ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ.
ಅಟ್ಟ ಹತ್ತಿದ ಮೇಲೆ ಏಣಿ ಏಕೆ?’, ‘ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರಂತೆ’- ಈ ಗಾದೆಗಳು ಎಲ್ಲರಿಗೂ ಗೊತ್ತು. ನಲವತ್ತು-ಐವತ್ತು ೩೦/೪೦ ದಶಕದ ಹಿಂದೆ ಮನೆ ಮುಂದೆ ಬೃಂದಾವನಕ್ಕೆ ಪ್ರಾಮುಖ್ಯತೆ ಇದ್ದಂತೆ ಮನೆಯೊಳಗೆ ಅಟ್ಟಕ್ಕೂ ಅಷ್ಟೇ ಪ್ರಾಮುಖ್ಯತೆ ಇತ್ತು. ತುಳಸಿಕಟ್ಟೆ ಮನೆಯ ಅಂಗಳದಲಿ ಇದ್ದರೆ ಅಟ್ಟ ಅಡುಗೆ ಕೋಣೆ, ಮಲಗುವ ಕೋಣೆ, ಬಚ್ಚಲು ಮನೆಯೊಳಗೆ ಖಾಯಂ ಇರುತ್ತಿತ್ತು. ಕೆಲವೊಂದು ಅಟ್ಟಕ್ಕೆ ಗಾಳಿ-ಬೆಳಕು ಆಡಲು ಸಣ್ಣ ಕಿಂಡಿ ಇಟ್ಟಿರುತ್ತಿದ್ದರು. ಇನ್ನು ಕೆಲವಂತೂ ಕಗ್ಗತ್ತಲಿಂದ ಕೂಡಿರುತ್ತಿತ್ತು.
ಅಟ್ಟ-ಮನೆಯಲ್ಲಿ ಸಾಮಾನುಗಳನ್ನು ಇಡಲು ಛಾವಣಿ ಮೇಲೆ ಇರುವ ಅಂತಸ್ತು ಅದೊಂದೇ ಅಲ್ಲ ಬೇಕಾದ ಭಾವನೆಗಳಿಗೆ, ಬೇಡವಾದ ವಸ್ತುಗಳಿಗಾಗಿಯೇ ಮೀಸಲಿಟ್ಟ ಜಾಗವಿದು.
ಅಡುಗೆ ಮನೆಯ ಅಟ್ಟ ಅಮ್ಮ ಮಾಡಿಟ್ಟ ಉಂಡೆ, ಕೋಡುಬಳೆ, ಕಜ್ಜಾಯದ ಡಬ್ಬಗಳ ಜೊತೆಗೆ ಹುಣಿಸೆಹಣ್ಣು, ಅಕ್ಕಿಮೂಟೆ, ಮೆಣಸಿನಕಾಯಿ, ಹಪ್ಪಳ-ಸಂಡಿಗೆ, ಬೆಲ್ಲ-ಕೊಬ್ಬರಿ ಡಬ್ಬಗಳ ಖಜಾನೆಯಾಗಿತ್ತು. ಬಚ್ಚಲು ಮನೆಯದು ಹೊಟ್ಟು, ತೆಂಗಿನನಾರು, ಸೌದೆ, ಕುಡುಗೋಲು, ಗುದ್ದಲಿಗೆ ಮೀಸಲು. ಮಲಗುವ ಕೋಣೆಯದು ಅಮ್ಮ ಗಂಟಿನಲಿ ಅಡಗಿಸಿಟ್ಟ ಚಿನ್ನ, ಬೆಳ್ಳಿ ಪಾತ್ರೆಗಳು, ಹಿತ್ತಾಳೆ ಪಾತ್ರೆಗಳ "ಬ್ಯಾಂಕ್-ಸೇಫ್-ಡಿಪಾಸಿಟ್-ಲಾಕರ್" ಎನಿಸಿತ್ತು. ಮಲಗುವ ಕೋಣೆಯ ಅಟ್ಟ ಹತ್ತಲು ಅಪ್ಪ-ಅಮ್ಮನ ಪರ್ಮಿಶನ್ ಬೇಕಿತ್ತು. ಬಚ್ಚಲು ಮನೆಯ ಅಟ್ಟದಲಿ ಚೇಳು-ಇಲಿಗಳ ವಾಸವಿತ್ತು. ಅಡುಗೆ ಮನೆಯ ಅಟ್ಟ ನನಗೆ ಬಲು ಪ್ರಿಯವಾದ ಅಡಗುತಾಣವಾಗಿತ್ತು.
ಅಡುಗೆ ಮನೆಯ ಅಟ್ಟಕ್ಕೂ ಬಾಲ್ಯಕ್ಕೂ ನಂಟೋ-ನಂಟು. ಅಂಡು ಊರಿ, ಮುದುಡಿ ಮಲಗುವಷ್ಟು ಸಿಗುತ್ತಿದ್ದ ಆ ಜಾಗ ನಮ್ಮದೇ ಆಸ್ತಿ, ಬೆಚ್ಚನೆಯ ಅಡಗು ತಾಣ. ಐಸ್-ಪೈಸ್ ಆಡಿದರೆ, ಅಮ್ಮ-ಅಪ್ಪನಿಂದ ಬಿಸಿ-ಬಿಸಿ ಕಜ್ಜಾಯದ ಹೆದರಿಕೆ ಇದ್ದಾಗ, ಯಾರಿಗೂ ತಿಳಿಯದೆ ಅಳಬೇಕೆನಿಸಿದಾಗ, ಕದ್ದು ತಿನ್ನುವಾಗ, ಮತ್ತೊಬ್ಬರಿಗೆ ತಿಳಿಯದಂತೆ ವಸ್ತುಗಳನ್ನು ಬಚ್ಚಿಡುವ ಪ್ರಸಂಗ ಬಂದಾಗ ಮೊದಲು ಓಡುತ್ತಿದ್ದ ಪ್ರಶಸ್ತ ತಾಣ ಅಟ್ಟ. ಆಪದ್ಬಾಂಧವ ತಾಣವದು. ಕತ್ತಲು, ಧೂಳು ತುಂಬಿದ್ದರೂ ಭಯ ಇರುತ್ತಿರಲಿಲ್ಲ. ಅಡುಗೆ ಮನೆಯ ದೀಪದಿಂದ ಬೀಳುತ್ತಿದ್ದ ಬೆಳಕಿನ ಕಿರಣಗಳು ಆ ಅಟ್ಟಕ್ಕೆ ದಾರಿದೀಪ. ಧೂಳನ್ನು ಕೈಯಲ್ಲಿ ಒರೆಸಿ, ಸಿಕ್ಕ ಹಳೇ ಪೇಪರ್, ಗೋಣಿ ಚೀಲ ಹಾಸಿ ಮುದುಡಿ ಮಲಗಿದಾಗ ಸಿಗುತ್ತಿದ್ದ ಸುರಕ್ಷತೆಯ ಅನುಭಾವ "ಅಟ್ಟ ಏರಿ ಅಲ್ಲಿ ಅವಿತಿಟ್ಟುಕೊಂಡವನೇ ಬಲ್ಲ".
ಆ ಅಟ್ಟದಲಿ ಇದ್ದ ನಮ್ಮ ಖಜಾನೆ ಎಂದರೆ ಅಳು-ನಗುವಿನ ಜೊತೆಗೆ ಕದ್ದ ಮಾವು, ನೆಲ್ಲಿ, ಹುಣಿಸೆ, ಬೆಲ್ಲ. ಒಡೆದ ಬಳೆ ಚೂರು, ಗೋಲಿ, ಬುಗುರಿ, ಆಟದ ಬೊಂಬೆಗಳು. ಅಷ್ಟೇ ಅಲ್ಲ ಕೋಪಗೊಂಡು ಮೂತಿ ಊದಿಸಿಕೊಂಡು ಯಾರೂ ಬೇಡವಾದಾಗ ಕೈಕೇಯಿಯ ಕೋಪಗೃಹವೂ ಅದೇ ಆಗುತ್ತಿತ್ತು. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡುಯುವಂತೆ ಅಟ್ಟದಲಿ ಅವಿತು ಕುಳಿತರೆ ಯಾರೂ ಬರಲಾರು ಎಂಬ ಭರವಸೆಯ ಭಾವ ತುಂಬಿರುತ್ತಿತ್ತು. ಆಗೆಲ್ಲಾ ಕ್ಲೀನ್- ಪದದ ಅರಿವು-ಅರ್ಥ ಎರಡೂ ಗೊತ್ತಿರಲೇ ಇಲ್ಲ. ಮಾವು, ಸೀಬೆ, ನೆಲ್ಲಿಗೆ ಅಂಟಿದ್ದ ಧೂಳನ್ನು ಹಾಕಿದ್ದ ಶರಾಯಿ, ಸ್ಕರ್ಟಿಗೆ ಒರೆಸಿ ತಿಂದದ್ದೆಷ್ಟೋ ಆದರೂ ಒಂದು ದಿನವೂ ಇನ್‍ಫೆಕ್ಷನ್ ಮಾರಿಗೆ ತುತ್ತಾಗಲಿಲ್ಲ, ಡಾಕ್ಟರ್ ಬಳಿ ಹೋಗಲಿಲ್ಲ.
ಅಟ್ಟಕ್ಕೆ ಏರಲು ಪ್ರಶಸ್ತ ಸಮಯ ಮಧ್ಯಾನ್ಹ. ಅಮ್ಮ ಅಡುಗೆ ಕೆಲ್ಸ ಮುಗಿಸಿ ಮಲಗಿದಾಗ, ಅಥವಾ ಸಂಜೆ ದೇವರಿಗೆ ದೀಪ ಹಚ್ಚುತ್ತಿದ್ದಾಗ. ಪ್ರತಿಬಾರಿ ಅಟ್ಟ ಏರುವಾಗಲೂ ನಾನು ಕಳ್ಳ ಬೆಕ್ಕಿನಂತೆ ಹೆಜ್ಜೆ ಇಟ್ಟು ಹತ್ತುತ್ತಿದ್ದೆ. ನನ್ನಣ್ಣನೋ ಧಡಬಡಲು. ಶಬ್ದ ಆದ್ರೆ ಅಮ್ಮಾ ಏನೇ ಅದು ಶಬ್ದ ಎಂದು ಕೂಗು ಹಾಕ್ತಾ ಇದ್ಲು. ನಮ್ಮಣ್ಣ ಮಿಯಾಂವ್ ಎಂದು ಗಢವಾ ಬೆಕ್ಕಿನಂತೆ ಕೂಗುತ್ತಿದ್ದ. ನಮ್ಮಿಬ್ಬರ ಅಡಗುದಾಣ ಅರಿತಿದ್ದೂ ಅಟ್ಟ ಹತ್ತಲು ಆಗದ ಡುಮ್ಮಿ ಅಕ್ಕ " ಅಮ್ಮಾ ಇಲಿ-ಬೆಕ್ಕು" ಎರಡೂ ಅಟ್ಟದಲಿ" ಸೇರಿಕೊಂಡಿದೆ ಎಂದು ಕೂಗುತ್ತಿದ್ದಳು. ಹೌದೇನೇ, ಆಯೋ ಅಲ್ಲಿ ತಿಂಡಿ ಇಟ್ಟಿದ್ನಲ್ಲೇ, ಎದ್ದ ಮೇಲೆ ಬೇರೆ ಜಾಗದಲಿ ಇಡಬೇಕು ಎಂದು ಮಲಗಿದ್ದಲ್ಲೇ ಅಮ್ಮನ ಉವಾಚ. ನಮಗೆ ಅಮ್ಮ ಏನು ತಿಂಡಿ ಇಟ್ಟಿದಾಳೆ ಎಂಬ ಸುಳಿವು ಸಿಗುತ್ತಿತ್ತು.
ನನ್ ಹಾಗೆ ಅಮ್ಮಂಗೂ ಕೂಡ ಅಟ್ಟ ಬಲು ಪ್ರಿಯ. ಅಲ್ಲಿ ತೌರಿನಿಂದ ತಂದಿದ್ದ-ಅಪ್ಪನಿಗೆ ತಿಳಿಯದಂತೆ ಅದೆಷ್ಟೋ ತೌರಿನ ಆಸ್ತಿ, ಉಡುಗೊರೆ ತುಂಬಿದ್ದಳು. ನಮಗಾಗಿ ಮಾಡಿದ ಕೋಡುಬಳೆ, ಪುಳ್ಳಂಗಾಯಿ ಉಂಡೆ, ಪುರಿ ಉಂಡೆಗಳ ಜೊತೆಗೆ ವರುಷದ ಶೇಖರಣೆ ಕಡಲೆಕಾಯಿ, ಬೆಲ್ಲ, ಕೊಬ್ಬರಿ, ಮೆಣಸಿನಕಾಯಿ, ಸಂಡಿಗೆ ಡಬ್ಬ, ಹಿತ್ತಾಳೆ ಪಾತ್ರೆಗಳು ಎಲ್ಲವೂ ಅಲ್ಲಿ ವಿರಾಜಮಾನವಾಗಿತ್ತು. ಬಚ್ಚಲು ಮನೆಯ ಅಟ್ಟ ವರುಷಕ್ಕೊಮ್ಮೆ, ಅಡುಗೆ ಮನೆ ಅಟ್ಟಕ್ಕೆ ೬ ತಿಂಗಳಿಗೊಮ್ಮೆ ಸುಣ್ಣ-ಬಣ್ಣ, ಕ್ಲೀನಿಂಗ್-ಕ್ಲಿಯರಿಂಗ್. ಅಮ್ಮಂಗೋ ಸಾಮಾನು ಎಸೆಯೋಕ್ಕೆ ಗೋಳಾಡೋವ್ಳು. ಕೈಯಲ್ಲಿ ಹಿಡಿದು ಮೀನ-ಮೇಷ ಎಣಿಸುತ್ತಿದ್ದಳು. ಅಯ್ಯೋ, ಇದ್ನ ಎಸೀಲಾ ಅಂದ್ರೆ ಎಂದು ನೂರು ಬಾರಿ ಅಪ್ಪನ್ನ ಕೇಳ್ತಾ ಇದ್ಲು. ಅಪ್ಪ "ಹಾಕ್ ಅದ್ನ ಹೊರಗೆ ಎಂದು ಗುಡುಗುತ್ತಾ-ಗೊಣಗುತ್ತಿದ್ದರು. ದಿನವೆಲ್ಲಾ ಅಮ್ಮ ಏನೋ ಖಜಾನೆ ಖಾಲಿಯಾದಂತೆ ಅಲವತ್ತುಕೊಳ್ತಾ ಇದ್ಲು. ಇದು ನನ್ನ ಅಮ್ಮನ ಅಟ್ಟದ ಅನುಭವ ಅಲ್ಲ ನಮ್ಮೆಲ್ಲರ ಅಟ್ಟವಿರುತ್ತಿದ್ದ-ಅಮ್ಮಂದಿರ ಎಲ್ಲರ ಮನೆ-ಮನೆ ಕಥೆ.
ಒಮ್ಮೆ ಶಾಲೆಗೆ ಚಕ್ಕರ್ ಹೊಡೆದ ನನ್ನಣ್ಣ ಅಮ್ಮನ ಬೆನ್ನ ಬಿಸಿ-ಬಿಸಿ ಕಜ್ಜಾಯಕ್ಕೆ ಹೆದರಿ ಅಟ್ಟ ಏರಿ ನಿದ್ದೆಗೆ ಶರಣಾದ. ರಾತ್ರಿ ಎಂಟಾದರೂ ಆಟಕ್ಕೆ ಹೋದ ಮಗನ ಸುಳಿಕಾಣದೆ ಅಮ್ಮ ಹೋ ಎಂದು ಅಳಲು ಶುರು ಮಾಡಿದಳು. ಅಂದು ಕರೆಂಟ್ ಕೂಡ ಕೈ ಕೊಟ್ಟಿತ್ತು. ನಂಗೆ ಗೊತ್ತಿದ್ರೂ, ಅಮ್ಮನ ಬಳಿ ಒದರಿದರೆ ಅಣ್ಣನಿಂದ ಬೀಳುವ ಲಾತಕ್ಕೆ ಹೆದರಿ ಬಾಯಿ ಮುಚ್ಚಿಕೊಂಡಿದ್ದೆ. ಅಪ್ಪ ಲಾಂದ್ರ ಹಿಡಿದು ಕೊಟ್ಟಿಗೆ, ಸ್ನೇಹಿತರ ಮನೆಗಳಲ್ಲಿ ಹುಡುಕಿ ಮಗ ಕಾಣದಾದಾಗ ಪೋಲೀಸ್ ಠಾಣೆಗೆ ಹೊರಡಲು ಅನುವಾದರು. ಅದೇನು ತೋಚಿತೋ, ಅಟ್ಟದಲಿ ಇದಾನ ಎಂದು ನೋಡ್ತೀನಿ ಎಂದು ಅಡುಗೆ ಮನೆಯ ಅಟ್ಟ ಹತ್ತಿದರು. ಅಲ್ಲಿ ಗೋಣಿಚೀಲದ ಮೇಲೆ ಪ್ರಪಂಚವನ್ನೇ ಮರೆತು ಪವಡಿಸಿದ್ದ ನಮ್ಮಣ್ಣ . ಏಳೋ ಮೇಲೆ, ಇಲ್ಲೇನೋ ಬಂದು ಮಲಗೋದು ಎಂದು ಗದರುತ್ತಾ ನಿದ್ದೆಯಲ್ಲಿದ್ದ ನನ್ನಣ್ಣನನು ಕೆಳಗೆ ಇಳಿಸಿದರು. ಇಷ್ಟಕ್ಕೇ ನಿಲ್ಲದೆ ನಾಳೆನೇ ಅಟ್ಟಕ್ಕೆ ಬಾಗಿಲು ಮಾಡಿಸ್ತೀನಿ ಎಂದು ಕಟ್ಟಾಜ್ಞೆಯನ್ನೂ ಹೊರಡಿಸಿದರು. ರಾತ್ರಿ ಎಲ್ಲಾ ಅಮ್ಮನ ಬಳಿ ಅ ಅಟ್ಟಕ್ಕೆ ಬೀಗ ಬೇಡಮ್ಮಾ ಎಂದು ಗೋಗರೆದಿದ್ದೆ. ನನ್ನ ಅಹವಾಲಿಗೆ ಅಪ್ಪ-ಅಮ್ಮ ಇಬ್ಬರೂ ಕಿವಿಗೊಡಲಿಲ್ಲ. ಮಾರನೇ ದಿನವೇ ಅಪ್ಪ ಬಡಗಿಯನ್ನು ಕರೆದು ಮರದ ಬಾಗಿಲು ಮಾಡಿಸಿ ಅಟ್ಟಕ್ಕೆ ದೊಡ್ಡ ಬೀಗ ಜಡಿದರು. ಅವತ್ತು ರಾತ್ರಿ ಬಿತ್ತು ನನ್ನಿಂದ ನನ್ನಣನಿಗೆ ಮುಸುಕಿನೊಳಗೆ ಗುದ್ದಿನ ಸುರಿಮಳೆ- ಸಹಸ್ರನಾಮಾರ್ಚನೆ.
ಅಂದೇ ಕಡೆಯಾಯ್ತು ನನ್ನ-ಅಟ್ಟದ ಸಂಬಂಧ-ಅನುಬಂಧ. ಕೊರಗಿಲ್ಲ ಬಿಡಿ! ಆ ಅಟ್ಟದ ನೆನಪು ಮಾತ್ರ ಇಂದೂ ಸದಾ ಹಸಿರೇ ಹಸಿರು. ಆ ಅಟ್ಟಕ್ಕೆ ಬೀಗ ಜಡಿದರೇನಂತೆ ನೆನಪಿನ ಅಟ್ಟ ಇದೆಯಲ್ಲಾ! ಅದಕ್ಕಂತೂ ಬೀಗ ಹಾಕೋಕ್ಕೆ ಆಗೋಲ್ಲ, ಆ ಅಟ್ಟಕ್ಕೆ ಏಣಿ ಹಾಕ್ತಾ, ಹತ್ತುತ್ತಾ ಇರ್ತೀನಿ. ಅಲ್ಲಿ ಸಮೃದ್ಧಿಯಾದ ನೆನಪಿನ ಖಜಾನೆಯ ನೆನಪಿನ ನವಿಲುಗರಿಗಳ ನೃತ್ಯ ಸದಾ ನಾಟ್ಯವಾಡುತ್ತಿರುತ್ತದೆ.
Comments
ಉ: ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ.
ಉ: ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ.
ಉ: ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ.
ಉ: ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ.
In reply to ಉ: ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ. by ಅನನ್ಯ
ಉ: ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ.