೆ ಕೊಡುವುದಾ ಎಂದು ಬೈದಳು. ಮತ್ತೆ ಇನ್ನು ಹೇಗೆ ಕೊಡಬೇಕು ತಲೆ ಮೇಲೆ ಇಡಬೇಕಾ ಅಥವಾ ಕಾಲಿಗೆ ಎಂದೆ. ಹೀಗೆ ಕೈಗೆ ಕೊಟ್ಟರೆ ಜಗಳವಾಗುತ್ತೆ ಎಂದು ಕೋಪಮಾಡಿಕೊಂಡು ಜಗಳ ಶುರುಮಾಡಿದಳು. ಅದು ಯಾರು ಅವಳಿಗೆ ಹೀಗೆ ಭವಿಷ್ಯವಾಣಿ ಹೇಳಿದರೋ ನಾ ಕಾಣೆ ಜಗಳ ಆಗುತ್ತೆ ಎಂದು. ಅವರ ಏಳನೇ ಅರಿವು ಸಾಧಿಸಿರುವ ಭವಿಷ್ಯವಾಣಿಗೆ ಸಲಾಂ ಹೊಡೆದೆ(ನಿಜವಾಗಿಯೂ ಜಗಳ ಶುರು ಮಾಡಿದ್ದರಿಂದ). ಇನ್ನೊಮ್ಮೆ ಕಸ'ಬರಿ'ಗೆ ಉಸಾ'ಬರಿ'ಗೆ ಹೋಗುವುದು ಬೇಡ ಎಂದು ನಿರ್ಧರಿಸಿದೆ. ಆದರೂ ಎರಡಲ್ಲೂ ಬರಿ ಎಂಬ ಆಜ್ಞೆ ಮಾತ್ರ ಇತ್ತು.ಕಸಗುಡಿಸಿದ ಮೇಲೆ ಬಂದು, ಏನು? ಅಷ್ಟು ಆಳವಾಗಿ ಯೋಚಿಸುತ್ತ ಇದ್ದೀರಾ ಎಂದಳು. ಏನಾದರು ಬರೀಬೇಕು ಕಣೇ ಎಂದೆ. ನೀವೇನು ಬರೆಯುವುದು, ಈಗಾಗಲೇ ಎಲ್ಲ ಖ್ಯಾತ ಸಾಹಿತಿಗಳು ಎಲ್ಲವನ್ನು ಬರೆದು ಮುಗಿಸಿದ್ದಾರೆ. ನೀವು ಅದನ್ನೇ ನಿಮ್ಮ ಧಾಟಿಯಲ್ಲಿ ಬರೆಯಬಹುದು ಅಷ್ಟೇ. ಅಥವಾ ಅವರು ಬಿಟ್ಟಿರುವ ಅಲ್ಪ ಸಲ್ಪ ಸಾಹಿತ್ಯ ಮಾತ್ರ ಬರೆಯಲು ಸಾಧ್ಯ ನೀವು ಖಾಲಿದಾಸರು ಎಂದು ಹಿಯಾಳಿಸಿದಳು.

"ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ ...ಖಾಲಿ ದೋಸೆಗಿಂತ ಒಳ್ಳೆ ರುಚಿ ಇಲ್ಲರಿ" ಎಂದು ಹಾಗೆ ಹಾಡುತ್ತ ಕುಳಿತ್ತಿದ್ದಾಗ, ಇದೊಂದು ಗೊತ್ತು ನಿಮಗೆ ಹೋಗಿ ಬೇಗನೆ ನೀರು ಕಾಯಿಸಿ ಎಂದು ಕಳುಹಿಸಿದಳು. ಬೇಜಾರಿನಿಂದ "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ...." ಎಂದು ಹಾಡುತ್ತ, ನೀರು ಕಾಯಿಸಲು ಹೋದೆ. ಹಾಗೆ ಆಳವಾಗಿ ಯೋಚಿಸುತ್ತ ಕಟ್ಟಿಗೆ ಹಾಕುತ್ತ ಕುಳಿತಿರುವಾಗ ನನ್ನ ಕೈ ಒಳಗಡೆ ಹಾಕಿಬಿಟ್ಟಿದ್ದೆ. ನನ್ನ ಕೈಗೆ ಬರೆ ಬಿದ್ದಿತ್ತು. ಜೋರಾಗಿ ಕಿರುಚಲು ಮಡದಿ ಬಂದು, ಈಗ ಬರೆ ಸಿಕ್ಕಿತಲ್ಲ, ಅದಕ್ಕೆ ಹೇಳಿದ್ದು ನಿಮಗೆ ಬರಿಬೇಕು.. ಬರಿಬೇಕು .. ಎಂದು ಹೇಳಬೇಡಿ ಎಂದು, ಮೇಲೆ ಇರುವ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎಂದು ಬಿಟ್ಟಿದ್ದಾರೆ ಎಂದು ನಗುತ್ತ, ಇನ್ನೇನು ಬನ್ನಿ ಸಾಕು ಎಂದು ಹೇಳಿ ಕೈಗೆ ಬರ್ನೋಲ್ ಹಚ್ಚಿ ಮಲಗಲು ಹೇಳಿದಳು. ಸಧ್ಯ ಅದೇ ವಿಷಯ ಈಗ ..ಬರೆದಿದ್ದೇನೆ .. :-)

Rating
No votes yet

Comments