ರಾಮಾಯಣದಲ್ಲಿ ಶಬರಿಯ ಪ್ರಸಂಗ: ಒಂದು ವಿಚಾರ

ರಾಮಾಯಣದಲ್ಲಿ ಶಬರಿಯ ಪ್ರಸಂಗ: ಒಂದು ವಿಚಾರ

ಶಬರಿ ರಾಮನಿಗೆ ಹಣ್ಣು ಸಮರ್ಪಣೆ ಮಾಡುತ್ತಿರುವುದು

ಚಿತ್ರ ಕೃಪೆ: ವಿಕಿಪೀಡಿಯ

        ರಾಮಾಯಣದಲ್ಲಿ ಶಬರಿ ರಾಮನಿಗೆ ಹಣ್ಣು ತಿನ್ನಿಸುವ ಒಂದು ಪ್ರಸಂಗ ಬರುತ್ತದೆ; ಅದರಲ್ಲಿ ಅವಳು ಬೋರೆ ಅಥವಾ ಬಾರೆ ಹಣ್ಣನ್ನು ಕಚ್ಚಿ ರುಚಿ ನೋಡಿ ಅದರಲ್ಲಿ ಚೆನ್ನಾಗಿರುವ ಹಣ್ಣುಗಳಷ್ಟನ್ನೇ ರಾಮನಿಗೆ ನೈವೇದ್ಯವಾಗಿ ಅರ್ಪಿಸುತ್ತಾಳೆ. ಅವಳು ಕೊಟ್ಟ ಎಂಜಿಲ ಹಣ್ಣನ್ನು ಕ್ಷತ್ರಿಯ ಕುಲದಲ್ಲಿ ಹುಟ್ಟಿದ ರಾಮ ತಿನ್ನುತ್ತಾನೆ. ಅದರ ಬಗ್ಗೆ ಹಿರಿಯರನ್ನು ವಿಚಾರಿಸಿದಾಗ ಅವರು ಹೇಳುತ್ತಿದ್ದುದ್ದು ಭಗವಂತನಿಗೆ ತನ್ನ ಭಕ್ತರು ಪ್ರೀತಿಯಿಂದ ಏನೇ ಅರ್ಪಿಸಿದರೂ ಅದು ಯಾವುದೇ ರೀತಿಯಲ್ಲಾದರೂ ಅವನಿಗೆ ಪ್ರಿಯವಾದುದ್ದರಿಂದ ರಾಮ ಅವಳು ಕಚ್ಚಿ ಕೊಟ್ಟ ಹಣ್ಣನ್ನು ತಿಂದ ಎನ್ನುವುದು. ಇದು ಬಹುತೇಕ ಎಲ್ಲರಿಗೂ ತಿಳಿದ ವಿಷಯವೇ. ಆ ಒಂದು ಪ್ರಸಂಗ ನಮಗೆ ವಾಲ್ಮೀಕಿ ವಿರಚಿತ ಮೂಲ ರಾಮಾಯಣದಲ್ಲಿ ಕಂಡು ಬರುವುದಿಲ್ಲ ಇದರ ಬಗ್ಗೆ ಮೂಲ ವಾಲ್ಮೀಕಿ ರಾಮಾಯಣವನ್ನು ಕನ್ನಡಕ್ಕೆ ಅನುವಾದ ಮಾಡಿರುವ ಲೇಖಕರು  ಕೂಡ ತಿಳಿಸುತ್ತಾರೆ. ಶಬರಿ ರಾಮನಿಗೆ ಹಣ್ಣು ತಿನ್ನಿಸುವ ಪ್ರಸಂಗವೇ ಇಲ್ಲವೆಂದೂ ಅದು ಹೇಗೆ ಆ ಕತೆ ಪ್ರಚಲಿತಕ್ಕೆ ಬಂತೋ ತಿಳಿಯದೆಂದು ಬರೆದಿರುತ್ತಾರೆ. ಹೀಗೆಯೇ ಹತ್ತು ಹಲವಾರು ಕಥೆಗಳನ್ನು ಕಟ್ಟಿ ಮೂಲ ಕಥೆಗೆ ಜೋಡಿಸಿರ ಬಹುದೆನಿಸುತ್ತದೆ. ಅದೇನೇ ಇರಲಿ ಇಲ್ಲಿ ಈ ಕಥೆಯನ್ನು ಹೆಣೆದವರ ಉದ್ದೇಶವೇ ಬೇರೆ ಇದ್ದಂತೆ ಕಾಣುತ್ತದೆ. ನನಗೆ ಅನಿಸಿದ ಮಟ್ಟಿಗೆ ಅದನ್ನು ಹೀಗೆ ಅರ್ಥೈಸಬಹುದೆನಿಸುತ್ತದೆ. ಭಗವಂತನು ನಮಗೆ ಒಳ್ಳೆಯ ಮತ್ತು ಕೆಟ್ಟ ಎನ್ನುವ ಎರಡೂ ರೀತಿಯ ಫಲಗಳನ್ನೂ ಉಣ್ಣುವುದಕ್ಕಾಗಿ ಕೊಡುತ್ತಾನೆ. ನಾವು ಎಲ್ಲವನ್ನೂ ಅನುಭವಿಸಿ/ರುಚಿ ನೋಡಿ ಕೆಟ್ಟದ್ದನ್ನು ಇಲ್ಲಿಯೇ ಬಿಟ್ಟು ಒಳ್ಳೆಯ ಫಲಗಳನ್ನು ಮಾತ್ರ ಭಗವಂತನಿಗೆ ಮರು ಸಮರ್ಪಣೆ ಮಾಡಬೇಕು

Comments