ಒಂದು ಹಳೆಯ ಚಿತ್ರಗೀತೆ: "ಶುಭಾಶಯ... ಶುಭಾಶಯ...."

ಒಂದು ಹಳೆಯ ಚಿತ್ರಗೀತೆ: "ಶುಭಾಶಯ... ಶುಭಾಶಯ...."

ಒಂದೆರಡು ದಶಕಗಳ ಹಿಂದೆ, ಮದುವೆ ನಡೆಯುವ ಸಂದರ್ಭದಲ್ಲಿ, ಧ್ವನಿವರ್ಧಕಗಳ ಮೂಲಕ ಒಂದು ಮಧುರವಾದ ಹಾಡು, ಅನಿವಾರ್ಯವೆಂಬಂತೆ ಯಾವಾಗಲೂ ಕೇಳಿಬರುತ್ತಿತ್ತು. ಧ್ವನಿವರ್ಧಕದವರು ತಮ್ಮ ಪರಿಕರಗಳನ್ನು ಜೋಡಿಸಿದ ಕೂಡಲೆ, ಗಣೇಶನ ಸ್ತುತಿಯ ಹಾಡನ್ನು ಹಾಕುತ್ತಿರುವಂತೆಯೇ, ಸೀತಾ ಚಿತ್ರದ ಒಂದು ಗೀತೆಯನ್ನು ಬಿತ್ತರಿಸುತ್ತಿದ್ದರು. ಈ ಹಾಡನ್ನು ಬರೆದ ಕವಿಗೆ, ಸಂಗೀತ ಸಂಯೋಜಕರಿಗೆ ಮತ್ತು ಮುಖ್ಯವಾಗಿ ಇದನ್ನು ಮಧುರವಾಗಿ ಹಾಡಿದ ಗಾಯಕ     ಎಸ್.ಪಿ.ಬಿ. ಅವರಿಗೆ ಅದೆಷ್ಟು ನವ ದಂಪತಿಗಳು ತಮ್ಮ ಧನ್ಯವಾದಗಳನ್ನು ಸಮರ್ಪಿಸಿರಬಹುದೋ, ನಿಜಕ್ಕೂ ಲೆಕ್ಕಕ್ಕೆ ಸಿಗಲಾರದು.
        ಶುಭಾಶಯ, ಶುಭಾಶಯ
        ಮದುಮಗಳಿಗೂ, ಮದುಮಗನಿಗೂ
        ಶುಭಾಶಯ||
        ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ.
        ಮದುವೆಯ ಈ ಬಂಧ, ಅನುರಾಗದ ಅನುಬಂಧ     
        ಏಳೇಳು ಜನುಮದಲೂ ತೀರದ ಸಂಬಂಧ||


        ಮನಸನ್ನು ಅರಿತು ಒಂದಾಗಿ ಬೆರೆತು
        ನಡೆದಾಗ ಬಾಳು ಕವಿತೆ
        ನೂರೊಂದು ವರುಷ ಚೆಲ್ಲಿರಲಿ ಹರುಷ
        ಬೆಳಗಿರಲಿ ಒಲವ ಹಣತೆ||
 
        ಸಿರಿತನದ ಸಿಹಿಯು ಬಡತನದ ಕಹಿಯು
        ನಿಮಗೆಂದು ಒಂದೆ ಇರಲಿ||
        ಸಮನಾದ ರೀತಿ ತೋರುವುದೆ ಪ್ರೀತಿ
        ಬಿರುಗಾಳಿ ಏನೆ ಬರಲಿ||
 
ಈ ಹಾಡಿನಲ್ಲಿ ಕ್ಲೀಷೆ ಅನ್ನಿಸಬಹುದಾದ ಕೆಲವು ಸಾಲುಗಳಿದ್ದರೂ, ಮದುವೆಯ ಪವಿತ್ರ ಸಂಬಂಧಕ್ಕೆ ಹೊಂದುವ ಹಲವು        ವಿಚಾರಗಳು ಸರಳವಾಗಿ ಮೂಡಿಬಂದಿವೆ. ಸರಳತೆಯೇ ಈ ಗೀತೆಯ ಸಾಹಿತ್ಯದ ತಿರುಳು.


     ಅಂದಿನ ಗಾಯಕರೇ ಹಾಗೆ. ಹಾಡಿನ ಭಾವ ಮತ್ತು ರಸಕ್ಕೆ ಅನುಗುಣವಾಗಿ, ಧ್ವನಿಯಲ್ಲಿ ಏರಿಳಿತ ತೋರಿ ಹಾಡುವಲ್ಲಿ ತಮ್ಮ ಪ್ರಾವಿಣ್ಯತೆ ಮೆರೆಯುತ್ತಾರೆ. ಉದಾಹರಣೆಗೆ ಸಾಕ್ಷಾತ್ಕಾರ ಚಿತ್ರದ ಹಾಡುಗಳನ್ನು ಹಾಡುವಲ್ಲಿ, ಪಿ.ಬಿ.ಶ್ರೀನಿವಾಸ್ ತೋರಿದ ಧ್ವನಿ ವೈವಿಧ್ಯತೆಯನ್ನು ಗಮನಿಸಬಹುದು. ಒಲವೆ ಜೀವನ ಸಾಕ್ಷಾತ್ಕಾರ  ಎಂಬ ಯುಗಳ ಗೀತೆಯಲ್ಲಿ, ಹೆಣ್ಣು ಧ್ವನಿಯು ಮೊದಲಿಗೆ ಬಂದು, ಅದನ್ನು ಅನುಸರಿಸಿ, ಪಿ.ಬಿ.ಎಸ್. ಹಾಡುವಾಗ, ನಾವು ಕೇಳುವ ಧ್ವನಿಯೇ ಬೇರೆ, ಅದೇ ಚಿತ್ರದ ಕೆಳಕಂಡ ಇನ್ನೊಂದು ಹಾಡನ್ನು ಅವರು ಹೇಳುವ ಧ್ವನಿಯೇ ಬೇರೆ-
 
        ಜನ್ಮ ಜನ್ಮದಾ ಅನುಬಂಧ
        ಹೃದಯ ಹೃದಯಗಳ ಪ್ರೇಮಾನುಬಂಧ||
        ಅನಂತ ಪ್ರಕೃತಿಯ ಲಾವಣ್ಯದಂತೆ
        ಲಾವಣ್ಯವತಿಯರ ವಯ್ಯಾರದಂತೆ
        ಶೃಂಗಾರ ಕಾವ್ಯದ ರಸಲಹರಿಯಂತೆ
        ತುಂಗ ಭದ್ರ ಸಂಗಮದಂತೆ||ಜನ್ಮಜನ್ಮದಾ||
 
ಮಧುರತೆಯೇ ಮೈವೆತ್ತ ಪಿ.ಬಿ.ಶ್ರೀನಿವಾಸ್ ಧ್ವನಿಯಲ್ಲಿ ಈ ರೀತಿಯ ಕೆಲವು ಹಾಡುಗಳನ್ನು ಕೇಳುವುದೇ ಒಂದು ಒಳ್ಳೆಯ ಅನುಭವ.
     ತಮ್ಮ ಧ್ವನಿಯಲ್ಲಿ ಪ್ರೀತಿಯೇ ಒಸರುವಂತೆ ಪಿ.ಬಿ.ಎಸ್. ಹಾಡಿರುವ ಕೆಲವು ಪ್ರೇಮಗೀತೆಗಳಿಗೆ ಮನಸೋಲದ ಕನ್ನಡಿಗರೇ ಇಲ್ಲವೆನ್ನಬಹುದು. ಮಧುರ ಧ್ವನಿಯ ಜೊತೆ, ಆ ಹಾಡಿನ ಭಾವವನ್ನು ಬಿಂಬಿಸುವ ಕೆಲವು ಹಳೆಯ ಚಿತ್ರಗೀತೆಗಳು, ಕನ್ನಡ ಸಂಗೀತ ಪ್ರಪಂಚದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವುದಲ್ಲದೇ, ಪಿ.ಬಿ.ಶ್ರೀನಿವಾಸ್ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿಸಿವೆ.
     ಕುಲವಧು ಚಿತ್ರದಲ್ಲಿ ಪಿ.ಬಿ.ಎಸ್. ಹಾಡಿರುವ ಒಂದು ಮಧುರಗೀತೆಯ ಚರಣದಲ್ಲಿ, ಮಧುರಗೀತೆ ಎಂಬ ಶಬ್ದ ಬೆಸೆದುಕೊಂಡುರುವುದು ಒಂದು ವಿಶೇಷ.
 
        ಒಲವಿನ ಪ್ರಿಯಲತೆ, ಅವಳದೇ ಚಿಂತೆ,
        ಅವಳ ಮಾತೆ ಮಧುರ ಗೀತೆ, ಅವಳೆ ಎನ್ನ ದೇವತೆ
        ಮರೆಯದಂಥ ಪ್ರೇಮ ರಾಶಿ,
        ಹೃದಯದಾಶಾ ರೂಪಸಿ
        ಮನದೊಳಾಡೊ ಆ ವಿಲಾಸಿ, ಒಲಿದು ಬಂದು ಪ್ರೇಯಸಿ
 
     ಈ ಹಾಡಿನ ಧ್ವನಿಯ ಏರಿಳಿತ ಮತ್ತು ಗಾಂಧಿನಗರ ಚಿತ್ರದ ಒಂದು ಗೀತೆಯ ಧ್ವನಿಯನ್ನು ನೆನಪಿಸಿಕೊಂಡರೆ, ಪಿ.ಬಿ.ಎಸ್. ಅವರ ಧ್ವನಿ ಪ್ರೇಮಗೀತೆಗಳಿಗೆ ಅದೆಷ್ಟು ಸರಿಯಾಗಿ ಹೊಂದುತ್ತದೆಂಬುದು ಸ್ಪಷ್ಟವಾಗುತ್ತದೆ.
 
        ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ
        ನಿನಗೆಂದೇ ಬರೆದ ಪ್ರೇಮದ ಓಲೆ
        ಅದನೋದಲು ಹರಿವುದು ಜೇನಿನಾ ಹೊಳೆ
ಈ ಹಾಡಿನ ಶೈಲಿಯನ್ನೇ ನೆನಪಿಸುವ ಮತ್ತೊಂದು ಗೀತೆ  ಕಸ್ತೂರಿ ನಿವಾಸ  ಚಿತ್ರದ್ದು. 
 
        ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ
        ನಕ್ಕು ನೀ ನಲಿದಾಗ, ಸೋತೆ ನಾನಾಗ
        ವಾಸಂತಿ ನಲಿದಾಗ, ಹಸಿರುಟ್ಟು ನಗುವಾಗ
        ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
        ಮುಗಿಲೊಂದು ಕವಿದಾಗ, ನವಿಲೊಂದು ಕುಣಿದಾಗ
        ಒಡಲಲ್ಲಿ ಹೊಸದೊಂದು ನವಜೀವ ಬಂದಾಗ 
        ಕೈ ಕೈ ಸೋತಾಗ ಮನವೆರಡು ಬೆರೆತಾಗ
        ಮಿಡಿದಂಥ ಹೊಸರಾಗ ಅದುವೇ ಅನುರಾಗ, ಬಾರಾ.
 
ಹೀಗೆ ಪಿ.ಬಿ.ಎಸ್. ಹಾಡಿದ ಮಧುರ ಗೀತೆಗಳ ಕುರಿತು ಎಷ್ಟು ಬರೆದರೂ ಕಡಿಮೆಯೇ ಅನ್ನಬಹುದು. ಕನ್ನಡದ ಸಾರ್ವಕಾಲಿಕ ಮಧುರ ಗೀತೆಗಳ ಪಟ್ಟಿಮಾಡಿದರೆ, ಅದರಲ್ಲಿ  ಪಿ.ಬಿ.ಶ್ರೀನಿವಾಸ್ ಹಾಡಿದ ಹಲವಾರು ಹಳೆಯ ಚಿತ್ರಗೀತೆಗಳು ಅಗ್ರ ಸ್ಥಾನದಲ್ಲಿ ನಿಲ್ಲುತ್ತವೆ. ಸೀತಾ ಚಿತ್ರ ಈ ಒಂದು ಹಾಡು ಎಲ್ಲಾ ಪ್ರೇಮಿಗಳ ಮನದಲ್ಲೂ ತನ್ನ ಛಾಪನ್ನು ಮೂಡಿಸಿರಲೇಬೇಕು.
 
        ಬರೆದೆ ನೀನು ನಿನ್ನ ಹೆಸರ, ನನ್ನ ಬಾಳ ಪುಟದಲಿ
        ಬಂದು ನಿಂತೆ ಹೇಗೊ ಏನೊ ನನ್ನ ಮನದ ಗುಡಿಯಲಿ.
        ಮಿಡಿದೆ ನೀನು ಪ್ರಣಯನಾದ, ಹೃದಯ ವೀಣೆ ಅದರಲಿ
        ಬೆರೆತು ಹೋದೆ ಮರೆತು ನಿಂದೆ ಅದರ ಮಧುರ ಸ್ವರದಲಿ.
        ಕಂಗಳಲ್ಲೇ ಕವನ ಬರೆದು ಕಳಿಸಿದೆ ನೀ ಇಲ್ಲಿಗೆ
        ಅಂಗಳದಿ ಅರಳಿದಾಗ, ನನ್ನ ಒಲವ ಮಲ್ಲಿಗೆ.
 
ನಾ ಮೆಚ್ಚಿದ ಹುಡುಗ ಚಿತ್ರದ ಯುಗಳಗೀತೆಯೊಂದರಲ್ಲಿ, (ಸಹ ಗಾಯಕಿ ಪಿ.ಸುಶೀಲ), ಶ್ರೀನಿವಾಸ ಅವರ ಮಧುರ ಕಂಠ ಹೊರೆಡಿಸುವ ಪ್ರೀತಿಯ ಕಂಪನ, ಅಂತಹ ಸಾರ್ವಕಾಲಿಕ ಮಧುರತೆಗೆ ಒಂದು ಉದಾಹರಣೆ:
 
        ಬೆಳದಿಂಗಳಿನಾ ನೊರೆ ಹಾಲು ಕೊಡದಲಿ ತುಂಬಿ ತಂದವಳೆ     
        ಹೊಳೆಯುವ ತಾರೆಯ ಹೊಂಬೆಳಕು
        ಕಣ್ಣಲಿ ಸೂಸಿ ತಂದವಳೆ.
        ಬಾ ಬಾರೆ, ಓ ಗೆಳತಿ ಜೀವನ ಸಂಗಾತಿ.
        ಮಲ್ಲಿಗೆ ಹಂಬಿನ ತೋಟದಲಿ, ಚಂದಿರನಂತೆ ಬಂದವನೆ
        ಅರಿಯದ ಹೆಣ್ಣಿನ ಹೃದಯದಲಿ, ಸುಮಧುರ ನೋವನು ತಂದವನೆ
        ಬಾಬಾರೋ, ಓ ಗೆಳೆಯ, ಜೀವನ ಸಂಗಾತಿ.
 
ಪಿ.ಬಿ.ಶ್ರೀನಿವಾಸ ಹಾಡಿದ, ವಧೂವರರಿಗೆಂದೇ ಮೀಸಲಾದ, ಶುಭಾಶಯ, ಶುಭಾಶಯ ಗೀತೆ ಮತ್ತು ನವ ದಂಪತಿಗಳಿಗೆ ಸೂಕ್ತವೆನಿಸುವ, ಈ ಮೇಲಿನ ಬೆಳದಿಂಗಳಿನಾ . . .  ಹಾಡುಗಳು, ಎಲ್ಲಾ ಮದುವೆ ಮಂಟಪಗಳಲ್ಲಿ ಸದಾ ಅನುರಣನ ಗೊಳ್ಳುತ್ತಿರಲಿ ಎಂದು ಅನಿಸಿದರೆ, ಅದಕ್ಕೆ ಪಿ.ಬಿ.ಶ್ರೀನಿವಾಸ್ ಅವರ ಮಧುರ ಧ್ವನಿಯೇ ಕಾರಣ.
 
 
      

 

Comments