ಪಥಗೀತ

ಪಥಗೀತ

 

ಮಸುಕು ಮಸುಕಿನ ಹಾದಿ, ದೂರ ಮಿಣುಕಿನ ದೀಪ, ಮರಳಿ ಮುರಳಿಯ ಗಾನ ಸೆಳೆತ
ಅಂತರಂಗದ ಕೊಳದ ಬಿಳಿಯ ಕೊಕ್ಕರೆಯೀಗ ಒಂಟಿಕಾಲಲಿ ಧ್ಯಾನ ನಿರತ

ಕಿವಿ ತಮಟೆಯಲ್ಲೀಗ ಅಸ್ಪಷ್ಟ ಧ್ವನಿ ರೂಪ,ಯಾವ ಭಾಷೆಯ ಸ್ವರವೋ ಕಾಣೆ
ಆಗಾಗ ಎದೆಯಲ್ಲಿ ತಂತಿ ಮೀಟಿದ ಶಬ್ದ, ಬೆಚ್ಚಿ ಕೂತಿದೆ ಹೃದಯ ವೀಣೆ

ಕಲಬೆರಕೆ ಕನಸುಗಳು ಕಲಸಿದಂತಹ ಬದುಕು, ಆಗಿ ಹೋಗಿದೆ ಅಸ್ತವ್ಯಸ್ತ
ಇಷ್ಟುದಿನ ಸಲಹಿರುವ, ಕೈಹಿಡಿದು ನಡೆಸಿರುವ, ಹಸ್ತದಿಂದಲೇ ಶಾಪಗ್ರಸ್ತ

ಉಳಿಯ ಝಳಪಿಸಿ ಶಿಲ್ಪಿ ಹೊಡೆಯದಿದ್ದರೆ ಚಾಣ, ಶಿಲ್ಪವಾಗುವುದೇಗೆ ಕಲ್ಲು?
ದಿನದಿನವೂ ಕರಗುವನು ಶುಕ್ಲಪಕ್ಷದ ಚಂದ್ರ, ಕಲೆಗಳಿವೆ ಶಶಿವದನದಲ್ಲೂ

ಇಳಿದು ಬರಬಹುದೀಗ ಇಳೆಯ ಬೆಳಗುವ ಬೆಳಕು ಶಕ್ತಿ ಮೂಲದ ಕೇಂದ್ರದಿಂದ
ಉತ್ತರಿಸಬೇಕಿಲ್ಲ ಕ್ಲಿಷ್ಟಕರ ಪ್ರಶ್ನೆಗಳ, ಕತ್ತರಿಸು ಕತ್ತಲೆಯ ಬಂಧ 

Rating
No votes yet

Comments