ಛತ್ರಪತಿ ಶಿವಾಜಿಯ ಮಗ ರಾಜಾರಾಮನನ್ನು ರಕ್ಷಿಸಿದ ಧೀರವನಿತೆ ಕೆಳದಿಯ ರಾಣಿ ಚೆನ್ನಮ್ಮ

ಛತ್ರಪತಿ ಶಿವಾಜಿಯ ಮಗ ರಾಜಾರಾಮನನ್ನು ರಕ್ಷಿಸಿದ ಧೀರವನಿತೆ ಕೆಳದಿಯ ರಾಣಿ ಚೆನ್ನಮ್ಮ

ಭೂಮಹಿತ ಯವನರೊಳ್ ಸಂ
ಗ್ರಾಮದೆ ಮುರಿದೈದಿ ಪೊಕ್ಕ ಮನ್ನೆಯ ರಾಜೇ
ರಾಮನನುರೆ ಕಾಯ್ದು ನೃಪ
ಸ್ತೋಮದೊಳತ್ಯಧಿಕರ್ತಿಯಂ ಮಿಗೆ ಪಡೆದಳ್
[ಕೆಳದಿನೃಪ ವಿಜಯ -೯.೯]

     ವೀರರೆನಿಸಿದ ಮೊಘಲರೊಂದಿಗೆ ನಡೆದ ಯುದ್ಧದಲ್ಲಿ ಸೋತು ಹೋಗಿ ತಪ್ಪಿಸಿಕೊಂಡು ರಕ್ಷಣೆ ಕೋರಿಬಂದ ರಾಜೇರಾಮನಿಗೆ ರಕ್ಷಣೆ ನೀಡಿ ರಾಜರ ಸಮೂಹದಲ್ಲಿ ಅತ್ಯಂತ ಹೆಚ್ಚಿನ ಗೌರವವನ್ನು ಪಡೆದಳು ಎಂಬುದು ಇದರ ಸಾರ. ಈ ರಾಜೇರಾಮ ಬೇರಾರೂ ಅಲ್ಲ, ವೀರ ಛತ್ರಪತಿ ಶಿವಾಜಿಯ ಮಗ ರಾಜಾರಾಮ. ರಕ್ಷಣೆ ನೀಡಿದ ರಾಣಿ ಕೆಳದಿಯ ಧೀರ ವನಿತೆ ಚೆನ್ನಮ್ಮಾಜಿ. ಕೋಟಿಪುರದ ಸಿದ್ದಪ್ಪಶೆಟ್ಟರ ಮಗಳು, ಸೋಮಶೇಖರನಾಯಕನ ಹೆಂಡತಿ ಹಾಗೂ ಶಿಸ್ತಿನ ಶಿವಪ್ಪನಾಯಕನ ಸೊಸೆಯಾಗಿದ್ದ ಚೆನ್ನಮ್ಮ ಕರ್ನಾಟಕದ ಹೆಮ್ಮೆ.

     ಶಿವಾಜಿಯ ನಂತರದಲ್ಲಿ ಪಟ್ಟಕ್ಕೇರಿದ ಮಗ ಸಾಂಬಾಜಿ ಸಹ ಬಲಿಷ್ಠನಾಗಿದ್ದು, ಅವನ ರಾಜ್ಯವನ್ನು ವಶಕ್ಕೆ ಪಡೆಯಲು ಮಾಡಿದ್ದ ಔರಂಗಜೇಬನ ಪ್ರಯತ್ನ ವಿಫಲವಾಗಿತ್ತು. ಈ ಸಂದರ್ಭದಲ್ಲಿ ಬಾದಷಹನ ಅಪಾರ ಹಣ, ಧಾನ್ಯ, ಜಾನುವಾರುಗಳು, ಬಟ್ಟೆ, ಇತ್ಯಾದಿಗಳು ಸಾಂಬಾಜಿಯ ಕೈಸೇರಿದ್ದವು. ಕುಟಿಲೋಪಾಯದಿಂದ ಮಾತ್ರ ಅವನನ್ನು ಮಣಿಸಬಹುದೆಂದು ಮನಗಂಡ ಔರಂಗಜೇಬ ಈ ಕೆಲಸಕ್ಕಾಗಿ ಕಬ್ಜಿ ಎಂದು ಕರೆಯಲ್ಪಡುತ್ತಿದ್ದ ಕವಿಕಳಸನೆಂಬುವನ್ನು ನಿಯೋಜಿಸಿದ್ದ. ಸರ್ವವಿದ್ಯಾಪಾರಂಗತನೆಂದು ಸಾಂಬಾಜಿಗೆ ಗೊತ್ತಾಗುವಂತೆ ಮಾಡಿಕೊಂಡು, ಅವನು ಅಭಿವೃದ್ಧಿ ಹೊಂದಲು ಅನೇಕ ಜಪ, ತಪ, ಇತ್ಯಾದಿಗಳನ್ನು ಮಾಡುವುದಾಗಿ ನಂಬಿಸಿ ಅನೇಕ ಗಿಡಮೂಲಿಕೆಗಳನ್ನು ಸೇವಿಸುವಂತೆ ಮಾಡಿದ್ದಲ್ಲದೆ ಅನೇಕ ರೀತಿಗಳಿಂದ ಸಾಂಬಾಜಿ ಮತಿಭ್ರಾಂತ ಹಾಗೂ ವಿಷಯಲೋಲುಪನಾಗುವಂತೆ ಮಾಡುವಲ್ಲಿ ಕವಿಕಳಸ ಯಶಸ್ವಿಯಾಗಿದ್ದ. ಒಮ್ಮೆ ಸಾಂಬಾಜಿ ಸಂಗಮೇಶ್ವರ ನದೀತೀರದಲ್ಲಿ ಸ್ತ್ರೀಯರ ಸಮೂಹದೊಂದಿಗೆ ವಿಹರಿಸುತ್ತಿದ್ದ ಸಂದರ್ಭದಲ್ಲಿ ಕಬ್ಜಿಯ ರಹಸ್ಯ ಸೂಚನೆಯಂತೆ ಔರಂಗಜೇಬ ಕಳುಹಿಸಿದ್ದ ಶೇಕು ನಿಜಾಮನಿಂದ ಸೆರೆಹಿಡಿಯಲ್ಪಟ್ಟ. ಸಾಂಬಾಜಿಯ ಕಾವಲುಭಟರೂ ತಮಗೆ ಸಿಕ್ಕಿದ ಹೇರಳ ಉಡುಗೊರೆಗಳಿಗೆ ಮರುಳಾಗಿ ದ್ರೋಹ ಬಗೆದಿದ್ದರು. ಸೆರೆಸಿಕ್ಕ ನಂತರದಲ್ಲಿ ಔರಂಗಜೇಬನ ಆಣತಿ ಧಿಕ್ಕರಿಸಿ ಸಲಾಮು ಮಾಡಲು ನಿರಾಕರಿಸಿದ ಸಾಂಬಾಜಿಗೆ ಮುಸಲ್ಮಾನನಾದರೆ ಬಿಡುಗಡೆ ಮಾಡುವುದಾಗಿ ತಿಳಿಸಲಾಯಿತು. ಔರಂಗಜೇಬನ ಮಗಳು ಬೇಗಮಳನ್ನು ಕೊಟ್ಟರೆ ಮುಸಲ್ಮಾನನಗುವುದಾಗಿ ಹೇಳಿದ ಸಾಂಬಾಜಿಗೆ ಮರಣದಂಡನೆ ವಿಧಿಸಲಾಯಿತು. ಸಾಂಬಾಜಿಯನ್ನು ಸೆರೆ ಹಿಡಿಯಲು ಸಹಕರಿಸಿದ ಕಬ್ಜಿಯ ತಲೆಯನ್ನೂ ಕನಿಕರವಿಲ್ಲದೆ ಕಡಿದುರುಳಿಸಿದ್ದರು.  (ಔರಂಗಜೇಬನ ಮಗಳೂ ಸಹ ಸಾಂಬಾಜಿಯನ್ನು ಕಂಡು ಅನುರಕ್ತಳಾಗಿದ್ದಳು. ಸಾಂಬಾಜಿಯ ಹತ್ಯೆಯ ನಂತರ ಅವಳೂ ಮದುವೆಯಾಗದೆ ಉಳಿದಿದ್ದಳು. ಸಾಂಬಾಜಿಯ ಮಗನನ್ನು ತನ್ನ ಮಗನಂತೆಯೇ ಸಲಹಿದ್ದಳು. ಮಗಳ ಮೇಲಿನ ಮೋಹದಿಂದ ಇದಕ್ಕೆ ಔರಂಗಜೇಬನ ಒಪ್ಪಿಗೆಯೂ ಸಿಕ್ಕಿತ್ತು). 

   ಸಾಂಬಾಜಿ ಮೋಸದಿಂದ ಸೆರೆಸಿಕ್ಕು ಹತನಾದ ನಂತರ ರಾಜಾರಾಮ ಪಟ್ಟಾಭಿಷಿಕ್ತನಾದ. ಅವನನ್ನೂ ಸೆರೆಹಿಡಿಯಲು ಅಬ್ದುಲ್ ಖಾನನ ನೇತೃತ್ವದಲ್ಲಿ ಯವನರ ದೊಡ್ಡ ಸೈನ್ಯ ಪನ್ನಾಳಿಗೆ ಮುತ್ತಿಗೆ ಹಾಕಿದಾಗ ಆ ದೊಡ್ಡ ಸೈನ್ಯವನ್ನು ಎದುರಿಸಲಾರದೆ ರಾಜಾರಾಮ ಓಡಿಹೋಗಿ ಹೊನ್ನಾಳಿಗೆ ಬಂದು, ರಾಣಿ ಚೆನ್ನಮ್ಮಾಜಿಗೆ ಶರಣಾಗಿ ತನಗೆ ರಕ್ಷಣೆ ನೀಡಬೇಕೆಂದೂ ಹಾಗೂ ರಾಜ್ಯದ ಗಡಿ ದಾಟಲು ನೆರವಾಗಬೇಜೆಂದು ಕೋರಿದ. ಚೆನ್ನಮ್ಮ ರಾಣಿ ತನ್ನ ಆಪ್ತವರ್ಗದವರು, ಸಬುನೀಸ ಕೋಳೀವಾಡದ ಬೊಮ್ಮಯ್ಯ, ಬೊಕ್ಕಸದ ಸಿದ್ಧಬಸವಯ್ಯ ಮುಂತಾದ ಮಂತ್ರಿಗಳನ್ನು ಸೇರಿಸಿ ಮಂತ್ರಾಲೋಚನೆ ನಡೆಸಿ 'ಡಿಳ್ಳಿಯವರಂಗಜೇಬ ಪಾತುಶಾಹನೇ ಮುನಿದೈತಂದೆಮ್ಮ ಸಂಸ್ಥಾನಮಂ ತೆಗೆದುಕೊಂಡೊಡಂ ಕೊಳಲೇನಾದೊಡಂ ಮರೆಪೊಕ್ಕವನಂ ಕೊಡುವುದು ರಾಜಧರ್ಮಮಲ್ತೆಂದಿಂತು ಮತಮಂ ನಿಶ್ಚಯಂಗೈದು' (ಕೆ.ನೃ.ವಿ.-೯.೫೩.ವ.) ಮಾರುವೇಶದಲ್ಲಿ ರಾಜಾರಾಮನನ್ನು ಶಿವಮೊಗ್ಗ ಮಾರ್ಗವಾಗಿ ಗಾಜನೂರು ಹೊಳೆ ದಾಟಿಸಿ ಕಾಡುಮಾರ್ಗದ ಮೂಲಕ ಬೊರೆನೆಡೆಹಳ್ಳಿ, ಆಡುವಳ್ಳಿ, ಕಳಸ, ಖಾಂಡ್ಯ, ವಸುಧಾರೆ ಹಾದು ಚಂದಿಯಗಡ ತಲುಪಿಸಿದಳು.

     ಅಷ್ಟರಲ್ಲಿ ಹೊನ್ನಾಳಿಗೆ ಬೆನ್ನಟ್ಟಿಬಂದ ರಣಮಸ್ತಖಾನ ಮೊದಲಾದ ವಜೀರರು ರಾಜಾರಾಮನನ್ನು ತಮ್ಮ ವಶಕ್ಕೆ ಕೊಡಲು ಚನ್ನಮ್ಮಾಜಿಗೆ ಆಗ್ರಹಿಸಿದರು. ರಾಣಿ ಚೆನ್ನಮ್ಮನಾದರೋ ಆಲೋಚನೆ ಮಾಡಿ 'ತಮ್ಮ ರಾಷ್ಟ್ರಕ್ಕಾಗಿಯವಂ ಬಿಚ್ಚಾಳಾಗಿ ಪೋದುದಹುದಾವಾಳುತ್ತಿಳೆಯೊಳಿಲ್ಲ' (ಅವನು ತಮ್ಮ ರಾಜ್ಯದ ಮೂಲಕ ಹಾದು ಹೋದುದು ನಿಜವೆಂದೂ, ಅವನಿಗೆ ಅಡ್ಡಿಪಡಿಸಲಿಲ್ಲವೆಂದೂ, ಈಗ ಅವನು ತಮ್ಮ ರಾಜ್ಯದ ವ್ಯಾಪ್ತಿಯಲ್ಲಿಲ್ಲವೆಂದೂ) ತಿಳಿಸಿದಳು. ಹಾಗೆ ಅವನು ಹೋದ ಸಂದರ್ಭದಲ್ಲಿ ವಶವಾದ ಆತನಿಗೆ ಸೇರಿದ ಬಟ್ಟೆ, ಆಭರಣ, ಕುದುರೆ, ಇತ್ಯಾದಿ ವಸ್ತುಗಳನ್ನು ಆ ವಜೀರರ ವಶಕ್ಕೆ ಕೊಟ್ಟಳು. ವಜೀರರಿಂದ ಬಂದ ವರ್ತಮಾನದಿಂದ ಕ್ರುದ್ಧನಾದ ಔರಂಗಜೇಬ ತನ್ನ ಮಗ ಅಜಮತಾರನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನೇ ಕಳುಹಿಸಿ ಕೆಳದಿಯನ್ನು ವಶಪಡಿಸಿಕೊಳ್ಳಲು ಕಳುಹಿಸಿದನು. ಮಹದೇವಪುರದ ಕೋಟೆ ವಶಪಡಿಸಿಕೊಂಡ ಮೊಘಲರು ಆನಂದಪುರ ಕೋಟೆ ವಶಪಡಿಸಿಕೊಳ್ಳಲು ಮುಂದುವರೆಯಿತು. ಚೆನ್ನಮ್ಮಾಜಿ ಭುವನಗಿರಿಯ ಮಾರ್ಗದಲ್ಲಿ ಹೇರಳವಾದ ಕಾಲ್ದಳದೊಂದಿಗೆ ಧಾವಿಸಿ ತುರುಕರ ಸೈನ್ಯವನ್ನು ಅವರು ಇತರ ಮಾರ್ಗಗಳಲ್ಲಿ ತಪ್ಪಿಸಿಕೊಂಡು ಹೋಗದಂತೆ ಕಂಡಿ, ಕಣಿವೆಗಳನ್ನೂ ಮುಚ್ಚಿಸಿ ಮದ್ಯದಲ್ಲಿ ಸಿಕ್ಕಿಸಿ ಉಗ್ರ ಹೋರಾಟ ನಡೆಸಿ ಧೂಳೀಪಟ ಮಾಡಿದಳು. ಔರಂಗಜೇಬನ ಸೈನ್ಯ ಸೋಲೊಪ್ಪಿ ಹಿಮ್ಮೆಟ್ಟಿತು. ಕೆಳದಿ ಸಂಸ್ಥಾನವೇ ಅಪಾಯಕ್ಕೆ ಸಿಲುಕುವ ಸಂಭವನೀಯತೆ ತಿಳಿದಿದ್ದೂ ಶರಣಾಗಿ ಬಂದ ರಾಜಾರಾಮನನ್ನು ರಕ್ಷಿಸಿ ರಾಜಧರ್ಮ ಪಾಲಿಸಿದ ಹೆಮ್ಮೆಯ ಕನ್ನಡ ಕುವರಿ ರಾಣಿ ಚೆನ್ನಮ್ಮ. ಮರಾಠೀ ಇತಿಹಾಸಕಾರರೂ ಚನ್ನಮ್ಮನ ಈ ಸಾಹಸವನ್ನು ಕೊಂಡಾಡಿದ್ದಾರೆ.

[ಆಧಾರ: ಲಿಂಗಣ್ಣಕವಿಯ ಕೆಳದಿನೃಪ ವಿಜಯ]

     ಕೆಳದಿಯ ವೀರಭದ್ರ ದೇವಾಲಯದ ಎದುರಿಗೆ ಇರುವ ಧ್ವಜಸ್ತಂಭದಲ್ಲಿರುವ ಶಿಲ್ಪ. ಇದರಲ್ಲಿ ಕೆಳದಿ ರಾಣಿ ಚೆನ್ನಮ್ಮ, ಶಿವಾಜಿಯ ಮಗ ರಾಜಾರಾಮ ಮತ್ತು ಅವನ ಸೇವಕ, ಸೇವಿಕೆಯರನ್ನು ಕಾಣಬಹುದು. (ದಿನಾಂಕ ೨೮.೧೧.೧೧ರಂದು ಕೆಳದಿಗೆ ಭೇಟಿ ನೀಡಿದಾಗ ತೆಗೆದ ಫೋಟೋ).

********************************

ಸಾಂದರ್ಭಿಕವಾಗಿ ಲೇಖಕನ ಅನಿಸಿಕೆ:

ಬೆಳಗಾವಿ ಮುಂದಿಟ್ಟುಕೊಂಡು ಭಾಷಾಂಧರು ನಡೆಸುತ್ತಿರುವ ಕೃತ್ಯಗಳಿಂದ ಕನ್ನಡ, ಮರಾಠಿ ಭಾಷಿಕರಿಗೂ, ಭಾಷೆಗಳಿಗೂ ಕೆಡುಕಾಗುವುದೇ ಹೊರತು ಒಳಿತಾಗಲಾರದು.

-ಕ.ವೆಂ.ನಾಗರಾಜ್.

 

Comments