ಆಶಯ

ಆಶಯ

 

ಹಿರಿಯರಿಗೆ ನಮಿಸೇವು ಸಾಧಕರ ನೆನೆದೇವು 
ಅನುಸರಿಸಿ ನಡೆದೇವು ಸಾಧನೆಯ ಮಾಡೇವು

ಹೆತ್ತವರ ಪೋಷಕರ ಪ್ರೀತಿಯಲಿ ಬೆಳೆದಿಹೆವು 
ಬಂಧುಗಳ ಸ್ನೇಹಿತರ ವಿಶ್ವಾಸ ಸವಿದಿಹೆವು
ನಲ್ಮೆಯಲಿ ಕಲಿಸಿರುವ ಗುರುಗಳನೆ ಪಡೆದಿಹೆವು
ಎಲ್ಲರನು ನೆನೆದೇವು ಎಲ್ಲರಿಗೆ ನಮಿಸೇವು

ಸ್ವಂತಿಕೆಯ ಮೆರೆದಿರುವ ಪೂರ್ವಜರ ನೆನೆದೇವು
ಬಾಳಿಗೊಂದು ದಿಸೆಯನಿತ್ತ ಚೇತನಕೆ ಬಾಗೇವು
ಸಾಧಕರ ಪಥವಿಹುದು ತೆರೆದಿರುವ ಹಾದಿಯದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಗೆದ್ದು ನಗೆಯ ಬೀರೇವು

ಬರಿಗೈಲಿ ಬಂದವರು ಸಂಪದವ ಪಡೆದಿಹೆವು
ಅಶನ ವಸನ ಸೂರನಿತ್ತ ಭೂತಾಯಿಗೆ ಮಣಿದೇವು
ದುಷ್ಟತನವ ಮೆಟ್ಟೇವು ಶಿಷ್ಟತನವ ಮೆರೆದೇವು
ಮನುಜಪಥದಿ ನಡೆದೇವು ದೇಶಕಾಗಿ ಮಡಿದೇವು 
*********************
-ಕ.ವೆಂ.ನಾಗರಾಜ್.
 
ಮನವಿ:
ಕೆಳದಿ ಕವಿಮನೆತನದವರ ಹಾಗೂ ಬಂಧು-ಬಳಗದವರ 6ನೆಯ ವಾರ್ಷಿಕ ಸಮಾವೇಶ ಹಾಸನದಲ್ಲಿ 25-12-2011ರಂದು ನಡೆಯಲಿದ್ದು, ಇದನ್ನು ಸಮಾವೇಶದ ಹಾಡಾಗಿ ಹಾಡಿಸುವ ಸಲುವಾಗಿ ರಚಿಸಿದೆ. ಪದಗಳ ಬಳಕೆ ಸರಿಪಡಿಸಲು, ಪ್ರಾಸಬದ್ಧಗೊಳಿಸಲು ಮತ್ತು ಇದನ್ನು ಉತ್ತಮಗೊಳಿಸಲು ಸಂಪದಿಗರು ಕೈಜೋಡಿಸಬಹುದು, ಸಲಹೆ ಕೊಡಬಹುದು. ಸಮಾವೇಶ ಗೀತೆ ಸಮೂಹದಿಂದಲೇ  ರಚಿತವಾಗಲಿ!
Rating
No votes yet

Comments