ಕೆಲವು ಅಮೂಲ್ಯ ಪುಸ್ತಕಗಳು

ಕೆಲವು ಅಮೂಲ್ಯ ಪುಸ್ತಕಗಳು

ಹಲವಾರು ಬಾರಿ ನಮ್ಮ ಬಳಿ ಇರುವ ಎಷ್ಟೋ ಪುಸ್ತಕಗಳ ಮೌಲ್ಯ ನಮಗೇ ತಿಳಿದಿರುವುದಿಲ್ಲ. ಕೆಲವೊಮ್ಮೆ ನಮ್ಮ ಬಳಿ ಇಲ್ಲದಿದ್ದಾಗ ಅವುಗಳ ಮೌಲ್ಯ ಗೊತ್ತಾದರೆ ಕೆಲವೊಮ್ಮೆ ವರ್ಷಾನುಗಟ್ಟಲೆ ನಮ್ಮ ಬಳಿ ಬಿದ್ದಿದ್ದವುಗಳನ್ನ ಒಮ್ಮೆ ತಿರುಗಿಸಿ ನೋಡಿದಾಗ "ಓ! ಎಷ್ಟೊಂದು helpful, ಈ ಪುಸ್ತಕ... " ಅಂತ ಅನ್ನಿಸುತ್ತದೆ. ಅಂಥವೇ ಅಮೂಲ್ಯ ಪುಸ್ತಕಗಳು ಕೆಲವನ್ನು ನಿಮಗೆ ಪರಿಚಯ ಮಾಡಿಕೊಡೋಣವೆಂದು ಈ ಪುಟ್ಟ scribble:

೧) ಕನ್ನಡ ಸಾಹಿತ್ಯ ಪರಿಷತ್ತಿನ - ಕನ್ನಡ ರತ್ನಕೋಶ

ಕನ್ನಡ ರತ್ನಕೋಶ     ಇಡೀ ವಿಶ್ವದಲ್ಲಿ ಬರಿಯ ೧೫ರೂಪಾಯಿಗಳಿಗೆ ಸಿಗಬಲ್ಲ ಬಹುಶಃ ಬೇರೊಂದು ಇಷ್ಟೊಂದು ಅಮೂಲ್ಯವಾದ ಪುಸ್ತಕವಿಲ್ಲ. ನಾವು ಬಳಸುವ ಕನ್ನಡದ ಪ್ರತಿಯೊಂದು ಪದವೂ ಇದರಲ್ಲಿದೆ. ನಮ್ಮ ಮನೆಯಲ್ಲಿ ಈ ಪುಟ್ಟ ನಿಘಂಟು ಬಹಳ ವರ್ಷಗಳಿಂದಲೇ ಇತ್ತು. ಅಮ್ಮ ಟೈಪ್ ರೈಟಿಂಗ್ ಕಲಿಯುವಾಗ ಕಿಟ್ಟೆಲ್ ನಿಘಂಟಿನೊಂದಿಗೆ ತಂದಿಟ್ಟುಕೊಂಡಿದ್ದರಂತೆ. ಮನೆಯಲ್ಲದು ಇದ್ದಾಗ ಒಂದು ಬಾರಿಯೂ ಉಪಯೋಗಿಸಿದ್ದು ನೆನಪಿಲ್ಲ. ಶಿವಮೊಗ್ಗೆಯಿಂದ ಸಾಮಾನು ಬೆಂಗಳೂರಿಗೆ ಸಾಗಿಸುವ ಭರದಲ್ಲಿ ಕಳೆದುಹೋದದ್ದವುಗಳಲ್ಲಿ ಈ ಪುಸ್ತಕವೂ ಒಂದು... ಮೊನ್ನೆ ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೊಂಡುಕೊಂಡೆ. ಈಗದರ ಮೌಲ್ಯ ತಿಳಿಯುತ್ತಿದೆ :)

 

೨) ಕುವೆಂಪುರವರು ಬರೆದಿರುವ 'ಸ್ವಾಮಿ ವಿವೇಕಾನಂದ'

ಕುವೆಂಪು - ಸ್ವಾಮಿ ವಿವೇಕಾನಂದ     ಈ ಪುಸ್ತಕದಷ್ಟು inspiration ನೀಡುವ ಪುಸ್ತಕ ವಿವೇಕಾನಂದರ ಬಗ್ಗೆ ಬೇರೊಂದು ಓದಿದ ನೆನಪಿಲ್ಲ. ರಾಮಕೃಷ್ಣ ಮಿಶನ್ನಿನ ಹತ್ತಾರು ಪುಸ್ತಕಗಳು ಮನೆಯಲ್ಲಿ ಈಗಲೂ ಇವೆ... ಆದರೆ ಅವ್ಯಾವುದರಲ್ಲೂ ವಿವೇಕಾನಂದರ ಇಷ್ಟೊಂದು ಸುಂದರವಾದ ಪರಿಚಯ ಇಲ್ಲವೆಂದೇ ಹೇಳಬಹುದು. ಈ ಕೃತಿಯ ಮೊದಲ ಚ್ಯಾಪ್ಟರ್‌ - "ಯಾರಿವನು?" ನಾನು ಕನ್ನಡದಲ್ಲಿ ಎಲ್ಲೂ ಓದದೇ ಇರುವಂತಹ ವಸ್ತು... ಸಿಂಪಲ್ ಆಗಿ ಹೇಳಬೇಕೆಂದರೆ - "ಅತ್ಯಧ್ಭುತವಾಗಿದೆ!". :)
      ನನಗೆ ಈ ಪುಸ್ತಕ ೮ನೇ ಕ್ಲಾಸಿನಲ್ಲಿ ಶಾಲೆಗೆ ೫ನೇ rank ಪಡೆದದ್ದಕ್ಕೆ ಕೊಟ್ಟಿದ್ದರು. ಎಷ್ಟೋ ದಿನಗಳ ಮಟ್ಟಿಗೆ ಈ ಪುಸ್ತಕ ನನ್ನ ಕಲೆಕ್ಷನ್ನಿನಲ್ಲಿ ಸುಮ್ಮನೆ ದೂಳು ತಿನ್ನುತ್ತ ಕುಳಿತಿತ್ತು. ಇದನ್ನೋದಿದ ಮೇಲೆಯೇ ತಿಳಿದದ್ದು, ಈ ಪುಸ್ತಕದ ಮೌಲ್ಯ!

 

೩) 'ಕನ್ನಡ ಬರಹವನ್ನು ಸರಿಪಡಿಸೋಣ'

ಕನ್ನಡ ಬರಹ ಸರಿಪಡಿಸೋಣ - ಶಂಕರ್ ಭಟ್    ಈ ಪುಸ್ತಕ ಅಮೂಲ್ಯವೆಂದು ಹೇಳುವಷ್ಟು ಆಳವಾಗಿ ನಾನೋದಿಲ್ಲವಾದರೂ, ಓದಿರುವಷ್ಟು ಭಾಗ ನನಗೆ ಬಹಳವಾಗಿ ಹಿಡಿಸಿತು. ಕನ್ನಡದಲ್ಲಿ ಒಳ್ಳೆಯ ಪ್ರಯತ್ನಕ್ಕೆ ನಾಂದಿ ಎಂದು ಹೇಳಬಹುದು.
    ಈ ಪುಸ್ತಕ ಕೊಂಡದ್ದು ಡಿ ವಿ ಕೆ ಮೂರ್ತಿಯವರ ಪುಸ್ತಕ ಮಳಿಗೆಯಲ್ಲಿ. ಓ ಎಲ್ ಎನ್ ಸ್ವಾಮಿಯವರು ಶಂಕರ ಭಟ್ಟರ ಬಗ್ಗೆ ಕೆಲವು ಬಾರಿ ತಿಳಿಸಿದ್ದರು, ಕುತೂಹಲದಿಂದ ಈ ಪುಸ್ತಕ ಕೊಂಡಿದ್ದೆ.

೪) 'ಏಕಾಂತ - ಲೋಕಾಂತ'

ಏಕಾಂತ-ಲೋಕಾಂತ    ಸಂಪದದ ಗೆಳೆಯರಿಗೆ ಚಿರಪರಿಚಿತರಾದವರು ಬರೆದ ಪುಸ್ತಕವಿದು. ಯಾರು ಹೇಳಿ ನೋಡೋಣ?  "ಘಟಾನುಘಟಿ" ಎಂದು ತಮ್ಮ ಬ್ಲಾಗಿನಲ್ಲಿ ಶ್ರೀರಾಮ್ ಹೊಗಳಿರುವ ಓ ಎಲ್ ಎನ್ ಸ್ವಾಮಿಯವರು ನಮ್ಮೊಂದಿಗಿರುವ ಸರಳ ವ್ಯಕ್ತಿತ್ವದ (ಡೌನ್ ಟು ಅರ್ಥ್ ಪರ್ಸನಾಲಿಟಿ) ಓ ಎಲ್ ಎನ್ ಸ್ವಾಮಿಯವರೇ ಹೌದೋ ಅಲ್ವೋ ಅನ್ನೋ ಡೌಟು ಬರುತ್ತೆ! ನಾವು ಕೇಳುವ ಎಲ್ಲ ಪ್ರಶ್ನೆಗಳಿಗೂ ಸರಳ ಉತ್ತರಗಳನ್ನು ನೀಡಿ ನಮ್ಮ ಗೌರವ ಪಡೆದಿರುವ ಇವರ ಜೊತೆ ಮಾತನಾಡುವಾಗ ಕಾಲೇಜಿನ ದಿನಗಳ ನಮ್ಮ ನೆಚ್ಚಿನ ಮೇಷ್ಟರುಗಳ ನೆನಪಾಗುತ್ತದೆ. ಸರಳ ಲೇಖನಗಳಲ್ಲಿ ಅನುಭವಗಳನ್ನು ಹೆಣೆದಿರುವ ಈ ಅಮೂಲ್ಯ ಪುಸ್ತಕದ ಬಗ್ಗೆ ಒಮ್ಮೆ ಸುದೀರ್ಘವಾಗಿ, ಸಾಧ್ಯವಾದಲ್ಲಿ ವಿಮರ್ಶೆಯಂತೆ ಬರೆಯುವ ಪ್ರಯತ್ನ ಮಾಡುವೆ.

Rating
No votes yet

Comments