ಹೊಸ ಪುಸ್ತಕ : ಗುಡ್ ಅರ್ತ್ ಎಂಬ ಕೃಷಿ ಪ್ರಧಾನವಾದ ನೊಬೆಲ್ ಪುರಸ್ಕೃತ ಕಾದಂಬರಿ

Submitted by siddharam on Sat, 11/26/2011 - 21:21

                 ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.ಬಕ್ ಚೀನಾ ದೇಶದಲ್ಲಿ ೫ ವರ್ಷಗಳವರೆಗೆ ಇದ್ದು, ಅಲ್ಲಿನವರಿಗೆ ಕೃಷಿಯ ಬಗೆಗಿರುವ ಒಲವು, ಅಲ್ಲಿನ ಬದುಕಿನ ಬವಣೆಗಳು, ಲಿಂಗ ತಾರತಮ್ಯ, ಮೇಲ್ವರ್ಗದವರ ಶೋಷಣೆ, ಭೂಮಿಯ ಬಗೆಗೆ ಕೃಷಿಕರಿಗಿರುವ ಪ್ರೀತಿ ಎಲ್ಲವನ್ನೂ ತಮ್ಮ ಗುಡ್ ಅರ್ತ್ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ಅದನ್ನು ಇತ್ತೀಚೆಗೆ ಕನ್ನಡಕ್ಕೆ ಅನುವಾದಿಸಿದವರು ಪಾರ್ವತಿ ಜಿ.ಐತಾಳ್.

          ಒಬ್ಬ ರೈತನಿಗೆ ಮಣ್ಣಿನ ಬಗೆಗಿರುವ ಭಕ್ತಿ, ಪ್ರೀತಿ, ತುಡಿತ ಹೇಗಿರುತ್ತದೆಂಬುದನ್ನು ಗುಡ್ ಅರ್ತ್ ಸಮರ್ಥವಾಗಿ ಹಿಡಿದಿಟ್ಟಿದೆ. ಉತ್ತರ ಚೀನಾದಲ್ಲಿನ ವಾಂಗ್‌ಲುಂಗ್ ಎಂಬ ರೈತನ ಮನೆತನವನ್ನು ಆಧಾರವಾಗಿಸಿಕೊಂಡು ಕಾದಂಬರಿಯನ್ನು ಹೆಣೆಯಲಾಗಿದೆ. ವಾಂಗ್‌ಲುಂಗ್‌ನ ತಂದೆ ಹಾಗೂ ವಾಂಗ್‌ಲುಂಗ್ ಆತನ ಮಕ್ಕಳು, ಮೊಮ್ಮಕ್ಕಳು ಕೂಡಿದಂತೆ ಒಟ್ಟು ೪ ತಲೆಮಾರುಗಳ ಕತೆ ಕಾದಂಬರಿಯಲ್ಲಿ ಹಾದುಹೋಗುತ್ತದೆ. ಪುಟ್ಟ ಭೂಮಿಯ ಒಡೆಯನಾಗಿದ್ದ ವಾಂಗ್‌ಲುಂಗ್‌ನಿಗೆ ಮಣ್ಣಿನಲ್ಲಿ ದುಡಿಯುವುದೆಂದರೆ ಅಪಾರ ಪ್ರೀತಿ. ತನ್ನ ಪ್ರಾಣಕ್ಕಿಂತ ಹೆಚ್ಚಿಗೆ ಮಣ್ಣನ್ನು ಪ್ರೀತಿಸಿತ್ತಿರುತ್ತಾನೆ. ಹೀಗಾಗಿ ಮೈಮುರಿದು ದುಡಿದು ನಿಧಾನವಾಗಿ ಭೂಮಿಯನ್ನು ಕೊಳ್ಳುತ್ತ ಹೋಗುತ್ತಾನೆ. ಯಾವುದು ಕೈಬಿಟ್ಟರೂ ಭೂಮಿ ಎಂದಿಗೂ ತನ್ನನ್ನು ನಂಬಿದವರನ್ನು ಕೈಬಿಡುವುದಿಲ್ಲ ಎಂಬ ಸಿದ್ಧಾಂತ ವಾಂಗ್‌ಲುಂಗ್‌ನದು. ಭೂಮಿಯಿಂದ ದೊರೆತ ಪ್ರತಿ ಪೈಸೆಯನ್ನೂ ಜೋಪಾನವಾಗಿಟ್ಟುಕೊಳ್ಳುವ ವಾಂಗ್‌ಲುಂಗ್‌ನಿಗಿರುವ ಆಸೆ ಒಂದೇ ಹೆಚ್ಚು ಭೂಮಿಯನ್ನು ಕೊಂಡು ಹೆಚ್ಚು ದುಡಿಯಬೇಕೆನ್ನುವುದು. ಈ ನಿರ್ಧಾರದಲ್ಲಿ ಆತ ತನ್ನ ಹೆಂಡತಿಯ ಬಗ್ಗೆಯೂ ಕರುಣೆ ಹೊಂದಿರುವುದಿಲ್ಲ. ಹೆಂಡತಿ ಓಲನ್ ಕುರೂಪಿಯಾಗಿದ್ದರೂ ಸಹನೆ, ಕರುಣೆ, ಚಿಂತನಾಪರಳಾಗಿರುತ್ತಾಳೆ. ಪ್ರತಿ ಸಂದರ್ಭದಲ್ಲೂ ವಾಂಗ್‌ಲುಂಗ್‌ನಿಗೆ ಹೆಗಲು ಕೊಡುತ್ತಾಳೆ. ಎಲ್ಲಿಯೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸದೇ ಇರುವುದು, ಚೀನಾ ದೇಶದಲ್ಲಿ ಹೆಣ್ಣಿನ ಬಗೆಗಿರುವ ಅನಾದರವನ್ನು ಎತ್ತಿ ತೋರುತ್ತದೆ. ಹೆರಿಗೆಯ ಸಮಯದಲ್ಲೂ ವಿಶ್ರಾಂತಿ ಪಡೆಯದೇ ದುಡಿಯುವ, ಹೆರಿಗೆಯಾದ ಸಂಜೆಯೇ ಹೊಲಕ್ಕೆ ಮರಳಿ ಬಂದು ಗಂಡನೊಂದಿಗೆ ಸರಿಸಾಟಿಯಾಗಿ ಶ್ರಮಿಸುವ ಓಲನ್‌ಳ ಪಾತ್ರ ಓದುಗರನ್ನು ಹಿಡಿದಿಡುತ್ತದೆ. ಭೋಗದಾಸೆಗೆ ತನ್ನ ಭೂಮಿಯನ್ನೆಲ್ಲ ಮಾರುವ ಊರಿನ ಶ್ರೀಮಂತ ಹುವಾಂಗ್ ಮನೆತನದ ಭೂಮಿಯನ್ನು ಕೊಳ್ಳುತ್ತಾನೆ. ನೆರೆ ಬಂದಾಗ ಕುಗ್ಗದೆ, ಮನುಷ್ಯರನ್ನೇ ತಿನ್ನುವಂತಹ ಬರ ಬಂದಾಗ ಎಲ್ಲವನ್ನೂ ಎದುರಿಸಿ, ದೂರದ ಪಟ್ಟಣಕ್ಕೆ ಹೋಗಿ, ಅಲ್ಲಿನ ಬದುಕಿನ ಬಗ್ಗೆ ತಿರಸ್ಕಾರ ಹೊಂದಿ, ಮತ್ತೆ ಮರಳಿ ತನ್ನ ಊರಿಗೆ ಮರಳಿ ತನ್ನ ಭೂಮಿಯಲ್ಲೇ ತನ್ನ ಶ್ರೇಯಸ್ಸಿದೆ ಎಂದು ಕಂಡುಕೊಂಡ  ವಾಂಗ್‌ಲುಂಗ್ ಶ್ರೀಮಂತಿಕೆಯನ್ನು ಪಡೆಯುತ್ತಾನೆ. ಮಾನವ ಸಹಜ ದೌರ್ಬಲ್ಯಗಳನ್ನೂ ಹೊಂದಿರುವ ವಾಂಗ್‌ಲುಂಗ್ ಬೆಲೆವೆಣ್ಣನ್ನೂ ತಂದಿರಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಆತನಲ್ಲಿ ಉಂಟಾಗುವ ತುಮುಲ, ಕೌಟುಂಬಿಕ ಸಮಸ್ಯೆ ಎಲ್ಲವನ್ನೂ ಪರ್ಲ್ ಬಕ್ ಸಮರ್ಥವಾಗಿ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ. ವಯಸ್ಸಾದ ನಂತರ ವಾಂಗ್‌ಲುಂಗ್ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಮಕ್ಕಳು ಪ್ರೌಢಾವಸ್ಥೆಗೆ ಬಂದು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗುತ್ತಾರೆ. ಬದುಕಿನ ಚಿತ್ರಣ ಬದಲಾದರೂ, ಸಾಮಾಜಿಕ ಬದಲಾವಣೆಗಳಾದರೂ ವಾಂಗ್‌ಲುಂಗ್‌ನಿಗೆ ಮಾತ್ರ ತನ್ನ ಮಣ್ಣಿನ ಬಗೆಗಿರುವ ವ್ಯಾಮೋಹ ಹೋಗುವುದೇ ಇಲ್ಲ. ವ್ಯಾಮೋಹ ಎಂದರೆ ಶ್ರಮ, ದುಡಿಮೆಯ ವ್ಯಾಮೋಹ. ತನ್ನ ಇಬ್ಬರು ಮಕ್ಕಳೂ ಭೂಮಿಯನ್ನು ಮಾರುವ ನಿರ್ಧಾರಕ್ಕೆ ಬಂದಾಗ ವಾಂಗ್‌ಲುಂಗ್‌ನಿಗೆ ಆಘಾತವೆನಿಸುತ್ತದೆ. ಭೂಮಿಯನ್ನು ಮಾರಿದರೆ ಅದೇ ನಮ್ಮ ಕೊನೆ ಎಂಬ ಮಾತನ್ನು ಮಕ್ಕಳಿಗೆ ತಿಳಿಸುತ್ತಾನಾದರೂ ತಂದೆಯ ಮಾತು ಕೇಳುವ ಸ್ಥಿತಿಯಲ್ಲಿ ಮಕ್ಕಳಿರುವುದಿಲ್ಲ. ಅಲ್ಲಿಗೆ ಕಾದಂಬರಿ ಕೊನೆಯಾಗುತ್ತದೆ.

           ಒಟ್ಟಾರೆ ವಾಂಗ್‌ಲುಂಗ್ ರೈತನ ಮೂಲಕ ಕೃಷಿಯಲ್ಲಿರುವ ಬವಣೆ, ಕಷ್ಟನಷ್ಟಗಳು, ಎಲ್ಲವನ್ನೂ ಎದುರಿಸಿ ದುಡಿಯುವ ರೀತಿಯನ್ನು ಪರ್ಲ್‌ಬಕ್ ವಿಶದೀಕರಿಸಿದ್ದಾರೆ. ಸೋಮಾರಿಗಳನ್ನು ಎಂದೂ ಸಹಿಸದ ವಾಂಗ್‌ಲುಂಗ್ ದುಡಿಮೆಯೇ ಮೂಲಮಂತ್ರ ಎನ್ನುತ್ತಾನೆ. ಭೂಮಿಯನ್ನು ಮಾರುವುದರಿಂದ ಅವನತಿ ಆರಂಭ ಎಂಬುದು ವಾಂಗ್‌ಲುಂಗ್‌ನ ನಂಬಿಕೆ. ಸೋಮಾರಿಗಳಾಗದೆ ಭೂಮಿಯನ್ನೇ ನಂಬಿ ದುಡಿದರೆ ಭೂಮಿ ಎಲ್ಲವನ್ನೂ ಕೊಡುತ್ತದೆ ಎಂದು ಕಾದಂಬರಿ ತಿಳಿಸುತ್ತದೆ. ಅಲ್ಲದೆ ಚೀನಾ ದೇಶದ ಜನಜೀವನವನ್ನೂ ತಿಳಿಸುತ್ತದೆ. 
ನೋಬೆಲ್ ಪುರಸ್ಕೃತ ಗುಡ್‌ಅರ್ತ್ ಕಾದಂಬರಿಯನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದವರು ಪಾರ್ವತಿ ಜಿ. ಐತಾಳ್ ಅವರು. ಕಾದಂಬರಿ ಎಲ್ಲಿಯೂ ಅಡೆತಡೆ ಇಲ್ಲದಂತೆ ಓದಿಸಿಕೊಂಡು ಹೋಗುತ್ತದೆ. ಇದಕ್ಕೆ ಮೂಲ ಕಾರಣ ಕನ್ನಡದ ಅನುವಾದ. ಕನ್ನಡಕ್ಕೆ ಉತ್ತಮ ಅನುವಾದ ಕೃತಿಯೊಂದನ್ನು ನೀಡಿರುವ ಪಾರ್ವತಿ ಜಿ.ಐತಾಳ್ ಅಭಿನಂದನಾರ್ಹರು.
 
ಕೃತಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಚೀನೀ ಕಾದಂಬರಿ ಗುಡ್‌ಅರ್ತ್
ಕನ್ನಡಕ್ಕೆ: ಪಾರ್ವತಿ ಜಿ.ಐತಾಳ್
ಬೆಲೆ: ರೂ. ೧೯೫/-
ಪ್ರಕಾಶನ: ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.
ಮೊದಲ ಮುದ್ರಣ: ೨೦೧೧