ದೆವ್ವ..............ದೆವ್ವ....................!

ದೆವ್ವ..............ದೆವ್ವ....................!

ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನನ್ನ ಸ್ಥಳ ಬರಲು ಇನ್ನೂ ಸಮಯವಿದೆ.

ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ.ನಾನ್ನೊಬ್ಬನೇ.ಇದೇ ಕೊನೆಯ ಬೋಗಿ ಬೇರೆ, ರೈಲಿನ ಕೊನೆಯ ಬೋಗಿಗಳಲ್ಲಿ ದೆವ್ವಗಳು ಇರ್ತಾವ೦ತೆ, ಈ ಸಮಯದಲ್ಲಿ ಇಲ್ಲಿ ದೆವ್ವ ಬ೦ದು ಬಿಟ್ಟರೇ..?. ನನ್ನ ವಿಚಾರಸರಣಿ ನೋಡಿ ನನಗೇ ನಗು ಬ೦ತು.ಸುಮ್ಮನೆ ನಕ್ಕು,ಬೇಸರ ಕಳೆಯಲು ಪುಸ್ತಕವೊದನ್ನು ತೆಗೆದು ಓದುತ್ತಾ ಕುಳಿತೆ.

ಒ೦ದರ್ಧ ಘ೦ಟೆ ಕಳೆದಿರಬಹುದೇನೋ, ಅದೇಲ್ಲಿ೦ದ ಪ್ರತ್ಯಕ್ಷವಾದರೋ,ಎರಡು ಗ೦ಡಸರು ಏದುಸಿರು ಬಿಡುತ್ತ ನನ್ನೆದುರು ಬ೦ದು ಕುಳಿತರು.ರೈಲು ಎಲ್ಲಿಯೂ ನಿ೦ತಿರಲಿಲ್ಲ.ನನಗೆ ಇವರೇನಾದರೂ ದೆವ್ವಗಳಿರಬಹುದಾ ಎನಿಸಿತು.ಛೇ, ಛೇ ರೈಲು ನಿ೦ತಿರಬಹುದು, ನನ್ನ ಓದಿನ ಗು೦ಗಿನಲ್ಲಿ ರೈಲು ನಿ೦ತಿದ್ದು ನನಗೆ ಗೊತ್ತಾಗಿರಲಿಕ್ಕಿಲ್ಲ ಎನಿಸಿತು.

" ಅಬ್ಭಾ.. ಅ೦ತೂ ತಡವಾಗಿಯಾದರೂ ಬ೦ತಲ್ಲಪ್ಪ, ಈ ರೈಲು ನಾನು ಇವತ್ತು ಬರುವುದೇ ಇಲ್ಲವೇನೋ ಎ೦ದುಕೊಡಿದ್ದೆ" ಎ೦ದ ಅವರಲ್ಲಿ ಒಬ್ಬ.

"ಹೂನಪ್ಪಾ.... ಆ ಸ್ಟಾಪ್ ಬೇರೆ ಸರಿ ಇರಲಿಲ್ಲ ದೆವ್ವಗಳಿವೆಯ೦ತೆ ಅಲ್ಲಿ "ಎ೦ದ ಇನ್ನೊಬ್ಬ ತನ್ನ ಹಣೆಯ ಬೆವರೊರೆಸುತ್ತಾ.

ನಾನು ಪುಸ್ತಕ ಹಿಡಿದುಕೊ೦ಡಿದ್ದೇನಾದರೂ ಅವರ ಮಾತುಗಳು ನನಗೆ ಕೇಳಿಸುತ್ತಿದ್ದವು.ಅವರು ದೆವ್ವ ಎ೦ದಿದ್ದು ನೋಡಿ ನನಗೂ ನಗು ಬ೦ತು.ಪುಸ್ತಕದಡಿಯಲ್ಲೇ ಸುಮ್ಮನೇ ಮುಗುಳ್ನಕ್ಕೆ.

"ಸುಮ್ಮನಿರಿ ಸಾರ್,ನೀವೋಬ್ರು, ಈ ಇಪ್ಪತ್ತೊ೦ದನೇ ಶತಮಾನದಲ್ಲಿಯೂ ದೆವ್ವ,ಭೂತ ಎನ್ನುತ್ತೀರಲ್ಲ, ಅಯ್ಯ..." ಎ೦ದ ಮೊದಲಿನವನು.

"ಏನ್ಸಾರ್ ಹೀಗ೦ತೀರಾ.. ನಿಮಗೆ ಗೊತ್ತಿಲ್ಲ ಅಷ್ಟೇ; ಇಪ್ಪತೊ೦ದಾದರೇನೂ; ಎಪ್ಪತೊ೦ದಾದರೇನು? ದೆವ್ವಗಳು ಖ೦ಡಿತವಾಗಿಯೂ ಇರುತ್ತವೆ.ನೀವು ನೋಡಿಲ್ಲ ಅಷ್ಟ್ರೇ" ಎ೦ದ ಅವನು.

"ಓಹೋ.. ನೀವೇನಾದರೂ ನೋಡಿದ್ದಿರಾ ಸಾರ್ ದೆವ್ವವನ್ನ.? "ಕೇಳಿದ ಮೊದಲನೇಯವನು.

"ನೋಡಿಲ್ಲ ಕೇಳಿದ್ದೀನಿ. ನಮ್ಮನ್ನೇ ಪಕ್ಕದಮನೆಯವರು ನೋಡಿದ್ದಾರ೦ತೆ, ಅವರ ಅಣ್ಣನ ಮಗನ ದೆವ್ವವ೦ತೆ.ಎರಡು ತಿ೦ಗಳ ಹಿ೦ದೆಯಷ್ಟೇ ಎಸ್ಸೆಸಲ್ಸಿ ಫೇಲಾಗಿ ಬಾವಿಗೆ ಹಾರಿದ್ದನ೦ತೆ.ಮೊನ್ನೆ ರಾತ್ರಿ ಮನೆಯ ಹತ್ತಿರ ಬ೦ದು ’ದೊಡ್ಡಪ್ಪಾ ರಿಸಲ್ಟ್ ಬ೦ತಾ ..?’ ಅ೦ತಾ ಕೇಳಿದನ೦ತೇ, ಇದಕ್ಕೇನ೦ತೀರಾ..? "ಮೊದಲಿನವನು ಸವಾಲು ಹಾಕಿದ ಎರಡನೆಯವನಿಗೆ.

" ಸುಮ್ಮನಿರಿ ಸಾರ್ ಯಾರನ್ನೋ ನೋಡಿರುತ್ತಾರೆ, ಏನನ್ನೋ ಕೇಳಿಸಿಕೊ೦ಡಿರುತ್ತಾರೆ, ಕೊನೆಗೆ ದೆವ್ವ ಅ೦ತ ಕೂಗಿಕೊ೦ಡಿರುತ್ತಾರೆ ಅಷ್ಟೇ; ನಮ್ಮಲ್ಲೂ ಹೀಗೆ ಆಗಿತ್ತು ನಮ್ಮವರೊಬ್ಬರು ಕ್ಯ್ಯಾರೇ ಪಾರೇ ಅ೦ತ ಶುದ್ದ ಉರ್ದು ಭಾಷೆಯಲ್ಲಿ ಮಾತಾಡ್ತ್ತಾ ಇದ್ರು,ಅವರು ಶುದ್ಧ ಬ್ರಾಹ್ಮಣರು ಬೇರೆ.ಅವರು ಕಲತವರಾಗಿದ್ದಕ್ಕೆ ಮಾನಸಿಕ ತಜ್ನರ ಬಳಿ ಹೋಗಿ ತೋರಿಸಿದ್ ಹೊತ್ಗೇ ಅವರಿಗೆ ಮಾನಸಿಕ ಕಾಯಿಲೆ ಇರುವುದು ಗೊತ್ತಾಯಿತು ಗೊತ್ತಾ ಎಲ್ಲಾ ಸೈನ್ಸ್ ಕಣ್ರೀ ,ಸೈನ್ಸ್ " ಎ೦ದ ಮೊದಲಿನವನು.

ನಾನು ಅವರಿಬ್ಬರ ಮಾತುಕತೆಯನ್ನೆಲ್ಲ ಪುಸ್ತಕದ ಮರೆಯಲ್ಲ್ಲೇ ಗಮನಿಸುತ್ತಿದ್ದೆ.

ಅದೇನಾಯಿತೋ ಆ ವ್ಯಕ್ತಿಗೆ ಒಮ್ಮೇಲೆ ಎದ್ದು ನಿ೦ತು " ಏನ್ರೀ ದೆವ್ವ ಇಲ್ಲಾ ಅ೦ತೀರಲ್ಲ, ನಿಮಗೆನ್ ಗೊತ್ತು ದೆವ್ವಗಳು ಖ೦ಡಿತವಾಗಿಯೂ ಇವೆ,ಖ೦ಡಿತವಾಗಿಯೂ......"ಎ೦ದು ಕೂಗಾಡತೊಡಗಿದ ಆ ಮಧ್ಯರಾತ್ರಿಯಲ್ಲಿ.

"ಅದ್ ಹೇಗೆ ಅಷ್ಟು ಖಚಿತವಾಗಿ ಹೇಳ್ತಿರಾ ..."ಇವನೂ ಕೇಳಿದ ಸಿಟ್ಟಿನಿ೦ದ,

’ಯಾಕೇ೦ದ್ರೇ ...ಯಾಕೇ೦ದ್ರೇ............ನಾನೇ ದೆವ್ವ..!’ ಎ೦ದು ಜೋರಾಗಿ,ವಿಕಾರವಾಗಿ ನಗತೊಡಗಿದ ಆ ವ್ಯಕ್ತಿ.ನಾನೂ ಆಶ್ಚರ್ಯದಿ೦ದ ಅವನ್ನ್ನು ನೋಡತೊಡಗಿದೆ.ಈಗ ಮೊದಲ ವ್ಯಕ್ತಿ ಸ೦ಪೂರ್ಣವಾಗಿ ಗಾಭರಿಯಾಗಿಬಿಟ್ಟಿದ್ದ.ಅವನ ಸ೦ಪೂರ್ಣ ಬೆವೆತಿದ್ದ.ಅವನ ಬಾಯಿ೦ದ ’ಸಾರ್!.ಸಾರ್!’ಎ೦ಬ ಮಾತಷ್ಟೇ ಕೇಳಿ ಬರುತ್ತಿತ್ತು.

ಅಷ್ಟರಲ್ಲಿ ನಗುತ್ತಿದ್ದ ವ್ಯಕ್ತಿ ಶಾ೦ತನಾಗಿ ಬಿಟ್ಟ.ಅವನು ನಗು ವಿಕಾರತೆಯಿ೦ದ ಕುಚೊದ್ಯದ ನಗುವಾಗಿ ತಿರುಗಿಬಿಟ್ಟಿತ್ತು.ಅವನು ಹೇಳತೊಡಗಿದ ’ಹ್ಹಾ..ಹ್ಹಾ...ಹ್ಹಾ...ನೋಡಿದಿರಾ ಸಾರ್ ದೆವ್ವವಿಲ್ಲ ಅ೦ತೀರಾ,ನಾನೇ ದೆವ್ವ ಅ೦ದ್ರೇ ಮಾತ್ರ ಬೆವತುಬಿಟ್ಟಿದ್ದೀರಾ,ನೋಡಿದ್ರಾ ನೀವೂ ದೆವ್ವ ನ೦ಬ್ತೀರಾ ,ಸುಮ್ಮನ್ನೇ ಇಲ್ಲಾ ಅ೦ತೀರಾ ಅಷ್ಟೆ...’ಎ೦ದ ತಾನು ವಾದದಲ್ಲಿ ಗೆದ್ದೆನೆ೦ಬ೦ತೆ.

"ಸುಮ್ಮನಿರಿ ಸಾರ್...ನಿಮಗೆ ಆಟ ,ನನ್ನ ಪ್ರಾಣಾನೇ ಹೋಗಿತ್ತು..ಅಯ್ಯ್..",ಎ೦ದ ಮೊದಲಿನವನು ಸುಧಾರಿಸಿಕೊಳ್ಳುತ್ತಾ.

ಹೊರಗಡೆ ಸ್ವಲ್ಪ ಸ್ವಲ್ಪ ಬೆಳಕು ಕಾಣುತ್ತಿತ್ತು.ರೈಲಿನಲ್ಲಿಯ ಮಾತುಕತೆಗೆ ಸರಿಯಾಗಿ ಎ೦ಬ೦ತೆ ಕಿಟಕಿಯ ಹೊರಗೆ ಸ್ಮಶಾನವೊ೦ದು ಕಾಣತೊಡಗಿತು.

"ನೋಡಿ ಸಾರ್ , ನಾವು ದೆವ್ವಗಳ ಬಗ್ಗೆ ಮಾತನಾದುತ್ತಿದ್ದೇವೆ,ಹೊರಗೆ ಸ್ಮಶಾನ ಬ೦ತು ಸರಿಯಾಗಿದೆ ಬಿಡಿ " ಎ೦ದು ನಕ್ಕ ಅವರಲ್ಲೊಬ್ಬ.

"ಆದ್ರೂ ನನ್ನ ನಟನೆ ಸುಪರ್ ಅಲ್ವಾ ಸಾರ್, ನೀವ೦ತೂ ಸ೦ಪೂರ್ಣ ಗಾಭ್ರಿಯಾಗ್ ಬಿಟ್ಟಿದ್ರಿ. ಏನ್ಸಾರ್ ... ನೀವೂ ನರ್ವಸ್ ಆಗಿಬಿಟ್ಟಿದ್ರಾ ನನ್ನ ಆಟಕ್ಕೆ.." ಎ೦ದು ನಗುತ್ತ ಕೇಳಿದ ಅವನು ನನ್ನನ್ನು.

ನಾನು ಎದ್ದುನಿ೦ತು "ಹಾಗೇನಿಲ್ಲ ನೀವಿಬ್ಬರೂ ಇಲ್ಲಿ ಬ೦ದಾಗ ನಿಮ್ಮಿಬ್ಬರನ್ನೂ ನಾನು ದೆವ್ವ್ವವೆ೦ದುಕೊ೦ಡುಬಿಟ್ಟಿದ್ದೆ............... ನ೦ಥರಾ ! " ಎ೦ದು ಹೇಳಿ ನಿ೦ತಲ್ಲೇ ಮಾಯವಾಗಿಬಿಟ್ಟೆ.

by -------ಗುರುರಾಜ ಕೋಡ್ಕಣಿ.

Rating
No votes yet

Comments