ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ಚಿಂತನೆ (ಭಾಗ - ೧)
ಶ್ರಾವಣ ಮಾಸ ಬಂತೆಂದರೆ ವಿಧವಿಧವಾದ ಹಬ್ಬಗಳು, ವ್ರತಗಳ ಆಚರಣೆಯಾಗುತ್ತದೆ. ಈ ಕಾಲದಲ್ಲಿ ಹಲವು ಕಡೆ ಮಾಲೆ ಹಾಕಿಕೊಂಡ ಅಯ್ಯಪ್ಪನ ಭಕ್ತರೂ ಕಾಣಿಸಿಕೊಳ್ಳುತ್ತಾರೆ. ಆದರೆ ಶ್ರಾವಣಕ್ಕಿಂತ ಅಯ್ಯಪ್ಪನ ಭಕ್ತರಿಗೆ ಮಾಲೆ ಹಾಕಿಕೊಳ್ಳಲು ವಿಶೇಷ ಕಾಲ ಕಾರ್ತಿಕ ಮತ್ತು ಧನುರ್ಮಾಸಗಳು. ಕಾರ್ತಿಕ ಮಾಸ ಸಾಮಾನ್ಯವಾಗಿ ಇಂಗ್ಲೀಷ್ ಕ್ಯಾಲೆಂಡರಿನ ನವೆಂಬರ್ ತಿಂಗಳಿನಲ್ಲಿ ಬರುತ್ತದೆ ಮತ್ತು ಧನುರ್ಮಾಸ ಇಂಗ್ಲೀಷ್ ಕಾಲಮಾನದ ಪ್ರಕಾರ ಡಿಸೆಂಬರ್ ೧೪ಕ್ಕೆ ಪ್ರಾರಂಭವಾಗಿ ಜನವರಿ ೧೪ಕ್ಕೆ ಕೊನೆಗೊಳ್ಳುತ್ತದೆ. ಮೇಷ ಮಾಸ ಏಪ್ರಿಲ್ ೧೪ರಂದು ಪ್ರಾರಂಭವಾದರೆ ಮೇ ೧೪ರಂದು ವೃಷಭ ಮಾಸ ಪ್ರಾರಂಭವಾಗುತ್ತದೆ. ಹೀಗೆ ಸೂರ್ಯ ಪ್ರತಿ ತಿಂಗಳು ಒಂದೊಂದು ರಾಶಿಯಿಂದ ಇನ್ನೊಂದು ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಹೀಗೆ ಪ್ರವೇಶಿಸುವ ಕಾಲವನ್ನೇ ನಾವು ಸಂಕ್ರಮಣವೆನ್ನುತ್ತೇವೆ. ಇದರಲ್ಲಿ ಜನವರಿ ೧೪ಕ್ಕೆ ಜರುಗುವ ಮಕರ ಸಂಕ್ರಮಣ ವಿಶೇಷ ಕಾಲ. ಏಕೆಂದರೆ ಅಂದಿನಿಂದ ಸೂರ್ಯ ಉತ್ತರಾಭಿಮುಖವಾಗಿ ಸಂಚರಿಸುತ್ತಾನೆ ಮತ್ತು ಕರ್ಕ ಸಂಕ್ರಮಣದವರೆಗೂ ಅದನ್ನು ಮುಂದುವರೆಸುತ್ತಾನೆ. ಕರ್ಕ ಸಂಕ್ರಮಣವು ಜುಲೈ ೧೪ರಂದು ಪ್ರಾರಂಭವಾಗಿ ಅಲ್ಲಿಂದ ಸೂರ್ಯನು ದಕ್ಷಿಣಾಭಿಮುಖವಾಗಿ ಸ೦ಚರಿಸಲು ತೊಡಗುತ್ತಾನೆ. (ವೈಕುಂಠ ಏಕಾದಶಿಯಂದು ಸೂರ್ಯ ಉತ್ತಾರಾಭಿಮುಖವಾಗಿ ಪ್ರಯಾಣಿಸಲು ಪ್ರಾರಂಭಿಸುತ್ತಾನೆಂದು ಕೆಲವರು ನಂಬಿದರೆ ಇನ್ನು ಕೆಲವರು ರಥಸಪ್ತಮಿಯಿಂದ ಸೂರ್ಯನ ಉತ್ತಾರಾಭಿಮುಖ ಪಯಣ ಸಾಗುತ್ತದೆನ್ನುತ್ತಾರೆ - ಅದರ ಚರ್ಚೆ ಈಗ ಇಲ್ಲಿ ಬೇಡ). ಕಾರ್ತಿಕ ಮತ್ತು ಧನುರ್ಮಾಸಗಳಲ್ಲೇ ಏಕೆ ಅಯ್ಯಪ್ಪನ ಭಕ್ತರು ವಿಶೇಷವಾಗಿ ಮಾಲೆ ಧರಿಸುತ್ತಾರೆಂದು ತಿಳಿದುಕೊಳ್ಳುವ ಮೊದಲು ಅಯ್ಯಪ್ಪನ ಕಥೆ ಮತ್ತು ವ್ರತದ ಬಗ್ಗೆ ಸ್ವಲ್ಪ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದೊಳ್ಳೆಯದು.
ಎಲ್ಲರಿಗೂ ಗೊತ್ತಿರುವ ಕಥೆಯಂತೆ ಶಿವನು ಮೋಹಿನಿ ಅವತಾರದಲ್ಲಿದ್ದ ವಿಷ್ಣುವನ್ನು ಮೋಹಿಸಿ ಅವಳನ್ನು ಕೂಡಿಕೊಂಡಾಗ ಅವರಿಗೆ ಜನಿಸುವ ಮಗುವೇ ಅಯ್ಯಪ್ಪ ಸ್ವಾಮಿ. ಹೀಗೆ ಜನಿಸಿದ ಶಿಶುವನ್ನು ಆ ದೇವ ದಂಪತಿಗಳಿಬ್ಬರೂ ಕಾಡಿನಲ್ಲಿ ತ್ಯಜಿಸಿ ಹೋಗಿಬಿಡುತ್ತಾರೆ. ಆ ಕಾಡಿಗೆ ಭೇಟೆಯಾಡಲು ಬಂದ ಮಕ್ಕಳಿಲ್ಲದ ಪಾಂಡ್ಯವಂಶದ ರಾಜ ಆ ಮಗುವನ್ನು ದೇವರು ಕೊಟ್ಟ ಕೂಸೆಂದು ತನ್ನ ಅರಮನೆಗೆ ಒಯ್ಯುತ್ತಾನೆ. ಅವನ ಕೊರಳಲ್ಲಿ ಪ್ರಕಾಶಿಸುವ ಮಣಿ ಇದ್ದುದರಿಂದ ಆ ಮಗುವಿಗೆ "ಮಣಿಕಂಠ"ನೆಂದು ನಾಮಕರಣ ಮಾಡುತ್ತಾರೆ. ಸ್ವಲ್ಪ ಕಾಲದಲ್ಲಿಯೇ ಆ ರಾಜ ದಂಪತಿಗಳಿಗೆ ಮಣಿಕಂಠನ ಪುಣ್ಯಭಾಗ್ಯದಿಂದ ಇನ್ನೊಂದು ಮಗುವಾಗುತ್ತದೆ. ಮಣಿಕಂಠ ಬೆಳೆದು ದೊಡ್ಡವನಾಗಿ ಗುರುಕುಲದಲ್ಲಿ ಯಶಸ್ವಿಯಾಗಿ ವಿಧ್ಯಾಭ್ಯಾಸವನ್ನು ಪೂರೈಸಿ ರಾಜಧಾನಿಗೆ ಹಿಂದಿರುಗುತ್ತಾನೆ. ಆಗ ಅವನು ತಂದೆಗೆ ಎಲ್ಲ ವಿಧದಲ್ಲಿಯೂ ಸಹಾಯ ಮಾಡುತ್ತಾ ರಾಜ್ಯದ ಪ್ರಜೆಗಳ ಮನಸೂರೆಗೊಳ್ಳುತ್ತಾನೆ. ಆಗ ಸಹಜವಾಗಿ ಮಣಿಕಂಠನಿಗೆ ಪಟ್ಟ ಕಟ್ಟಬೇಕೆಂದು ರಾಜ ಮತ್ತು ಪ್ರಜೆಗಳೆಲ್ಲರೂ ಬಯಸುತ್ತಾರೆ. ಆಗ ದುಷ್ಟ ಮಂತ್ರಿಯೊಬ್ಬ ರಾಣಿಯ ತಲೆಕೆಡಿಸಿ ನಿನ್ನ ಹೊಟ್ಟೆಯಲ್ಲಿ ಹುಟ್ಟದ ಮಗುವೊಂದು ಮುಂದೆ ರಾಜನಾಗುತ್ತದೆ ಆಗ ನೀನು ಮತ್ತು ನಿನ್ನ ಮಗ ಅವನ ಅಡಿಯಾಳುಗಳಾಗಬೇಕಾಗುತ್ತದೆ ಎಂದು ವಿಷಬೀಜ ಬಿತ್ತುತ್ತಾನೆ. ಆಗ ರಾಣಿ ಮತ್ತು ಆ ದುಷ್ಟ ಮಂತ್ರಿ ಸೇರಿಕೊಂಡು ಮಣಿಕಂಠನ ಪಟ್ಟಾಭಿಷೇಕವನ್ನು ತಪ್ಪಿಸುವ ಸಲುವಾಗಿ ಒಂದು ನಾಟಕವನ್ನು ಆಯೋಜಿಸುತ್ತಾರೆ. ಅದರ ಪ್ರಕಾರ ರಾಜ ತನ್ನ ಅಂತಃಪುರಕ್ಕೆ ಬಂದಾಗ ರಾಣಿ ತನಗೆ ವಿಪರೀತ ತಲೆನೋವು ಎಂದು ನಾಟಕವಾಡುತ್ತಾಳೆ. ಆಗ ರಾಜ ಆಸ್ಥಾನ ವೈದ್ಯರನ್ನು ಕರೆಸಿ ಅದಕ್ಕೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸುತ್ತಾನೆ. ಇದಕ್ಕು ಮೊದಲೇ ಆ ದುಷ್ಟ ಮಂತ್ರಿಯ ಚಿತಾವಣೆಗೊಳಪಟ್ಟಿದ್ದ ಆ ರಾಜವೈದ್ಯ ಮಹಾರಾಣಿಯವರ ತಲೆನೋವು ಹೋಗಲಾಡಿಸಬೇಕೆಂದರೆ ಅದಕ್ಕೆ ಹುಲಿಯಹಾಲಿನಿಂದ ತಯಾರಿಸಿದ ಮದ್ದನ್ನು ಕೊಡಬೇಕೆಂದು ಸೂಚಿಸುತ್ತಾನೆ. ಅದರಂತೆ ಹುಲಿಯ ಹಾಲು ತರುವ ವೀರರಿಗಾಗಿ ರಾಜ ತನ್ನ ಸಾಮ್ರಾಜ್ಯದೆಲ್ಲಡೆ ಡೊಂಗುರ ಹೊಡೆಸುತ್ತಾನೆ. ಹುಲಿಯ ಹಾಲು ತರುವ ವಿಷಯ ಸಾಮಾನ್ಯ ಸಂಗತಿಯಾಗಿರದ ಕಾರಣ ಯಾರೊಬ್ಬರೂ ಮುಂದೆ ಬರುವುದಿಲ್ಲ ಆಗ ಸಹಜವಾಗಿಯೇ ಧೈರ್ಯ ಶಾಲಿ ಮತ್ತು ತಂದೆ-ತಾಯಿಗಳ ಬಗ್ಗೆ ಅಪಾರ ಗೌರವವಿದ್ದ ಮಣಿಕಂಠನು ತಾನು ಆ ಕೆಲಸ ಮಾಡುವುದಾಗಿ ಮುಂದೆ ಬರುತ್ತಾನೆ. ಅದರಂತೆ ಹುಲಿಯ ಭೇಟೆಗಾಗಿ ಸಿದ್ದನಾಗಿ ಕಾಡಡವಿಯನ್ನು ಪ್ರವೇಶಿಸುತ್ತಾನೆ.
ಮಣಿಕಂಠನು ಅಡವಿಯಲ್ಲಿ ಅಲೆದಾಡುತ್ತಿದ್ದಾಗ ಅವನಿಗೆ ವಾವರನೆಂಬ ಮುಸಲ್ಮಾನ ದರೋಡೆಕೋರನೊಬ್ಬ ಎದುರಾಗಿ ಇವನಲ್ಲಿರುವುದನ್ನೆಲ್ಲಾ ಕಿತ್ತುಕೊಳ್ಳಲು ಪ್ರಯತ್ನಿಸುತ್ತಾನೆ. ಆಗ ಮಣಿಕಂಠ ಅವನ ಮುಂದೆ ಅಗಾಧವಾದ ಮುತ್ತು ರತ್ನಗಳ ರಾಶಿಯನ್ನೇ ಸೃಷ್ಟಿಸಿ ಅದನ್ನು ತೆಗೆದುಕೊಳ್ಳಲು ವಾವರನಿಗೆ ಸೂಚಿಸುತ್ತಾನೆ; ಅದನ್ನು ವಾವರನು ತೆಗೆದುಕೊಳ್ಳಲು ಹೋದಾಗ ಆ ರಾಶಿಯೆಲ್ಲಾ ಬೂದಿಯಾಗುತ್ತದೆ. ಆಗ ಮಣಿಕಂಠ ಅವನಿಗೆ ಮುಂದೊಂದು ದಿನ ಬೂಧಿಯಾಗುವ ಈ ಐಶ್ವರ್ಯಕ್ಕೇಕೆ ಹೊಡೆದಾಡುತ್ತೀ ಶಾಶ್ವತವಾದ ಭಗವದೈಶ್ವರ್ಯವನ್ನು ಪಡೆ ಎಂದು ಉಪದೇಶಿಸಿ ಅವನ ಮನ ಪರಿವರ್ತಿಸಿ ಅವನೊಬ್ಬ ತಪಸ್ವಿಯಾಗುವಂತೆ ಮಾಡುತ್ತಾನೆ. ಅವನೇ ಮುಂದೆ "ವಾವರ ಸ್ವಾಮಿ" ಎಂದು ಪ್ರಖ್ಯಾತನಾಗುತ್ತಾನೆ. ಈ ವಾವರ ಸ್ವಾಮಿಗೆ ನಿರ್ಮಿಸಿರುವ ದರ್ಗಾ ನಮಗೆ ಶಬರಿ ಮಲೆಗೆ ಹೋಗುವ ಎರಿಮೇಲಿಯಲ್ಲಿ ಸಿಗುತ್ತದೆ. ಮೊದಲು ಶಬರಿ ಬೆಟ್ಟ ಹತ್ತುವವರು ಈ ವಾವರ ಸ್ವಾಮಿಗೆ ಇಡುಗಾಯಿ ಒಡೆದು ಮುಂದೆ ಹೋಗುವ ಪರಿಪಾಠವಿದೆ.
ಹೀಗೆ ಅಡವಿಯಲ್ಲಿ ಮುಂದೆ ಸಾಗುವ ಮಣಿಕಂಠನಿಗೆ ಮಹಿಷಿಯು ಎದುರಾಗುತ್ತಾಳೆ. ಈ ಮಹಿಷಿ ಚಾಮುಂಡೇಶ್ವರಿಯಿಂದ ಸಂಹಾರಕ್ಕೊಳಗಾದ ಮಹಿಷಾಸುರನ ತಂಗಿ. ಇವಳು ತನ್ನ ಸಹೋದರನ ಸಾವಿಗೆ ಕಾರಣರಾದ ದೇವತೆಗಳ ಮೇಲೆ ಸೇಡು ತೀರಿಸಿಕೊಳ್ಳಲು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾಳೆ. ಕೊನೆಗೆ ಇವಳ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವರು ಇವಳಿಗೇನು ವರಬೇಕೆಂದು ಕೇಳುತ್ತಾನೆ. ಆಗ ಮಹಿಷಿ ತನಗೆ ಸಾವು ಬರುವುದಾದರೆ ಹರಿಹರರ ಅಂಶದಿಂದ ಕೂಡಿದ ಮಗುವಿನಿಂದ ಸಾವು ಬರಲಿ ಎನ್ನುವ ಅಸಾಧ್ಯ ಮತ್ತು ವಿಚಿತ್ರವೆನಿಸುವ ವರವನ್ನು ಕೋರಿಕೊಳ್ಳುತ್ತಾಳೆ. ಇವಳ ಕೋರಿಕೆಗೆ ತಥಾಸ್ತು ಎಂದು ಬ್ರಹ್ಮದೇವ ಆದೇಶಿಸಿದ ಮೇಲೆ ಇವಳು ದೇವತೆಗಳನ್ನು ಕಾಡಲು ಪ್ರಾರಂಭಿಸುತ್ತಾಳೆ. ಕೆಲವು ಕಾಲ ದತ್ತಾತ್ರೇಯನು ಮನುಷ್ಯ ಅವತಾರ ತಾಳಿ ಇವಳಿಗೆ ಅವನ ಮೇಲೆ ಮೋಹವುಂಟಾಗುವಂತೆ ಮಾಡಿ ಅವಳು ದೇವತೆಗಳಿಗೆ ತೊಂದರೆಯಾಗದಂತೆ ತಡೆದಿರುತ್ತಾನಂತೆ ಅವನು ಬಿಟ್ಟು ಹೋದ ಮೇಲೆ ಮಹಿಷಿ ಪುನಃ ದೇವತೆಗಳನ್ನು ಕಾಡುವುದಕ್ಕೆ ಪ್ರಾರಂಭಿಸುತ್ತಾಳೆ. ಹೀಗಿರುವ ಮಹಿಷಿ ಮಣಿಕಂಠನಿಗೆ ಎದುರಾಗಿ ಅವನ ಮೇಲೆ ಯುದ್ಧವನ್ನು ಹೂಡುತ್ತಾಳೆ. ಮಹಿಷಿಗೂ ಮತ್ತು ಮಣಿಕಂಠನಿಗೂ ಹಲವಾರು ದಿವಸಗಳ ಘನಘೋರ ಯುದ್ಧ ನಡೆದು ಹರಿಹರರ ಅಂಶದಿಂದ ಜನಿಸಿದ ಮಣಿಕಂಠನಿಂದ ಸಾವುಂಟಾಗುತ್ತದೆ. ಇವರ ಯುದ್ಧವನ್ನು ವೀಕ್ಷಿಸಲು ಅಡವಿಯಲ್ಲಿ ಸೂಕ್ತವಾದ ಸ್ಥಳವೊಂದರಲ್ಲಿ ಗುಡಿಸಲನ್ನು ಕಟ್ಟಿಕೊಂಡು ಶಿವ ಮತ್ತು ಪಾರ್ವತಿಯರು ವಾಸವಾಗಿದ್ದರಂತೆ. ಆ ಸ್ಥಳವೇ "ಕಾಲ-ಶಕ್ತಿ ಆಶ್ರಮ" ಅದೇ ಜನರ ಬಾಯಲ್ಲಿ ಕಾಳೇಕಟ್ಟಿ ಆಶ್ರಮವೆಂದು ಹೆಸರಾಗಿದೆ. ಹೀಗೆ ಮಹಿಷಿಯ ಸತ್ತನಂತರ ಅದರ ದೇಹದಿಂದ ಶಾಪಗ್ರಸ್ಥವಾಗಿದ್ದ ಓರ್ವ ಗಂಧರ್ವ ಕನ್ಯೆಯು ಹೊರಬರುತ್ತಾಳೆ. ಆ ಗಂಧರ್ವ ಕನ್ಯೆ ಮಣಿಕಂಠನ ಶೌರ್ಯ ಮತ್ತು ರೂಪಕ್ಕೆ ಮರುಳಾಗಿ ಅವನಲ್ಲಿ ಅನುರಕ್ತಳಾಗಿ ತನ್ನನ್ನು ವರಿಸುವಂತೆ ಅವನಲ್ಲಿ ಬೇಡಿಕೊಳ್ಳುತ್ತಾಳೆ. ಆದರೆ ಮಣಿಕಂಠ ಅದಕ್ಕೆ ಸೊಪ್ಪು ಹಾಕದಿದ್ದಾಗ ಅವಳು ಕೊಡಗಟ್ಟಲೆ ಕಣ್ಣೀರು ಸುರಿಸುತ್ತಾಳಂತೆ, ಅವಳ ಅಳುವಿನಿಂದ ಹುಟ್ಟಿದ ಆ ಕಣ್ಣೀರೆ ಮುಂದೆ "ಅಳುದಾ" ನದಿಯಾಗಿ ಮಾರ್ಪಟ್ಟಿದೆ. ಇವಳ ಅಳುವಿಗೆ ಕರಗಿದ ಮಣಿಕಂಠ ಮುಂದೆ ತಾನು ಅಯ್ಯಪ್ಪ ಸ್ವಾಮಿಯಾದ ಮೇಲೆ ಯಾವ ವರ್ಷ ಕನ್ಯೆಸ್ವಾಮಿ ಶಬರಿಮಲೆಗೆ ಬರುವುದಿಲ್ಲವೋ ಆ ವರ್ಷ ಅವಳನ್ನು ಮದುವೆಯಾಗುವುದಾಗಿ ವರಕೊಟ್ಟು ಅವಳನ್ನು ಸಮಾಧಾನಪಡಿಸುತ್ತಾನೆ. ಆ ಗಂಧರ್ವ ಕನ್ಯೆಯೇ ಇಂದು ಶಬರಿಮಲೆಯಲ್ಲಿ "ಮಾಲಿಕಾಪುರಮ್ಮ" ಎಂಬುದಾಗಿ ಪೂಜೆಗೊಳ್ಳುತ್ತಿದ್ದಾಳೆ. ಈ ಅಳುದಾ ನದಿಯನ್ನು ದಾಟುವಾಗ ಎರಡು ಕಲ್ಲುಗಳನ್ನು ಆರಿಸಿಕೊಂಡು ಮಹಿಷಿ ಸತ್ತ ಜಾಗದ ಮೇಲೆ ಇಡುವ ಪರಿಪಾಠವಿದೆ. ಅದು ಮಹಿಷಿ ಪೊರಪಾಟಿನಲ್ಲಿ ಮತ್ತೆ ಮೇಲೇಳಬಾರದೆಂದು ಈ ರೀತಿ ಕಟ್ಟಳೆ ಮಾಡಿದ್ದಾರಂತೆ.
ಮಹಿಷಿಯ ಸಂಹಾರದಿಂದ ಸಂತುಷ್ಟನಾದ ಇಂದ್ರನು ದೇವಲೋಕದಿಂದ ಇಳಿದು ಬರುತ್ತಾನೆ. ಆಗ ಮಣಿಕಂಠನು ಕಾಡಿಗೆ ಹುಲಿಯ ಹಾಲನ್ನು ತರುವ ನೆಪದಿಂದ ಬಂದದ್ದನ್ನು ತಿಳಿದ ಇಂದ್ರ ತಾನು ಹಾಗು ತನ್ನ ಪರಿವಾರವನ್ನೆಲ್ಲಾ ಹುಲಿಯಾಗಿ ಮಾರ್ಪಾಡಾಗಿಸಿಕೊಳ್ಳುತ್ತಾನೆ. ಹುಲಿಯಾದ ಇಂದ್ರನ ಮೇಲೆ ಕುಳಿತುಕೊಂಡ ಮಣಿಕಂಠನು ಆ ಹುಲಿ ಪರಿವಾರದ ಸಮೇತ ತನ್ನ ರಾಜಧಾನಿಗೆ ಹಿಂದಿರುಗುತ್ತಾನೆ. ಅವನು ಹುಲಿಯ ಮೇಲೆ ಕುಳಿತದ್ದನ್ನು ನೋಡಿದ ಪುರಜನರು ಭಯಭೀತರಾಗಿ ಓಡಿಹೋಗುತ್ತಾರೆ. ಆಗ ಹುಲಿಯ ಹಾಲನ್ನು ತಾರೆಂದರೆ ಹುಲಿಯ ಪರಿವಾರದೊಂದಿಗೇ ಬಂದ ಮಣಿಕಂಠನನ್ನು ಎದುರುಗೊಳ್ಳಲು ರಾಜ ತನ್ನ ಅರಮನೆಯಿಂದ ಹೊರಗೆ ಬರುತ್ತಾನೆ. ಆಗ ಮಹಾರಾಣಿಗೆ ತನ್ನ ತಪ್ಪಿನ ಅರಿವಾಗಿ ತಾನು ಮಾಡಿದ್ದಕ್ಕೆ ಮಣಿಕಂಠನಲ್ಲಿ ಕ್ಷಮೆಯಾಚಿಸುತ್ತಾಳೆ. ಮೊದಲೇ ವೈರಾಗ್ಯದಿಂದ ಕೂಡಿದ್ದ ಮಣಿಕಂಠ ಈ ಎಲ್ಲ ಬೆಳವಣಿಗೆಗಳಿಂದ ತಾನು ತಪಸ್ಸು ಮಾಡಲು ಪುನಃ ಕಾಡಿಗೆ ಹೊರಡಲು ಅನುವಾಗುತ್ತಾನೆ. ಆಗ ಅವನನ್ನು ಹೋಗ ಬೇಡವೆಂದು ರಾಣಿ ಅಯ್ಯ ಅಂದರೆ, ರಾಜ ಅಪ್ಪ ಹೋಗಬೇಡವೆಂದು ಬೇಡಿಕೊಳ್ಳುತ್ತಾನೆ ಆದ್ದರಿಂದ ಅವರು ಕರೆದ "ಅಯ್ಯ" ಮತ್ತು "ಅಪ್ಪ" ಪದಗಳೇ ಅವನಿಗೆ ಮುಂದೆ "ಅಯ್ಯಪ್ಪ" ಎಂದು ಕರೆಯಲು ಪೀಠಿಕೆಯಾಯಿತು. ಆದರೆ ರಾಜ್ಯವಾಳುವುದು ತನ್ನ ಜನ್ಮ ಉದ್ದೇಶವೆಲ್ಲವೆಂದು ತಿಳಿಸಿದ ಅಯ್ಯಪ್ಪ ತನ್ನ ತಮ್ಮನಿಗೆ ಪಟ್ಟ ಕಟ್ಟಿರೆಂದು ಹೇಳಿ ತಾನು ಅಡವಿಗೆ ಹೊರಡಲು ಅನುವಾಗುತ್ತಾನೆ. ಆಗ ಅವನಿಗೆ ಪಟ್ಟಾಭಿಷೇಕಗೊಳ್ಳಲು ಪೂರಕವಾಗಿ ಮಾಡಿಸಿದ್ದ ಆಭರಣಗಳನ್ನು ತೋರಿಸಿ ಅವನ್ನೇನು ಮಾಡಬೇಕೆಂದು ಕೇಳಿದಾಗ ತಾನು ವರ್ಷಕ್ಕೊಂದಾವರ್ತಿ ಅವರಿಗೆ ಕಾಡಿನಲ್ಲಿ ದರ್ಶನ ಕೊಡುವುದಾಗಿ ತಿಳಿಸಿ ಆ ಸಮಯದಲ್ಲಿ ಆ ಆಭರಣಗಳಿಂದ ತನ್ನನ್ನು ಅಲಂಕರಿಸಬೇಕೆಂದು ತಿಳಿಸಿ ಕಾಡಿಗೆ ಹೊರಟು ಹೋಗುತ್ತಾನೆ. ಅದರಂತೆ ಸಂಕ್ರಾಂತಿಯ ದಿನ ಆ ಆಭರಣಗಳಿಂದ ಅಯ್ಯಪ್ಪ ಸ್ವಾಮಿಯನ್ನು ಅಲಂಕರಿಸುತ್ತಾರೆ. ಅವನ್ನು "ತಿರುವಾಭರಣ"ಗಳೆಂದು ಕರಿಯುತ್ತಾರೆ ಅಂದರೆ ಶ್ರೀ/ಪೂಜ್ಯ ಆಭರಣಗಳೆಂದು ಅದರ ಅರ್ಥ.
ಹೀಗೆ ತಂದೆ-ತಾಯಿಗಳಿಂದ ಬೀಳ್ಗೊಂಡ ಅಯ್ಯಪ್ಪನು ಕಾಡಿನಲ್ಲಿ ಸಂಚರಿಸುತ್ತಿರಬೇಕಾದರೆ ಅವನಿಗೆ ಆಂಜನೇಯನ ದರ್ಶನವಾಗುತ್ತದೆ. ಆಗ ಆಂಜನೇಯ ಸ್ವಾಮಿ ತಾನು ದ್ವಾಪರ ಯುಗದಲ್ಲಿ ಅರ್ಜುನನ ರಥದ ಧ್ವಜದಲ್ಲಿದ್ದು ಭಗವದ್ಗೀತೆಯನ್ನು ಆಲಿಸಿದ್ದು; ಗುರುವಿನ ಅಪ್ಪಣೆಯಿಲ್ಲದೆ ಹೀಗೆ ವಿದ್ಯೆಯನ್ನು ಕಲಿತಿದ್ದರಿಂದ ಅದು ಚೋರತನಕ್ಕೆ ಸಮಾನವಾಗುತ್ತದೆಯಾದ್ದರಿಂದ ತನಗೆ ಅದರ ಪಾಪ ತಟ್ಟಿದೆಯೆಂದು ಹೇಳುತ್ತಾನೆ. ಈ ಕಲಿಯುಗದಲ್ಲಿ ಹರಿ ಮತ್ತು ಹರನ ಅಂಶನಾದ ನಿನ್ನ ದರುಶನದಿಂದ ಆ ಪಾಪ ಪರಿಹಾರವಾಯಿತೆಂದು ತಿಳಿಸುತ್ತಾನೆ. ಈ ಪ್ರಸಂಗ ನಡೆದ ಕುರುಹಾಗಿ ಆಂಜನೇಯನಿಗೆ ಪಂಪಾ ನದಿಯ ಹತ್ತಿರ ಗಣೇಶ ಮತ್ತು ಸುಬ್ರಹ್ಮಣ್ಯರೊಂದಿಗೆ ಗುಡಿಯೊಂದನ್ನು ಕಟ್ಟಿದ್ದಾರೆ. ಗಣೇಶನನ್ನು ಇಲ್ಲಿ ಕನ್ನಮೂಲ ಗಣಪತಿಯೆಂದು ಕರೆಯುತ್ತಾರೆ.
ಅಲ್ಲಿಂದ ಮುಂದೆ ಹೊರಟ ಮಣಿಕಂಠನಿಗೆ ಶಬರಿಯ ದರ್ಶನವಾಗುತ್ತದೆ. ಆಗ ಶಬರಿ ತ್ರೇತಾಯುಗದಲ್ಲಿ ರಾಮನ ದರುಶನವಾಗಿದ್ದರೂ ಕೂಡ ತನಗೆ ಮುಕ್ತಿ ಸಿಕ್ಕಿರಲಿಲ್ಲವೆಂದು ನಿನ್ನ ದರುಶನದಿಂದ ಅದು ಸಾಧ್ಯವಾಗುವಂತೆ ಆಶೀರ್ವದಿಸು ಎಂದು ಕೋರಿಕೊಳ್ಳುತ್ತಾಳೆ. ಆಗ ಅವಳ ಭಕ್ತಿಗೆ ಮೆಚ್ಚಿ ಅವಳಿಗೆ ಭಕ್ತರು ಶಾಶ್ವತವಾಗಿ ನೆನಪಿಟ್ಟುಕೊಳ್ಳುವಂತಹ ಶಬರಿ ಬೆಟ್ಟವಾಗೆಂದು ಆಶೀರ್ವದಿಸುತ್ತಾನೆ. ಈಗ ಸನ್ನಿಧಾನವೆಂದು ಕರೆಯಲ್ಪಡುವ ಅಯ್ಯಪ್ಪನ ದೇವಸ್ಥಾನವಿರುವ ಜಾಗವೇ ಶಬರಿ ಮಲೈ.
ಈ ಶಬರಿ ಮಲೆಯಲ್ಲಿರುವ ದೇವಸ್ಥಾನವನ್ನು ಸ್ವಯಂ ವಿಶ್ವಕರ್ಮನೇ ನಿರ್ಮಿಸಿದನೆಂದು ಅದಕ್ಕೆ ರೂಪುರೇಷೆಗಳನ್ನು ಪರಶುರಾಮನು ಕೊಟ್ಟನೆಂದು ಹೇಳುತ್ತಾರೆ. ಮತ್ತು ಇಲ್ಲಿ ಅಯ್ಯಪ್ಪನ ಪೂಜೆಯನ್ನು ಮಂತ್ರಕ್ಕಿಂತ ಹೆಚ್ಚಾಗಿ ತಂತ್ರ ರೀತಿಯ ಪದ್ದತಿಯಿಂದ ಪೂಜಿಸುತ್ತಾರೆ. ಇದರ ಮೂಲ ಅರ್ಚಕ ಈಗಿನ ಆಂಧ್ರ ಪ್ರದೇಶ ಮೂಲದ ಒಬ್ಬ ಬ್ರಾಹ್ಮಣನೆಂದೂ ಕೂಡ ಕೆಲವು ಐತಿಹ್ಯಗಳಿವೆ.ಮೂಲ ವಿಗ್ರಹದ ಪ್ರತಿಷ್ಠಾಪನೆ ಸ್ವತಃ ಅಗಸ್ತ್ಯ ಮಹಾಮುನಿಯು ನೆರವೇರಿಸಿದರೆಂದು ಕೂಡ ಸ್ಥಳ ಪುರಾಣ ಹೇಳುತ್ತದೆ.
ಮುಂದುವರೆಯುವುದು.....
-------------------------------------------------------------------------------------------------------------------------------------------------
ವಿ.ಸೂ.: ಈ ಲೇಖನ ಮಾಲೆಯನ್ನು ಒಂದೇ ಕಂತಿನಲ್ಲಿ ಕೊಡೋಣವೆಂದಿದ್ದೆ; ಆದರೆ ಲೇಖನ ಬಹಳ ದೀರ್ಘವೆನಿಸಿದ್ದರಿಂದ ಅದನ್ನು ಐದು ಭಾಗಗಳಾಗಿ ವಿಭಜಿಸಿ ಪ್ರತ್ಯೇಕ ಶೀರ್ಷಿಕೆಗಳನ್ನು ಕೊಟ್ಟಿದ್ದೇನೆ. ಅವುಗಳು ಈ ರೀತಿ ಇವೆ:
ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ಚಿಂತನೆ (ಭಾಗ - ೧)
ಭಾಗ - ೨: ಅಯ್ಯಪ್ಪ ಸ್ವಾಮಿಯ ದೀಕ್ಷೆ ಅಥವಾ ಮಾಲಾ ಧಾರಣೆ ಮತ್ತು ಯಾತ್ರೆ http://sampada.net/%E0%B2%AD%E0%B2%BE%E0%B2%97-%E0%B3%A8-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86-%E0%B2%85%E0%B2%A5%E0%B2%B5%E0%B2%BE-%E0%B2%AE%E0%B2%BE%E0%B2%B2%E0%B2%BE-%E0%B2%A7%E0%B2%BE%E0%B2%B0%E0%B2%A3%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86
ಭಾಗ - ೩: ಅಯ್ಯಪ್ಪ ಸ್ವಾಮಿಯ ದೀಕ್ಷೆಯ ಚಾರಿತ್ರಿಕ ಹಿನ್ನಲೆ http://sampada.net/%E0%B2%AD%E0%B2%BE%E0%B2%97-%E0%B3%A9-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%9A%E0%B2%BE%E0%B2%B0%E0%B2%BF%E0%B2%A4%E0%B3%8D%E0%B2%B0%E0%B2%BF%E0%B2%95-%E0%B2%B9%E0%B2%BF%E0%B2%A8%E0%B3%8D%E0%B2%A8%E0%B2%B2%E0%B3%86
ಭಾಗ - ೪: ಅಯ್ಯಪ್ಪ ಮತ್ತು ಅಯ್ಯಪ್ಪ ದೀಕ್ಷೆಯ ವಿಶೇಷಗಳು http://sampada.net/%E0%B2%AD%E0%B2%BE%E0%B2%97-%E0%B3%AA-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%B5%E0%B2%BF%E0%B2%B6%E0%B3%87%E0%B2%B7%E0%B2%97%E0%B2%B3%E0%B3%81
ಭಾಗ - ೫: ಅಯ್ಯಪ್ಪ ದೀಕ್ಷೆಯ ನಿಜವಾದ ಅರ್ಥ http://sampada.net/%E0%B2%AD%E0%B2%BE%E0%B2%97-%E0%B3%AB-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%A6%E0%B3%80%E0%B2%95%E0%B3%8D%E0%B2%B7%E0%B3%86%E0%B2%AF-%E0%B2%A8%E0%B2%BF%E0%B2%9C%E0%B2%B5%E0%B2%BE%E0%B2%A6-%E0%B2%85%E0%B2%B0%E0%B3%8D%E0%B2%A5
Comments
ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ...
In reply to ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ... by venkatb83
ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ...
ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ...
In reply to ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ... by Shreekar
ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ...
In reply to ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ... by makara
ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ...
In reply to ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ... by Shreekar
ಉ: ಶಬರಿಮಲೆ ಯಾತ್ರೆ ಅಥವಾ ಅಯ್ಯಪ್ಪ ಸ್ವಾಮಿಯ ವ್ರತದ ಹಿನ್ನಲೆ: ಒಂದು ...